Monday, May 24, 2010

ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ರೈಲ್ವೇ ಸಚಿವ ಮುನಿಯಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

ಮಂಗಳೂರು,ಮೇ 24:ಬಜಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತದಲ್ಲಿ ಬಲಿಯಾದವರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ನೆರವು ನೀಡಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಪ್ರಧಾನ ಮಂತ್ರಿಯವರ ಸಲಹೆಯಂತೆ ಪರಿಹಾರ ಹಾಗೂ ಕಾರ್ಯಾಚರಣೆಯ ಬಗ್ಗೆ ವಿಶೇಷ ಸಹಕಾರ ನೀಡಲು ರೈಲ್ವೇ ಸಚಿವ ಮುನಿಯಪ್ಪ ಅವರು ಸ್ಥಳದಲ್ಲಿದ್ದು, ಅಧಿಕಾರಿಗಳ ಸಭೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಯಲ್ಲಿಂದು ನಡೆದ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಐಜಿ ಗೋಪಾಲ್ ಹೊಸೂರ್, ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ನಗರಪಾಲಿಕೆ ಕಮಿಷನರ್ ಡಾ.ವಿಜಯಪ್ರಕಾಶ್, ಸಿಇಒ ಶಿವಶಂಕರ್, ಏರ್ ಇಂಡಿಯಾದ ಅಧಿಕಾರಿ ಚೆಲ್ಲಂ ಪ್ರಸಾದ್, ಡಿ ಎಚ್ ಒ ಡಾ.ಜಗನ್ನಾಥ್ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.
ಅಪಘಾತದಲ್ಲಿ ಮಡಿದ ಕೊನೆಯ ಮೃತದೇಹ ವಿಲೇವಾರಿಯಾಗುವವರೆಗೆ ಸ್ಥಳದಲ್ಲಿದ್ದು ಉಸ್ತುವಾರಿ ವಹಿಸಿಕೊಳ್ಳುವುದಾಗಿ ಹೇಳಿದ ಸಚಿವರು,ಪರಿಹಾರ ವಿತರಣೆಯಲ್ಲಿ ಯಾವುದೇ ದೋಷ ಹಾಗೂ ಮೃತದೇಹ ಹಸ್ತಾಂತರಿಸುವಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ಸಲಹೆಮಾಡಿದರು. ದುರಂತಕ್ಕೊಳಗಾದ ವಿಮಾನದಲ್ಲಿ ಪ್ರಯಾಣಿಸದೆ ಇದ್ದ 9 ಪ್ರಯಾಣಿಕರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಏರ್ ಇಂಡಿಯಾದ ಅಧಿಕಾರಿ ಚೆಲ್ಲಂ ಪ್ರಸಾದ ಅವರಿಗೆ ಸೂಚಿಸಿದರಲ್ಲದೆ, ಯಾವುದೇ ಕಾರಣಕ್ಕೆ ಮೃತದೇಹಗಳ ಗುರುತಿಸುವಿಕೆ ಹಾಗೂ ಪರಿಹಾರ ವಿತರಣೆಯಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಲು ಹೇಳಿದರು.ಮೃತದೇಹ ಸಂರಕ್ಷಣೆ ಹಾಗೂ ಗುರುತಿಸುವಿಕೆ, ಆಂಬುಲೆನ್ಸ್ ಒದಗಿಸುವ ಬಗ್ಗೆ ಆರೋಗ್ಯ ಇಲಾಖೆ ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದು, ಈ ಸಂಬಂಧ ಆರೋಗ್ಯ ಸಚಿವ ಶ್ರೀರಾಮುಲು ಅವರು ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಮೃತದೇಹಗಳನ್ನು 20 ದಿನಗಳವರೆಗೆ ಸಂರಕ್ಷಿಸುವ ಹಾಗೂ ನಂತರವೂ ಗುರುತಿಸಲಾಗದ ಮೃತದೇಹಗಳನ್ನು ಪೊಲೀಸ್ ಇಲಾಖೆ ಅನುಮತಿಯೊಂದಿಗೆ ಶವ ಸಂಸ್ಕಾರ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಲಾಯಿತು. ಡಿ ಎನ್ ಎ ಪರೀಕ್ಷೆಗೆ ಸಂಬಂಧಿಸಿದಂತೆ ರಕ್ತದ ಸ್ಯಾಂಪಲ್ ಗಳನ್ನು ಹೈದರಾಬಾದ್ ಗೆ ಕಳುಹಿಸಲಾಗಿದ್ದು ಆದಷ್ಟು ಶೀಘ್ರದಲ್ಲಿ ವರದಿಯನ್ನು ನಿರೀಕ್ಷಿಸಲಾಗಿದೆ ಎಂದರು. ಪಾಸ್ ಪೋರ್ಟ್ ಮತ್ತು ವಿಳಾಸಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರ ಖಾತೆ ಜೊತೆ ವ್ಯವಹರಿಸುವಂತೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಡಿಯಾ ಸ್ಯಾಟ್ಸ್ ನ ಉಪಾಧ್ಯಕ್ಷರಾದ ಸೋಮಶೇಖರ್ ಅವರಿಗೆ ಸಚಿವರು ಸೂಚಿಸಿದರು. ದುರಂತದ ಸಂದರ್ಭದಲ್ಲಿ ಎಲ್ಲರೂ ಪ್ರಮುಖವಾಗಿ ಸ್ಥಳೀಯರು ತುರ್ತು ಸಂದರ್ಭವನ್ನು ನಿಭಾಯಿಸಿರುವ ರೀತಿಯನ್ನು ಶ್ಲಾಘಿಸಿದ ಸಚಿವರು, ಪರಿಹಾರ ಕಾರ್ಯಾಚರಣೆ ಮುಗಿಯುವವರೆಗೆ ಸ್ಥಳದಲ್ಲಿರುವುದಾಗಿ ಹೇಳಿದರು.ಸಭೆಯಲ್ಲಿ ಸ್ಥಳೀಯ ಶಾಸಕರಾದ ರಮಾನಾಥ ರೈ ಉಪಸ್ಥಿತರಿದ್ದರು.
ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಕೈಗೊಂಡ ಕ್ರಮಗಳ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಏರ್ ಇಂಡಿಯಾದ ಸಿ ಎಂ ಡಿ ಅರವಿಂದ್ ಜಾದವ್ ಅವರು, ಅಂತಾರಾಷ್ಟ್ರೀಯ ವಿಮಾನ ಪತನವಾದ್ದರಿಂದ ಪರಿಹಾರ ನೀಡಿಕೆಯಲ್ಲಿರುವ ಕಾನೂನು ತೊಡಕುಗಳನ್ನು ಹೇಳಿದರಲ್ಲದೆ ಪರಿಹಾರ ವಿತರಣೆಯಲ್ಲಿ ಸ್ವಲ್ಪ ವಿಳಂಬವಾದರೂ ಪರಿಹಾರ ವಿತರಣೆಯಲ್ಲಿ ಲೋಪವಾಗದಂತೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.ತಕ್ಷಣದ ಪರಿಹಾರವಾಗಿ 12 ವರ್ಷದಿಂದ ಮೇಲ್ಪಟ್ಟವರಿಗೆ 10 ಲಕ್ಷ, ಕೆಳಗಿನವರಿಗೆ 5 ಲಕ್ಷ, ಗಾಯಾಳುಗಳಿಗೆ 2 ಲಕ್ಷ ರೂ. ನೀಡುವುದಾಗಿ ಹೇಳಿದರು. ದುರಂತದಲ್ಲಿ ಮಡಿದವರ ಪರವಾಗಿ ಹಾಗು ಅವರಿಗೆ ಅನ್ಯಾಯವಾಗದಂತೆ ನೆರವು ವಿತರಿಸಲು ನಾನಾವತಿ ಅವರ ಸಲಹೆಯನ್ನು ಪಡೆದುಕೊಳ್ಳುವುದಾಗಿ ಹೇಳಿದರು. ಏರ್ ಇಂಡಿಯಾ ದುರಂತ ಸಂಭವಿಸಿದ ಸಂದರ್ಭದಿಂದ ಎಲ್ಲರ ಜೊತೆ ಸಮನ್ವಯ ಸಾಧಿಸಿ ದಾಖಲೆ ಅವಧಿಯಲ್ಲಿ ತುರ್ತು ಸಂದರ್ಭವನ್ನು ನಿಭಾಯಿಸಿರುವುದಾಗಿ ನುಡಿದರು.ದುರಂತದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು,150 ಮಂದಿಯ ಏಂಜಲ್ಸ್ ಆಫ್ ಏರ್ ಇಂಡಿಯ ತಂಡವನ್ನು ನೇಮಿಸಲಾಗಿದೆ.