Monday, June 29, 2009

13 ಜಿಲ್ಲೆಗಳಲ್ಲಿ ಕಬ್ಬು ಬೆಳೆ ಅಭಿವೃದ್ಧಿಗೆ ಅಧಿಕಾರಿಗಳ ನೇಮಕ



ಮಂಗಳೂರು, ಜೂ. 29: ರಾಜ್ಯದಲ್ಲಿ ಕಬ್ಬುಬೆಳೆಯುವ ಪ್ರಮುಖ 13 ಜಿಲ್ಲೆಗಳಲ್ಲಿ ಕಬ್ಬು ಬೆಳೆ ಅಭಿವೃದ್ಧಿಗೆ ಜಿಲ್ಲಾ ಮಟ್ಟದ ಕಬ್ಬು ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶ್ರೀ ಶಿವರಾಜ ಎಸ್. ತಂಗಡಗಿ ಅವರು ತಿಳಿಸಿದರು.
ಇಂದು ನಗರದ ಬೈಕಂಪಾಡಿಯ ಎಪಿಎಂಸಿ ಯಾರ್ಡ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಶೇಕಡ 40ರಷ್ಟು ಕಬ್ಬಿನ ಬೆಳೆ ಇಳಿಕೆಯಾಗಿದ್ದು, ಬೆಳೆಯ ಅಭಿವೃದ್ಧಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನು ಒಳಗೊಂಡಂತೆ ಒಂದು ಸಮಿತಿ ರಚಿಸಿ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೇಮಿಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಎಪಿಎಂಸಿಗಳಿಂದ 202 ಕೋಟಿ ರೂ. ಸೆಸ್ ಸಂಗ್ರಹಿಸಲಾಗಿದೆ. 225 ಕೋಟಿ ರೂ.ಗಳ ಗುರಿ ಹಮ್ಮಿಕೊಳ್ಳಲಾಗಿದ್ದು, ಎಣ್ಣೆ ಕಾಳುಗಳ ಉತ್ಪಾದನೆಯಲ್ಲಿ ಸಂಭವಿಸಿದ ಕುಸಿತದಿಂದ ನಿಗದಿತ ಗುರಿ ತಲುಪಲು ಸಾದ್ಯವಾಗಿಲ್ಲ ಎಂದ ಅವರು, 2008-09ನೇ ಸಾಲಿನಲ್ಲಿ 3.35 ಕೋಟಿ ರೂ. ಮಾರುಕಟ್ಟೆ ತೆರಿಗೆಯನ್ನು ಸಂಗ್ರಹಿಸಲಾಗಿದೆ ಎಂದರು. ರಾಷ್ಟ್ರೀಯ ಮಾರುಕಟ್ಟೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 12 ಕೋಟಿ ರೂ.ಗಳನ್ನು ಬೈಕಂಪಾಡಿ ಎಪಿಎಂಸಿ ಅಭಿವೃದ್ಧಿಗೆ ನೀಡಲಾಗಿದೆ ಎಂದ ಅವರು, ಮಾರುಕಟ್ಟೆ ಪ್ರಾಂಗಣಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ. ಕೃಷ್ಣ ಪಾಲೆಮಾರ್, ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು.