Friday, February 26, 2010

ಗೋಡಂಬಿಯಿಂದ 3 ಸಾವಿರ ಕೋಟಿ ವಿದೇಶಿ ವಿನಿಮಯ : ಡಾ.ವೆಂಕಟೇಶ್

ಮಂಗಳೂರು,ಫೆ.26:ಮೂರು ಸಾವಿರ ಕೋಟಿ ರೂ. ವಿದೇಶಿ ವಿನಿಮಯ ಗೋಡಂಬಿ ರಫ್ತಿನಿಂದ ಬರುತ್ತಿದ್ದು, ಸುಮಾರು 15 ಲಕ್ಷ ಜನರಿಗೆ ಉದ್ಯೋಗವನ್ನು ಗೇರು ಬೆಳೆ ನೀಡಿದೆ ಎಂದು ಕೇರಳದ ಕೊಚ್ಚಿಯ ಗೇರು ಅಭಿವೃದ್ಧಿ ನಿಗಮದ ನಿರ್ದೇಶಕರಾದ ಡಾ.ವೆಂಕಟೇಶ್ ಎನ್. ಹುಬ್ಬಳ್ಳಿ ಅವರು ಹೇಳಿದರು.ಇಂದು ಉಳ್ಳಾಲ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಗೇರು-ಮೇಳ ಗೇರು ಬೆಳೆ ತರಬೇತಿ ಹಾಗೂ ಗೇರು ಬೆಳೆ ಕ್ಷೇತ್ರೋತ್ಸವ ಉದ್ಘಾಟನೆ ಮಾಡಿ ಅವರು ಮಾತನಾಡುತ್ತಿದ್ದರು.
ಭಾರತ 2008-09ನೇ ಸಾಲಿನಲ್ಲಿ 6,95,000 ಮೆಟ್ರಿಕ್ ಟನ್ ಗೋಡಂಬಿ ಉತ್ಪಾದನೆ ಮಾಡಿದ್ದು, 1,09,523 ಮೆ.ಟನ್ ಗೋಡಂಬಿ ತಿರುಳನ್ನು ರಫ್ತು ಮಾಡಿ 26.06 ಕೋಟಿ ರೂಪಾಯಿ ಲಾಭ ಗಳಿಸಿದೆ. ಅಮೆರಿಕಾ, ನೆದರ್ ಲ್ಯಾಂಡ್, ಯು.ಎ.ಇ, ಜಪಾನ್ ಮುಂತಾದ ದೇಶಗಳು ಪ್ರಮುಖವಾದ ಗೋಡಂಬಿ ಆಮದು ರಾಷ್ಟ್ರಗಳಾಗಿವೆ.ಭಾರತದಲ್ಲಿ ಬಂಜರು ಭೂಮಿಯಲ್ಲಿ ಮಾತ್ರ ಗೇರು ಬೆಳೆಯುತ್ತಿರುವುದರಿಂದ ಉತ್ಪಾದನಾ ಪ್ರಮಾಣ ಕಡಿಮೆಯಾಗಿದೆ. ಈ ಬಗ್ಗೆ ಕೃಷಿಕರಿಗೆ ಮಾಹಿತಿ ಮತ್ತು ಪ್ರೋತ್ಸಾಹ ನೀಡಬೇಕಾದ ಅಗತ್ಯವನ್ನು ಮನಗಂಡು ಇಂತಹ ಮೇಳಗಳನ್ನು ಆಯೋಜಿಸಲಾಗುತ್ತಿದ್ದು ಕೃಷಿಕರು ಇದರ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಯಡಿ ಗೇರುಬೆಳೆಗೆ ಆದ್ಯತೆ ನೀಡಲಾಗಿದ್ದು, 20,000 ರೂ.ಗಳ ಸಬ್ಸಿಡಿಯನ್ನು ನೀಡಿದೆ. ವಿಯಟ್ನಾಂ ನಂತಹ ದೇಶದಲ್ಲಿ ಫಲವತ್ತಾದ ಭೂಮಿಯಲ್ಲಿ ಗೇರು ಕೃಷಿ ನಡೆಸಿ ಹೆಚ್ಚಿನ ಲಾಭವನ್ನು ಕೃಷಿಕರು ಪಡೆಯು ತ್ತಿದ್ದಾರೆ. ಗೇರುಬೀಜ ಮಾತ್ರವಲ್ಲದೆ ಗೇರು ಹಣ್ಣಿನಿಂದ ಜ್ಯೂಸ್ ತಯಾರಿಕೆಗೆ ಒತ್ತು ನೀಡಲಾಗುತ್ತಿದ್ದು, ಗೇರು ಹಣ್ಣು ಬೇಗನೆ ಕೊಳೆಯುವುದರಿಂದ ಪ್ರಿಸರ್ವೇಟಿವ್ ಬಳಸಿ ಸ್ಯಾಚೆಟ್ ಮೂಲಕ ಮಾರ್ಕೆಟಿಂಗ್ ಮಾಡುವ ಬಗ್ಗೆಯೂ ಕೃಷಿ ಸಂಶೋಧನಾ ಕೇಂದ್ರ ಚಿಂತನೆ ನಡೆಸುತ್ತಿದೆ ಎಂದರು.
ಕ್ಚೇತ್ರೋತ್ಸವದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಬ್ರಹ್ಮಾವರದ ಸಹ ಸಂಶೋಧನ ಕೇಂದ್ರದ ಡಾ.ಎಮ್. ಹನುಮಂತಪ್ಪ ಅವರು, ಗೇರು ಬೆಳೆಯ ಪ್ರದೇಶ ವಿತರಣೆ ಮತ್ತು ಹೆಚ್ಚು ಇಳುವರಿಗೆ ಆದ್ಯತೆ ನೀಡಲಾಗಿದೆ.ಸಂಶೋಧನಾ ಕೇಂದ್ರ ಐದು ರೀತಿಯ ತಳಿಗಳನ್ನು ಬಿಡುಗಡೆ ಮಾಡಿದ್ದು, ಉಳ್ಳಾಲ-1 ರಾಜ್ಯಾದ್ಯಂತ ಹೆಚ್ಚಿನ ಕೃಷಿಕರು ಬಳಸುತ್ತಿದ್ದಾರೆ. ಉಳ್ಳಾಲ-1,ಉಳ್ಳಾಲ-2,ಉಳ್ಳಾಲ-3,ಉಳ್ಳಾಲ-4 ಮತ್ತು ಯು ಎನ್.50 ಗೇರು ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ ವರ್ಷ ರೈತರಿಗಾಗಿ 80,000 ದಿಂದ ಒಂದು ಲಕ್ಷ ಗಿಡ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಅಭಿವೃದ್ಧಿ ಪಡಿಸಿದ ತಳಿಗಳು ಒರಿಸ್ಸಾ ರಾಜ್ಯದಲ್ಲೂ ರೈತರಿಗೆ ಪ್ರಿಯವಾಗಿವೆ ಎಂದರು.
ಶಿಕ್ಷಣ ನಿರ್ದೇಶಕರಾದ ಡಾ. ಜೆ.ವೆಂಕಟೇಶ್ ಗೇರುಕೃಷಿ ಕೈಪಿಡಿ ಬಿಡುಗಡೆ ಮಾಡಿದರು. ಸಂಶೋಧನಾ ನಿರ್ದೇಶಕರಾದ ಡಾ.ಪಿ.ನಾರಾಯಣ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಗೇರು ಸಂಶೋಧನಾ ನಿರ್ದೇಶಕರಾದ ಡಾ.ಎಂ.ಜಿ.ಭಟ್ ವಸ್ತುಪ್ರದರ್ಶನ ಮಳಿಗೆ ಉದ್ಘಾಟಿಸಿದರು. ಉಳ್ಳಾಲ ತೋಟಗಾರಿಕೆ ಸಂಶೋಧನಾ ಕೇಂದ್ರದ ಡಾ.ಲಕ್ಷ್ಮಣ ಸ್ವಾಗತಿಸಿದರು. ಅಚಲ್ ಕ್ಯಾಶ್ಯೂ ಇಂಡಸ್ಟ್ರೀಸ್ ನ ಜಿ.ಎಮ್. ಎಂ.ಎನ್.ಪೈ, ಗೋಡಂಬಿ ಉತ್ಪಾದಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಕಾಮತ್, ನವೋದಯ ಗ್ರಾಮವಿಕಾಸ ಟ್ರಸ್ಟ್ ನ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ, ಪ್ರಗತಿಪರ ಕೃಷಿಕ ನರಹರಿಪ್ರಭು ಉಪಸ್ಥಿತರಿದ್ದರು.
ವಸ್ತು ಪ್ರದರ್ಶನ ಮಳಿಗೆಯಲ್ಲಿ ಮೂಡಬಿದ್ರೆ ಅನ್ವರ್ ಅವರ ತೋಟದ 26 ಕೆಜಿ ತೂಕದ ಚೀನಿಕಾಯಿ, 22 ಕೆ.ಜ.ತೂಗುವ ಬೂದು ಕುಂಬಳಕಾಯಿ ವಿಶೇಷ ಆಕರ್ಷಣೆಯಾಗಿತ್ತು. ಸಾವಯವ ಕೃಷಿ ಬೀಜದ ಪ್ರದರ್ಶನ ಮಳಿಗೆಗಳನ್ನು ರೈತರು ಆಸಕ್ತಿಯಿಂದ ವೀಕ್ಷಿಸಿದರು.