Thursday, February 11, 2010

ಆಶ್ರಯ ಯೋಜನೆಯ ಫಲಾನುಭವಿಗಳ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ..

ಮಂಗಳೂರು, ಫೆಬ್ರವರಿ 11:ಆಶ್ರಯ ಯೋಜನೆಯಡಿ ಫಲಾನುಭವಿಗಳನ್ನು ಆರಿಸಲು ಸರಕಾರಿ ನಿಯಮಾವಳಿ ತಿದ್ದುಪಡಿ ಮಾಡಿದ್ದು, ಪತಿಯ ಹೆಸರಲ್ಲಿ ಭೂ ದಾಖಲೆಗಳಿದ್ದರೂ ಮಹಿಳಾ ಫಲಾನುಭವಿ ಗಳನ್ನು ಆರಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ಅರ್ಜಿ ಸಲ್ಲಿಸಲು ಫೆಬ್ರವರಿ 28 ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಭಂಡಾರಿ ಅವರು ಹೇಳಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಆಶ್ರಯ ಯೋಜನೆ ಬಗ್ಗೆ ನಡೆದ ಚರ್ಚೆಯ ಫಲವಾಗಿ ನಿಯಮಾವಳಿ ತಿದ್ದುಪಡಿ ಮಾಡಲಾಗಿದೆ ಎಂದು ಸಭೆಯಲ್ಲಿ ವಿವರಿಸಿದರು.
ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಎಲ್ಲ ಇಲಾಖಾ ಅಧಿಕಾರಿಗಳು ನಿಗದಿತ ಗುರಿಯನ್ನು ಸಾಧಿಸಿ, ಮಂಜೂರಾದ ಹಣ ಹಿಂದಿರುಗಿ ಹೋಗದಂತೆ ಎಚ್ಚರಿಕೆ ವಹಿಸಬೇಕೆಂದರು. ಪ್ರಸಕ್ತ ಸಾಲಿನಲ್ಲಿ ಎಪಿಎಲ್ ಪಡಿತರದಾರರಿಗೂ ಆಹಾರ ಧಾನ್ಯ ವಿತರಿಸಲಾಗಿದ್ದು, ಆಸಕ್ತರು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಎಂದು ಅಧ್ಯಕ್ಷರು ಹೇಳಿದರು.
17,000 ಮಕ್ಕಳು ಶಾಲೆಯಿಂದ ಹೊರಕ್ಕೆ: ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನಲ್ಲಿ ನಡೆಸಿದ ಮಕ್ಕಳ ಗಣತಿಯಲ್ಲಿ 6ರಿಂದ 18 ವರ್ಷದ 17,000 ದಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಪತ್ತೆಯಾಗಿದೆ. 6 ರಿಂದ 14 ವರ್ಷದ 692 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಈ ಸಾಲಿನ ಸಮೀಕ್ಷೆಯಲ್ಲಿ ಶಾಲೆಗೆ ಸೇರಿದ ಬಳಿಕ 3 ತಿಂಗಳಿಗಿಂತ ಹೆಚ್ಚು ಸಮಯ ರಜೆ ಹಾಕಿದ ಮಕ್ಕಳನ್ನು ಶಾಲೆ ಬಿಟ್ಟವರೆಂದೇ ಗುರುತಿಸಲಾಗಿದೆ. 4ಲಕ್ಷ 17,000 ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. 9 ರಿಂದ ಪಿಯುಸಿ ವರೆಗೆ ಶಾಲೆ ಬಿಟ್ಟವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಸಾಲಿನಲ್ಲಿ ನಡೆಸಿದ ಸಮೀಕ್ಷೆ 6 ರಿಂದ 14 ವರ್ಷದೊಳಗಿನವರದಾಗಿದ್ದು, 149 ಮಕ್ಕಳು ಶಾಲೆ ಬಿಟ್ಟವರೆಂದು ಪತ್ತೆ ಹಚ್ಚಲಾಗಿತ್ತು. ಇನ್ನೊಂದು ತಿಂಗಳೊಳಗೆ ಸಮೀಕ್ಷೆ ಸಮಗ್ರ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ಶಿವಶಂಕರ್ ತಿಳಿಸಿದರು.
ತೋಟಗಾರಿಕೆ ಇಲಾಖೆ ರೈತರಿಗೆ ನೀಡುತ್ತಿರುವ ಕಳಪೆ ಗೊಬ್ಬರದ ಬಗ್ಗೆ ಕೃಷಿ ಇಲಾಖೆ ವಿಶ್ಲೇಷಣೆ ಮಾಡಿ ಗುಣಮಟ್ಟ ಖಾತರಿ ಪಡಿಸಲು ಸಿಇಒ ಅವರು ತೋಟಗಾರಿಕೆ ಉಪನಿರ್ದೇಶಕರಿಗೆ ಸೂಚಿಸಿದರು. ಭಾಗ್ಯ ಜ್ಯೋತಿ ಯೋಜನೆ ಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಎಲ್ಲ ತಾಲೂಕುಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ತಾಲೂಕು ಇ ಒಗಳಿಂದ ಸಿ ಇ ಒ ಅವರು ಮಾಹಿತಿ ಕೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶ್ರೀ ಜಗನ್ನಾಥ ಸಾಲಿಯಾನ್, ಎಲ್ಲಾ ಸ್ಥಾಯಿಸಮಿತಿ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಯೋಜನಾಧಿಕಾರಿ ಶ್ರೀ ತಾಕತ್ ರಾವ್ ಸ್ವಾಗತಿಸಿ ವಂದಿಸಿದರು.