Friday, June 12, 2009

ನೆಮ್ಮದಿ ಕೇಂದ್ರಗಳ ಸಮಸ್ಯೆ ಶೀಘ್ರ ಪರಿಹರಿಸಿ: ಮುಖ್ಯಮಂತ್ರಿ

ಮಂಗಳೂರು, ಜೂ. 12: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನೆಮ್ಮದಿ ಕೇಂದ್ರಗಳಿಂದ ಜನರಿಗೆ ಹಲವು ತೊಂದರೆಗಳಾಗುತ್ತಿದ್ದು, ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ರಾಜ್ಯದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಶೀಘ್ರವೇ ಪರಿಹಾರ ರೂಪಿಸಿ; ನಮ್ಮ ಸರ್ಕಾರದ ಅವಧಿಯಲ್ಲಿ ಜನರಿಗೆ ತೊಂದರೆಯಾಗುವಂತಹ ಅವ್ಯವಸ್ಥೆಗೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದರು.
ಇಂದು ದ. ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಈ ಸಂಬಂಧ ಅಗತ್ಯ ನಿರ್ದೇಶನಗಳನ್ನು ನಾನೇ ಖುದ್ದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೀಡುವುದಾಗಿ ಹೇಳಿದ ಮುಖ್ಯಮಂತ್ರಿಗಳು, ಸಾರ್ವಜನಿಕರ ಅನುಕೂಲವೇ ನಮ್ಮ ಪರಮ ಧ್ಯೇಯ; ಅದಕ್ಕೆ ಪೂರಕವಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಿದರು.
ನಕ್ಸಲ್ ಸಮಸ್ಯೆಯನ್ನು ನಿಭಾಯಿಸಿರುವ ನೀತಿಯನ್ನು ಶ್ಲಾಘಿಸಿದ ಅವರು ಈ ನಿಟ್ಟಿನಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬೇಕು; ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ವಾರಕ್ಕೊಂದು ಬಾರಿಯಾದರೂ ನಕ್ಸಲ್ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಜನರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು ಎಂದ ಅವರು, ಈ ಬಗ್ಗೆ ನನಗೆ ವರದಿಯನ್ನೂ ಸಕಾಲದಲ್ಲಿ ಸಲ್ಲಿಸಬೇಕು ಎಂದರು. ಶಿರಾಡಿ ಘಾಟ್ ರಸ್ತೆ, ಅಂಕೋಲಾ -ಯಲ್ಲಾಪುರ-ಕಾರವಾರ ರಸ್ತೆಗಳ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಲಾರಿಗಳ ನಿಯಂತ್ರಣದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿಯಲ್ಲಿ ಕೃಷಿ ಭೂಮಿ ಪರಿವರ್ತನೆ, ಪಹಣಿ ಸಂಬಂಧಿ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಇಂತಹ ಸಮಸ್ಯೆಗಳಿಗೆ ಶೀರ್ಘ ಪರಿಹಾರಕ್ಕೆ ಮುಖ್ಯ ಕಾರ್ಯ ದರ್ಶಿಗಳು, ಮತ್ತು ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು. ಪ್ರತೀ ಶನಿವಾರಗಳಂದು ಹೋಬಳಿ ಮಟ್ಟದಲ್ಲಿ ನಡೆಯುವ ಜನಸ್ಪಂದನ ಕೇವಲ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯಕ್ರಮವಾಗದೆ ಇನ್ನಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಗಳನ್ನು ರೂಪಿಸುವ ಸಭೆಗಳಾಗಬೇಕು ಎಂದು ಅವರು ನುಡಿದರು.
ಕರಾವಳಿಯ ಕಡಲ್ಕೊರೆತಕ್ಕೆ ಸಂಬಂಧಿಸಿದ ಮತ್ತು ಬಿ. ಸಿ. ರೋಡ್ ಎನ್.ಎಚ್ - 48 ರಾಷ್ಟ್ರೀಯ ಹೆದ್ದಾರಿಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಮೂರು ಜಿಲ್ಲೆಯ ಅಧಿಕಾರಿಗಳು ಸೇರಿದಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ಭರತ್ ಲಾಲ್ ಮೀನಾ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ಲಕ್ಷ್ಮೀ ನಾರಾಯಣ್, ಕಾನೂನು ಸಲಹೆಗಾರ ಶ್ರೀ ದಿವಾಕರ್, ಐಜಿಪಿ ಶ್ರೀ ಗೋಪಾಲ್ ಹೊಸೂರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್, ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಜಯಂತಿ ಪಾಲ್ಗೊಂಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೃಷ್ಣ ಜೆ. ಪಾಲೆಮಾರ್,ಗೃಹ ಸಚಿವ ಶ್ರೀ ಡಾ. ವಿ. ಎಸ್. ಆಚಾರ್ಯ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕ ಶ್ರೀ ಯೋಗೀಶ್ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.