Thursday, December 31, 2009

ಜಿ.ಪಂ.:119.40 ಕೋಟಿರೂ. ಕರಡು ಯೋಜನೆ

ಮಂಗಳೂರು,ಡಿ.31:2010-11ನೇ ಸಾಲಿಗೆ 119.40ಕೋಟಿ ರೂ.ಗಳ ವಾರ್ಷಿಕ ಕರಡು ಯೋಜನೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ರೂಪಿಸಿದೆ.ಶೈಕ್ಷಣಿಕ ವಲಯಕ್ಕೆ 20.07ಕೋಟಿ,ಕುಟುಂಬಕಲ್ಯಾಣ ಕಾರ್ಯಕ್ರಮಕ್ಕೆ 12.67ಕೋಟಿ ರೂ.,ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ 22.68ಕೋಟಿರೂ.,ಪಂಚಾಯತ್ ರಾಜ್ ಸಂಸ್ಥೆಗಳಿಗೆ13.18ಕೋಟಿರೂಗಳ ಕರಡು ಯೋಜನೆ ರೂಪಿಸಲಾಗಿದೆ.
ಇಂದು ಜಿಲ್ಲಾ ಪಂಚಾಯತ್ ಸಭಾಂ ಗಣದಲ್ಲಿ ನಡೆದ ಜಿಲ್ಲಾ ಪಂಚಾ ಯತ್ ನ 21ನೇ ಸಾಮಾನ್ಯ ಸಭೆಯಲ್ಲಿ ಕರಡು ಯೋಜನೆ ಅನುದಾನದ ವಿವರಗಳನ್ನು ನೀಡಲಾಯಿತು.ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿ ಅಭಿವೃದ್ಧಿ ಕಾರ್ಯಗಳ ಬಗ್ಗೆ,ಮೂಲಭೂತ ಸೌಕರ್ಯಗಳ ಬಗ್ಗೆ, ರಸ್ತೆ,ವಿದ್ಯುತ್ ಸಂಪರ್ಕ ಯೋಜನೆಗಳ ಬಗ್ಗೆ,ಅಡಿಕೆ ಬೆಳೆಗೆ ಬೆಂಬಲ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಸದಸ್ಯರ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನಸೆಳೆಯುವ ಭರವಸೆಯನ್ನು ಜಿಲ್ಲಾ ಪಂಚಾಯಿತಿಯಲ್ಲಿ ನೀಡಿದರು. ಸದಸ್ಯರ ಅಭಿವೃದ್ಧಿ ಕಾಮಗಾರಿಕುರಿತ ಅನುದಾನದ ಸಂಶಯಗಳಿಗೆ ಸಿಇಒ ಪಿ.ಶಿವಶಂಕರ್ ಉತ್ತರಿಸಿದರು.ಎಲ್ಲಾ ಸ್ಥಾಯಿಸಮಿತಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

Tuesday, December 29, 2009

ಎಂವಿ ಏಶಿಯನ್ ಫಾರೆಸ್ಟ್ ನಿಂದ ತೈಲ ಹೊರತೆಗೆಯುವ ಕಾರ್ಯಾಚರಣೆ ಆರಂಭ

ಮಂಗಳೂರು,ಡಿ.29: ನವಮಂಗಳೂರು ಬಂದರು ಬಳಿ ಜುಲೈ 18 ರಂದು ಮುಳುಗಿದ್ದ ಎಂ ವಿ ಏಶಿಯನ್ ಫಾರೆಸ್ಟ್ ಹಡಗಿನಿಂದ ತೈಲ ತೆಗೆಯುವ ಕಾರ್ಯ ಇಂದಿನಿಂದ ಆರಂಭಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ನಿರ್ದೇಶನದಂತೆ ಪಿ ಅಂಡ್ ಐ ಕ್ಲಬ್ ನವರು ಮುಳುಗಿರುವ ಹಡಗಿನಿಂದ ತೈಲ ಹೊರ ತೆಗೆಯಲು ಸಿಂಗಾಪೂರ ಮೂಲದ ಸ್ಮಿತ್ ಸಾಲ್ವೇಜ್ ಕಂಪೆನಿಗೆ ವಹಿಸಿದ್ದು,ಇಂದಿನಿಂದಲೇ ತೈಲ ತೆಗೆಯಲು ಕಾರ್ಯಾಚರಣೆ ಆರಂಭಿಸಲಾಗಿದೆ.ಈ ಬಗ್ಗೆ ಸಮೀಕ್ಷೆ ನಡೆಸಿ ಕಾರ್ಯಾಚರಣೆ ಆರಂಭಿಸಿರುವ ಕಂಪೆನಿ 36 ದಿನಗಳೊಳಗೆ ಸಮುದ್ರ ಕಲುಷಿತಗೊಳ್ಳದಂತೆ ಹಾಟ್ ಟ್ಯಾಪ್ ವಿಧಾನದ ಮೂಲಕ ತೈಲ ತೆಗೆಯುವುದಾಗಿ ಪಿಪಿಟಿ ಪ್ರಸಂಟೇಷನ್ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ ನೀಡಿದರು .ಫೆಬ್ರವರಿ ಮೊದಲ ವಾರದೊಳಗೆ ತೈಲ ತೆಗೆಯುವುದನ್ನು ಸಂಪೂರ್ಣಗೊಳಿಸಿದ ಬಳಿಕ ಹಡಗಿನ ಅವಶೇಷಗಳನ್ನು ತೆಗೆಯುವ ಬಗ್ಗೆಯೂ ಶಿಪ್ಪಿಂಗ್ ಕಂಪೆನಿಯ ಪ್ರತಿನಿಧಿಯವರು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ನಿರ್ದೇಶನ ನೀಡಿದರು.
ಹಡಗಿನ ಅವಶೇಷಗಳು ಮುಳುಗಿರುವ ಜಾಗದಿಂದ ಹಡಗಿನ 3 ಟ್ಯಾಂಕ್ ಗಳಲ್ಲಿರುವ ತೈಲ ಮತ್ತು ತೈಲೋತ್ಪನ್ನಗಳನ್ನು ತೆಗೆದು ಟ್ಯಾಂಕರ್ ಗೆ ವರ್ಗಾಯಿಸಲಾಗುತ್ತದೆ ಮತ್ತು ಈ ಕಾರ್ಯಾಚರಣೆಯ ದೈನಂದಿನ ವರದಿಯನ್ನು ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸುವುದಾಗಿ ಕಾರ್ಯಚರಣೆಯ ಉಸ್ತುವರಿ ವಹಿಸಿರುವ ಅಧಿಕಾರಿಗಳು ಸಭೆಯಲ್ಲಿ ಭರವಸೆ ನೀಡಿದರು. ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಕೋಸ್ಟಗಾರ್ಡ್ ಅಧಿಕಾರಿ ಪದಮ್ ಶೇಖರ್ ಝಾ, ಮೀನುಗಾರಿಕೆ ಉಪನಿರ್ದೇಶಕರಾದ ಸುರೇಶ್ ಕುಮಾರ್, ಕಸ್ಟಂಸ್,ಬಂದರು ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tuesday, December 22, 2009

ಎಂಡೋಸಲ್ಫಾನ್ ಪೀಡಿತರಿಗೆ ಪರಿಹಾರ ನೀಡಲು ವಿಶೇಷ ಅನುದಾನ ಕೋರಿಕೆ

ಮಂಗಳೂರು,ಡಿ.22:ಬೆಳ್ತಂಗಡಿ ತಾಲೂಕಿನ ಕೊಕ್ಕಡ,ನಿಡ್ಲೆ,ಪಟ್ರಮೆ ಗ್ರಾಮಗಳಲ್ಲಿರುವ ಗೇರು ಅಭಿವೃದ್ಧಿ ನಿಗಮದ ತೋಟಕ್ಕೆ ವೈಮಾನಿಕವಾಗಿ ಎಂಡೋಸಲ್ಫಾನ್ ಸಿಂಪಡಣೆಯಿಂದ ಶೇ.60ಕ್ಕಿಂತ ಮೇಲ್ಪಟ್ಟು ಅಂಗವೈಕಲ್ಯ ಹೊಂದಿರುವ 103 ಮಂದಿಗೆ ಪರಿಹಾರ ನೀಡಲು 25.75ಲಕ್ಷ ರೂ.ಗಳ ಅಗತ್ಯವಿದ್ದು,ಈ ಹಣವನ್ನು ವಿಶೇಷ ಅನುದಾನವೆಂದು ಬಿಡುಗಡೆ ಮಾಡಲು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರು ರಾಜ್ಯ ಸರಕಾರವನ್ನು ಕೋರಿದ್ದಾರೆ.
ಎಂಡೋ ಸಲ್ಫಾನ್ ಮಾದರಿಯ ಎರಿಯಲ್ ಸಿಂಪ ಡಣೆಯಿಂದ ಆಗಿರುವ ತೊಂದರೆಗಳು ಹಾಗೂ ಅಲ್ಲಿನ ನಿವಾಸಿಗಳಿಗೆ ದೀರ್ಘಕಾಲದ ಕಾಯಿಲೆ ಕಾಣಿಸಿಕೊಂಡಿರುವ ಕುರಿತು ಆರೋಗ್ಯ ಕಾರ್ಯಕರ್ತರಿಂದ ಮನೆ ಮನೆ ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಯಡಿ ನರ ಮಂಡಲಕ್ಕೆ ಸಂಬಂಧಿಸಿದ ಕುರುಡುತನ, ಸಂತಾನಹೀನತೆ,ಗರ್ಭಪಾತ,ಕಿವುಡು,ಕ್ಯಾನ್ಸರ್ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ದಾಖಲಾಗಿತ್ತು. 24.09.04ರಲ್ಲಿ ತಜ್ಞ ವೈದ್ಯರಿಂದ 2ಸಲ ಆರೋಗ್ಯ ತಪಾಸಣೆ ಶಿಬಿರ ನಡೆಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದೆ.
ಮತ್ತೆ 27.7.09ರಂದು ನೀಡಿದ ಮುಖ್ಯಮಂತ್ರಿಯವರ ನಿರ್ದೇಶನದಂತೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಜಿಲ್ಲಾ ವೈದ್ಯಾಧಿಕಾರಿಗಳು ಎರಡು ದಿನಗಳ ಕ್ಯಾಂಪ್ ಮಾಡಿ ಶೇ.60ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರಿಗೆ ಕುಟುಂಬಕ್ಕೆ ತಲಾ 25,000ರೂ.ಗಳಂತೆ ಪರಿಹಾರ ನೀಡಲು ಹಾಗೂ ಅಂಗವಿಕಲ ಸರ್ಟಿಫಿಕೆಟ್ ನೀಡಲು ಸೂಚಿಸಿರುತ್ತಾರೆ.ಅದರಂತೆ 75%ರಿಂದ 100%ಅಂಗವಿಕಲತೆ ಇರುವವರು 64 ಜನರು,60%ರಿಂದ 70%ಅಂಗವಿಕಲತೆ ಇರುವವರು 39 ಜನರು,40%ರಿಂದ 50%ಅಂಗವಿಕಲತೆ ಇರುವವರು 6ಜನರು, 35%ಕಡಿಮೆ ಅಂಗವಿಕಲತೆ ಇರುವ 11ಜನರನ್ನು ಹಾಗೂ ಇತರೆ 17ಜನರನ್ನು ಗುರುತಿಸಿದ್ದು ಇವರಿಗೆ ಪರಿಹಾರ ಹಾಗೂ ಸ್ವಯಂ ಉದ್ಯೋಗಕ್ಕೆ ವಿಶೇಷ ಯೋಜನೆ ರೂಪಿಸಲು ಕಾನೂನಿನಲ್ಲಿ ಸಡಿಲಿಕೆ ತಂದು ಸೂಕ್ತ ಆದೇಶ ನೀಡಲು ದ.ಕ.ಜಿಲ್ಲಾಧಿಕಾರಿಗಳು ಸರಕಾರವನ್ನು ಕೋರಿದ್ದಾರೆ.
ಮೂರು ಗ್ರಾಮಗಳಲ್ಲಿ ಒಟ್ಟು 6 ಜನ ಅಂಗವಿಕಲರಿಗೆ ನಿಯಮಾನುಸಾರ ಮಾಸಿಕ ಅಂಗವಿಕಲ ವೇತನ ನೀಡಲಾಗುತ್ತಿದ್ದು, ಉಳಿದವರಿಗೆ ಆದಾಯಮಿತಿ ಜಾಸ್ತಿಯಿರುವುದರಿಂದ ಮಾಸಿಕ ವೇತನ ಮಂಜೂರು ಮಾಡಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Monday, December 21, 2009

ಮಾಹಿತಿ ಹಕ್ಕಿನ ಸದ್ಬಳಕೆಗೆ ಕರೆ

ಮಂಗಳೂರು,ಡಿ.21:ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಗ್ಗಳಿಕೆ ನಮ್ಮದು.ನಮ್ಮ ದೇಶದಲ್ಲಿ ಪ್ರಜೆಗಳು ಪ್ರಭುಗಳಾಗಲು ಮಾಹಿತಿ ಹಕ್ಕು ಕಾಯಿದೆ ಸದ್ಬಳಕೆ ಅಗತ್ಯ ಎಂದು ಕಿನ್ನಿಗೋಳಿ ಗ್ರಾಮಪಂಚಾಯತ್ ಉಪಾಧ್ಯಕ್ಷರು ಹಾಗೂ ವಕೀಲರೂ ಆಗಿರುವ ವಿಲಿಯಂ ಆಲ್ವಿನ್ ಕಾರ್ಡೊಜಾ ಹೇಳಿದರು.
ಅವರು ಭಾನುವಾರ ಪುನ ರೂರಿನ ಶ್ರೀ ವಿಶ್ವನಾಥ ದೇವ ಸ್ಥಾನದ ಸಭಾಂ ಗಣದಲ್ಲಿ ವಾರ್ತಾ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಕಿನ್ನಿಗೋಳಿ ಗ್ರಾಮಪಂಚಾಯತ್ ನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಾಹಿತಿ ಹಕ್ಕು ಕಾಯಿದೆ ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಜಾಗತಿಕ ಮಾನವ ಹಕ್ಕುಗಳ ಘೋಷಣೆಗೆ ಸಹಿ ಮಾಡಿರುವ ರಾಷ್ಟ್ರ ಗಳಲ್ಲಿ ಭಾರತ ಒಂದಾಗಿದ್ದು, ರಾಷ್ಟ್ರ ಮಟ್ಟದ ಮಾಹಿತಿ ಹಕ್ಕು ಕಾನೂನು 2005ರ ಜೂನ್ 15ರಂದು ಜಾರಿಗೆ ಬಂತು. ಶಕ್ತಿಯುತ ಕಾಯಿದೆ ಇದಾಗಿದ್ದು,ಈ ಕಾಯಿದೆಯ ಸದ್ಬಳಕೆಯಾಗಬೇಕಾದರೆ ಜನರು ಕಾಯಿದೆಯ ಪ್ರಯೋಜನವನ್ನು ಪಡೆಯಬೇಕು ಎಂದು ಹೇಳಿದರು. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಸ್ವಹಿತಾಸಕ್ತಿ,ಅಧಿಕಾರ ದುರುಪಯೋಗ,ಅಸಮರ್ಪಕ ಕಾನೂನು ಅನುಷ್ಠಾನಗಳನ್ನು ನಿವಾರಿಸಲು ಸಾಧ್ಯ ಎಂದರು.ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಸುಜಾತ ಸದಾನಂದ ನೆರವೇರಿಸಿದರು. ಗ್ರಾಮಪಂಚಾಯತಿ ಸದಸ್ಯರಾದ ದಿನೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಮಾರಿ ಅನಿತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರೋಹಿಣಿ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೂಪರ್ ವೈಸರ್ ವೈ ಪ್ರಕಾಶ್ ವಂದಿಸಿದರು. ನಂತರ ಗಿರೀಶ್ ನಾವಡ ತಂಡದಿಂದ ಬೀದಿ ನಾಟಕ ನಡೆಯಿತು.

Saturday, December 19, 2009

ಸಾಕ್ಷರತಾ ಆಂದೋಲನದಿಂದ ಸಾಮಾಜಿಕ ಪರಿವರ್ತನೆ

ಮಂಗಳೂರು,ಡಿ.19:ಸಾಕ್ಷರತೆ ಕೇವಲ ಉದ್ಯೋಗಗಳಿಸಲು ಮಾರ್ಗವಲ್ಲ;ಸಾಕ್ಷರತೆ ನಮ್ಮ ತಿಳುವಳಿಕೆಯ ವಿಸ್ತಾರವನ್ನು ಹೆಚ್ಚಿಸಿ ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಹೇಳಿದರು.
ಭಾರತ ಸರ್ಕಾರದ ಕಪಾರ್ಟ್ ನೋಡಲ್ ಏಜನ್ಸಿ, ಜನಶಿಕ್ಷಣ ಟ್ರಸ್ಟ್, ಅಪ್ನಾದೇಶ್ ಬಳಗ,ಮಂಗಳೂರು ತಾ.ಪಂ ಸಂಯುಕ್ತವಾಗಿ ಇಂದು ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 18ನೇ ಅಕ್ಷರೋತ್ಸವ ಹಾಗೂ ಕಾನೂನು ಸಾಕ್ಷರತಾ ಆಂದೋಲನದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಶೈಕ್ಷಣಿಕವಾಗಿ ದಕ್ಷಿಣ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದ್ದು, 18 ವರ್ಷಗಳ ಹಿಂದೆ ಆರಂಭವಾದ ಈ ಆಂದೋಲನ ನಿರಂತರವಾಗಿ ಮುಂದುವರಿದಿದೆ.ಯೋಜನೆಗಳು ಆಂದೋಲನವಾಗಿ ರೂಪುಗೊಂಡಾಗ ಅದರ ಫಲ ನಿರೀಕ್ಷಿತವಾಗಿ ಅರ್ಹರಿಗೆ ತಲುಪುತ್ತದೆ ಎಂದ ಅವರು ಇಂತಹ ಕಾರ್ಯಕ್ರಮಗಳಿಗೆ ಜಿಲ್ಲಾ ಪಂಚಾಯತ್ ಎಲ್ಲ ರೀತಿಯ ನೆರವು ಮತ್ತು ಪ್ರೋತ್ಸಾಹವನ್ನು ನೀಡಲಿದೆ ಎಂದರು.
ನಾಲ್ಕು ತಿಂಗಳ ಹಿಂದೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಮ್ಮ ಜಿಲ್ಲೆ ಬಹಳ ಹಿಂದುಳಿದಿತ್ತು;ಆದರೆ ಉದ್ಯೋಗ ಖಾತ್ರಿ ಯೋಜನೆ ಆಂದೋಲನವಾಗಿ ರೂಪು ಪಡೆದ ತಕ್ಷಣ ಯೋಜನೆಗೆ ಹೊಸ ಆಯಾಮ ದೊರಕಿತು.ಈಗಾಗಲೇ 68,670 ಕಾರ್ಡ್ ವಿತರಣೆಯಾಗಿದ್ದು, 5ಕೋಟಿ 39ಲಕ್ಷ ರೂ.ಖರ್ಚಾಗಿದೆ. ರೈತರಿಗೆ,ತೋಟಗಾರಿಕೆಗೆ ಉದ್ಯೋಗ ಖಾತ್ರಿಯಿಂದ ಹೆಚ್ಚಿನ ಲಾಭವಾಗಿದೆ.ಸಾಮಾಜಿಕ ಅಭಿವೃದ್ಧಿ ಆಂದೋಲನಗಳಿಂದ ಮಾತ್ರ ಸಾಧ್ಯ ಎಂದರು.ಇದೇ ಸಂಧರ್ಭದಲ್ಲಿ ಅವಿಭಜಿತ ಜಿಲ್ಲೆಗಳಿಂದ ಆಗಮಿಸಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾ ನ್ಯಾಯಾ ಧೀಶ ಕೆಬಿಎಂ ಪಟೇಲ್ ಕಾರ್ಯ ಕ್ರಮ ಉದ್ಘಾ ಸಿದರು.ಶಾಸ ಕರಾದ ಯೋಗೀಶ್ ಭಟ್ ಮುಖ್ಯ ಅತಿಥಿಗಳಾಗಿದ್ದರು. ಸಾಕ್ಷರರಾದ ಬಿ.ಫಾತುಮಾ ಅಧ್ಯಕ್ಷತೆ ವಹಿಸಿದ್ದರು.ಮುಂಗುಲಿ ಕೊರಗ, ಇ ಒ ಕಾಂತರಾಜ್, ಜನಶಿಕ್ಷಣ ಟ್ರಸ್ಟ್ ನ ಶೀನಶೆಟ್ಟರು ಉಪಸ್ಥಿತರಿದ್ದರು. ಕೃಷ್ಣ ಮೂಲ್ಯರು ಕಾರ್ಯಕ್ರಮ ನಿರೂಪಿಸಿದರು. ಗಿರಿಸಿರಿ ಕಲಾತಂಡ ಕನ್ಯಾನದವರು ಡೋಲುಕುಣಿತ ಪ್ರದರ್ಶಿಸಿದರು.

Friday, December 18, 2009

ನೀರಿನ ಮೀಟರ್ ಅಳವಡಿಕೆ ಸಂಪೂರ್ಣಗೊಳಿಸಲು ಕೊಡ್ಗಿ ಸೂಚನೆ

ಮಂಗಳೂರು,ಡಿ.18:ಗ್ರಾಮ ಪಂಚಾಯತ್ ಗಳಲ್ಲಿ ನೀರಿನ ಮೀಟರ್ ಅಳವಡಿಕೆ ಪ್ರಗತಿಯ ಬಗ್ಗೆ ಅತೃಪ್ತಿ ವ್ಯಕ್ತ ಪಡಿಸಿದ 3ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ.ಕೊಡ್ಗಿಯವರು,ಎಲ್ಲರಿಗೂ ಸಮಾನ ನ್ಯಾಯವಿರಬೇಕು;ಅರ್ಧದಷ್ಟು ಜನರು ನೀರಿಗೆ ದುಡ್ಡು ನೀಡುವುದು, ಇನ್ನರ್ಧ ಜನರು ಉಚಿತವಾಗಿ ನೀರು ಪಡೆಯುವುದರಿಂದ ಪಂಚಾಯಿತಿಗೆ ನಷ್ಟ ಎಂದು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾ ಯಿತಿಯಲ್ಲಿ ಏರ್ಪ ಡಿಸಿದ್ದ 3ನೇ ರಾಜ್ಯ ಹಣ ಕಾಸು ಆಯೋ ಗದ ವರದಿ ಅನುಷ್ಠಾನ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಯೋಜನೆಗಳ ಅನುಷ್ಠಾನದಲ್ಲಿ ಜನಪ್ರತಿನಿಧಿಗಳಲ್ಲಿ ಹಾಗೂ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯಿರಬೇಕು.ಹಾಗಾದಾಗ ಮಾತ್ರ ಯೋಜನೆಗಳ ಯಶಸ್ವಿ ಅನುಷ್ಠಾನ ಸಾಧ್ಯ ಎಂದ ಅವರು, ಪ್ರಗತಿ ವರದಿಗಳಲ್ಲಿ ತಪ್ಪು ಮಾಹಿತಿಗಳು ಇರಬಾರದು ಎಂಬ ಎಚ್ಚರಿಕೆಯನ್ನೂ ನೀಡಿದರು.
08-09ನೇ ಸಾಲಿನಲ್ಲಿ ಸುಳ್ಯ ತಾಲೂಕಿನಲ್ಲಿ 96 ಲಕ್ಷ ರೂ., ಪುತ್ತೂರಿನಲ್ಲಿ 12.26ಲಕ್ಷ ರೂ., ಬಂಟ್ವಾಳದಲ್ಲಿ 13ಲಕ್ಷ ರೂ., ಬೆಳ್ತಂಗಡಿಯಲ್ಲಿ 12 ಲಕ್ಷ ರೂ., ಮಂಗಳೂರಿನಲ್ಲಿ 1.85 ಲಕ್ಷ ರೂ. ತೆರಿಗೆ ಬಾಕಿ ಇದೆ ಎಂದು ಸಭೆಯಲ್ಲಿ ಅಧಿಕಾರಿಗಳು ಉತ್ತರಿಸಿದರು.
ಜಿ.ಪಂ ಸದಸ್ಯರು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ನಿರ್ವಹಣೆಯ ವ್ಯವಸ್ಥೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಗ್ರಾಮಪಂಚಾಯತ್ ಅಧಿಕಾರವನ್ನು ಕುಂಠಿತಗೊಳಿಸಿದರೆ ವ್ಯವಸ್ಥೆ ದುರ್ಬಲವಾಗುತ್ತದೆ ಎಂಬುದಕ್ಕೆ ಸಹಮತ ವ್ಯಕ್ತಪಡಿಸಿದರು. ನೀರಿನ ಮೀಟರ್ ಅಳವಡಿಕೆ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರು,ಮೀಟರ್ ಅಳವಡಿಕೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಉತ್ತರಿಸಿದರು.
2008-09ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 5054ರಡಿ ಸರಕಾರ ನಿಗದಿಪಡಿಸಿರುವಂತೆ ದ.ಕ. ಜಿ.ಪಂ. 376ಲಕ್ಷ ರೂ.ಗಳ ಕ್ರಿಯಾ ಯೋಜನೆಯನ್ನು ತಯಾರಿಸಿ ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ.ಆದರೆ 188 ಲಕ್ಷ ರೂ.ಮಾತ್ರ ಬಿಡುಗಡೆಯಾಗಿದೆ. ಬಾಕಿ ಅನುದಾನ ಬಿಡುಗಡೆಯಾಗಿಲ್ಲ ಎಂದು ಸಿಇಒ ಗಮನ ಸೆಳೆದರು. ಕುಡಿಯುನ ನೀರಿನ ಯೋಜನೆಯಡಿ 38 ಕೋಟಿ ರೂ. ಅನುದಾನ ಅಗತ್ಯವಿದ್ದು, 09-10ನೇ ಸಾಲಿಗೆ ಕೇವಲ 7.70 ಕೋಟಿ ರೂ. ಅನುದಾನ ನಿಗದಿ ಮಾಡಿದೆ ಎಂದು ಅಧ್ಯಕ್ಷರಿಗೆ ವಿವರಿಸಿದರು.ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Wednesday, December 16, 2009

ವಿಜ್ಞಾನದಿಂದ ಜ್ಞಾನಾಧಾರಿತ ಆರ್ಥಿಕ ವ್ಯವಸ್ಥೆ:ಪ್ರೊ.ಸಯ್ಯದ್ ಅಖೀಲ್ ಅಹಮದ್

ಮಂಗಳೂರು,ಡಿ.16:ದೇಶದ ಮಾನವ ಸಂಪನ್ಮೂಲವನ್ನು ಆರ್ಥಿಕವಾಗಿ ಸದೃಢ ಗೊಳಿಸಲು ವಿಜ್ಞಾನ ಹಾಗೂ ವೈಜ್ಞಾನಿಕ ವ್ಯವಸ್ಥೆ ಸಾಕಷ್ಟು ಕೊಡುಗೆಯನ್ನು ನೀಡಿದೆ.ದೇಶದ ಮೂಲಭೂತ ಅಗತ್ಯಗಳಿಂದ ಹಿಡಿದು ರಕ್ಷಣೆಯವರೆಗೆ ವಿಜ್ಞಾನ ಕ್ಷೇತ್ರದ ಅಭಿವೃದ್ಧಿ ಅಗತ್ಯವಾಗಿದ್ದು, ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಲು ವಿದ್ಯಾರ್ಥಿಗಳಿಗೆ ವಿಜ್ಞಾನದ ಜ್ಞಾನ ಅಗತ್ಯ ಎಂದು ಯೇನಪೋಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಸಯ್ಯದ್ ಅಖೀಲ್ ಅಹಮ್ಮದ್ ಅವರು ಹೇಳಿದರು.
ಇಂದು ಎನ್ಐಟಿಕೆ ಯಲ್ಲಿ ವಿದ್ಯಾರ್ಥಿ-ವಿಜ್ಞಾನ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈಜ್ಞಾನಿಕ ಸಂಶೋಧನೆಗಳಿಂದ ಸಮಸ್ಯೆಗಳಿಗೆ ವೈಚಾರಿಕ ನೆಲೆಯಲ್ಲಿ ಪರಿಹಾರ ಸಿಗಲಿದೆ ಎಂದು ಅವರು ನುಡಿದರು.
ವಿದ್ಯಾರ್ಥಿಗಳು ಅದರಲ್ಲೂ ಮುಖ್ಯವಾಗಿ ಪ್ರೌಢ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿ ವಿಜ್ಞಾನದಿಂದ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮವನ್ನು ಅವರು ಶ್ಲಾಘಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎನ್ ಐ ಟಿಕೆಯ ನಿರ್ದೇಶಕರಾದ ಪ್ರೊ.ಸಂದೀಪ್ ಸಂಚೇತಿ ಅವರು,ವೈಜ್ಞಾನಿಕ ಸಂಶೋಧನೆಗಳಿಗೆ ಆದ್ಯತೆ ನೀಡುವುದರಿಂದ ಮಾತ್ರ ಜಾಗತಿಕವಾಗಿ ದೇಶ ಗುರುತಿಸಿಕೊಳ್ಳಲು ಸಾಧ್ಯ ಎಂದು ನುಡಿದರು. ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಸದ್ಯದಲ್ಲೇ ನ್ಯಾಷನಲ್ ಪ್ರಾಜೆಕ್ಟ್ ಆನ್ ಟೆಕ್ನಾಲಜಿ ಎನ್ಹಾನ್ಸಡ್ ಲರ್ನಿಂಗ್ ಯೋಜನೆಯಡಿ ಸೇರ್ಪಡೆಗೊಳ್ಳಲಿದ್ದು,ಇದರಿಂದ ವಿದ್ಯಾರ್ಥಿಗಳ ಕಲಿಯುವಿಕೆಗೆ ಇನ್ನಷ್ಟು ನೆರವಾಗಲಿದೆ ಎಂದು ನುಡಿದರು. 110 ಕೋರ್ಸ್ ಗಳು ಈ ಕಲಿಯುವಿಕೆ ಯೋಜನೆಯಡಿ ಸೇರ್ಪಡೆಗೊಂಡಿದ್ದು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಇದರಿಂದ ಅಭಿವೃದ್ಧಿ ಹೊಂದಲಿದೆ ಎಂದು ಅವರು ವಿವರಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಸ್ವಾಗತಿಸಿದರು.ಎನ್ಐಟಿಕೆ ಡೀನ್ ಪ್ರೊ.ಶ್ರೀನಿಕೇತನ್, ಕಾರ್ಯಕ್ರಮದ ಸಂಯೋಜಕರು ಡಾ.ಕೆ.ವಿ.ರಾವ್ ವೇದಿಕೆಯಲ್ಲಿದ್ದರು.

ಎಂಎಸ್ಐಎಲ್ ನಿಂದ ಮದ್ಯ ಮಾರಾಟ ಮಳಿಗೆ ಉದ್ಘಾಟನೆ


ಮಂಗಳೂರು, ಡಿ.16: ಕರ್ನಾಟಕ ಸರ್ಕಾರ ಎಂಎಸ್ ಐಎಲ್ ವತಿಯಿಂದ 463 ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಮಂಗಳೂರಿನ ಕದ್ರಿಯಲ್ಲಿ,ಹೊಯ್ಗೆ ಬಜಾರ್ ನಲ್ಲಿ ಮದ್ಯ ಮಾರಾಟ ಮಳಿಗೆಯನ್ನು ಐ ಎ ಎಸ್ ಅಧಿಕಾರಿ ಶಿವರಾಂ ಉದ್ಘಾಟಿಸಿದರು.

ಕ್ರೀಡೆಯಿಂದ ಕಾರ್ಯಕ್ಷಮತೆ ಹೆಚ್ಚಳ: ಜಿಲ್ಲಾಧಿಕಾರಿ

ಮಂಗಳೂರು,ಡಿ.16:ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯಲ್ಲಿ ಪೊಲೀಸ್ ಇಲಾಖೆ ಪ್ರಧಾನ ಪಾತ್ರ ವಹಿಸುತ್ತಿದ್ದು, ಸದಾ ಕಾರ್ಯದ ಒತ್ತಡದಲ್ಲಿರುವ ಪೊಲೀಸರಿಗೆ ಕ್ರೀಡೆ ಜೀವನೋತ್ಸಾಹ ತುಂಬಲಿದೆ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಹೇಳಿದರು.

ಇಂದು ಪೊಲೀಸು ಕವಾ ಯತು ಮೈದಾನದಲ್ಲಿ ದ.ಕ.ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತ ನಾಡಿದ ಅವರು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿಗಳು ಪ್ರಶಂಸಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ. ಎ.ಸುಬ್ರ ಮಣ್ಯೇಶ್ವರ ರಾವ್, ಅಡಿಷನಲ್ ಎಸ್ ಪಿ ರಮೇಶ್ ಉಪಸ್ಥಿತರಿದ್ದರು.

ನಿಗಮಕ್ಕೆ 100 ಕೋಟಿ ಬಿಡುಗಡೆಗೆ ಮನವಿ: ಎನ್ ಬಿ ಅಬೂಬಕರ್

ಮಂಗಳೂರು,ಡಿ.16:ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೆಚ್ಚಿನ ನೆರವು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೆ 100 ಕೋಟಿರೂ. ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ ಎಂದು ನಿಗಮದ ಅಧ್ಯಕ್ಷ ಎನ್ ಬಿ ಅಬೂಬಕರ್ ತಿಳಿಸಿದರು.
ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12ಮಂದಿಗೆ ವಾಹನ ಖರೀದಿಗೆ ಸಾಲ ನೀಡಲಾಗಿದೆ.ನಿಗಮದಿಂದ ಅರ್ಹರಿಗೆ ಸಾಲಸೌಲಭ್ಯಗಳನ್ನು ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು. ನಿಗಮದಿಂದ ಸಾಲವಸೂಲಾತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲು ಕಂಪ್ಯೂಟರ್ ಮತ್ತು ದೂರವಾಣಿ ಸಂಪರ್ಕ ಕಲ್ಪಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಕರ ಪ್ರಭು, ಹಜ್ ಕಮಿಟಿ ಸದಸ್ಯ ಸಲೀಂ ಅಂಬಾಗಿಲು, ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾದ ಅನ್ವರ್ ರೀಕೋ, ಉಮೇಶ್ ಗೌಡ ಉಪಸ್ಥಿತರಿದ್ದರು.

Monday, December 14, 2009

8 ನೇ ಪರಿಚ್ಛೇದಕ್ಕೆ ತುಳು ಭಾಷೆ: ಸಚಿವ ಮೊಯಿಲಿ ಭರವಸೆ

ಉಜಿರೆ,ಡಿಸೆಂಬರ್ 13. ಕಳೆದ ಮೂರು ದಿನಗಳಿಂದ ಇಲ್ಲಿನ ತುಳುನಾಡ ಸಿರಿದೊಂಪದಲ್ಲಿ ನಡೆದ ವಿಶ್ವ ತುಳು ಸಮ್ಮೇಳನಕ್ಕೆ ವೈಭವದ ತೆರೆ ಬಿದ್ದಿದೆ.ಸಂಜೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ತುಳು ಭ಻ಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ 18 ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಮಾ ರೋಪ ಸಮಾ ರಂಭದಲ್ಲಿ ಪಾಲ್ಗೊಂಡು ಮಾತ ನಾಡಿದ ಕೇಂದ್ರ ಕಾನೂನು ಸಚಿವ ಡಾ. ಎಂ.ವೀರಪ್ಪ ಮೊಯಿಲಿ ಅವರು ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರಿಸಲು ಎಲ್ಲಾ ಸಿದ್ದತೆಗಳು ನಡೆದಿದ್ದು, ಅಂತಿಮ ಹಂತದಲ್ಲಿದೆ, ಕೇಂದ್ರ ಸರ್ಕಾರ ಶೀಘ್ರದಲ್ಲೇ ಅಂತಿಮ ತೀರ್ಮಾಣ ಕೈಗೊಳ್ಳಲಿದೆ ಎಂದರು.
ಸಮ್ಮೇ ಳನ ದಲ್ಲಿ ಪಾಲ್ಗೊಂಡು ಮಾತ ನಾಡಿದ ಉತ್ತರ ಖಂಡದ ರಾಜ್ಯ ಪಾಲೆ ಮಾರ್ಗ ರೇಟ್ ಆಳ್ವ ಅವರು ಸಹ ತುಳು ಭಾಷೆಯ ಉಳಿವಿಗೆ ಸಕಲ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ದೇಶ ವಿದೇಶಗಳಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಲಾಯಿತು.
ಪೇಜಾ ವರ ಮಠಾ ಧೀಶ ವಿಶ್ವೇ ಶ್ವರ ತೀರ್ಥ ಸ್ವಾಮೀಜಿ, ಮಾಣಿಲ ಮೊಹನ್ ದಾಸ್ ಸ್ವಾಮೀಜಿ, ಗೃಹ ಸಚಿವರಾದ ಡಾ. ವಿ.ಎಸ್. ಆಚಾರ್ಯ,ಲೋಕಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ದೆ,ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯು.ಟಿ. ಖಾದರ್, ಮಲ್ಲಿಕಾ ಪ್ರಸಾದ್,ಕೋಟ ಶ್ರೀನಿವಾಸ ಪೂಜಾರಿ,ಗೋಪಾಲ್ ಭಂಡಾರಿ,ಆಭಯಚಂದ್ರ ಜೈನ್,ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಾಲ್ತಾಡಿ ರಾಮಕೃಷ್ಣ ಆಚಾರ್,ಬ್ಯಾರಿ ಅಕಾಡೆಮಿ ಆಧ್ಯಕ್ಷ ಅಬ್ದುಲ್ ರಹಿಮಾನ್,ಕೊಂಕಣಿ ಅಕಾಡೆಮಿ ಅಧ್ಯಕ್ಷ ನಾರಾಯಣ ಖಾರ್ವಿ, ಡಾ.ಎಂ. ಮೋಹನ್ ಆಳ್ವ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Sunday, December 13, 2009

ತುಳುನಾಡ ಸಿರಿದೊಂಪ



ಉಜಿರೆ, ಡಿಸೆಂಬರ್ 13.ವಿಶ್ವ ತುಳು ಸಮ್ಮೇ ಳನದ ಅಂಗ ವಾಗಿ ಸಮ್ಮೇ ಳನದ ಪ್ರಧಾನ ವೇದಿಕೆ ತುಳು ನಾಡ ಸಿರಿ ದೊಂಪದಲ್ಲಿ ಸಾಮ ರಸ್ಯವನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು.ಕ್ರೈಸ್ತ ಧರ್ಮದಲ್ಲಿ ನಡೆಯುವ ಮಗುವಿನ ನಾಮಕರಣದ ವಿಧಿವಿಧಾನಗಳು ಮತ್ತು ಮುಸ್ಲೀಂ ಸಮುದಾಯದಲ್ಲಿ ಮದುವೆ ಸಂಭ್ರಮದಲ್ಲಿ ನಡೆಯುವ ಮೆಹಂದಿಯ ಪ್ರಾತ್ಯಕ್ಷಿಕೆಗಳು ಪ್ರಮುಖ ಆಕರ್ಷಣೆ ಆಗಿದ್ದುವು.

Saturday, December 12, 2009

ವಿಶ್ವ ತುಳು ಸಮ್ಮೇಳನ 2009


ಉಜಿರೆ, ಡಿ.12: ಪಲ್ಲಟದ ನೆಲೆ ಎಂಬ ವಿಚಾರದಲ್ಲಿ ತುಳು ಗೋಷ್ಠಿ ತುಳು ನಾಡ ಸಿರಿ ದೋಂಪ ವೇದಿಕೆಯಲ್ಲಿ ನಡೆಯಿತು. ತುಳು ಸಂಸ್ಕೃತಿಯ ಪಲ್ಲಟ, ಸಂಸ್ಕೃತಿಯ ಆಚರಣೆ, ಆರಾಧನಾ ಪದ್ದತಿ,ಕೃಷಿಯ ಮತ್ತು ಕುಲ ಕಸುಬು-ಗ್ರಾಮೀಣ ಕರಕುಶಲ ಕಲೆಗಳ ಕುರಿತು ನಡೆದ ಚಿಂತನಾ ಗೋಷ್ಟಿ ಯಲ್ಲಿ ಮಂಗಳೂರು ವಿ.ವಿ ಯ ರಿಜಿಸ್ಟಾರ್ ಡಾ. ಕೆ. ಚಿನ್ನಪ್ಪ ಗೌಡ, ಡಾ. ನರೇಂದ್ರ ರೈ ದೇರ್ಲಾ ಮತ್ತು ಪ್ರೊ. ತುಕರಾಂ ಪೂಜಾರಿ ಅವರು ತಮ್ಮ ವಿಚಾರಗಳನ್ನು ಸಭೆಯಲ್ಲಿ ಮಂಡಿಸಿದರು.

ಉಜಿರೆಯ ಎಸ್.ಡಿ.ಎಂ ಕಾಲೇಜಿನ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳು ತುಳುನಾಡ ಆರಸರು ಮತ್ತು ವೈಭವ ಕುರಿತು ಸಂಪಾದಿಸಿದ ಸಾಕ್ಷ್ಯ ಚಿತ್ರ 'ಅರಸರನ್ನು ಅರಸುತ್ತಾ 'ವನ್ನು ಪತ್ರಕರ್ತ ಈಶ್ವರ ದೈತೋಟ ಬಿಡುಗಡೆ ಮಾಡಿದರು.


ಪ್ರಮುಖ ವೇದಿಕೆ ತುಳುನಾಡ ಸಿರಿದೊಂಪದಲ್ಲಿ ನಡೆದ ಕವಿಗೋಷ್ಟಿಯನ್ನು ಮುಂಬಾಯಿಯ ಡಾ, ಸುನಿತಾ ಶೆಟ್ಟಿ ಅವರು ಉದ್ಘಾಟಿಸಿದರು. ಮನೋಹರ್ ಪ್ರಸಾದ್, ಮಹಮ್ಮದ್ ಬಡ್ಡೂರು, ಕ್ಯಾತರಿನ್ ರೊಡ್ರಿಗಸ್,ರಘು ಇಡ್ಕಿದು,ಶಕುಂತಳ ಭಟ್ ಮತ್ತಿತರರು ಪಾಲ್ಗೊಂಡಿದ್ದರು.

ತುಳು ಗ್ರಾಮ ದರ್ಶನ..

ಉಜಿರೆ,ಡಿಸೆಂಬರ್ 12.ಇಲ್ಲಿ ನಡೆಯುವ ವಿಶ್ವ ತುಳು ಸಮ್ಮೇಳನಕ್ಕೆ ನಾಡಿನ ಮೂಲೆಮೂಲೆಯಿಂದ ಜನ ಸಾಗರವೇ ಹರಿದು ಬರುತ್ತಿದೆ.ಇಲ್ಲಿನ ಪ್ರಮುಖ ಆಕರ್ಷಣೆ ತುಳುವ ಸಂಸ್ಕೃತಿಯನ್ನು ಬಿಂಬಿಸುವ ತುಳು ಗ್ರಾಮ,ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ನೇತ್ರತ್ವದಲ್ಲಿ ಉಜಿರೆಯ ಅಜ್ಜರ ಕಲ್ಲಿನಲ್ಲಿಯ 8 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾದ ತುಳುವರ ಮಾದರಿ ತುಳು ಗ್ರಾಮ ಸಮ್ಮೇಳನದ ಕೇಂದ್ರ ಬಿಂದುವಾಗಿದೆ.
ಸ್ವಚ್ಚ ದೇಸಿಯ ಕಲೆಯ ತವರೂರಾದ ಇಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ತುಳು ಗ್ರಾಮವನ್ನು ಪ್ರವೇಶಿಸುನ ಮಂದಿಗೆ ಅದು ಪ್ರದರ್ಶನದ ಬದಲಾಗಿ ದಶಕಗಳ ಹಿಂದೆ ತುಳುವರಲ್ಲಿ ಇದ್ದ ಜೀವನ ಕ್ರಮದ ಸಹಜತೆ, ಮತ್ತು ಜೀವಂತಿಕೆಯನ್ನು ತೋರಿಸುತ್ತಿದೆ. ಪ್ರಕೃತಿ ಸಹಜದತ್ತವಾದ ಕಲ್ಲು ಬಂಡೆಗಳು, ತಗ್ಗು ದಿನ್ನೆಗಳು,ಹಸಿರು ಹುಲ್ಲು ಹಾಸಿದ ಸುಂದರ ಪರಿಸರ,ಇವೆಲ್ಲವೂ ತುಳು ಗ್ರಾಮವನ್ನು ಸಹಜವಾಗಿಯೇ ನೆನಪಿಸುವಂತಿವೆ.ಗುತ್ತಿನ ಮನೆ,ಹಳ್ಳಿಯ ಮುಖ್ಯಸ್ಥ ಪಟೇಲರ ಮನೆ,ಊರಿನ ದೈವಸ್ಥಾನ,ಶಾಲೆ,ಅದಲ್ಲದೇ ಹಳ್ಳಿ ವೈದ್ಯರು,ಅಂಚೆ ಕಚೇರಿ,ಗರಡಿ ಮನೆಗಳು ಎಲ್ಲವೂ ಇಲ್ಲಿದೆ.ಅಪ್ಪಟ ಹುಳಿ ಮಣ್ಣಿನಿಂದ ನಿರ್ಮಾಣ ಮಾಡಿ , ಸೆಗಣಿ ಗುಡಿಸಿ, ಮಸಿ ಓರೆಸಿ ಸಜ್ಜುಗೊಳಿಸಿದ ಮನೆ,ಮನೆಯ ಕೋಣೆಯಲ್ಲಿ ತರಕಾರಿಗಳನ್ನು ತೂಗು ಹಾಕಿದ್ದು,ಭತ್ತದ ಗದ್ದೆಗಳಿಗೆ ನೀರುಣಿಸುವ ಅಪರೂಪದ ಏತ ನೀರಾವರಿ ಹಳ್ಳಿ ಸೊಗಡನ್ನು ನೆನಪಿಸುತ್ತಿದೆ.
ಈ ಗ್ರಾಮದ ವಿವಿಧ ಜಾತಿ ವರ್ಗದ ಜನರ ಮಧ್ಯೆ ಇರುವ ಸಹ ಭಾಳ್ವೆ, ಸಹಾನೂಭೂತಿ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿಧ್ಯಮಾನಗಳ ಹೊರತಾದ ಸೂಷ್ಮಾತಿಗಳನ್ನು ತೋರಿಸುತ್ತಿದೆ ಎಂದೇ ಹೇಳಬಹುದು. ಭಜನ ಮಂದಿರ, ವಿಳ್ಯದೆಲೆ ಮಾರುವ ಕ್ರೈಸ್ತ ಮಹಿಳೆ,ಕ್ಷೌರದ ಅಂಗಡಿ,ದಿನಸಿ ಅಂಗಡಿ,ಸೈಕಲ್ ರಿಪೇರಿ, ಇದ್ದಿಲಿನ ಪೆಟ್ಟಿಗೆಯ ಇಸ್ತ್ರಿ ಅಂಗಡಿ, ಚಪ್ಪಲಿ, ಕೊಡೆ, ಗ್ಯಾಸ್ ಲೈಟ್ ರಿಪೇರಿ ಅಂಗಡಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅವುಗಳಿಗೆ ಸರಿ ಹೊಂದುವ ವ್ಯಕ್ತಿಗಳು ಕೆಲಸ ಮಾಡುವುದರಿಂದ ಸಹಜವಾದ ತುಳು ವಾತಾವರಣ ಇಲ್ಲಿ ನಿರ್ಮಾಣವಾಗಿದೆ.
ಎತ್ತಿನ ಗಾಡಿಗಳು ಈ ಹಳ್ಳಿಯಲ್ಲಿ ಓಡುತ್ತಿವೆ,ಊರಲ್ಲಿ ತಿರುಗಾಡಿ ಬಳೆ ಮಾರುವ ಮಹಿಳೆ,ಖಾಕಿ ವಸ್ತ್ರ ಧರಿಸಿ ತಲೆಗೆ ಟೋಪಿ ಧರಿಸಿ ಅಂಚೆ ತಲುಪಿಸುವ ಅಂಚೆಯಣ್ಣ,ಮನೆ ಮನೆಗೆ ತೆರಳಿ 10-20 ನಿಮಿಷಗಳ ಕಿರು ಯಕ್ಷಗಾನ ಕಾರ್ಯಕ್ರಮ ದಿನ ನಿತ್ಯ ನಡೆಯುತ್ತಿವೆ.ಹೀಗೆ ಈ ಗ್ರಾಮಕ್ಕೆ ಪ್ರವೇಶ ಮಾಡಿದರೆ ಸಂಪೂರ್ಣ ತುಳುನಾಡಿನ ಮಣ್ಣಿನ ಸಂಸ್ಕೃತಿಯಲ್ಲಿ ಹುಟ್ಟಿದ ವಿವಿಧ ಸಂಪ್ರದಾಯವನ್ನು ತೆರೆದಿಡುತ್ತಿದೆ ಮತ್ತು ಆ ಹಿಂದಿನ ತುಳು ನಾಡ ಗತ ವೈಭವವನ್ನು ನೆನಪಿಸುತ್ತಿದೆ.

Friday, December 11, 2009

ಶಿಕ್ಷಣ ಮತ್ತು ಸಂಶೋಧನೆಗಳಿಂದ ದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಸಾಧ್ಯ:ಡಾ.ವಿ.ಎಸ್.ಆಚಾರ್ಯ

ಮಂಗಳೂರು,ಡಿ.11:ನಾಗಾಲೋಟದಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ಬೆಳವಣಿಗೆಗಳು ಜಗತ್ತಿನಲ್ಲಾಗುತ್ತಿದ್ದು,ನಮ್ಮ ದೇಶವು ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು; ನಮ್ಮಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ಇನ್ನಷ್ಟು ಅಭಿವೃದ್ಧಿಹೊಂದಬೇಕು;ಇಲ್ಲದಿದ್ದರೆ ನಾವು ಎಲ್ಲರಿಗಿಂತ ಹಿಂದುಳಿದುಬಿಡುತ್ತೇವೆ ಎಂದು ಡಾ.ವಿ.ಎಸ್.ಆಚಾರ್ಯ ಹೇಳಿದರು..
ಅವರು ಇಂದು ಸುರತ್ಕಲ್ ನ ಎನ್ ಐ ಟಿ ಕೆಯ ಸಿಲ್ವರ್ ಜ್ಯುಬಿಲಿ ಅಡಿಟೋರಿಯಂನಲ್ಲಿ ಆಯೋಜಿಸಲಾದ 24ನೇ ಇಂಡಿಯನ್ ಇಂಜಿನಿಯರಿಂಗ್ ಕಾಂಗ್ರೆಸ್ ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಸಂಶೋಧನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿ,ಜನಸಾಮಾನ್ಯರಿಗೆ ನೆರವಾಗುವಂತಿರಬೇಕು ಎಂದ ಅವರು, ಉತ್ತಮ ಸಿವಿಲ್ ಇಂಜಿನಿಯರ್ ಗಳ ಅಗತ್ಯ ಸಮಾಜಕ್ಕಿದೆ. ಇಂದು ವಿದ್ಯಾರ್ಥಿಗಳು ಪ್ರಥಮವಾಗಿ ವೈದ್ಯಕೀಯ ಕ್ಷೇತ್ರವನ್ನು ಆರಿಸಿದರೆ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಂಪ್ಯೂಟರ್ ಮತ್ತಿತರ ಕೋರ್ಸ್ ಗಳಿಗೆ ಆದ್ಯತೆ ನೀಡುತ್ತಾರೆ. ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ಇರುವ ಪ್ರಸಕ್ತ ಸನ್ನಿವೇಶದಲ್ಲಿ ಸಿವಿಲ್ ಇಂಜಿನಿಯರ್ ಗಳಿಗಾಗಿಯೇ ಪ್ರತ್ಯೇಕ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು..
ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದ್ದು, 160 ಇಂಜಿನಿಯರಿಂಗ್ ಕಾಲೇಜುಗಳು, 40ಮೆಡಿಕಲ್ ಕಾಲೇಜುಗಳನ್ನು ಹೊಂದಿದೆ.ಆದರೂ ಸರ್ ಎಂ ವಿಶ್ವೇಶ್ವರಯ್ಯರಂತಹ ಇಂಜಿನಿಯರ್ ಗಳು ಮತ್ತೆ ಬರಲಿಲ್ಲ ಎಂಬ ವಿಷಾದವನ್ನು ಅವರು ವ್ಯಕ್ತಪಡಿಸಿದರು. ಶಿಕ್ಷಣ ಮತ್ತು ಸಂಶೋಧನೆಗಳಿಂದ ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರುಸಮಾರಂಭದ ಅಧ್ಯಕ್ಷತೆಯನ್ನು ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ನ ಮದನಲಾಲ್ ವಹಿಸಿದ್ದರು.ಅ
ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದೇಶ ಎದುರಿಸುತ್ತಿರುವ ವಿದ್ಯುತ್ ಶಕ್ತಿಯ ಬಗ್ಗೆ ಪ್ರಸ್ತಾಪಿಸಿ,ನೇಪಾಳದಂತಹ ದೇಶಗಳೊಂದಿಗೆ ದ್ವಿಪಕ್ಷೀಯ ಮಾತುಕತೆಯಿಂದ ನಮ್ಮ ಪ್ರಸಕ್ತ ವಿದ್ಯುತ್ ಕೊರತೆ ನೀಗಿಸಲು ಸಾಧ್ಯ ಎಂದರು.ಪರ್ಯಾಯ ಇಂಧನ ಶಕ್ತಿಗಳ ಬಗ್ಗೆ ನಡೆಸುತ್ತಿರುವ ಸಂಶೋಧನೆಯನ್ನು ವಿವರಿಸಿದರು. ಎನ್ ಐಟಿಕೆಯ ಸಂದೀಪ್ ಸಂಚೇತಿ ಸ್ವಾಗತಿಸಿದರು. ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 98 ಸಂಶೋಧನಕಾರರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು

ತುಳುನಾಡು ಸಮೃದ್ಧಿಗೆ ದೈವದೇವತೆಗಳು ಹರಸಲಿ:ವಿಶ್ವೇಶತೀರ್ಥ ಶ್ರೀಪಾದರು

ಮಂಗಳೂರು,ಡಿ.11:ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿಶ್ವ ತುಳು ಸಮ್ಮೇಳನ ನಡೆದಿದ್ದು,ತುಳು ನಾಡಿನ ಸಮೃದ್ಧಿಗೆ ದೈವದೇವತೆಗಳು ಹರಸಲಿ ಎಂದು ತುಳು ಸಮ್ಮೇಳನ ಉದ್ಘಾಟನೆಯ ಸಮಾರಂಭದಲ್ಲಿ ಆಶೀರ್ವಚನ ನೀಡಿ ವಿಶ್ವೇಶ್ವರತೀರ್ಥ ಶ್ರೀ ಪಾದಂಗಳವರು ಹೇಳಿದರು.

ವಿಶೇಷ ಆರ್ಥಿಕ ವಲಯದಿಂದ ನಾಡಿನ ಜೀವವೈವಿಧ್ಯಕ್ಕೆ ಹಾನಿಯಾಗುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಬೇಕು ಎಂದ ಅವರು,ನೇತ್ರಾವತಿ ತಿರುವು ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಬೇಕು ಎಂದು ಸ್ವಾಮೀಜಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಗೃಹಸಚಿವ ಡಾ.ವಿ.ಎಸ್.ಆಚಾರ್ಯ ಅವರು ಸಮಾರಂಭದಲ್ಲಿ ಕೂಡಿಪು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ,ತುಳುವಿನ ಪುನರುತ್ಥಾನಕ್ಕೆ ಈ ಸಮ್ಮೇಳನ ಕಾರಣವಾಗಿದೆ ಎಂದರು.ತುಳುಗ್ರಾಮ ನಿರ್ಮಾಣ, ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಗೆ ಸರ್ಕಾರ ಈಗಾಗಲೇ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದು, ಸಮ್ಮೇಳನದ ನೆನಪಿನಲ್ಲಿ ಚಿರಸ್ಥಾಯಿಯಾಗಿ ತುಳುಗ್ರಾಮ ನಿಲ್ಲಲಿದೆ ಎಂದರು.

ಜಾನಪದ ವಸ್ತುಪ್ರದರ್ಶನ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್ ಅವರು, ತುಳು ಸಮ್ಮೇಳನಕ್ಕೆ ಪೂರಕವಾಗಿ ಸರ್ಕಾರ ಜಿಲ್ಲೆಯ ಜನತೆಗೆ ಅದರಲ್ಲೂ ಮುಖ್ಯವಾಗಿ ರಸ್ತೆಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಅಭಿವೃದ್ಧಿ ಮತ್ತು ಜಿಲ್ಲೆಯ ಜನರು ಎಲ್ಲ ಕ್ಷೇತ್ರದಲ್ಲಿ ಮುಂದಿದ್ದರೂ ಅಭಿವೃದ್ಧಿ ಸಂಸ್ಕೃತಿಯ ಮೇಲೆ ಸವಾರಿ ಮಾಡಬಾರದು ಎಂಬ ಕಿವಿಮಾತನ್ನು ಹೇಳಿದರು.ಸಮ್ಮೇಳನದಲ್ಲಿ ಜಿಲ್ಲೆ ಎದುರಿಸುತ್ತಿರುವ ಹಲವು ಸವಾಲುಗಳಿಗೆ ಉತ್ತರ ದೊರಕುವ ನಿರೀಕ್ಷೆಯನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಉಡುಪಿ ಸಂಸದ ಸದಾನಂದಗೌಡ ಻ವರು ತುಳುನಾಡ ಪಂಚಾಂಗ ಬಿಡುಗಡೆ ಮಾಡಿ ಮಾತನಾಡಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪದ್ದೆಯಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ಧನಂಜಯ ಕುಮಾರ್ ಅವರು ತುಳುಗ್ರಾಮ ಉದ್ಘಾಟಿಸಿದರು.ತುಳು ಆಹಾರ ಮೇಳವನ್ನು ಚಂದಯ್ಯ ಅರಸರು, ವೆಂಕಟರಾಜ ಪುಣಿಚಿತ್ತಾಯರು ಕೃತಿ ಸಂಪುಟಗಳ ಬಿಡುಗಡೆ ಮಾಡಿದರು.ನೂತನ ತುಳು ಕೃತಿಗಳ ಬಿಡುಗಡೆಯನ್ನು ಶಾಸಕರಾದ ವಸಂತ ಬಂಗೇರ ಮಾಡಿದರು.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು. ಪೋಸ್ಟ್ ಮಾಸ್ಟರ್ ಜನರಲ್ ಸಂಧ್ಯಾ ರಾಣಿ ಅವರು ವಿಶೇಷ ಅಂಚೆ ಲಕೋಟ್ ಬಿಡುಗಡೆ ಮಾಡಿದರು. ಹಿರಿಯ ಕವಿ ಡಾ.ಅಮೃತ ಸೋಮೇಶ್ವರ ಅವರು ಅಧ್ಯಕ್ಷ ಭಾಷಣ ಮಾಡಿದರು. ಡಾ.ಎಂ. ಮೋಹನ ಆಳ್ವ ವಂದಿಸಿದರು.ಸ್ವಾಗತ ಮತ್ತು ಆಶಯ ಭಾಷಣವನ್ನು ವಿಶ್ವ ತುಳು ಸಮ್ಮೇಳನದ ಅಧ್ಯಕ್ಷರೂ ಆದ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾಡಿದರು.

ಸಮಕಾಲೀನ ಪೀಳಿಗೆಯಲ್ಲಿ ತುಳು ಸಂಸ್ಕೃತಿ ಜಾಗೃತಿ:ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು,ಡಿ.11.ಸಾಂಸ್ಕೃತಿಕ ವೈಭವಕ್ಕೆ ಹೆಸರಾದ ಕರ್ನಾಟಕದ ಕರಾವಳಿಯ ಪ್ರಮುಖ ಪ್ರಭಾವಳಿ ತುಳುನಾಡು.ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದದಡಿ ಸೇರಿಸಲು ಮತ್ತು ಪಠ್ಯವಾಗಿ ಸೇರಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು:

ಉಜಿರೆಯ ರತ್ನ ವರ್ಮ ಹೆಗಡೆ ಕ್ರೀಡಾ 0ಗಣ ದಲ್ಲಿ ಡಿ.10 ರಿಂದ ನಾಲ್ಕು ದಿನ ಗಳ ಕಾಲ ನಡೆದ ವಿಶ್ವ ತುಳು ಸಮ್ಮೇಳನ-2009 ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕ್ಷೀಣಿ ಸುತ್ತಿರುವ ತುಳು ಭಾಷೆ,ಸಂಸ್ಕೃತಿ ಬಗ್ಗೆ ಸಮ ಕಾಲೀನ ಪೀಳಿಗೆಯಲ್ಲಿ ಜಾಗೃತಿ ಮೂಡಿ ಸುವಲ್ಲಿ ಸಮ್ಮೇಳನ ಯಶಸ್ವಿಯಾಗಿದ್ದು,ಈ ನಿಟ್ಟಿನಲ್ಲಿ ದುಡಿಯುತ್ತಿರುವ ತುಳು ಅಕಾಡೆಮಿಗೆ ಸರ್ಕಾರ ಸಂಪೂರ್ಣ ಸಹಕಾರ,ಸೌಲಭ್ಯಗಳನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಕರಾ ವಳಿ ಜಿಲ್ಲೆಯ ಜೀವ ವೈವಿಧ್ಯ ರೆಕ್ಷಣೆಗೆ ಕರಾವಳಿ ಅರಣ್ಯ ಅಭಿವೃದ್ಧಿ ಯೋಜನೆಗೆ ಮೊನ್ನೆ ಯಷ್ಟೆ ಚಾಲನೆ ನೀಡಲಾಗಿದ್ದು,ಇದರಿಂದಾಗಿ ಸಮುದ್ರ ಕೊರೆತದಂತಹ ಪ್ರಮುಖ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗಿದೆ.ಭತ್ತದ ಕೃಷಿಗೆ ಪ್ರೋತ್ಸಾಹ,ಮೂಲಗೇಣಿ ಸಮಸ್ಯೆ ಪರಿಹಾರ,ಕಂದಾಯ ಇಲಾಖೆ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಅವರು ಸಮ್ಮೇಳನದಲ್ಲಿ ನುಡಿದರು.ಸಮ್ಮೇಳನ ತುಳುವಿಗೆ ಇನ್ನಷ್ಟು ಶಕ್ತಿ ತುಂಬಲಿ ಎಂದು ಹಾರೈಸಿದರು.

Thursday, December 10, 2009

ವಿಶ್ವ ತುಳು ಸಮ್ಮೇಳನ: ವಾರ್ತಾ ಇಲಾಖೆ ಮಳಿಗೆ




ಮಂಗಳೂರು, ಡಿ.10: ವಿಶ್ವ ತುಳು ಸಮ್ಮೇ ಳನದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯ ಗಳನ್ನು ಪ್ರತಿ ಬಿಂಬಿಸುವ ಮಳಿಗೆಯನ್ನು ವಾರ್ತಾ ಇಲಾಖೆ ನಿರ್ಮಿಸಿದೆ.

Wednesday, December 9, 2009

ದ.ಕ.ಜಿಲ್ಲಾ ಪೊಲೀಸ್ ಇಲಾಖೆ ವೆಬ್ ಸೈಟ್

ಮಂಗಳೂರು,ಡಿ.9:ಪೊಲೀಸ್ ಇಲಾಖೆ ವೈಜ್ಞಾನಿಕ ಹಾಗೂ ವೃತ್ತಿಪರ ರೀತಿಯಲ್ಲಿ ಜನರನ್ನು ತಲುಪುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ವೆಬ್ ಸೈಟ್ ನ್ನು ರೂಪಿಸಿದ್ದು, ಇಲಾಖೆ ಕುರಿತ ಮಾಹಿತಿಗಳು ಅಂದರೆ ಪೊಲೀಸ್ ಠಾಣೆಗಳು,ಅಧಿಕಾರಿಗಳು,ಠಾಣೆಗಳಲ್ಲಿ ದಾಖಲಾದ ನಿತ್ಯದ ಅಪರಾಧ ಪ್ರಕರಣಗಳ ಮಾಹಿತಿ ಈ ವೆಬ್ ನಲ್ಲಿ ಲಭ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.
ಇಂಟರ ಆಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ ನಲ್ಲಿ ಸಾರ್ವಜನಿಕರು 0824 2424204 ದೂರ ವಾಣಿ ಸಂಖ್ಯೆಗೆ ಡಯಲ್ ಮಾಡುವ ಮೂಲಕ ದೂರುಗಳನ್ನು ದಾಖಲಿಸಬಹುದು ಎಂದು ಕಾರ್ಯಕ್ರಮ ಉದ್ಘಾಟನೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಎಸ್ ಪಿ ವಿವರಿಸಿದರು.
ಈ ದೂರುಗಳಿಗೆ ಸಂಖ್ಯೆ ನೀಡ ಲಾಗುವುದು ಹಾಗೂ ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಉಪಸ್ಥಿತರಿದ್ದರು.

ಮಾಹಿತಿ ಹಕ್ಕು ಕಾಯಿದೆ ಜನರಿಗೆ ವರದಾನ:ಡಾ.ಕೆ.ಎನ್.ವಿಜಯಪ್ರಕಾಶ್

ಮಂಗಳೂರು,ಡಿ.10:ಮಾಹಿತಿ ಹಕ್ಕು ಕಾಯಿದೆ ಜನಸಾಮಾನ್ಯರಿಗೆ ವರದಾನವಾಗಿ ಪರಿಣಮಿಸಿದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಡಾ.ಕೆ.ಎನ್.ವಿಜಯಪ್ರಕಾಶ್ ಅವರು ತಿಳಿಸಿದರು.
ಅವರು ಮಂಗಳವಾರ ನಗರದ ಕಲಾಂಗಣದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಮಾಹಿತಿ ಹಕ್ಕು ಕಾಯಿದೆ ಕುರಿತ ಮೈಸೂರು ವಿಭಾಗಮಟ್ಟದ ಕಾರ್ಯಾಗಾರದ ಸಮಾರೋಪ ಭಾಷಣ ಮಾಡುತ್ತಿದ್ದರು. ಮಾಹಿತಿ ಹಕ್ಕು ಕಾಯಿದೆಯು ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ತೆರಿಗೆದಾರರ ಹಣವನ್ನು ಪಾರದರ್ಶಕವಾಗಿ ಬಳಸಿದರೆ ಹೊಸ ಸಮಾಜದ ಸೃಷ್ಟಿ ಸಾಧ್ಯ ಎಂದು ನುಡಿದರು. ಅಧಿಕಾರಿಗಳಲ್ಲಿ ಮಾಹಿತಿ ಹಕ್ಕು ಕಾಯಿದೆ ಬಗ್ಗೆ ಭೀತಿ ಮೂಡಿದ್ದು, ಈ ಎರಡು ದಿನಗಳಲ್ಲಿ ತಾವು ಕಲಿತ ವಿಷಯಗಳನ್ನು ದೈನಂದಿನ ಜೀವನದಲ್ಲಿ ಬಳಸುವಂತೆ ಸಲಹೆ ನೀಡಿದರು. ಪ್ರಾಮಾಣಿಕ ಅಧಿಕಾರಿಗಳು ಈ ಕಾಯಿದೆ ಬಗ್ಗೆ ಭೀತರಾಗುವ ಅಗತ್ಯವಿಲ್ಲ ಎಂದು ನುಡಿದರು.ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಾರ್ತಾ ಇಲಾಖೆ ಉಪನಿರ್ದೇಶಕ ಎ.ಆರ್.ಪ್ರಕಾಶ್ ಮಾತನಾಡಿ ಶಿಬಿರಾರ್ಥಿಗಳು ಮಾಹಿತಿ ಹಕ್ಕು ಕಾಯಿದೆಯನ್ನು ಕೇವಲ ಭ್ರಷ್ಟಾಚಾರ ಬಯಲು ಗೊಳಿಸುವ ಉದ್ದೇಶಕ್ಕಲ್ಲದೆ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿಯೂ ಬಳಸಬಹುದು ಎಂದರು. ಮಂಗಳೂರು ವಿ.ವಿ ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಜಿ.ಪಿ.ಶಿವರಾಂ ಮಾತನಾಡಿದರು.ಶಿಬಿರಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಮೈಸೂರು ವಿಭಾಗದ ಎಂಟು ಜಿಲ್ಲೆಗಳ 59 ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಎರಡು ದಿನಗಳ ಈ ಕಾರ್ಯಾಗಾರದಲ್ಲಿ ಬೆಳಗಾವಿಯ ಪ್ರೊ.ಡಿ.ವೈ.ಕುಲಕರ್ಣಿ,ಮಣಿಪಾಲ ವಿಶ್ವವಿದ್ಯಾಲಯದ ಡಾ. ಎ.ನಾರಾಯಣ,ನಿವೃತ್ತ ಕೆ ಎ ಎಸ್ ಅಧಿಕಾರಿ ರಾಜಗೋಪಾಲ ರಾವ್, ಎಸ್ ಡಿ ಎಂ ಕಾನೂನು ಮಹಾವಿದ್ಯಾಲಯದ ಡಾ.ರವೀಂದ್ರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಪ್ರಜೆಗಳನ್ನು ಪ್ರಭುಗಳಾಗಿಸುವ ಮಾಹಿತಿ ಹಕ್ಕು ಕಾಯ್ದೆ


ಮಂಗಳೂರು,ಡಿ.9:ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಪ್ರಜೆಗಳೂ ನಿಜವಾದ ಅರ್ಥದಲ್ಲಿ ಪ್ರಭುಗಳಾಗಲು ಮಾಹಿತಿ ಹಕ್ಕು ಕಾಯ್ದೆಯಿಂದ ಸಾಧ್ಯ ಎಂದು ರಾಜ್ಯ ಮಾಹಿತಿ ಆಯುಕ್ತ ಡಾ.ಎಚ್.ಎನ್.ಕೃಷ್ಣ ಅಭಿಪ್ರಾಯಪಟ್ಟರು.
ಅವರು ಡಿ.7ರಂದು ನಗರದ ಕಲಾಂಗಣದಲ್ಲಿ ವಾರ್ತಾ ಇಲಾಖೆ ವತಿಯಿಂದ ಏರ್ಪಡಿಸಲಾದ ಮೈಸೂರು ವಿಭಾಗ ಮಟ್ಟದ ಮಾಹಿತಿ ಹಕ್ಕು ಅಧಿನಿಯಮ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದ ಅಕ್ಟೋಬರ್ 12,2005 ರಂದು ಜನರಿಗೆ ನಿಜವಾದ ಸ್ವಾತಂತ್ರ್ಯ ದೊರೆಯಿತು ಎಂದು ಅಭಿಪ್ರಾಯಪಟ್ಟ ಅವರು, ಇದು ಜನಪರ ಕಾಯಿದೆ ಎಂದು ಬಣ್ಣಿಸಿದರು. ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದ ಹಿನ್ನಲೆ,ಕಾಯಿದೆಯ ಮುಖ್ಯಾಂಶಗಳು,ವೈಶಿಷ್ಟ್ಯಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದ ಅವರು, ಈ ಬಗ್ಗೆ ಅಧಿಕಾರಶಾಹಿ ಇನ್ನೂ ಮುಕ್ತವಾಗಿ ತೆರೆದುಕೊಳ್ಳಬೇಕಿದೆ ಎಂದು ಸಲಹೆ ಮಾಡಿದರು.ಕಾಯಿದೆಯ ಕುರಿತು ಹೆಚ್ಚಿನ ಪ್ರಚಾರ ಮಾಡುವುದು ಸರ್ಕಾರದ ಜವಾಬ್ದಾರಿ;ಅದರಲ್ಲೂ ಮಹಿಳೆಯರಲ್ಲಿ,ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವನ್ನು ಅವರು ಪ್ರತಿಪಾದಿಸಿದರು.ಪತ್ರಕರ್ತರು ಮತ್ತು ವಕೀಲರು ಈ ಕಾಯಿದೆಯನ್ನು ಸಮಾಜದ ಹಿತಕ್ಕಾಗಿ ಸದ್ಬಳಕೆ ಮಾಡಿಕೊಳ್ಳಲು ಈ ಸಂದರ್ಭದಲ್ಲಿ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್ ಅವರು ಈ ಕಾಯಿದೆ ಕುರಿತು ಜನರಿಗೆ ಅರಿವು ಮೂಡಿಸಲು ಪ್ರಚಾರಾಂದೋಲನವೇ ನಡೆಯಬೇಕೆಂದು ಸಲಹೆ ನೀಡಿದರು.ಮಾಹಿತಿ ಹಕ್ಕು ಕಾಯಿದೆ ಜನರೇ ಅಧಿಕಾರಿಗಳನ್ನು ನಿಯಂತ್ರಿಸಿ ಕೆಲಸ ಪಡೆದುಕೊಳ್ಳಬಹುದಾದ ಕಾನೂನು. ಇದರ ಬಗ್ಗೆ ಅರಿವು ಮೂಡಿಸಲು ಗ್ರಾಮೀಣ ಪ್ರದೇಶದಲ್ಲಿ ಇಂಥ ಕಾರ್ಯಾಗಾರಗಳನ್ನು ಏರ್ಪಡಿಸುವ ಅಗತ್ಯವಿದೆ ಎಂದರು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜೀವಿಶಾಸ್ತ್ರ,ಪರಿಸರ ಮತ್ತು ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರು ಪ್ರಾಸ್ತಾವಿಕ ಮಾತನಾಡಿದರು.ಮೈಸೂರು ವಿಭಾಗದ ಉಪನಿರ್ದೇಶಕ ಎ.ಆರ್.ಪ್ರಕಾಶ್ ಸ್ವಾಗತಿಸಿದರು.ವಾರ್ತಾಧಿಕಾರಿ ರೋಹಿಣಿ ವಂದಿಸಿದರು.

Saturday, December 5, 2009

ವಿಶ್ವ ತುಳು ಸಮ್ಮೇಳನಕ್ಕೆ ಒಂದು ಕೋಟಿ ರೂ.

ಮಂಗಳೂರು,ಡಿ.5:ವಿಶ್ವ ತುಳು ಸಮ್ಮೇಳನಕ್ಕೆ ರಾಜ್ಯ ಸರ್ಕಾರದ ವತಿಯಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಒಂದು ಕೋಟಿ ರೂ.ಗಳನ್ನು ನೀಡಿದರು.
ಈ ಸಂದರ್ಭ ದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ. ಪಾಲೇ ಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವಸಂತ ಬಂಗೇರ, ಮಲ್ಲಿಕಾ ಪ್ರಸಾದ್, ರಘುಪತಿ ಭಟ್, ಗಣೇಶ್ ಕಾರ್ಣಿಕ್,ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಗುಣಮಟ್ಟ ನಿಯಂತ್ರಣ ಕೊಠಡಿ ಉದ್ಘಾಟನೆ

ಮಂಗಳೂರು,ಡಿ.5:ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದ್ದು, ಮಡಿಕೇರಿ,ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಸ್ತೆ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಲು 14 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ 8 ಪ್ರಯೋಗಾಲಯಗಳನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೇಮಾರ್ ಅವರು ಹೇಳಿದ್ದಾರೆ.

ಇಂದು ಬೆಳ್ತಂಗಡಿ ತಾಲೂಕಿನ ಐ ಬಿ ಪಕ್ಕದಲ್ಲಿ ಸ್ಥಾಪಿಸಲಾದ ಗುಣ ನಿಯಂತ್ರಣ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಕೊರತೆ ನೀಗಿಸುವ ಭರವಸೆಯನ್ನು ನೀಡಿದರಲ್ಲದೆ, ಜಿಲ್ಲೆಯ ರಸ್ತೆ ಕಾಮಗಾರಿಗೆ ಅಗತ್ಯ ಹಣವನ್ನು ಮಂಜೂರು ಮಾಡಿರುವುದಾಗಿ ಹೇಳಿದರು.
ಕಾರ್ಯ ಕ್ರಮದಲ್ಲಿ ಪಾಲ್ಗೊಂಡ ಗೃಹ ಸಚಿವ ಡಾ. ವಿ. ಎಸ್. ಆಚಾರ್ಯ ಅವರು, ಲೋಕೋ ಪಯೋಗಿ ಇಲಾಖೆ ಕಟ್ಟಡ ಕಾಮಗಾರಿ ಕೈಗೊಳ್ಳುವಾಗ, ರಸ್ತೆ ನಿರ್ಮಾಣ ಮಾಡುವಾಗ ಸೂಕ್ತ ವಿನ್ಯಾಸ ರೂಪಿಸಬೇಕು. ರಸ್ತೆ ಉತ್ತಮವಾಗಿರಬೇಕಾದರೆ ಚರಂಡಿ ಸುವ್ಯವಸ್ಥಿತವಾಗಿರಬೇಕೆಂದು ಸಲಹೆ ಮಾಡಿದರು. ಸಮಾ ರಂಭದಲ್ಲಿ ಶಾಸಕ ವಸಂತ ಬಂಗೇರ,ಉಡುಪಿ ಶಾಸಕ ರಘುಪತಿ ಭಟ್, ತಾ.ಪಂ ಅಧ್ಯಕ್ಷ ವಿಜಯ ಕುಮಾರ್, ನಗರಸಭಾ ಅಧ್ಯಕ್ಷೆ ಬೇಬಿ, ಉಡುಪಿ ನಗರಸಭಾ ಅಧ್ಯಕ್ಷ ವಿಜಯಕುಮಾರ್ ಉಪಸ್ಥಿತರಿದ್ದರು. ಲೋಕೋಪಯೋಗಿ ಇಲಾಖಾ ಅಧೀಕ್ಷಕ ಬಾಲಕೃಷ್ಣ ಸ್ವಾಗತಿಸಿದರು.

Thursday, December 3, 2009

ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಕಲ ನೆರವು: ಜಿ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ

ಮಂಗಳೂರು,ಡಿ.3:ವಿಕಲಚೇತನರು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಆತ್ಮಸ್ಥೈರ್ಯದಿಂದ ಬದುಕುವ ವಾತಾವರಣ ಸೃಷ್ಟಿಸುವುದು ಪ್ರತಿಯೊಬ್ಬರ ಕರ್ತವ್ಯ.ಅವರ ಅಭಿವೃದ್ಧಿಗಾಗಿರುವ ಇಲಾಖೆಯೊಂದಿಗೆ ಜೊತೆಗೂಡಿ ಜಿಲ್ಲಾಡಳಿತ ಅವರಿಗೋಸ್ಕರ ಮೀಸಲಿಟ್ಟ ಎಲ್ಲ ಸೌಲಭ್ಯಗಳು ಅವರಿಗೆ ತಲುಪಿಸುವಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹೇಳಿದರು.

ಇಂದು ಪುರಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಅಂಗವಿಕಲರ ದಿನಾಚರಣೆ - 2009 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 1981 ವಿಶ್ವ ಅಂಗವಿಕಲರ ವರ್ಷವೆಂದು ಘೋಷಣೆಯಾಗಿದ್ದು, ರಾಜ್ಯದಲ್ಲಿ 1988ರಲ್ಲಿ ಅವರಿಗೋಸ್ಕರ ಪ್ರತ್ಯೇಕ ಇಲಾಖೆ ಸ್ಥಾಪಿಸಲ್ಪಟ್ಟಿತು. ಜಿಲ್ಲೆಯಲ್ಲಿ ಅವರಿಗೆ ಸರ್ಕಾರದಿಂದ ದೊರೆಯಲಿರುವ ಎಲ್ಲ ಸವಲತ್ತುಗಳನ್ನು ನೀಡಲಾಗುವುದು ಎಂದು ಅವರು ನುಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಶಾಸಕ ಯು ಟಿ ಖಾದರ್ ಮಾತನಾಡಿ,ವಿಕಲಚೇತನರಿಗೆ ಈಗಿರುವ ಸೌಲಭ್ಯಗಳು ಪರಿಪೂರ್ಣವಾಗಿಲ್ಲ.ಅವರು ಸ್ವಾವಲಂಬಿಗಳಾಗಿ ಬಾಳಲು ಸಮಗ್ರ ನೀತಿ ನಿಯಮಗಳನ್ನು ರೂಪಿಸಬೇಕಿದೆ ಎಂದರು. ವಿಕಲ ಚೇತನರಿಗಾಗಿ ದುಡಿದ ಶಿಕ್ಷಕಿ ಯರನ್ನು ಹಾಗೂ ಸಾಧಕ ವಿಕಲ ಚೇತನರನ್ನು ಗುರುತಿಸಿ ಸನ್ಮಾನಿ ಸಲಾಯಿತು.ಇವರ ಪರವಾಗಿ ಮಾತನಾಡಿದ ವಿ.ಎಸ್.ರಾಬರ್ಟ್, ಯಾರಿಗೂ ಹೊರೆಯಾಗದಂತೆ ಬಾಳಲು, ವಿಕಲಚೇತನರ ಆತ್ಮಸ್ಥೈರ್ಯ ಹೆಚ್ಚಿಸುವಂತಹ ವಾತಾವರಣದ ಅಗತ್ಯವನ್ನು ಪ್ರತಿಪಾದಿಸಿದರು. ಅಂಗವಿಕಲ ಫೆಡರೇಷನ್ ನ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯ ಕ್ರಮದಲ್ಲಿ ಜಿ.ಪಂ. ಸಿಇಒ ಪಿ.ಶಿವಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್. ರಮೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ಎಸ್ ಡಿ ಎಂ ಉದ್ಯಮ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ದೇವರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಉಪನಿರ್ದೇಶಕರಾದ ಶಕುಂತಲಾ ಸ್ವಾಗತಿಸಿದರು.