Saturday, May 22, 2010

158 ಮೃತದೇಹ ಪತ್ತೆ;72 ಶವಗಳ ಗುರುತಿಸುವಿಕೆ

ಮಂಗಳೂರು,ಮೇ22:ಕೆಂಜಾರು ಗ್ರಾಮದ ದುರ್ಗಮ ಪ್ರದೇಶದಲ್ಲಿ ಇಂದು ಮುಂಜಾನೆ 6.05ಕ್ಕೆ ಸಂಭವಿಸಿದ ದುಬೈ-ಮಂಗಳೂರು ಐ ಎಕ್ಸ್ 812 ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ 158 ಶವಗಳನ್ನು ಹೊರತೆಗೆಯಲಾಗಿದ್ದು, 72 ಮೃತದೇಹಗಳನ್ನು ಗುರುತಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕಾರ್ಯಾ ಚರಣೆಯ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನೀಡಿದ ಅವರು,160 ಪ್ರಯಾಣಿಕರು, 6 ಜನ ಪೈಲಟ್ ಹಾಗೂ ಸಹ ಪೈಲಟ್ ಸೇರಿ ಸಿಬ್ಬಂದಿ ವರ್ಗದವರಿದ್ದು ಇವರಲ್ಲಿ 8 ಜನರು ಗಾಯಗೊಂಡಿದ್ದಾರೆ.ಗಾಯ ಗೊಂಡವರನ್ನು ಮಾಯನ್ ಕುಟ್ಟು, ಉಮ್ಮರ್ ಫಾರೂಕ್, ಡಾ. ಸಬ್ರಿನಾ, ಕೃಷ್ಣನ್, ಪ್ರದೀಪ್, ಜೋಯಲ್ ಸಂತೋಷ್, ಮಹಮ್ಮದ್ ಉಸ್ಮಾನ್, ಅಬ್ದುಲ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಪ್ರಯಾಣಿಕರಲ್ಲಿ 66 ಕೇರಳೀಯರಿದ್ದು, 38 ಮೃತದೇಹವನ್ನು ಗುರುತಿಸಲಾಗಿದೆ ಎಂದು ಡಿ ಜಿ ಪಿ ಹೇಳಿದರು.ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಹೋಮ್ ಗಾರ್ಡ್ಸ್, ಅಗ್ನಿ ಶಾಮಕ ಪಡೆ, ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿದ ಬಗೆಯನ್ನು ಶ್ಲಾಘಿಸಿದ ಅವರು, ಸ್ಥಳೀಯರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.ಕಾಸರಗೋಡು ಡಿಸಿ, ಎಸ್ ಪಿ ಹಾಗೂ ಸರ್ಕಾರವು ತಕ್ಷಣವೇ ಸ್ಥಳಕ್ಕೆ ಆಗಮಿಸಿ ರಾಜ್ಯದವ ರೊಂದಿಗೆ ಸಮನ್ವಯ ಸಾಧಿಸಿದ್ದು, ನಗರದಲ್ಲೇ ಅವರ ತಂಡ ಬೀಡು ಬಿಟ್ಟಿದ್ದು,ಶವ ಗುರುತ್ತಿಸುವಿಕೆ ಮತ್ತು ಮುಂದಿನ ಕಾರ್ಯದಲ್ಲಿ ತಮ್ಮ ಜನತೆಗೆ ಸಹಕರಿ ಸುತ್ತಿದ್ದಾರೆ.
ಮೃತ ದೇಹಗಳನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ 109, ಕೆ ಎಂಸಿಯಲ್ಲಿ 6, ಎ.ಜೆಯಲ್ಲಿ 13, ಫಾ. ಮುಲ್ಲರ್ಸ್ ನಲ್ಲಿ 9, ಎಸ್ ಸಿ ಎಸ್ ನಲ್ಲಿ 3, ಕೆ.ಎಸ್ ಹೆಗ್ಡೆಯಲ್ಲಿ 8, ಯೆನಪೋಯದಲ್ಲಿ 4, ಕುಲಾಸೊದಲ್ಲಿ 4, ಸಿಟಿ ಆಸ್ಪತ್ರೆಯಲ್ಲಿ 2 ಮೃತದೇಹಗಳನ್ನು ಇರಿಸಲಾಗಿದೆ. ಇವರಲ್ಲಿ ಕ್ರಮವಾಗಿ 40,4, 7,2,1,4, ಕುಲಾಸೋದಲ್ಲಿ 2 ಮೃತದೇಹಗಳನ್ನು ವಾರೀಸುದಾರರು ಕ್ಲೈಮ್ ಮಾಡಿಕೊಂಡಿದ್ದು, ಕಾನೂನಿನ್ವಯ ವಾರೀಸುದಾರರಿಗೆ ಮೃತ ದೇಹ ನೀಡಲು ಹಾಗೂ ಮಾಹಿತಿ ನೀಡಲು ಜಿಲ್ಲಾಡಳಿತ ಸಂಪೂರ್ಣ ಕ್ರಮಕೈಗೊಂಡಿದೆ.
ಅಗ್ನಿಶಾಮಕದಳದ ಡಿಜಿ ಜೀಜಾ ಹರಿಸಿಂಗ್ ಅವರು ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯ ವಿವರ ನೀಡಿದರು.ಪತ್ರಿಕಾ ಗೋಷ್ಠಿಯಲ್ಲಿ ರೀಜನಲ್ ಕಮಿಷನರ್ ಜಯಂತಿ, ಐಜಿ ಗೋಪಾಲ್ ಹೊಸೂರ್, ನೋಡಲ್ ಅಧಿಕಾರಿ ಯೋಗೀಂದ್ರ ತ್ರಿಪಾಠಿ, ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಪೋಲಿಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಸೇರಿದಂತೆ ಎಲ್ಲ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದು, ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಗೆ ಮುನ್ನ ಮೃತರ ಗೌರವಾರ್ಥ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಂಜೆ ಮುಖ್ಯಮಂತ್ರಿಗಳು ವೆನ್ ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ತೆರಳಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಅವರ ನೇತೃತ್ವದಲ್ಲಿ, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸತತವಾಗಿ ವೆನ್ಲಾಕ್ ನಲ್ಲಿ,ಮೃತಪಟ್ಟವರ ಸಂಬಂಧಿಗಳೊಂದಿಗೆ ಹಾಗೂ ನಗರದ ವಿವಿಧ ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸಿ ಜನರಿಗೆ ನೆರವಾಗುತ್ತಿದ್ದರು.
ರೈಲ್ವೇ ಸಚಿವ ಮುನಿಯಪ್ಪ ಸಂತಾಪ: ರೈಲ್ವೇ ಸಚಿವರಾದ ಮುನಿಯಪ್ಪ ಅವರು ದುರ್ಘಟನೆಯ ಬಗ್ಗೆ ಅತೀವ ಆಘಾತ ವ್ಯಕ್ಪಪಡಿಸಿದರಲ್ಲದೆ, ರೈಲ್ವೇ ಪೊಲೀಸರ ನೆರವು ಮತ್ತು ಕಾರ್ಯಕ್ಷಮತೆಯನ್ನು ಗುರುತಿಸಲಾಗಿದೆ ಎಂದರು.ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಮೃತ ಕುಟುಂಬಕ್ಕೆ ಸಹಾಯ ನೀಡುವ ಭರವಸೆಯನ್ನು ಅವರು ನೀಡಿದರು.