Saturday, August 29, 2009

ಮಂಗಳೂರು-ಬೆಂಗಳೂರು ಹಗಲು ರೈಲು ಆರಂಭ

ಮಂಗಳೂರು,ಆ.29:ಕರಾವಳಿ ಜನರ ಬಹಳ ದಿನಗಳ ಬೇಡಿಕೆ ಇಂದು ಸಾಕಾರಗೊಂಡಿದ್ದು, ಮಂಗಳೂರು-ಬೆಂಗಳೂರು ಹಗಲು ರೈಲನ್ನು ಕೇಂದ್ರ ರೈಲ್ವೇ ಸಹಾಯಕ ಸಚಿವ ಶ್ರೀ ಕೆ. ಎಚ್ ಮುನಿಯಪ್ಪ ಅವರು ಇಂದು ಪೂರ್ವಾಹ್ನ 8.40 ಗಂಟೆಗೆ ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಹಸಿರು ನಿಶಾನೆ ತೋರಿ ಪುತ್ತೂರಿನವರೆಗೆ ರೈಲಿನಲ್ಲಿ ಪ್ರಯಾಣಿಸಿದ್ದಾರೆ.


ಈ ಸಂದರ್ಭದಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯಖಾತೆ ಸಚಿವ ಶ್ರೀ ಎಂ. ವೀರಪ್ಪ ಮೊಯ್ಲಿ ಮುಖ್ಯ ಅತಿಥಿಗಳಾಗಿದ್ದರು. ವಿಶೇಷ ಅತಿಥಿಗಳಾಗಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಶ್ರೀ ಡಿ.ವಿ.ಸದಾನಂದ ಗೌಡ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ ಶೆಟ್ಟಿ, ಮೇಯರ್ ಶ್ರೀ ಎಂ. ಶಂಕರ್ ಭಟ್ , ಶಾಸಕರಾದ ಶ್ರೀ ರಮಾನಾಥ ರೈ, ಯು.ಟಿ. ಖಾದರ್ ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ನಂ.6516
ಮಂಗಳೂರು-ಅರಸೀಕೆರೆ-ಯಶವಂತಪುರಕ್ಕೆ ವಾರದಲ್ಲಿ 3 ದಿನ ಪೂರ್ವಾಹ್ನ 8.40ಕ್ಕೆ ಹೊರಡುವ ರೈಲು ಸಂಜೆ 7ಕ್ಕೆ ಯಶವಂತಪುರ ತಲುಪಲಿದೆ. ರೈಲಿನಲ್ಲಿ 3 ಎಸಿ 3 ಟಯರ್ 1ಬೋಗಿ, ದ್ವಿತೀಯ ದರ್ಜೆ 9 ಹಾಗೂ ಸಾಮಾನ್ಯ ದರ್ಜೆ 2ಬೋಗಿ ಸೇರಿದಂತೆ 12 ಕೋಚ್ ಇರುತ್ತದೆ. ಯಶವಂತಪುರದಿಂದ ಪೂರ್ವಾಹ್ನ 7.30ಕ್ಕೆ ಹೊರಡುವ ರೈಲು ಅರಸೀಕೆರೆ ಮಾರ್ಗವಾಗಿ ಮಂಗಳೂರಿಗೆ ಸಂಜೆ 5.55ಕ್ಕೆ ತಲುಪಲಿದೆ.

ಕೇಂದ್ರ ರೈಲ್ವೇ ಸಹಾಯಕ ಸಚಿವರ ಸುದ್ದಿ ಗೋಷ್ಢಿ

ಮಂಗಳೂರು-ಬೆಂಗಳೂರು ಹಗಲು ರೈಲು ಉದ್ಘಾಟನೆ ಮುನ್ನಾ ದಿನ ಕೇಂದ್ರ ರೈಲ್ವೇ ಸಹಾಯಕ ಸಚಿವ ಕೆ.ಎಚ್ ಮುನಿಯಪ್ಪ ಅವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರೈಲ್ವೇ ಅಧಿಕಾರಿಗಳಾದ ನರೇಶ್ ಗೊಯಲ್ , ಭಾನು ತಯಾರ್, ವಿ.ಪಿ. ಸಿಂಗ್ , ಜಿಲ್ಲಾಧಿಕಾರಿ ಪೊನ್ನುರಾಜ್ ಉಪಸ್ಥಿತರಿದ್ದರು.

Tuesday, August 25, 2009

ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮಂಗಳೂರು,ಆ.25:ಮೂರನೇ ಅವಧಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡಲು ಇಂದು ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಭಂಡಾರಿ ಹಾಗೂ ಉಪಾಧ್ಯಕ್ಷರಾಗಿ ಜಗನ್ನಾಥ್ ಸಾಲಿಯಾನ್ ಅವರು ಆಯ್ಕೆಯಾಗಿದ್ದಾರೆ.
ಪ್ರಾದೇಶಿಕ ಆಯುಕ್ತರಾದ ಜಯಂತಿ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿ, ಬಹುಮತ ಪಡೆದ ಅಭ್ಯರ್ಥಿಗಳ ಆಯ್ಕೆಯನ್ನು ಘೋಷಿಸಿದರು.25.8.09ರಿಂದ 27.1.2011ರವರೆಗೆ ಇವರ ಅಧಿಕಾರವಧಿ. ಚುನಾವಣಾ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಮಂಜುನಾಥ್ ನಾಯಕ್ ಅವರು ಪಾಲ್ಗೊಂಡಿದ್ದರು. ಚುನಾವಣೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಚುನಾವಣೆ ಶಾಂತಿಯುತವಾಗಿ ನಡೆಯಿತು.

5.05 ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆಮಂಗಳೂರು,ಆ.25:ಫಾದರ್ ಮುಲ್ಲರ್ ಆಸ್ಪತ್ರೆಯ ಎದುರು 5.05 ಕೋಟಿ ರೂ. ವೆಚ್ಚದಲ್ಲಿ ಕಂಕನಾಡಿಯಿಂದ ಮೊರ್ಗನ್ ಗೇಟ್ ವರೆಗಿನ ರಸ್ತೆ ಕಾಂಕ್ರೀಟಿಕರಣಕ್ಕೆ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರು ಚಾಲನೆಗೈದು ಶುಭ ಹಾರೈಸಿದರು.

ಹೃಷಿಕೇಷ್ ಗೆ ಪ.ಗೋ.ಪ್ರಶಸ್ತಿ

ಮಂಗಳೂರು,ಆ.25:ಕನ್ನಡ ಪ್ರಭದ ಪತ್ರಕರ್ತ ಹೃಷಿಕೇಷ್ ಧರ್ಮಸ್ಥಳ ಅವರಿಗೆ ಗ್ರಾಮೀಣ ಪತ್ರಿಕೋದ್ಯಮಕ್ಕೆ ನೀಡುವ ಪ.ಗೋ.ಪ್ರಶಸ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೇಮಾರ್ ಅವರು ಪ್ರದಾನ ಮಾಡಿದರು. ನಂತರ ಅವರು ಗ್ರಾಮೀಣ ಪತ್ರಿಕೋದ್ಯಮದ ಕೊಡುಗೆ ಕುರಿತು ಮಾತನಾಡಿದರು. ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಮಹತ್ವವನ್ನು ಹೆಚ್ಚಿಸುವಂತೆ ಕರ್ತವ್ಯ ನಿರ್ವಹಿಸಲು ಕರೆ ನೀಡಿದ ಅವರು ನಿಷ್ಪಕ್ಷಪಾತ ಮತ್ತು ನಿಷ್ಠುರ ಪತ್ರಿಕೋದ್ಯಮದಿಂದ ಸಮಾಜಕ್ಕೆ ಲಾಭ ಎಂದರು. ಹಿರಿಯ ಪತ್ರಕರ್ತ ನರಸಿಂಹ ರಾವ್ ಪ್ರಶಸ್ತಿ ಕುರಿತು ಹಾಗೂ ಪದ್ಯಾಣ ಗೋಪಾಲಕೃಷ್ಣ (ಪ.ಗೋ) ಅವರ ಬಗ್ಗೆ ಮಾತನಾಡಿದರು.

ಮಂಗಳೂರು ಅಭಿವೃದ್ಧಿಗೆ ಸರ್ವ ನೆರವು: ಸಚಿವ ಪಾಲೇಮಾರ್


ಮಂಗಳೂರು,ಆ.25:ಮಂಗಳೂರು ನಗರವು ಅತಿವೇಗವಾಗಿ ಬೆಳೆಯುತ್ತಿದ್ದು,ಅಭಿವೃದ್ಧಿಗೆ ಪೂರಕವಾಗಿ ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಉತ್ತಮ ರಸ್ತೆ, ಸುಸಜ್ಜಿತ ಮಾರುಕಟ್ಟೆ ಒದಗಿಸಲು ನಗರಪಾಲಿಕೆ ವಿಶೇಷ ಆದ್ಯತೆಯನ್ನು ನೀಡಿದೆಯಲ್ಲದೆ,ದೂರದೃಷ್ಟಿಯುಳ್ಳ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಬಂದರು,ಒಳನಾಡು, ಜಲಸಾರಿಗೆ,ಪರಿಸರ ಹಾಗೂ ಜೀವಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೇಮಾರ್ ಅವರು ಹೇಳಿದರು.
ನಗರದ ಬಿಜೈಯಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಸ್ಸಜ್ಜಿತ ಮಾರುಕಟ್ಟೆಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು,ಪಾಲಿಕೆಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಾಗಿದೆ ಎಂದರು. ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟ ಮತ್ತು ನಿಗದಿತ ವೇಳೆಯೊಳಗೆ ಯೋಜನೆಯನ್ನು ಪೂರೈಸಲು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಚಿವರು ಸೂಚಿಸಿದರು. ಕಾರ್ಯಕ್ರಮದಲ್ಲಿ ಮಹಾಪೌರ ಶಂಕರ್ ಭಟ್,ಉಪ ಮಹಾಪೌರ ರಜನಿ ದುಗ್ಗಣ್ಣ, ಆಯುಕ್ತ ವಿಜಯಪ್ರಕಾಶ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ,ವಿಪಕ್ಷ ನಾಯಕ ಹರಿನಾಥ್, ಸ್ಥಾಯಿ ಸಮಿತಿ ಅಧ್ಯಕ್ಷರು,ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಾನವ ಹಕ್ಕು ಆಯೋಗದ ಅಧ್ಯಕ್ಷರಿಂದ ದೂರು ಸ್ವೀಕಾರ


ಮಂಗಳೂರು,ಆ.25: ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಜಸ್ಟಿಸ್ ಎಸ್ ಆರ್ ನಾಯಕ್ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಸಂವಿಧಾನದತ್ತ ಅಧಿಕಾರಗಳನ್ನು ಚಲಾಯಿಸುವುದರ ಜೊತೆಗೆ ನಾಗರೀಕರು ತಮ್ಮ ಕರ್ತವ್ಯವವನ್ನು ನಿರ್ವಹಿಸಿ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ನೆಲೆಗೊಳ್ಳಲು ಸಹಕರಿಸಬೇಕು ಎಂದು ನುಡಿದರು.

ಮಂಗಳೂರಿನಲ್ಲಿ ಆಯೋಗದ ಕಲಾಪ

ಮಂಗಳೂರು,ಆ.25:ಪ್ರಾರ್ಥನಾಲಯಗಳ ಮೇಲೆ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ನ್ಯಾ. ಬಿ.ಕೆ. ಸೋಮಶೇಖರ್ ಆಯೋಗ ಸೋಮವಾರದಿಂದ ಗುರುವಾರದವರೆಗೆ ನಗರದ ಸರ್ಕ್ಯುಟ್ ಹೌಸ್ ನಲ್ಲಿ ಸಾಕ್ಷಿಗಳ ಮುಖ್ಯ ವಿಚಾರಣೆ ನಡೆಸಲಿದೆ.

Monday, August 24, 2009

ದಾಖಲೆ ಪತ್ರ ಕ್ರಮಬದ್ಧ ಗೊಳಿಸಲು ಕ್ರಮ: ಜಿಲ್ಲಾಧಿಕಾರಿ


ಮಂಗಳೂರು,ಆ.24:ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ದಾಖಲೆ ಪತ್ರದ ಕ್ರಮಬದ್ಧ ಜೋಡಣೆ, ವಿಷಯ ಸೂಚಿ ಮತ್ತು ವರ್ಗೀಕರಣ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದ್ದು, ಆ.24 ಮತ್ತು 25ರಂದು ಸಾರ್ವಜನಿಕರ ಸೇವೆಯಲ್ಲಿ ವ್ಯತ್ಯಯವಾಗಲಿದ್ದು,ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಕೋರಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು,180ರಷ್ಟು ಗ್ರಾಮ ಲೆಕ್ಕಿಗರು ಕೇಂದ್ರ ಸ್ಥಾನದಲ್ಲಿ ಮೇಲ್ಕಂಡ ಕರ್ತವ್ಯದಲ್ಲಿ ನಿರತರಾಗಿದ್ದು,ಉತ್ತಮ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಈಗಾಗಲೇ ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಶೇ. 40ರಷ್ಟು, ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಶೇ.20ರಷ್ಟು ಕಾರ್ಯಪ್ರಗತಿಯಲ್ಲಿದೆ. ಮಂಗಳೂರು ತಾಲೂಕಿನಲ್ಲಿ 5 ಲಕ್ಷ ದಾಖಲೆಗಳಿದ್ದು ಇದರ ಸಮಗ್ರ ಹಾಗೂ ಸಮರ್ಪಕ ಜೋಡಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಏಶಿಯನ್ ಫಾರೆಸ್ಟ್:
ಏಶಿಯನ್ ಫಾರೆಸ್ಟ್ ಹಡಗಿನಿಂದ ತೈಲ ಸೋರದಂತೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅವಘಡಗಳು ಸಂಭವಿಸದಂತೆ ಕರಾವಳಿ ಗಸ್ತುಪಡೆ ಎಚ್ಚರ ವಹಿಸಿದ್ದು, ಡಿ ಜಿ ಶಿಪ್ಪಿಂಗ್ ಕಂಪೆನಿಯೊಂದಿಗೆ ನಿರಂತರ ಸಂಪರ್ಕವನ್ನಿರಿಸಿಕೊಳ್ಳಲಾಗಿದೆ. ಅವರು ಈ ಸಂಬಂಧ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದೂ ಜಿಲ್ಲಾಧಿಕಾರಿಗಳು ತಿಳಿಸಿದರು.

Saturday, August 22, 2009

ಗಂಗಾ ಕಲ್ಯಾಣ ಯೋಜನೆ ಯಶಸ್ವಿ - ಅಶೋಕ್ ಕಾಟ್ವೇ

ಮಂಗಳೂರು,ಆಗಸ್ಟ್ 22. ಪೈಲಟ್ ಪ್ರಾಜೆಕ್ಟ್ ಗಂಗಾ ಕಲ್ಯಾಣ ಯೋಜನೆ ರಾಜ್ಯದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.ಈ ಯೋಜನೆ ಅಡಿ ಒಟ್ಟು 10,100 ಸಣ್ಣ ಮತ್ತು ಅತೀ ಸಣ್ಣ ರೈತರಿಗೆ 2118 ಕೊಳವೆ ಬಾವಿಗಳನ್ನು ತೋಡಲಾಗಿದ್ದು,ಇದರಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ದಿವಂಗತ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಅಶೋಕ್ ಕಾಟ್ವೇ ತಿಳಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ವಿವರಗಳನ್ನು ನೀಡಿದ ಅವರು 2 ವರ್ಷಗಳಲ್ಲಿ 1.67 ಲಕ್ಷ ಜನರು ನಿಗಮದಂದ ಆರ್ಥಿಕ ಸಹಾಯ ಪಡೆದಿದ್ದು,ಒಟ್ಟು 303 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ.ಸರ್ಕಾರ ನಿಗಮಕ್ಕೆ ಈ ವರ್ಷ 144 ಕೋಟಿ ರೂಪಾಯಿ ನೀಡಿದ್ದು,ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 4 ಕೋಟಿ 32 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು. ನಿಗಮ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದು, ಅಲೆಮಾರಿ ಜನಾಂಗ,ಉಪ್ಪಾರ, ದೇವಾಂಗ,ಕ್ಷತ್ರೀಯ,ಮತ್ತು ಸವಿತಾ ಸಮಾಜದವರಿಗೆ ವಿಶೇಷ ಪ್ಯಾಕೇಜ್ ರೂಪದಲ್ಲಿ ಸಹಾಯ ಮಾಡಲು ಯೋಜನೆ ರೂಪಿಸಿದೆ ಎಂದು ವಿವರಿಸಿದರು.ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಅವರು ಅತೀ ಹೆಚ್ಚಿನ ಅನುದಾನವನ್ನು ನೀಡುತಿದ್ದರೂ ದಿವಂಗತ ದೇವರಾಜ್ ಅರಸರ ಹೆಸರಿನಲ್ಲಿರುವ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಹೆಸರನ್ನು ಬದಲಾಯಿಸುವ ಯಾವುದೇ ಪ್ರಸ್ತಾಪ ತಮ್ಮ ಮುಂದಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು. ರಾಜ್ಯ ಅಲ್ಪ ಸಂಖ್ಯಾತ ಅಭೀವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

243 ಅಲ್ಪಸಂಖ್ಯಾತ ಫಲಾನುಭವಿಗಳಿಗೆ 66ಲಕ್ಷ ರೂ. ವಿತರಣೆ


ಮಂಗಳೂರು,ಆ.22: ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಲವಾರು ವಿನೂತನ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪ್ರತೀ 3 ತಿಂಗಳಿಗೊಮ್ಮೆ ಅರ್ಹ ಫಲಾನುಭವಿಗಳಿಗೆ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವಿವಿಧ ಸಾಲ ಯೋಜನೆಗಳಡಿ ಸಾಲ ಸೌಲಭ್ಯಗಳ ಚೆಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು, ಒಳನಾಡು,ಜಲಸಾರಿಗೆ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ತಿಳಿಸಿದರು.
ಅವರು ಇಂದು ಸುರತ್ಕಲ್ ನ ಲಯನ್ಸ್ ಸೇವಾ ಮಂದಿರದಲ್ಲಿ ಏರ್ಪಡಿಸಲಾದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಸಾಲ ಸೌಲಭ್ಯಗಳ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಜೆಟ್ ನಲ್ಲಿ ಇದಕ್ಕೆಂದೇ 172 ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಮುಂದಿನ ತಿಂಗಳಲ್ಲಿ 900 ಫಲಾನುಭವಿಗಳಿಗೆ 2ಕೋಟಿ ರೂ. ಗಳ ಸೌಲಭ್ಯವನ್ನು ವಿತರಿಸಲಾಗುವುದು ಎಂದರು. ಇದರಲ್ಲೂ ಅಲ್ಪಸಂಖ್ಯಾತ ಮಹಿಳೆಯರಿಗೆ ಆದ್ಯತೆಯನ್ನು ನೀಡಲು ನಿರ್ಧರಿಸಲಾಗಿದ್ದು, ಅವರ ಅನುಕೂಲಕ್ಕಾಗಿ, ಗ್ರಾಮ ಗ್ರಾಮಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೈಜ ಫಲಾನುಭವಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವುದೇ ತಮ್ಮ ಆದ್ಯ ಕರ್ತವ್ಯ ಎಂದ ಸಚಿವರು, ಕುಡಿಯುವ ನೀರು, ಕೃಷಿಗೆ ನೀರು ಹಾಗೂ ಮುಂದಿನ ಮೂರುವರೆ ವರ್ಷದ ಅವಧಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಅವರು ನೀಡಿದರು. ಆರೋಗ್ಯಕರ ಹಾಗೂ ಸುರಕ್ಷಿತ ಸಮಾಜ ನಿರ್ಮಾಣವೇ ಸರ್ಕಾರದ ಸಂಕಲ್ಪವಾಗಿದ್ದು, ಜನರು ಯಾವುದೇ ವದಂತಿಗಳಿಗೆ ಕಿವಿಗೊಡದಿರುವಂತೆ ಸಲಹೆ ಮಾಡಿದರು.
ಸಮಾರಂಭದಲ್ಲಿ ಶ್ರಮಶಕ್ತಿ ಯೋಜನೆಯಡಿ 88 ಫಲಾನುಭವಿಗಳಿಗೆ 32.40 ಲಕ್ಷ ರೂ., ಕಿರುಸಾಲ ಯೋಜನೆಯಡಿ 94 ಸ್ವಸಹಾಯಸಂಘದ ಸದಸ್ಯರಿಗೆ 9.40 ಲಕ್ಷ ರೂ., ಸ್ವಾವಲಂಬನಾ ಯೋಜನೆಯಡಿ 47 ಫಲಾನುಭವಿಗಳಿಗೆ 4.46 ಲಕ್ಷ ರೂ., ಕ್ಲಸ್ಟರ್ ಯೋಜನೆಯಡಿ 4 ಫಲಾನುಭವಿಗಳಿಗೆ 9.74 ಲಕ್ಷ ರೂ., ಗಂಗಾಕಲ್ಯಾಣ ಯೋಜನೆಯಡಿ 10 ಫಲಾನುಭವಿಗಳಿಗೆ 10 ಲಕ್ಷ ರೂ., ಎರಡು ಇಂಡಿಕಾ ಕಾರು ಹಾಗೂ ಎರಡು ಆಟೋಗಳನ್ನು ವಿತರಿಸಲಾಯಿತು.ಸಮಾರಂಭದಲ್ಲಿ ನಿಗಮದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಬಿ. ಅಬೂಬಕ್ಕರ್ ಅವರು ಸರ್ಕಾರ ಅರ್ಹರಿಗೆ ಸವಲತ್ತುಗಳನ್ನು ನೀಡುವುದರಲ್ಲಿ ಯಶಸ್ವಿಯಾಗಿದ್ದು, ಯೋಜನೆಗಳ ಯಶಸ್ವೀ ಅನುಷ್ಠಾನವಾಗಿದೆ ಎಂದು ಸಂತಸವ್ಯಕ್ತಪಡಿಸಿದರು. ಬಡತನದಿಂದ ಸ್ವಾವಲಂಬನೆಯತ್ತ ಎಂಬ ಘೋಷವಾಕ್ಯದಡಿ ನಿಗಮವು ಅಲ್ಪಸಂಖ್ಯಾತರಿಗೋಸ್ಕರ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಸಭೆಗೆ ನೀಡಿದರು.
ವೇದಿಕೆಯಲ್ಲಿ ಜಗದೀಶ್ ಅಧಿಕಾರಿ ಹಾಗೂ ಉದ್ಯಮಿ ಕಡಂಬೋಡಿ ಮಾಧವ ಪೂಜಾರಿ ಉಪಸ್ಥಿತರಿದ್ದರು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೋಮಪ್ಪ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.Friday, August 21, 2009

ಶಾಂತಿಯುತವಾಗಿ ಹಬ್ಬಗಳ ಆಚರಣೆಗೆ ಸಹಕಾರ - ಸಮಿತಿ ಭರವಸೆ

ಮಂಗಳೂರು,ಆಗಸ್ಟ್ 21.ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಬರಲಿರುವ ಎಲ್ಲಾ ಹಬ್ಬಗಳು ಶಾಂತಿಯುತವಾಗಿ ನಡೆಯಲು ಬೇಕಾದ ಎಲ್ಲಾ ಸಹಕಾರವನ್ನು ಜಿಲ್ಲಾಡಳಿತಕ್ಕೆ ನೀಡುವುದಾಗಿ ಸೌಹರ್ದ ಶಾಂತಿ - ಸಾಮರಸ್ಯ ಸಮಿತಿ ಸಭೆ ನಿರ್ಣಯಿಸಿದೆ. ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾ ಉಸ್ತುವರಿ ಸಚಿವ ಶ್ರೀ ಕೃಷ್ಣ ಜೆ. ಪಾಲೇಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ನಿನ್ನೆಯಿಂದ ರಾತ್ರಿ ವೇಳೆ ಹೇರಲಾಗಿದ್ದ ನಿಷೇದಾಜ್ನೆಯಿಂದ ಜನಸಾಮನ್ಯರಿಗೆ ತೊಂದರೆ ಆಗುತಿದ್ದು, ಇದನ್ನು ಸಡಿಲಿಸಬೇಕೆಂಬ ಒತ್ತಾಯ ಸಭೆಯಲ್ಲಿ ವ್ಯಾಪಕವಾಗಿ ಕೇಳಿ ಬಂತು.ಸಭೆಯಲ್ಲಿ ಪಾಲ್ಗೊಂಡ ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು, ಧಾರ್ಮಿಕ ಮುಖಂಡರುಗಳು ಶಾಂತಿ-ಸೌಹರ್ದತೆಯನ್ನು ಕಾಪಾಡಲು ಬೇಕಾದ ಸಲಹೆಗಳನ್ನು ನೀಡಿದರು ಮತ್ತು ತಮ್ಮ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು.ನಗರ ಪಾಲಿಕೆ ಮೇಯರ್ ಶ್ರೀ ಶಂಕರ್ ಭಟ್, ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ ಶೆಟ್ಟಿ,ಜಿಲ್ಲಾಧಿಕಾರಿ ಶ್ರೀ ಪೊನ್ನುರಾಜ್,ಎಸ್ಪಿ ಡಾ.ಸುಬ್ರಮಣ್ಯೇಶವರ ರಾವ್,ಜಿಲ್ಲಾ ಪಂಚಾಯತ್ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮತ್ತಿತರು ಪಾಲ್ಗೊಂಡಿದ್ದರು.

ರೈತರಿಗೆ ಕೃಷಿ ಖುಷಿ ಕೊಡಲಿ: ಸಾವಯವ ಕೃಷಿ ವಿಚಾರ ಸಂಕಿರಣ

ಮಂಗಳೂರು,ಆ.21:ಕೃಷಿ ಮತ್ತು ಕೃಷಿಕರ ಮೇಲೆ ಇದುವರೆಗೆ ಬಹಳಷ್ಟು ಪ್ರಯೋಗಗಳು ನಡೆದಿದ್ದು ಇದರ ದೂರಗಾಮಿ ಪರಿಣಾಮದ ಬಗ್ಗೆ ಚಿಂತಿಸದೆ ಇಂದು ನಮ್ಮ ಮಣ್ಣೆಲ್ಲ ಹುಳಿಯಾಗಿದೆ ಎಂದು ಬೆಳ್ತಂಗಡಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕರಾದ ಜಿ.ವಿ. ಮನೋರಮಾ ಭಟ್ ಅಭಿಪ್ರಾಯಪಟ್ಟರು.
ಇಂದು ವಾರ್ತಾ ಇಲಾಖೆ, ಕೃಷಿ ಇಲಾಖೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಸಾವಯವ ಕೃಷಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡು ತ್ತಿದ್ದರು.
ಕೃಷಿ ಪ್ರಧಾನ ದೇಶವಾದ ನಮ್ಮಲ್ಲಿ ಕೃಷಿಕರು ಇನ್ನೂ ಸ್ವಾವಲಂಬಿಗಳಾಗಿಲ್ಲ; ತಮ್ಮ ಬಗ್ಗೆ ತಮ್ಮ ಉದ್ಯೋಗದ ಬಗ್ಗೆ ಸ್ವವಿವೇಚನೆಯಿಂದ ಚಿಂತಿಸದೆ; ಕಾಲದೊಂದಿಗೆ ಹೆಜ್ಜೆ ಹಾಕಿ ಬದುಕುವ ಬಗ್ಗೆ ಚಿಂತನೆ ಮಾಡದೆ, ಅನುಭವದಿಂದ ಕಲಿಯದೆ ಕೃಷಿಕ ಸೋಲುತ್ತಿದ್ದಾನೆ. ಹಸಿರು ಕ್ರಾಂತಿಯ ಹೆಚ್ಚಿನ ಫಲ ಮತ್ತು ಲಾಭ ಹಾಗೂ ಸಬ್ಸಿಡಿಗಳು ರಾಸಾಯಿನಿಕ ಗೊಬ್ಬರಗಳ ಮಾರಾಟಗಾರರಿಗೇ ದೊರೆತವೇ ವಿನ: ಕೃಷಿಕನಿಗೆ ದೊರೆಯಲಿಲ್ಲ ಎಂದು ವಿಷಾದಿಸಿದ ಅವರು, ಆರ್ಥಿಕ ಹಿಂಜರಿತದ ಕಾಲಘಟ್ಟದಲ್ಲಿ ನಾವಿಂದು ಮತ್ತೆ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಆರಂಭಿಸಿದ್ದೇವೆ. ತರಬೇತಿಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಹೆಚ್ಚಾಗಿದ್ದು, ಕೃಷಿ ಕ್ಷೇತ್ರದಲ್ಲಿ ಯುವಶಕ್ತಿಯ ಪ್ರವೇಶ ಆಶಾದಾಯಕ ಬೆಳವಣಿಗೆ ಎಂದರು.
ಕೃಷಿಯನ್ನು ಖುಷಿಯಿಂದ ಸವಾಲಾಗಿ ಸ್ವೀಕರಿಸಿ ಲಾಭದಾಯಕವನ್ನಾಗಿ ಮಾರ್ಪಾಡಿಸುವ ಅಗತ್ಯವನ್ನು ಪ್ರತಿಪಾದಿಸಿದ ಅವರು ಕೃಷಿ ಭೂಮಿ, ಕೃಷಿಕರು ಜಾಸ್ತಿ ಇರುವ ನಮ್ಮ ಭೂಮಿಯಲ್ಲಿ ಕೃಷಿಕರಿಗೆ ಪ್ರಥಮ ಪ್ರಾಶಸ್ತ್ಯ ಸಿಗುವಂತಾಗಬೇಕು ಎಂದರು.
ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಕೃಷಿ ನಿರ್ದೇಶಕರಾದ ಮನೋಜ್ ಮಿನೇಜಸ್ ಅವರು ಕೃಷಿಕರಿಗೆ ಸಾವಯವ ಕೃಷಿಯ ಬಗ್ಗೆ, ಗೊಬ್ಬರ ಉತ್ಪಾದಿಸುವ ಬಗ್ಗೆ, ಉಪಬೆಳೆಗಳನ್ನು ಬೆಳೆಯುವ ಬಗ್ಗೆ ಸ್ಲೈಡ್ ಷೋ ಮೂಲಕ ಕೃಷಿಕರಿಗೆ ವಿವರಿಸಿ ದರು.ನಂತರ ಕೃಷಿಕರೊಂದಿಗೆ ಸಂವಾದ ನಡೆಯಿತು. ಸಂಕಿರಣದ ಅಧ್ಯಕ್ಷತೆಯನ್ನು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರಾದ ಡಾ. ಜಿ.ಟಿ.ಪುತ್ರ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕರಾದ ಕೆ.ವಿದ್ಯಾನಂದ ಅವರು ಉಪಸ್ಥಿತರಿದ್ದರು.ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Thursday, August 20, 2009

ಶಾಂತಿ ಸುವ್ಯವಸ್ಥೆ ಕಾಪಾಡಲು ಸರ್ವ ಶಕ್ತಿ ಬಳಕೆ: ಐಜಿಪಿ ಹೊಸೂರ್

ಮಂಗಳೂರು,ಆ.20:ಜಿಲ್ಲೆಯ ಶಾಂತಿ,ಸುವ್ಯವಸ್ಥೆಗೆ ಧಕ್ಕೆ ತರುವ ಸಮಾಜ ಘಾತುಕ ಶಕ್ತಿಗಳ ದಮನಕ್ಕೆ ಪೊಲೀಸ್ ಇಲಾಖೆ ತನ್ನೆಲ್ಲಾ ಅಧಿಕಾರ ಹಾಗೂ ಶಕ್ತಿಯನ್ನು ಸಂಪೂರ್ಣವಾಗಿ ಬಳಸಲಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೋಪಾಲ್ ಹೊಸೂರ್ ತಿಳಿಸಿದರು.
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತ್ರತ್ವದಲ್ಲಿ ಹಿರಿಯ ಪೋಲಿಸ್ ಅಧಿಕಾಗಳ ತುರ್ತು ಸಭೆ ನಡೆಯಿತು.ಸಭೆಯ ಬಳಿಕ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಐಜಿಪಿ ಯವರು ಮಾತನಾಡುತ್ತಿದ್ದರು. ಕಳೆದೊಂದು ವಾರದಿಂದ ಜಿಲ್ಲೆ ಯಲ್ಲಿ ನಡೆಯುತ್ತಿರುವ ಸಮಾಜವಿರೋಧಿ ಘಟನೆಗಳನ್ನು ಅವಲೋಕಿಸಿದಾಗ ಬೃಹತ್ ಷಡ್ಯಂತ್ರ ಕಾಣಿಸುತ್ತಿದ್ದು,ಮುಂಬರುವ ಹಬ್ಬದ ದಿನಗಳಲ್ಲಿ ಸಾಮಾನ್ಯ ಜನ ಜೀವನಕ್ಕೆ ತೊಂದರೆಯಾಗದಂತೆ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಈವರೆಗೆ ಜಿಲ್ಲೆಯ ಎಲ್ಲಾ ಸಮುದಾಯದ ಮುಖಂಡರು ಮತ್ತು ಜನರು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮತ್ತು ಯಾವುದೇ ಸಂಘರ್ಷಕ್ಕೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸಿ, ಸಹಕರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿಗಳು ಮಾತನಾಡಿ,ಜಿಲ್ಲೆಯಲ್ಲಿ ಸಹಜ ಪರಿಸ್ಥಿತಿಗೆ ಧಕ್ಕೆ ಬಾರದಿರಲು, ಸಾರ್ವಜನಿಕರು ಹಬ್ಬಗಳನ್ನು ಸಂಭ್ರಮದಿಂದ ಮತ್ತು ಶಾಂತಿಯುತವಾಗಿ ಆಚರಿಸಲು ಪೂರಕವಾಗಿ ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ವಾಣಿಜ್ಯ ವ್ಯವಹಾರಗಳು ರಾತ್ರಿ 8 ಗಂಟೆಯೊಳಗೆ ಮುಗಿಸಲು ಆದೇಶ ನೀಡುವುದಾಗಿ ತಿಳಿಸಿದರು. ರಾತ್ರಿ ವೇಳೆಯಲ್ಲಿ ದುರ್ಘಟನೆಗಳು ಹೆಚ್ಚಾಗಿದ್ದು, ಇದನ್ನು ತಡೆಯಲು ಜಿಲ್ಲಾ ದಂಡಾಧಿಕಾರಿಗಳು ನಗರಕ್ಕೆ ಹೆಚ್ಚಿನ ಪೊಲೀಸ್ ಬಲವನ್ನು ಉಪಯೋಗಿಸಲು ನಿರ್ಧರಿಸಿರುವುದಾಗಿ ನುಡಿದರು. ಈ ಸಂಬಂಧ ನಾಳೆ ಶಾಂತಿ ಸಮಿತಿ ಸಭೆಯನ್ನೂ ಕರೆಯಲಾಗಿದ್ದು,ನಗರದಲ್ಲಿ ಖುದ್ದಾಗಿ ಐಜಿಪಿ, ಜಿಲ್ಲಾ ಪೊಲೀಸ್ ಅಧೀಕ್ಷಕರನ್ನೊಳಗೊಂಡಂತೆ 30 ವಾಹನಗಳು 24 ಗಂಟೆಯೂ ಗಸ್ತು ತಿರುಗಲಿದೆ. ನಾಕಾಬಂಧಿಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ಅಗತ್ಯವಿದ್ದಲ್ಲಿ ಪ್ರಮುಖ ಪೊಲೀಸ್ ಠಾಣಾ ವ್ಯಾಪ್ತಿಗೆ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಗಳನ್ನು ನೇಮಿಸುವ ಬಗ್ಗೆ ಚಿಂತನೆ ನಡೆಸಿದ್ದೇನೆ ಎಂದರು.ಮುಂಜಾಗ್ರತಾ ಕ್ರಮವಾಗಿ ಹಲವು ಕ್ರಿಮಿನಲ್ ಆರೋಪಿಗಳನ್ನು ಬಂಧಿಸಲಾಗಿದ್ದು,ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೋಲಿಸ್ ಪಡೆಯನ್ನು ನಿಯೋಜಿಸಲಾಗಿದೆ.ಹೆಚ್ಚುವರಿಯಾಗಿ 12 ಸಿ ಆರ್ ಪಿ ಮತ್ತು 1200 ಹೆಚ್ಚುವರಿ ಪೊಲೀಸರನ್ನು, ಅಗತ್ಯ ಬಿದ್ದಲ್ಲಿ ರಾಪಿಡ್ ಆಕ್ಷನ್ ಫೋರ್ಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಬಲವನ್ನು ತರಿಸಲಾಗುವುದು. ಎಂದು ಜಿಲ್ಲಾಧಿಕಾರಿ ಪೊನ್ನುರಾಜ್ ತಿಳಿಸಿದರು.ಪತ್ರಿಕಾಗೋಷ್ಥಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್, ಮಹಾನಗರಪಾಲಿಕೆ ಆಯುಕ್ತ ವಿಜಯ ಪ್ರಕಾಶ್ ಉಪಸ್ಥಿತರಿದ್ದರು.

Wednesday, August 19, 2009

ಇಂದು ಶಂಕಿತ 3 ಎಚ್ 1 ಎನ್ 1 ಪ್ರಕರಣ

ಮಂಗಳೂರು,ಆ.19: ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಶಂಕಿತ ಎಚ್ 1 ಎನ್ 1 ಪ್ರಕರಣಗಳು ವರದಿಯಾಗಿದ್ದು, ಶಂಕಿತ ಪ್ರಕರಣಗಳ ವೈದ್ಯಕೀಯ ತಪಾಸಣಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗನ್ನಾಥ್ ತಿಳಿಸಿದ್ದಾರೆ.

ಸುಸೂತ್ರ ಆಡಳಿತಕ್ಕೆ ಗಣಕೀಕೃತ ವ್ಯವಸ್ಥೆ: ಅಪರ ಜಿಲ್ಲಾಧಿಕಾರಿ

ಮಂಗಳೂರು,ಆ.19:ಆಡಳಿತ ವ್ಯವಸ್ಥೆ ಮತ್ತು ವೈಖರಿಯಲ್ಲಿ ಸಮಗ್ರ ಬದಲಾವಣೆ ತರಲು ಸರ್ಕಾರಿ ಇಲಾಖೆಗಳನ್ನು ಸಂಪೂರ್ಣವಾಗಿ ಗಣಕೀಕರಣ ಗೊಳಿಸುವತ್ತ ಕರ್ನಾಟಕ ರಾಜ್ಯ ಸಾಗುತ್ತಿದ್ದು, ಇ ಆಡಳಿತವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ಸಜ್ಜಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಹೇಳಿದರು.
ಇಂದು ಪುರಭವನದಲ್ಲಿ ಏರ್ಪಡಿಸಲಾಗಿದ್ದ ವೇತನ ಬಟವಾಡೆ ಅಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಪಾಲ್ಲೊಳ್ಳಬೇಕಾದ ಅನಿರ್ವಾಯತೆಯನ್ನು ತಿಳಿಸಿ ಹೇಳಿದರಲ್ಲದೆ ಅಧಿಕಾರಿಗಳು ಎಲ್ಲ ಕೆಲಸಕ್ಕೂ ಕೇಸ್ ವರ್ಕರ್,ಸೂಪರಿಂಟೆಂಡೆಂಟ್ ಗಳನ್ನು ಅವಲಂಬಿಸದೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಎಚ್ ಆರ್ ಎಂ ಎಸ್ ವ್ಯವಸ್ಥೆ ನೆರವಾಗ ಲಿದೆ ಎಂದರು.
ಎಚ್ ಆರ್ ಎಂ ಎಸ್ ನ ಯೋಜನಾ ನಿರ್ದೇಶಕರಾದ ಶಂಕರ್ ಅವರು ಮಾತನಾಡಿ, 2008ರ ಹಿಂದೆ ಇದ್ದ ವ್ಯವಸ್ಥೆಗೂ ಈಗಿನ ವ್ಯವಸ್ಥೆಗೂ ಇರುವ ವ್ಯತ್ಯಾಸವನ್ನು ತಿಳಿಸಿ ಹೇಳಿ ರಾಜ್ಯದಲ್ಲಿ 20,000 ಬಟವಾಡೆ ಅಧಿಕಾರಿಗಳಿದ್ದು, ಎಚ್ ಆರ್ ಎಂ ಎಸ್ ನಿಂದಾಗಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ನೌಕರರ ಸಂಪೂರ್ಣ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದಾಗಿದೆ ಎಂದರು. ಇದರಿಂದ ನೌಕರರಿಗೆ, ಆಡಳಿತಕ್ಕೆ ಹಾಗೂ ಸುಗಮ ಕೆಲಸಕ್ಕೆ ಆಗುವ ಅನುಕೂಲತೆಗಳನ್ನು ವಿವರಿಸಿದ ಅವರು, ನಿವೃತ್ತಿಯ ಸಂದರ್ಭದಲ್ಲಿ ತಕ್ಷಣವೇ ನೌಕರನಿಗೆ ಎಲ್ಲಾ ಸವಲತ್ತುಗಳು ದೊರೆಯಲಿದೆ ಎಂದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿ ಸಕ್ರಿಯ ಅವರು ಮಾತನಾಡಿ, ಜಿಲ್ಲೆಯಲ್ಲಿ 611ರಲ್ಲಿ ಬರೀ 411 ಕಚೇರಿಗಳ ಮುಖ್ಯಸ್ಥರು ಪಾನ್ ನಂಬರ್ ನ್ನು ಪಡೆದುಕೊಂಡಿದ್ದು, ಆಗಸ್ಟ್ 31 ರೊಳಗೆ ಈ ನಂಬರನ್ನು ಪಡೆದುಕೊಂಡು ಎಚ್ ಆರ್ ಎಂ ಎಸ್ ನ್ನು ಅಪ್ ಡೇಟ್ ಮಾಡಲು ಸಲಹೆ ಮಾಡಿದರು.ಆದಾಯ ತೆರಿಗೆ ಇಲಾಖೆಯ ಶಶಾಂಕ್ ಅವರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. 550ರಷ್ಟು ವೇತನ ಬಟವಾಡೆ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿ ದ್ದರು.ವಿದ್ಯಾಂಗ ಇಲಾಖೆಯ ಉಪನಿರ್ದೇಶಕ ಚಾಮೇಗೌಡ ಅವರು ಮಾತನಾಡಿ ಧನ್ಯವಾದ ಸಮರ್ಪಿಸಿದರು.

Tuesday, August 18, 2009

ಎಚ್1 ಎನ್ 1 ಶಂಕಿತ ಪ್ರಕರಣ ವರದಿಯಾಗಿಲ್ಲ

ಮಂಗಳೂರು,ಆ.18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಯಾವುದೇ ಹೊಸ ಎಚ್ 1 ಎನ್ 1 ಪ್ರಕರಣ ಪತ್ತೆಯಾಗಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಜೇಶ್ ತಿಳಿಸಿದ್ದಾರೆ.

Monday, August 17, 2009

ಎಚ್1ಎನ್1 ಇಂದು ನಾಲ್ಕು ಶಂಕಿತ ಪ್ರಕರಣ

ಮಂಗಳೂರು,ಆ.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು (ಸೋಮವಾರ 7.8.09)4 ಶಂಕಿತ ಎಚ್1ಎನ್1 ಪ್ರಕರಣಗಳು ವರದಿಯಾಗಿದ್ದು, ಸೋಂಕು ತಗುಲಿದ ವ್ಯಕ್ತಿಗಳ ತಪಾಸಣಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಜೇಶ್ ತಿಳಿಸಿದ್ದಾರೆ. ಇದುವರೆಗೆ ಒಟ್ಟು 7 ಪ್ರಕರಣಗಳು ಮಾತ್ರ ಎಚ್1 ಎನ್ 1 ಎಂದು ದೃಢಪಟ್ಟಿದ್ದು, ಸೋಂಕು ಪೀಡಿತರೆಲ್ಲರೂ ಶುಶ್ರೂಷೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ.

ಹಿಂದುಳಿದವರ ಅಭಿವೃದ್ಧಿಗೆ 600 ಕೋಟಿ ರೂ.:ಸಚಿವ ಸುಧಾಕರ

ಮಂಗಳೂರು,ಆ.17:ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯಕ್ಕೆ ಪ್ರಸಕ್ತ ಸಾಲಿನಲ್ಲಿ 600 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಿ. ಸುಧಾಕರ ಅವರು ತಿಳಿಸಿದರು.
ಅವರು ಇಂದು ಧರ್ಮಸ್ಥಳದ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲನಿ ಅಭಿವೃದ್ಧಿಗೆ 100 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಸರ್ಕಾರ ನೀಡಿದ್ದು, ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗೆ ಸಮಗ್ರ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಅಭಿವೃದ್ಧಿಗೆ ಈ ವರ್ಷ 400 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿದ್ದು, ರಾಜ್ಯದಲ್ಲಿ 180 ಹೊಸ ಶಾಲೆಗಳನ್ನು ಆರಂಭಿಸಲಾಗಿದೆ. 172 ಸ್ಥಳಗಳಲ್ಲಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ನುಡಿದರು. ಈ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸೇವೆಯನ್ನು ಮುಂದುವರಿಸಲಾಗುವುದೆಂದು ಹೇಳಿದ ಅವರು, ಇಲಾಖೆಯಲ್ಲಿ 9,000 ಹುದ್ದೆ ಖಾಲಿ ಇದ್ದು, 3000 ಹುದ್ದೆ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಪ್ರಗತಿಯಲ್ಲಿದೆ.
ಅರಣ್ಯ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರ ಬಗ್ಗೆ ಅಧ್ಯಯನ ಮಾಡಿ ಶಿಫಾರಸ್ಸು ಮಾಡಲು ಆಯಾ ಪ್ರದೇಶದಲ್ಲಿ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಸಭೆ ಕರೆದು ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಳೆದ ವರ್ಷ 10 ಕೋಟಿ ರೂ.ಅನುದಾನ ನೀಡಿದ್ದು, ಈ ವರ್ಷವೂ 10 ಕೋಟಿ ರೂ.ಅನುದಾನ ನೀಡಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯ ಕೊರಗ ಜನಾಂಗದವರ ಕುಲಶಾಸ್ತ್ರ ಅಧ್ಯಯನ ನಡೆಸಿ ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದೂ ಹೇಳಿದರು.

Saturday, August 15, 2009

ಎಚ್1ಎನ್1 ಸಹಾಯವಾಣಿ 2425038

ಮಂಗಳೂರು,ಆ.15:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್1 ಎನ್1 ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯಲ್ಲಿ 24 ಗಂಟೆ ಕಾರ್ಯನಿರತವಾಗಿರುವ ಉಚಿತ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಸಹಾಯವಾಣಿ ಉಚಿತ ಕರೆ ಸಂಖ್ಯೆ 2425038 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗನ್ನಾಥ ತಿಳಿಸಿದ್ದಾರೆ.

ಕರಾವಳಿಯ ಅಭಿವೃದ್ಧಿಗೆ ವಿಶೇಷ ಆದ್ಯತೆ: ಸ್ವಾತಂತ್ರ್ಯೋತ್ಸವ ಸಂದೇಶ

ಮಂಗಳೂರು,ಆ.15: ಕರಾವಳಿಯ ಸಮಗ್ರ ಅಭಿವೃದ್ಧಿಗೆ ಬಜೆಟ್ ನಲ್ಲಿ ವಿಶೇಷ ಆದ್ಯತೆಯನ್ನು ನೀಡಲಾಗಿದ್ದು, ಮೀನುಗಾರರಿಗೆ, ಒಳನಾಡು ರಸ್ತೆ ಅಭಿವೃದ್ಧಿಗೆ, ಗ್ರಾಮೀಣ ರಸ್ತೆ ದುರಸ್ತಿಗೆ, ಕುಡಿಯುವ ನೀರು ಸಮರ್ಪಕ ಸರಬರಾಜಿಗೆ, ರೈತರಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ,ಕೃಷಿಕರ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಿದ್ದು, ಸುವರ್ಣ ಗ್ರಾಮೋದಯ ಯೋಜನೆಯ ಮೂಲಕ ಜಿಲ್ಲೆಯ 32 ಗ್ರಾಮಗಳ ಸಮಗ್ರ ಅಭಿವೃದ್ಧಿಗೆ 3,100 ಲಕ್ಷ ರೂ.ಗಳನ್ನು ನಿಗದಿಗೊಳಿಸಿದ್ದು ರೂ.2,061 ಲಕ್ಷ ರೂ. ಬಿಡುಗಡೆ ಮಾಡಿದೆ ಎಂದು ಜೀವಿಶಾಸ್ತ್ರ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು.
63ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಂಗಳೂರಿನ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ,ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ರೂಪಿಸಿರುವ ಹಾಗೂ ಅನುಷ್ಠಾನಕ್ಕೆ ತಂದಿರುವ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ನೀಡಿದರು. ದೇಶವು 63ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದು, ಸ್ವಾತಂತ್ರ್ಯದ ಪರಿಕಲ್ಪನೆ ಸಾಕಾರಗೊಳ್ಳಲು, ಪ್ರತಿಯೊಬ್ಬ ಪ್ರಜೆಯೂ ಸ್ವಾತಂತ್ರ್ಯದ ಸವಿಯನ್ನು ಅನುಭವಿಸುವಂತಾಗಲು, ಕೃಷಿಕನಿಗೆ ಸೂಕ್ತ ಸ್ಥಾನ ಮಾನ ದೊರಕಿಸಲು ಸರ್ಕಾರ ರೂಪಿಸಿರುವ ಯೋಜನೆಗಳು, ನೇಗಿಲಯೋಗಿ ಗೀತೆಯನ್ನು ಎಲ್ಲಾ ಸರ್ಕಾರಿ ಸಮಾರಂಭಗಳಲ್ಲಿ ಹಾಡುವ ಉದ್ದೇಶವನ್ನು ಸಂದೇಶದಲ್ಲಿ ಪ್ರಸ್ತಾಪಿಸಿದರು.
ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾಗಾಂಧಿ ವೃದ್ಧಾಪ್ಯ ಯೋಜನೆ, ಅಂಗವಿಕಲ ವೇತನ, ವಿಧವಾ ವೇತನ,ಅಂತ್ಯ ಸಂಸ್ಕಾರ ಸಹಾಯಧನ, ಆದರ್ಶ ವಿವಾಹ ಯೋಜನೆ, ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯಲ್ಲಿ 17352 ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯವನ್ನು ವಿತರಿಸಲಾಗಿದೆ ಎಂದರು.
ಸಾರ್ವಜನಿಕ ಸ್ನೇಹಿ ಆಡಳಿತ ಸರ್ಕಾರದ ಪ್ರಥಮ ಆದ್ಯತೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕಂದಾಯ ಇಲಾಖೆ ಇತರರಿಗಿಂತ ಒಂದು ಹೆಜ್ಚೆ ಮುಂದಿದ್ದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತೀ ತಿಂಗಳ 3ನೇ ಶನಿವಾರ ಮಧ್ಯಾಹ್ನ ಕಂದಾಯ ಸಹಾಯವಾಣಿ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಲಿದೆ ಎಂದರು.ಪ್ರತಿಯೊಬ್ಬ ಪ್ರಜೆಯ ಸುಖ ದು:ಖಗಳಿಗೆ ಸರ್ಕಾರ ಸ್ಪಂದಿಸುವುದಲ್ಲದೆ, ಶಾಂತಿ ಸೌಹಾರ್ದಯುತ ಬಾಳ್ವೆಗೆ ಅಗತ್ಯ ವಾತಾವರಣ ನಿರ್ಮಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ನಂತರ ನಡೆದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು. ಮೀನುಗಾರರಾದ ಲೋಕೇಶ್ ವಿ. ಪುತ್ರನ್ ಅವರಿಗೆ 5 ಜನರ ಪ್ರಾಣ ಉಳಿಸಿದ್ದಕ್ಕೆ ವಿಶೇಷ ಪ್ರಶಸ್ತಿ ಮತ್ತು ಇತ್ತೀಚೆಗೆ ಮಂಗಳೂರಿನ ಟ್ರೇಡ್ ಸೆಂಟರ್ ನಲ್ಲಿ ತಮ್ಮ ಧೈರ್ಯ ಮತ್ತು ಸಾಹಸ ಮೆರೆದ ಅಗ್ನಿ ಶಾಮಕ ಪಡೆಯ ಮುಖ್ಯಸ್ಥರನ್ನು ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

Friday, August 14, 2009

14ರಂದು ಶಂಕಿತ 5 ಎಚ್1 ಎನ್ 1 ಪ್ರಕರಣ

ಮಂಗಳೂರು,ಆ.14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ (14.8.09)ರಂದು 5 ಶಂಕಿತ ಎಚ್1 ಎನ್ 1 ಪ್ರಕರಣ ವರದಿಯಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 7 ಪ್ರಕರಣಗಳು ಮಾತ್ರ ಪಾಸಿಟಿವ್ ಎಂದು ದೃಢಪಟ್ಟಿದ್ದು, ಇವರಲ್ಲಿ 5 ಜನ ಶುಶ್ರೂಷೆ ಪಡೆದು ಗುಣಮುಖರಾಗಿ ತೆರಳಿದ್ದಾರೆ.

ಸಂಭ್ರಮದ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ

ಮಂಗಳೂರು,ಆ.14:63ನೇ ಸ್ವಾತಂತ್ರ್ಯೋತ್ಸವದ ಸಂದರ್ಭ ಆಗಸ್ಟ್ 15ರಂದು ಪೂರ್ವಾಹ್ನ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್ ಅವರು ನಗರದ ನೆಹರು ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. 9.05ಕ್ಕೆ ಪಥ ಸಂಚಲನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಂದ ಗೌರವ ಸ್ವೀಕಾರ ಕಾರ್ಯಕ್ರಮ. 9.15ಕ್ಕೆ ಸಚಿವರಿಂದ ಸ್ವಾತಂತ್ರ್ಯೋತ್ಸವ ಸಂದೇಶ ಬಳಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಈ ಸಂಬಂಧ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಅಪರಾಹ್ನ ಪುರಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಸಮಿತಿ ಹಾಗೂ ಜಿಲ್ಲಾಧಿಕಾರಿಗಳು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.

ಹಬ್ಬಗಳ ಆಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆಯಾದರೆ ಸಂಪರ್ಕಿಸಿ

ಮಂಗಳೂರು,ಆ.14: ಮೊಸರು ಕುಡಿಕೆ, ಗಣೇಶೋತ್ಸವ ಸಂದರ್ಭದಲ್ಲಿ ಸಾರ್ವಜಿನಿಕರಿಗೆ ತೊಂದರೆಯಾದರೆ, ಸಂಘಟಕರು ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಸಾರ್ವಜನಿಕರು ಈ ಕೆಳಗೆ ತಿಳಿಸಿರುವ ದೂರವಾಣಿ ಸಂಖ್ಯೆಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಕಂಟ್ರೋಲ್ ರೂಮ್ 100, 2220555, 2220500, ಪೊಲೀಸ್ ಅಧೀಕ್ಷಕರು- 2220503, 9480805301, ಹೆಚ್ಚುವರಿ ಪೊಲೀಸ್ ಅಧೀಕ್ಷಕರು- 2220505, 9480805302, ಪೊಲೀಸ್ ಉಪಾಧೀಕ್ಷಕರು ಮಂಗಳೂರು ನಗರ- 2220514, 9480805320, ಪೊಲೀಸ್ ಅಧೀಕ್ಷಕರು ಪಣಂಬೂರು ಉಪವಿಭಾಗ 9480805322, ಪುತ್ತೂರು ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕ 9480805321 ಇವರಿಗೆ ದೂರು ನೀಡಬಹುದಾಗಿದೆ.

Thursday, August 13, 2009

ದ.ಕ. ಜಿಲ್ಲೆಯಲ್ಲಿ ಎಚ್1 ಎನ್ 1 ನಿಯಂತ್ರಣದಲ್ಲಿ


ಮಂಗಳೂರು,ಆ.13:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್ 1 ಎನ್1 ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ರೋಗ ಹರಡುವುದನ್ನು ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಹೊರದೇಶದಿಂದ ಬರುವಂತಹ ವಿದ್ಯಾರ್ಥಿಗಳಿಂದ ರೋಗ ಹಬ್ಬುತ್ತಿದ್ದು ಈ ನಿಟ್ಟಿನಲ್ಲಿ ಎಲ್ಲಾ ಕಾಲೇಜುಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳಿಂದ ರೋಗ ಹಬ್ಬದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು ಎಂದರು. ಇದುವರೆಗೆ ಜಿಲ್ಲೆಯಲ್ಲಿ 7 ಎಚ್ 1 ಎನ್1 ದೃಢೀಕರಿಸಲ್ಪಟ್ಟಿದ್ದು, ಇದರಲ್ಲಿ 5 ರೋಗ ಪೀಡಿತರು ಶುಶ್ರೂಷೆ ಪಡೆದು ಗುಣಮುಖರಾಗಿದ್ದಾರೆ. ಮೇ3ರಿಂದ ವಿಮಾನನಿಲ್ದಾಣದಲ್ಲಿ ಇದುವರೆಗೆ 38,000 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದರು. ರೋಗದ ಚಿಕಿತ್ಸೆಗೆ ಮತ್ತು ತಡೆಯದಂತೆ ಹರಡಲು ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಕಾಲೇಜುಗಳ ಮುಖ್ಯಸ್ಥರಿಂದ ರೋಗ ತಡೆಗೆ ಸಲಹೆಗಳನ್ನು ಪಡೆಯಲಾಯಿತು.
ಹೊರರಾಜ್ಯಗಳಿಂದ ಮುಖ್ಯವಾಗಿ ಪುಣೆ, ಮುಂಬಯಿಯಿಂದ ಬರುವವರ ತಪಾಸಣೆಗೆ ಬಸ್ ಸ್ಟ್ಯಾಂಡ್ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ತಪಾಸಣೆ ಘಟಕ ಆರಂಭಿಸುವುದಾಗಿಯೂ ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲೆಯ ಜನರಿಗೆ ನೆರವಾಗಲು 24 ಗಂಟೆ ಕರ್ತವ್ಯ ನಿರ್ವಹಿಸುವ ಹೆಲ್ಪ್ ಲೈನ್ ಆರಂಭಿಸುವ ಬಗ್ಗೆ ನಾಳೆಯೊಳಗೆ ಕ್ರಮಕೈಗೊಳ್ಳುವುದಾಗಿ ಡಿ ಸಿ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಜೇಶ್,ಮಹಾನಗರಪಾಲಿಕೆ ಆಯುಕ್ತ ವಿಜಯಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಪ್ರಭುದೇವ್ ಉಪಸ್ಥಿತರಿದ್ದರು.

Wednesday, August 12, 2009

ಎಚ್1ಎನ್1: ನಾಲ್ವರು ಸೋಂಕು ಶಂಕಿತರು

ಮಂಗಳೂರು, ಆ. 12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ನಾಲ್ವರಲ್ಲಿ ಎಚ್ 1 ಎನ್ 1 ಜ್ವರ ಲಕ್ಷಣ ಕಾಣಿಸಿಕೊಂಡಿದೆ ಎಂದು ಜಿಲ್ಲಾ ಸರ್ವೆಲನ್ಸ್ ಅಧಿಕಾರಿ ಡಾ. ರಾಜೇಶ್ ತಿಳಿಸಿದ್ದಾರೆ. ನಾಲ್ವರಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದು, ಇನ್ನಿಬ್ಬರು ಸ್ಥಳೀಯರಾಗಿದ್ದಾರೆ.
ಇದುವರೆಗೆ ಒಟ್ಟು 6 ಪಾಸಿಟಿವ್ ನಲ್ಲಿ 5 ಜನ ಶುಶ್ರೂಷೆಗೊಳಪಟ್ಟು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

Tuesday, August 11, 2009

ರಾಜ್ಯ ಪೊಲೀಸ್ ಮಹಾನಿರ್ದೇಶಕರಿಂದ ಜನಸಂಪರ್ಕ ಸಭೆ


ಮಂಗಳೂರು,ಆ.11:ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಅಜಯ್ ಕುಮಾರ್ ಸಿಂಗ್ ಅವರು ಮಂಗಳವಾರ ಮಂಗಳೂರಿನ ಕೊಡಿಯಾಲ್ ಬೈಲ್ ನ ಕರ್ನಾಟಕ ಬ್ಯಾಂಕಿನ ಸಭಾಂಗಣದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಜನರ ಸಮಸ್ಯೆಗಳನ್ನು ಆಲಿಸಿದರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ.ನಾಗರಾಜ ಶೆಟ್ಟಿ,ಜಿಲ್ಲಾಧಿಕಾರಿ ವಿ.ಪೊನ್ನುರಾಜ್,ಐಜಿಪಿ ಗೋಪಾಲ್ ಹೊಸೂರ್,ಎಸ್ ಪಿ ಡಾ. ಸುಬ್ರಮಣ್ಯೇಶ್ವರ ರಾವ್, ಅಡಿಷನಲ್ ಎಸ್ ಪಿ. ರಮೇಶ್, ಜಿಲ್ಲಾ ಪಂಚಾಯತ್ ಸಿಇಓ ಶಿವಶಂಕರ್ ,ನಗರ ಪಾಲಿಕೆ ಆಯುಕ್ತ ವಿಜಯ ಪ್ರಕಾಶ್ ಉಪಸ್ಥಿತರಿದ್ದರು. ಸುಮಾರು 1 ಗಂಟೆಗೂ ಅಧಿಕ ಸಮಯದ ವರೆಗೂ ಡಿಜಿಪಿ ಅವರೊಂದಿಗೆ ನಡೆದ ಸಂವಾದದಲ್ಲಿ ದೊಡ್ಟ ಸಂಖ್ಯೆಯಲ್ಲಿ ಶಾಲಾ ಕಾಲೇಜು,ಸಂಘ ಸ0ಸ್ಥೆಗಳ ಪ್ರತಿನಿಧಿಗಳು,ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.

ಎನ್ಆರ್ಇಜಿ ಪರಿಣಾಮಕಾರಿ ಅನುಷ್ಠಾನಕ್ಕೆ ಸಿಇಒ ಸೂಚನೆ

ಮಂಗಳೂರು,ಆ.11:ಜಲಾನಯನ,ತೋಟಗಾರಿಕೆ, ಸಾಮಾಜಿಕ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆಗಳು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕ ಯೋಜನೆಗಳನ್ನು ಹಮ್ಮಿಕೊಂಡು ಮಾನವಶಕ್ತಿಯ ಸದ್ಬಳಕೆಗೆ ನೂತನ ಮಾದರಿಯನ್ನು ಹಾಕಿಕೊಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶಿವಶಂಕರ್ ಅವರು ಹೇಳಿದರು.ಅವರು ಇಂದು ಜಿಲ್ಲಾಪಂಚಾಯತ್ ನ ಸಭಾಂಗಣದಲ್ಲಿ ಏರ್ಪಡಿಸಲಾದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಸಮೀಕ್ಷಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಜಿಲ್ಲಾ ಪಂಚಾಯತ್ ವಿಭಾಗದಡಿ ಬರುವ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ ಅವರು, ಈ ಸಂಬಂಧ ಇಲಾಖೆಗಳ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರಲ್ಲದೆ, ಜಲಾನಯನ ಇಲಾಖೆಯವರು ಸುವರ್ಣ ಕೃಷಿ ಹೊಂಡದಂತಹ ಯೋಜನೆಗಳ ಮೂಲಕ ಹಾಗೂ ಶಿಕ್ಷಣ ಇಲಾಖೆ ಸರ್ವ ಶಿಕ್ಷಣ ಅಭಿಯಾನದಡಿ ಕಟ್ಟಡಗಳ ನಿರ್ಮಾಣದ ಸಂದರ್ಬದಲ್ಲಿ ಮಾನವಶಕ್ತಿಯನ್ನು ಬಳಸುವಂತೆ ಮಾರ್ಗದರ್ಶನ ನೀಡಿದ ಅವರು, ಸರ್ಕಾರದ ವಿನೂತನ ಜನಪರ ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ಯೋಜನೆ ರೂಪಿಸಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ಮಾಡಿದರು. ಮುಖ್ಯವಾಗಿ ಕಾರ್ಯನಿರ್ವಹಣಾಧಿಕಾರಿಗಳು ಈ ನಿಟ್ಟಿನಲ್ಲಿ ಇನ್ನಷ್ಟು ಶ್ರಮವಹಿಸಿ ಕೆಲಸಮಾಡಬೇಕೆಂದರು.
ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಬಗ್ಗೆ 07-08ನೇ ಸಾಲಿನ ಯೋಜನೆಗಳು ಆಗಸ್ಟ ಅಂತ್ಯದೊಳಗೆ ಸಂಪೂರ್ಣ ಗೊಂಡಿರಬೇಕು ಎಂದು ಆದೇಶಿಸಿದ ಅವರು, 08-09ನೇ ಸಾಲಿನಲ್ಲಿ ರೆಜಿಸ್ಟ್ರೇಷನ್ ಮತ್ತಿತರ ಸಮಸ್ಯೆಗಳಿಗೆ ಸೆಪ್ಟೆಂಬರ್ ಅಂತ್ಯದೊಳಗೆ ಪರಿಹಾರ ದೊರೆಯಬೇಕು ಎಂದು ಸೂಚಿಸಿದರು. ಸಣ್ಣ ನೀರಾವರಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 309.37 ಹೆಕ್ಟೇರ್ ನೀರಾವರಿಗೆ ಗುರಿ ನಿಗದಿಯಾಗಿದ್ದು, 7ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಇದರಲ್ಲಿ 5 ಸಂಪೂರ್ಣಗೊಂಡಿದ್ದು, 274.5 ಹೆಕ್ಟೇರ್ ನೀರಾವರಿ ಗುರಿಯನ್ನು ಸಾಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಯೋಜನೆಯಡಿ ಪುತ್ತೂರು ಮತ್ತು ಮಂಗಳೂರು ತಾಲೂಕುಗಳು ಮಾತ್ರ ಆಯ್ಕೆಯಾಗಿರುವ ಬಗ್ಗೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಇಂದಿನಿಂದ ಮಂಗಳೂರು ತಾಲೂಕಿನಲ್ಲಿ ಬಿಪಿ ಎಲ್ ಕಾರ್ಡುಗಳ ವಿತರಣೆಯಾಗುತ್ತಿರುವ ಬಗ್ಗೆ ಹಾಗೂ ಕಾರ್ಡ್ ಗಳನ್ನು ವಿತರಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಯ ಬಗ್ಗೆ ಆಹಾರ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ತಾಲೂಕು ಕೆಡಿಪಿಗಳಲ್ಲಿ ನಿರ್ಣಯ ಅಂಗೀಕರಿಸಿ ಜಿಲ್ಲಾ ಪಂಚಾಯತ್ ಗೆ ಕಳುಹಿಸಿಕೊಡಲು ಸಿಇಒ ಸೂಚಿಸಿದರು.
ಸಂಪೂರ್ಣ ಸ್ವಚ್ಛತಾ ಆಂದೋಲನದ ಬಗ್ಗೆ ವಿವಿಧ ಇಲಾಖೆಗಳ ವೈಯಕ್ತಿಕ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವ ಬಗ್ಗೆ, ಅಂಗವಿಕಲ ಕಲ್ಯಾಣ ಇಲಾಖೆ ಶೇ. 3 ರಷ್ಟು ಫಲಾನುಭವಿಗಳನ್ನು ವಿವಿಧ ಇಲಾಖೆಗಳು ಗುರುತಿಸಿ ನೀಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಅಸ್ಥೆ ವಹಿಸಬೇಕೆಂದು ಸಿ ಇ ಒ ಹೇಳಿದರು.
ಕೃಷಿ ಇಲಾಖೆಯಿಂದ ಸುಫಲಾ 900 ಟನ್ ಬಿಡುಗಡೆಯಾಗಿದ್ದು, ಕಾಂಪ್ಲೆಕ್ಸ್ ಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಕೆಯ ಬಗ್ಗೆ ಕೃಷಿಕರಿಗೆ ಸಾಕಷ್ಟು ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್ ಅವರು ತಿಳಿಸಿದರು.ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ದಿನಗೂಲಿ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಹಾಗೂ ಸಂಸ್ಥೆಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸುತ್ತಿಲ್ಲ; ಆದರೆ ಮನೆಗಳಲ್ಲಿ ಬಾಲಕಾರ್ಮಿಕರನ್ನು ದುಡಿಸು ಕೊಳ್ಳುತ್ತಿರುವ ಬಗ್ಗೆ ಬಂದ ದೂರುಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗಿದ್ದು, ದೂರು ಬಂದರೆ ಕ್ರಮಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.
ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಮಕ್ಕಳಿಗೆ ನೀಡುತ್ತಿರುವ ಸವಲತ್ತುಗಳ ಬಗ್ಗೆ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಾಹಿತಿ ನೀಡಿದರು. ಕಳೆದ ಸಾಲಿನಲ್ಲಿ ಈ ಯೋಜನೆಯಡಿ 30ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡಿರುವುದಾಗಿ ಹೇಳಿದರು. ಈ ಯೋಜನೆಯಿಂದ ಒಂದನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಬಹಳಷ್ಟು ಅನುಕೂಲವಾಗಿದೆ ಎಂದೂ ಅವರು ಹೇಳಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಮಸ್ಯೆಯಾಗಿರುವ ಎಚ್ 1 ಎನ್ 1 ಸೋಂಕು ರೋಗ ಮಲೇಷಿಯಾದ ವಿದ್ಯಾರ್ಥಿಗಳಿಂದ ಜಿಲ್ಲೆಗೆ ಬಂದಿದ್ದು, ರೋಗ ತಡೆಗೆ ಮತ್ತು ಶುಶ್ರೂಷೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ; ಜನರು ಭಯಪಡುವ ಅಗತ್ಯವಿಲ್ಲ ಎಂದೂ ಅವರು ಸಭೆಗೆ ತಿಳಿಸಿದರು.ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಸದಾನಂದ ಮಲ್ಲಿ, ಉಪಕಾರ್ಯದರ್ಶಿ ಪ್ರಾಣೇಶ್, ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಉಪಸ್ಥಿತರಿದ್ದರು.

Monday, August 10, 2009

ಎಚ್ 1 ಎನ್1 ಇನ್ನೆರಡು ಶಂಕಿತ ಪ್ರಕರಣ

ಮಂಗಳೂರು, ಆ. 10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು (10.8.09) ಎನ್ ಐ ಟಿಕೆಯಿಂದ ಇನ್ನೆರಡು ಶಂಕಿತ ಎಚ್1 ಎನ್1 ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ ಆರು ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಈ ಆರು ರೋಗಿಗಳ ಆರೋಗ್ಯ ದೃಢವಾಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯಾಧಿಕಾರಿ ಡಾ. ಜಗನ್ನಾಥ ತಿಳಿಸಿದ್ದಾರೆ.

Saturday, August 8, 2009

ಮಂಗಳೂರಿನಲ್ಲಿ ತೋಟಗಾರಿಕಾ ದಿನಾಚರಣೆ

ಮಂಗಳೂರು,ಆಗಸ್ಟ್8. ತೋಟಗಾರಿಕಾ ಪಿತಾಮಹಾ ದಿವಂಗತ ಡಾ.ಎಂ.ಹೆಚ್.ಮರಿಗೌಡ ಅವರ ಜನ್ಮಾದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಇಂದು ನಡೆಯಿತು.ತೋಟಗಾರಿಕ ಇಲಾಖೆ,ಜಿಲ್ಲಾ ಪಂಚಾಯತ್,ಮತ್ತು ಸಿರಿ ತೋಟಗಾರಿಕಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶಾಸಕ ಶ್ರೀ ಯೋಗಿಶ್ ಭಟ್ ಅವರು ಚಾಲನೆ ನೀಡಿದರು.ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ,ನಗರ ಪಾಲಿಕೆ ಮೇಯರ್ ಶ್ರೀ ಶಂಕರ್ ಭಟ್,ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಹೇಮಾ, ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಎನ್.ಸೋಮಯ್ಯ,ಮಂಗಳಾ ಕೆ., ನಗರ ಪಾಲಿಕೆ ಸದಸ್ಯರು ಮತ್ತು ಇತರ ಅಧಿಕಾರಿಗಳು,ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Friday, August 7, 2009

ಆಗಸ್ಟ್ 15ರಂದೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ


ಮಂಗಳೂರು,ಆ.7:ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದೇ ಆಚರಿಸಿಬೇಕು.ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ತೀಕ್ಷ್ಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿಗಳು ಎಚ್ಹರಿಸಿದ್ದಾರೆ.
ಜಿಲ್ಲೆಯ ಕೆಲವು ಸಂಘಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಆಗಸ್ಟ್ 15 ರಬದಲು 14ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಇದು ರಾಷ್ಟ್ರ ಧ್ವಜಕ್ಕೆ ಅವಮಾನ. ಆದ್ದರಿಂದ ಇಂತಹ ಪ್ರಕರಣಗಳು ಕಂಡುಬಂದರೆ ಕಠಿಣ ಕಾನೂನು ಕ್ರಮ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

ಎಚ್ 1 ಎನ್ 1 ಜನರು ಭಯಭೀತರಾಗುವ ಅಗತ್ಯವಿಲ್ಲ: ಜಿಲ್ಲಾಧಿಕಾರಿ

ಮಂಗಳೂರು,ಆ.7:ದಕ್ಷಿಣ ಕನ್ನಡದಲ್ಲಿ ಇದುವರೆಗೆ ಎಚ್1 ಎನ್1ನ ಹತ್ತು ಪ್ರಕರಣಗಳಲ್ಲಿ 5 ಪಾಸಿಟಿವ್ ಎಂದು ವರದಿ ಬಂದಿದ್ದು,4 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ.ಈ ರೋಗದ ಬಗ್ಗೆ ಜನರು ಭಯಭೀತರಾಗುವ ಅಗತ್ಯವಿಲ್ಲ; ಈ ಸಂಬಂಧ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ರೋಗಿಗಳ ಶುಶ್ರೂಷೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ತಿಳಿಸಿದ್ದಾರೆ.
ನಗರದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆ ವೆನ್ ಲಾಕ್ ನಲ್ಲಿ ಶುಶ್ರೂಷೆ ನೀಡಲು ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಸರ್ಕಾರವೇ ರೋಗಿಗಳ ಶುಶ್ರೂಷೆಯ ಸಂಪೂರ್ಣ ವೆಚ್ಚವನ್ನು ಭರಿಸಲಿದೆ ಎಂದು ಅವರು ಇಂದು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ರೋಗಿಗಳಿಗೆ 24 ಗಂಟೆ ಸೇವೆ ನೀಡಲು ಡಾಕ್ಟರ್ ಗಳು ಹಾಗೂ ನರ್ಸ್ ಗಳಿದ್ದು, ಸೇವೆ ನೀಡುವ ಸಂದರ್ಭದಲ್ಲಿ ಅವರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ ಎಂದು ಅವರು ನುಡಿದರು.
ಇದಕ್ಕೂ ಮುಂಚೆ ನಡೆದ ಆರೋಗ್ಯ ಇಲಾಖಾಧಿಕಾರಿಗಳ ಹಾಗೂ ವಿವಿಧ ಮೆಡಿಕಲ್ ಕಾಲೇಜುಗಳ ಡಾಕ್ಟರ್ ಗಳ ಜೊತೆ ನಡೆದ ಸಭೆಯಲ್ಲಿ ರೋಗದ ಕುರಿತು ಹಾಗೂ ಈ ಸಂಬಂಧ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ರೋಗಕ್ಕೆ ಶುಶ್ರೂಷೆ ನೀಡುವವರ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತು ವಿವರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಮತ್ತು ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಯಾವುದೇ ಆಸ್ಪತ್ರೆಗಳಲ್ಲಿ ರೋಗ ಲಕ್ಷಣವಿರುವವರು ಚಿಕಿತ್ಸೆಗೆ ಆಗಮಿಸಿದರೆ ತಕ್ಷಣವೇ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ರವಾನಿಸಲೂ ಸಹ ಸಭೆಯಲ್ಲಿ ಸೂಚಿಸಲಾಯಿತು.

ನಾಡ ರೈತ ಗೀತೆಯಾಗಿ ನೇಗಿಲಯೋಗಿ

ಮಂಗಳೂರು,ಆ.7:1930ರಲ್ಲಿ ರಾಷ್ಟ್ರ ಕವಿ ಕುವೆಂಪು ಅವರು ರಚಿಸಿದ ನೇಗಿಲಯೋಗಿ ಪದ್ಯವನ್ನು ನಾಡ ರೈತಗೀತೆಯಾಗಿ ನಾಡಿಗೆ ಸಮರ್ಪಿಸುತ್ತಿದ್ದು, ಆಗಸ್ಟ್ 15 ಸ್ವಾತಂತ್ರ್ಯೋತ್ಸವದಂದು ಮತ್ತು ಎಲ್ಲಾ ರಾಷ್ಟ್ರೀಯ ಮತ್ತು ನಾಡಹಬ್ಬಗಳಂದು ಹಾಗೂ ಸರ್ಕಾರದ ಎಲ್ಲಾ ಕಾರ್ಯಕ್ರಮದಲ್ಲಿ ನೇಗಿಲಯೋಗಿ ಗೀತೆಯನ್ನು ಹಾಡಲು ಸರ್ಕಾರ ಆದೇಶ ಹೊರಡಿಸಲಿದೆ ಎಂದು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ.ಆನಂದ ಆ.ಶ್ರೀ ತಿಳಿಸಿದರು.
ಅವರು ಇಂದು ನಗರದಲ್ಲಿ(7.8.09) ಈ ಸಂಬಂಧ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಗಸ್ಟ್ 15ರಂದು ಆಯಾ ತಾಲೂಕಿನ ಗಾಯಕರಿಂದ ತಾಲೂಕಿನ ಶಾಲಾ- ಕಾಲೇಜುಗಳ ಕನಿಷ್ಠ 1,000 ಮಕ್ಕಳಿಗೆ ಈ ಹಾಡನ್ನು ಧ್ವಜಾರೋಹಣದ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮುನ್ನ ಮೊದಲ ಗೀತೆಯಾಗಿ ಹಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದ ಅವರು, ನಾಡಿನಲ್ಲಿ ಒಟ್ಟಾರೆ ಒಂದೂವರೆ ಲಕ್ಷ ಮಕ್ಕಳು ನೇಗಿಲ ಯೋಗಿ ಗೀತೆಯನ್ನು ಹಾಡಲಿದ್ದು, ನಮ್ಮ ರೈತರಿಗೆ ವಿಶಿಷ್ಟ ಗೌರವ ಹಾಗೂ ಚೈತನ್ಯ ಗೀತೆಯಾಗಿ ಈ ಹಾಡನ್ನು ಸಮರ್ಪಿಸಲಿದ್ದೇವೆ ಎಂದು ವಿವರಿಸಿದರು.
ಈ ಹಾಡಿನ ಮೂಲಕ ಭರವಸೆಯ ಬೀಜವನ್ನು ಬಿತ್ತುವ ಭಾವನೆ ಸಾವಯವಕೃಷಿ ಮಿಷನ್ ನದ್ದಾಗಿದ್ದು, ರೈತನಲ್ಲಿ ಯೋಗಿಯ ಮಾನಸಿಕತೆ ತುಂಬಲು, ರೈತಕ್ಷೇತ್ರ ಬೆಳೆಯಲು ಪೂರಕವಾಗಿ,ಅನ್ನ ತಿನ್ನುವ ಪ್ರತಿಯೊಬ್ಬನು ರೈತನನ್ನು ಸ್ಮರಿಸುವಂತಾಗಲು ಈ ನೇಗಿಲಯೋಗಿ ಗೀತೆ ಕಾರಣವಾಗಲಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಸಾವಯವ ಕೃಷಿ ಮಿಷನ್ ಸಾಧನೆ: ರಾಜ್ಯದಲ್ಲಿ ಸಾವಯವ ಕೃಷಿ ಮಿಷನ್ ಇದುವರೆಗೆ 52,000 ಕುಟುಂಬಗಳ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿದ್ದು, ಒಟ್ಟು 174 ತಾಲೂಕುಗಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ. ಕಳೆದ ಸಾಲಿನಲ್ಲಿ 42.14 ಕೋಟಿ ರೂ.ಗಳ ಸಹಾಯಧನವನ್ನು 174 ಕೇಂದ್ರಗಳ 19 ಘಟಕಗಳಿಗೆ ನೀಡಲಾಗಿದೆ. ಪ್ರತಿ ತಾಲೂಕಿನಿಂದ 300 ಕುಟುಂಬಗಳು ಒಂದು ಸಂಸ್ಥೆಯಂತೆ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು 300 ಕುಟುಂಬಗಳಿಗೆ 15 ಜನ ಪ್ರೇರಕರು ಮೂವರು ಮುಖ್ಯಸ್ಥರು ಇರುವಂತಹ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಸೆಪ್ಟೆಂಬರ್ 28ರ ವಿಜಯದಶಮಿಯಂದು ರಾಜ್ಯದ 174 ತಾಲೂಕು ಕೇಂದ್ರಗಳಲ್ಲಿ ರೈತರೇ ನಿರ್ವಹಿಸುವ ಸಾವಯವ ಕೃಷಿ ವಿನಿಮಯ ಕೇಂದ್ರವನ್ನು ಆರಂಭಿಸಲಾಗುವುದು ಎಂದ ಅವರು,ಉತ್ಪಾದಕ ಮತ್ತು ಗ್ರಾಹಕ ಎಂಬ ಸಂಬಂಧದಲ್ಲಿ ಪರಿವರ್ತನೆಯನ್ನು ತರುವುದೇ ಇದರ ಮುಖ್ಯ ಉದ್ದೇಶ ಎಂದರು.ಎಲ್ಲವನ್ನೂ ಹಣದ ಮುಖಾಂತರ ಅಳೆಯದೆ ಅನ್ನದಾತನನ್ನು ಗೌರವಿಸುವುದು, ಅದೇ ರೀತಿ ಅನ್ನದಾತ ಕೇವಲ ಲಾಭವನ್ನು ನೋಡದೆ ರಾಸಾಯಿನಿಕ ಗೊಬ್ಬರ ಬಳಸದೆ ತಾನು ಕೈತೋಟದಲ್ಲಿ ತನಗೋಸ್ಕರ ಬೆಳೆಯುವಂತದ್ದನ್ನೇ ಗ್ರಾಹಕನಿಗೆ ನೀಡುವ ಬಗ್ಗೆ ಯೋಚಿಸುವಂತೆ ಮಾಡುವುದೇ ಸಾವಯವ ಕೃಷಿ ಮಿಷನ್ ನ ಉದ್ದೇಶ ಎಂದು ಅವರು ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಶ್ರೀ ವತ್ಸ, ಅರುಣ್, ಜಂಟಿ ಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್, ರಾಜ್ಯ ಸಮಿತಿ ಸದಸ್ಯ ಬಿ.ಕೆ. ರಮೇಶ್ ಅವರು ಉಪಸ್ಥಿತರಿದ್ದರು.

Thursday, August 6, 2009

ಎಚ್ 1 ಎನ್ 1 ತಡೆಗೆ ಮುನ್ನೆಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

ಮಂಗಳೂರು,ಆ.6: ಮಂಗಳೂರಿನಲ್ಲಿ ಆರಂಭದಿಂದ ಇದುವರೆಗೆ 9 ಎಚ್ 1 ಎನ್1 ಸೋಂಕು ವರದಿಯಾಗಿದ್ದು, ಇದರಲ್ಲಿ ಮೂವರ ರಕ್ತದ ಮಾದರಿ ಬಂದಿದ್ದು, ಒಂದು ಮಾತ್ರ ಪಾಸಿಟಿವ್ ವರದಿ ಬಂದಿದೆ. ಇನ್ನುಳಿದ 5 ಮಾದರಿಗಳನ್ನು ನಿನ್ನೆ ಮಣಿಪಾಲ ಕೆಎಂಸಿ ಮತ್ತು ದೆಹಲಿಯ ಎನ್ ಸಿ ಡಿಸಿ( ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋ ಲ್)ಗೆ ಮಾದರಿಗಳನ್ನು ಕಳುಹಿಸಲಾಗಿದ್ದು, ಇದರಲ್ಲಿ 3 ಪಾಸಿಟಿವ್ ಆಗಿ ಬಂದಿದೆ. ಈ ಹಿನ್ನಲೆಯಲ್ಲಿ ಎಚ್1ಎನ್1 ಸೊಂಕಿತರ ಒಟ್ಟು ಸಂಖ್ಯೆ 4 ಕ್ಕೇರಿದೆಎಂದು ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಇಂದು ಪತ್ತೆಯಾದ ಮೂವರು ಎಚ್1ಎನ್1 ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು , ಇವರ ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಮಂಗಳೂರಿನ ಎನ್ ಐ ಟಿ ಕೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಧ್ಯಾಹ್ನವೇ ಇವರ ಮಾದರಿಯನ್ನು ಪರೀಕ್ಷೆಗಾಗಿ ವೈದ್ಯಕೀಯ ಪ್ರಯೋಗಲಯಕ್ಕೆ ಕಳುಹಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರು ಬಂದಿಳಿಯುವುದರಿಂದ ವಿಶೇಷ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಈ ರೋಗ ತಪಾಸಣೆಗೆಂದೇ 12 ಸದಸ್ಯರಿರುವ ವೈದ್ಯಕೀಯ ವಿಶೇಷ ತಂಡವನ್ನು ರಚಿಸಲಾಗಿದೆ. ಮತ್ತು ಪ್ರತೀ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಆದ್ಯತೆ ನೀಡಿ ಸಹಕಾರ ನೀಡಲು ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಹೇಳಿದ್ದಾರೆ.
ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿರುವ ಅವರು, ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ರೋಗ ತಡೆಗೆ ಹಾಗೂ ಮುನ್ನೆಚ್ಚರಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.

ಸಮುದ್ರ ರಾಜನಿಗೆ ಪೂಜೆ

ಮಂಗಳೂರು,ಆ.6:ಶ್ರಾವಣ ಮಾಸದ ಶುದ್ಧಪೂರ್ಣಿಮೆಯಂದು ಪ್ರತಿ ವರ್ಷದಂತೆ ಈ ಬಾರಿಯೂ ಮಂಗಳೂರಿನ ಏಳುಪಟ್ನ ಮೊಗವೀರ ಸಂಯುಕ್ತ ಸಭಾದ ಆಶ್ರಯದಲ್ಲಿ ಬೋಳೂರು ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಸಂಭ್ರಮದಿಂದ ಮೊಗವೀರ ಬಾಂಧವರು ಸಮುದ್ರ ಪೂಜೆಯನ್ನು ಆಚರಿಸಿದರು.

ಉದ್ಯೋಗಖಾತ್ರಿ ಯೋಜನೆಗೆ ಚಾಲನೆ

ಬಾಳೆಪುಣಿ ಗ್ರಾಮದ ಬಳ್ಳುಕೊರಗರ ಜಮೀನು ಅಭಿವೃದ್ಧಿಪಡಿಸಿ ತೆಂಗಿನತೋಟ ನಿರ್ವಹಣೆ ಕಾರ್ಯ ಆರಂಭಿಸಿ ಉದ್ಯೋಗ ಖಾತ್ರಿ ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ಶಿವಶಂಕರ್, ಡಿ ಎಸ್ ಪ್ರಾಣೇಶ್ ರಾವ್, ಜಿ. ಪಂ. ಸದಸ್ಯರಾದ ಎ ಸಿ ಭಂಡಾರಿ, ಮಮತಾ ಗಟ್ಟಿ, ತಾ.ಪಂ. ಸದಸ್ಯ ಚಂದ್ರಹಾಸ ಕರ್ಕೆರಾ, ಉಮ್ಮರ ಫಜೀರಾ, ಗ್ರಾ.ಪಂ. ಅಧ್ಯಕ್ಷ ನಯನ ಮಾಣೈ, ಇಲಾಖಾಧಿಕಾರಿಗಳು ಹಾಗೂ ಸಂಘಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕಿನ ನರಿಂಗಾನದ ಪೊಟ್ಟೊಳಿಕೆ ಆದಿವಾಸಿ ಸಮುದಾಯದ ತನಿಯಾರು ಎಂಬವರ ಜಮೀನಿನಲ್ಲಿ ಅಡಿಕೆ ಗಿಡ ನೆಡುವುದರ ಮೂಲಕ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಡಿ ಎಸ್ ಪ್ರಾಣೇಶ್ ರಾವ್, ಜಿ. ಪಂ. ಸದಸ್ಯರಾದ ಎ ಸಿ ಭಂಡಾರಿ,ತಾ.ಪಂ. ಅಧ್ಯಕ್ಷ ಬಾಬು, ಸದಸ್ಯ ಚಂದ್ರಹಾಸ ಕರ್ಕೆರಾ ಮುಂತಾದವರು ಉಪಸ್ಥಿತರಿದ್ದರು.

Monday, August 3, 2009

ರಸಗೊಬ್ಬರ ಬಳಕೆ ಬಗ್ಗೆ ರೈತರಿಗೆ ಸಲಹೆ

ಮಂಗಳೂರು,ಆ.3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಯುಕ್ತ (ಕಾಂಪ್ಲೆಕ್ಸ್) ರಸಗೊಬ್ಬರ ಸರಬರಾಜಿನಲ್ಲಿ ಕೊರತೆ ಇದ್ದರೂ ಯೂರಿಯಾ, ರಾಕ್ ಪಾಸ್ಫೇಟ್,ಮ್ಯೂರಿಯೇಟ್ ಆಪ್ ಪೊಟ್ಯಾಷ್, ಡಿ ಎ ಪಿ 10:26:26:, 20:20:0:13 ರಸಗೊಬ್ಬರ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಮಾರುಕಟ್ಟೆಯಲ್ಲಿ ಮೇಲ್ಕಂಡ ಗೊಬ್ಬರಗಳು ಲಭ್ಯವಿದ್ದು, ಬೆಳೆಗಳ, ಪೋಷಕಾಂಶಗಳ ಅವಶ್ಯಕತೆಗೆ ತಕ್ಕಂತೆ ಬೆಳೆಗಳಿಗೆ ಉಪಯೋಗಿಸಿ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಮಿಶ್ರಣ ಗೊಬ್ಬರ ಕೊಡುವ ಪೋಷಕಾಂಶಗಳ ಬಗ್ಗೆ ಮತ್ತು ಸಂಯುಕ್ತ ರಸಗೊಬ್ಬರ ಮಿಶ್ರಣ ತಯಾರಿಕೆ ಕೋಷ್ಟಕಗಳು ಎಲ್ಲಾ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಅಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದ್ದು, ರೈತರು ಇಂಥದೇ ಗೊಬ್ಬರ ಬೇಕೆಂದು ಕಾಯದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ರಸಗೊಬ್ಬರಗಳ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

Sunday, August 2, 2009

ಬೆಳ್ತಂಗಡಿ, ಸುಳ್ಯದಿಂದ ಪಾಯಿಂಟ್ ಆಪ್ ಸೇಲ್: ಹೆಚ್. ಹಾಲಪ್ಪ

ಮಂಗಳೂರು,ಆ.2:ಪಡಿತರ ವಿತರಣೆಯಲ್ಲಿ ಮೋಸವಾಗದಂತೆ ಅರ್ಹ ಪಡಿತರದಾರರು ಮಾತ್ರ ಪಡಿತರವನ್ನು ಪಡೆಯುವಂತೆ ವ್ಯವಸ್ಥೆಯನ್ನು ರೂಪಿಸಲು ಪಾಯಿಂಟ್ ಆಪ್ ಸೇಲ್ ವ್ಯವಸ್ಥೆಯನ್ನು ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಿಂದ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹೆಚ್. ಹಾಲಪ್ಪ ಅವರು ತಿಳಿಸಿದರು.
ಇಂದು ಬೆಳ್ತಂಗಡಿ ತಾಲೂಕು ಪಂಚಾಯಿತಿಯಲ್ಲಿ ಈ ಸಂಬಂಧ ಏರ್ಪಡಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫೋಟೋ ಪಡಿತರ ಚೀಟಿ ವಿತರಿಸುವುದರಲ್ಲೂ ಸುಳ್ಯ, ಬೆಳ್ತಂಗಡಿ ತಾಲೂಕುಗಳು ಮುಂದಿದ್ದು, ಇಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾದ ಮಾದರಿಯನ್ನು ಮುಂದಿಟ್ಟು ರಾಜ್ಯದೆಲ್ಲೆಡೆ ಪಡಿತರ ವಿತರಿಸುವ ವ್ಯವಸ್ಥೆಯಾದ ಪಾಯಿಂಟ್ ಅಫ್ ಸೇಲ್ ನ್ನು ಜಾರಿಗೆ ತರಲು ನಿರ್ಧರಿಸಿರುವುದಾಗಿ ನುಡಿದರು.
ಪಡಿತರ ಪಡೆಯಲು ಕುಟುಂಬದ 12 ರ ಹರೆಯಕ್ಕಿಂತ ಹಿರಿಯವರು ಅಂಗಡಿಗೆ ಬಂದು ತಮ್ಮ ಹೆಬ್ಬೆಟ್ಟನ್ನು ಯಂತ್ರದಲ್ಲಿ ದಾಖಲಿಸಿದರೆ ಅವರ ಪಡಿತರವನ್ನು ಪಡೆಯಲು ಸಾಧ್ಯ ಎಂದ ಅವರು, ಫೋಟೋ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬವೆಸಗುತ್ತಿರುವ ಕಾಮೆಟ್ ನವರಿಗೆ ದಂಡ ಹಾಕುವ ಕುರಿತು ಚಿಂತಿಸಲಾಗುತ್ತಿದೆ ಎಂದರು. ಪಡಿತರ ವ್ಯವಸ್ಥೆಯಲ್ಲಿನ ಲೋಪದೋಷ ನಿವಾರಣೆಗೆ ಪಡಿತರ ಅಂಗಡಿಯವರ ಸಹಕಾರ ಅತಿಮುಖ್ಯವಾಗಿದ್ದು, ಅವರಿಗಿರುವ ಮಾಹಿತಿ ಇತರರಿಗಿಲ್ಲ; ಹಾಗಾಗಿ ಅವರ ಸಂಪೂರ್ಣ ಸಹಕಾರವನ್ನು ವ್ಯವಸ್ಥೆಯ ಸುಧಾರಣೆಗೆ ನಿರೀಕ್ಷಿಸಲಾಗಿದ್ದು, ಸಹಕಾರದಲ್ಲಿ ನಿರ್ಲಕ್ಷತೆ ಕಂಡು ಬಂದರೆ ಖಾಸಗಿಯವರಿಂದ ಪಡಿತರ ಅಂಗಡಿಯನ್ನು ಹಿಂದಕ್ಕೆ ಪಡೆದು ಛತ್ತೀಸ್ ಘಡದ ಮಾದರಿಯಲ್ಲಿ ರಾಜ್ಯದಲ್ಲೂ ಸರ್ಕಾರವೇ ಪಡಿತರ ಅಂಗಡಿ ಆರಂಭಿಸಲು ಯೋಚಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಶಾಸಕರಾದ ವಸಂತ ಬಂಗೇರ, ಅಂಗಾರ, ಜಿ. ಪಂ. ಅಧ್ಯಕ್ಷ ವೆಂಕಟ್ ದಂಬೇಕೋಡಿ, ಜಿ.ಪಂ. ಸದಸ್ಯರಾದ ಭಾಗೀರಥಿ,ಪುತ್ತೂರು ಉಪವಿಭಾಗಾಧಿಕಾರಿ ಡಾ. ಹರೀಶ್,ತಹಸೀಲ್ದಾರ್, ಆಹಾರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಮಂಗಳೂರಿನ ಬೈಕಂಪಾಡಿ ಕೈಗಾರಿಕ ಪ್ರದೇಶದ ಕೆನ್ ವಿನ್ ಗೋದಾಮಿಗೆ ಅನಿರೀಕ್ಷಿತ ದಾಳಿ ನಡೆಸಿದ ಆಹಾರ ಸಚಿವರು 23,000 ಲೀಟರ್ ಸೀಮೆ ಎಣ್ಣೆ ಮತ್ತು ಡೀಸಿಲನ್ನು ಟ್ಯಾಂಕರುಗಳ ಸಮೇತ ವಶಪಡಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ.

Saturday, August 1, 2009

ಸ್ತನ್ಯಪಾನ ಸಪ್ತಾಹ ಉದ್ಘಾಟನೆ

ಮಂಗಳೂರಿನ ರೋಶನಿ ನಿಲಯದಲ್ಲಿ ಆಹಾರ ಮತ್ತು ಪೌಷ್ಠಿಕತಾ ಮಂಡಳಿ ಹಾಗೂ ಮಹಿಳಾ ಮತ್ತು ಶಿಶು ಕಲ್ಯಾಣ ಖಾತೆ ಆಯೋಜಿಸಿದ್ದ ಸ್ತನ್ಯ ಪಾನ ಸಪ್ತಾಹ ಕಮ್ಮಟವನ್ನು ಉದ್ದೇಶಿಸಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರು ಮಾತನಾಡಿದರು.