Wednesday, June 23, 2010

344.91 ಕೋಟಿ ರೂ. ವಾರ್ಷಿಕ ಕ್ರಿಯಾ ಯೋಜನೆಗೆ ಜಿ.ಪಂ ಅನುಮೋದನೆ

ಮಂಗಳೂರು, ಜೂ.23: 2010-11 ನೇ ಸಾಲಿಗೆ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಯೋಜನೆ ಮತ್ತು ಯೋಜನೆತರ ಕಾರ್ಯಕ್ರಮದಡಿ ಒಟ್ಟು 344.91 ಕೋಟಿ ರೂ. ಅನುದಾನ ನಿಗದಿಪಡಿಸಿದೆ. ಯೋಜನಾ ಕಾರ್ಯಕ್ರಮದಡಿ 74.07 ಕೋಟಿ ರಾಜ್ಯ ವಲಯದಡಿ, 37.65 ಕೋಟಿ ಅನುದಾನ ಕೇಂದ್ರ ವಲಯದಡಿ ಸೇರಿ ಒಟ್ಟು 111.72, ಯೋಜನೇತರ ಕಾರ್ಯಕ್ರಮದಡಿ ಜಿಲ್ಲೆಗೆ ಒಟ್ಟು 233.19 ಅನುದಾನ ನಿಗದಿಯಾಗಿದೆ.
ಯೋಜನಾ ಕಾರ್ಯ ಕ್ರಮಗಳಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಜಲಾನಯನಕ್ಕೆ ಅನುದಾನ ನಿಗದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ 23 ನೇ ಸಾಮಾನ್ಯ ಸಭೆಯು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.ಬಳಿಕ ವಿವಿಧ ಅಭಿವೃದ್ದಿ ಸಂಬಂಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಅಂಗನ ವಾಡಿಗಳಲ್ಲಿ ಮಕ್ಕಳಿಗೆ ವಿತರಿಸಲಾಗುವ ಪೌಷ್ಠಿಕ ಆಹಾರವು ಮಕ್ಕಳಿಗೆ ತಿನ್ನಲು ರುಚಿಕರವಾಗಿಲ್ಲದ ಜೊತೆಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಪೌಷ್ಠಿಕ ಆಹಾರ ಸರಬರಾಜಿನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಯುತ್ತಿದೆ. ಮಕ್ಕಳ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ ಎಂಬುದಾಗಿ ಜಿಲ್ಲಾ ಪಂಚಾಯತಿನ ಆಡಳಿತ ಪಕ್ಷ, ವಿರೋಧ ಪಕ್ಷದ ಸದಸ್ಯರ ಜೊತೆಗೆ ಉಪಸ್ಥಿತರಿದ್ದ ಶಾಸಕರಿಂದಲೂ ಇಂದು ಗಂಭೀರ ಆರೋಪಗಳು ವ್ಯಕ್ತವಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಯು.ಟಿ.ಖಾದರ್ ಅಂಗನ ವಾಡಿಗಳಿಗೆ ಸರಬ ರಾಜಾಗುತ್ತಿರುವ ಆಹಾರದ ಬಗ್ಗೆ ಬಗ್ಗೆ ಸಮಗ್ರ ತನಿಖೆ ಅಗತ್ಯವಾಗಿದೆ ಎಂದು ಹೇಳಿದರು.ಈ ಬಗ್ಗೆ ವಿಸ್ತೃತ ಚರ್ಚೆಯ ಬಳಿಕ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಗಳ ಅಧ್ಯಕ್ಷರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಿ ಸಮಗ್ರ ತನಿಖೆ ನಡೆಸಿ ಸಮಯಮಿತಿ ನಿಗದಿ ಪಡಿಸಿ ವರದಿ ಸಲ್ಲಿಸಲು ಸಭೆ ನಿರ್ಧರಿಸಿತು.
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ; ಸಿಇಒ : ಸರಕಾರಿ ಶಾಲೆಗಳು ಕೆಲವೆಡೆ ಮಕ್ಕಳೇ ಇಲ್ಲದೆ ಮುಚ್ಚುವಂತಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಶಿಕ್ಷಕರೇ ಇಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯತ್ನಿಂದ ವಿಶ್ಲೇಷಣೆ ನಡೆದಿಯೇ ಎಂದು ಸದಸ್ಯರಾದ ಎ.ಸಿ. ಭಂಡಾರಿ ಸಭೆಯ ಆರಂಭದಲ್ಲೇ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದರು. ಉಳಿದ ಸದಸ್ಯರು ಈ ಬಗ್ಗೆ ವಿವರ ಬಯಸಿದರು. ಜಿಲ್ಲೆಯಲ್ಲಿ ಸರಕಾರಿ ಶಾಲೆಗೆ ಬರಲು ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಊಟ, ಸೈಕಲನ್ನು ನೀಡುತ್ತದೆ. ಆದರೆ ಿದರ ಜೊತೆಗೆ ಶಿಕ್ಷಕರನ್ನೂ ನೀಡಬೇಕು ಎಂದು ಸದಸ್ಯ ಪ್ರಮೋದ್ ಕುಮಾರ್ ಆಗ್ರಹಿಸಿದರೆ, ಏಕೋಪಾಧ್ಯಾಯ ಶಾಲೆಗಳಿಗೆ ಕನಿಷ್ಠ ಇಬ್ಬರು ಶಿಕ್ಷಕರನ್ನಾದರೂ ನೀಡುವಂತಾಗಬೇಕು ಎಂದು ಸದಸ್ಯೆ ಮಮತಾ ಗಟ್ಟಿ ಒತ್ತಾಯಿಸಿದರು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಲು ಪೋಷಕರ ಆಂಗ್ಲ ಮಾಧ್ಯಮದ ವ್ಯಾಮೋಹವೂ ಕಾರಣ ಎಂದ ಸದಸ್ಯ ಸುಚರಿತ ಶೆಟ್ಟಿ ಹೇಳಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಶಿವಶಂಕರ್, ಜಿಲ್ಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ 1057 ಶಾಲಾ ಕೊಠಡಿಗಳು ಮಂಜೂರಾಗಿದ್ದು, 23 ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಜಿಲ್ಲೆಯಲ್ಲಿ ಶಿಕ್ಷಕರನ್ನು ನೇಮಿಸಲಾಗಿದೆ.ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಶಿಕ್ಷಕರು ಸರಕಾರಿ ಶಾಲೆಗಳಲ್ಲಿದ್ದು, ಮೂಲಭೂತ ಸೌಕರ್ಯವೂ ಉತ್ತಮವಾಗಿದೆ. ಪ್ರಸ್ತುತ ಒಟ್ಟಾರೆ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ ಎಂದರು. ಕೆಲವು ನಿಗದಿತ ಶಾಲೆಗಳಲ್ಲಿ ಸಮಸ್ಯೆಗಳಿದ್ದರೆ ಈ ಬಗ್ಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಂದು ವಾರದೊಳಗೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಇಒ ಶಿವಶಂಕರ್ ಸೂಚಿಸಿದರು.
ತೋಟಗಾರಿಕಾ ಇಲಾಖೆಯಿಂದ ಕೀಟನಾಶಕಗಳನ್ನು ಇತ್ತೀಚೆಗೆ ಬಾವಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸದಾನಂದ ಮಲ್ಲಿ, ಈ ಬಗ್ಗೆ ಜಿಲ್ಲಾ ಮಟ್ಟದ ತಂಡದಿಂದ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಈ ಬಗ್ಗೆ ಚರ್ಚಿಸಬಹುದು ಎಂದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ, ವೆಂಕಟ್ದಂಬೆಕೋಡಿ ಉಪಸ್ಥಿತರಿದ್ದರು.