Thursday, February 25, 2010

ಕರ್ತವ್ಯದ ವೇಳೆ ಬಸ್ಸು ಸಿಬಂದಿಗಳ ಮೊಬೈಲ್ ಬಳಕೆಗೆ ಸಂಪೂರ್ಣ ನಿಷೇಧ : ಜಿಲ್ಲಾಧಿಕಾರಿ ಪೊನ್ನುರಾಜ್

ಮಂಗಳೂರು,ಫೆ.25: ಬಸ್ಸುಗಳಲ್ಲಿ ಚಾಲಕರು - ನಿರ್ವಾಹಕರು ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಮತ್ತು ಇಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ ಅವರ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿ. ಪೊನ್ನು ರಾಜ್ ಎಚ್ಚರಿಸಿದ್ದಾರೆ. ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಸಾರಿಗೆ ಅದಾಲತ್ ನಲ್ಲಿ ಮಾತನಾಡಿದ ಅವರು ಈ ಎಚ್ಚರಿಕೆಯನ್ನು ನೀಡಿದ್ದು, ಬಸ್ಸು ಸಿಬಂದಿಗಳು ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವಂತೆ ಸೂಚನೆ ನೀಡಿದರು. ಮೋಬೈಲ್ ಬಳಕೆ, ಅಥವಾ ಇತರ ಪ್ರಯಾಣಿಕರಿಗೆ ತೊಂದರೆ ಆಗುವ ಯಾವುದೇ ದೂರುಗಳನ್ನು ಫೊಟೊ ದಾಖಲೆ ಸಮೇತ ಸಾರ್ವಜನಿಕರು ದೂರು ನೀಡಿದರೆ ಅಂತವರ ಮೇಲೆ ಕಟ್ಟು ನಿಟ್ಟಿನ ಮತ್ತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಬಸ್ ಚಾಲಕರು ಹಾಗೂ ನಿರ್ವಾಹಕರು ಕಡ್ಡಾಯವಾಗಿ ಗುರುತುಪತ್ರ ಧರಿಸಿ ವಾಹನ ಚಲಾಯಿಸಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಪರವಾನಿಗೆ ಪಡೆದ ಬಸ್ಸುಗಳು ತಮ್ಮ ಟ್ರಿಪ್ ಗಳನ್ನು ಕಡಿತಗೊಳಿಸದೆ ಪರವಾನಿಗೆ ಪಡೆದ ಕೊನೆಯ ನಿಲ್ದಾಣದವರೆಗೆ ಸಂಚರಿಸಿ ಕೊನೆಯ ನಿಲ್ದಾಣದಲ್ಲಿ ಲಾಗ್ ಪುಸ್ತಕವನ್ನು ಇರಿಸಿ ಅದರಲ್ಲಿ ಸಹಿ ಮಾಡುವಂತೆ ಸೂಚನೆ ನೀಡಿದರು.ಜೊತೆಗೆ ಬಸ್ಸನ್ನೇರುವ ಸಂದರ್ಭಗಳಲ್ಲಿ ಟಯರ್ ಗಳನ್ನು ಅಡ್ಡ ಹಾಕುವ ಬಗ್ಗೆ ಪರಿಶೀಲಿಸಲು ಪೊಲೀಸ್ ಇಲಾಖೆಗೆ ಸೂಚಿಸಿದರು.
ಖಾಸಗಿ ಬಸ್ ವ್ಯವಸ್ಥೆಗೆ ಪರ್ಯಾಯವಾಗಿ ಕೆಎಸ್ಆರ್ ಟಿಸಿ ಬಸ್ಸುಗಳನ್ನು ನಗರದಲ್ಲಿ ಓಡಿಸುವ ಬಗ್ಗೆ ಸಭೆಯಲ್ಲಿ ಜನಾಭಿಪ್ರಾಯ ವ್ಯಕ್ತವಾಯಿತು. ಖಾಸಗಿ ಬಸ್ಸುಗಳ ಬಗ್ಗೆ ಪರ ವಿರೋಧ ಬಂದಿರುವ 200 ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಪ್ರಥಮ ಹಂತವಾಗಿ ಮಂಗಳೂರಿನಿಂದ ಉಡುಪಿಗೆ 6 ಕೆಎಸ್ ಆರ್ ಟಿ ಸಿ ಬಸ್ಸುಗಳಿಗೆ ಪರ್ಮಿಟ್ ನೀಡುವುದಾಗಿ ಹೇಳಿದರು.
ಜಿಲ್ಲಾ ಎಸ್ಪಿ ಡಾ. ಸುಬ್ರಹ್ಮಣ್ಯ್ಯೇಶ್ವರ ರಾವ್,ಆರ್ ಟಿ ಓ ಪುರುಷೋತ್ತಮ, ಕೆ.ಎಸ್.ಆರ್ ಟಿ.ಸಿ ವಿಭಾಗಿಯ ನಿಯಂತ್ರಣಾಧಿಕಾರಿ ಕರುಂಬಯ್ಯ, ನಗರ ಡಿವೈಎಸ್ಪಿ ಬಿ.ಜೆ. ಭಂಡಾರಿ, ಬಸ್ಸು ಮಾಲಿಕ ಮತ್ತು ಶ್ರಮಿಕ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.