Wednesday, February 17, 2010

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಂದ ಅಹವಾಲು ಸ್ವೀಕಾರ

ಮಂಗಳೂರು, ಫೆಬ್ರವರಿ,17: ಮೂಲ ಸೌಕರ್ಯಗಳ ಕೊರತೆ, ನಿರ್ವಹಣೆಯ ಕೊರತೆಯಿಂದ ಹಿಂದುಳಿದ ವರ್ಗಗಳ ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜನರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಸಿ. ಎಸ್. ದ್ವಾರಕಾನಾಥ್ ಹೇಳಿದರು.
ಅವರಿಂದು ಬೈಕಂಪಾಡಿಯ ಮೀನಕಳಿಯ ಮೀನುಗಾರರ ಕಾಲನಿಗೆ ಭೇಟಿ ನೀಡಿ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಮಾತುಕತೆ ನಡೆಸಿ ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು, ಈ ಸಂದರ್ಭದಲ್ಲಿ ರಂಪಣಿ ಮೀನುಗಾರಿಕೆಗೆ ಸಹಾಯಧನ ಒದಗಿಸಿಕೊಡುವಂತೆ ಮನವಿ ನೀಡಲಾಯಿತು. ಈ ಸಂಬಂಧ ಸ್ಪಂದಿಸಿದ ಆಯೋಗದ ಅಧ್ಯಕ್ಷರು, ವಿಶೇಷ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿ ಸ್ಪೆಷಲ್ ಪ್ಯಾಕೇಜ್ ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಪ್ರಸ್ತುತಾ ಕೇಂದ್ರದ ಕೃಷಿ ಖಾತೆಯಲ್ಲಿರುವ ಮೀನುಗಾರಿಕೆಗೆ ಪ್ರತ್ಯೇಕ ರಾಷ್ಟ್ರೀಯ ಮೀನುಗಾರಿಕಾ ಖಾತೆ ಮಾಡುವ ಬಗ್ಗೆಯೂ ಸರಕಾರದ ಗಮನ ಸೆಳೆಯುವುದಾಗಿ ಅವರು ಭರವಸೆ ನೀಡಿದರು.
ಸುರತ್ಕಲ್ಲಿನ ಸಸಿಹಿತ್ಲು ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ ಆಯೋಗದ ಅಧ್ಯಕ್ಷರು, ಸ್ಥಳಿಯ ಮೂರ್ತೆದಾರರು, ನೇಕಾರರಿಂದ ಅಹವಾಲುಗಳನ್ನು ಪಡೆದರು.60 ವರ್ಷ ದಾಟಿದ ನೇಕಾರರು ತಮಗೆ ಪಿಂಚಣಿ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರು. ನಗರದ ಉರ್ವ ಮತ್ತು ಕೇಂದ್ರ ಮೀನು ಮಾರುಕಟ್ಟೆಗಳಿಗೂ ಆಯೋಗ ಭೇಟಿ ನೀಡಿ ಮೀನುಗಾರ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಬಿ.ಗುರುಸ್ವಾಮಿ, ಎಂ.ಎಸ್. ಹೆಳವಾರ್, ಮಾಂತೇಶ್, ಡಿ. ಪಾಟೀಲ್, ಎಸ್.ಎಂ. ಹತ್ತಿಗಟ್ಟಿ, ಯೋಗಾನಂದ ಕುಮಾರ್, ಜಿಲ್ಲಾ ಹಿಂದುಳೀದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.