Tuesday, May 18, 2010

ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ: ಸಚಿವ ಶೆಟ್ಟರ್

ಮಂಗಳೂರು,ಮೇ 18: ರಾಜ್ಯದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತವಾದ ಪರಿಹಾರ ರೂಪಿಸಲು ವೈಜ್ಞಾನಿಕ ಸಲಹೆಗಳನ್ನು ಇಸ್ರೋ ವಿಜ್ಞಾನಿಗಳಿಂದ ಪಡೆದು ಕೊಳ್ಳಲಾಗುವುದಲ್ಲದೆ, ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗವನ್ನು ಸ್ಥಾಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದರು.

ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾರ್ಯ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲೆಗೆ 159 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, 250 ಲಕ್ಷ ರೂ.ಗಳ ಬೇಡಿಕೆ ಸಲ್ಲಿಸಲಾಗಿತ್ತು.ಮಂಗಳೂರು ತಾಲೂಕಿನ ಕಿನ್ನಿಗೋಳಿ ಹಾಗೂ ಇತರೆ 17 ಗ್ರಾಮಗಳಿಗೆ ವಿಶೇಷ ಕುಡಿಯುವ ನೀರಿನ ಯೋಜನೆಯಡಿ 1680 ಲಕ್ಷ ರೂ. ಮಂಜೂರಾಗಿದೆ. ತಾಲೂಕಿನ ಮಳವೂರು ಮತ್ತು ಇತರ 10 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಕಾರ್ಯಕ್ರಮದಡಿ ಸುಮಾರು 26 ಕೋಟಿ ರೂ. ವೆಚ್ಚದಲ್ಲಿ ಯೋಜನೆಕೈಗೆತ್ತಿಕೊಳ್ಳಲಾಗುವುದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪಿ.ಶಿವಶಂಕರ್ ಸಭೆಗೆ ಮಾಹಿತಿ ನೀಡಿದರು.ಪ್ರಸ್ತುತ ಸಾಲಿನಲ್ಲಿ ಕುಡಿಯುವ ನೀರಿನ ನಿರಂತರತೆ ಕಾರ್ಯಕ್ರಮದಡಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 10 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಮಳೆ ನೀರು ಕೊಯ್ಲಿಗೆ 21 ಗ್ರಾಮ ಪಂಚಾಯತ್ ಗಳಿಗೆ ಹಣ ಬಿಡುಗಡೆಗೆ ಕೋರಲಾಗಿದೆ. 2009-10ನೇ ವರ್ಷದಲ್ಲಿ ಗ್ರಾಮೀಣ ಕುಡಿಯುವ ನೀರಿಗೆ 312 ಗುರಿ ನಿಗದಿಪಡಿಸಲಾಗಿದ್ದು, 183 ಕಾಮಗಾರಿಗಳು ಸಂಪೂರ್ಣಗೊಂಡಿವೆ. ಸುವರ್ಣ ಗ್ರಾಮೋದಯ ಯೋಜನೆಯಡಿ 3ನೇ ಹಂತದಲ್ಲಿ 33 ಗ್ರಾಮಗಳಿಗೆ 3100.00 ಲಕ್ಷ ಮಂಜೂರಾಗಿದ್ದು, 27 ಗ್ರಾಮಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ. 10 ಗ್ರಾಮಗಳ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, 8 ಗ್ರಾಮಗಳ ಕಾಮಗಾರಿಗಳಿಗೆ ಟೆಂಡರ್ ಅಂತಿಮಗೊಳಿಸಿ ಕೆಲಸದ ಆದೇಶ ನೀಡಲಾಗಿದೆ. ಜಿಲ್ಲೆಯ ಭೌಗೋಳಿಕ ಪರಿಸ್ಥಿತಿಯನ್ನು ವಿಶೇಷವಾಗಿ ಪರಿಗಣಿಸಿ ಗ್ರಾಮಗಳ ಸಂಪರ್ಕ ರಸ್ತೆಗಳಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಸಭೆಯಲ್ಲಿ ಪಾಲ್ಗೊಂಡ ಶಾಸಕರಾದ ರಮಾನಾಥ ರೈ,ಯು ಟಿ ಖಾದರ್ ಒತ್ತಾಯಿಸಿದರು. ಸುವರ್ಣ ಗ್ರಾಮೋದಯ ಯೋಜನೆಯಡಿ 2006-07 ನೇ ಸಾಲಿನಲ್ಲಿ ಆರಂಭಿಸ ಲಾಗಿದ್ದ ಕಾಮ ಗಾರಿಗಳನ್ನು ಸಂಪೂರ್ಣ ಗೊಳಿಸಲಾಗಿದ್ದು, ಶೇಕಡ 100 ಸಾಧನೆ ದಾಖಲಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಗೆ ಅಭಿವೃದ್ಧಿ ಅನುದಾನ ಕೇವಲ 15 ಲಕ್ಷ ರೂ. ಬರುತ್ತಿದ್ದು, ಕನಿಷ್ಠ 2 ಕೋಟಿ ಅನುದಾನಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರು ಒತ್ತಾಯಿಸಿದರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಣ ಬಿಡುಗಡೆಗೆ ಯಾವುದೇ ತೊಂದರೆಯಿಲ್ಲ ಎಂದ ಸಚಿವರು, ಎನ್ ಆರ್ ಇ ಜಿ ಯೋಜನೆಯಡಿ ಕಾಮಗಾರಿಗಳು ನಡೆದಲ್ಲಿ ಮಾಹಿತಿ ಫಲಕಗಳನ್ನು ಹಾಕಲಾಗುವುದು. ಹತ್ತು ಲಕ್ಷ ರೂ.ಗಳವರೆಗೆ ಮಂಜೂರು ಮಾಡಲು ಅಧಿಕಾರ ನೀಡಿದ್ದ ಜೂನಿಯರ್ ಇಂಜಿನಿಯರ್ ಗಳಿಗೆ ಈ ಸಂಬಂಧ ನೀಡಿದ ಅಧಿಕಾರವನ್ನು ಹಿಂಪಡೆದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರಿಗೆ ನೀಡಲಾಗುವುದು. ವೈಯಕ್ತಿಕ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ 81,802 ಜನರಿಗೆ ಉದ್ಯೋಗ ಚೀಟಿ ವಿತರಿಸಲಾಗಿದೆ ಎಂದು ಸಿಇಒ ಮಾಹಿತಿ ನೀಡಿದರು. ಶಾಸಕರಾದ ಅಭಯಚಂದ್ರ ಜೈನ್ ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸದನದ ಗಮನ ಸೆಳೆದರು. ಸೌರ ಬೆಳಕು ಯೋಜನೆ ಬಗ್ಗೆ, ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ ಬಗ್ಗೆ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು.
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ,ಸಂಸದ ನಳಿನ್ ಕುಮಾರ್ ಕಟೀಲ್, ಸಿಇಒ ಹಾಗೂ ಸ್ಥಾಯಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.