Tuesday, June 30, 2009

ಬಿ. ಸಿ.ರೋಡು: ಸಂಚಾರ ನಿಷೇಧ ಆದೇಶ ರದ್ದುಮಂಗಳೂರು, ಜೂ.30: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬಿ.ಸಿ.ರೋಡಿನಿಂದ ಮಂಗಳೂರುವರೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಮುಗಿಸುವ ಉದ್ದೇಶದಿಂದ ಇಂದಿನಿಂದ ಜುಲೈ 28ರವರೆಗೆ ವಾಹನವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಮುಂದಿನ ಆದೇಶದವರೆಗೆ ಹಿಂಪಡೆಯಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿಗಳಾಗಿರುವ ಶ್ರೀ ಪ್ರಭಾಕರ ಶರ್ಮಾ ಅವರು ತಿಳಿಸಿದ್ದಾರೆ.
ಅತಿ ಪ್ರಮುಖ ಸಂಪರ್ಕ ಕೇಂದ್ರವಾಗಿರುವ ಬಿ. ಸಿ. ರೋಡಿನಲ್ಲಿ ಇರ್ಕಾನ್ ಕಂಪೆನಿಯವರು ಸರ್ವಿಸ್ ರಸ್ತೆ ನಿರ್ಮಾಣದಲ್ಲಿ ವಿಳಂಬ ಮಾಡಿರುವ ಕಾರಣ ಮೂಡಿಬಂದ ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ ಈ ಆದೇಶವನ್ನು ಹೊರಡಿಸಲಾಗಿದ್ದು, ಈ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ್ ಶೆಟ್ಟಿಯವರ ನೇತೃತ್ವದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಸಭೆಯನ್ನು ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಇರ್ಕಾನ್ ಕಂಪೆನಿಯ ಅಡಿಷನಲ್ ಜನರಲ್ ಮ್ಯಾನೇಜರ್ ಸುರೇಶ್ ಕುಮಾರ್ ಅವರು 7ರಿಂದ 10ದಿನಗಳೊಳಗಾಗಿ(ಡ್ರೈಡೇಸ್) 200 ಮೀಟರ್ ಸರ್ವಿಸ್ ರಸ್ತೆಯನ್ನು ನಿರ್ಮಿಸುವುದಾಗಿ ಹೇಳಿದರು. ನಂತರದ 30ದಿನಗಳಲ್ಲಿ ರಾತ್ರಿ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧಿಸುವ ಚಿಂತನೆ ಮಾಡಿದ್ದು, ಮೆಸ್ಕಾಂ, ಭೂಸ್ವಾಧೀನ ಅಧಿಕಾರಿ, ಬಿ ಎಸ್ ಎನ್ ಎಲ್, ತಹಸೀಲ್ದಾರರು ಈ ಶನಿವಾರದೊಳಗೆ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಬೇಕೆಂದು ಶ್ರೀ ನಾಗರಾಜ್ ಶೆಟ್ಟಿ ಅವರು ಸೂಚನೆ ನೀಡಿದರು.
ಕಾಮಗಾರಿ ವಿಳಂಬದ ಬಗ್ಗೆ ವಿವರಣೆಯನ್ನು ಕೇಳಿದ ಸಂಸದರು, ಜನರಿಗೆ ತೊಂದರೆಯಾಗದಂತೆ ಹೊಣೆಯರಿತು ಕರ್ತವ್ಯ ನಿರ್ವಹಿಸುವಂತೆ ಹೇಳಿದರಲ್ಲದೆ ಜನರ ವಿಶ್ವಾಸಕ್ಕೆ ಭಂಗ ತಾರದಂತೆ ತಿಂಗಳೊಳಗೆ ಕಾಮಗಾರಿ ಮುಗಿಸಲು ಸೂಚಿಸಿದರು.
ಸಮಸ್ಯೆಗಳ ಆಳವನ್ನು ಸಂಪೂರ್ಣವಾಗಿ ಅಭ್ಯಸಿಸಿ ಜಿಲ್ಲಾಡಳಿತ ಮೇಲಿನ ಆದೇಶವನ್ನು ಹೊರಡಿಸಿತ್ತು; ಆದರೆ ಇರ್ಕಾನ್ ಕಂಪೆನಿ ಸರ್ವಿಸ್ ರಸ್ತೆ ಸಂಪರ್ಕ ನೀಡಲು ವಿಫಲವಾದ ಹಿನ್ನಲೆಯಲ್ಲಿ ಸಮಸ್ಯೆ ಉದ್ಭವವಾಗಿದ್ದು, ಆದಷ್ಟು ಶೀಘ್ರವಾಗಿ ಸಮಸ್ಯೆ ಪರಿಹರಿಸಲು ಕಾರ್ಯೋನ್ಮುಖರಾಗಬೇಕೆಂದು ಪ್ರಭಾರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಈ ಪರಿಸರದಲ್ಲಿ ಚತುಷ್ಪಥ ಕಾಮಗಾರಿಯನ್ನು 31.12. 2009ರೊಳಗೆ ಮುಗಿಸಲಾಗುವುದು ಎಂದು ಇರ್ಕಾನ್ ಅಧಿಕಾರಿಗಳು, ದ್ವಿಪಥ ರಸ್ತೆಯನ್ನು ಆದಷ್ಟು ಶೀಘ್ರವಾಗಿ ಸಂಚಾರ ಮುಕ್ತಗೊಳಿಸುವುದಾಗಿ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಾರ್ವಜನಿಕರು ಜನರಿಗೆ ಕುಡಿಯುವ ನೀರು ಮತ್ತು ಸಂಚಾರಕ್ಕೆ ತೊಂದರೆಯಾಗದಂತೆ ಕಾಮಗಾರಿ ಮುಗಿಸಲು ಮನವಿ ಮಾಡಿದರು.ಸಭೆಯಲ್ಲಿ ಶಾಸಕ ಶ್ರೀ ಯು ಟಿ. ಖಾದರ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಇರ್ಕಾನ್ ನ ಬಸವರಾಜ್ ಸೇರಿದಂತೆ ಇಲಾಖಾಧಿಕಾರಿಗಳು, ಬಂಟ್ವಾಳ ತಹಸೀಲ್ದಾರ್ ಪಾಲ್ಗೊಂಡಿದ್ದರು.

Monday, June 29, 2009

13 ಜಿಲ್ಲೆಗಳಲ್ಲಿ ಕಬ್ಬು ಬೆಳೆ ಅಭಿವೃದ್ಧಿಗೆ ಅಧಿಕಾರಿಗಳ ನೇಮಕಮಂಗಳೂರು, ಜೂ. 29: ರಾಜ್ಯದಲ್ಲಿ ಕಬ್ಬುಬೆಳೆಯುವ ಪ್ರಮುಖ 13 ಜಿಲ್ಲೆಗಳಲ್ಲಿ ಕಬ್ಬು ಬೆಳೆ ಅಭಿವೃದ್ಧಿಗೆ ಜಿಲ್ಲಾ ಮಟ್ಟದ ಕಬ್ಬು ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶ್ರೀ ಶಿವರಾಜ ಎಸ್. ತಂಗಡಗಿ ಅವರು ತಿಳಿಸಿದರು.
ಇಂದು ನಗರದ ಬೈಕಂಪಾಡಿಯ ಎಪಿಎಂಸಿ ಯಾರ್ಡ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಶೇಕಡ 40ರಷ್ಟು ಕಬ್ಬಿನ ಬೆಳೆ ಇಳಿಕೆಯಾಗಿದ್ದು, ಬೆಳೆಯ ಅಭಿವೃದ್ಧಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನು ಒಳಗೊಂಡಂತೆ ಒಂದು ಸಮಿತಿ ರಚಿಸಿ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೇಮಿಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಎಪಿಎಂಸಿಗಳಿಂದ 202 ಕೋಟಿ ರೂ. ಸೆಸ್ ಸಂಗ್ರಹಿಸಲಾಗಿದೆ. 225 ಕೋಟಿ ರೂ.ಗಳ ಗುರಿ ಹಮ್ಮಿಕೊಳ್ಳಲಾಗಿದ್ದು, ಎಣ್ಣೆ ಕಾಳುಗಳ ಉತ್ಪಾದನೆಯಲ್ಲಿ ಸಂಭವಿಸಿದ ಕುಸಿತದಿಂದ ನಿಗದಿತ ಗುರಿ ತಲುಪಲು ಸಾದ್ಯವಾಗಿಲ್ಲ ಎಂದ ಅವರು, 2008-09ನೇ ಸಾಲಿನಲ್ಲಿ 3.35 ಕೋಟಿ ರೂ. ಮಾರುಕಟ್ಟೆ ತೆರಿಗೆಯನ್ನು ಸಂಗ್ರಹಿಸಲಾಗಿದೆ ಎಂದರು. ರಾಷ್ಟ್ರೀಯ ಮಾರುಕಟ್ಟೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 12 ಕೋಟಿ ರೂ.ಗಳನ್ನು ಬೈಕಂಪಾಡಿ ಎಪಿಎಂಸಿ ಅಭಿವೃದ್ಧಿಗೆ ನೀಡಲಾಗಿದೆ ಎಂದ ಅವರು, ಮಾರುಕಟ್ಟೆ ಪ್ರಾಂಗಣಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ. ಕೃಷ್ಣ ಪಾಲೆಮಾರ್, ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು.

Saturday, June 27, 2009

ಕೆ. ಕೆ. ಶೆಟ್ಟಿ ಸ್ಮಾರಕಕಟ್ಟಡ ಆಡಳಿತಾಧಿಕಾರಿಯಾಗಿ ಎ ಸಿ
ಮಂಗಳೂರು,ಜೂ.27: ನಗರದ ಹೃದಯಭಾಗದಲ್ಲಿರುವ ಕಾರ್ನಾಡ್ ಸದಾಶಿವ ರಾವ್ ಟ್ರಸ್ಟ್ ಸರ್ಕಾರದ ಶರ್ತಗಳನ್ನು ಉಲ್ಲಂಘಿಸಿರುವುದನ್ನು ದ. ಕ. ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸರ್ಕಾರ ಟ್ರಸ್ಟ್ ಗೆ ಮಂಜೂರು ಮಾಡಿದ 0.28 ಎಕರೆ ಜಮೀನನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದಿದ್ದು, ಮುಂದಿನ ಆದೇಶದವರೆಗೆ ಮಂಗಳೂರು ಸಹಾಯಕ ಕಮಿಷನರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ದ. ಕ. ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

27.6.09ರಂದು ಸಹಾಯಕ ಕಮಿಷನರ್ ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡಿದ್ದಾರೆ.

Thursday, June 25, 2009

ನೆಮ್ಮದಿ ಕೇಂದ್ರಕ್ಕೆ ವಿದ್ಯಾರ್ಥಿಗಳು ಬಂದರೆ ಶಾಲಾ, ಕಾಲೇಜು ಮುಖ್ಯಸ್ಥರ ಅಮಾನತು: ಡಿ ಸಿ

ಮಂಗಳೂರು, ಜೂ. 25: ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ವಿದ್ಯಾರ್ಥಿಗಳು ನೆಮ್ಮದಿ ಕೇಂದ್ರಗಳಿಗೆ ಬರುವ ಅಗತ್ಯವಿಲ್ಲ; ಈ ಸಂಬಂಧದ ಅರ್ಜಿಗಳನ್ನು ಶಾಲಾ ಕಾಲೇಜುಗಳಲ್ಲಿ ಮುಖ್ಯಸ್ಥರೇ ಸ್ವೀಕರಿಸಿ, ಸರ್ಟಿಫಿಕೇಟ್ ತರಿಸಿಕೊಳ್ಳುವ ಹೊಣೆ ಶಾಲಾ ಕಾಲೇಜುಗಳದ್ದೇ ಆಗಿರುತ್ತದೆ. ಇಲ್ಲಿಂದ ವಿದ್ಯಾರ್ಥಿಗಳನ್ನು ನೆಮ್ಮದಿ ಕೇಂದ್ರಗಳಿಗೆ ಕಳುಹಿಸಿದರೆ ಅಂತಹವರನ್ನು ಅಮಾನತ್ತಿನಲ್ಲಿ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ನೆಮ್ಮದಿಕೇಂದ್ರಗಳಲ್ಲಿ ಆಗುತ್ತಿರುವ ಗೊಂದಲಗಳನ್ನು ತಡೆಯಲು ಹಲವು ಬಾರಿ ಈ ಸಂಬಂಧ ಸ್ಪಷ್ಟನೆ ನೀಡಿದರೂ ಮತ್ತೆ ಮತ್ತೆ ವಿದ್ಯಾರ್ಥಿಗಳು ನೆಮ್ಮದಿ ಕೇಂದ್ರಕ್ಕೆ ಅಲೆಯುತ್ತಿದ್ದಾರೆ; ಇದನ್ನು ತಪ್ಪಿಸಲು ಕಠಿಣ ಕ್ರಮದ ಅಗತ್ಯವನ್ನು ಅವರು ಒತ್ತಿಹೇಳಿದರು.
ಮುಂದಿನ ಒಂದು ತಿಂಗಳೊಳಗಾಗಿ ಆರ್ ಟಿ ಸಿ ಮಾದರಿಯಲ್ಲಿ ಜಾತಿ ಮತ್ತು ಆದಾಯ ಸರ್ಟಿಫಿಕೇಟ್ ಸಿಗುವ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿದ ಅವರು, ಮುಂದಿನ 5 ವರ್ಷ ಇದೇ ಕೌಂಟರ್ ಮೂಲಕ ವಿದ್ಯಾರ್ಥಿಗಳು ಸರ್ಟಿಫಿಕೇಟ್ ಪಡೆಯುವ ವ್ಯವಸ್ಥೆ ಚಾಲ್ತಿಯಲ್ಲಿರುತ್ತದೆ. ಇದಕ್ಕಾಗಿ ಅವರು ಪ್ರತಿ ವರ್ಷ ವಿ ಎ ಬಳಿ ಹೋಗುವ ಅಗತ್ಯವಿಲ್ಲ ಎಂದರು.
ಭೂಮಿ ಮತ್ತು ನೆಮ್ಮದಿ ಕೇಂದ್ರಗಳಲ್ಲಿ ಜನರು ಕುಳಿತುಕೊಳ್ಳಲು ಅನುಕೂಲವಾಗುವಂತಹ ವಿನೂತನ ವ್ಯವಸ್ಥೆಯನ್ನು ಮಂಗಳೂರು ತಾಲೂಕು ಕಚೇರಿಯಲ್ಲಿ ಆರಂಭಿಸಲಾಗುವುದು ಎಂದ ಅವರು, ಇಲ್ಲಿ ಯೋಜನೆ ಯಶಸ್ವಿಯಾದರೆ ಉಳಿದ ತಾಲೂಕುಗಳಿಗೂ ವಿಸ್ತರಿಸಲಾಗುವುದು ಎಂದರು.
ಬಿ. ಸಿ. ರೋಡ್ ಎನ್ ಎಚ್ 48 ಪೊಳಲಿ ಕ್ರಾಸ್ ವರೆಗೆ ವಾಹನ ಸಂಚಾರ ಬಂದ್: ಈ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುವಾಗುವಂತೆ ಎಲ್ಲಾ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿಗೆ ಈ ಮೂಲಕ ಹೋಗುವ ವಾಹನಗಳು ತೊಕ್ಕೊಟ್ಟು, ಕೊಣಾಜೆ, ಮೆಲ್ಕಾರ್ ಮೂಲಕ ಹೋಗಲಿದ್ದು, ಈ ರಸ್ತೆಗಳ ಅಗತ್ಯ ವಸ್ತು ಹೇರಿಕೊಂಡು ಹೋಗುವ ಲಾರಿಗಳ ಸಂಚಾರಕ್ಕೆ ಮಾತ್ರ ಅವಕಾಶವಿದ್ದು, ಎಲ್ ಪಿ ಜಿ ಟ್ಯಾಂಕರು ಗಳು ಮುಲ್ಕಿ, ಮೂಡಬಿದ್ರೆ ಮೂಲಕ, ಉಳಿದ ಲಾರಿಗಳು ಎನ್ ಎಚ್ 17 ಮೂಲಕ ಹೋಗಲು ಅವಕಾಶವಿದೆ. ಈ ಆದೇಶ ಜೂನ್ 30ರಿಂದ ಜುಲೈ 27ರವರೆಗೆ ಜಾರಿಯಲ್ಲಿರುತ್ತದೆ.
ನಗರದ ಕದ್ರಿ ಉದ್ಯಾನ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲಾಗಿದ್ದು, ಇಲ್ಲಿನ ಸಸ್ಯ ಸಂಪತ್ತನ್ನು ರಕ್ಷಿಸಿ ಅದನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಕ್ರಮಕೈಗೊಂಡಿರುವುದಾಗಿ ಹೇಳಿದರು.
ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಂಪೂರ್ಣ ಗಣಕೀಕರಣ:
ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಕಡತ ವಿಲೇವಾರಿಯನ್ನು ಗಣಕೀಕೃತಗೊಳಿಸಲು ನಾಲ್ಕು ಹಂತಗಳನ್ನು ರೂಪಿಸಲಾಗಿದ್ದು, ಮುಂದಿನ 20 ದಿನಗಳೊಳಗೆ ಪ್ರಥಮ ಹಂತದಲ್ಲಿ ಕಚೇರಿಯ ಕಡತಗಳನ್ನು ಇಂಟರ್ ನೆಟ್ ನಲ್ಲಿ ವೀಕ್ಷಿಸಬಹುದು ಎಂದರು. ಈ ಸಂಬಂಧ ಸಿಬ್ಬಂದಿಗಳಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದ್ದು, ನಮ್ಮ 203 ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 3 ಗ್ರಾ. ಪಂಗಳಲ್ಲಿ ಬ್ರಾಡ್ ಬ್ಯಾಂಡ್ ಸೌಲಭ್ಯವಿಲ್ಲ ಇದನ್ನು ಒದಗಿಸಿ ಎಲ್ಲಾ ಮಾಹಿತಿಗಳು ಜನರಿಗೆ ಸುಲಭವಾಗಿ ಮತ್ತು ನೇರವಾಗಿ ದೊರಕುವಂತೆ ಮಾಡಲಾಗುವುದು ಎಂದರು.

ಜಿಲ್ಲೆಯ ಕಾನೂನು ಸುವ್ಯವಸ್ಥೆ ಉತ್ತಮ: ಡಾ. ಎಸ್ ಆರ್ ನಾಯಕ್ಮಂಗಳೂರು, ಜೂ.25: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಜಿಲ್ಲೆಯ ಪೊಲೀಸರು ಮಾನವ ಹಕ್ಕುಗಳ ಬಗ್ಗೆ ಜಾಗೃತರಾಗಿದ್ದಾರೆ ಎಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಎಸ್ .ಆರ್. ನಾಯಕ್ ಅವರು ಹೇಳಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಕರ್ತವ್ಯಪರತೆಯನ್ನು ಶ್ಲಾಘಿಸಿದರಲ್ಲದೆ, ಇದಕ್ಕೆ ಪೂರಕವಾಗಿ ಆಡಳಿತಾತ್ಮಕ ಸಹಕಾರ ನೀಡುತ್ತಿರುವ ಅಧಿಕಾರಿಗಳ ಬಗ್ಗೆಯೂ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ನಮ್ಮ ಜಾತ್ಯಾತೀತ ವ್ಯವಸ್ಥೆಯಲ್ಲಿ ಸಂವಿಧಾನಕ್ಕೆ ನೀಡುವಷ್ಟೇ ಗೌರವವನ್ನು ಮಾನವ ಹಕ್ಕುಗಳಿಗೂ ನೀಡಬೇಕಿದ್ದು, ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ಪ್ರತಿಯೊಬ್ಬ ಅಧಿಕಾರಿಯೂ ತಿಳಿದಿರಬೇಕಾದ ಅಗತ್ಯವನ್ನು ಒತ್ತಿಹೇಳಿದರು. ಜನಪರ ಯೋಜನೆಗಳ ಫಲಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದು ನುಡಿದ ಅವರು, ಪ್ರಜೆಗಳ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ಬಾರದಂತೆ ನಡೆದು ನೆರವಾದರೆ ಎಲ್ಲರಿಗೂ ಕ್ಷೇಮ ಎಂದು ಹೇಳಿದರು.

ವಿಧವಾ ವೇತನ, ಮಾಸಾಶನದಂತಹ ಸೌಲಭ್ಯ ವಿತರಣೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕರ್ತವ್ಯ ನಿಷ್ಠೆ ಮೆರೆಯಲು ಸಲಹೆ ಮಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಇತರ ಜಿಲ್ಲೆಗಳಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Wednesday, June 24, 2009

ಸ್ವಚ್ಛ ಪರಿಸರದಿಂದ ಆರೋಗ್ಯವಂತ ಸಮಾಜಮಂಗಳೂರು, ಜೂ.24: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಪರಿಸರ ಕಲುಷಿತಗೊಳ್ಳುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಹೇಳಿದರು.

ಜೂ. 24ರಂದು ಪುತ್ತೂರಿನ ನೆಲ್ಯಾಡಿ ದ.ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ತಾ ಇಲಾಖೆ ಹಮ್ಮಿಕೊಂಡಿದ್ದ ಪರಿಸರ ಮತ್ತು ನಮ್ಮ ಆರೋಗ್ಯ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಪರಸ್ಪರ ಸಹಕಾರ ಮತ್ತು ಕೂಡಿಬಾಳುವುದಕ್ಕೆ ಹೆಚ್ಚಿನ ಮಹತ್ವವಿದ್ದು, ಆರೋಗ್ಯದ ವಿಷಯದಲ್ಲೂ ಸಾಮಾಜಿಕ ಹೊಣೆಯರಿತು ವರ್ತಿಸಬೇಕು ಎಂದು ಸಲಹೆ ಮಾಡಿದರು. ಆರೋಗ್ಯ ರಕ್ಷಾ ಕವಚ ಮತ್ತು ಆರೋಗ್ಯ ಇಲಾಖೆ ಸವಲತ್ತುಗಳನ್ನು ಬಳಸಿಕೊಳ್ಳಲು ಸಲಹೆ ಮಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಗ್ರಾ. ಪಂ. ಅಧ್ಯಕ್ಷರಾದ ಲಿಝಿ ಅಬ್ರಾಹಂ ಅವರು, ಸ್ವಚ್ಛ ಪರಿಸರದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿ ಸತ್ಯವಾಗಿದ್ದು, ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತಿಲ್ಲ; ಈ ಬಗ್ಗೆ ಪ್ರತಿಯೊಬ್ಬರು ಅರಿತು, ಅನುಷ್ಠಾನಕ್ಕೆ ತರಬೇಕು ಎಂದರು.

ನೆಲ್ಯಾಡಿ ಪ್ರಾ. ಆ. ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣಾನಂದ ಅವರು ಮಾತನಾಡಿ, ಪರಿಸರ ಮತ್ತು ಆರೋಗ್ಯ ಒಂದು ನಾಣ್ಯದ ಎರಡು ಮುಖಗಳು; ನೀರಿನಿಂದ ಮತ್ತು ಕಲುಷಿತ ಪರಿಸರದಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ವಿಫುಲ ಮಾಹಿತಿಯನ್ನು ಅವರು ನೀಡಿದರು. ಪ್ರಸಕ್ತ ಸನ್ನಿವೇಶಲದಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಇಲಾಖೆಕೈಗೊಂಡಿರುವ ಕ್ರಮಗಳನ್ನೂ ಅವರು ವಿವರಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯ ಸರ್ವೋತ್ತಮಗೌಡ, ಗ್ರಾ.ಪಂ. ಸದಸ್ಯ ಇಸ್ಮಾಯಿಲ್ ಎನ್, ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಮಾತನಾಡಿದರು. ಸಭಾ ಕಾರ್ಯಕ್ರಮದ ಬಳಿಕ ವಾರ್ತಾ ಇಲಾಖೆ ವತಿಯಿಂದ ಪರಿಸರ ಮತ್ತು ಆರೋಗ್ಯದ ಬಗ್ಗೆ ನಾಟಕ ಹಾಗೂ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ಕರಕುಶಲ ಮೇಳಮಂಗಳೂರು ಜೂನ್ 24 : ಈಶಾನ್ಯ ರಾಜ್ಯಗಳ ಕರಕುಶಲ ಕಲೆಯನ್ನು ರಾಜ್ಯದ ಕರಾವಳಿ ಪ್ರದೇಶ ಮಂಗಳೂರಿಗೆ ಪರಿಚಯಿಸುವ ನಿಟ್ಟಿನಲ್ಲಿ ನಗರದಲ್ಲಿ ಕರಕುಶಲ ಮೇಳ ಇಂದಿನಿಂದ ಆರಂಭಗೊಂಡಿದೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಈ ಮೇಳವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿದರು. ಈಶಾನ್ಯ ರಾಜ್ಯಗಳ ಕರಕುಶಲ ಮತ್ತು ಕೈ ಮಗ್ಗ ಅಭಿವ್ರದ್ದಿ ನಿಗಮದ ಪ್ರಧಾನ ವ್ಯವಸ್ಥಾಪಕ ಡಿ.ಸಿ. ಬೋರ್ಕೊಟೊಕಿ ಮತ್ತಿರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜೂನ್ 24 ರಿಂದ ಜುಲೈ 12 ವರೆಗೆ ನಗರದ ಹೊಟೇಲ್ ವುಡ್ ಲ್ಯಾಂಡ್ಸ್ ನಲ್ಲಿ ಈ ಮೇಳ ನಡೆಯಲಿದೆ.

ಸಮುದಾಯದ ಸಹಭಾಗಿತ್ವದಿಂದ ಯೋಜನೆಗಳ ಸಾಫಲ್ಯ

ಮಂಗಳೂರು, ಜೂ. 24: ಸರ್ಕಾರದ ಯೋಜನೆಗಳು ಸಫಲವಾಗಬೇಕಾದರೆ ಸಮುದಾಯದ ಸಹಭಾಗಿತ್ವ ಅಗತ್ಯ. ಯೋಜನೆಗಳನ್ನು ಗ್ರಾಮ ಮಟ್ಟದಿಂದ ಅನುಷ್ಠಾನಕ್ಕೆ ತಂದರೆ ಮಾತ್ರ ಸಾಧನೆ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ವೆಂಕಟ್ ದಂಬೇಕೋಡಿ ಅವರು ಹೇಳಿದರು.
ಅವರು 23ರಂದು ಪುತ್ತೂರಿನ ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ಸಭಾಭವನಲದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಲಾದ ಸಮುದಾಯ ಆರೋಗ್ಯ ದಿನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇತರ ಇಲಾಖೆಗಳಿಗಿಂತ ಭಿನ್ನವಾಗಿ ಹೆಚ್ಚಿನ ಸೇವಾ ಮನೋಭಾವದಿಂದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ಮಾಡಿದ ಅವರು, ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಸಿಬ್ಬಂದಿಗಳು ಹೊಣೆಯರಿತು ಕಾರ್ಯನಿರ್ವಹಿಸಬೇಕು ಎಂದರು. ಮಾಹಿತಿಗಳನ್ನು ವಿಫುಲವಾಗಿ ನೀಡುವ ಮುಖಾಂತರ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯವೆಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಹೀರಾ ಬಿ. ಆರ್ ಅವರು ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಜಾರಿಯಾದ ಬಳಿಕೆ ಇಲಾಖೆಯಿಂದ ಜನರಿಗೆ ಸಾಕಷ್ಟು ಸವಲತ್ತುಗಳು ಲಭ್ಯವಾಗಿದ್ದು, ಇದರ ಸದ್ಬಳಕೆಯಾಗಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀ ಕುಮಾರನಾಥ ರೈ ಅವರು ಮಾತನಾಡಿ, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು. ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು. ಜಿ. ಪಂ ಸದಸ್ಯರಾದ ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ಗ್ರಾ. ಪಂ. ಉಪಾಧ್ಯಕ್ಷರಾದ ಶ್ರೀಮತಿ ಸುಶೀಲ, ಶ್ರೀ ಸಂಜೀವ ರೈ ಪೇರಾಲು, ಶ್ರೀ ಕೃಷ್ಣ ಭಟ್, ಶ್ರೀ ಮಹಮ್ಮದ್ ಬಡಗನ್ನೂರು ಸೇರಿದಂತೆ ಇಲಾಖೆಯ ವಿವಿಧ ವಿಷಯಗಳಲ್ಲಿ ಪರಿಣತ ವೈದ್ಯರು ಸಭೆಯಲ್ಲಿ ಹೇರಳ ಮಾಹಿತಿಯನ್ನು ನೀಡಿದರು. ಇದಕ್ಕೆ ಸಂಬಂಧಿಸಿದಂತೆ ವಸ್ತುಪ್ರದರ್ಶನವೂ ಏರ್ಪಾಡಾಗಿತ್ತು. ಈಶ್ವರಮಂಗಲದ ಜನಪ್ರಿಯ ವೈದ್ಯಾಧಿಕಾರಿ ಡಾ. ಗೋಪಾಲಕೃಷ್ಣ ನಾಯಕ್ ಅವರು ವರದಿವಾಚನ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ ಸ್ವಾಗತಿಸಿದರು. ಈಶ್ವರಮಂಗಲದ ಆರೋಗ್ಯ ಸಹಾಯಕರಾದ ಶ್ರೀಮತಿ ಉಮಾವತಿ ಅವರನ್ನು ಸಂಘಟಕರು ಆತ್ಮೀಯವಾಗಿ ಸನ್ಮಾನಿಸಿದರು. ಜಯರಾಂ ಸುವರ್ಣ ವಂದಿಸಿದರು.

Monday, June 22, 2009

ಸಾಂಕ್ರಾಮಿಕ ರೋಗ ತಡೆಗೆ ಕ್ಷಿಪ್ರ ಕಾರ್ಯಪಡೆ

ಮಂಗಳೂರು, ಜೂ. 22: ಮಳೆಗಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದ್ದು, ರೋಗ ತಡೆ ಮತ್ತು ಮುನ್ನೆಚ್ಚರಿಕೆಗೆ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ಶಿವಶಂಕರ್ ತಿಳಿಸಿದರು.
ಈ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪರಿಸ್ಥಿತಿ ನಿಯಂತ್ರಣಕ್ಕೆ ಮತ್ತು ಜನರಲ್ಲಿ ಆತ್ಮವಿಶ್ವಾಸ ತುಂಬಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುರ್ತು ಕ್ರಮಕೈಗೊಳ್ಳಲು ಪೂರಕವಾಗಿ ಗ್ರಾಮೀಣ ಮಟ್ಟದಲ್ಲಿ 368 ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳಿಗೆ 10,000 ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 25,000 ರೂ., ಮುಕ್ತನಿಧಿ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ 50,000 ರೂ. ಮುಕ್ತ ನಿಧಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಹಣವನ್ನು ಸಮೀಕ್ಷೆಗೆ ಮತ್ತು ಅತೀ ತುರ್ತು ಸೇವೆಗೆ ಬಳಸಲು ಸೂಚಿಸಲಾಗಿದೆ. ಸಾಂಕ್ರಾಮಿಕ ರೋಗ ತಡೆಗೆ ಪೀಡಿತ ಪ್ರದೇಶಗಳೆಂದು ಗುರುತಿಸಲಾದ ಪ್ರತಿ ಮನೆಯೊಳಗೆ ಸ್ಪ್ರೆ ಮತ್ತು ಮನೆಯ ಹೊರಗೆ ಫಾಗಿಂಗ್ ನಡೆಸಲು ಸೂಚಿಸಲಾಗಿದೆ. ಮನಾಪ ವ್ಯಾಪ್ತಿಯಲ್ಲಿ 50 ತಂಡ ಗಳನ್ನು ರಚಿಸಲಾಗಿದ್ದು, ಸಾಂಕ್ರಾಮಿಕ ರೋಗ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

Saturday, June 20, 2009

ನುಸಿರೋಗ ತಡೆಗೆ ತಾಲೂಕಿಗೊಂದು ಪೈಲಟ್ ಪ್ರಾಜೆಕ್ಟ್

ಮಂಗಳೂರು, ಜೂ. 20: ತೆಂಗು ಬೆಳೆಯನ್ನು ಕಾಡುತ್ತಿರುವ ನುಸಿರೋಗ ನಿಯಂತ್ರಣಕ್ಕೆ ತಾಲೂಕಿಗೊಂದರಂತೆ ಪೈಲೆಟ್ ಪ್ರಾಜೆಕ್ಟ್ ರೂಪಿಸಲಾಗುವುದು ಎಂದು ತೋಟಗಾರಿಕೆ ಮತ್ತು ಬಂಧೀಖಾನೆ ಸಚಿವ ಶ್ರೀ ಉಮೇಶ್ ವಿ. ಕತ್ತಿ ಹೇಳಿದರು.ಇಂದು ತೋಟಗಾರಿಕೆ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಇಲಾಖೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರು ಮತ್ತು ಅಧಿಕಾರಿಗಳ ಸಹಭಾಗಿತ್ವದಲ್ಲಿ ನುಸಿರೋಗ ತಡೆಗೆ ಪೈಲೆಟ್ ಪ್ರಾಜೆಕ್ಟ್ ರೂಪಿಸಲಾಗಿದ್ದು, ಇದಕ್ಕೆ ನೂರು ಶೇಕಡಾ ಆರ್ಥಿಕ ನೆರವನ್ನು ನೀಡುವ ಭರವಸೆ ನೀಡಿದರು.ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆಯನ್ನು ಕಾಪಾಡಿ ರೈತರ ಹಿತ ರಕ್ಷಿಸಲು ಅಡಿಕೆ ಬೆಳೆಗೆ 70ರಿಂದ 75 ರೂಪಾಯಿಗಳ ಬೆಂಬಲ ಬೆಲೆ ನೀಡಲಾಗುವುದು ಎಂದ ಸಚಿವರು, ರೈತರ ಹಿತರಕ್ಷಣೆ ಸರ್ಕಾರದ ಆದ್ಯತೆ ಎಂದು ಸ್ಪಷ್ಟ ಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆ ತೋಟಗಾರಿಕೆ ಪ್ರಧಾನ ಜಿಲ್ಲೆಯಾಗಿದ್ದು, 98339 ಹೆಕ್ಟೇರ್ ಗಳಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ರೈತ ಫಲಾನುಭವಿಗಳಿಗೆ 5.15 ಲಕ್ಷ ರೂ. ಸಹಾಯಧನವನ್ನು 3387 ಫಲಾನುಭವಿಗಳಿಗೆ ಒದಗಿಸಲಾಗಿದೆ.ಸಮಗ್ರ ಕೀಟ ರೋಗ ನಿಯಂತ್ರಣ ಯೋಜನೆಯಡಿ ರೂ. 0.92 ಲಕ್ಷ ಗೋನಿಯೋಜನಸ ಪರೋಪಜೀವಿಗಳನ್ನು ಉತ್ಪಾದಿಸಿ ಕಪ್ಪು ತಲೆ ಹುಳ ಬಾಧಿತ ತೋಟಗಳಿಗೆ ಬಿಡುಗಡೆ ಮಾಡಲಾಗಿದೆ. 6 ಲಕ್ಷ ರೂ.ಗಳನ್ನು ಅಡಿಕೆ ಕೊಳೆ ರೋಗ ನಿಯಂತ್ರಣ ಹಾಗೂ ಬೇರು ಹುಳ ನಿಯಂತ್ರಣಕ್ಕೆ ಸಹಾಯಧನ ನೀಡಲಾಗಿದೆ.
ಅಡಿಕೆ ಸಂಶೋಧನೆ ಅಭಿವೃದ್ಧಿಗೆ ರೂ. 1 ಕೋಟಿ ಅನುದಾನ ಒದಗಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯುಡಿ ರೈತರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

Thursday, June 18, 2009

ಜಿಲ್ಲಾ ಪಂಚಾಯತ್ ವಿಶೇಷ ಸಾಮನ್ಯ ಸಭೆ

ಮಂಗಳೂರು ಜೂನ್ 18 : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ವಿಶೇಷ ಸಮಾನ್ಯ ಸಭೆ ಇಂದು ನಡೆಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ವೆಂಕಟ್ ದಂಬೆಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವರಿ ಸಚಿವ ಕೃಷ್ಣ ಜೆ.ಪಾಲೇಮಾರ್, ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಸಂಸದ ನಳಿನ್ ಕುಮಾರ್ ಕಟೀಲ್ ಪಾಲ್ಗೊಂಡಿದ್ದರು.

ವೃಕ್ಷಾರೋಪಣ ಅಭಿಯಾನ

ಮಂಗಳೂರು ಜೂನ್ 18: ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ ಆಯೋಜಿಸಿದ್ದ ವೃಕ್ಷಾರೋಪಣ ಅಭಿಯಾನಕ್ಕೆ ಮಂಗಳೂರಿನಲ್ಲಿ ಜಿಲ್ಲಾ ಉಸ್ತುವರಿ ಹಾಗೂ ರಾಜ್ಯ ಪರಿಸರ, ಬಂದರು, ಒಳನಾಡು ಜಲ ಸಾರಿಗೆ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ವೃಕ್ಷಾರೋಪಣ ಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ಲಕ್ಷ ಗಿಡಗಳನ್ನು ನೆಡಲು ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದ್ದು, ಈ ಅಭಿಯಾನ ಯಶಸ್ವಿಯಾಗಲು ಮಠಗಳು, ಶಿಕ್ಷಣ - ಸಂಘಸಂಸ್ಥೆಗಳು ಮುಂದೆ ಬರಬೇಕೆಂದು ಮನವಿ ಮಾಡಿದರು. ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ಶಂಕರ್ ಭಟ್, ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಎಸ್. ಶಾಂತಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ರವಿರಾಜ್, ಮಂಗಳೂರು ಸಹಾಯಕ ಆಯುಕ್ತ ಪ್ರಭುಲಿಂಗ ಕಾವಲಿಕಟ್ಟೆ, ಕಾರ್ಪೋರೇಟರ್ ಹರಿನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Saturday, June 13, 2009

ಎಚ್1 ಎನ್ 1 ಸೋಂಕಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ಮಂಗಳೂರು, ಜೂ.13: ಇಲ್ಲಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ 9.6.09ರಂದು ದಾಖಲಾಗಿದ್ದ ಶಂಕಿತ ಎಚ್ 1 ಎನ್ 1 ವ್ಯಕ್ತಿಯ ಪರೀಕ್ಷಾ ಫಲಿತಾಂಶ ವರದಿ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆ ನವದೆಹಲಿಯಿಂದ ಬಂದಿದ್ದು, ಆತನಿಗೆ ಎಚ್ 1 ಎನ್ 1 ಸೋಂಕು ಇಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Friday, June 12, 2009

ವಿಕಾಸ ಸಂಕಲ್ಪ ಪ್ರಯುಕ್ತ ಏರ್ಪಡಿಸಲಾದ ವಸ್ತು ಪ್ರದರ್ಶನ ಮಳಿಗೆಯನ್ನು ಮುಖ್ಯಮಂತ್ರಿ ವೀಕ್ಷಿಸಿದರು.


ನೆಮ್ಮದಿ ಕೇಂದ್ರಗಳ ಸಮಸ್ಯೆ ಶೀಘ್ರ ಪರಿಹರಿಸಿ: ಮುಖ್ಯಮಂತ್ರಿ

ಮಂಗಳೂರು, ಜೂ. 12: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನೆಮ್ಮದಿ ಕೇಂದ್ರಗಳಿಂದ ಜನರಿಗೆ ಹಲವು ತೊಂದರೆಗಳಾಗುತ್ತಿದ್ದು, ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ರಾಜ್ಯದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಶೀಘ್ರವೇ ಪರಿಹಾರ ರೂಪಿಸಿ; ನಮ್ಮ ಸರ್ಕಾರದ ಅವಧಿಯಲ್ಲಿ ಜನರಿಗೆ ತೊಂದರೆಯಾಗುವಂತಹ ಅವ್ಯವಸ್ಥೆಗೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದರು.
ಇಂದು ದ. ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಈ ಸಂಬಂಧ ಅಗತ್ಯ ನಿರ್ದೇಶನಗಳನ್ನು ನಾನೇ ಖುದ್ದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೀಡುವುದಾಗಿ ಹೇಳಿದ ಮುಖ್ಯಮಂತ್ರಿಗಳು, ಸಾರ್ವಜನಿಕರ ಅನುಕೂಲವೇ ನಮ್ಮ ಪರಮ ಧ್ಯೇಯ; ಅದಕ್ಕೆ ಪೂರಕವಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಿದರು.
ನಕ್ಸಲ್ ಸಮಸ್ಯೆಯನ್ನು ನಿಭಾಯಿಸಿರುವ ನೀತಿಯನ್ನು ಶ್ಲಾಘಿಸಿದ ಅವರು ಈ ನಿಟ್ಟಿನಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬೇಕು; ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ವಾರಕ್ಕೊಂದು ಬಾರಿಯಾದರೂ ನಕ್ಸಲ್ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಜನರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು ಎಂದ ಅವರು, ಈ ಬಗ್ಗೆ ನನಗೆ ವರದಿಯನ್ನೂ ಸಕಾಲದಲ್ಲಿ ಸಲ್ಲಿಸಬೇಕು ಎಂದರು. ಶಿರಾಡಿ ಘಾಟ್ ರಸ್ತೆ, ಅಂಕೋಲಾ -ಯಲ್ಲಾಪುರ-ಕಾರವಾರ ರಸ್ತೆಗಳ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಲಾರಿಗಳ ನಿಯಂತ್ರಣದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿಯಲ್ಲಿ ಕೃಷಿ ಭೂಮಿ ಪರಿವರ್ತನೆ, ಪಹಣಿ ಸಂಬಂಧಿ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಇಂತಹ ಸಮಸ್ಯೆಗಳಿಗೆ ಶೀರ್ಘ ಪರಿಹಾರಕ್ಕೆ ಮುಖ್ಯ ಕಾರ್ಯ ದರ್ಶಿಗಳು, ಮತ್ತು ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು. ಪ್ರತೀ ಶನಿವಾರಗಳಂದು ಹೋಬಳಿ ಮಟ್ಟದಲ್ಲಿ ನಡೆಯುವ ಜನಸ್ಪಂದನ ಕೇವಲ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯಕ್ರಮವಾಗದೆ ಇನ್ನಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಗಳನ್ನು ರೂಪಿಸುವ ಸಭೆಗಳಾಗಬೇಕು ಎಂದು ಅವರು ನುಡಿದರು.
ಕರಾವಳಿಯ ಕಡಲ್ಕೊರೆತಕ್ಕೆ ಸಂಬಂಧಿಸಿದ ಮತ್ತು ಬಿ. ಸಿ. ರೋಡ್ ಎನ್.ಎಚ್ - 48 ರಾಷ್ಟ್ರೀಯ ಹೆದ್ದಾರಿಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಮೂರು ಜಿಲ್ಲೆಯ ಅಧಿಕಾರಿಗಳು ಸೇರಿದಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ಭರತ್ ಲಾಲ್ ಮೀನಾ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ಲಕ್ಷ್ಮೀ ನಾರಾಯಣ್, ಕಾನೂನು ಸಲಹೆಗಾರ ಶ್ರೀ ದಿವಾಕರ್, ಐಜಿಪಿ ಶ್ರೀ ಗೋಪಾಲ್ ಹೊಸೂರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್, ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಜಯಂತಿ ಪಾಲ್ಗೊಂಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೃಷ್ಣ ಜೆ. ಪಾಲೆಮಾರ್,ಗೃಹ ಸಚಿವ ಶ್ರೀ ಡಾ. ವಿ. ಎಸ್. ಆಚಾರ್ಯ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕ ಶ್ರೀ ಯೋಗೀಶ್ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಆಡಳಿತ ಯಂತ್ರ ಚುರುಕಿಗೆ ಅನಿರೀಕ್ಷಿತ ಭೇಟಿಮಂಗಳೂರು, ಜೂ. 12: ಜನರ ಬಹಳಷ್ಟು ನಿರೀಕ್ಷೆಗಳೊಂದಿಗೆ ನಮ್ಮನ್ನು ಆರಿಸಿದ್ದು, ಅವರ ನಿರೀಕ್ಷೆಗಳಿಗೆ ಅನುಗುಣವಾಗಿ ಕೆಲಸ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು
ಹೇಳಿದರು.
ಇಂದು ನಗರದ ಟಿ ಎಂ ಎ ಪೈ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಿದ್ದ ವಿಕಾಸಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸವಲತ್ತುಗಳ ವಿತರಣೆಯಲ್ಲಿ, ಫಲಾನುಭವಿಗಳನ್ನು ಗುರುತಿಸುವಲ್ಲಿ, ಪ್ರತಿಯೊಬ್ಬರ ಹಿತವನ್ನು ಗಮನದಲ್ಲಿರಿಸಿ ಯೋಜನೆಗಳನ್ನು ರೂಪಿಸುವುದರಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದ್ದು, ಕಾರ್ಯದ ವೇಗವವನ್ನು ತ್ವರಿತ ಗೊಳಿಸಲು ಹೋಬಳಿ ಮಟ್ಟಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಹೇಳಿದರು.
ಆಡಳಿತದಲ್ಲಿ, ಯೋಜನೆಗಳ ಅನುಷ್ಠಾನದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ಮಾಡಲಾಗಿದ್ದು, ಮಂಗಳೂರು ನಗರದ ಅಭಿವೃದ್ಧಿಗೆ 100 ಕೋಟಿ ರೂ.ಗಳನ್ನು ನೀಡಲಾಗಿದೆ. ರೈತ ಕಲ್ಯಾಣ, ಸಾಮಾಜಿಕ ನ್ಯಾಯ ಮತ್ತು ಸ್ತ್ರೀ ಸಬಲೀಕರಣಕ್ಕೆ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕು ರೂಪಿಸಲು, ಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದು ಕೋಟಿ 20 ಲಕ್ಷ ಜನರಿಗೆ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ವಿತರಿಸಲಾಗಿದೆ. 28 ಲಕ್ಷ ಜನಕ್ಕೆ ಪಡಿತರ ಚೀಟಿ ವಿತರಿಸಲಾಗಿದೆ. ರಾಜ್ಯ ವಿದ್ಯುತ್ ಬರದಿಂದ ಮುಕ್ತವಾಗಲು ಮತ್ತು ಬೇರೆ ರಾಜ್ಯಗಳಿಗೆ ವಿದ್ಯುತ್ ನೀಡಲು ಸಬಲವಾಗುವಷ್ಟು ಇಂಧನ ಸಂಬಂಧಿ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಸಭೆಯನ್ನು ಉದ್ದೇಶಿಸಿ ಗೃಹ ಸಚಿವ ಶ್ರೀ ವಿ. ಎಸ್. ಆಚಾರ್ಯ, ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಜೆ. ಕೃಷ್ಣ ಪಾಲೇಮಾರ್, ವಿಧಾನ ಸಭೆಯ ಮುಖ್ಯ ಸಚೇತಕ ಶ್ರೀ ಡಿ. ಎನ್. ದೇವರಾಜ್, ಉಡುಪಿ- ಚಿಕ್ಕಮಗಳೂರು ಸಂಸದ ಡಿ.ವಿ. ಸದಾನಂದ ಗೌಡ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ , ದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಗಳಾಗಿರುವ ಶ್ರೀ ವಿ. ಧನಂಜಯ ಕುಮಾರ್, ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್, ಮಂಗಳೂರು ಮಹಾಪೌರ ಶ್ರೀ ಎಂ. ಶಂಕರ್ ಭಟ್ , ರಾಜ್ಯ ಮುಖ್ಯ ಕಾರ್ಯದರ್ಶಿ ಶ್ರೀ ಸುಧಾಕರ ರಾವ್ ಮಾತನಾಡಿದರು. ದ. ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ವೆಂಕಟ್ ದಂಬೆಕೋಡಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಶ್ರೀ ಎನ್. ಯೋಗೀಶ್ ಭಟ್ ವಹಿಸಿದ್ದರು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಎಂ. ವಿ. ಜಯಂತಿ, ದ. ಕ. ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್, ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಪಿ. ಹೇಮಲತಾ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಶ್ರೀ ಆರ್. ನಾರಾಯಣ ಸ್ವಾಮಿ ಸೇರಿದಂತೆ ಮೂರು ಜಿಲ್ಲೆಯ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.
ಮಂಗಳೂರು, ಜೂ.12: ಮಂಗಳೂರಿನ ಟಿ ಎಂ ಎ ಪೈ ಕನ್ವೆನ್ಷನ್ ಹಾಲ್ ನಲ್ಲಿ ವಿಕಾಸ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ.

Monday, June 8, 2009

ಪ್ರಾರ್ಥನ ಮಂದಿರಗಳ ಮೇಲೆ ದಾಳಿ: ಆಯೋಗದಿಂದ ವಿಚಾರಣೆ

ಮಂಗಳೂರು, ಜೂ. 8: ಸೆಪ್ಟೆಂಬರ್ 2008ರಲ್ಲಿ ದಕ್ಷಿಣ ಕನ್ನಡ ಮತ್ತು ಇತರ ಜಿಲ್ಲೆಗಳಲ್ಲಿ ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿಯ ಕುರಿತ ವಿಚಾರಣೆಗೆ ನೇಮಿಸಲಾದ ನ್ಯಾಯಮೂರ್ತಿ ಬಿ. ಕೆ. ಸೋಮಶೇಖರ್ ಅವರ ವಿಚಾರಣಾ ಆಯೋಗದ ಕಾನೂನು ಸಲಹೆಗಾರರಾದ ಶ್ರೀಮತಿ ಹೇಮಲತಾ ಮಹಿಷಿ ಅವರು ಇಂದು ಮಂಗಳೂರಿನ ಪ್ರವಾಸಿ ಮಂದಿರದಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಿದರು.
ಈ ಸಂಬಂಧ ಇದುವರೆಗೆ 156 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ರಾಜ್ಯದಿಂದ 995 ದೂರುಗಳನ್ನು ಸ್ವೀಕರಿಸಲಾಗಿದೆ. ಹೈದರಾಬಾದ್ ನಿಂದ ಒಂದು ದೂರನ್ನು ಸ್ವೀಕರಿಸಲಾಗಿದೆ. ಸುಮಾರು 25 ಸ್ಥಳಗಳಿಗೆ ಆಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಂಗಳೂರಿನಿಂದ ಒಟ್ಟು 551 ದೂರುಗಳನ್ನು ದಾಖಲಿಸಲಾಗಿದೆ. 757 ದಾಖಲೆಗಳನ್ನು ಪರಿಶೀಲಿಸಿದೆ. ಇಂದು (8.6.09) 19 ದೂರುಗಳ ವಿಚಾರಣೆ ನಡೆಯಲಿದೆ.

ಗಡಿ ಪ್ರದೇಶದ ತಾಲೂಕುಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಆದ್ಯತೆ

ಮಂಗಳೂರು, ಜೂ. 8: ರಾಜ್ಯದ ಗಡಿ ಭಾಗದಲ್ಲಿರುವ 57 ತಾಲೂಕುಗಳ ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟು ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಯತ್ನಿಸಲಾಗುವುದು ಎಂದು ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಶ್ರೀ ಚಂದ್ರಕಾಂತ್ ಗುರಪ್ಪ ಬೆಲ್ಲದ ಅವರು ಹೇಳಿದರು. ಇಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಜನರಿಗೆ ನೆರವಾಗುವಂತಹ ಕಾರ್ಯಗಳನ್ನು ಮಾಡಲಾಗುವುದು ಎಂದ ಅವರು, ಗಡಿಯಲ್ಲಿರುವ ಕನ್ನಡದ ಪ್ರತಿಭಾವಂತ ಕಲಾವಿದರಿಗೆ ಅಗತ್ಯ ನೆರವುಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.
ಕನ್ನಡ ಸಾಹಿತ್ಯ ಕನ್ನಡಿಗರಿಗೆ ತಲುಪುವಂತೆ ಮಾಡಲು, ಡಾ. ನಂಜುಂಡಪ್ಪ ವರದಿಯನ್ನು ಅನುಷ್ಠಾನಕ್ಕೆ ತರಲು ಆದ್ಯತೆ ನೀಡಲಾಗುವುದು ಎಂದ ಅವರು, ಸರ್ಕಾರ ಅಭಿವೃದ್ಧಿ ಪ್ರಾಧಿಕಾರಕ್ಕೆ 10 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು. ಗೋಷ್ಠಿಯಲ್ಲಿ ಕನ್ನಡ ಪರ ಹೋರಾಟಗಾರ ಶಿವಶಂಕರ್, ವಿಶೇಷ ಅಧಿಕಾರಿ ಸಂಗಮೇಶ ಅವರು ಉಪಸ್ಥಿತರಿದ್ದರು.

Saturday, June 6, 2009

ಮಂಗಳೂರಿನಲ್ಲಿ ವಿಕಾಸ ಸಂಕಲ್ಪಕ್ಕೆ ಪೂರ್ವಭಾವಿ ಸಭೆ


ಮಂಗಳೂರು, ಜೂ. 6: ಜೂ. 12ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿರುವ ವಿಕಾಸ ಸಂಕಲ್ಪ ಸಂಬಂಧ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳಲ್ಲಿ ವೃಕ್ಷಪ್ರೇಮ ಮೂಡಿಸಬೇಕು: ಆಶೀಸರ

ಮಂಗಳೂರು, ಜೂ. 6: ಜೀವವೈವಿಧ್ಯದ ಅಮೂಲ್ಯ ಸಂಪತ್ತು ಹೊಂದಿರುವ ಪಶ್ಚಿಮ ಘಟ್ಟ ಪ್ರದೇಶದ ಸಂರಕ್ಷಣೆಗೆ ಔಷಧಿ ಗಿಡಗಳ ಪ್ರಾಧಿಕಾರದ ಮೂಲಕ ಸಮಗ್ರ ನೀತಿ ರೂಪಿಸಲಾಗುವುದು ಎಂದು ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶ್ರೀ ಅನಂತ ಹೆಗಡೆ ಆಶೀಸರ ಹೇಳಿದರು.
ಇಂದು ಉಜಿರೆಯ ಶ್ರೀ ಧ.ಮಂ. ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಔಷಧಿ ಗಿಡಗಳ ಸಂರಕ್ಷಣೆ, ಸಂವರ್ಧನೆ ಮತ್ತು ಸಹನಶೀಲ ಬಳಕೆಯ ಕಾರ್ಯತಂತ್ರಗಳ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಅಮೂಲ್ಯವಾದ ನಿಸರ್ಗ ಸಂಪತ್ತು ಮತ್ತು ಸಂರಕ್ಷಣೆಗೆ ವಿದ್ಯಾರ್ಥಿಗಳಲ್ಲಿ ವೃಕ್ಷಪ್ರೀತಿ ಮೂಡಿಸಬೇಕು; ಅವರಲ್ಲಿ ಪ್ರಕೃತಿಯನ್ನು ಪ್ರೀತಿಸುವ ಮನೋಭಾವ ಮೂಡಿಸಬೇಕು ಎಂದರಲ್ಲದೆ, ನಾಟಿ ವೈದ್ಯರು ತಮ್ಮ ಜ್ಞಾನ ಸಂಪತ್ತನ್ನು ಯುವ ಜನತೆಗೆ ನೀಡಬೇಕು ಎಂದರು. ಪಶ್ಚಿಮ ಘಟ್ಟದಲ್ಲಿ ಸುಮಾರು 2,000 ಔಷಧಿ ಗಿಡಗಳಿದ್ದು, ಪ್ರಕೃತಿ ಸಂರಕ್ಷಣೆ ಮತ್ತು ನೈಸರ್ಗಿಕ ಜ್ಞಾನದ ಪರಂಪರೆಯ ಉಳಿವಿಗೆ ಅಗತ್ಯವಿರುವ ಕ್ರಮಗಳನ್ನು ರೂಪಿಸಲಾಗುವುದು ಎಂದ ಅವರು, ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹಾಗೂ ಇತರರು ನಡೆಸಿದ ಸಂಶೋಧನೆಗಳ ಫಲಿತಾಂಶ,ನಿರ್ಣಯ ಕ್ರೂಢೀಕರಣ ಮಾಡಿ ಅನುಷ್ಠಾನಕ್ಕೆ ತರಲು ಪಶ್ಚಿಮ ಘಟ್ಟ ಕಾವಲು ಪಡೆ ಯೋಜನೆ ರೂಪಿಸಿದ್ದು, ಗ್ರಾಮ ಮಟ್ಟದಲ್ಲಿ ಜೀವವೈವಿಧ್ಯ ದಾಖಲಾತಿ ನಡೆಯುವ ಅಗತ್ಯವನ್ನು ಪ್ರತಿಪಾದಿಸಿದರು.
ಮೂಲಿಕಾವನ ನಿರ್ಮಾಣಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು. ರಾಜ್ಯ ಔಷಧಿ ಗಿಡಗಳ ಪ್ರಾಧಿಕಾರದ ಹೆಚ್ಚುವರಿ ಕಾರ್ಯನಿರ್ವಹಣಾಧಿಕಾರಿ ಡಾ. ವೇಣುಗೋಪಾಲ್, ಡಾ.ಎಚ್. ಎಸ್. ಸ್ವಾಮಿನಾಥ್, ಡಾ. ಬಿ. ಯಶೋವರ್ಮ ಪಾಲ್ಗೊಂಡಿದ್ದರು.

Friday, June 5, 2009

ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಶಾಸಕ ಶ್ರೀ ಎನ್. ಯೋಗೀಶ್ ಭಟ್ ಅವರು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪರಿಸರ ಸ್ನೇಹಿ ಯೋಜನೆಗಳಿಂದ ಅಭಿವೃದ್ಧಿಮಂತ್ರ


ಮಂಗಳೂರು, ಜೂ. 5: ರಾಜ್ಯದ ಅಭಿವೃದ್ಧಿಗೆ ಅತ್ಯಗತ್ಯವಾಗಿರುವ ವಿದ್ಯುತ್ ಕೊರತೆ ನೀಗಿಸಲು ತದಡಿಯಂತಹ ಉಷ್ಣ ವಿದ್ಯುತ್ ಸ್ಥಾವರಗಳ ನಿರ್ಮಾಣ ಅಗತ್ಯ; ಇಂತಹ ಯೋಜನೆಗಳಿಂದ ಪರಿಸರಕ್ಕೆ ಹಾನಿ ಎಂಬ ವರದಿಗಳು ಬರುತ್ತಿದ್ದರೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲದ ಕಾರಣ ಸ್ಥಾವರ ಸ್ಥಾಪನೆ ಸಂದರ್ಭದಲ್ಲಿ ಪರಿಸರ ಸ್ನೇಹಿ ಹಾಗೂ ಮಾಲಿನ್ಯಕ್ಕೆ ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೃಷ್ಣ ಜೆ ಪಾಲೆಮಾರ್ ಹೇಳಿದರು.

ವಿಶ್ವ ಪರಿಸರ ದಿನಾಚರಣೆ -2009ರ ಅಂಗವಾಗಿ ನಗರದ ಸರ್ಕ್ಯುಟ್ ಹೌಸ್ ನಲ್ಲಿ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಪರಿಸರಕ್ಕೆ ಮಾರಕವಾಗುವ ಯಾವುದೇ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು, ಇಂದು ನಮ್ಮ ಪರಿಸರಕ್ಕೆ ಅತಿ ಹೆಚ್ಚು ಹಾನಿ ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿದ್ದು, ಈ ಬಗ್ಗೆ ಬಳಕೆದಾರರಲ್ಲಿ ಜಾಗ್ರತಿಯನ್ನು ಮೂಡಿಸುವುದು ಹಾಗೂ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಚಿಂತಿಸಲಾಗುವುದು ಎಂದು ಅವರು ನುಡಿದರು.

ಕಾರ್ಯಕ್ರಮವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅರಣ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಕುಮಾರ್, ಎಸಿಎಫ್ ರವಿರಾಜ್ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Thursday, June 4, 2009

ಸಚಿವರಿಂದ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಪರಿಶೀಲನೆ


ಮಂಗಳೂರು, ಜೂ. 4: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್ ಅವರು ಬುಧವಾರ ಜಿಲ್ಲಾ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಕುಡಿಯುವ ನೀರು ಪೂರೈಕೆ ಯೋಜನೆಗಳ ಅನುಷ್ಠಾನ ಸಂಬಂಧ ಪ್ರಗತಿ ಪರಿಶೀಲನೆ ನಡೆಸಿದರು.
ಇಂಜಿನಿಯರಿಂಗ್ ವಿಭಾಗದ ಕೆಲಸಗಳ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಈ ಸಂಬಂಧ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಜಿ. ಪಂ. ಹಂಗಾಮಿ ಅಧ್ಯಕ್ಷ ವೆಂಕಟ್ ದಂಬೇಕೋಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್, ಉಪಕಾರ್ಯದರ್ಶಿ ಪ್ರಾಣೇಶ್ ರಾವ್, ಮೌಲ್ಯ ಮಾಪನಾಧಿಕಾರಿ ನಝೀರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Wednesday, June 3, 2009

ಅಂಗನವಾಡಿ ಆಹಾರ ಪೂರೈಕೆ ತನಿಖೆಗೆ 5 ತಂಡ: ಜಿಲ್ಲಾಧಿಕಾರಿ

ಮಂಗಳೂರು, ಜೂ. 3: ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ ಕಳಪೆಯಾಗಿದೆ ಎಂಬ ದೂರಿಗೆ ತತ್ ಕ್ಷಣವೇ ಸ್ಪಂದಿಸಿರುವ ಜಿಲ್ಲಾಡಳಿತ ಈ ಸಂಬಂಧ ತನಿಖೆಗೆ 5 ತಂಡಗಳನ್ನು ರಚಿಸಿದ್ದು, ಪ್ರಾಥಮಿಕ ವರದಿ ಲಭ್ಯವಾಗಿದೆ; ಮುಂದಿನ ಹಂತದ ತನಿಖೆಯ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ನಲ್ಲಿ ಈ ಸಂಬಂಧ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಮಂಗಳೂರು ಗ್ರಾಮಾಂತರಕ್ಕೆ ಸಂಬಂಧಿಸಿದ ಅಂಗನವಾಡಿ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಲು 5 ತಂಡಗಳನ್ನು ರಚಿಸಿದ್ದು, 14 ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ತರಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಒಟ್ಟು 1,22,661 ಫಲಾನುಭವಿಗಳಿದ್ದು, ಜಿಲ್ಲೆಯಲ್ಲಿ ಒಟ್ಟು 144 ಮಕ್ಕಳು ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡು ಇಂತಹ ಮಕ್ಕಳ ಬಗ್ಗೆ ಕಾಳಜಿ ವಹಿಸಿದೆ. ಹಾಗಾಗಿ ಜಿಲ್ಲೆಯಲ್ಲಿ ಆರೋಗ್ಯ ಪರಿಸ್ಥಿತಿ ಉತ್ತಮ ಎಂದು ಹೇಳಬಹುದಾಗಿದ್ದು, ದಾಸ್ತಾನು ಕಟ್ಟಡಗಳ ಸೋರಿಕೆಯಿಂದಲೂ ಅಕ್ಕಿ ಹಾಳಾಗಿದೆ. ಈ ಎಲ್ಲಾ ಸ್ಥಳಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ದೇಶಿ ತಳಿ ಅಭಿವೃದ್ಧಿಗೆ ಸರ್ಕಾರದಿಂದ ಸಕಲ ನೆರವು: ಕೃಷ್ಣ ಜೆ.ಪಾಲೆಮಾರ್


ಮಂಗಳೂರು, ಜೂ. 3: ಪರಿಸರ, ಪಶು ಸಂಪತ್ತಿನ ಬಗ್ಗೆ ಪ್ರೀತಿ, ಕಾಳಜಿ ನಶಿಸುತ್ತಿರುವ ದಿನಗಳಲ್ಲಿ ನಮ್ಮ ಪರಿಸರಕ್ಕೆ, ಅಭಿವೃದ್ಧಿಗೆ ಕಾರಣವಾಗುವ ದೇಶೀ ತಳಿಗಳ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಿದ್ಧ ಎಂದು ಪರಿಸರ, ಜೀವಶಾಸ್ತ್ರ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು.
ಇಂದು ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪಶು ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಸಂಚಾರಿ ಪಶು ಚಿಕಿತ್ಸಾಲಯ ವಾಹನ ಬಿಡುಗಡೆ ಮತ್ತು ವಿವಿಧ ಸವಲತ್ತುಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪಶು ಆಹಾರ ಔಷಧಿಯಲ್ಲೂ ಕಲಬೆರಕೆ, ಗುಣಮಟ್ಟ ಕುಸಿತ ಕಂಡು ಬಂದಿದ್ದು, ಇಂತಹ ಕೃತ್ಯಗಳಲ್ಲಿ ಇಲಾಖಾ ಅಧಿಕಾರಿಗಳ ಶಾಮೀಲು ಕಂಡುಬಂದರೆ ಸೂಕ್ತ ತನಿಖೆ ನಡೆಸಿ ಶಿಕ್ಷಿಸುವುದರಲ್ಲಿ ಸಂದೇಹವಿಲ್ಲ ಎಂದು ಸ್ಪಷ್ಟಪಡಿಸಿದರು.
ದಕ್ಷಿಣಕನ್ನಡ ಜಿಲ್ಲೆಗೆ ಕೊಯ್ಲಾದಲ್ಲಿ ಪಶುವೈದ್ಯಕೀಯ ಕಾಲೇಜು ಆರಂಭಿಸಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದು, ಅಗತ್ಯ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು. ಸಮಾರಂಭದಲ್ಲಿ 10 ಎಕರೆ ಜಾಗ ಹಾಗೂ 50 ದೇಶೀ ತಳಿ ಜಾನುವಾರುಗಳನ್ನು ಹೊಂದಿರುವ ಓಂ ಪ್ರಕೃತಿಧಾಮ ಸಂಸ್ಥೆ ಬಡಕಬೈಲು ಪೊಳಲಿ ಬಂಟ್ವಾಳ ಇದರ ನಿರ್ದೇಶಕರಿಗೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಕ್ಕಡ ಗೋಶಾಲೆಯ ಅಧ್ಯಕ್ಷರು , ಶ್ರೀ ಗೋಗ್ರಾಸ ಮಂಡಳಿ ಅಮೃತಧಾರಾ ಗೋಶಾಲೆ ಮುಳಿಯ, ಅಳಿಕೆ ಸತ್ಯಸಾಯಿ ವಿಹಾರ ಬಂಟ್ವಾಳ ಇವರಿಗೆ 3.34 ಲಕ್ಷ ರೂ. ನೆರವಿನ ಚೆಕ್ ಅನ್ನು ವಿತರಿಸಲಾಯಿತು. ಇವರಿಗೆ ಹ್ಯಾಂಡಿಕಾಂ, ಡಿಜಿಟಲ್ ಕ್ಯಾಮರಾಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ದ. ಕ. ಜಿ. ಪಂ. ಅಧ್ಯಕ್ಷರಾದ ಶ್ರೀ ವೆಂಕಟ್ ದಂಬೆಕೋಡಿ, ಕಾರ್ಪರೇಟರ್ ಪದ್ಮನಾಭ್, ಪಶುವೈದ್ಯಕೀಯ ಸಂಘದ ಅಧ್ಯಕ್ಷ ಶಿವಾನಂದ, ನಿವೃತ್ತ ಅಧಿಕಾರಿ ಡಾ. ರವೀಂದ್ರ ಉಪಸ್ಥಿತರಿದ್ದರು. ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ಅಶೋಕ್ ಕುಮಾರ್, ಸ್ವಾಗತಿಸಿದರು.

Tuesday, June 2, 2009

ಸಂಯೋಜನೆ, ಸಮನ್ವಯತೆಯಿಂದ ಯೋಜನೆಗಳ ಅನುಷ್ಠಾನ ಸುಲಭ: ಆಶೀಸರ

ಮಂಗಳೂರು, ಜೂ. 2: ಅರಣ್ಯ ವೈವಿಧ್ಯ, ಜೀವಸಂಕುಲ, ಪರಿಸರ ಸಂರಕ್ಷಣೆಗೆ ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರ ಮತ್ತು ಸಮನ್ವಯತೆಯಿಂದ ಕೆಲಸ ನಿರ್ವಹಿಸಿದರೆ ಕಾಯಿದೆಗಳು ಹಾಗೂ ಯೋಜನೆಗಳ ಮೂಲಭೂತ ಉದ್ದೇಶ ಈಡೇರಲು ಸಾಧ್ಯ ಎಂದು ಪಶ್ಚಿಮಘಟ್ಟ ಸಂರಕ್ಷಣ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀ ಅನಂತಹೆಗಡೆ ಆಶೀಸರ ಹೇಳಿದರು.
ಜೂನ್ 1ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅರಣ್ಯ ಮತ್ತು ಪರಿಸರಕ್ಕೆ ಸಂಬಂದಿಸಿದ ಇಲಾಖೆಗಳಾದ ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ, ಜಲಾನಯನ, ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ವ್ಯವಸ್ಥೆಯಡಿ ಬರುವ ಸಾಮಾಜಿಕ ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ಇಲಾಖೆ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಅರಣ್ಯ ಮತ್ತು ಜಲಮೂಲಗಳ ಸಂರಕ್ಷಣೆ ಸಾಧ್ಯ ಎಂದು ಅವರು ನುಡಿದರು.
ಗ್ರಾಮೀಣ ಸಂಪರ್ಕ ಯೋಜನೆಗಳು ಅತ್ಯಗತ್ಯವಾಗಿದ್ದರೂ ಕಾಡುಗಳ ನಡುವೆ ಚತುಷ್ಪತ ರಸ್ತೆಯ ಅಗತ್ಯವಿಲ್ಲ; ಯೋಜನೆಗಳು ಜನರ ಅಗತ್ಯಗಳಿಗೆ ಪೂರಕವಾಗಿರಬೇಕು ಎಂದ ಅವರು, ಇಂತಹ ಯೋಜನೆಗಳ ಜಾರಿ ಸಂದರ್ಭದಲ್ಲಿ ಇಲಾಖೆಗಳು ಪರಸ್ಪರ ಸಹಕಾರದಿಂದ ಕಾರ್ಯಕ್ರಮ ಅನುಷ್ಠಾನಗೊಳಿಸಿದರೆ ಯಾವುದೇ ಗೊಂದಲ ಅಥವಾ ವಿಳಂಬಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳಿಗೆ ವಿವರಿಸಿದರು.
ಕ್ರಿಯಾಶೀಲ ನ್ಯಾಯಾಂಗವೇ ಇಂದು ಹಲವು ಸಂದರ್ಬಗಳಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಿದ್ದು, ಇದು ನಮ್ಮ ಕಾರ್ಯವೈಖರಿಯ ಲೋಪವನ್ನು ತೋರುತ್ತದೆ. ಹೀಗಾಗದಂತೆ ಎಚ್ಚರಿಕೆ ವಹಿಸಿ ಜಿಲ್ಲಾಧಿಕಾರಿಗಳ ಸಹಕಾರದಿಂದ ಅರಣ್ಯ ನಾಶ, ಮಾಲಿನ್ಯ ನಿಯಂತ್ರಣವನ್ನು ತಡೆಯಲು ಸಾಧ್ಯ ಎಂದರು. ಜಲಾನಯನ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಿಂದ ವಾರ್ಷಿಕ ಗುರಿ ಮತ್ತು ಸಾಧನೆಯ ವಿವರವನ್ನು ಪಡೆದುಕೊಂಡ ಅವರು, ಯೋಜನೆಗಳ ಅನುಷ್ಠಾನದ ಸಂದರ್ಬದಲ್ಲಿ ಪ್ರಾದೇಶಿಕ ಪರಿಸರಕ್ಕೆ ಪೂರಕವಾಗಿ ಚಿಂತನೆ ನಡೆಸಿ ಯೋಜನೆ ಅನುಷ್ಠಾನಗೊಳಿಸುವಂತೆ ಸಲಹೆ ಮಾಡಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀವವೈವಿಧ್ಯ ಸಮಿತಿ ರಚನೆಯಾಗಿದ್ದು, ಇವುಗಳಿಗೆ ಜೀವ ತುಂಬುವ ಕೆಲಸವಾಗಬೇಕಿದೆ. ಇದಕ್ಕಾಗಿ ಸಂಬಂಧಪಟ್ಟವರಿಗೆ ತರಬೇತಿ, ದಾಖಲಾತಿ ಮತ್ತು ತಜ್ಞರಿಂದ ಮಾಹಿತಿ ಕಾರ್ಯಕ್ರಮ ರೂಪಿಸಿ, ಸಾಮಾಜಿಕ ಅರಣ್ಯ ಇಲಾಖೆ ಈ ಸಂಬಂಧ ಹೊಣೆ ಹೊರುವಂತೆ ಸೂಚಿಸಿದರು.
ಮಾಲಿನ್ಯ ನಿಯಂತ್ರಣ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಿದ್ದು, ಜಿಲ್ಲಾಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಿ ಅವರ ಮುಖಾಂತರ ಆದೇಶಗಳನ್ನು ಜಾರಿಗೊಳಿಸಬಹುದು ಎಂದು ನುಡಿದರು. ರಾಜ್ಯ ಸರ್ಕಾರ ಜನವರಿ 18ರಿಂದ ವೃಕ್ಷಾರೋಪಣ ಅಭಿಯಾನವನ್ನು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಉದ್ಘಾಟಿಸಲಿದ್ದು, ರಾಜ್ಯಾದಾದ್ಯಂತ ಈ ಅಭಿಯಾನ ಶಾಲಾ ಮಕ್ಕಳು, ಪರಿಸರ ಕ್ಲಬ್, ಸರ್ಕಾರೇತರ ಸಂಘಸಂಸ್ಥೆಗಳ ಸಹಕಾರದಿಂದ ನಡೆಯಲಿದೆ.