Sunday, February 28, 2010

ಅವಿಭಜಿತ ಜಿಲ್ಲೆಗೆ ಕುಡಿಯುವ ನೀರಿಗೆ ತಲಾ 2ಕೋಟಿ:ಸಿಎಂ ಯಡಿಯೂರಪ್ಪ

ಮಂಗಳೂರು,ಫೆ.28:ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವವನ್ನು ನಿವಾರಿಸಲು ಅವಳಿ ಜಿಲ್ಲೆಗಳಿಗೆ ತಲಾ 2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದರು. ಅವರಿಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಶ್ರೀ ವೈದ್ಯನಾಥೇಶ್ವರ ದೇವಾಲಯದ ಸಂಕ್ರಾಂತಿ ಮೈದಾನದಲ್ಲಿ ಕ್ರಿಮಿನಾಶಕ ಸಿಂಪಡಣೆಯಿಂದ ತೊಂದರೆಗೀಡಾದ ಸಂತ್ರಸ್ತರಿಗೆ ಪರಿಹಾರ ವಿತರಣೆ ಹಾಗೂ ಜಿಲ್ಲಾ ಪಂಚಾಯತ್ ನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಜನರ ಸಮಸ್ಯೆಗೆ ಸ್ಪಂದಿಸುವ ಜನರ ಸರ್ಕಾರದ ನೇತೃತ್ವ ವಹಿಸಿರುವ ತಾನು, ಸಾರ್ವಜನಿಕರ ಅದರಲ್ಲೂ ಮುಖ್ಯವಾಗಿ ಗ್ರಾಮೀಣರ ಸಮಸ್ಯೆಗೆ ತಕ್ಷಣವೇ ಸ್ಪಂದಿಸುತ್ತಿದ್ದು, ವಿಧಾನಸಭೆಯಲ್ಲಿ ಸ್ಥಳೀಯರ ಅಂಗವೈಕಲ್ಯ ಹಾಗೂ ಕ್ಯಾನ್ಸರ್ ರೋಗದ ಬಗ್ಗೆ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ ಅವರು ಗಮನ ಸೆಳೆದಾಗ ಸಂತ್ರಸ್ತರಿಗೆ ಪರಿಹಾರ ನೀಡಲು ತಕ್ಷಣವೇ ಕಾರ್ಯೋ ನ್ಮುಖವಾದ ಬಗ್ಗೆ ವಿವರಿಸಿದರು. ಮಾರ್ಚ್ 5 ರಂದು ಮಂಡಿಸುವ ಬಜೆಟ್ ನಲ್ಲಿ ರೈತರ ಮತ್ತು ಗ್ರಾಮೀಣರ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಡಲಾಗಿದೆ.ರಾಜ್ಯ ಎದುರಿಸುತ್ತಿರುವ ವಿದ್ಯುತ್ ಅಭಾವ ನಿವಾರಿಸಲು ವಿದ್ಯುತ್ ಖರೀದಿಗೆ ಸರ್ಕಾರ ಮುಂದಾಗಿದ್ದು, 800 ಮೆಗಾವ್ಯಾಟ್ ವಿದ್ಯುತ್ ನ್ನು ಇತರ ಮೂಲಗಳಿಂದ ಖರೀದಿಸಿ ರಾಜ್ಯದ ವಿದ್ಯುತ್ ಕ್ಷಾಮ ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಿಂಡಿ ಅಣೆಕಟ್ಟು ನಿರ್ಮಿಸಲು ಈ ಬಾರಿಯ ಬಜೆಟ್ ನಲ್ಲಿ ಅನುದಾನ ಮೀಸಲಿಡಲಿದ್ದೇನೆ ಭರವಸೆಯನ್ನು ಸಭೆಯಲ್ಲಿ ನೀಡಿದರು. ಕ್ರಿಮಿನಾಶಕ ಸಿಂಪಡಣೆ ಯಿಂದಾಗುವ ಅನಾ ಹುತಗಳನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕೆ ವಹಿಸುವ ತೀರ್ಮಾನ ಕೈಗೊಳ್ಳುವ ತುರ್ತು ಅಗತ್ಯವನ್ನು ಪ್ರತಿ ಪಾದಿಸಿದ ಅವರು, ಸಂತ್ರಸ್ತರಿಗೆ ಪರಿಹಾರ ಒದಗಿಸಲು ನಿಯಾಮ ವಳಿಗಳನ್ನು ಸಡಿಲಿಸಿ ಅತ್ಯಂತ ಕಡಿಮೆ ಸಮಯದಲ್ಲಿ ಪರಿಹಾರ ವಿತರಿಸಲು ಜಿಲ್ಲಾಡಳಿತ ಸಂಪೂರ್ಣ ಸಹಕರಿಸಿದೆ ಎಂದ ಮುಖ್ಯಮಂತ್ರಿಗಳು, ಪರಿಹಾರದಿಂದ ವಂಚಿತರಾದ ಕ್ಯಾನ್ಸರ್ ಪೀಡಿತರಿಗೂ ತಕ್ಷಣವೇ 400 ರೂ.ಮಾಸಾಶನ ವಿತರಿಸಲು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಸಂತ್ರಸ್ತರ ಪುನರ್ ವಸತಿ ಕೇಂದ್ರಕ್ಕೆ 25ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದ ಮುಖ್ಯಮಂತ್ರಿಗಳು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಪುನರ್ವಸತಿ ಕೇಂದ್ರ ನಡೆಸಲು ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಜುಮ್ಮಾ ಮಸೀದಿ ಅಭಿವೃದ್ಧಿಗೆ 2 ಲಕ್ಷ ರೂ.,ಶ್ರೀರಾಮಸೇವಾ ಟ್ರಸ್ಟ್ ಗೆ 10 ಲಕ್ಷ ರೂ.ನೆರವು ಘೋಷಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್, ಯಶವಂತಪುರ ಶಾಸಕರಾದ ಶೋಭಾ ಕರಂದ್ಲಾಜೆ ಅವರು ಮಾತನಾಡಿದರು.ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಸ್ವಾಗತಿಸಿದರು. ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ಸಂತೋಷ್ ಕುಮಾರ್ ಭಂಡಾರಿ, ಶಾಸಕರಾದ ಎನ್. ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ,ಐಜಿ ಗೋಪಾಲ್ ಹೊಸೂರ್, ಸಿಇಒ ಶಿವಶಂಕರ್ ಅವರು ವೇದಿಕೆಯಲ್ಲಿದ್ದರು.

Saturday, February 27, 2010

ಮಂಗಳಾ ಕ್ರೀಡಾಂಗಣದ ಸಮಗ್ರ ಅಭಿವೃದ್ದಿಗೆ ಕ್ರಮ : ಸಚಿವ ಗೂಳಿಹಟ್ಟಿ ಶೇಖರ್


ಮಂಗಳೂರು, ಫೆಬ್ರವರಿ,27: ಮಂಗಳೂರಿನ ಮಂಗಳಾ ಕ್ರೀಡಾಂ ಗಣವನ್ನು ಸಮಗ್ರವಾಗಿ ಅಭಿವೃದ್ದಿ ಗೊಳಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಕ್ರೀಡಾ ಸಚಿವ ಗೂಳಿ ಹಟ್ಟಿ ಶೇಖರ್ ಅವರು ಭರವಸೆ ನೀಡಿದ್ದಾರೆ. ಮಂಗಳೂರಿಗೆ ಆಗಮಿಸಿದ ಸಚಿವರು ಮಂಗಳಾ ಕ್ರೀಡಾಂಗಣ, ಈಜು ಕೊಳ ಮತ್ತು ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣ ವನ್ನು ವೀಕ್ಷಣೆ ಮಾಡಿ, ಮಂಗಳೂರು ದಕ್ಷಿಣ ಶಾಸಕ ಎನ್. ಯೋಗಿಶ್ ಭಟ್, ಕ್ರಿಡಾಪಟುಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕ್ರಿಡಾ ಮತ್ತು ಯುನಜನ ಸೇವಾ ಇಲಾಖೆಯನ್ನು ಇನ್ನಷ್ಟು ಸದ್ರಢಗೊಳಿಸಲು ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಹೆಚ್ಚಿನ ಅನುದಾನವನ್ನು ನಿರೀಕ್ಚಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಕ್ರಿಡಾ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ವಾಲಿಬಾಲ್ ಮತ್ತು ಅತ್ಲೆಟಿಕ್ ಕ್ರಿಡಾ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವಂತೆ ಉತ್ತೇಜನದ ಮಾತುಗಳನ್ನಾಡಿದರು.

'ಪಾರದರ್ಶಕ ವ್ಯವಸ್ಥೆಗೆ ಮಾಹಿತಿ ಹಕ್ಕು ಉತ್ತಮ ಅಸ್ತ್ರ'

ಮಂಗಳೂರು,ಫೆ.27:ಮಾಹಿತಿ ಹಕ್ಕು ಪಾರದರ್ಶಕ ವ್ಯವಸ್ಥೆಗೆ ರಚನೆಗೆ ಅತ್ಯುತ್ತಮ ಅಸ್ತ್ರವಾಗಿದ್ದು, ಸಾರ್ವಜನಿಕರು ಈ ಹಕ್ಕಿನ ಸದ್ಬಳಕೆ ಮಾಡಿಕೊಳ್ಳಬೇಕೆಂದು ಬೆಂಗಳೂರು ಮಿರರ್ ಪತ್ರಿಕೆಯ ಮೈಸೂರಿನ ಹಿರಿಯ ವರದಿಗಾರ ನಾಗರಾಜ ದೀಕ್ಷಿತ್ ಹೇಳಿದರು.
ಇಂದು ನಗರದ ವಾಣಿಜ್ಯ ತೆರಿಗೆ ಇಲಾಖಾ ನೌಕರರ ಸೌಧ ಕೊಟ್ಟಾರದಲ್ಲಿ ಇಲಾಖೆಯ ಸಹಕಾರ ದೊಂದಿಗೆ ಏರ್ಪಡಿಸಿದ ಮಾಹಿತಿ ಹಕ್ಕು ಕಾರ್ಯಾ ಗಾರದಲ್ಲಿ ಮಾತನಾಡುತ್ತಿದ್ದರು. ಸರ್ಕಾರಿ ಅಧಿಕಾರಿಗಳು ಮಾಹಿತಿ ಹಕ್ಕು ಕಾಯಿದೆ ಬಗ್ಗೆಗಿನ ಋಣಾತ್ಮಕವಾಗಿ ಪ್ರತಿಕ್ರಿಯಿಸದೆ, ಅದರಿಂದ ಜನರಿಗಾಗುವ ಅನುಕೂಲಗಳನ್ನು ಗಮನದಲ್ಲಿರಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನಬದ್ಧ ಹಕ್ಕನ್ನು ನೀಡಿದ್ದು,ಈ ಹಕ್ಕುಗಳನ್ನು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮಾಹಿತಿ ಹಕ್ಕು ಇನ್ನಷ್ಟು ಬಲವನ್ನು ನೀಡಿದೆ ಎಂದರು.ಮಾಹಿತಿ ಹಕ್ಕಿನ ಇತಿಹಾಸ, ಬೆಳವಣಿಗೆ ಕೊನೆಯ ಕಾಯಿದೆಯಾಗಿ ರೂಪು ಗೊಂಡಿದ್ದು, ಅರ್ಜಿ ಸಲ್ಲಿಸುವ ವಿಧಾನ,ಮಾಹಿತಿ ಪಡೆಯುವ ವಿಧಾನ ಈ ಕಾಯಿದೆ ಯನ್ನು ಅಧಿಕಾರಿಗಳು ಸಕರಾ ತ್ಮಕವಾಗಿ ತೆಗೆದುಕೊಳ್ಳುವ ಬಗ್ಗೆ ನೆರೆದವರಿಗೆ ವಿವರವಾಗಿ ಮಾಹಿತಿ ನೀಡಿದರು.
ಸಂವಾದದಲ್ಲಿ ಮಾಹಿತಿ ನೀಡಲು ಇರುವ ಮಾನವ ಸಂಪನ್ಮೂಲದ ಕೊರತೆ, ಕೆಲಸದ ಹೊರೆಯ ಬಗ್ಗೆಯೂ ಚರ್ಚೆ ನಡೆಯಿತು. ವೇದಿಕೆಯಲ್ಲಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರಾದ ರೋಹಿಣಿ, ವಾಣಿಜ್ಯ ಇಲಾಖೆಯ ಅಧಿಕಾರಿಗಳಾದ ಗೋಪಾಲಗೌಡ ಬೆಂಗಳೂರು,ಮೇಲುಗಿರಿಯಪ್ಪ, ಮಂಗಳೂರು ವಿಭಾಗದ ಜಿ.ದಿವಾಕರ್ ರಾವ್, ಎನ್.ರಾಮಚಂದ್ರ ಭಟ್, ಯತೀಂದ್ರ,ಕಲಾವಿದ ಗಿರೀಶ್ ನಾವಡ ಉಪಸ್ಥಿತರಿದ್ದರು.

Friday, February 26, 2010

ಮನಪಾ ಗೆ ನೂತನ ಮೇಯರ್ - ಉಪಮೇಯರ್

ಮಂಗಳೂರು, ಫೆಬ್ರವರಿ,26 : ಮಂಗಳೂರು ಮಹಾ ನಗರ ಪಾಲಿಕೆಯ 2010 -11 ಸಾಲಿಗೆ ನೂತನ ಮೇಯರ್ ಆಗಿ ಶ್ರೀಮತಿ ರಜನಿ ದುಗ್ಗಣ್ಣ ಮತ್ತು ಉಪ ಮೇಯರ್ ಆಗಿ ರಾಜೇಂದ್ರ ಅವರು ಆಯ್ಕೆಯಾಗಿದ್ದು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಸಮಾರಂಭದಲ್ಲಿ ಇಂದು ಅಧಿಕಾರ ವಹಿಸಿಕೊಂಡರು.

ಗೋಡಂಬಿಯಿಂದ 3 ಸಾವಿರ ಕೋಟಿ ವಿದೇಶಿ ವಿನಿಮಯ : ಡಾ.ವೆಂಕಟೇಶ್

ಮಂಗಳೂರು,ಫೆ.26:ಮೂರು ಸಾವಿರ ಕೋಟಿ ರೂ. ವಿದೇಶಿ ವಿನಿಮಯ ಗೋಡಂಬಿ ರಫ್ತಿನಿಂದ ಬರುತ್ತಿದ್ದು, ಸುಮಾರು 15 ಲಕ್ಷ ಜನರಿಗೆ ಉದ್ಯೋಗವನ್ನು ಗೇರು ಬೆಳೆ ನೀಡಿದೆ ಎಂದು ಕೇರಳದ ಕೊಚ್ಚಿಯ ಗೇರು ಅಭಿವೃದ್ಧಿ ನಿಗಮದ ನಿರ್ದೇಶಕರಾದ ಡಾ.ವೆಂಕಟೇಶ್ ಎನ್. ಹುಬ್ಬಳ್ಳಿ ಅವರು ಹೇಳಿದರು.ಇಂದು ಉಳ್ಳಾಲ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಗೇರು-ಮೇಳ ಗೇರು ಬೆಳೆ ತರಬೇತಿ ಹಾಗೂ ಗೇರು ಬೆಳೆ ಕ್ಷೇತ್ರೋತ್ಸವ ಉದ್ಘಾಟನೆ ಮಾಡಿ ಅವರು ಮಾತನಾಡುತ್ತಿದ್ದರು.
ಭಾರತ 2008-09ನೇ ಸಾಲಿನಲ್ಲಿ 6,95,000 ಮೆಟ್ರಿಕ್ ಟನ್ ಗೋಡಂಬಿ ಉತ್ಪಾದನೆ ಮಾಡಿದ್ದು, 1,09,523 ಮೆ.ಟನ್ ಗೋಡಂಬಿ ತಿರುಳನ್ನು ರಫ್ತು ಮಾಡಿ 26.06 ಕೋಟಿ ರೂಪಾಯಿ ಲಾಭ ಗಳಿಸಿದೆ. ಅಮೆರಿಕಾ, ನೆದರ್ ಲ್ಯಾಂಡ್, ಯು.ಎ.ಇ, ಜಪಾನ್ ಮುಂತಾದ ದೇಶಗಳು ಪ್ರಮುಖವಾದ ಗೋಡಂಬಿ ಆಮದು ರಾಷ್ಟ್ರಗಳಾಗಿವೆ.ಭಾರತದಲ್ಲಿ ಬಂಜರು ಭೂಮಿಯಲ್ಲಿ ಮಾತ್ರ ಗೇರು ಬೆಳೆಯುತ್ತಿರುವುದರಿಂದ ಉತ್ಪಾದನಾ ಪ್ರಮಾಣ ಕಡಿಮೆಯಾಗಿದೆ. ಈ ಬಗ್ಗೆ ಕೃಷಿಕರಿಗೆ ಮಾಹಿತಿ ಮತ್ತು ಪ್ರೋತ್ಸಾಹ ನೀಡಬೇಕಾದ ಅಗತ್ಯವನ್ನು ಮನಗಂಡು ಇಂತಹ ಮೇಳಗಳನ್ನು ಆಯೋಜಿಸಲಾಗುತ್ತಿದ್ದು ಕೃಷಿಕರು ಇದರ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಯಡಿ ಗೇರುಬೆಳೆಗೆ ಆದ್ಯತೆ ನೀಡಲಾಗಿದ್ದು, 20,000 ರೂ.ಗಳ ಸಬ್ಸಿಡಿಯನ್ನು ನೀಡಿದೆ. ವಿಯಟ್ನಾಂ ನಂತಹ ದೇಶದಲ್ಲಿ ಫಲವತ್ತಾದ ಭೂಮಿಯಲ್ಲಿ ಗೇರು ಕೃಷಿ ನಡೆಸಿ ಹೆಚ್ಚಿನ ಲಾಭವನ್ನು ಕೃಷಿಕರು ಪಡೆಯು ತ್ತಿದ್ದಾರೆ. ಗೇರುಬೀಜ ಮಾತ್ರವಲ್ಲದೆ ಗೇರು ಹಣ್ಣಿನಿಂದ ಜ್ಯೂಸ್ ತಯಾರಿಕೆಗೆ ಒತ್ತು ನೀಡಲಾಗುತ್ತಿದ್ದು, ಗೇರು ಹಣ್ಣು ಬೇಗನೆ ಕೊಳೆಯುವುದರಿಂದ ಪ್ರಿಸರ್ವೇಟಿವ್ ಬಳಸಿ ಸ್ಯಾಚೆಟ್ ಮೂಲಕ ಮಾರ್ಕೆಟಿಂಗ್ ಮಾಡುವ ಬಗ್ಗೆಯೂ ಕೃಷಿ ಸಂಶೋಧನಾ ಕೇಂದ್ರ ಚಿಂತನೆ ನಡೆಸುತ್ತಿದೆ ಎಂದರು.
ಕ್ಚೇತ್ರೋತ್ಸವದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಬ್ರಹ್ಮಾವರದ ಸಹ ಸಂಶೋಧನ ಕೇಂದ್ರದ ಡಾ.ಎಮ್. ಹನುಮಂತಪ್ಪ ಅವರು, ಗೇರು ಬೆಳೆಯ ಪ್ರದೇಶ ವಿತರಣೆ ಮತ್ತು ಹೆಚ್ಚು ಇಳುವರಿಗೆ ಆದ್ಯತೆ ನೀಡಲಾಗಿದೆ.ಸಂಶೋಧನಾ ಕೇಂದ್ರ ಐದು ರೀತಿಯ ತಳಿಗಳನ್ನು ಬಿಡುಗಡೆ ಮಾಡಿದ್ದು, ಉಳ್ಳಾಲ-1 ರಾಜ್ಯಾದ್ಯಂತ ಹೆಚ್ಚಿನ ಕೃಷಿಕರು ಬಳಸುತ್ತಿದ್ದಾರೆ. ಉಳ್ಳಾಲ-1,ಉಳ್ಳಾಲ-2,ಉಳ್ಳಾಲ-3,ಉಳ್ಳಾಲ-4 ಮತ್ತು ಯು ಎನ್.50 ಗೇರು ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ ವರ್ಷ ರೈತರಿಗಾಗಿ 80,000 ದಿಂದ ಒಂದು ಲಕ್ಷ ಗಿಡ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಅಭಿವೃದ್ಧಿ ಪಡಿಸಿದ ತಳಿಗಳು ಒರಿಸ್ಸಾ ರಾಜ್ಯದಲ್ಲೂ ರೈತರಿಗೆ ಪ್ರಿಯವಾಗಿವೆ ಎಂದರು.
ಶಿಕ್ಷಣ ನಿರ್ದೇಶಕರಾದ ಡಾ. ಜೆ.ವೆಂಕಟೇಶ್ ಗೇರುಕೃಷಿ ಕೈಪಿಡಿ ಬಿಡುಗಡೆ ಮಾಡಿದರು. ಸಂಶೋಧನಾ ನಿರ್ದೇಶಕರಾದ ಡಾ.ಪಿ.ನಾರಾಯಣ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಗೇರು ಸಂಶೋಧನಾ ನಿರ್ದೇಶಕರಾದ ಡಾ.ಎಂ.ಜಿ.ಭಟ್ ವಸ್ತುಪ್ರದರ್ಶನ ಮಳಿಗೆ ಉದ್ಘಾಟಿಸಿದರು. ಉಳ್ಳಾಲ ತೋಟಗಾರಿಕೆ ಸಂಶೋಧನಾ ಕೇಂದ್ರದ ಡಾ.ಲಕ್ಷ್ಮಣ ಸ್ವಾಗತಿಸಿದರು. ಅಚಲ್ ಕ್ಯಾಶ್ಯೂ ಇಂಡಸ್ಟ್ರೀಸ್ ನ ಜಿ.ಎಮ್. ಎಂ.ಎನ್.ಪೈ, ಗೋಡಂಬಿ ಉತ್ಪಾದಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಕಾಮತ್, ನವೋದಯ ಗ್ರಾಮವಿಕಾಸ ಟ್ರಸ್ಟ್ ನ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ, ಪ್ರಗತಿಪರ ಕೃಷಿಕ ನರಹರಿಪ್ರಭು ಉಪಸ್ಥಿತರಿದ್ದರು.
ವಸ್ತು ಪ್ರದರ್ಶನ ಮಳಿಗೆಯಲ್ಲಿ ಮೂಡಬಿದ್ರೆ ಅನ್ವರ್ ಅವರ ತೋಟದ 26 ಕೆಜಿ ತೂಕದ ಚೀನಿಕಾಯಿ, 22 ಕೆ.ಜ.ತೂಗುವ ಬೂದು ಕುಂಬಳಕಾಯಿ ವಿಶೇಷ ಆಕರ್ಷಣೆಯಾಗಿತ್ತು. ಸಾವಯವ ಕೃಷಿ ಬೀಜದ ಪ್ರದರ್ಶನ ಮಳಿಗೆಗಳನ್ನು ರೈತರು ಆಸಕ್ತಿಯಿಂದ ವೀಕ್ಷಿಸಿದರು.

Thursday, February 25, 2010

ಕರ್ತವ್ಯದ ವೇಳೆ ಬಸ್ಸು ಸಿಬಂದಿಗಳ ಮೊಬೈಲ್ ಬಳಕೆಗೆ ಸಂಪೂರ್ಣ ನಿಷೇಧ : ಜಿಲ್ಲಾಧಿಕಾರಿ ಪೊನ್ನುರಾಜ್

ಮಂಗಳೂರು,ಫೆ.25: ಬಸ್ಸುಗಳಲ್ಲಿ ಚಾಲಕರು - ನಿರ್ವಾಹಕರು ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಮತ್ತು ಇಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ ಅವರ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿ. ಪೊನ್ನು ರಾಜ್ ಎಚ್ಚರಿಸಿದ್ದಾರೆ. ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಸಾರಿಗೆ ಅದಾಲತ್ ನಲ್ಲಿ ಮಾತನಾಡಿದ ಅವರು ಈ ಎಚ್ಚರಿಕೆಯನ್ನು ನೀಡಿದ್ದು, ಬಸ್ಸು ಸಿಬಂದಿಗಳು ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವಂತೆ ಸೂಚನೆ ನೀಡಿದರು. ಮೋಬೈಲ್ ಬಳಕೆ, ಅಥವಾ ಇತರ ಪ್ರಯಾಣಿಕರಿಗೆ ತೊಂದರೆ ಆಗುವ ಯಾವುದೇ ದೂರುಗಳನ್ನು ಫೊಟೊ ದಾಖಲೆ ಸಮೇತ ಸಾರ್ವಜನಿಕರು ದೂರು ನೀಡಿದರೆ ಅಂತವರ ಮೇಲೆ ಕಟ್ಟು ನಿಟ್ಟಿನ ಮತ್ತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಬಸ್ ಚಾಲಕರು ಹಾಗೂ ನಿರ್ವಾಹಕರು ಕಡ್ಡಾಯವಾಗಿ ಗುರುತುಪತ್ರ ಧರಿಸಿ ವಾಹನ ಚಲಾಯಿಸಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಪರವಾನಿಗೆ ಪಡೆದ ಬಸ್ಸುಗಳು ತಮ್ಮ ಟ್ರಿಪ್ ಗಳನ್ನು ಕಡಿತಗೊಳಿಸದೆ ಪರವಾನಿಗೆ ಪಡೆದ ಕೊನೆಯ ನಿಲ್ದಾಣದವರೆಗೆ ಸಂಚರಿಸಿ ಕೊನೆಯ ನಿಲ್ದಾಣದಲ್ಲಿ ಲಾಗ್ ಪುಸ್ತಕವನ್ನು ಇರಿಸಿ ಅದರಲ್ಲಿ ಸಹಿ ಮಾಡುವಂತೆ ಸೂಚನೆ ನೀಡಿದರು.ಜೊತೆಗೆ ಬಸ್ಸನ್ನೇರುವ ಸಂದರ್ಭಗಳಲ್ಲಿ ಟಯರ್ ಗಳನ್ನು ಅಡ್ಡ ಹಾಕುವ ಬಗ್ಗೆ ಪರಿಶೀಲಿಸಲು ಪೊಲೀಸ್ ಇಲಾಖೆಗೆ ಸೂಚಿಸಿದರು.
ಖಾಸಗಿ ಬಸ್ ವ್ಯವಸ್ಥೆಗೆ ಪರ್ಯಾಯವಾಗಿ ಕೆಎಸ್ಆರ್ ಟಿಸಿ ಬಸ್ಸುಗಳನ್ನು ನಗರದಲ್ಲಿ ಓಡಿಸುವ ಬಗ್ಗೆ ಸಭೆಯಲ್ಲಿ ಜನಾಭಿಪ್ರಾಯ ವ್ಯಕ್ತವಾಯಿತು. ಖಾಸಗಿ ಬಸ್ಸುಗಳ ಬಗ್ಗೆ ಪರ ವಿರೋಧ ಬಂದಿರುವ 200 ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಪ್ರಥಮ ಹಂತವಾಗಿ ಮಂಗಳೂರಿನಿಂದ ಉಡುಪಿಗೆ 6 ಕೆಎಸ್ ಆರ್ ಟಿ ಸಿ ಬಸ್ಸುಗಳಿಗೆ ಪರ್ಮಿಟ್ ನೀಡುವುದಾಗಿ ಹೇಳಿದರು.
ಜಿಲ್ಲಾ ಎಸ್ಪಿ ಡಾ. ಸುಬ್ರಹ್ಮಣ್ಯ್ಯೇಶ್ವರ ರಾವ್,ಆರ್ ಟಿ ಓ ಪುರುಷೋತ್ತಮ, ಕೆ.ಎಸ್.ಆರ್ ಟಿ.ಸಿ ವಿಭಾಗಿಯ ನಿಯಂತ್ರಣಾಧಿಕಾರಿ ಕರುಂಬಯ್ಯ, ನಗರ ಡಿವೈಎಸ್ಪಿ ಬಿ.ಜೆ. ಭಂಡಾರಿ, ಬಸ್ಸು ಮಾಲಿಕ ಮತ್ತು ಶ್ರಮಿಕ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

24 ಗ್ರಾಮ ಪಂಚಾಯತ್ ಕಟ್ಟಡಗಳಿಗೆ ತಲಾ 16.50 ಲಕ್ಷ ರೂ. ಬಿಡುಗಡೆ

ಮಂಗಳೂರು,ಫೆ.25:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಗ್ರಾಮಪಂಚಾಯಿತಿಗಳಿಗೆ ತಲಾ 15ಲಕ್ಷ ರೂ.ವೆಚ್ಚದಲ್ಲಿ ಗ್ರಾಮಪಂಚಾಯಿತಿ ಕಟ್ಟಡ ನಿರ್ಮಿಸಲು ಹಾಗೂ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸೇವಾ ಕೇಂದ್ರ ನಿರ್ಮಾಣ ಮಾಡಲು 1.50ಲಕ್ಷದಂತೆ ಒಟ್ಟು 16.50ಲಕ್ಷ ರೂ.ಗಳಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ 22ನೇ ಸಾಮಾನ್ಯ ಸಭೆಯಲ್ಲಿ ಈ ಮಾಹಿತಿಯನ್ನು ನೀಡಲಾಯಿತಲ್ಲದೆ, ರಾಜ್ಯದ 103 ಗ್ರಾಮಪಂಚಾಯಿತಿಗಳಿಗೆ ಒಟ್ಟು 17 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ತಾಡಿ,ಸರಪಾಡಿ,ಕರಿಯಂಗಳ, ಪಜೀರು,ಅಲಿಕೆ- ಬೆಳ್ತಂಗಡಿಯ ಆಳದಂಗಡಿ,ಅರಸಿನಮಕ್ಕಿ,ಚಾರ್ಮಾಡಿ,ತಣ್ಣೀರುಪಂತ,ಹೊಸಂಗಡಿ. ಪುತ್ತೂರಿನ ಕನಿಯೂರು,ಬೆಟ್ಟಂಪಾಡಿ,ಬನ್ನೂರು,ಇಟ್ಟೂರು, ಆರ್ಯಾಪು. ಸುಳ್ಯದ ನೆಲ್ಲೂರು ಕೆಮ್ಮಾಜೆ,ಎಡಮಂಗಲ,ಅರಂತೋಡು ಆಲೆಟ್ಟಿ, ಅಜ್ಜಾವರ. ಮಂಗಳೂರಿನ ಕುಪ್ಪೆಪದವು,ಪಡುಮಾರ್ನಾಡು,ಪಾವೂರು,ಗುರುಪುರದಲ್ಲಿ ಗ್ರಾಮಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿದ್ದು,ಕರ್ನಾಟಕ ಭೂಸೇನಾ ನಿಗಮದ ಮುಖಾಂತರ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿದ್ಯುತ್ ವ್ಯತ್ಯಯ,50:54 ಅನುದಾನ,ಕುಡಿಯುವ ನೀರಿನ ಸಮಸ್ಯೆ, ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆ,ಅಕ್ರಮ ಮರಳುಗಾರಿಕೆ,ಕೊರಗರಿಗೆ ರಾಜ್ಯ ಸರ್ಕಾರ ನೀಡಿರುವ 5ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ತಲುಪಿಸುವ ಬಗ್ಗೆ ಸವಿವರ ಚರ್ಚೆಯಾಗಿ, ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ವಿತರಣೆಗೆ ಸಂಬಂಧಿಸಿದಂತೆ ಹೊಸ ನೀತಿ ಅಳವಡಿಸಲು ಮತ್ತು ಅಕ್ರಮ ಮರಳುಗಾರಿಕೆ ತಡೆಗೆ ಜಿಲ್ಲಾ ಪಂಚಾಯಿತಿ ನಿರ್ಣಯ ಅಂಗೀಕರಿಸಿತು.
ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆಯಲ್ಲಿ ಗ್ರಾಮೀಣರಿಗೆ ಅನ್ಯಾಯವಾಗುತ್ತಿದೆ ಎಂಬ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, 389 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಿಂದ 509 ಮೆಗಾವ್ಯಾಟ್ ಗಳಷ್ಟು ಹೆಚ್ಚು ವಿದ್ಯುತ್ ಪಡೆದು ಜನರಿಗೆ ವಿದ್ಯುತ್ ವಿತರಿಸಲು ಕ್ರಮಕೈಗೊಳ್ಳ ಲಾಗಿದೆ ಎಂದು ಉತ್ತರಿಸಿದರು.
ಜಿಲ್ಲೆಯಲ್ಲಿರುವ ಜಲ ವಿದ್ಯುತ್ ಯೋಜನೆ ಗಳಿಂದ 90 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಯಾಗುತ್ತಿದ್ದು, ಜೂನ್ ನಿಂದ ಅಕ್ಟೋಬರ್ ವರೆಗೆ ಮಾತ್ರ ಈ ಯೋಜನೆ ಗಳಿಂದ ವಿದ್ಯುತ್ ಪೂರೈಕೆ ಯಾಗುತ್ತದೆ ಎಂದರು. ಗ್ರಾಮೀಣ ಸಂಪರ್ಕ ಯೋಜನೆಯಡಿ 2008-09 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಮಂಗಳೂರಿನ ರಸ್ತೆ, ಸೇತುವೆ ಮತ್ತು ಕಿರುಸೇತುವೆ ಕಾಮಗಾರಿಗೆ 235 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಸ್ಥಾಯಿಸಮಿತಿ ಸದಸ್ಯರಾದ ವೆಂಕಟದಂಬೇಕೋಡಿ, ರಾಜಶ್ರೀ ಹೆಗಡೆ, ಸದಾನಂದ ಮಲ್ಲಿ ಉಪಸ್ಥಿತರಿದ್ದರು.

Wednesday, February 24, 2010

ಸಾಮಾಜಿಕ ಸುರಕ್ಷತೆಗೆ ಹೊಸ ಪಿಂಚಣಿ ವ್ಯವಸ್ಥೆ

ಮಂಗಳೂರು,ಫೆ.24:ದೇಶದ ಸಾಮಾನ್ಯ ಪ್ರಜೆಗೂ ವೃದ್ಧಾಪ್ಯದ ದಿನಗಳಲ್ಲಿ ಪಿಂಚಣಿ ನೀಡುವಂತಹ ವಿನೂತನ ಯೋಜನೆಯನ್ನು ಭಾರತ ಸರ್ಕಾರ ಹಮ್ಮಿಕೊಂಡಿದ್ದು,ಈ ನೂತನ ಯೋಜನೆಯಡಿ ಮಂಗಳೂರನ್ನು ಪೈಲಟ್ ಪ್ರೊಜೆಕ್ಟ್ ನಡಿ ಸೇರಿಸಲಾಗಿದೆ ಎಂದು ಪ್ರಾಜೆಕ್ಟ್ ನ ಏಡಿಬಿಯ ಸಂವಹನ ಪರಿಣತ ಆಶೀಶ್ ಅಗರ್ ವಾಲ್ ಹೇಳಿದರು.
ಇಂದು ನಗರದಲ್ಲಿ ಯೋಜನೆ ಸಂಬಂಧ ಆಯೋ ಜಿಸಲಾದ ಒಂದು ದಿನದ ಕಾರ್ಯಾ ಗಾರದಲ್ಲಿ ಯೋಜನೆಯ ಬಗ್ಗೆ ವಿವರಿಸಿದ ಅವರು, ಈಗಾಗಲೇ ಯೋಜನೆ ಯಡಿ ದೇಶದಾದ್ಯಂತ ಇದುವರೆಗೆ 7.5 ಲಕ್ಷ ಖಾತೆಗಳನ್ನು ತೆರೆ ಯಲಾಗಿದ್ದು, 1000 ಕ್ಕೂ ಹೆಚ್ಚು ಸ್ಥಳಗಳಲ್ಲಿ, 21 ಬ್ಯಾಂಕ್ ಗಳಲ್ಲಿ ಸೌಲಭ್ಯವನ್ನು ಪಡೆಯ ಬಹುದಾಗಿದೆ.ಮಂಗಳೂರಿನ ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್, ಐಎಲ್&ಎಫ್ ಎಸ್ ಸೆಕ್ಯೂರಿಟೀಸ್ ಸರ್ವಿಸಸ್ ಲಿಮಿಟೆಡ್, ಯುಟಿಐ ಫೈನಾನ್ಷಿಯಲ್ ಸೆಂಟರ್, ಸಿಎಎಂಎಸ್, ಎಸ್ ಬಿ ಐ, ಮತ್ತು ಆಕ್ಸಿಸ್ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆಯಬಹುದಾಗಿದ್ದು, ಇದೊಂದು ಜನಸ್ನೇಹಿ ಯೋಜನೆಯಾಗಿದೆ ಎಂದು ವಿವರಿಸಿದರು.ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ ಅವರು, ಹೊಸ ಪಿಂಚಣಿ ವ್ಯವಸ್ಥೆ ಜನಪರ, ಸಾಮಾಜಿಕ ಸುರಕ್ಷಾ ಯೋಜನೆ ಯಾಗಿದ್ದು, ಸಾಮಾನ್ಯ ಜನರು ಯೋಜನೆಯ ಸದ್ಬಳಕೆ ಮಾಡಲು ಕರೆನೀಡಿದರು. ಸರ್ಕಾರ ಖಾಸಗಿ ಕಂಪೆನಿಗಳೊಂದಿಗೆ ಜಂಟಿಯಾಗಿ ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಹಮ್ಮಿ ಕೊಳ್ಳುವುದರಿಂದ ಜನ ಸಾಮಾನ್ಯರಿಗೆ ಉಪಕಾರವಾಗಲಿದೆ ಎಂದರು. 2006 ಬಳಿಕ ಸೇವೆಗೆ ಸೇರಿದ ಸರ್ಕಾರಿ ನೌಕರರೂ ಇದರ ಲಾಭವನ್ನು ಪಡೆಯಬಹುದು ಎಂದು ಸಲಹೆ ಮಾಡಿದ ಅವರು, ಕಳೆದ ಎರಡು ದಶಕಗಳಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಾಗಿರುವ ಬದಲಾವಣೆಗಳು ಮತ್ತು ಸರ್ಕಾರದ ಆದ್ಯತಾ ಕ್ಷೇತ್ರಗಳ ಬಗ್ಗೆ ಮಾತನಾಡಿದರು. ಹೊಸ ಪಿಂಚಣಿ ವ್ಯವಸ್ಥೆಯಿಂದ ಸಾಮಾನ್ಯರಿಗೆ ಜೀವನ ಸುರಕ್ಷೆ ಲಭಿಸಲಿದೆ ಎಂದರು.
ಹೊಸ ಪಿಂಚಣಿ ವ್ಯವಸ್ಥೆಯ ಪ್ರಮುಖವಾಗಿ ಎಲ್ಲ ವರ್ಗದ ಜನರಿಗೆ ವೃದ್ಧಾಪ್ಯದಲ್ಲಿ ರಕ್ಷಣೆ ಒದಗಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ಭಾರತ ಸರ್ಕಾರದ ವಿತ್ತ ಮಂತ್ರಾಲಯ ವ್ಯವಸ್ಥೆಗೊಳಿಸಿದೆ ಹಾಗೂ ಅಸಂಘಟಿತ ವಲಯದ ಕಾರ್ಮಿಕರೂ ಸೇರಿದಂತೆ 18 ರಿಂದ 60 ವರ್ಷದೊಳಗಿನ ನಿವಾಸಿ ಅಥವಾ ಅನಿವಾಸಿ ಭಾರತೀಯರಿಗಾಗಿ ಇದೆ.
ಸ್ಟೇಕ್ಹೋ ಕಾರ್ಯಾಗಾರದಲ್ಲಿ ಎಲ್ಲ ಬ್ಯಾಂಕುಗಳ ಪ್ರತಿನಿಧಿಗಳು,ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Tuesday, February 23, 2010

ವೆಂಟೆಡ್ ಡ್ಯಾಂ ಕಾಮಾಗಾರಿ ಎರಡು ವರ್ಷಗಳಲ್ಲಿ ಪೂರ್ಣ: ಸಚಿವ ಪಾಲೇಮಾರ್

ಮಂಗಳೂರು,ಫೆಬ್ರವರಿ,23:ತುಂಬೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವೆಂಟೆಡ್ ಡ್ಯಾಂ ಕಾಮಾಗಾರಿ ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು,ಇದರಿಂದ ಮಂಗಳೂರು ಮಹಾ ನಗರ ಪಾಲಿಕೆಯ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಲಿದೆ ಎಂದು ರಾಜ್ಯ ಬಂದರು, ಪರಿಸರ ಹಾಗೂ ಜೀವಶಾಸ್ತ್ರ ಮತ್ತು ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣಾ ಜೆ.ಪಾಲೇಮಾರ್ ಹೇಳಿದರು.
ಮಂಗಳೂರು ಮಹಾ ನಗರಕ್ಕೆ ಕುಡಿಯುವ ನೀರು ಸರಬ ರಾಜ ಗುತ್ತಿರುವ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ಇಂದು ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ ನಂತರ ನಡೆದ ಕಾರ್ಯ ಕ್ರಮದಲ್ಲಿ ಮಾತ ನಾಡಿದರು. ನೂತನ ಅಣೆಕಟ್ಟು ನಿರ್ಮಾಣದ ಕಾಮಾಗಾರಿ ಈಗಾಗಲೇ ಆರಂಭಗೊಂಡಿದೆ.ಮಂದಿನ 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ನೂತನ ಡ್ಯಾಂ ನಲ್ಲಿ ಸುಮಾರು 14.47 ಮಿಲಿಯನ್ ಕ್ಯೂಬಿಕ್ ಲೀಟರ್ ನೀರು ಶೇಖರಣೆ ಆಗಲಿದ್ದು, ಮಂಗಳೂರಿನ ನಗರದ ಜನತೆಯ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಲಿದೆ ಎಂದರು. ಸ್ಥಳಿಯ ಜನರಿಗೆ ಮತ್ತು ಕೃಷಿ ಭೂಮಿಗೆ ನೂತನ ಅಣೆಕಟ್ಟಿನಿಂದ ಸಮಸ್ಯೆ ಉಂಟಾದರೆ ಅಣೆಕಟ್ಟಿನ ಎತ್ತರವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಸ್ಥಳಿಯ ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ನೂತನ ಅಣೆಕಟ್ಟು ನಿರ್ಮಾಣ ಮಾಡಲಾಗುವುದು ಎಂಬ ಭರವಸೆಯನ್ನು ನೀಡಿದರು.
ಮಂಗಳೂರು ಮೇಯರ್ ಶಂಕರ್ ಭಟ್, ಶಾಸಕ ಯೋಗಿಶ್ ಭಟ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಉಪ ಮೇಯರ್ ರಜನಿ ದುಗ್ಗಣ್ಣ, ನಗರ ಪಾಲಿಕೆ ಆಯುಕ್ತ ಡಾ. ವಿಜಯ ಪ್ರಕಾಶ್, ಪ್ರತಿಪಕ್ಷ ನಾಯಕ ಹರಿನಾಥ್, ನಗರ ಪಾಲಿಕೆ ಸದಸ್ಯರು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಅಕ್ರಮ ಮದ್ಯ ತಡೆಗೆ ನೆರೆ ರಾಜ್ಯಗಳ ಅಬಕಾರಿ ಸಚಿವರೊಂದಿಗೆ ಸಭೆ: ಸಚಿವ ರೇಣುಕಾಚಾರ್ಯ

ಮಂಗಳೂರು,ಫೆ.23:ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಅಬಕಾರಿ ರಾಜಸ್ವ ಸಂಗ್ರಹ ಗುರಿ 6,565 ಕೋಟಿ ನಿಗದಿಯಾಗಿದ್ದು, ಜನವರಿ ತಿಂಗಳಾಂತ್ಯಕ್ಕೆ 5,302.9 ಕೋಟಿ ಸಂಗ್ರಹವಾಗಿದೆ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ಅವರಿಂದು ನಗರದ ಹಲವೆಡೆ ಅಬಕಾರಿ ದಾಳಿ ನಡೆಸಿದ ಬಳಿಕ ಸುದ್ದಿ ಗಾರ ರೊಂದಿಗೆ ಮಾತ ನಾಡುತ್ತಿದ್ದರು. ಮಾರ್ಚ್ ಅಂತ್ಯಕ್ಕೆ 7,000 ಕೋಟಿ ರೂ. ರಾಜಸ್ವ ಸಂಗ್ರಹದ ನಿರೀಕ್ಷೆಯಿದ್ದು,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ ಅಂತ್ಯಕ್ಕೆ 137.04 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 23.96 ಲಕ್ಷ ಹೆಚ್ಚುವರಿ ಸಂಗ್ರಹ ವಾಗಿದೆ ಎಂದರು. ಈವರೆಗೆ 2606 ಅಬಕಾರಿ ದಾಳಿಗಳನ್ನು ನಡೆಸಲಾಗಿದೆ.106 ಮಂದಿಯನ್ನು ಬಂಧಿಸಲಾಗಿದೆ. 128 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂಬ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ನೀಡಿದರು.
ರಾಜ್ಯದಲ್ಲಿ ಕಳ್ಳಭಟ್ಟಿ ಹಾಗೂ ಅಕ್ರಮ ಮದ್ಯಹಾವಳಿ ತಡೆಗೆ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು,ರಾಜ್ಯಾದ್ಯಂತ ಅಕ್ರಮ ಮದ್ಯ ಮಾರಾಟ ಪ್ರದೇಶಗಳಿಗೆ ಅಬಕಾರಿ ದಾಳಿ ನಡೆಸಲಾಗುವುದಲ್ಲದೆ, ಜನರಿಗೆ ಇದರಿಂದಾಗುವ ಅನಾಹುತಗಳ ಬಗ್ಗೆ ವಿವರಿಸಿ ಅವರ ಮನ:ಪರಿವರ್ತನೆ ಮಾಡಲಾಗುವುದು.ಜನ ಜಾಗೃತಿಗೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಇದರಿಂದಾಗಿ ನಿರು ದ್ಯೋಗಿಗಳಾ ಗುವವರಿಗೆ ಪರ್ಯಾಯ ಉದ್ಯೋಗ ನೀಡಲು ಚಿಂತನೆ ನಡೆಸ ಲಾಗುತ್ತಿದೆ ಎಂದರು. ತಮಿಳುನಾಡು, ಗೋವಾ, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ 5 ರಾಜ್ಯಗಳ ಅಬಕಾರಿ ಸಚಿವರ ಸಭೆಯನ್ನು ಏಪ್ರಿಲ್ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು,ಈ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ಎಂಎಸ್ ಐ ಎಲ್ 28 ಮದ್ಯ ಮಾರಾಟ ಮಳಿಗೆಗಳನ್ನು ಇದುವರೆಗೆ ತೆರೆದಿದೆ.ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, 430 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಇನ್ನಷ್ಟು ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಲಲಾಗಿದೆ ಎಂದು ಹೇಳಿದರು.

ಆರ್ ಟಿ ಐ ನಿಂದ ಭ್ರಷ್ಟಾಚಾರಮುಕ್ತ ವ್ಯವಸ್ಥೆ

ಮಂಗಳೂರು,ಫೆ.23:ಸಾರ್ವಜನಿಕ ಹಣವನ್ನು ವ್ಯಯಿಸುವ ಅಥವಾ ಸಾರ್ವಜನಿಕ ಸೇವೆಯನ್ನು ಪೂರೈಸುವ ಪ್ರಾಧಿಕಾರಗಳಿಂದ ಮಾಹಿತಿ ಪಡೆಯುವ ಹಕ್ಕನ್ನು ಚಲಾಯಿಸುವುದು ಆಡಳಿತದಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುತ್ತದೆ. ಹೀಗಾದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮಗೊಳ್ಳಲು ಸಾಧ್ಯ ಎಂದು ಕರ್ನಾಟಕ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ರಾಬಿನ್ ಸನ್ ಡಿಸೋಜಾ ಅವರು ಹೇಳಿದರು.
ಅವರಿಂದು ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮಾಧ್ಯಮ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳಿಗೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ವತಿಯಿಂದ ಏರ್ಪಡಿಸಲಾದ ಮಾಹಿತಿ ಹಕ್ಕಿನ ಕುರಿತ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು. ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆ ಆಡಳಿತದ ಗುಣಮಟ್ಟ ಮಾತ್ರ ಹೆಚ್ಚಿಸದೆ ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಪ್ರೇರೆಪಿಸುತ್ತದೆ.ಒಂದೇ ದಿನದಲ್ಲಿ ಕೇವಲ ಒಬ್ಬರಿಂದ ಬದಲಾವಣೆ ಸಾಧ್ಯವಿಲ್ಲ; ಆದರೆ ನ್ಯಾಯಾಂಗ ಹಾಗೂ ರಾಷ್ಟ್ರಪತಿ ಕಚೇರಿಯಲ್ಲಿರುವ ಕಡತಗಳ ಬಗ್ಗೆ ಸಾಮಾನ್ಯನಿಗೆ ತಿಳಿಯಲು ಮಾಹಿತಿ ಹಕ್ಕು ಕಾಯಿದೆಯಿಂದ ಸಾದ್ಯವಾಗಿದೆ ಎಂಬುದೇ ಕಾಯಿದೆಯ ಮಹತ್ವ ವನ್ನು ತಿಳಿಸುತ್ತದೆ ಎಂದು ವಿವರಿಸಿದರು.ಎರಡನೇ ಅಧಿವೇಶನದಲ್ಲಿ ಮಾಹಿತಿ ಹಕ್ಕನ್ನು ಸರ್ಕಾರೇತರ ಸಂಘ ಸಂಸ್ಥೆಗಳು ಬಳಸಿಕೊಳ್ಳುವ ಬಗ್ಗೆ ಸವಿವರ ಉಪನ್ಯಾಸ ನೀಡಿದರು. ಶಿವಮೊಗ್ಗ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗದೀಶ್ ಅವರು ಆರ್ ಟಿ ಐ ಮಾಧ್ಯಮ ಮತ್ತು ಸರ್ಕಾರೇತರ ಸಂಘಟನೆಗಳ (ಎನ್ ಜಿಒ)ಗಳ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.ಎಟಿಐ ನ ಕೆ ಎಂ ಪ್ರಸಾದ್ ಮತ್ತು ಸಿ.ಅಶೋಕ್ ಅವರು ಉಪಸ್ಥಿತರಿದ್ದು, ಕಾರ್ಯಕ್ರಮ ನಿರ್ವಹಿಸಿದರು.
22 ಮತ್ತು 23ರಂದು ಡಿಟಿಐನಲ್ಲಿ ಸರ್ಕಾರಿ ಅಧಿಕಾರಿಗಳಿಗೂ ಎರಡು ದಿನಗಳ ತರಬೇತಿಯನ್ನು ನೀಡಲಾಯಿತು. ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

Monday, February 22, 2010

ಗುಜ್ಜರಕೆರೆ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ನಿರ್ದೇಶನ

ಮಂಗಳೂರು,ಫೆ.22: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಜೆಪ್ಪು ಮೊರ್ಗನ್ ಗೇಟ್ ಬಳಿಯಿರುವ ಐತಿಹಾಸಿಕ ಗುಜ್ಜರಕೆರೆ ಒತ್ತುವರಿ ತೆರವು ಗೊಳಿಸಿ ಸಮಗ್ರ ಅಭಿವೃದ್ಧಿಗೆ ತಕ್ಷಣವೇ ಕ್ರಮಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಂದು ಅಧಿಕಾರಿ ಗಳೊಂದಿಗೆ ಗುಜ್ಜರ ಕೆರೆ ಪ್ರದೇಶಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಮನಾಪದಿಂದ ವಿಶೇಷ ಅನುದಾನದಡಿ ಕೆರೆ ಅಭಿವೃದ್ಧಿಗಾಗಿಯೇ 99 ಲಕ್ಷ ರೂ.ಗಳನ್ನು ಮೀಸಲಿರಿಸಿದ್ದು,ಶೀಘ್ರ ಕಾಮಗಾರಿ ಆರಂಭಿಸಲು ಹಾಗೂ ಕೆರೆ ಒತ್ತುವರಿ ಬಗ್ಗೆ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇತಿಹಾಸ ಪ್ರಸಿದ್ಧ 3ಎಕರೆ 80 ಸೆನ್ಸ್ ವ್ಯಾಪ್ತಿಯ ಕೆರೆಯನ್ನು ಸ್ವಚ್ಛಗೊಳಿಸಿ, ನೀರನ್ನು ಸದ್ಬಳಕೆ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಕೆರೆ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಉಸ್ತುವಾರಿ ಸಚಿವರು ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡುತ್ತಾ, ಬೆಂಗಳೂರಿನಲ್ಲಿ ಈಗಾಗಲೇ 15 ಕೆರೆಗಳ ಹೂಳೆತ್ತಲಾಗುತ್ತಿದ್ದು, ಕೆರೆಗಳ ಅಭಿವೃದ್ಧಿಗೆ ಹಣಕಾಸಿನ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಗುಜ್ಜರ ಕೆರೆಯನ್ನು ವೀಕ್ಷಿಸಿದಾಗ 1 ಎಕರೆಯಷ್ಟು ಭೂಮಿ ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಸಚಿವರ ಭೇಟಿ ಸಂದರ್ಭದಲ್ಲಿ ಶಾಸಕರಾದ ಎನ್.ಯೋಗೀಶ್ ಭಟ್, ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಮೇಯರ್ ಶಂಕರ್ ಭಟ್, ನಗರ ಪಾಲಿಕೆ ಆಯುಕ್ತ ಡಾ.ಕೆ.ಎನ್. ವಿಜಯಪ್ರಕಾಶ್ ಸೇರಿದಂತೆ ಸ್ಥಳೀಯ ಕಾರ್ಪೊರೇಟರ್ ಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದು, ಅಹವಾಲುಗಳನ್ನು ಹೇಳಿಕೊಂಡರು.

ಭಾರತೀಯ ರೈಲು ಸ್ಕೌಟಿಂಗ್ ಪ್ರದರ್ಶನ


ಮಂಗಳೂರು, ಫೆ.22: ಭಾರತೀಯ ಸ್ಕೌಟ್ಸ್-ಗೈಡ್ಸ್ ಶತ ಮಾನೋತ್ಸವ ಆಚರಿ ಸುತ್ತಿರುವ ಸಂದರ್ಭದಲ್ಲಿ ಈ ಬಗ್ಗೆ ಸಮಗ್ರ ಮಾಹಿತಿಯನ್ನು ಹೊತ್ತ ವಿಶೇಷ ರೈಲು ಮಂಗಳೂರಿಗೆ ಆಗಮಿಸಿದೆ. ಫೆ.18 ರಂದು ಶೊರ್ನೂರಿನಿಂದ ಹೊರಟ ರೈಲು ಮಂಗಳೂರಿನ ಕೇಂದ್ರ ರೈಲ್ವೇ ನಿಲ್ದಾಣದಲ್ಲಿದ್ದು, 3 ಬೋಗಿಗಳನ್ನೊಳಗೊಂಡ ರೈಲಿನೊಳಗೆ ದಕ್ಷಿಣ ರೈಲ್ವೇಯ ಸಮಗ್ರ ಚಿತ್ರಣ, ಸ್ಕೌಟ್ಸ್ ಬಗ್ಗೆ ಮಾಹಿತಿ, ಬಿದಿರು ಮತ್ತು ಮರದಿಂದ ತಯಾರಿಸಿದ ಹಡಗು,ಮುಂಬೈ ಗೇಟ್ ಮಾದರಿಗಳನ್ನೊಳಗೊಂಡಿದೆ. ಇಂಡಿಯನ್ ಸ್ಕೌಟಿಂಗ್ ಸೆಂಟಿನರಿ ಎಕ್ಸ್ ಫೆ.18 ರಂದು ಶೊರ್ನೂರ್ ನಿಂದ ಹೊರಟಿದ್ದು, ಮಂಗಳೂರಿನಲ್ಲಿ 21 ಮತ್ತು 22ರಂದು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿತ್ತು.

Friday, February 19, 2010

ಮಂಗಳೂರಿನಲ್ಲಿ ಫಲ ಪುಷ್ಪ ಪ್ರದರ್ಶನಮಂಗಳೂರು ಫೆ, 19: ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ 2009 - 2010 ರ ಸಾಲಿನ ತೋಟಗಾರಿಕಾ ಫಲಪುಷ್ಪ ಪ್ರದರ್ಶನ ಮಂಗಳೂರಿನಲ್ಲಿ ಇಂದಿನಿಂದ ಆರಂಭ ಗೊಂಡಿದೆ. ಫೆಬ್ರವರಿ 23 ತನಕ ನಡೆಯುವ ಈ ಪ್ರದರ್ಶನದ ಉದ್ಘಾಟನಾ ಸಮಾರಂಭ ಕದ್ರಿ ಉದ್ಯಾನವನದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಶಾಸಕ ಯು.ಟಿ.ಖಾದರ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಚ್.ಎನ್.ಹೇಮಾ ಸೇರಿದಂತೆ ಅನೇಕ ಗಣ್ಯರು ಮತ್ತು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕರಾವಳಿ ತೀರ ಪ್ರದೇಶಗಳ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ

ಮಂಗಳೂರು,ಫೆ.19: ನಗರೀಕರಣದ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಲು ಹಾಗೂ ಸಮಗ್ರ ಅಭಿವೃಧ್ಧಿಗೆ ಒತ್ತು ನೀಡಿ ಹೊಸ ದಿಕ್ಕಿನ ನಡೆ - ಚಿಂತನೆಗೆ ಮುನ್ನುಡಿಯಾಗಿ ನಗರಾಭಿವೃದ್ಧಿ ನೀತಿ ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾದ ಡಾ.ಎ.ರವೀಂದ್ರ ಹೇಳಿದರು.
ಅವರು ಇಂದು ನಗರದ ಎಸ್ ಡಿ ಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಮತ್ತು ಮಂಗಳೂರು ನಗರ ಪಾಲಿಕೆ ಸಹಯೋಗದಲ್ಲಿ ಏರ್ಪಡಿಸಲಾದ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ನೀತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡು ತ್ತಿದ್ದರು.
ನಗರ ಬೇರೆ ಹಳ್ಳಿ ಬೇರೆ ಎಂಬ ಕಲ್ಪನೆಯನ್ನು ಮೀರಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಪುರ ಯೋಜನೆಯಂತೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕೆಂದರು.ಪರಿಮಿತಿ ಭೂಮಿಯನ್ನು ಸದ್ಭಳಕೆ ಮಾಡಿಕೊಂಡು ನಗರಾಭಿವೃದ್ಧಿ ಯೋಜನೆ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ನಗರಾಭಿವೃದ್ಧಿ ಬಗ್ಗೆ ಕರಡು ನೀತಿ ತಯಾರಿಸಿ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ಅಂತಿಮವಾಗಿ ಆದೇಶ ತರುವಂತಹ ವಿನೂತನವಾದ ಪ್ರಯತ್ನ ಮಾಡಿದೆ ಎಂದರು. ಸ್ಥಳೀಯ ಸಂಸ್ಥೆಗಳ ಪುನರ್ ಸಂಘಟನೆ, ಸ್ಥಳೀಯಾಡಳಿತದಲ್ಲಿ ಪ್ರಜಾಪ್ರಭುತ್ವ ಮಾದರಿ ಅಳವಡಿಸಿ ಶಕ್ತಿ ತುಂಬುವ ಬಗ್ಗೆಯೂ ಹೆಚ್ಚಿನ ಚಿಂತನೆ ನಡೆಸಲಾಗುತ್ತಿದೆ ಎಂದರು.

ಪ್ರಾಸ್ತಾವಿಕ ಮಾತು ಗಳನ್ನಾಡಿದ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರು, ನಗರಾ ಭಿವೃದ್ಧಿ ವಿಷಯದಲ್ಲಿ ಮಂಗಳೂರಿಗೆ ಇನ್ನಷ್ಟು ಪ್ರಾಧಾ ನ್ಯತೆಯನ್ನು ನೀಡಬೇಕೆಂದು ಪ್ರತಿಪಾದಿಸಿದರು. ಹೊಸ ನೀತಿ, ಯೋಜನೆ ರೂಪಿಸುವ ಸಂದರ್ಭದಲ್ಲಿ ಸಂಪನ್ಮೂಲಗಳ ಕ್ರೂಢೀಕರಣದ ಬಗ್ಗೆಯೂ ಸಮರ್ಪಕ ಮಾಹಿತಿ ನೀಡುವ ಅಗತ್ಯದ ಬಗ್ಗೆ ವಿವರಿಸಿದರು. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶಂಭುದಯಾಳ್ ಮೀನ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಚರ್ಚೆಯಾಗಬೇಕೆಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ ಮೇಯರ್ ಶಂಕರ್ ಭಟ್ ಅವರು, ಸ್ಥಳೀಯಾಡಳಿತಕ್ಕೆ ಪೂರ್ಣ ಪ್ರಮಾಣದಲ್ಲಿ ತುರ್ತು ಯೋಜನೆಯೊಂದನ್ನು ಜಾರಿಗೊಳಿಸಲಾಗದ ಪರಿಸ್ಥಿತಿಯ ಬಗ್ಗೆ,ಕೆಲವು ಸಂಸ್ಥೆಗಳು ನಗರ ಪಾಲಿಕೆಗೆ ತೆರಿಗೆ ನೀಡದಿರುವುದು ವಿಷಾದನೀಯ ಎಂದರು. ಸಮಾರಂಭದಲ್ಲಿ ಶಾಸಕ ಯು ಟಿ ಖಾದರ್, ಉಪಮೇಯರ್ ರಜನೀ ದುಗ್ಗಣ್ಣ, ಡಾ. ಅಶ್ವಿನಿ ಮಹೇಶ್ ಉಪಸ್ಥಿತರಿದ್ದರು.ಮನಾಪ ಆಯುಕ್ತ ಡಾ.ಕೆ.ಎನ್.ವಿಜಯಪ್ರಕಾಶ್ ಸ್ವಾಗತಿಸಿದರು.

Thursday, February 18, 2010

ಮಾಹಿತಿ ಹಕ್ಕು, ಗ್ರಾಹಕ ಹಕ್ಕಿನ ಬಗ್ಗೆ ಮಾಹಿತಿ


ಮಂಗಳೂರು, ಫೆ.18: ಮೂಡ ಬಿದ್ರೆಯ ಜೈನ್ ಸ್ಕೂಲ್ ನ ಸಹ ಯೋಗ ದೊಂದಿಗೆ ವಾರ್ತಾ ಇಲಾಖೆ 16 ರಂದು ಮಾಹಿತಿ ಹಕ್ಕು ಮತ್ತು ಗ್ರಾಹಕ ಹಕ್ಕಿನ ಬಗ್ಗೆ ನಾಟಕ ಮತ್ತು ಚಲನಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಆರ್ ಗಜಾನನ ಅವರು ಮಕ್ಕಳಿಗೆ ಪ್ರಸಕ್ತ ಪರಿಸರದ ಬಗ್ಗೆ ಇರಬೇಕಾದ ತಿಳು ವಳಿಕೆಯನ್ನು ಮತ್ತು ಅಗತ್ಯವನ್ನು ಪ್ರತಿ ಪಾದಿಸಿದರು. ಕೃಷ್ಣಪುರ ಗಣೇಶ್ ನಾವಡ ಅವರ ತಂಡದಿಂದ ಮಾಹಿತಿ ಮತ್ತು ಗ್ರಾಹಕ ಹಕ್ಕಿನ ಬಗ್ಗೆ ಮಕ್ಕಳಿಗೆ ನಾಟಕ ಪ್ರದರ್ಶಿಸಲಾಯಿತು.ಶಿಕ್ಷಕ ಆರ್. ರಾಜ್ ಕುಮಾರ್ ಅವರು ಸಹಕರಿಸಿದರು.

ಮಾರ್ಚ್ 3ರಂದು ಲೈಂಗಿಕ ಅಲ್ಪಸಂಖ್ಯಾತರಿಂದ ಅಹವಾಲು ಆಲಿಕೆ: ಸಿ.ಎಸ್.ದ್ವಾರಕಾನಾಥ

ಮಂಗಳೂರು,ಫೆ.18:ಮಾರ್ಚ್ 3ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಲೈಂಗಿಕ ಅಲ್ಪಸಂಖ್ಯಾತರ ಸಾರ್ವಜನಿಕ ಸಭೆ ಕರೆಯಲಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಅವರಿಗೊಂದು ಉತ್ತಮ ನೆಲೆ ಕಲ್ಪಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಯೋಜನೆ ರೂಪಿಸಿದೆ ಎಂದು ಆಯೋಗದ ಅಧ್ಯಕ್ಷರಾದ ಸಿ.ಎಸ್.ದ್ವಾರಕನಾಥ್ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಆಲಿಸಿ, ಸ್ವೀಕರಿಸಿದರು.ಜಿಲ್ಲಾಧಿಕಾರಿ ಪೊನ್ನು ರಾಜ್, ಜಿಲ್ಲಾ ಪಂಚಾಯತ್ ಸಿಇಓ ಶಿವಶಂಕರ್,ನಗರ ಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್, ಮತ್ತು ಆಯೋಗದ ಸದಸ್ಯರು ಪಾಲ್ಗೊಂಡಿದ್ದರು.
ಬಳಿಕ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದ ಅವರು ಶೈಕ್ಷಣಿಕವಾಗಿ,ಸಾಮಾಜಿಕವಾಗಿ ಹಿಂದುಳಿದ ಈ ವರ್ಗಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಆಯೋಗ ವಿಶೇಷ ಚಿಂತನೆ ನಡೆಸಿದ್ದು, ಬೆಂಗಳೂರಿನ ಸಮತಾ ಸೈನಿಕ ದಳ ಈ ಬಗ್ಗೆ ತಮ್ಮ ಗಮನ ಸೆಳೆಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಾಮಾನ್ಯ ಜನಗಣತಿಗಿಂತ ಭಿನ್ನವಾಗಿ ಸಮಗ್ರ ಹಾಗೂ ಸಮರ್ಪಕವಾಗಿ ಸಾಮಾಜಿಕ ಮತ್ತು ಜನಾಂಗೀಯ ಸಮೀಕ್ಷೆ ಒಟ್ಟು 92 ಅಂಶಗಳನ್ನು ಸಮೀಕ್ಷೆಯಲ್ಲಿ ಸೇರಿಸಿ ದೇಶದಲ್ಲೇ ಪ್ರಥಮವಾಗಿ ಕರ್ನಾಟಕದಲ್ಲಿ ಪೈಲೆಟ್ ಪ್ರಾಜೆಕ್ಟ ಒಂದನ್ನು ರೂಪಿಸಲು ನಿರ್ಧರಿಸಲಾಗಿದೆ.ಇದಕ್ಕಾಗಿ 17.5 ಕೋಟಿ ರೂ.ಗಳ ಬಜೆಟನ್ನು ರೂಪಿಸಿದ್ದು,ಸ ರ್ಕಾರದ ಸಹಕಾರದೊಂದಿಗೆ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದರು. ಇತರೆಡೆಗಳಿಗೆ ಹೋಲಿಸಿದರೆ ಜಿಲ್ಲೆಯ ಹಾಸ್ಟೆಲ್ ವ್ಯವಸ್ಥೆ ಉತ್ತಮವಾಗಿದ್ದು, ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಸರ್ಕಾರ ಹಿಂದುಳಿದ ವರ್ಗಗಳಿಗಾಗಿ ನೀಡಿದ ಯೋಜನೆಗಳ ಅನುಷ್ಠಾನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ತಮ್ಮ 3 ದಿನಗಳ ಪ್ರವಾಸದಲ್ಲಿ ಜಿಲ್ಲೆಯ ಸ್ಪಷ್ಟ ಚಿತ್ರಣ ದೊರೆತಿದ್ದು, ಹಿಂದುಳಿದ ವರ್ಗದ ಮಹಿಳೆಯರಿಗಾಗಿ ರುಡ್ ಸೆಟ್ ನಲ್ಲಿ ನೀಡುತ್ತಿರುವಂತಹ ತರಬೇತಿಯ ಮಾದರಿಯನ್ನು ಸರ್ಕಾರಿ ವಲಯದಲ್ಲೂ ಅಳವಡಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ ಎಂದು ವಿವರಿಸಿದರು.ಆಯೋಗದ ಇತರ ಸದಸ್ಯರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂವಿಧಾನಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸಿ: ಜಸ್ಟಿಸ್ ಡಾ. ಎಸ್.ಆರ್.ನಾಯಕ್

ಮಂಗಳೂರು,ಫೆ.18: ಮಾನವ ಹಕ್ಕು ಆಯೋಗದಲ್ಲಿ 13,920 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಮಾನವಹಕ್ಕುಗಳ ಆಡಳಿತ ಜಾಗತಿಕವಾಗಿ, ರಾಷ್ಟ್ರೀಯವಾಗಿ ಮತ್ತು ರಾಜ್ಯ ಮಟ್ಟದಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಲು ಶ್ರಮಿಸುತ್ತಿದೆ ಎಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ನಾಡೋಜ ನ್ಯಾಯಮೂರ್ತಿ ಡಾ.ಎಸ್.ಆರ್ ನಾಯಕ್ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಅಹವಾಲುಗಳೊಂದಿಗೆ ಬಂದವರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಬಳಿಕ ಪತ್ರಿಕಾ ಗೋಷ್ಠಿಯ ನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಮಾಜಿಕ ಸಾಮರಸ್ಯ ಕದಡುತ್ತಿರುವ ಘಟನೆಗಳನ್ನು ಆಯೋಗ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಗೃಹ ಇಲಾಖೆಗೆ ಹಾಗೂ ರಾಜ್ಯ ಸರ್ಕಾರಕ್ಕೆ 2007ನೇ ಇಸವಿಯಿಂದ ನಡೆದ ಘಟನೆಗಳ ಬಗ್ಗೆ ವಿವರ ಕೇಳಿರುವುದಾಗಿ ಹೇಳಿದರು.
ಭಾರತದ ಪ್ರತಿಯೊಬ್ಬ ಪ್ರಜೆಯೂ ಸಂವಿ ಧಾನವನ್ನು ಗೌರವಿ ಸಬೇಕಿದ್ದು, ಆಡಳಿತ ಮತ್ತು ಅಧಿ ಕಾರಿಗಳು ಜನಹಿತವನ್ನು ಗಮನ ದಲ್ಲಿರಿಸಿ ಕರ್ತವ್ಯ ನಿರ್ವಹಿಸಬೇಕೆಂದು ಕರೆನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಉಪಸ್ಥಿತರಿದ್ದರು.

Wednesday, February 17, 2010

ಜನರ ಮನೆ ಬಾಗಿಲಿಗೆ ನ್ಯಾಯ: ನ್ಯಾಯಾಧೀಶ ಕೆ ಬಿ ಎಂ ಪಠೇಲ್

ಮಂಗಳೂರು, ಫೆಬ್ರವರಿ17: ಜಾಗೃತ ಜನರಿಗೆ ಅರಿವು - ನೆರವು ನೀಡಿ; ಸಾಮಾನ್ಯ ಜನರಿಗೆ ಅತಿ ಶೀಘ್ರದಲ್ಲಿ ನ್ಯಾಯ ನೀಡುವ ಉದ್ದೇಶವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹೊಂದಿದೆ ಎಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಕೆ ಬಿ ಎಮ್ ಪಠೇಲ್ ಹೇಳಿದರು.
ಅವರಿಂದು ಉಳ್ಳಾಲ ಪುರಸಭೆ ಕಚೇರಿ ವಠಾರದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಳ್ಳಾಲ ಪುರಸಭೆ, ಜನಶಿಕ್ಷಣ ಟ್ರಸ್ಟ್ ನೋಡಲ್ ಏಜೆನ್ಸಿ ಕಪಾರ್ಟ್, ವಕೀಲರ ಸಂಘ ಮಂಗಳೂರು ಇವರ ಸಹಭಾಗಿತ್ವದಲ್ಲಿ ಏರ್ಪಡಿಸಲಾದ ಕಾನೂನು ಸಾಕ್ಷರತಾ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲೆಗೆ ಆಗಮಿಸಿರುವ ಕಾನೂನು ಸಾಕ್ಷರತಾ ರಥವನ್ನು ಇಂದು ಉಳ್ಳಾಲದಲ್ಲಿ ಸ್ವಾಗತಿಸಿದ ಬಳಿಕ ಮಾಹಿತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಾಧೀಶರು, ಜನರ ಕಷ್ಟ ಸುಖಗಳಲ್ಲಿ ನ್ಯಾಯಾಲಯವಿದೆ ಎಂಬ ಸಂದೇಶವನ್ನು ಹೊತ್ತು ನ್ಯಾಯರಥ ಸಂಚರಿಸಲು ಆರಂಭಿಸಿದ್ದು, ಜನರು ಈ ಸೌಲಭ್ಯದ ಸದ್ಬಳಕೆ ಮಾಡ ಬೇಕೆಂದರು. ನಾವು ಮುಂದುವರಿದಂತೆ ಸಮಸ್ಯೆಗಳು ಹೆಚ್ಚುತ್ತಿವೆ; ಸಮಸ್ಯೆಗಳ ಪರಿಹಾರಕ್ಕೆ ಅಷ್ಟೇ ತ್ವರಿತವಾಗಿ ಪರಿಹಾರ ನೀಡಲು ನ್ಯಾಯಾಲಯ ಹಲವು ವಿನೂತನ ಕ್ರಮಗಳನ್ನು ಕೈಗೆತ್ತಿಕೊಂಡಿದೆ ಎಂದರು.
ಸಮಾಜದಲ್ಲಿ ಅನ್ಯಾಯವನ್ನು ಹಲವು ಕಾರಣಗಳಿಂದ ಸಹಿಸಿಕೊಂಡು ಶೋಷಣೆಗೊಳಗಾದ ವರ್ಗವಿದ್ದು, ನ್ಯಾಯರಥ ಮನೆಯ ಬಾಗಿಲಿಗೆ ಬರುವುದರಿಂದ ಇಂತಹ ಜನರು ನ್ಯಾಯ ಪಡೆಯುವ ಬಗ್ಗೆ ಚಿಂತಿಸಬಹುದಾಗಿದೆ ಎಂದು ಅವರು ಹೇಳಿದರು,
ಮಾಹಿತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯು.ಟಿ ಖಾದರ್ ಅವರು, ನಮ್ಮ ದೇಶದಲ್ಲಿ ಪ್ರತಿಯೊಂದಕ್ಕೂ ಕಾನೂನನ್ನು ರೂಪಿಸಲಾಗಿದ್ದು, ಸುವ್ಯವಸ್ಥಿತ ಸಾಮಾಜಿಕ ವ್ಯವಸ್ಥೆಗೆ ಕಾನೂನಿನ ಅಗತ್ಯವಿದೆ ಎಂದರು. ಕಾನೂನಿನ ಬಗ್ಗೆ ಉತ್ತಮ ಜ್ಞಾನವನ್ನು ಹೊಂದುವುದು ಬಹಳ ಅಗತ್ಯವಿದೆ ಎಂದ ಅವರು ಕಾನೂನಿನ ಜ್ಞಾನವಿಲ್ಲದೆ ಇರುವುದರಿಂದ ಇಂದು ಸಮಾಜದಲ್ಲಿ ಬಹಳಷ್ಟು ಸಮಸ್ಯೆಗಳು ಉದ್ಭವವಾಗುತ್ತಿದೆ. ಅಜ್ಞಾನದಿಂದಾಗುವ ತಪ್ಪುಗಳಿಗೆ ಪ್ರಚೋದನೆ ನೀಡದೆ ಈ ಬಗ್ಗೆ ಅರಿವು ನೀಡುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಸಾಮಾನ್ಯರಿಗೆ ಜನಪ್ರತಿನಿಧಿಗಳೇ ಮಾದರಿಯಾಗಬೇಕು. ಕಾನೂನಿನ ಅರಿವನ್ನು ಪಡೆದವರು ಆತ್ಮವಿಶ್ವಾಸದಿಂದ ಬಾಳಲು ಸಾಧ್ಯ ಎಂದು ಅವರು ಹೇಳಿದರು.
ಉಳ್ಳಾಲ ಪುರಸಭೆ ಅಧ್ಯಕ್ಷ ಯು.ಎ.ಇಸ್ಮಾಯಿಲ್ ಸ್ವಾಗತಿಸಿದರು. ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಶೀನಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕು ಪಂಚಾಯತ್ ಇ ಒ ಕಾಂತರಾಜ್ ಉಪಸ್ಥಿತರಿದ್ದರು.ರುಫೀನಾ ವೇಗಸ್ ಅನುಭವ ಹಂಚಿಕೊಂಡರು. ಬೀಡಿ ಕಾರ್ಮಿಕರಿಗೆ ನ್ಯಾಯವಾದಿ ದೇವದಾಸ್ ರಾವ್ ಅವರು ಕಾನೂನು ಕುರಿತಂತೆ ಮಾಹಿತಿ ನೀಡಿದರು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತಂತೆ ನ್ಯಾಯವಾದಿ ರವೀಂದ್ರ ಮುನಿಪ್ಪಾಡಿ ಮಾಹಿತಿ ನೀಡಿದರು.ವಾಣಿ ವಿ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಕೃಷ್ಣ ಮೂಲ್ಯ ಅವರು ಧನ್ಯವಾದ ಸಮರ್ಪಣೆ ಮಾಡಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಂದ ಅಹವಾಲು ಸ್ವೀಕಾರ

ಮಂಗಳೂರು, ಫೆಬ್ರವರಿ,17: ಮೂಲ ಸೌಕರ್ಯಗಳ ಕೊರತೆ, ನಿರ್ವಹಣೆಯ ಕೊರತೆಯಿಂದ ಹಿಂದುಳಿದ ವರ್ಗಗಳ ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜನರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಸಿ. ಎಸ್. ದ್ವಾರಕಾನಾಥ್ ಹೇಳಿದರು.
ಅವರಿಂದು ಬೈಕಂಪಾಡಿಯ ಮೀನಕಳಿಯ ಮೀನುಗಾರರ ಕಾಲನಿಗೆ ಭೇಟಿ ನೀಡಿ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಮಾತುಕತೆ ನಡೆಸಿ ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು, ಈ ಸಂದರ್ಭದಲ್ಲಿ ರಂಪಣಿ ಮೀನುಗಾರಿಕೆಗೆ ಸಹಾಯಧನ ಒದಗಿಸಿಕೊಡುವಂತೆ ಮನವಿ ನೀಡಲಾಯಿತು. ಈ ಸಂಬಂಧ ಸ್ಪಂದಿಸಿದ ಆಯೋಗದ ಅಧ್ಯಕ್ಷರು, ವಿಶೇಷ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿ ಸ್ಪೆಷಲ್ ಪ್ಯಾಕೇಜ್ ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಪ್ರಸ್ತುತಾ ಕೇಂದ್ರದ ಕೃಷಿ ಖಾತೆಯಲ್ಲಿರುವ ಮೀನುಗಾರಿಕೆಗೆ ಪ್ರತ್ಯೇಕ ರಾಷ್ಟ್ರೀಯ ಮೀನುಗಾರಿಕಾ ಖಾತೆ ಮಾಡುವ ಬಗ್ಗೆಯೂ ಸರಕಾರದ ಗಮನ ಸೆಳೆಯುವುದಾಗಿ ಅವರು ಭರವಸೆ ನೀಡಿದರು.
ಸುರತ್ಕಲ್ಲಿನ ಸಸಿಹಿತ್ಲು ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ ಆಯೋಗದ ಅಧ್ಯಕ್ಷರು, ಸ್ಥಳಿಯ ಮೂರ್ತೆದಾರರು, ನೇಕಾರರಿಂದ ಅಹವಾಲುಗಳನ್ನು ಪಡೆದರು.60 ವರ್ಷ ದಾಟಿದ ನೇಕಾರರು ತಮಗೆ ಪಿಂಚಣಿ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರು. ನಗರದ ಉರ್ವ ಮತ್ತು ಕೇಂದ್ರ ಮೀನು ಮಾರುಕಟ್ಟೆಗಳಿಗೂ ಆಯೋಗ ಭೇಟಿ ನೀಡಿ ಮೀನುಗಾರ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಬಿ.ಗುರುಸ್ವಾಮಿ, ಎಂ.ಎಸ್. ಹೆಳವಾರ್, ಮಾಂತೇಶ್, ಡಿ. ಪಾಟೀಲ್, ಎಸ್.ಎಂ. ಹತ್ತಿಗಟ್ಟಿ, ಯೋಗಾನಂದ ಕುಮಾರ್, ಜಿಲ್ಲಾ ಹಿಂದುಳೀದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tuesday, February 16, 2010

ಕಾನೂನು ಸಾಕ್ಷರತಾ ರಥ ಉದ್ಘಾಟನೆ..


ಮಂಗಳೂರು, ಫೆ,16, ದಕ್ಷಿಣ ಕನ್ನಡ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಿವಿಧ ಇಲಾಖೆಗಳ ಸಹ ಯೋಗದಲ್ಲಿ ಜಿಲ್ಲೆಯ ಜನ ಸಾಮಾನ್ಯರಿಗೆ ಕಾನೂನು ಮಾಹಿತಿ ನೀಡುವ ಸಲುವಾಗಿ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಅಭಿಯಾನವನ್ನು ಇಂದಿನಿಂದ ಆರಂಭಿಸಿದ್ದು, ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಎಹ್. ಆರ್. ದೇಶಪಾಂಡೆ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.ಜಿಲ್ಲಾಧಿಕಾರಿ ಪೊನ್ನು ರಾಜ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್. ಪಿ. ಚೆಂಗಪ್ಪ, ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸ್ವಾವಲಂಬಿ ಯೋಜನೆ ರೂಪಿಸಲು ಸರಕಾರಕ್ಕೆ ವರದಿ: ದ್ವಾರಕನಾಥ್

ಮಂಗಳೂರು ಫೆಬ್ರವರಿ 16: (ಕರ್ನಾಟಕ ವಾರ್ತೆ)- ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ ನೀಡಿ ಸ್ವಾವಲಂಬಿ ಬದುಕನ್ನು ರೂಪಿಸಲು ನೆರವಾಗಲು ರುಡ್ಸೆಟ್ ಮಾದರಿಯಲ್ಲಿ ತರಬೇತಿ ನೀಡಲು ಸರಕಾರಕ್ಕೆ ಸಮಗ್ರ ವರದಿ ನೀಡುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಸಿ.ಎಸ್. ದ್ವಾರಕಾನಾಥ್ ತಿಳಿಸಿದ್ದಾರೆ.
ಅವರಿಂದು ಮಡಂತ್ಯಾರು, ಬೆಳ್ತಂಗಡಿ, ಮಚ್ಚಿನ, ಉಜಿರೆ ಇಲ್ಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಉಜಿರೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ವಿದ್ಯಾರ್ಥಿನಿಯರು ಪ್ರಸ್ತಾಪಿಸಿದಾಗ, ಪ್ರಸಕ್ತ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ತಿಂಗಳಿಗೊಮ್ಮೆ ವಿದ್ಯಾರ್ಥಿನಿ ನಿಲಯಗಳಿಗೆ ಮಹಿಳಾ ವೈದ್ಯಾಧಿಕಾರಿ ಭೇಟಿ ನೀಡಿ ವಿದ್ಯಾರ್ಥಿನಿಯರ ತಪಾಸಣೆ ನಡೆಸಬೇಕು ಹಾಗೂ ವಾರಕ್ಕೊಮ್ಮೆ ಸ್ಥಳೀಯ ಆಸ್ಪತ್ರೆಗಳ ದಾದಿಯರು ವಿದ್ಯಾರ್ಥಿನಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಗಳ ವಿದ್ಯಾರ್ಥಿ ನಿಲಯಗಳು ಉತ್ತಮವಾಗಿದ್ದು, ಸರಕಾರದಿಂದ ನಿಲಯಗಳ ನಿರ್ವಹಣೆಗೆ ಅಗತ್ಯ ಅನುದಾನ ಬಿಡುಗಡೆಗೆ ಒತ್ತಾಯಿಸುವುದಾಗಿ ಹೇಳಿದರು. ರುಡ್ಸೆಟ್ ಭೇಟಿ ನೀಡಿದ ಆಯೋಗದ ಅಧ್ಯಕ್ಷರು, ಡಾ.ವೀರೇಂದ್ರ ಹೆಗಡೆಯವರೊಡನೆ ತರಬೇತಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.

Monday, February 15, 2010

ರೈಲ್ವೇ ಆಹಾರ ಮಳಿಗೆ ಉದ್ಘಾಟನೆ


ಮಂಗಳೂರು, ಫೆ,15. ಕೇಂದ್ರ ರೈಲ್ವೇ ಸಹಾಯಕ ಸಚಿವರಾದ ಇ.ಅಹಮದ್ ಅವರು ಮಂಗಳೂರಿನ ಕೇಂದ್ರ ರೈಲ್ವೇ ನಿಲ್ಧಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಿದ ನೂತನ ಆಹಾರ ಮಳಿಗೆಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಯು.ಟಿ. ಖಾದರ್, ರೈಲ್ವೇ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Saturday, February 13, 2010

ರೈತರಿಗೆ ಅನ್ಯಾಯವಾಗದಂತೆ ಭೂಸ್ವಾಧೀನ:ಸಚಿವ ಮುರುಗೇಶ್ ನಿರಾಣಿ

ಮಂಗಳೂರು,ಫೆ.13: ರಾಜ್ಯದಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ಸಂದರ್ಭದಲ್ಲಿ ಕಚೇರಿಯಲ್ಲಿ ಕುಳಿತು ನಕ್ಷೆ ಮುಂದಿರಿಸಿ ಭೂಸ್ವಾಧೀನ ಪಡಿಸಿಕೊಳ್ಳದೆ, ಸ್ಥಳಕ್ಕೆ ತೆರಳಿ ನೈಜ ಪರಿಸ್ಥಿತಿ ಅರಿತು ರೈತರ ಸಹಮತವಿದ್ದರೆ ಮಾತ್ರ ಫಲವತ್ತಲ್ಲದ ಭೂಮಿಯನ್ನು ವಶಪಡಿಸಿಕೊಳ್ಳಲು ಮುಖ್ಯಮಂತ್ರಿಗಳು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್. ಮುರುಗೇಶ್ ನಿರಾಣಿ ಅವರು ಹೇಳಿದರು.
ಇಂದು ಮಂಗಳೂರಿನ ಕೈಗಾರಿಕ ಮತ್ತು ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತರ ರಾಜ್ಯಗಳಲ್ಲಿರುವಂತೆ ಕೈಗಾರಿಕಾ ಅಭಿವೃದ್ಧಿಗೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ರಾಜ್ಯದಲ್ಲೂ ಅಳವಡಿಸಲು ನಿರ್ಧರಿಸಲಾಗಿದೆ. 2009-14 ರವರೆಗೆ ನೂತನ ಕೈಗಾರಿಕಾ ನೀತಿ ರೂಪಿಸಿದ್ದು ಐದು ಪ್ರಮುಖ ಜವಳಿ ಉದ್ಯಮದಡಿ ಮಹಿಳೆಯರಿಗೋಸ್ಕರ 10,000 ಉದ್ಯೋಗಗಳನ್ನು ಮೀಸಲಿರಿಸಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕು ಮತ್ತು 7 ರ ಪಕ್ಕದಲ್ಲಿ ಕೃಷಿ ಯೋಗ್ಯವಲ್ಲದ ಜಮೀನನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕಾ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಕರೆಯಲಾಗಿದ್ದು, ಕೈಗಾರಿಕೋದ್ಯಮಿಗಳಿಗೆ ತೆರಿಗೆ ಭಾರವಾಗದ ಹಾಗೆ ಯೋಜನೆ ರೂಪಿಸಿದೆ ಎಂದರು.
ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 200 ಎಕರೆ ವ್ಯಾಪ್ತಿಯಲ್ಲಿ ಗ್ಲೋಬಲ್ ಫಿನಾನ್ಷಿಯಲ್ ಡಿಸ್ಟ್ರಿಕ್ಟ್ ನ್ನು ರಚಿಸಲಾಗುವುದು. ಈ ಬಗ್ಗೆ ಪ್ರಾಥಮಿಕ ಹಂತದಲ್ಲಿ 45 ಬ್ಯಾಂಕ್ ಗಳ ಸಭೆಯನ್ನು ಕರೆಯಲಾಗಿದೆ. ಮೂರು ಲಕ್ಷದ ಐದು ಸಾವಿರ ಕೋಟಿ ಯೋಜನೆಯಡಿ 658 ಪ್ರಾಜೆಕ್ಟ್ ಗಳನ್ನು ಸಂಪೂರ್ಣಗೊಳಿಸಿದ್ದು, 2 ಲಕ್ಷ ನಿರುದ್ಯೋಗಿಗಳಿಗೆ ಕೆಲಸ ನೀಡಲಾಗಿದೆ. ಕೈಗಾರಿಕೋದ್ಯಮಿಗಳಿಗೆ ಹಾಗೂ ಉದ್ದಿಮೆದಾರರಿಗೆ ತೊಂದರೆಯಾಗದಂತೆ ಯೋಜನೆಗಳು ಕಾರ್ಯಾನುಷ್ಠಾನಗೊಳ್ಳಲಿದೆ. ಸಣ್ಣ, ಗುಡಿ ಕೈಗಾರಿಕೆಗಳಿಗೆ 2007-08 ನೇ ಸಾಲಿನಲ್ಲಿ 30 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಜನಸ್ಪಂದನ ಮಾದರಿಯಲ್ಲೇ ಕೈಗಾರಿಕಾ ಅದಾಲತ್ ನ್ನು ಹಮ್ಮಿಕೊಳ್ಳಲಾಗಿದೆ. ರೈತರ ಬೇಡಿಕೆಯಂತೆ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ರೂಪಿಸಲಾದ ಸುವರ್ಣ ಕಾರಿಡಾರ್ ಯೋಜನೆಗೆ ಭೂಸ್ವಾಧೀನ ರದ್ದು ಮಾಡವ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು ಮತ್ತು ರೈತರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಯೋಗೀಶ್ ಭಟ್, ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಮತ್ತು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಉಪಸ್ಥಿತರಿದ್ದರು.

ಜೀವವೈವಿಧ್ಯ ರಕ್ಷಣೆಗೆ ವಿಶೇಷ ಪ್ಯಾಕೇಜ್:ಸಚಿವ ಕೃಷ್ಣ ಪಾಲೆಮಾರ್

ಮಂಗಳೂರು,ಫೆ.13:ಅತ್ಯಪರೂಪದ ಜೀವವೈವಿಧ್ಯ ಹೊಂದಿರುವ ಪ್ರದೇಶವೆಂದು ಖ್ಯಾತಿವೆತ್ತ ನಮ್ಮ ತುಳುಭೂಮಿಯಲ್ಲಿ ದೈವಿಕ ಪರಂಪರೆಗಿಂತ ಹಿಂದೆ ಪರಿಸರ ಆರಾಧನೆಯಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು.
ಅವರಿಂದು ನಗರದ ಪುರಭವನದಲ್ಲಿ ತುಳು ಸಾಹಿತ್ಯ ಅಕಾಡೆಮಿ ತಾಲೂಕು ಮಹಿಳಾ ಮಂಡಲಗಳ ಸಹಕಾರದೊಂದಿಗೆ ಏರ್ಪಡಿಸಿದ ಕೆಡ್ಡಸ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇಲ್ಲಿನ ಜನರಿಗೆ ತುಳು ಭಾಷೆ ಮತ್ತು ಸಂಸ್ಕೃತಿ, ಪರಿಸರದ ಬಗ್ಗೆಗಿನ ವಿಶೇಷ ಕಾಳಜಿಯಿಂದ ಎಲ್ಲೆಡೆ ಗುರುತಿಸಲ್ಪಟ್ಟಿದ್ದಾರೆ. ನಮ್ಮ ಪಶ್ಚಿಮಘಟ್ಟದಲ್ಲಿ 4,800 ವಿಶೇಷ ಸಸ್ಯ ಪ್ರಭೇದಗಳಿದ್ದು,800 ಪ್ರಭೇದಗಳು ಮಾತ್ರ ಉಳಿದಿವೆ.ಪಿಲಿಕುಳದ ಸಸ್ಯಕಾಶಿಯನ್ನು ಅಭಿವೃದ್ಧಿ ಪಡಿಸಲು ವಾರ್ಷಿಕ 50 ಲಕ್ಷ ರೂ.ಗಳನ್ನು ಸರ್ಕಾರ ನೀಡುತ್ತಿದೆ. ಇದಕ್ಕೆಂದೇ ಒಟ್ಟು ಎರಡೂವರೆ ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದರು. ತುಳು ಅಕಾಡೆಮಿ ತುಳು ಭಾಷೆ ಅಭಿವೃದ್ಧಿಗೆ ಪರಿಣಾಮಕಾರಿ ಯೋಜನೆ ರೂಪಿಸಿ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದ ಸಚಿವರು,ಸರ್ಕಾರ ಆರನೇ ತರಗತಿಯಿಂದ ತುಳುಭಾಷೆಯನ್ನು ಐಚ್ಛಿಕ ಪಾಠವಾಗಿ ಸೇರ್ಪಡೆಗೊಳಿಸಲು ಅಗತ್ಯಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ ಎಂದರು.
ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಶಿಕ್ಷಕಿ ಕೆ.ಎ.ರೋಹಿಣಿ ಭೂಮಿಪೂಜೆ ಮತ್ತು ಕೆಡ್ಡಸದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.