Wednesday, June 24, 2009

ಸ್ವಚ್ಛ ಪರಿಸರದಿಂದ ಆರೋಗ್ಯವಂತ ಸಮಾಜ



ಮಂಗಳೂರು, ಜೂ.24: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಪರಿಸರ ಕಲುಷಿತಗೊಳ್ಳುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಹೇಳಿದರು.

ಜೂ. 24ರಂದು ಪುತ್ತೂರಿನ ನೆಲ್ಯಾಡಿ ದ.ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ತಾ ಇಲಾಖೆ ಹಮ್ಮಿಕೊಂಡಿದ್ದ ಪರಿಸರ ಮತ್ತು ನಮ್ಮ ಆರೋಗ್ಯ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಪರಸ್ಪರ ಸಹಕಾರ ಮತ್ತು ಕೂಡಿಬಾಳುವುದಕ್ಕೆ ಹೆಚ್ಚಿನ ಮಹತ್ವವಿದ್ದು, ಆರೋಗ್ಯದ ವಿಷಯದಲ್ಲೂ ಸಾಮಾಜಿಕ ಹೊಣೆಯರಿತು ವರ್ತಿಸಬೇಕು ಎಂದು ಸಲಹೆ ಮಾಡಿದರು. ಆರೋಗ್ಯ ರಕ್ಷಾ ಕವಚ ಮತ್ತು ಆರೋಗ್ಯ ಇಲಾಖೆ ಸವಲತ್ತುಗಳನ್ನು ಬಳಸಿಕೊಳ್ಳಲು ಸಲಹೆ ಮಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಗ್ರಾ. ಪಂ. ಅಧ್ಯಕ್ಷರಾದ ಲಿಝಿ ಅಬ್ರಾಹಂ ಅವರು, ಸ್ವಚ್ಛ ಪರಿಸರದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿ ಸತ್ಯವಾಗಿದ್ದು, ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತಿಲ್ಲ; ಈ ಬಗ್ಗೆ ಪ್ರತಿಯೊಬ್ಬರು ಅರಿತು, ಅನುಷ್ಠಾನಕ್ಕೆ ತರಬೇಕು ಎಂದರು.

ನೆಲ್ಯಾಡಿ ಪ್ರಾ. ಆ. ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣಾನಂದ ಅವರು ಮಾತನಾಡಿ, ಪರಿಸರ ಮತ್ತು ಆರೋಗ್ಯ ಒಂದು ನಾಣ್ಯದ ಎರಡು ಮುಖಗಳು; ನೀರಿನಿಂದ ಮತ್ತು ಕಲುಷಿತ ಪರಿಸರದಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ವಿಫುಲ ಮಾಹಿತಿಯನ್ನು ಅವರು ನೀಡಿದರು. ಪ್ರಸಕ್ತ ಸನ್ನಿವೇಶಲದಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಇಲಾಖೆಕೈಗೊಂಡಿರುವ ಕ್ರಮಗಳನ್ನೂ ಅವರು ವಿವರಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯ ಸರ್ವೋತ್ತಮಗೌಡ, ಗ್ರಾ.ಪಂ. ಸದಸ್ಯ ಇಸ್ಮಾಯಿಲ್ ಎನ್, ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಮಾತನಾಡಿದರು. ಸಭಾ ಕಾರ್ಯಕ್ರಮದ ಬಳಿಕ ವಾರ್ತಾ ಇಲಾಖೆ ವತಿಯಿಂದ ಪರಿಸರ ಮತ್ತು ಆರೋಗ್ಯದ ಬಗ್ಗೆ ನಾಟಕ ಹಾಗೂ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.