Monday, May 31, 2010

ಜೂನ್ 2 ರಿಂದ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಪ್ರಕ್ರಿಯೆ

ಮಂಗಳೂರು, ಮೇ 31: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ವಿವಿಧ ತಾಲೂಕುಗಳಲ್ಲಿ ಜೂನ್ 2 ರಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಬೆಳ್ತಂಗಡಿ ತಾಲೂಕು : ಜೂನ್ 2ರಂದು ಬೆಳಗ್ಗೆ 10.30ಗಂಟೆಗೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನ ಗುರುವಾಯನಕೆರೆ. ಪುತ್ತೂರು ತಾಲೂಕು : ಜೂನ್ 2ರಂದು ಮಧ್ಯಾಹ್ನ 3 ಗಂಟೆಗೆ ಪುತ್ತೂರು ಪುರಭವನ.ಸುಳ್ಯ ತಾಲೂಕು : ಜೂನ್ 3ರಂದು ಬೆಳಗ್ಗೆ 10.30ಗಂಟೆಗೆ ಸುಳ್ಯ ಕೆವಿಜಿ ಪುರಭವನ. ಬಂಟ್ವಾಳ ತಾಲೂಕು : ಜೂನ್ 4ರಂದು ಬೆಳಗ್ಗೆ 10 ಗಂಟೆಗೆ ಬ್ರಹ್ಮ ಶ್ರೀ ನಾರಾಯಣ ಮಂದಿರ ಬಿ.ಸಿ.ರೋಡ್. ಮಂಗಳೂರು ತಾಲೂಕು : ಜೂನ್ 4 ರಂದು ಮಧ್ಯಾಹ್ನ 3 ಗಂಟಗೆ ಮಂಗಳೂರು ಪುರಭವನ. ಈ ಹಿಂದಿನ ಐದು ಅವಧಿಯ ಮೀಸಲಾತಿಯನ್ನು ಪರಿಗಣಿಸಿ ಮುಂದಿನ ಮೀಸಲಾತಿ ನಿಗದಿಪಡಿಸಲಾಗುವುದು ಎಂದು ಪ್ರಭಾಕರ ಶರ್ಮ ಹೇಳಿದರು.
ಶೇಕಡ 100 ಎಪಿಕ್ ಕಾರ್ಡ್ ವಿತರಣೆಗೆ ಜಿಲ್ಲೆ ಸಜ್ಜು: ಜಿಲ್ಲಾಧಿಕಾರಿ
ಮಂಗಳೂರು, ಮೇ 31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 93.03 ಶೇಕಡಾ ಮತದಾರರಿಗೆ ಭವಚಿತ್ರ ಸಹಿತ ಗುರುತಿನ ಚೀಟಿ ಇದೆ. ಉಳಿದವರಿಗೆ ಭವಚಿತ್ರ ಸಹಿತದ ಗುರುತಿನ ಚೀಟಿ ನೀಡಲು ವಿಶೇಷ ಕಾರ್ಯಕ್ರಮ ಜೂನ್ 1ರಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಇಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾರರ ಗುರುತು ಚೀಟಿ ಪಡೆಯಲು ಬಾಕಿ ಇರುವ ಮತದಾರರ ಮನೆಗಳನ್ನು ಸಂದರ್ಶಿಸಿ ಎಪಿಕ್-001ಬಿ ಫಾರ್ಮ್ -8 ನಮೂನೆಗಳನ್ನು ನೀಡಲಾಗುವುದು. ಜೊತೆಗೆ ಮತದಾರರ ಪಾಸ್ಪೋರ್ಟ್ ಗಾತ್ರದ ಬಣ್ಣದ ಭಾವಚಿತ್ರವನ್ನು ಅಂಟಿಸಲು ಹಾಗು ನಮೂನೆಯನ್ನು ಭರ್ತಿ ಮಾಡಲು ಮತದಾರರಿಗೆ ತಿಳಿಸುವ ಬಗ್ಗೆ ಬೂತ್ಮಟ್ಟದ ಅಧಿಕಾರಿಯನ್ನು ಜೂ 1ರಿಂದ 10ರವರೆಗೆ ನಿಯೋಜಿಸಲಾಗುವುದು. ಭರ್ತಿ ಮಾಡಿದ ಅರ್ಜಿ ಮತ್ತು ಭಾವಚಿತ್ರ ಅಂಟಿಸಿದ ನಮೂನೆಗಳನ್ನು ಜೂ 15ರೊಳಗೆ ಸಂಗ್ರಹಿಸಲು ಪುನ: ಬೂತ್ ಮಟ್ಟದ ಅಧಿಕಾರಿಯನ್ನು ನಿಯೋಜಿಸಲಾಗುವುದು. ಈ ಸಮಗ್ರ ಮಾಹಿತಿಯನ್ನು ಸಂಬಂಧಪಟ್ಟ ಮತದಾರರಿಗೆ ಜೂ 30ರ ನಂತರ ವಿತರಿಸಲಾಗುವುದು ಎಂದರು.
ಮತದಾರರ ಪಟ್ಟಿಗಳ ಪರಿಷ್ಕರಣೆ : ಚುನಾವಣಾ ಆಯೋಗದ ನಿರ್ದೇಶನದಂತೆ 2010ರ ಜನವರಿ 1ರ ಅರ್ಹತಾ ದಿನಾಂಕದಂತೆ ಮತದಾರರ ಪಟ್ಟಿಗಳ ಪರಿಷ್ಕರಣೆ ನಡೆಯಲಿದೆ.
ಜೂನ್ 21ರಂದು ಮತದಾರರ ಪಟ್ಟಿಗಳ ಕರಡು ಪ್ರಕಟಣೆ, ಜೂನ್ 21ರಿಂದ ಜುಲೈ 6ರವೆರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ, ಜೂನ್ 27ರಿಂದ ಜುಲೈ 4ರವರೆಗೆ ಬೂತ್ ಮಟ್ಟದ ಅಧಿಕಾರಿ ಮತ್ತು ಬೂತ್ ಮಟ್ಟದ ಏಜೆಂಟರು ವಿಶೇಷ ಆಂದೋಲನದ ಮೂಲಕ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವುದು, ಜುಲೈ 30ರಂದು ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆ ಮಾಡಲಾಗುವುದು. ಹಾಗಾಗಿ ಜಿಲ್ಲೆಯ ಮತದಾರರು ತಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ನಮೂದಾಗಿದೆಯೇ ಎಂಬುದನ್ನು ಆಯಾಯ ಮತಗಟ್ಟೆಗಳಲ್ಲಿ, ಮತದಾರರ ನೋಂದಣಾಧಿಕಾರಿ ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಯವರ ಕಚೇರಿಗಳಲ್ಲಿ ಜೂ 21ರಂದು ಪರಿಶೀಲಿಸಬೇಕು. ಅಲ್ಲದೆ, 2010 ಜನವರಿ 1ರಂದು 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಬಗ್ಗೆ ನಮೂನೆ 6ರಲ್ಲಿ ಮತ್ತು ಮೃತಪಟ್ಟ ಅಥವಾ ವಲಸೆ ಹೋದ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕಾದ ಪ್ರಕರಣಗಳಲ್ಲಿ ನಿಗದಿಪಡಿಸಿದ ನಮೂನೆ 7, ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟ ನಮೂದನ್ನು ತಿದ್ದುಪಡಿ ಮಾಡಬೇಕಾದ ಪ್ರಕರಣಗಳಲ್ಲಿ ನಿಗದಿಪಡಿಸಿದ ನಮೂನೆ 8 ಮತ್ತು ವಿಧಾನ ಸಭ ಕ್ಷೇತ್ರವೊಂದರ ಒಂದು ಭಗ ಸಂಖ್ಯೆಯಿಂದ ಇನ್ನೊಂದು ಭಗ ಸಂಖ್ಯೆಗೆ ಹೆಸರು ನೋಂದಾಯಿಸಬೇಕಾಗಿದ್ದ ಪ್ರಕರಣಗಳಲ್ಲಿ ನಿಗದಿಪಡಿಸಿದ ನಮೂನೆ 8 ರಲ್ಲಿ ಆಯಾಯ ಮತಗಟ್ಟೆಗಳಲ್ಲಿ ಮನವಿ ಸಲ್ಲಿಸಬೇಕು ಎಂದು ಹೇಳಿದರು.
ಮತದಾರರ ಗುರುತಿನ ಚೀಟಿ ಕಳೆದು ಕೊಂಡವರಿಗೆ ಅವಕಾಶ: ಗುರುತಿನ ಚೀಟಿ ಕಳೆದುಕೊಂಡವರು, ಹೊಸ ಭಾವಚಿತ್ರ ಇರುವ ಗುರುತಿನ ಚೀಟಿಗಾಗಿ ಜುಲೈ ತಿಂಗಳಿನಿಂದ ಪ್ರತೀ ತಾಲೂಕು ಕೇಂದ್ರದಲ್ಲಿ ವಿಶೇಷ ಕೇಂದ್ರ ಆರಂಭಿಸಲಾಗುವುದು. ಮಂಗಳೂರು ತಾಲೂಕಿಗೆ ಸಂಬಂಧಿಸಿದಂತೆ ಮನಪಾ, ಮೂಡಬಿದ್ರೆ, ಮಂಗಳೂರು ತಾಲೂಕು ಕಚೇರಿಯಲ್ಲಿ ಹೆಚ್ಚುವರಿ ಕೇಂದ್ರ ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಶಾಲೆಗಳಿಗೆ ರಜೆ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಅಧಿಕಾರ : ಮಳೆಗಾಲದಲ್ಲಿ ತುರ್ತಾಗಿ ಶಾಲೆಗಳಿಗೆ ರಜೆ ನೀಡಲು ಆಯಾ ಶಾಲಾ ಮುಖ್ಯೋಪಾಧ್ಯಾಯರ ಬಳಿ ಸಮಾಲೋಚಿಸಿ ತೀರ್ಮಾನಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು. ಮಳೆಗಾಲದ ಮುನ್ನೆಚ್ಚರಿಕೆಗಾಗಿ ಸಹಾಯವಾಣಿ 1077 ಕಾರ್ಯಾಚರಿಸುತ್ತಿದೆ ಎಂದು ಶರ್ಮ ತಿಳಿಸಿದ್ದಾರೆ

ಜನಗಣತಿ

ಮಂಗಳೂರು,ಮೇ31: ಜನಗಣತಿಯ ಅಂತಿಮದಿನವಾದ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೆಮಾರ್ ಹಾಗೂ ಶಾಸಕರಾದ ಯೋಗೀಶ್ ಭಟ್ ರ ಮನೆಯಲ್ಲಿ ಗಣತಿದಾರರು ಮಾಹಿತಿ ಸಂಗ್ರಹಿಸಿದರು.

Thursday, May 27, 2010

ಜಿಲ್ಲಾಡಳಿತದಿಂದ ಭಾವಪೂರ್ಣ ಶ್ರದ್ಧಾಂಜಲಿ


ಮಂಗಳೂರು, ಮೇ 27: ಬಜ್ಪೆಯಲ್ಲಿ ಮೇ 22 ರಂದು ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮೃತ ಪಟ್ವವರ ಸ್ಮರಣಾರ್ಥ ಜಿಲ್ಲಾಡಳಿತ ಇಂದು ಭಾವಪೂರ್ಣ ಶ್ರದ್ದಾಂಜಲಿ ಮತ್ತು ಶೋಕ ಸಭೆಯನ್ನು ಏರ್ಪಡಿಸಿತ್ತು. ವಿಮಾನ ನಿಲ್ದಾಣದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿಯಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸರ್ವಧರ್ಮ ಪ್ರಾರ್ಥನೆ ಮತ್ತು 2 ನಿಮಿಷ ಮೌನಾಚರಣೆ, ಪೊಲೀಸ್ ಬ್ಯಾಂಡ್ ಮೂಲಕ ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.
ಮಂಗಳೂರು, ಮೇ 26: ಬಜ್ಪೆ ಕೆಂಜಾರು ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಗುರುತು ಪತ್ತೆಯಾಗದೆ ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿದ್ದ 22 ಮೃತದೇಹಗಳಲ್ಲಿ 10 ದೇಹಗಳ ಗುರುತು ಪತ್ತೆಯಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಇಂದು ತಿಳಿಸಿದ್ದಾರೆ.

ತಮ್ಮ ಕಚೇರಿ ಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ದುರಂತ ಕ್ಕೀಡಾದ ವಿಮಾನದ ಇಬ್ಬರು ಸಿಬ್ಬಂದಿಗಳ ಮೃತದೇಹ ಸೇರಿದಂತೆ ಕರ್ನಾಟಕದ ಐದು ಹಾಗೂ ಕೇರಳದ 3 ಮೃತ ದೇಹಗಳ ಪತ್ತೆಯಾಗಿದೆ ಎಂದು ಅವರು ತಿಳಿಸಿದರು. ಗುರುತು ಪತ್ತೆಯಾದ ಮೃತ ದೇಹಗಳಲ್ಲಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮಂಗಳೂರಿನ ಅರುಣ್ ಜಾಯಲ್ ಫೆರ್ನಾಂಡಿಸ್, ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಉಡುಪಿಯ ಅಲ್ತಾಫ್ ಮುಹಮ್ಮದ್ ಮೌಲಾನ,ಕೊಲಾಸೊ ಆಸ್ಪತ್ರೆಯಲ್ಲಿ ದಾಂಡೇಲಿಯ ಮಹೇಂದ್ರ ರಮೇಶ್, ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ ಉಡುಪಿಯ ನಾವಿದ್ ಇಬ್ರಾಹಿಂ ಸಿರಾಜ್, ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮಂಗಳೂರಿನ ಮುಹಮ್ಮದ್ ಝಿಯಾದ್, ಸಿಟಿ ಆಸ್ಪತ್ರೆಯಲ್ಲಿ ಕಾಸರ ಗೋಡಿನ ರಿಜು ಜಾನ್, ಎಸ್ಸಿಎಸ್ ಆಸ್ಪತ್ರೆಯಲ್ಲಿ ಕಾಸರ ಗೋಡಿನ ಉಮೇಶನ್ ವಿಜಯನ್, ಸಿಟಿ ಆಸ್ಪತ್ರೆಯಲ್ಲಿ ಕಾಸರ ಗೋಡಿನ ಮುಹಮ್ಮದ್ ಬಶೀರ್ ಅವರ ಮೃತದೇಹಗಳಿವೆ.
ಉಳಿದಂತೆ ಗುರುತು ಪತ್ತೆಯಾಗಿರುವ ವಿಮಾನದ ಸಿಬ್ಬಂದಿಗಳಾದ ಪಶ್ಚಿಮ ಬಂಗಾಳದ ಯುಗಾಂತರ್ ರಾಣಾ ಅವರ ಮೃತದೇಹವು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಹಾಗೂ ಮಧ್ಯಪ್ರದೇಶದ ಮುಹಮ್ಮದ್ ಅಲಿ ಅವರ ಮೃತದೇಹವು ಎಸ್ಸಿಎಸ್ ಆಸ್ಪತ್ರೆಯಲ್ಲಿದೆ ಎಂದು ಸೀಮಂತ್ ಕುಮಾರ್ ಸಿಂಗ್ ವಿವರಿಸಿದರು. ಇನ್ನೂ 12 ಮೃತದೇಹಗಳ ಗುರುತು ಪತ್ತೆಯಾಗಬೇಕಿದ್ದು, ಶೀಘ್ರದಲ್ಲೇ ಡಿಎನ್ಎ ಫಲಿತಾಂಶ ವರದಿ ಸಿಗಲಿದೆ ಎಂದವರು ಹೇಳಿದರು.
18 ಮಂದಿ ಮೃತರ ಸಂಬಂಧಿಗಳು ಮಾತ್ರ ಡಿಎನ್ಎ ಪರೀಕ್ಷೆ:ಗುರುತುಪತ್ತೆಯಾಗದೆ ಬಾಕಿ ಉಳಿದಿದ್ದ 22 ಮೃತದೇಹಗಳ ಪತ್ತೆಗಾಗಿ ಕಳೆದ ರವಿವಾರ ಡಿಎನ್ಎ ಪರೀಕ್ಷೆಗಾಗಿ ರಕ್ತ ಮಾದರಿ ಹಾಗೂ ಫೋಟೋ ಸಂಗ್ರಹಿಸಲಾದ ಸಂದರ್ಭ ಮೃತರಿಗೆ ಸಂಬಂಧಿಸಿ 18 ಮಂದಿಯ ಕುಟುಂಬಗಳು ಮಾತ್ರ ಮುಂದೆ ಬಂದಿತ್ತು. ಕುಟುಂಬವೊಂದರ ತಲಾ ಇಬ್ಬರಂತೆ 18 ಕುಟುಂಬಗಳ ಒಟ್ಟು 36 ಮಂದಿಯ ರಕ್ತ ಮಾದರಿ ಹಾಗೂ ಫೋಟೋ ಸಂಗ್ರಹಿಸಿ ಡಿಎನ್ಎ ಪರೀಕ್ಷೆಗೆ ಹೈದಾರಾಬಾದ್ಗೆ ಕಳುಹಿಸಲಾಗಿತ್ತು ಎಂದು ಸೀಮಂತ್ ಕುಮಾರ್ ಸಿಂಗ್ ಇಂದು ತಿಳಿಸಿದರು.
ಅಮೂಲ್ಯ ವಸ್ತುಗಳು ಸಂಬಂಧಿತರಿಗೆ ಹಸ್ತಾಂತರಿಸಲು ಸಿದ್ಧತೆ:
ವಿಮಾನ ದುರಂತದ ಪ್ರದೇಶದಲ್ಲಿ ದೊರೆತ ವಿಮಾನದಲ್ಲಿದ್ದವರ ಅಮೂಲ್ಯ ವಸ್ತುಗಳಾದ ಚಿನ್ನಾಭರಣಗಳು, ನಗದು, ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ಪೊಲೀಸರು ಏರ್ ಇಂಡಿಯಾಕ್ಕೆ ಹಸ್ತಾಂತರಿಸಿದ್ದು, ಸಿಟಿ ವಲಯಕ್ಕೆ ಸಂಬಂಧಿಸಿ ಮಂಗಳೂರಿನ ಲಾಲ್ ಭಾಗ್ ನಲ್ಲಿರುವ ಏರ್ಇಂಡಿಯಾ ಕಚೇರಿ ಮೂಲಕ ಆ ವಸ್ತುಗಳನ್ನು ಸಂಬಂಧಿತರಿಗೆ ಹಸ್ತಾಂತರಿಸಲಾಗುವುದು. ದುಬೈನ ವಿಮಾನ ನಿಲ್ದಾಣದ ಕಚೇರಿಯಿಂದ ಪ್ರಯಾಣಿಕರ ಲಗೇಜ್ ಕುರಿತಾದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈ ಕುರಿತು ಪ್ರಕ್ರಿಯೆ ನಿನ್ನೆ ಮಧ್ಯಾಹ್ನದಿಂದ ಆರಂಭಗೊಂಡಿದೆ. ಸಂಬಂಧಿತರು ಈ ಬಗ್ಗೆ ಲಾಲ್ ಭಾಗ್ ಕಚೇರಿಯಲ್ಲಿ ಮಾಹಿತಿ ಒದಗಿಸಿ ತಮ್ಮ ವಸ್ತುಗಳನ್ನು ಪಡೆಯಬಹುದಾಗಿದೆ ಎಂದು ಸಿಂಗ್ ತಿಳಿಸಿದರು.
ದುರಂತದ ಸಂದರ್ಭ ಘಟನಾ ಸ್ಥಳದಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆ ಸಂದರ್ಭ ಸ್ವಯಂ ಕಾರ್ಯಕರ್ತರೆನಿಸಿಕೊಂಡವರು ಅಲ್ಲಿದ್ದ ಕೆಲವೊಂದು ಚಿನ್ನಾಭರಣಗಳನ್ನು ಎಗರಿಸಿದ್ದಾರೆಂಬ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಯಾವುದೇ ದೂರು ಬಂದಿಲ್ಲ. ಪೊಲೀಸ್ ಅಧಿಕಾರಿಗಳು ಕೂಡಾ ಇಂತಹ ಕೃತ್ಯ ಎಸಗಿದ್ದಾರೆಂಬ ಊಹಾಪೋಹಗಳು ಕೇಳಿಬಂದಿವೆ. ಮಾನವೀಯತೆಯ ನೆಲೆಯಲ್ಲಿ ಎಲ್ಲರೂ ಈ ಸಂದರ್ಭ ಘಟನಾ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರಿಂದ ಇಂತಹ ಘಟನೆ ನಡೆದಿರಲು ಸಾಧ್ಯವಿಲ್ಲ. ಹಾಗಿದ್ದರೂ ತಮ್ಮ ಪೊಲೀಸ್ ಸಿಬ್ಬಂದಿಗಳು ಸೇರಿ ಇಂತಹ ಕೃತ್ಯ ನಡೆದಿದೆ ಎಂಬ ಬಗ್ಗೆ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ನಕಲಿ ಪಾಸ್ ಪೋರ್ಟ್ ಬಗ್ಗೆ ದೂರು ಬಂದಿಲ್ಲ:ದುರಂತಕ್ಕೀಡಾದ ವಿಮಾನದಲ್ಲಿ ಕೆಲವರು ನಕಲಿ ಪಾಸ್ ಪೋರ್ಟ್ ನಲ್ಲಿ ಪ್ರಯಾಣಿಸುತ್ತಿದ್ದಾರೆಂಬ ಬಗ್ಗೆ ಆರೋಪ ಕೇಳಿ ಬಂದಿದೆ. ಆದರೆ ತಮಗೆ ಈ ಬಗ್ಗೆ ಈವರೆಗೆ ಯಾವುದೇ ದೂರು ಬಂದಿಲ್ಲ ಎಂದು ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದರು.ನಗರ ಎಸಿಪಿ ಬಿ,ಜೆ. ಭಂಡಾರಿ ಅವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Monday, May 24, 2010

ವಿಮಾನ ಅಪಘಾತ:ಗುರುತಿಸಲ್ಪಡದ ಮೃತದೇಹಗಳ ಡಿಎನ್ ಎ ಪರೀಕ್ಷೆ

ಮಂಗಳೂರು,ಮೇ.24:ಬಜಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಗುರುತಿಸಲಾಗದ ಸ್ಥಿತಿಯಲ್ಲಿರುವ 22 ಮೃತದೇಹಗಳ ಪತ್ತೆಗೆ ಡಿಎನ್ಎ ಪರೀಕ್ಷೆ ನಡೆಸಲು ಸ್ಯಾಂಪಲ್ ಗಳನ್ನು ಹೈದರಾಬಾದ್ ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಅವರಿಂದು ಪತ್ರಿಕಾ ಗೋಷ್ಠಿಯಲ್ಲಿ ಈ ಸಂಬಂಧ ಮಾಹಿತಿ ನೀಡಿ, ಮೃತ ಕುಟುಂಬಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದು, ಶೀಘ್ರವೇ ವಿಧಿ ವಿಜ್ಞಾನ ವರದಿ ತಯಾರಿಸಿ ಕಳುಹಿಸಿಕೊಡಲು ಸಂಬಂಧ ಪಟ್ಟವರನ್ನು ಕೋರಿರುವುದಾಗಿ ನುಡಿದರು. ದುರಂತದ ಬಗ್ಗೆ ಕಂಟ್ರೋಲ್ ರೂಮ್ ಗೆ ಮೊದಲು ಮಾಹಿತಿ ನೀಡಿದವರನ್ನು ಸ್ಮರಿಸಿದ ಅವರು ತಕ್ಷಣವೇ ಅವರನ್ನು ಸಂಪರ್ಕಿಸಿ ಸೂಕ್ತ ವ್ಯವಸ್ಥೆ ಕೈಗೊಂಡ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಮಾಹಿತಿದಾರರನ್ನು ಹಾಗೂ ಅತ್ಯುತ್ತಮವಾಗಿ ಈ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸಿದರು. ಡಿ ಎನ್ ಎ ಪರೀಕ್ಷೆ ವರದಿ ಕೈಸೇರಲು ಕನಿಷ್ಠ 8 ದಿನಗಳು ಬೇಕಾಗಿದೆ ಎಂದರು. ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಪೊಲೀಸ್ ಉಪ ಆಯುಕ್ತ ಆರ್. ರಮೇಶ್ ಉಪಸ್ಥಿತರಿದ್ದರು.

ಒಂದು ವಾರ ಶೋಕಾಚರಣೆ

ಮಂಗಳೂರು,ಮೇ24:ಬಜಪೆಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮಡಿದವರ ಸ್ಮರಣಾರ್ಥ ಜಿಲ್ಲೆಯಲ್ಲಿ ದುರ್ಘಟನೆ ನಡೆದ ಮೇ 22 ರಿಂದ 28 ರವರೆಗೆ ಶೋಕಾಚರಣೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರು ಹೇಳಿದರು.ಈ ದಿನಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಸಮಾರಂಭಗಳು ನಡೆಯುವುದಿಲ್ಲ ಎಂದಿರುವ ಅವರು, ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ. ಸಾರ್ವಜನಿಕರು ಯಾವುದೇ ಅದ್ದೂರಿ ಸಮಾರಂಭಗಳನ್ನು ಆಚರಿಸದಂತೆ ಅವರು ಮನವಿ ಮಾಡಿದ್ದಾರೆ.

ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ರೈಲ್ವೇ ಸಚಿವ ಮುನಿಯಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

ಮಂಗಳೂರು,ಮೇ 24:ಬಜಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತದಲ್ಲಿ ಬಲಿಯಾದವರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ನೆರವು ನೀಡಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಪ್ರಧಾನ ಮಂತ್ರಿಯವರ ಸಲಹೆಯಂತೆ ಪರಿಹಾರ ಹಾಗೂ ಕಾರ್ಯಾಚರಣೆಯ ಬಗ್ಗೆ ವಿಶೇಷ ಸಹಕಾರ ನೀಡಲು ರೈಲ್ವೇ ಸಚಿವ ಮುನಿಯಪ್ಪ ಅವರು ಸ್ಥಳದಲ್ಲಿದ್ದು, ಅಧಿಕಾರಿಗಳ ಸಭೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಯಲ್ಲಿಂದು ನಡೆದ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಐಜಿ ಗೋಪಾಲ್ ಹೊಸೂರ್, ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ನಗರಪಾಲಿಕೆ ಕಮಿಷನರ್ ಡಾ.ವಿಜಯಪ್ರಕಾಶ್, ಸಿಇಒ ಶಿವಶಂಕರ್, ಏರ್ ಇಂಡಿಯಾದ ಅಧಿಕಾರಿ ಚೆಲ್ಲಂ ಪ್ರಸಾದ್, ಡಿ ಎಚ್ ಒ ಡಾ.ಜಗನ್ನಾಥ್ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.
ಅಪಘಾತದಲ್ಲಿ ಮಡಿದ ಕೊನೆಯ ಮೃತದೇಹ ವಿಲೇವಾರಿಯಾಗುವವರೆಗೆ ಸ್ಥಳದಲ್ಲಿದ್ದು ಉಸ್ತುವಾರಿ ವಹಿಸಿಕೊಳ್ಳುವುದಾಗಿ ಹೇಳಿದ ಸಚಿವರು,ಪರಿಹಾರ ವಿತರಣೆಯಲ್ಲಿ ಯಾವುದೇ ದೋಷ ಹಾಗೂ ಮೃತದೇಹ ಹಸ್ತಾಂತರಿಸುವಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ಸಲಹೆಮಾಡಿದರು. ದುರಂತಕ್ಕೊಳಗಾದ ವಿಮಾನದಲ್ಲಿ ಪ್ರಯಾಣಿಸದೆ ಇದ್ದ 9 ಪ್ರಯಾಣಿಕರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಏರ್ ಇಂಡಿಯಾದ ಅಧಿಕಾರಿ ಚೆಲ್ಲಂ ಪ್ರಸಾದ ಅವರಿಗೆ ಸೂಚಿಸಿದರಲ್ಲದೆ, ಯಾವುದೇ ಕಾರಣಕ್ಕೆ ಮೃತದೇಹಗಳ ಗುರುತಿಸುವಿಕೆ ಹಾಗೂ ಪರಿಹಾರ ವಿತರಣೆಯಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಲು ಹೇಳಿದರು.ಮೃತದೇಹ ಸಂರಕ್ಷಣೆ ಹಾಗೂ ಗುರುತಿಸುವಿಕೆ, ಆಂಬುಲೆನ್ಸ್ ಒದಗಿಸುವ ಬಗ್ಗೆ ಆರೋಗ್ಯ ಇಲಾಖೆ ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದು, ಈ ಸಂಬಂಧ ಆರೋಗ್ಯ ಸಚಿವ ಶ್ರೀರಾಮುಲು ಅವರು ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಮೃತದೇಹಗಳನ್ನು 20 ದಿನಗಳವರೆಗೆ ಸಂರಕ್ಷಿಸುವ ಹಾಗೂ ನಂತರವೂ ಗುರುತಿಸಲಾಗದ ಮೃತದೇಹಗಳನ್ನು ಪೊಲೀಸ್ ಇಲಾಖೆ ಅನುಮತಿಯೊಂದಿಗೆ ಶವ ಸಂಸ್ಕಾರ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಲಾಯಿತು. ಡಿ ಎನ್ ಎ ಪರೀಕ್ಷೆಗೆ ಸಂಬಂಧಿಸಿದಂತೆ ರಕ್ತದ ಸ್ಯಾಂಪಲ್ ಗಳನ್ನು ಹೈದರಾಬಾದ್ ಗೆ ಕಳುಹಿಸಲಾಗಿದ್ದು ಆದಷ್ಟು ಶೀಘ್ರದಲ್ಲಿ ವರದಿಯನ್ನು ನಿರೀಕ್ಷಿಸಲಾಗಿದೆ ಎಂದರು. ಪಾಸ್ ಪೋರ್ಟ್ ಮತ್ತು ವಿಳಾಸಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರ ಖಾತೆ ಜೊತೆ ವ್ಯವಹರಿಸುವಂತೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಡಿಯಾ ಸ್ಯಾಟ್ಸ್ ನ ಉಪಾಧ್ಯಕ್ಷರಾದ ಸೋಮಶೇಖರ್ ಅವರಿಗೆ ಸಚಿವರು ಸೂಚಿಸಿದರು. ದುರಂತದ ಸಂದರ್ಭದಲ್ಲಿ ಎಲ್ಲರೂ ಪ್ರಮುಖವಾಗಿ ಸ್ಥಳೀಯರು ತುರ್ತು ಸಂದರ್ಭವನ್ನು ನಿಭಾಯಿಸಿರುವ ರೀತಿಯನ್ನು ಶ್ಲಾಘಿಸಿದ ಸಚಿವರು, ಪರಿಹಾರ ಕಾರ್ಯಾಚರಣೆ ಮುಗಿಯುವವರೆಗೆ ಸ್ಥಳದಲ್ಲಿರುವುದಾಗಿ ಹೇಳಿದರು.ಸಭೆಯಲ್ಲಿ ಸ್ಥಳೀಯ ಶಾಸಕರಾದ ರಮಾನಾಥ ರೈ ಉಪಸ್ಥಿತರಿದ್ದರು.
ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಕೈಗೊಂಡ ಕ್ರಮಗಳ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಏರ್ ಇಂಡಿಯಾದ ಸಿ ಎಂ ಡಿ ಅರವಿಂದ್ ಜಾದವ್ ಅವರು, ಅಂತಾರಾಷ್ಟ್ರೀಯ ವಿಮಾನ ಪತನವಾದ್ದರಿಂದ ಪರಿಹಾರ ನೀಡಿಕೆಯಲ್ಲಿರುವ ಕಾನೂನು ತೊಡಕುಗಳನ್ನು ಹೇಳಿದರಲ್ಲದೆ ಪರಿಹಾರ ವಿತರಣೆಯಲ್ಲಿ ಸ್ವಲ್ಪ ವಿಳಂಬವಾದರೂ ಪರಿಹಾರ ವಿತರಣೆಯಲ್ಲಿ ಲೋಪವಾಗದಂತೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.ತಕ್ಷಣದ ಪರಿಹಾರವಾಗಿ 12 ವರ್ಷದಿಂದ ಮೇಲ್ಪಟ್ಟವರಿಗೆ 10 ಲಕ್ಷ, ಕೆಳಗಿನವರಿಗೆ 5 ಲಕ್ಷ, ಗಾಯಾಳುಗಳಿಗೆ 2 ಲಕ್ಷ ರೂ. ನೀಡುವುದಾಗಿ ಹೇಳಿದರು. ದುರಂತದಲ್ಲಿ ಮಡಿದವರ ಪರವಾಗಿ ಹಾಗು ಅವರಿಗೆ ಅನ್ಯಾಯವಾಗದಂತೆ ನೆರವು ವಿತರಿಸಲು ನಾನಾವತಿ ಅವರ ಸಲಹೆಯನ್ನು ಪಡೆದುಕೊಳ್ಳುವುದಾಗಿ ಹೇಳಿದರು. ಏರ್ ಇಂಡಿಯಾ ದುರಂತ ಸಂಭವಿಸಿದ ಸಂದರ್ಭದಿಂದ ಎಲ್ಲರ ಜೊತೆ ಸಮನ್ವಯ ಸಾಧಿಸಿ ದಾಖಲೆ ಅವಧಿಯಲ್ಲಿ ತುರ್ತು ಸಂದರ್ಭವನ್ನು ನಿಭಾಯಿಸಿರುವುದಾಗಿ ನುಡಿದರು.ದುರಂತದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು,150 ಮಂದಿಯ ಏಂಜಲ್ಸ್ ಆಫ್ ಏರ್ ಇಂಡಿಯ ತಂಡವನ್ನು ನೇಮಿಸಲಾಗಿದೆ.

Sunday, May 23, 2010

ಯಥಾಸ್ಥಿತಿಗೆ ಮರಳಿದ ಮಂಗಳೂರು ವಿಮಾನ ನಿಲ್ದಾಣ

ಮಂಗಳೂರು,ಮೇ23:ಬಜಪೆ ವಿಮಾನ ನಿಲ್ದಾಣ ಮತ್ತೆ ಯಥಾ ಸ್ಥಿತಿಗೆ ಮರಳಿದ್ದು, ನಿಲ್ದಾಣ ಇಂದು ಪ್ರಯಾಣಿಕರಿಂದ ತುಂಬಿತ್ತು. ನಿಲ್ದಾಣದ ಸಿಬ್ಬಂದಿಗಳಲ್ಲಿ ನಡೆಯಬಾರದ ಘಟನೆ ನಡೆದ ಬಗ್ಗೆ ವಿಷಾದವಿತ್ತು. ವಿಮಾನ ನಿಗದಿತ ಸಮಯಕ್ಕೆ ನಿಲ್ದಾಣದಲ್ಲಿ ಇಳಿಯ ದಿದ್ದಾಗ ಆರಂಭವಾದ ಆತಂಕ, ಪ್ರಾರ್ಥನೆಗೆ, ಅವಘಡದ ಸುದ್ದಿ ಆಘಾತ ನೀಡಿತ್ತು.ಆದರೆ ದುರಂತದ ಸುದ್ದಿ ತಲುಪುತ್ತಲೇ ತುರ್ತು ನಿರ್ವಹಣೆಯತ್ತ ಮುಖ ಮಾಡಿದ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಮತ್ತು ಜಿಲ್ಲಾಡಳಿತ ಸಾಧ್ಯವಿರುವ ಎಲ್ಲ ತುರ್ತು ಕ್ರಮಗಳನ್ನು ಕೈಗೊಂಡಿತ್ತು. 2006 ಡಿಸೆಂಬರ್ ನಿಂದ ರನ್ ವೇ ಯಲ್ಲಿ ಅಂತಾರಾಷ್ಟ್ರೀಯ ಮತ್ತು ಡೊಮೆಸ್ಟಿಕ್ ವಿಮಾನಗಳು ಇಳಿಯುತ್ತಿದ್ದು, ನಿಲ್ದಾಣದ ಕಾರ್ಯವೈಖರಿ ಹಾಗೂ ರನ್ ವೇಯಲ್ಲಿ ನಿಲ್ದಾಣದ ಅಧಿಕಾರಿಗಳು ಲೋಪ ಕಂಡಿಲ್ಲ.ನಿನ್ನೆ ಮಧ್ಯಾಹ್ನವೇ ಡಿಜಿಸಿ ಎ ಅಧಿಕಾರಿಗಳು ದುರಂತದ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ. ಮೃತರ ಸಂಬಂಧಿಗಳ ಅನುಕೂಲಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ದುಬೈನಿಂದ ವಿಶೇಷ ವಿಮಾನ ಸೌಲಭ್ಯ ನೀಡಿದ್ದು,ಇಂದು ಬೆಳಗ್ಗೆ 7.30ಕ್ಕೆ ವಿಶೇಷ ವಿಮಾನ 22 ಜನರೊಂದಿಗೆ ಬಜಪೆಗೆ ಆಗಮಿಸಿತ್ತು.ಇನ್ನು ಟೇಬಲ್ ಟಾಪ್ ಏರ ಪೋರ್ಟ್ ನಲ್ಲಿ ಸಕರಾತ್ಮಕ ಹಾಗೂ ನಕರಾತ್ಮಕ ಪರಿಣಾಮಗಳಿವೆ ಎಂಬುದನ್ನು ಒಪ್ಪಿಕೊಳ್ಳುವ ಅಧಿಕಾರಿಗಳು ವಿಮಾನ ನಿಲ್ದಾಣದ ಸೌಕರ್ಯ ಹಾಗೂ ರೂಪುರೇಷೆ ಸಮರ್ಪಕವಾಗಿದೆ. ನಿನ್ನೆ ನಡೆದ ದುರಂತಕ್ಕೆ ರನ್ ವೇ ಯಲ್ಲಿ ಯಾವುದೇ ತಾಂತ್ರಿಕ ಲೋಪಗಳಲ್ಲ ಎಂದು ಸ್ಪಷ್ಡಪಡಿಸಿದ ವಿಮಾಣ ನಿಲ್ದಾಣದ ಅಧಿಕಾರಿಗಳು, 2005 ರಲ್ಲಿ 1850 ಮೀಟರ್ ಇದ್ದ ರನ್ ವೇ ಯನ್ನು ನಂತರ 2450 ಮೀಟರ್ ವರೆಗೆ ವಿಸ್ತರಿಸಲಾಗಿದ್ದು, ಅಗತ್ಯಕ್ಕಿಂತ ಹೆಚ್ಚು ಸ್ಥಳ, ಮತ್ತು ಮೂಲಭೂತ ಸೌಕರ್ಯಗಳನ್ನು ನಿಲ್ದಾಣ ಹೊಂದಿದೆ ಎಂದು ತಿಳಿಸಿದ್ದಾರೆ.

ಎಲ್ಲ ಮೃತದೇಹ ವೆನ್ ಲಾಕ್ ನಲ್ಲಿ,

ಮಂಗಳೂರು,ಮೇ23:ನಿನ್ನೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟ 28 ದೇಹಗಳನ್ನು ವೆನ್ ಲಾಕ್ ನಲ್ಲಿರಿಸಿದ್ದು,ಮೃತದೇಹ ಗುರುತುಪತ್ತೆಯಲ್ಲಿ ಜಿಲ್ಲಾಡಳಿತ ನಿರತವಾಗಿದೆ ಎಂದು ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ. ಮೃತದೇಹಗಳ ಗುರುತಿಸುವಿಕೆಗೆ ಅನುಕೂಲವಾಗಲು ಎಲ್ಲಾ ಆಸ್ಪತ್ರೆಗಳಿಂದ ಶವವನ್ನು ವೆನ್ ಲಾಕ್ ಗೆ ತರಲಾಗಿದ್ದು, ಇಂದು ಸಂಜೆಯೊಳಗೆ ಮೃತದೇಹ ಗುರುತಿಸುವಿಕೆ ಯತ್ನ ಸಂಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಶವ ಗುರುತಿಸುವಿಕೆಯಲ್ಲಿ ಗೊಂದಲಗಳಿರುವ ಶವಗಳ ಡಿ ಎನ್ ಎ ಪರೀಕ್ಷೆ ನಡೆಸಲು ಹೈದ್ರಾಬಾದ್ ನಿಂದ ಡಾ. ಮಧುಸೂದನ ರೆಡ್ಡಿ ಅವರ ನೇತ್ರತ್ವದ ತಂಡ ನಗರಕ್ಕೆ ಆಗಮಿಸಿದ್ದು, ರಕ್ತ ಸಂಬಂಧಿಗಳ ಫೋಟೋ ಮತ್ತು ರಕ್ತ ತೆಗೆಯುವ ಪ್ರಕ್ರಿಯೆ ನಡೆಯುತ್ತಿದ್ದು, 3.30 ರವರೆಗೆ ಮೃತದೇಹ ಕ್ಲೇಮ್ ಮಾಡಲು ಅವಕಾಶ ನೀಡಿದೆ. ಏರ್ ಇಂಡಿಯಾ ಮೃತ ದೇಹಗಳಿನ್ನಿಡಲು ಶವಪೆಟ್ಟಿಗೆ ನೀಡಿದ್ದು, ಶವ ಪರೀಕ್ಷೆ ಬಳಿಕ ಪತ್ತೆಯಾಗದೆ ಉಳಿದ ಶವಗಳನ್ನು ನಗರದಲ್ಲಿ ಲಭ್ಯವಿರುವ ಶೈತ್ಯಾಗಾರ ದಲ್ಲಿ ಶವಗಳನ್ನು ಇಡಲು ಸಿದ್ಧತೆ ಮಾಡಲಾಗಿದೆ.

Saturday, May 22, 2010

158 ಮೃತದೇಹ ಪತ್ತೆ;72 ಶವಗಳ ಗುರುತಿಸುವಿಕೆ

ಮಂಗಳೂರು,ಮೇ22:ಕೆಂಜಾರು ಗ್ರಾಮದ ದುರ್ಗಮ ಪ್ರದೇಶದಲ್ಲಿ ಇಂದು ಮುಂಜಾನೆ 6.05ಕ್ಕೆ ಸಂಭವಿಸಿದ ದುಬೈ-ಮಂಗಳೂರು ಐ ಎಕ್ಸ್ 812 ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ 158 ಶವಗಳನ್ನು ಹೊರತೆಗೆಯಲಾಗಿದ್ದು, 72 ಮೃತದೇಹಗಳನ್ನು ಗುರುತಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕಾರ್ಯಾ ಚರಣೆಯ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನೀಡಿದ ಅವರು,160 ಪ್ರಯಾಣಿಕರು, 6 ಜನ ಪೈಲಟ್ ಹಾಗೂ ಸಹ ಪೈಲಟ್ ಸೇರಿ ಸಿಬ್ಬಂದಿ ವರ್ಗದವರಿದ್ದು ಇವರಲ್ಲಿ 8 ಜನರು ಗಾಯಗೊಂಡಿದ್ದಾರೆ.ಗಾಯ ಗೊಂಡವರನ್ನು ಮಾಯನ್ ಕುಟ್ಟು, ಉಮ್ಮರ್ ಫಾರೂಕ್, ಡಾ. ಸಬ್ರಿನಾ, ಕೃಷ್ಣನ್, ಪ್ರದೀಪ್, ಜೋಯಲ್ ಸಂತೋಷ್, ಮಹಮ್ಮದ್ ಉಸ್ಮಾನ್, ಅಬ್ದುಲ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಪ್ರಯಾಣಿಕರಲ್ಲಿ 66 ಕೇರಳೀಯರಿದ್ದು, 38 ಮೃತದೇಹವನ್ನು ಗುರುತಿಸಲಾಗಿದೆ ಎಂದು ಡಿ ಜಿ ಪಿ ಹೇಳಿದರು.ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಹೋಮ್ ಗಾರ್ಡ್ಸ್, ಅಗ್ನಿ ಶಾಮಕ ಪಡೆ, ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿದ ಬಗೆಯನ್ನು ಶ್ಲಾಘಿಸಿದ ಅವರು, ಸ್ಥಳೀಯರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.ಕಾಸರಗೋಡು ಡಿಸಿ, ಎಸ್ ಪಿ ಹಾಗೂ ಸರ್ಕಾರವು ತಕ್ಷಣವೇ ಸ್ಥಳಕ್ಕೆ ಆಗಮಿಸಿ ರಾಜ್ಯದವ ರೊಂದಿಗೆ ಸಮನ್ವಯ ಸಾಧಿಸಿದ್ದು, ನಗರದಲ್ಲೇ ಅವರ ತಂಡ ಬೀಡು ಬಿಟ್ಟಿದ್ದು,ಶವ ಗುರುತ್ತಿಸುವಿಕೆ ಮತ್ತು ಮುಂದಿನ ಕಾರ್ಯದಲ್ಲಿ ತಮ್ಮ ಜನತೆಗೆ ಸಹಕರಿ ಸುತ್ತಿದ್ದಾರೆ.
ಮೃತ ದೇಹಗಳನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ 109, ಕೆ ಎಂಸಿಯಲ್ಲಿ 6, ಎ.ಜೆಯಲ್ಲಿ 13, ಫಾ. ಮುಲ್ಲರ್ಸ್ ನಲ್ಲಿ 9, ಎಸ್ ಸಿ ಎಸ್ ನಲ್ಲಿ 3, ಕೆ.ಎಸ್ ಹೆಗ್ಡೆಯಲ್ಲಿ 8, ಯೆನಪೋಯದಲ್ಲಿ 4, ಕುಲಾಸೊದಲ್ಲಿ 4, ಸಿಟಿ ಆಸ್ಪತ್ರೆಯಲ್ಲಿ 2 ಮೃತದೇಹಗಳನ್ನು ಇರಿಸಲಾಗಿದೆ. ಇವರಲ್ಲಿ ಕ್ರಮವಾಗಿ 40,4, 7,2,1,4, ಕುಲಾಸೋದಲ್ಲಿ 2 ಮೃತದೇಹಗಳನ್ನು ವಾರೀಸುದಾರರು ಕ್ಲೈಮ್ ಮಾಡಿಕೊಂಡಿದ್ದು, ಕಾನೂನಿನ್ವಯ ವಾರೀಸುದಾರರಿಗೆ ಮೃತ ದೇಹ ನೀಡಲು ಹಾಗೂ ಮಾಹಿತಿ ನೀಡಲು ಜಿಲ್ಲಾಡಳಿತ ಸಂಪೂರ್ಣ ಕ್ರಮಕೈಗೊಂಡಿದೆ.
ಅಗ್ನಿಶಾಮಕದಳದ ಡಿಜಿ ಜೀಜಾ ಹರಿಸಿಂಗ್ ಅವರು ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯ ವಿವರ ನೀಡಿದರು.ಪತ್ರಿಕಾ ಗೋಷ್ಠಿಯಲ್ಲಿ ರೀಜನಲ್ ಕಮಿಷನರ್ ಜಯಂತಿ, ಐಜಿ ಗೋಪಾಲ್ ಹೊಸೂರ್, ನೋಡಲ್ ಅಧಿಕಾರಿ ಯೋಗೀಂದ್ರ ತ್ರಿಪಾಠಿ, ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಪೋಲಿಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಸೇರಿದಂತೆ ಎಲ್ಲ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದು, ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಗೆ ಮುನ್ನ ಮೃತರ ಗೌರವಾರ್ಥ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಂಜೆ ಮುಖ್ಯಮಂತ್ರಿಗಳು ವೆನ್ ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ತೆರಳಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಅವರ ನೇತೃತ್ವದಲ್ಲಿ, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸತತವಾಗಿ ವೆನ್ಲಾಕ್ ನಲ್ಲಿ,ಮೃತಪಟ್ಟವರ ಸಂಬಂಧಿಗಳೊಂದಿಗೆ ಹಾಗೂ ನಗರದ ವಿವಿಧ ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸಿ ಜನರಿಗೆ ನೆರವಾಗುತ್ತಿದ್ದರು.
ರೈಲ್ವೇ ಸಚಿವ ಮುನಿಯಪ್ಪ ಸಂತಾಪ: ರೈಲ್ವೇ ಸಚಿವರಾದ ಮುನಿಯಪ್ಪ ಅವರು ದುರ್ಘಟನೆಯ ಬಗ್ಗೆ ಅತೀವ ಆಘಾತ ವ್ಯಕ್ಪಪಡಿಸಿದರಲ್ಲದೆ, ರೈಲ್ವೇ ಪೊಲೀಸರ ನೆರವು ಮತ್ತು ಕಾರ್ಯಕ್ಷಮತೆಯನ್ನು ಗುರುತಿಸಲಾಗಿದೆ ಎಂದರು.ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಮೃತ ಕುಟುಂಬಕ್ಕೆ ಸಹಾಯ ನೀಡುವ ಭರವಸೆಯನ್ನು ಅವರು ನೀಡಿದರು.

ಘಟನಾ ಸ್ಥಳಕ್ಕೆ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಭೇಟಿ, ಪರಿಹಾರ ಘೋಷಣೆ

ಮಂಗಳೂರು,ಮೇ22: ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಇಂದು ಬೆಳಗ್ಗೆ 6.05ರ ಹೊತ್ತಿಗೆ ಬಜಪೆ ಸಮೀಪ ಅಪಘಾತಕ್ಕೀಡಾಗಿದ್ದು, ದುರಂತದ ಮಾಹಿತಿ ಲಭಿಸಿದ ತಕ್ಷಣ ವಿಮಾನ ಯಾನ ರಾಜ್ಯ ಸಚಿವ ಪ್ರಫುಲ್ ಕುಮಾರ್ ಪಟೇಲ್ ಅವರು ಘಟನಾ ಸ್ಥಳಕ್ಕೆ ಆಗಮಿಸಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತ ರೊಂದಿಗೆ ಮಾತನಾಡಿ, ದುರಂತದಲ್ಲಿ ಮಡಿದವರಿಗೆ 76 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿದರು. ದುರಂತಕ್ಕೆ ಕಾರಣ ಹುಡುಕಲು ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಷನ್ ವತಿಯಿಂದ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಹೇಳಿದರು. ಪೈಲೆಟ್ ಗಳು ಬಹಳಷ್ಟು ಪರಿಣತರಿದ್ದು, ವಾತಾವರಣವೂ ಶುಭ್ರವಾಗಿತ್ತು. ಅಪಘಾತಕ್ಕೆ ಕಾರಣ ತನಿಖೆಯ ಬಳಿಕವಷ್ಟೆ ತಿಳಿಯಲಿದೆ ಎಂದರು. ಕೇರಳ ಮುಖ್ಯಮಂತ್ರಿ,ಗೃಹಮಂತ್ರಿ, ಕಾಸರಗೋಡು ಜಿಲ್ಲಾಧಿಕಾರಿ, ಎ ಡಿ ಎಂ ಸೇರಿದಂತೆ ಎಲ್ಲ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದರು.

ವಿಮಾನ ಅಪಘಾತ ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ:ದುರಂತಕ್ಕೆ ಬಲಿಯಾದವರಿಗೆ 2ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ಪರಿಹಾರ

ಮಂಗಳೂರು,ಮೇ 22:ಇಂದು ನಸುಕಿನ ಜಾವ 6.05ಕ್ಕೆ ಬಜಪೆ ವಿಮಾನ ನಿಲ್ದಾಣ ಬಳಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮಡಿದವರಿಗಾಗಿ ರಾಜ್ಯ ಸಂಪುಟ ಸಭೆ ರದ್ದುಗೊಳಿಸಿ ರಾಜ್ಯ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿದೆ.ವಿಮಾನ ದುರಂತ ಸ್ಥಳಕ್ಕೆ ರಾಜ್ಯ ಮುಖ್ಯಮಂತ್ರಿಗಳು ಭೇಟಿ ನೀಡಿ ದುರಂತದಲ್ಲಿ ಸಾವಿಗೀಡಾದವರಿಗೆ 2 ಲಕ್ಷ ರೂ.ಪರಿಹಾರ ಮತ್ತು ಗಾಯಗೊಂಡವರಿಗೆ 50 ಲಕ್ಷ ರೂ. ನೆರವು ಧನ ಘೋಷಿಸಿದ್ದಾರೆ.

ದುರಂತದ ಬಗ್ಗೆ ಅಪಾರ ದು:ಖ ವ್ಯಕ್ತಪಡಿಸಿದ ಮುಖ್ಯ ಮಂತ್ರಿಗಳು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿ ಸುವು ದಾಗಿ ನುಡಿದರು. ದುರ್ಘಟನ ಸ್ಥಳಕ್ಕೆ ಮತ್ತು ವೆನ್ ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ದುರಂತದಲ್ಲಿ ಮಡಿದವರ ಕುಟುಂಬ ಗಳನ್ನು ಮತ್ತು ಆಪ್ತರನ್ನು ಸಂತೈಸಿದ್ದಾರೆ. ಮುಖ್ಯಮಂತ್ರಿ ಗಳೊಂದಿಗೆ ಗೃಹ ಸಚಿವರಾದ ಡಾ. ವಿ.ಎಸ್. ಆಚಾರ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೆಮಾರ್, ಸಂಸದ ಡಿ.ವಿ. ಸದಾನಂದ ಗೌಡ ಸೇರಿದಂತೆ ರಾಜ್ಯ ಪೋಲಿಸ್ ಮಹಾ ನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಗ್, ಅಗ್ನಿ ಶಾಮಕ ದಳದ ಜೀಜಾ ಹರಿಸಿಂಗ್, ಐಜಿ ಗೋಪಾಲ್ ಹೊಸೂರು, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಉಪ ಆಯುಕ್ತ ರಮೇಶ್ ಅವರು ಉಪಸ್ಥಿತರಿದ್ದರು.
ಇದುವರೆಗೆ ದೊರೆತ ಮಾಹಿತಿಯಂತೆ 1 ಮೃತ ದೇಹ ಘಟನಾ ಸ್ಥಳದಿಂದ ಹೊರತೆಗೆಯಬೇಕಿದ್ದು, 8ಜನ ಅದೃಷ್ಟವಶಾತ್ ಅವಘಡದಿಂದ ಪಾರಾದವರು ಅಪಾಯದಿಂದ ಪಾರಾಗಿದ್ದಾರೆಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.ತುರ್ತು ನಿರ್ವಹಣೆ ಹೊಣೆಯನ್ನು ಹಿರಿಯ ಅಧಿಕಾರಿ ಯೋಗೇಂದ್ರ ತ್ರಿಪಾಠಿ ಅವರು ವಹಿಸಿದ್ದು, ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಘಟನಾ ಸ್ಥಳದಲ್ಲೇ ಉಪಸ್ಥಿತರಿದ್ದು ಪರಿಹಾರ ಕ್ರಮಗಳ ಹೊಣೆಯನ್ನು ಹೊತ್ತಿದ್ದರು.

Friday, May 21, 2010

ಲೈಲಾ ಚಂಡಮಾರುತ: ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ

ಮಂಗಳೂರು, ಮೇ 21: ಲೈಲಾ ಚಂಡ ಮಾರುತದ ಹಿನ್ನಲೆಯಲ್ಲಿ ಪ್ರಕೃತಿ ವಿಕೋಪ ದಿಂದಾಗುವ ಹಾನಿಯ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು 24 ಗಂಟೆ ಕಂಟ್ರೋಲ್ ರೂಂ ಸ್ಥಾಪಿಸಲು ಹಾಗೂ ಮುನ್ನೆಚ್ಚರಿಕೆ ವಹಿಸುವಂತೆ ಕಂದಾಯ ಸಚಿವರೂ ಮಾರ್ಗದರ್ಶನ ನೀಡಿದ್ದಾರೆ.
ಪ್ರಕೃತಿ ವಿಕೋಪ ಸಂಭವಿಸಿದಾಗ ಪ್ರಥಮ ಮಾಹಿತಿ ಸರ್ಕಾರಕ್ಕೆ ಸಲ್ಲಿಸಿ, ರಕ್ಷಣೆ, ಪರಿಹಾರ ಕಾರ್ಯ,ಪರ್ಯಾಯ ವ್ವವಸ್ಥೆ ಬಗ್ಗೆ ಸಹಾಯಕ ಆಯುಕ್ತರು,ತಹಸೀಲ್ದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ದ.ಕ. ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ತಿಳಿಸಿದ್ದಾರೆ.

Wednesday, May 19, 2010

ದಿ.ಡಾ. ಕೆ. ನಾಗಪ್ಪ ಆಳ್ವ ಅವರ ಜನ್ಮ ಶತಮಾನೋತ್ಸವ ಆಚರಣೆ ಸಂಭ್ರಮ

ಮಂಗಳೂರು, ಮೇ 19: ದಿ. ಡಾ.ಕೆ. ನಾಗಪ್ಪ ಆಳ್ವ ಅವರ ಜನ್ಮ ಶತಮಾ ನೋತ್ಸವದ ಅಂಗವಾಗಿ ಇಂದು ನಗರದ ಪುರಭವನದಲ್ಲಿ ಪುಸ್ತಕ ಬಿಡುಗಡೆ ಮತ್ತು ಅಪರೂಪದ ಛಾಯಾಚಿತ್ರ ಪ್ರದರ್ಶನ ಹಮ್ಮಿ ಕೊಳ್ಳ ಲಾಗಿತ್ತು.ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆ ವತಿಯಿಂದ ಆಯೋಜಿ ಸಲಾಗಿದ್ದ ಡಾ.ಕೆ. ನಾಗಪ್ಪ ಆಳ್ವ ಅವರ ಅಪ ರೂಪದ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಅವರು ಉದ್ಘಾಟಿಸಿದರು. ನಂತರ ನಡೆದ ಸಮಾ ರಂಭದಲ್ಲಿ ಕರ್ನಾಟಕ ವಿಧಾನ ಮಂಡಲ ಗ್ರಂಥಾಲಯ ಸಮಿತಿ ವತಿಯಿಂದ ಪ್ರತಿಭಾವಂತ ಸಂಸದೀಯ ಪಟುಗಳು ಪುಸ್ತಕ ಮಾಲಿಕೆಯಲ್ಲಿ ದಿ. ಡಾ. ಕೆ. ನಾಗಪ್ಪ ಆಳ್ವ ಅವರ ಕುರಿತು ರಚಿಸಲಾಗಿರುವ ಪುಸ್ತಕವನ್ನು ಮಾನ್ಯ ಗೃಹ ಸಚಿವರಾದ ಡಾ. ವಿ. ಎಸ್. ಆಚಾರ್ಯ ಅವರು ಬಿಡುಗಡೆ ಮಾಡಿದರು. ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಗಳಾದ ಶ್ರೀ ವೀರಣ್ಣ ಮತ್ತಿಕಟ್ಟಿ,ಶಾಸಕರಾದ ಬಿ. ರಮನಾಥ ರೈ,ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಮೇಯರ್ ರಜನಿ ದುಗ್ಗಣ್ಣ, ಮಾಜಿ ಸಚಿವ ಅಮರನಾಥ ಶೆಟ್ಟಿ,ಮೋಹನ್ ದೇವ್ ಆಳ್ವ, ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Tuesday, May 18, 2010

ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ: ಸಚಿವ ಶೆಟ್ಟರ್

ಮಂಗಳೂರು,ಮೇ 18: ರಾಜ್ಯದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತವಾದ ಪರಿಹಾರ ರೂಪಿಸಲು ವೈಜ್ಞಾನಿಕ ಸಲಹೆಗಳನ್ನು ಇಸ್ರೋ ವಿಜ್ಞಾನಿಗಳಿಂದ ಪಡೆದು ಕೊಳ್ಳಲಾಗುವುದಲ್ಲದೆ, ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗವನ್ನು ಸ್ಥಾಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದರು.

ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾರ್ಯ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲೆಗೆ 159 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, 250 ಲಕ್ಷ ರೂ.ಗಳ ಬೇಡಿಕೆ ಸಲ್ಲಿಸಲಾಗಿತ್ತು.ಮಂಗಳೂರು ತಾಲೂಕಿನ ಕಿನ್ನಿಗೋಳಿ ಹಾಗೂ ಇತರೆ 17 ಗ್ರಾಮಗಳಿಗೆ ವಿಶೇಷ ಕುಡಿಯುವ ನೀರಿನ ಯೋಜನೆಯಡಿ 1680 ಲಕ್ಷ ರೂ. ಮಂಜೂರಾಗಿದೆ. ತಾಲೂಕಿನ ಮಳವೂರು ಮತ್ತು ಇತರ 10 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಕಾರ್ಯಕ್ರಮದಡಿ ಸುಮಾರು 26 ಕೋಟಿ ರೂ. ವೆಚ್ಚದಲ್ಲಿ ಯೋಜನೆಕೈಗೆತ್ತಿಕೊಳ್ಳಲಾಗುವುದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪಿ.ಶಿವಶಂಕರ್ ಸಭೆಗೆ ಮಾಹಿತಿ ನೀಡಿದರು.ಪ್ರಸ್ತುತ ಸಾಲಿನಲ್ಲಿ ಕುಡಿಯುವ ನೀರಿನ ನಿರಂತರತೆ ಕಾರ್ಯಕ್ರಮದಡಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 10 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಮಳೆ ನೀರು ಕೊಯ್ಲಿಗೆ 21 ಗ್ರಾಮ ಪಂಚಾಯತ್ ಗಳಿಗೆ ಹಣ ಬಿಡುಗಡೆಗೆ ಕೋರಲಾಗಿದೆ. 2009-10ನೇ ವರ್ಷದಲ್ಲಿ ಗ್ರಾಮೀಣ ಕುಡಿಯುವ ನೀರಿಗೆ 312 ಗುರಿ ನಿಗದಿಪಡಿಸಲಾಗಿದ್ದು, 183 ಕಾಮಗಾರಿಗಳು ಸಂಪೂರ್ಣಗೊಂಡಿವೆ. ಸುವರ್ಣ ಗ್ರಾಮೋದಯ ಯೋಜನೆಯಡಿ 3ನೇ ಹಂತದಲ್ಲಿ 33 ಗ್ರಾಮಗಳಿಗೆ 3100.00 ಲಕ್ಷ ಮಂಜೂರಾಗಿದ್ದು, 27 ಗ್ರಾಮಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ. 10 ಗ್ರಾಮಗಳ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, 8 ಗ್ರಾಮಗಳ ಕಾಮಗಾರಿಗಳಿಗೆ ಟೆಂಡರ್ ಅಂತಿಮಗೊಳಿಸಿ ಕೆಲಸದ ಆದೇಶ ನೀಡಲಾಗಿದೆ. ಜಿಲ್ಲೆಯ ಭೌಗೋಳಿಕ ಪರಿಸ್ಥಿತಿಯನ್ನು ವಿಶೇಷವಾಗಿ ಪರಿಗಣಿಸಿ ಗ್ರಾಮಗಳ ಸಂಪರ್ಕ ರಸ್ತೆಗಳಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಸಭೆಯಲ್ಲಿ ಪಾಲ್ಗೊಂಡ ಶಾಸಕರಾದ ರಮಾನಾಥ ರೈ,ಯು ಟಿ ಖಾದರ್ ಒತ್ತಾಯಿಸಿದರು. ಸುವರ್ಣ ಗ್ರಾಮೋದಯ ಯೋಜನೆಯಡಿ 2006-07 ನೇ ಸಾಲಿನಲ್ಲಿ ಆರಂಭಿಸ ಲಾಗಿದ್ದ ಕಾಮ ಗಾರಿಗಳನ್ನು ಸಂಪೂರ್ಣ ಗೊಳಿಸಲಾಗಿದ್ದು, ಶೇಕಡ 100 ಸಾಧನೆ ದಾಖಲಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಗೆ ಅಭಿವೃದ್ಧಿ ಅನುದಾನ ಕೇವಲ 15 ಲಕ್ಷ ರೂ. ಬರುತ್ತಿದ್ದು, ಕನಿಷ್ಠ 2 ಕೋಟಿ ಅನುದಾನಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರು ಒತ್ತಾಯಿಸಿದರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಣ ಬಿಡುಗಡೆಗೆ ಯಾವುದೇ ತೊಂದರೆಯಿಲ್ಲ ಎಂದ ಸಚಿವರು, ಎನ್ ಆರ್ ಇ ಜಿ ಯೋಜನೆಯಡಿ ಕಾಮಗಾರಿಗಳು ನಡೆದಲ್ಲಿ ಮಾಹಿತಿ ಫಲಕಗಳನ್ನು ಹಾಕಲಾಗುವುದು. ಹತ್ತು ಲಕ್ಷ ರೂ.ಗಳವರೆಗೆ ಮಂಜೂರು ಮಾಡಲು ಅಧಿಕಾರ ನೀಡಿದ್ದ ಜೂನಿಯರ್ ಇಂಜಿನಿಯರ್ ಗಳಿಗೆ ಈ ಸಂಬಂಧ ನೀಡಿದ ಅಧಿಕಾರವನ್ನು ಹಿಂಪಡೆದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರಿಗೆ ನೀಡಲಾಗುವುದು. ವೈಯಕ್ತಿಕ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ 81,802 ಜನರಿಗೆ ಉದ್ಯೋಗ ಚೀಟಿ ವಿತರಿಸಲಾಗಿದೆ ಎಂದು ಸಿಇಒ ಮಾಹಿತಿ ನೀಡಿದರು. ಶಾಸಕರಾದ ಅಭಯಚಂದ್ರ ಜೈನ್ ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸದನದ ಗಮನ ಸೆಳೆದರು. ಸೌರ ಬೆಳಕು ಯೋಜನೆ ಬಗ್ಗೆ, ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ ಬಗ್ಗೆ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು.
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ,ಸಂಸದ ನಳಿನ್ ಕುಮಾರ್ ಕಟೀಲ್, ಸಿಇಒ ಹಾಗೂ ಸ್ಥಾಯಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಪಂಚಾಯತ್ ರಾಜ್ ವ್ಯವಸ್ಥೆಗೆ ಹೆಚ್ಚಿನ ಒತ್ತು : ಸಚಿವ ಜಗದೀಶ್ ಶೆಟ್ಟರ್

ಮಂಗಳೂರು,ಮೇ18:ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಅವರು ಹೇಳಿದರು.

ಅವರಿಂದು ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಗ್ರಾಮಾಡಳಿತಕ್ಕೆ ಒತ್ತು ನೀಡಲು ಈ ವರ್ಷವನ್ನು ಗ್ರಾಮಸಭಾ ವರ್ಷವೆಂದು ಘೋಷಿಸಲಾಗುವುದು ಎಂದ ಅವರು, ನೂತನವಾಗಿ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಡಳಿತ ನಡೆಸಲು ಅನುಕೂಲವಾಗುವಂತೆ ವಿಶೇಷ ತರಬೇತಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ,ಉಪಾಧ್ಯಕ್ಷರಿಗೆ 3 ದಿನಗಳ ಕಾಲ ಮೈಸೂರಿನ ಗ್ರಾಮೀಣಾಭಿವೃದ್ದಿ ತರಬೇತಿ ಕೇಂದ್ರದಲ್ಲಿ ತರಬೇತಿ ಹಾಗೂ ಉಳಿದ ಸದಸ್ಯರಿಗೆ ಸೆಟಲೈಟ್ ಮೂಲಕ ತರಬೇತಿ ನೀಡಲಾಗುವುದು ಎಂದರು. ಪಂಚಾಯಿತಿ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸಲು,ಫಲಾನುಭವಿ ಆಯ್ಕೆ ಮತ್ತು ಕ್ರಿಯಾಯೋಜನೆ ರೂಪಿಸಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದ ಅವರು, ವಿವಿಧ ಯೋಜನೆಗಳಡಿ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಸಾಕಷ್ಟು ದೊರೆಯುತ್ತಿದ್ದು, ಸದ್ವಿನಿಯೋಗವಾಗಬೇಕಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯೋಜನೆಗಳನ್ನು ರೂಪಿಸಿ ಹಣವನ್ನು ಉಪಯೋಗಿಸಲು ಅವಕಾಶ ನೀಡಲಾಗಿದೆ ಎಂದರು.
ಒಂಬಡ್ಸಮನ್ ನೇಮಕ:ಎನ್ ಆರ್ ಇ ಜಿ ಅವ್ಯವಹಾರ ದೂರಿನ ಬಗ್ಗೆ ಕ್ರಮ ಕೈಗೊಳ್ಳಲು ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನು ನೇಮಕ ಮಾಡಲಾಗುವುದು. ಈ ಯೋಜನೆಯಡಿ ಅಭಿವೃದ್ಧಿ ಬಗ್ಗೆ ಪರಿಶೀಲಿಸಲು ಇಸ್ರೋದ ನೆರವನ್ನು ಪಡೆದುಕೊಳ್ಳಲಾಗುವುದು ಎಂದರು.
ಇಲಾಖೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಸಿ ಅಂಡ್ ಆರ್ ಕಾನೂನು (ವೃಂದ ಮತ್ತು ನೇಮಕಾತಿ)ಜಾರಿ ತರಲು ಕರಡು ರಚಿಸಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣಾ ಜೆ. ಪಾಲೇಮಾರ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಸಿಇಓ ಶಿವಶಂಕರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Saturday, May 15, 2010

ಮಂಗಳೂರಿನ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರಕ್ಕೆ ಸಿ.ಎಂ. ಭೇಟಿ


ಮಂಗಳೂರು, ಮೇ 15: ಮೇಲ್ದರ್ಜೆಗೆ ಏರಿಸಿ ಸಮಗ್ರವಾಗಿ ಅಭಿವೃದ್ದಿ ಪಡಿಸಿದ ಮಂಗಳೂರು ನಗರದಲ್ಲಿನ ರಾಜ್ಯದ ಮೊದಲ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಭೇಟಿ ನೀಡಿದರು. ಅಧಿಕಾರಿಗಳೊಂದಿಗೆ ಈ ಕೇಂದ್ರದ ಅಭಿವೃದ್ದಿ ಚಟುವಟಿಕೆಗಳ ಬಗ್ಗೆ ಚರ್ಚಿಸಿದ ಮುಖ್ಯಮಂತ್ರಿಗಳು, ಸ್ಥಳದಲ್ಲಿದ್ದ ಅಭ್ಯರ್ಥಿಗಳೊಂದಿಗೆ ವಿಚಾರವಿನಿಮಯ ನಡೆಸಿದರು.ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್,ಜನಾರ್ದನ ರೆಡ್ಡಿ,ಮೇಯರ್ ರಜನಿ ದುಗ್ಗಣ್ಣ, ಶಾಸಕ ಎನ್. ಯೋಗಿಶ್ ಭಟ್,ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮಂಗಳೂರು ವಿಮಾನ ನಿಲ್ದಾಣ ನೂತನ ಟರ್ಮಿನಲ್ ಉದ್ಘಾಟನೆ: ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ: ಪ್ರಫುಲ್ ಪಟೇಲ್

ಮಂಗಳೂರು, ಮೇ 15: ಮಂಗಳೂರು ವಿಮಾನ ನಿಲ್ದಾಣದ ನೂತನ ಏಕೀಕೃತ ಟರ್ಮಿನಲ್ ಕಟ್ಟಡವನ್ನು ಕೆಂಜಾರಿನಲ್ಲಿ ಕೇಂದ್ರ ನಾಗರಿಕ ವಿಮಾನ ಯಾನ ಖಾತೆಯ ರಾಜ್ಯ ಸಚಿವ ಪ್ರಫುಲ್ ಪಟೇಲ್ ಇಂದು ಉದ್ಘಾಟಿಸಿದರು. ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಹಾಗೂ ಇನ್ನಷ್ಟು ಅಭಿವೃದ್ಧಿಪಡಿಸಲು ಹೆಚ್ಚುವರಿ 100 ಕೋಟಿ ರೂ. ಅನುದಾನವನ್ನು ಕೇಂದ್ರ ಸರಕಾರದಿಂದ ಬಿಡುಗಡೆ ಮಾಡಲಾಗುವುದು ಎಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ದೇಶದ ವಿಮಾನ ಸೇವೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ 9 ನೇ ಸ್ಥಾನ ಪಡೆದಿದೆ. ಭವಿಷ್ಯದಲ್ಲಿ ಸುಸಜ್ಜಿತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೊಂದಿಗೆ ದೇಶದ ವಿಮಾನಸೇವೆ ಟಾಪ್ 5 ರೊಳಗೆ ಒಂದಾಗಲಿದೆ. ಈ ನಿಟ್ಟಿನಲ್ಲಿ ದೇಶದ ಬಹುತೇಕ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಖಾಸಗಿ ಸರಕಾರಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣ ಶೀಘ್ರದಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿ ಹೊಂದಲು ಬೇಕಾದ ಸಹಕಾರ ನೀಡಲಾಗುವುದು. 1000 ಅಡಿ ಉದ್ದದ ರನ್ ವೇ ನಿರ್ಮಾಣಗೊಂಡರೆ ಅಂತಾರಾಷ್ಟ್ರೀಯ ದರ್ಜೆಯ ಸ್ಥಾನಮಾನ ಹೊಂದಲು ಸಾಧ್ಯವಾಗುತ್ತದೆ. ಈ ಕೆಲಸ ಶೀಘ್ರವಾಗಿ ಆಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪಟೇಲ್ ತಿಳಿಸಿದರು. ಮಂಗಳೂರು ವಿಮಾನ ನಿಲ್ದಾಣವನ್ನು ದೇಶದಲ್ಲೇ ಅತ್ಯುತ್ತಮ ವಿಮಾನ ನಿಲ್ದಾಣವಾಗಿ ಮಾರ್ಪಡಿಸುವ ಇಂಗಿತ ಹೊಂದಿರುವುದಾಗಿ ಪಟೇಲ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಅಭಿವೃದ್ಧಿ ಒಂದನ್ನೇ ಮೂಲ ಮಂತ್ರವಾಗಿ ರಿಸಿಕೊಂಡು ದುಡಿಯುತ್ತಿರುವ ರಾಜ್ಯ ಸರ್ಕಾರ,ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಮೂಲ ಭೂತ ಸೌಲಭ್ಯ ಹಾಗೂ ಸಹಕಾರ ನೀಡುವುದಾಗಿ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತಿಳಿಸಿದರು.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣವನ್ನು ಬೆಂಗಳೂರು ಬಳಿಕ ಎರಡನೇ ಉನ್ನತ ದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಾಗಿದೆ ಎಂದು ಘೋಷಿಸಿದ ಮುಖ್ಯಮಂತ್ರಿಗಳು, ಮುಂದಿನ 3 ವರ್ಷದೊಳಗೆ ಕರಾವಳಿ ಅಭಿವೃದ್ಧಿಗೆ ಸರ್ವ ಸಹಕಾರ ನೀಡಲಾಗುವುದು ಎಂದರು.ಮಂಗಳೂರು ವಿಮಾನ ನಿಲ್ದಾಣದ ನೂತನ ಟರ್ಮಿನಲಿಗೆ ಬೇಕಾದ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಸೂಕ್ತ ಸಹಕಾರ ನೀಡಲಾಗುವುದು. ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿರುವ ಸಂದರ್ಭದಲ್ಲಿ ನೂತನ ಟರ್ಮಿನಲ್ ಉದ್ಘಾಟನೆ ಗೊಂಡಿರುವುದು ಸಂತಸ ತಂದಿದೆ ಎಂದು ಯಡಿಯೂರಪ್ಪ ತಿಳಿಸಿದರು. ನಮ್ಮ ಸಾಧನೆ ಮಾತನಾಡಬೇಕೇ ಹೊರತು, ಮಾತೇ ಸಾಧನೆಯಾಗಬಾರದು ಎಂದ ಮುಖ್ಯಮಂತ್ರಿಗಳು, ವಿಮಾನ, ರೈಲ್ವೇ ಸಂಪರ್ಕಕ್ಕೂ ಸಾಕಷ್ಟು ಆದ್ಯತೆಯನ್ನು ಸರ್ಕಾರ ನೀಡುತ್ತಿದ್ದು, ಕೇಂದ್ರ ಸಚಿವರ ಸಹಕಾರ ರೈಲ್ವೇ ಅಭಿವೃದ್ಧಿಗೆ ಅಗತ್ಯವಾಗಿದ್ದು, ಅದಕ್ಕೆಂದೇ 500 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮೀಸಲಿಟ್ಟಿದೆ. ಯೋಜನೆಗಳ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ; ರೈಲ್ವೇ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯ ಎಂದರು. ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲು ಕೇಂದ್ರ ವಿಮಾನ ಯಾನ ಸಚಿವರು ಮುತುವರ್ಜಿ ವಹಿಸಬೇಕು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ತಿಳಿಸಿದರು. ಕರಾವಳಿಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆ ನೀಡಿದ ಮಾಜಿ ಸಂಸದ ಶ್ರೀನಿವಾಸ ಮಲ್ಯರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ಮಂಗಳೂರು ವಿಮಾನ ನಿಲ್ದಾಣ ನೆಹರೂ ಕಾಲದಲ್ಲಿ ಆರಂಭವಾಯಿತು. ಆ ಬಳಿಕ ಮನಮೋಹನ್ ಸಿಂಗ್ ವರೆಗೆ ರಾಜ್ಯದ ವಿವಿಧ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಗಮನ ಹರಿಸಿದ್ದಾರೆ. 1992ರಲ್ಲೇ ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿತ್ತು ಎಂದು ಮೊಯ್ಲಿ ತಿಳಿಸಿದರು. ದೇಶದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ 40 ಸಾವಿರ ಕೋಟಿ ರೂಪಾಯಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ದೇಶದ ಬಂದರುಗಳ ಅಭಿವೃದ್ಧಿಗೆ 900 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಮಂಗಳೂರಿನಿಂದ - ಚಿಕ್ಕಮಗಳೂರಿಗೆ ಸಂಪರ್ಕಿಸುವ ಇನ್ನೊಂದು ರಾಷ್ಟ್ರೀಯ ಹೆದ್ದಾರಿ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.ಭೂಸ್ವಾಧೀನ ಪಡಿಸಿಕೊಂಡ ಸಂದರ್ಭದಲ್ಲಿ ಸಂತ್ರಸ್ತ ರಾದವರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು. ಮಂಗಳೂರು ಯಾತ್ರಿಕರ ಪ್ರವಾಸ ತಾಣವಾಗಿ ಬೆಳೆಯಲು ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಟಾಸ್ಕ್ ಫೋರ್ಸ್ ರಚಿಸಬೇಕು ಎಂದು ಕೇಂದ್ರ ಸಚಿವರು,ರಾಜ್ಯ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರು. ಜಿಲ್ಲೆಯಲ್ಲಿ ಪ್ರವಾ ಸೋದ್ಯಮ ಕ್ಷೇತ್ರದ ಅಭಿವೃದ್ಧಿ ಯಾಗಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳನ್ನು ಮುಂದುವರಿಸಿ, ಅವರ ಸೇವೆಯನ್ನು ಪಡೆದು ಕೊಳ್ಳಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ತಿಳಿಸಿದರು.
ಮಂಗಳೂರು ವಿಮಾನ ನಿಲ್ದಾಣ ಮೇಲ್ದರ್ಜೆಗೇರಿ ನೂತನ ಟರ್ಮಿನಲ್ ರಚನೆ ಆಗಿರುವುದು ಮಂಗಳೂರು ಲೋಕಸಭ ಕ್ಷೇತ್ರಕ್ಕೆ ಹಿರಿಮೆಯ ಸಂಗತಿ. ಈ ನಿಲ್ದಾಣಕ್ಕೆ ಭೂಮಿ ನೀಡಿದವರನ್ನು ಅಭಿನಂದಿಸಬೇಕಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಮಂಗಳೂರು ವಿಮಾನ ನಿಲ್ದಾಣಕ್ಕೆ ಚತುಷ್ಪಥ ರಸ್ತೆ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ 100 ಕಿ.ಮೀ. ವ್ಯಾಪ್ತಿಯೊಳಗೆ ಒಂದು ವಿಮಾನ ನಿಲ್ದಾಣ ಅಭಿವೃದ್ದಿ ಪಡಿಸುವ ಗುರಿಯನ್ನು ಸರಕಾರ ಹೊಂದಿದೆ. ಆ ಪ್ರಕಾರ 13 ದೊಡ್ಡ ಪ್ರಮಾಣದ ವಿಮಾನ ನಿಲ್ದಾಣ 10 ಜಿಲ್ಲೆಗಳಲ್ಲಿ ಏರ್ಸ್ಟ್ರಿಪ್ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ಸರಕಾರದಿಂದ ಭೂಸ್ವಾಧೀನದ ಹಣ ಭರಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯ ಸಚಿವ ಜನಾರ್ದನ ರೆಡ್ಡಿ ತಿಳಿಸಿದರು.
ಸಂಸತ್ ಸದಸ್ಯ (ರಾಜ್ಯ ಸಭೆ) ಆಸ್ಕರ್ ಫೆರ್ನಾಂಡಿಸ್, ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ,ಶಾಸಕ ಅಭಯಚಂದ್ರ ಜೈನ್ ಮತ್ತು ಮೇಯರ್ ರಜನಿ ದುಗ್ಗಣ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ವಿ.ಪಿ. ಅಗರ್ವಾಲ್, ಪ್ರಾದೇಶಿಕ ಕಾರ್ಯನಿರ್ವಾಹಕ ನಿರ್ದೇಶಕ ದೇವರಾಜ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Friday, May 14, 2010

ಮಂಗಳೂರು ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಜೂನ್ ನಿಂದ ಕಾರ್ಯಾರಂಭ

ಮಂಗಳೂರು, ಮೇ 14: ಮಂಗಳೂರು ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡ ಕಾಮಾಗಾರಿ ಪೂರ್ಣಗೊಂಡಿದ್ದು,ಮೇ 15 ರಂದು ಶನಿವಾರದಂದು ಕೇಂದ್ರ ನಾಗರಿಕ ವಿಮಾನ ಯಾನ ಖಾತೆಯ ರಾಜ್ಯ ಸಚಿವ ಪ್ರಫುಲ್ ಪಟೇಲ್ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ವಿ.ಪಿ. ಅಗರ್ವಾಲ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

ಕಳೆದ ಎರಡೂವರೆ ವರ್ಷದಲ್ಲಿ ಒಟ್ಟು 200 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ ಕೆಂಜಾರಿನಲ್ಲಿ 70 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ಮುಂದಿನ ಹಂತದಲ್ಲಿ ರನ್ ವೇ ಅಭಿವೃದ್ಧಿಗೆ 50 ಕೋಟಿ ರೂ. ವೆಚ್ಚ ಮಾಡಲಾಗುವುದು. ಒಟ್ಟು 250 ಕೋಟಿ ರೂಪಾಯಿಯ ಈ ಯೋಜನೆ ಜೂನ್ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ ಎಂದು ಅಗರ್ವಾಲ್ ತಿಳಿಸಿದರು.
ಅಂತಾ ರಾಷ್ಟ್ರೀಯ ಗುಣಮಟ್ಟದ ಅತ್ಯಾಧುನಿಕ ತಂತ್ರ ಜ್ಞಾನದೊಂದಿಗೆ 18,220 ಚದರ ಮೀಟರ್ ವಿಸ್ತೀರ್ಣದ ಸಂಪೂರ್ಣ ಹವಾ ನಿಯಂತ್ರಿತ ಈ ಟರ್ಮಿನಲ್ 500 ಪ್ರಯಾಣಿಕರ ಆಗಮನ ಮತ್ತು ನಿರ್ಗಮನಕ್ಕೆ ಬೇಕಾದ ಸೌಲಭ್ಯವನ್ನು ಹೊಂದಿದೆ. ಹಿಂದಿನ ವಿಮಾನ ನಿಲ್ದಾಣದಲ್ಲಿ ಕೇವಲ 150 ರಿಂದ 180 ಜನರಿಗೆ ಮಾತ್ರ ಸೌಲಭ್ಯ ಇತ್ತು. ಕೆಂಜಾರಿನಲ್ಲಿ ನಿರ್ಮಾಣಗೊಂಡ ನೂತನ ಟರ್ಮಿನಲ್ ನಿಂದಾಗಿ ಮಂಗಳೂರು ನಗರದ ಅಂತರ 7 ಕಿ. ಮೀ. ಕಡಿಮೆಯಾಗಲಿದೆ.5 ಕೋಟಿ ರೂ. ವೆಚ್ಚದಲ್ಲಿ ಹೊಸ ಏರ್ ಟ್ರಾಫಿಕ್ ಕಂಟ್ರೋಲ್ ನಿರ್ಮಾಣಗೊಂಡಿದೆ.ರಾತ್ರಿ ವಿಮಾನ ನಿಲುಗಡೆಗೆ ಸೌಲಭ್ಯ ಇದೆ. ನೂತನ ಟರ್ಮಿನಲ್ ನಿಂದಾಗಿ ಹೆಚ್ಚಿನ ವಿಮಾನ ಆಗಮ ಮತ್ತು ನಿರ್ಗಮನಕ್ಕೆ ಅವಕಾಶ ಲಭಿಸಲಿದೆ ಎಂದು ಅಗರ್ವಾಲ್ ತಿಳಿಸಿದರು. ಈಗಿರುನ ಬಜಪೆ ವಿಮಾನ ನಿಲ್ದಾಣದಲ್ಲಿ ವೈಮಾನಿಕ ತರಬೇತಿ ಶಿಕ್ಷಣ ಮತ್ತು ಸರಕು ಸಾಗಾಟದ ವಿಮಾನಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಬೆಳಗಾಂ,ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆ:
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಹುಬ್ಬಳ್ಳಿ,ಬೆಳಗಾಂ ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ವಿಸ್ತರಣೆಯ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದ್ದು,ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ 310 ಎಕರೆ ಹೆಚ್ಚುವರಿ ಭೂಸ್ವಾಧೀನವಾಗಬೇಕಾಗಿದ್ದು, ಪ್ರಗತಿಯಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಹಕಾರ ಕೋರಲಾಗಿದೆ ಎಂದು ಅಗರ್ವಾಲ್ ವಿವರಿಸಿದರು
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಪೀಟರ್ ಅಬ್ರಹಾಂ, ಸದರ್ನ್ ರೀಜನಲ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಿ.ದೇವರಾಜ್,ಎಂ.ಆರ್. ವಾಸುದೇವ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು,ಮೇ14: ಮಂಗಳೂರು ವಿಮಾನ ನಿಲ್ದಾಣದ ನೂತನ ಏಕೀಕೃತ ಟರ್ಮಿನಲ್ ಭವನದ ಉದ್ಘಾಟನಾ ಸಮಾರಂಭ ಮೇ 15ರಂದು ಬೆಳಗ್ಗೆ 11 ಗಂಟೆಗೆ ಕೆಂಜಾರಿನಲ್ಲಿ ನಡೆಯಲಿದೆ.
ಕೆಂಜಾರಿನ 70 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ 500 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯ ಮೊದಲ ಹಂತ 147 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಹವಾ ನಿಯಂತ್ರಿತ ಸೌಲಭ್ಯ ಹೊಂದಿರುವ 18,200 ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ. ಏಕ ಕಾಲದಲ್ಲಿ 500 ಮಂದಿ ಪ್ರಯಾಣಿಕರು ಆಗಮಿಸುವ ಮತ್ತು ನಿರ್ಗಮನ ಸೌಲಭ್ಯ ಹೊಂದಿರುವ ನೂತನ ಏಕೀಕೃತ ಟರ್ಮಿನಲ್ ಭವನದೊಂದಿಗೆ 55 ಕೋಟಿ ರೂ., ವೆಚ್ಚದಲ್ಲಿ ನೂತನ ರನ್ ವೇ ಪೂರ್ಣಗೊಂಡಿದೆ.
ಸಿಸಿ ಕ್ಯಾಮರಾ, 28 ತಪಾಸಣಾ ಕೌಂಟರ್ ಸೇರಿದಂತೆ ಕಸ್ಟಮ್ಸ್ ಮತ್ತು ಎಮಿಗ್ರೇಶನ್ ಸೌಲಭ್ಯ ವಿಐಪಿ ಲಾಂಜ್, ರೆಸ್ಟೊರೆಂಟ್, ವಿದೇಶಿ ಪ್ರಯಾಣಿಕರಿಗೆ ಪ್ರತ್ಯೇಕ ವ್ಯವಸ್ಥೆ, ಹವಾನಿಯಂತ್ರಿತ ಏರೋ ಬ್ರಿಡ್ಜ್ ಅಳವಡಿಸಲಾಗಿದೆ. ಇನ್ ಲೈನ್ ಎಕ್ಸ್ ರೇ ಬ್ಯಾಗೇಜ್ ಸಿಸ್ಟಮ್ ಹೊಂದಿದೆ. 15 ರಂದು ಬೆಳಗ್ಗೆ 11 ಗಂಟೆಗೆ ಭಾರತ ಸರ್ಕಾರದ ನಾಗರೀಕ ವಿಮಾನ ಯಾನ ಖಾತೆಯ ರಾಜ್ಯ ಸಚಿವ ಪ್ರಫುಲ್ ಪಟೇಲ್ ನೂತನ ಏಕೀಕೃತ ಟರ್ಮಿನಲ್ ಭವನ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಾಲ್ಗೊಳ್ಳುವರು. ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಸಂಸತ್ ಸದಸ್ಯ (ರಾಜ್ಯ ಸಭೆ) ಆಸ್ಕರ್ ಫೆರ್ನಾಂಡಿಸ್, ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ಶಾಸಕರಾದ ಅಭಯಚಂದ್ರ ಜೈನ್, ಮೇಯರ್ ರಜನಿದುಗ್ಗಣ್ಣ ಗೌರವಾನ್ವಿತ ಅತಿಥಿಗಳಾಗಿರುವರು.

Thursday, May 13, 2010

ಗ್ರಾ.ಪಂ. ಚುನಾವಣೆ,ಮತ ಎಣಿಕೆಗೆ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಪೊನ್ನುರಾಜ್

ಮಂಗಳೂರು, ಮೇ 13: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 12ರಂದು ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಗೆ ವ್ಯಾಪಕ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪೊನ್ನುರಾಜ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೇ 17ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಐದು ತಾಲೂಕುಗಳ ಮತ ಎಣಿಕೆ ಕಾರ್ಯ 600 ಮೇಜುಗಳಲ್ಲಿ ನಡೆಯಲಿದೆ.
*ಮಂಗಳೂರು ತಾಲೂಕಿನ ಸಂತ ರೋಜಾರಿಯೊ ಸಂಯುಕ್ತ ಪದವಿ ಪೂರ್ವ ಕಾಲೇಜು (165 ಮೇಜು).
*ಬಂಟ್ವಾಳ ತಾಲೂಕಿನ ಮೊಡಂಕಾಪುವಿನ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆ (150 ಮೇಜು).
*ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (97 ಮೇಜು).
*ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು (137 ಮೇಜು).
*ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜು (51 ಮೇಜು).
ಮತದಾನದ ವಿವರ
*ಮಂಗಳೂರು ತಾಲೂಕಿನ 2,59,627 ಮತದಾರರ ಪೈಕಿ 1,84,547 ಮಂದಿ ಮತದಾನಗೈದಿದ್ದಾರೆ.
*ಬಂಟ್ವಾಳ ತಾಲೂಕಿನ 2,29,206 ಮತದಾರರ ಪೈಕಿ 1,69,538 ಮಂದಿ ಮತದಾನಗೈದಿದ್ದಾರೆ.
*ಬೆಳ್ತಂಗಡಿ ತಾಲೂಕಿನ 1,64,097 ಮತದಾರರ ಪೈಕಿ 1,18,218 ಮಂದಿ ಮತದಾನಗೈದಿದ್ದಾರೆ.
*ಪುತ್ತೂರು ತಾಲೂಕಿನ 1,56,399 ಮತದಾರರ ಪೈಕಿ 11,7974 ಮಂದಿ ಮತದಾನಗೈದಿದ್ದಾರೆ.
*ಸುಳ್ಯದ 83,867 ಮತದಾರರ ಪೈಕಿ 66,325 ಮಂದಿ ಮತದಾನಗೈದಿದ್ದಾರೆ.
ಒಟ್ಟು ಜಿಲ್ಲೆಯ 8,93,196 ಮತದಾರರ ಪೈಕಿ 65,6602 ಮಂದಿ ಮತದಾನಗೈದಿದ್ದು, ಶೇ 73.27 ಮತದಾನವಾಗಿದೆ.
*ಕನಿಷ್ಠ ಶೇ 33.68, ಗರಿಷ್ಠ ಶೇ 95.56 ಮತದಾನ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ದ.ಕ. ಜಿ.ಪಂ.ಹಿ.ಪ್ರಾ. ಶಾಲೆಯ ಮಂಕುಡೆ ಮತದಾನ ಕೇಂದ್ರದಲ್ಲಿ ಜಿಲ್ಲೆಯಲ್ಲೇ ಗರಿಷ್ಠ (ಶೇ 95.56) ಮತದಾನವಾಗಿದ್ದು, 608 ಮತದಾರರಲ್ಲಿ 581 ಮತದಾರರು ಮತ ಚಲಾಯಿಸಿದ್ದಾರೆ.
ಮಂಗಳೂರು ತಾಲೂಕಿನ ಕೊಣಾಜೆ ಗ್ರಾಮದ ವಿದ್ಯೋದಯ ಅನುದಾನಿತ ಹಿ.ಪ್ರಾ. ಶಾಲೆ ಅಸೈಗೋಳಿಯಲ್ಲಿ ಕನಿಷ್ಠ (ಶೇ 33.68) ಮತದಾನವಾಗಿದ್ದು,864 ಮತದಾರರಲ್ಲಿ ಕೇವಲ 291 ಮಂದಿ ಮಾತ್ರ ಮತದಾನವಾಗಿದೆ.
ಟೆಂಡರ್ಡ್ ಮತಗಳು
ಮಂಗಳೂರು : 292, ಬಂಟ್ವಾಳ : 158, ಬೆಳ್ತಂಗಡಿ : 155, ಪುತ್ತೂರು : 274, ಸುಳ್ಯ : 236
ಅಂಚೆ ಮತಗಳು
ಮಂಗಳೂರು : 14, ಬಂಟ್ವಾಳ : 3, ಬೆಳ್ತಂಗಡಿ : 0, ಪುತ್ತೂರು : 7, ಸುಳ್ಯ : 2

'ಏಕದಿನ'ದಲ್ಲೇ ಅರ್ಜಿ ವಿಲೇವಾರಿ : ದ.ಕ.ಜಿಲ್ಲಾಧಿಕಾರಿಯಿಂದ ಹೊಸ ಯೋಜನೆ

ಮಂಗಳೂರು, ಮೇ 13: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ತಾಲೂಕು ಕಚೇರಿಗಳಿಗೆ ಬರುವ ಸಾರ್ವಜನಿಕ ಅರ್ಜಿಗಳಲ್ಲಿ ಶೇ. 70ರಷ್ಟು ಪ್ರಕರಣಗಳನ್ನು ಒಂದೇ ದಿನದಲ್ಲಿ ವಿಲೇವಾರಿ ಮಾಡಲು ಸಾಧ್ಯವಿರುವುದರಿಂದ `ಏಕದಿನ ಅರ್ಜಿ ವಿಲೇವಾರಿ' ಎಂಬ ನೂತನ ಯೋಜನೆಯನ್ನು ಶೀಘ್ರದಲ್ಲೇ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪ್ರಸಕ್ತ ಜಿಲ್ಲಾಧಿಕಾರಿಯ ಆಂತರಿಕ ಆಡಳಿತದಲ್ಲಿ ಮಾತ್ರ ಗಣಕೀಕೃತ ವ್ಯವಸ್ಥೆ ಇದೆ. ಮುಂದಿನ ಹಂತದಲ್ಲಿ ಸಾರ್ವಜನಿಕರ ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ ಗಣಕೀಕೃತ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಇದರಿಂದ `ಕಾಗದ ರಹಿತ ಕಚೇರಿ' ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಪ್ರಥಮ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಮಂಗಳೂರು ತಾಲೂಕಿನಲ್ಲಿ ಈ ವ್ಯವಸ್ಥೆ ಆರಂಭಿಸಲಾಗುವುದು. ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವ ಮಾದರಿಯಲ್ಲಿ ಗಣಕೀಕೃತ ವ್ಯವಸ್ಥೆಯಲ್ಲಿ ಅರ್ಜಿದಾರರು ತಮ್ಮ ಭೂಮಿ, ಭೂಮಿಪರಿವರ್ತನೆ ಹಾಗೂ ಇನ್ನಿತರ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಯಾವ ಹಂತದಲ್ಲಿದೆ ಎನ್ನುವುದನ್ನು ಗಣಕೀಕೃತ ವ್ಯವಸ್ಥೆಯಲ್ಲಿ ಆನ್ ಲೈನ್ ಮೂಲಕ ಯಾವ ಪ್ರದೇಶದಲ್ಲಿದ್ದರೂ ಅರ್ಜಿದಾರರು ತಿಳಿದುಕೊಳ್ಳಬಹುದು. ಈ ವ್ಯವಸ್ಥೆ ಅನುಷ್ಠಾನ ಗೊಂಡರೆ ಕರ್ನಾಟಕ ದಲ್ಲೇ ಮೊತ್ತ ಮೊದಲ ಪೈಲಟ್ ಯೋಜನೆ ಇದಾಗಲಿದೆ. ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಸಂಬಂಧಿಸಿದ ಕಂದಾಯ ಇಲಾಖೆಯ ಅರ್ಜಿಗಳ ಮಾಹಿತಿಯನ್ನು ಗ್ರಾಮ ಪಂಚಾಯತ್ ಗಳಲ್ಲೂ ಪಡೆಯಬಹುದು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮುಂದಿನ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Wednesday, May 12, 2010

ಜಿಲ್ಲೆಯಲ್ಲಿ 73.31% ಮತದಾನ

ಮಂಗಳೂರು,12: ಮಂಗಳೂರಿನಲ್ಲಿ 71.8%,ಸುಳ್ಯದಲ್ಲಿ 79.08%,ಬೆಳ್ತಂಗಡಿಯಲ್ಲಿ 72.4% ಶೇಕಡಾ ಮತದಾನವಾಗಿದೆ.ಪುತ್ತೂರು ಮತ್ತು ಬಂಟ್ವಾಳದಲ್ಲಿ ತಲಾ 73.97% ಮತದಾನ ದಾಖಲಾಗಿದೆ.ಜಿಲ್ಲೆಯಲ್ಲಿ ಒಟ್ಟು 73.31% ಮತದಾನವಾಗಿದೆ.

ಜಿಲ್ಲೆಯಲ್ಲಿ ಶಾಂತಿಯುತ ಮತದಾನ

ಮಂಗಳೂರು, ಮೇ12: ಜಿಲ್ಲೆಯ 199 ಗ್ರಾಮ ಪಂಚಾಯತ್ ಗಳಲ್ಲಿ ಇಂದು ಚುನಾವಣೆ ಶಾಂತಿ ಯುತವಾಗಿ ನಡೆದಿದ್ದು,ಯಾವುದೇ ಅಹಿತಕರ ಘಟನೆಗಳಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿತು. ಕಣದಲ್ಲಿ 7500 ಅಭ್ಯರ್ಥಿ ಗಳಿದ್ದು 3,118 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕೇಂದ್ರ ಗಳಲ್ಲಿ ಬಿಗಿ ಭದ್ರತೆ ಇತ್ತು. ಆಯ್ದ ಗ್ರಾಮ ಪಂಚಾಯತ್ ಕೇಂದ್ರ ಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಚಿತ್ರೀ ಕರಿಸ ಲಾಗಿದೆ. ಮತದಾರರು ಎಲ್ಲೆಡೆ ಮತದಾನ ಮಾಡಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿ ಗಳಾಗಿದ್ದಾರೆ.

Monday, May 10, 2010

ನಿರ್ಭೀತಿಯಿಂದ ಮತ ಚಲಾಯಿಸಿ: ಜಿಲ್ಲಾಧಿಕಾರಿ

ಮಂಗಳೂರು,ಮೇ10:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 199 ಗ್ರಾಮಪಂಚಾಯತುಗಳ 1103 ಮತಗಟ್ಟೆಗಳಲ್ಲಿ ಮತದಾನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆಗಳನ್ನು ಮಾಡಿದೆ. ಮತಗಟ್ಟೆಗಳಲ್ಲಿ 4412ಸಿಬ್ಬಂದಿಗಳನ್ನು ನೇಮಿಸಲಾಗಿದ್ದು,ಅವರನ್ನು ಮತಗಟ್ಟೆಗೆ ಕಳುಹಿಸಿಕೊಡಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 252 ಸೂಕ್ಷ್ಮ ಮತ್ತು 176ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಮತದಾನದ ಸಂದರ್ಭದಲ್ಲಿ ಕಾನೂನು ಉಲ್ಲಂಘನೆ ದಾಖಲಿಸಲು ಮತದಾನ ಕೇಂದ್ರಗಳಲ್ಲಿ ವಿಡಿಯೋಗ್ರಾಫರ್ ಗಳನ್ನು ಬಳಸಿಕೊಂಡು ಮತದಾನ ಪ್ರಕ್ರಿಯೆಯನ್ನು ದಾಖಲಿಸಲಾಗುವುದು. ಮತದಾರರಲ್ಲದ ಮುಖಂಡರು,ಪಕ್ಷ ಕಾರ್ಯಕರ್ತರು ಮತ್ತು ಚುನಾವಣಾ ಪ್ರಚಾರಕರು ಬೇರೆ ಗ್ರಾಮಪಂಚಾಯತ್ ಗಳಲ್ಲಿ ತಿರುಗಾಡಬಾರದೆಂಬ ಸೂಚನೆ ರವಾನಿಸಲಾಗಿದೆ. ಮತದಾನ ಕೇಂದ್ರಗಳಿಗೆ ಸಿಬ್ಬಂದಿ ರವಾನೆಗೆ 175 ಬಸ್ಸು, 17 ಮಿನಿ ಬಸ್ಸು, 92 ವ್ಯಾನ್, 223 ಜೀಪುಗಳನ್ನು ಬಳಸಿಕೊಳ್ಳಲಾಗುತ್ತಿದೆ.
ರೂಟ್ ಅಧಿಕಾರಿಗಳು,ಸ್ಕ್ವಾಡ್,ಮೊಬೈಲ್ ತಂಡ ಹಾಗೂ ಸುಸ್ಸಜ್ಜಿತ ಪೊಲೀಸ್ ತಂಡ ಸೇರಿ ಸುಮಾರು 15 ಮತದಾನ ಕೇಂದ್ರಗಳಿಗೆ ತಲಾ ಒಂದರಂತೆ 75 ತಂಡಗಳನ್ನು ರಚಿಸಲಾಗಿದ್ದು,ಶಾಂತಿ ಹಾಗೂ ಮುಕ್ತ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತದಾರರನ್ನು ಮತಗಟ್ಟೆಗೆ ಸಾಗಿಸುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಮತಪೆಟ್ಟಿಗೆಗಳ ಸುರಕ್ಷತೆಗೆ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಜ್ಯಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ಚುನಾವಣಾ ವೀಕ್ಷಕರು ಜಿಲ್ಲೆಯಲ್ಲಿ ಮುಕ್ತವಾಗಿ ಸಂಚರಿಸಿ ಚುನಾವಣೆ ಪ್ರಕ್ರಿಯೆ ಪರಿಶೀಲಿಸಲಿದ್ದಾರೆ. ಮತದಾರರು ನಿರ್ಬೀತಿಯಿಂದ ಮುಕ್ತವಾಗಿ ಮತ ಚಲಾಯಿಸಬೇಕೆಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.

12ರಂದು ಜಿಲ್ಲಾ ವ್ಯಾಪ್ತಿಯಲ್ಲಿ ಸಂತೆ,ಜಾತ್ರೆ ನಿಷೇಧ:ಜಿಲ್ಲಾಧಿಕಾರಿ ಆದೇಶ

ಮಂಗಳೂರು,ಮೇ10:ಮೇ 12ರಂದು ನಡೆಯಲಿರುವ ಗ್ರಾಮಪಂಚಾಯತ್ ಚುನಾವಣೆ ಸುವ್ಯವಸ್ಥಿತ ಹಾಗೂ ಶಾಂತಿಯುತವಾಗಿ ನಡೆಯಲು ಚುನಾವಣೆ ದಿನ ನಡೆಯಲಿರುವ ಸಂತೆ,ಜಾತ್ರೆ,ಉತ್ಸವ,ದನಗಳ ಜಾತ್ರೆ ಇತ್ಯಾದಿಗಳನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಆದೇಶ ಹೊರಡಿಸಿದ್ದಾರೆ.
ಮತದಾರರಿಗೆ ಮತದಾನದಂದು ಆಗುವ ಅನಾನು ಕೂಲತೆಗಳನ್ನು ತಪ್ಪಿಸುವ ದೃಷ್ಠಿಯಿಂದ ಪುತ್ತೂರು,ಮಂಗಳೂರು, ಬಂಟ್ವಾಳ ತಹಸೀಲ್ದಾರರ ವರದಿಯನ್ನಾಧರಿಸಿ ಆದೇಶ ಜಾರಿಗೊಳಿಸಲಾಗಿದೆ. ಮೂಡಬಿದ್ರೆ ಫಿರ್ಕಾದ ಬೆಳುವಾಯಿ ಗ್ರಾಮದಲ್ಲಿ ಬಂಟ್ವಾಳ ತಾಲೂಕಿನ ಬಂಟ್ವಾಳ ಫಿರ್ಕಾದ ಕಾವಳಪಡೂರು ಗ್ರಾಮದ ವಗ್ಗ ಎಂಬಲ್ಲಿ, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಫಿರ್ಕಾದ ನೆಲ್ಯಾಡಿಯಲ್ಲಿ ಮತ್ತು ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಹಾಗೂ ಅರಂತೋಡಿ ಎಂಬಲ್ಲಿ 12ರಂದು ನಡೆಯಲಿರುವ ಸಂತೆ,ಜಾತ್ರೆ, ಉತ್ಸವಗಳನ್ನು ನಿಷೇಧಿಸಲಾಗಿದೆ.
ಮದ್ಯ ಮಾರಾಟ ಬಂದ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಮುಕ್ತ ಹಾಗೂ ನ್ಯಾಯ ಸಮ್ಮತ,ನಿಷ್ಪಕ್ಷಪಾತ,ಶಾಂತಿ ಯುತವಾಗಿ ನಡೆಯಲು ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿ ಕಾರಿಯಾದ ಪೊನ್ನುರಾಜ್ ಅವರು ಮೇ11ರ ಬೆಳಗ್ಗೆ 7 ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ಮದ್ಯಮುಕ್ತ ಅವಧಿ ಎಂದು ಘೋಷಿಸಲಾಗಿದೆ. ಕರ್ನಾಟಕ ಅಬಕಾರಿ ಕಾಯಿದೆ 1965ರಡಿ ಕಾರ್ಯಾಚರಿಸುತ್ತಿರುವ ಸನ್ನದು ಆವರಣವನ್ನು ಹಾಗೂ ಮಾರಾಟ ಕೇಂದ್ರಗಳನ್ನು ಹಾಗೂ ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ.

Thursday, May 6, 2010

ಪಿಯುಸಿ ಫಲಿತಾಂಶ : ದ.ಕ.ಕ್ಕೆ ಎರಡನೇ ಸ್ಥಾನ

ಮಂಗಳೂರು,ಮೇ6:ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.ಈ ಭಾರಿ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನವನ್ನು ಪಡೆದಿದ್ದು, ಶೇಕಡ 88.93 ಮಕ್ಕಳು ಪರೀಕ್ಷೆ ಉತ್ತಿರ್ಣರಾಗಿದ್ದಾರೆ. 89.43 ಶೇಕಡಾ ಫಲಿತಾಂಶದೊಂದಿಗೆ ಉಡುಪಿ ಪ್ರಥಮ ಸ್ಥಾನ ಪಡೆದಿದೆ. ಉತ್ತರಕನ್ನಡ(77.27)ಮೂರನೇ ಮತ್ತು ಕೊಡಗು(74.66) ನಾಲ್ಕನೇ ಸ್ಥಾನ ಪಡೆದಿದೆ.

Wednesday, May 5, 2010

ಅನಧಿಕೃತ ಜಮೀನು ಖರೀದಿಸದಿರಿ: ಡಿಸಿ ಮನವಿ

ಮಂಗಳೂರು,ಮೇ 5:ದಕ್ಷಿಣ ಕನ್ನಡ ಜಿಲ್ಲೆಯ ಅದರಲ್ಲೂ ಮುಖ್ಯವಾಗಿ ಮಂಗಳೂರು ನಗರದಲ್ಲಿ ಬಡಜನತೆಯ ಹೆಸರಿನಲ್ಲಿ ರಿಯಲ್ ಎಸ್ಟೇಟ್ ನವರು ವ್ಯವಹರಿಸುತ್ತಿದ್ದು, ನಗರದಲ್ಲಿ 2-3 ಸೆನ್ಸ್ ಜಮೀನು ಖರೀದಿಸುವಾಗ ಜನರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು,ಜನರು ಅಧಿಕೃತ ಬಡಾವಣೆಗಳಲ್ಲಿ ಮಾತ್ರ ಮನೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾರೆ. ಜಾಗ ಖರೀದಿಗೆ ಸಂಬಂಧಿಸಿದಂತೆ ಜನರಿಗೆ ಸೂಕ್ತ ಮಾಹಿತಿ ನೀಡಲು ಮುಂದಿನ ಎರಡು ತಿಂಗಳೊಳಗಾಗಿ ಕಾರ್ಪೊರೇಷನ್,ಮೂಡಾ,ಕಂದಾಯ ಇಲಾಖೆ ಸಂಯುಕ್ತವಾಗಿ ಮಾಹಿತಿ ಕೇಂದ್ರ ಸ್ಥಾಪಿಸಿ ಪೂರಕ ಮಾಹಿತಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ. ಹಾಗೂ ಎರಡನೇ ಹಂತದ ಮಾಹಿತಿಯ ಬಳಿಕ ಜನರಿಗೆ ಅಪ್ರೂವ್ ಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ನುಡಿದರು.ಭೂಮಿಗೆ ಸಂಬಂಧಿ ಸಿದಂತೆ ಪ್ರತಿದಿನ ಕನಿಷ್ಠ 3 ದೂರುಗಳು ಕಚೇರಿಗೆ ಬರುತ್ತಿದ್ದು, ಎರಡ ರಿಂದ ಮೂರು ಎಕರೆ ಭೂಮಿಯನ್ನು ರೈತರಿಂದ ಖರೀದಿಸಿ ತುಂಡು ತುಂಡು ಮಾಡಿ ಆ ಜಮೀನಿಗೆ ರಸ್ತೆ, ಒಳಚರಂಡಿ ಯಾವುದೇ ವ್ಯವಸ್ಥೆ ಇಲ್ಲದೆ ಮಾರುವುದರಿಂದ ಇಂತಹ ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ವಿವರಿಸಿದರು.ಬಡ ಜನರು ಇಂತಹ ಮೋಸಕ್ಕೊಳಗಾಗದೆ ಎಚ್ಚರ ವಹಿಸಬೇಕೆಂದರು. ಆರ್ ಟಿ ಸಿ ಸಂಬಂಧ ಜನರಿಗೆ ಅನುಕೂಲವಾಗಲು ಮಂಗಳೂರಿನಲ್ಲಿ 3 ಭೂಮಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.

ಎನ್ ಐ ಟಿ ಕೆಯಲ್ಲಿ ಏಳನೇ ಘಟಿಕೋತ್ಸವ


ಮಂಗಳೂರು, ಮೇ5: ಸುರತ್ಕಲ್ ನ ಎನ್ ಐ ಟಿ ಕೆ ಯಲ್ಲಿ ಇಂದು ನಡೆದ ಏಳನೇ ಘಟಿಕೋ ತ್ಸವದಲ್ಲಿ ಒಟ್ಟು 875 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇವರಲ್ಲಿ 50 ಮಂದಿಗೆ ಪಿ ಎಚ್ ಡಿ ಪದವಿ, ಹಾಗೂ ವಿವಿಧ ವಿಭಾಗ ಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಗೌರವಾನ್ವಿತ ರಾಜ್ಯ ಪಾಲರಾದ ಹಂಸರಾಜ್ ಭಾರದ್ವಾಜ ಅವರು ಚಿನ್ನದ ಪದಕ ಹಾಗೂ ಸರ್ಟಿಫಿಕೇಟ್ ಪ್ರಧಾನ ಮಾಡಿದರು. ಘಟಿಕೋತ್ಸವದಲ್ಲಿ ಬಿಒಜಿ ಅಧ್ಯಕ್ಷ ಪ್ರೊ.ಗೋವರ್ಧನ ಮೆಹ್ತಾ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ನಿರ್ದೇಶಕರಾದ ಪ್ರೊ. ಸಂದೀಪ್ ಸಂಚೈತಿ ಪ್ರಾಸ್ತಾವಿಕ ಹಾಗೂ ಸ್ವಾಗತ ನುಡಿಗಳನ್ನಾಡಿದರು.