Wednesday, May 5, 2010

ಗ್ರಾ.ಪಂ. ಚುನಾವಣೆ ಸಂಹಿತೆ ಪಾಲಿಸಿ: ಜಿಲ್ಲಾಧಿಕಾರಿ

ಮಂಗಳೂರು,ಮೇ5:ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ -2010 ಪಕ್ಷರಹಿತವಾಗಿ ನಡೆಯಲು ಹಾಗೂ ಚುನಾವಣಾ ನೀತಿ ಸಂಹಿತಿ ಉಲ್ಲಂಘನೆಯಾಗದಂತೆ ತಡೆಯಲು ಜಿಲ್ಲಾಡಳಿತ ಇಂದು ಸೂಕ್ತ ಮಾಹಿತಿಗಳನ್ನು ಪ್ರಕಟಿಸಿದೆ.
ಈ ಸಂಬಂಧ ಇಂದು ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ನೀತಿ ಸಂಹಿತೆಯ ಬಗ್ಗೆ ಎಲ್ಲರೂ ಜಾಗರೂ ಕಾರಾಗಿರಲು ಸೂಚಿಸಿದರು. ಸದಾಚಾರ ಸಂಹಿತೆ ಚುನಾವಣೆ ನಡೆಯುವ ಎಲ್ಲ ಗ್ರಾಮಪಂಚಾಯಿತಿಗಳ ವ್ಯಾಪ್ತಿಗೆ ಅನ್ವಯವಾಗಲಿದ್ದು,15.4.10 ರಿಂದ 18.5.10 ರ ವರೆಗೆ ಜಾರಿಯಲ್ಲಿರುತ್ತದೆ. ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆಸಲು ನೀತಿ ಸಂಹಿತೆ ಅಡ್ಡಿಯಿರುವುದಿಲ್ಲ. ಆದರೆ ಈ ಸಭೆಗಳಲ್ಲಿ ಯಾವುದೇ ಹೊಸ ಯೋಜನೆ ಅನುಷ್ಠಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಅವಕಾಶವಿಲ್ಲ.ಈಗಾಗಲೇ ಅಯವ್ಯಯ ಒದಗಿಸಿದ ಯೋಜನೆ ಆರಂಭಿಸಲು ಅಥವಾ ಪ್ರಾರಂಭವಾಗಿದ್ದಲ್ಲಿ ಕೆಲಸ ಮುಂದುವರಿಸಲು ಬಾಧಕವಿಲ್ಲ. ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಥವಾ ಈ ಯೋಜನೆಯಡಿ ಇತರ ಕಾಮಗಾರಿಗಳನ್ನು ತೆಗೆದುಕೊಂಡು ಅನುಷ್ಠಾನಗೊಳಿಸಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದರೆ ಇಂತಹ ಯೋಜನೆ ಅನುಷ್ಠಾನವನ್ನು ಸಾರ್ವಜನಿಕ ಸಮಾರಂಭ ಅಥವಾ ರಾಜಕೀಯ ನಾಯಕರ ಉಪಸ್ಥಿತಿಯಲ್ಲಿ ನಡೆಸುವುದನ್ನು ನಿಷೇಧಿಸಿದೆ. ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಹಾಗೂ ಎಪಿಎಂಸಿ ಅಧ್ಯಕ್ಷರಿಗೆ ಒದಗಿಸಿರುವ ವಾಹನಗಳು ಚುನಾವಣೆ ಮುಕ್ತಾಯವಾಗುವವರೆಗೆ ಜಿಲ್ಲಾಧಿಕಾರಿಗಳ ವಶದಲ್ಲಿದೆ. ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಮತ್ತು ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಉಪಯೋಗಿಸಿ ಪ್ರಚಾರ ಮಾಡಕೂಡದೆಂದು ಅಭ್ಯರ್ಥಿಗಳಿಗೆ ತಿಳಿಸುವುದು. ಈ ರೀತಿ ಪ್ರಚಾರ ನಡೆಸಿದ್ದಲ್ಲಿ ಅಭ್ಯರ್ಥಿಯು ಮುದ್ರಿಸಿರುವ ಕರಪತ್ರ,ಪೋಸ್ಟರ್ ಅಥವಾ ಇನ್ನಾವುದೇ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು. ಯಾವುದೇ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭೆ ಮತ್ತು ಸಮಾರಂಭಗಳನ್ನು ನಡೆಸಲು ನೀತಿ ಸಂಹಿತೆಯ ಅಡ್ಡಿಯಿಲ್ಲ. ಆದರೆ ಇಂತಹ ಸಭೆಗಳಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸಿ ನೀತಿ ಸಂಹಿತೆಗೆ ಬಾಧಕವಾಗುವ ರೀತಿಯಲ್ಲಿ ಮತದಾರರ ಮೇಲೆ ಪರಿಣಾಮ ಬೀರುವಂತಹ ಯಾವುದೇ ಘೋಷಣೆ, ಹೇಳಿಕೆ ಅಥವಾ ಆಶ್ವಾಸನೆ ಇತ್ಯಾದಿಗಳನ್ನು ನೀಡುವಂತಿಲ್ಲ. ಒಟ್ಟಿನಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಸರ್ಕಾರಿ ಕಾರ್ಯಕ್ರಮ ಅಥವಾ ಯೋಜನೆ ನಡೆಯದಂತೆ ನೋಡಿಕೊಳ್ಳತಕ್ಕದ್ದು.
ಇದುವರೆಗೆ ನಡೆದ ನಾಮಪತ್ರಗಳ ಪರಿಶೀಲನೆಯ ಬಳಿಕ 11,583ನಾಮಪತ್ರಗಳು ಸ್ವೀಕೃತವಾಗಿದ್ದು, 7,500 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಗಳೂರು ತಾಲೂಕಿನ ಕೊಲ್ಲೂರು-1, ಬಾಳ-2 ಬಂಟ್ವಾಳ ತಾಲೂಕಿನ ಸಜಿಪಮೂಡ-1,3,4,5 ಮತ್ತು ಸುಳ್ಯದ ಕಲ್ಮಡ್ಕ-1,2,ಪಂಬೆತ್ತಾಡಿ-1, ನೆಲ್ಲೂರು ಕೆಮ್ರಾಜೆಯ-1 ಈ ಕ್ಷೇತ್ರಗಳ ಎಲ್ಲ 9 ಮಂದಿ ಸದಸ್ಯರು ಅವಿರೋಧ ಆಯ್ಕೆಯಾಗಿರತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ತಾಲೂಕು ಪಂಚಾಯಿತಿ ಇ ಒ ಗಳು ನೋಡಲ್ ಅಧಿಕಾರಿಗಳಾಗಿದ್ದು, ಗ್ರಾ.ಪಂ ಕಾರ್ಯದರ್ಶಿಗಳು ನೀತಿಸಂಹಿತೆ ಅನುಷ್ಠಾನಾಧಿಕಾರಿಗಳಾಗಿರುತ್ತಾರೆ.
ಅಭ್ಯರ್ಥಿಗಳು ಪಕ್ಷಗಳೊಂದಿಗೆ,ರಾಜಕೀಯ ನಾಯಕರೊಂದಿಗೆ ಗುರುತಿಸಿಕೊಳ್ಳದೆ ತಮ್ಮ ಸಾಧನೆಗಳನ್ನು ಪಾಂಪ್ಲೆಟ್ ಮುಖಾಂತರ ಹೇಳಿ ವೈಯಕ್ತಿಕವಾಗಿ ಮತ ಕೇಳಿ ಎಂದೂ ಜಿಲ್ಲಾಧಿಕಾರಿಗಳು ಚುನಾವಣಾ ಅಭ್ಯರ್ಥಿಗಳಲ್ಲಿ ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮಂಗಳೂರು ಉಪವಿಭಾಗದ ಚುನಾವಣಾ ವೀಕ್ಷಕರಾದ ಮಂಜುನಾಥನಾಯಕ್,ಪುತ್ತೂರು ಉಪವಿಭಾಗದ ಚುನಾವಣಾ ವೀಕ್ಷಕರಾದ ಎಚ್.ಟಿ.ಚಂದ್ರಶೇಖರ್ ಉಪಸ್ಥಿತರಿದ್ದರು.