Friday, December 11, 2009

ತುಳುನಾಡು ಸಮೃದ್ಧಿಗೆ ದೈವದೇವತೆಗಳು ಹರಸಲಿ:ವಿಶ್ವೇಶತೀರ್ಥ ಶ್ರೀಪಾದರು

ಮಂಗಳೂರು,ಡಿ.11:ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿಶ್ವ ತುಳು ಸಮ್ಮೇಳನ ನಡೆದಿದ್ದು,ತುಳು ನಾಡಿನ ಸಮೃದ್ಧಿಗೆ ದೈವದೇವತೆಗಳು ಹರಸಲಿ ಎಂದು ತುಳು ಸಮ್ಮೇಳನ ಉದ್ಘಾಟನೆಯ ಸಮಾರಂಭದಲ್ಲಿ ಆಶೀರ್ವಚನ ನೀಡಿ ವಿಶ್ವೇಶ್ವರತೀರ್ಥ ಶ್ರೀ ಪಾದಂಗಳವರು ಹೇಳಿದರು.

ವಿಶೇಷ ಆರ್ಥಿಕ ವಲಯದಿಂದ ನಾಡಿನ ಜೀವವೈವಿಧ್ಯಕ್ಕೆ ಹಾನಿಯಾಗುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಬೇಕು ಎಂದ ಅವರು,ನೇತ್ರಾವತಿ ತಿರುವು ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಬೇಕು ಎಂದು ಸ್ವಾಮೀಜಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಗೃಹಸಚಿವ ಡಾ.ವಿ.ಎಸ್.ಆಚಾರ್ಯ ಅವರು ಸಮಾರಂಭದಲ್ಲಿ ಕೂಡಿಪು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ,ತುಳುವಿನ ಪುನರುತ್ಥಾನಕ್ಕೆ ಈ ಸಮ್ಮೇಳನ ಕಾರಣವಾಗಿದೆ ಎಂದರು.ತುಳುಗ್ರಾಮ ನಿರ್ಮಾಣ, ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಗೆ ಸರ್ಕಾರ ಈಗಾಗಲೇ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದು, ಸಮ್ಮೇಳನದ ನೆನಪಿನಲ್ಲಿ ಚಿರಸ್ಥಾಯಿಯಾಗಿ ತುಳುಗ್ರಾಮ ನಿಲ್ಲಲಿದೆ ಎಂದರು.

ಜಾನಪದ ವಸ್ತುಪ್ರದರ್ಶನ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್ ಅವರು, ತುಳು ಸಮ್ಮೇಳನಕ್ಕೆ ಪೂರಕವಾಗಿ ಸರ್ಕಾರ ಜಿಲ್ಲೆಯ ಜನತೆಗೆ ಅದರಲ್ಲೂ ಮುಖ್ಯವಾಗಿ ರಸ್ತೆಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಅಭಿವೃದ್ಧಿ ಮತ್ತು ಜಿಲ್ಲೆಯ ಜನರು ಎಲ್ಲ ಕ್ಷೇತ್ರದಲ್ಲಿ ಮುಂದಿದ್ದರೂ ಅಭಿವೃದ್ಧಿ ಸಂಸ್ಕೃತಿಯ ಮೇಲೆ ಸವಾರಿ ಮಾಡಬಾರದು ಎಂಬ ಕಿವಿಮಾತನ್ನು ಹೇಳಿದರು.ಸಮ್ಮೇಳನದಲ್ಲಿ ಜಿಲ್ಲೆ ಎದುರಿಸುತ್ತಿರುವ ಹಲವು ಸವಾಲುಗಳಿಗೆ ಉತ್ತರ ದೊರಕುವ ನಿರೀಕ್ಷೆಯನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಉಡುಪಿ ಸಂಸದ ಸದಾನಂದಗೌಡ ಻ವರು ತುಳುನಾಡ ಪಂಚಾಂಗ ಬಿಡುಗಡೆ ಮಾಡಿ ಮಾತನಾಡಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪದ್ದೆಯಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ಧನಂಜಯ ಕುಮಾರ್ ಅವರು ತುಳುಗ್ರಾಮ ಉದ್ಘಾಟಿಸಿದರು.ತುಳು ಆಹಾರ ಮೇಳವನ್ನು ಚಂದಯ್ಯ ಅರಸರು, ವೆಂಕಟರಾಜ ಪುಣಿಚಿತ್ತಾಯರು ಕೃತಿ ಸಂಪುಟಗಳ ಬಿಡುಗಡೆ ಮಾಡಿದರು.ನೂತನ ತುಳು ಕೃತಿಗಳ ಬಿಡುಗಡೆಯನ್ನು ಶಾಸಕರಾದ ವಸಂತ ಬಂಗೇರ ಮಾಡಿದರು.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು. ಪೋಸ್ಟ್ ಮಾಸ್ಟರ್ ಜನರಲ್ ಸಂಧ್ಯಾ ರಾಣಿ ಅವರು ವಿಶೇಷ ಅಂಚೆ ಲಕೋಟ್ ಬಿಡುಗಡೆ ಮಾಡಿದರು. ಹಿರಿಯ ಕವಿ ಡಾ.ಅಮೃತ ಸೋಮೇಶ್ವರ ಅವರು ಅಧ್ಯಕ್ಷ ಭಾಷಣ ಮಾಡಿದರು. ಡಾ.ಎಂ. ಮೋಹನ ಆಳ್ವ ವಂದಿಸಿದರು.ಸ್ವಾಗತ ಮತ್ತು ಆಶಯ ಭಾಷಣವನ್ನು ವಿಶ್ವ ತುಳು ಸಮ್ಮೇಳನದ ಅಧ್ಯಕ್ಷರೂ ಆದ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾಡಿದರು.