Monday, June 14, 2010

ಪ್ರಾಕೃತಿಕ ವಿಕೋಪ ನಿರ್ವಹಣೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ಸಭೆ

ಮಂಗಳೂರು,ಜೂ.14:ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ಮಳೆಗಾಲ ಆರಂಭದ 10 ರಿಂದ 15 ದಿನಗಳ ಕಾಲ ಉದ್ಭವಿಸುವ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇಂದು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಏರ್ಪಡಿಸ ಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜನವಸತಿ ಪ್ರದೇಶದಲ್ಲಿ ನೆರೆ ಸಂಭವಿಸಿದಾಗ ಹಾಗೂ ಎನ್ ಎಚ್ ಐ ರಸ್ತೆಗಳ ಕಾಮಗಾರಿ ಯಿಂದಾಗಿರುವ ಕೃತಕ ನೆರೆ ಬಗ್ಗೆ, ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಾಗ ಅಧಿಕಾರಿಗಳು ಸ್ಪಂದಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಜಿಲ್ಲಾಧಿ ಕಾರಿಯವರ ಕಚೇರಿಯಲ್ಲಿ ಈಗಾಗಲೇ ಜಿಲ್ಲಾ ವಯರ್ ಲೆಸ್ ಕಂಟ್ರೋಲ್ ರೂಂ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದ ಬರುವ ಅಹವಾಲು, ಸಂದೇಶಗಳನ್ನು ಸ್ವೀಕರಿಸಿ, ಮುತುರ್ವಜಿಯಿಂದ ಕಾರ್ಯ ಪ್ರವೃತ್ತ ರಾಗಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಡದಿರಲು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಹಾಗೂ ಸಹಾಯಕ ದಂಡಾಧಿಕಾರಿಗಳ ನೇತೃತ್ವದಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.ಮಂಗಳೂರು ನಗರ ವ್ಯಾಪ್ತಿಯಲ್ಲಿ ಜನವಸತಿ ಪ್ರದೇಶಗಳಲ್ಲಿ ಸಂಭವಿಸುವ ಕೃತಕ ನೆರೆ ಹಾನಿ ನಿಭಾಯಿಸಲು ಅಂತಹ ಪ್ರದೇಶಗಳನ್ನು ಗುರುತಿಸಿ ಏರಿಯಾವೈಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಗಂಜಿ ಕೇಂದ್ರಗಳನ್ನು ತೆರೆಯಲು ಕ್ರಮಕೈಗೊಂಡಿದೆ. 3 ಹೊಸ ದೋಣಿಗಳನ್ನು ಜಿಲ್ಲಾಡಳಿತ ಖರೀದಿಸಿದೆ. 75 ಹೋಮ್ ಗಾರ್ಡ್ ನವರನ್ನು ಈಗಾಗಲೇ ನೇಮಿಸಲಾಗಿದೆ. ಅಗ್ನಿ ಶಾಮಕ ದಳ ಹಾಗೂ ಹೋಂ ಗಾರ್ಡ್ಸ್, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಮೆಸ್ಕಾಂ ಜೊತೆ ಸಮನ್ವಯ ಸಾಧಿಸಿ ಜನಜೀವನಕ್ಕೆ ತೊಂದರೆ ಯಾಗದಂತೆ ಕಾರ್ಯೋನ್ಮುಖವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ರಕ್ಷಣಾ ಕಾರ್ಯಕ್ಕೆ ದೋಣಿಗಳ ಜೊತೆ ಟ್ರಕ್ ನ ಅಗತ್ಯವಿದೆ;ಶಿರಾಡಿಯಲ್ಲಿ ಕ್ರೈನ್ ಮತ್ತು ಜೆಸಿಬಿ ಯೊಂದನ್ನು ಸಿದ್ಧಪಡಿಸಿ ಇರಿಸಲು ಸಚಿವರು ಸೂಚಿಸಿದರು. ಸುಳ್ಯ,ಪುತ್ತೂರುಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪುತ್ತೂರು ಸಹಾಯಕ ದಂಡಾಧಿ ಕಾರಿಯವರಿಗೆ ಸಲಹೆ ನೀಡಲಾಯಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಲಮಿತಿ ನಿಗದಿಪಡಿಸಿ, ಜನರಿಗೆ ತೊಂದರೆ ಯಾಗದಂತೆ ತೀವ್ರ ಆಸಕ್ತಿಯಿಂದ ಕರ್ತವ್ಯ ನಿರ್ವಹಿಸಿ ಎಂದು ಸಚಿವರು ಸೂಚಿಸಿದರು. ಚತುಷ್ಪಥ ರಸ್ತೆ ನಿರ್ಮಾಣದಿಂದ ಆಗಿರುವ ತೊಂದರೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.ನಂತೂರು ರಾಷ್ಟ್ರೀಯ ಹೆದ್ದಾರಿ 13 ಕಾಮಗಾರಿಗೆ ಸಂಬಂಧಿಸಿದಂತೆ ಇದ್ದ ಅಡೆತಡೆಗಳು ನಿವಾರಿಸಲ್ಪಟ್ಟಿದ್ದು ಕೊರಗ ಮನೆಗಳಿಗೆ ಪರಿಹಾರ ಹಾಗೂ ಸ್ಥಳಾಂತರದ ಬಗ್ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಮೇಯರ್ ರಜನಿ ದುಗ್ಗಣ್ಣ, ಉಪ ಮೇಯರ್ ರಾಜೇಂದ್ರ ಕುಮಾರ್, ಆಯುಕ್ತರು ಡಾ. ವಿಜಯ ಪ್ರಕಾಶ್, ಸಿಇಒ ಶಿವಶಂಕರ್, ಸಹಾಯಕ ದಂಡಾಧಿಕಾರಿಗಳು, ತಹಸೀಲ್ದಾರರು, ಪಾಲಿಕೆ ಸ್ಥಾಯಿ ಸಮಿತಿ ಸದಸ್ಯರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.