Monday, May 10, 2010

ನಿರ್ಭೀತಿಯಿಂದ ಮತ ಚಲಾಯಿಸಿ: ಜಿಲ್ಲಾಧಿಕಾರಿ

ಮಂಗಳೂರು,ಮೇ10:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 199 ಗ್ರಾಮಪಂಚಾಯತುಗಳ 1103 ಮತಗಟ್ಟೆಗಳಲ್ಲಿ ಮತದಾನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆಗಳನ್ನು ಮಾಡಿದೆ. ಮತಗಟ್ಟೆಗಳಲ್ಲಿ 4412ಸಿಬ್ಬಂದಿಗಳನ್ನು ನೇಮಿಸಲಾಗಿದ್ದು,ಅವರನ್ನು ಮತಗಟ್ಟೆಗೆ ಕಳುಹಿಸಿಕೊಡಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 252 ಸೂಕ್ಷ್ಮ ಮತ್ತು 176ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಮತದಾನದ ಸಂದರ್ಭದಲ್ಲಿ ಕಾನೂನು ಉಲ್ಲಂಘನೆ ದಾಖಲಿಸಲು ಮತದಾನ ಕೇಂದ್ರಗಳಲ್ಲಿ ವಿಡಿಯೋಗ್ರಾಫರ್ ಗಳನ್ನು ಬಳಸಿಕೊಂಡು ಮತದಾನ ಪ್ರಕ್ರಿಯೆಯನ್ನು ದಾಖಲಿಸಲಾಗುವುದು. ಮತದಾರರಲ್ಲದ ಮುಖಂಡರು,ಪಕ್ಷ ಕಾರ್ಯಕರ್ತರು ಮತ್ತು ಚುನಾವಣಾ ಪ್ರಚಾರಕರು ಬೇರೆ ಗ್ರಾಮಪಂಚಾಯತ್ ಗಳಲ್ಲಿ ತಿರುಗಾಡಬಾರದೆಂಬ ಸೂಚನೆ ರವಾನಿಸಲಾಗಿದೆ. ಮತದಾನ ಕೇಂದ್ರಗಳಿಗೆ ಸಿಬ್ಬಂದಿ ರವಾನೆಗೆ 175 ಬಸ್ಸು, 17 ಮಿನಿ ಬಸ್ಸು, 92 ವ್ಯಾನ್, 223 ಜೀಪುಗಳನ್ನು ಬಳಸಿಕೊಳ್ಳಲಾಗುತ್ತಿದೆ.
ರೂಟ್ ಅಧಿಕಾರಿಗಳು,ಸ್ಕ್ವಾಡ್,ಮೊಬೈಲ್ ತಂಡ ಹಾಗೂ ಸುಸ್ಸಜ್ಜಿತ ಪೊಲೀಸ್ ತಂಡ ಸೇರಿ ಸುಮಾರು 15 ಮತದಾನ ಕೇಂದ್ರಗಳಿಗೆ ತಲಾ ಒಂದರಂತೆ 75 ತಂಡಗಳನ್ನು ರಚಿಸಲಾಗಿದ್ದು,ಶಾಂತಿ ಹಾಗೂ ಮುಕ್ತ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತದಾರರನ್ನು ಮತಗಟ್ಟೆಗೆ ಸಾಗಿಸುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಮತಪೆಟ್ಟಿಗೆಗಳ ಸುರಕ್ಷತೆಗೆ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಜ್ಯಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ಚುನಾವಣಾ ವೀಕ್ಷಕರು ಜಿಲ್ಲೆಯಲ್ಲಿ ಮುಕ್ತವಾಗಿ ಸಂಚರಿಸಿ ಚುನಾವಣೆ ಪ್ರಕ್ರಿಯೆ ಪರಿಶೀಲಿಸಲಿದ್ದಾರೆ. ಮತದಾರರು ನಿರ್ಬೀತಿಯಿಂದ ಮುಕ್ತವಾಗಿ ಮತ ಚಲಾಯಿಸಬೇಕೆಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.