Monday, May 24, 2010

ವಿಮಾನ ಅಪಘಾತ:ಗುರುತಿಸಲ್ಪಡದ ಮೃತದೇಹಗಳ ಡಿಎನ್ ಎ ಪರೀಕ್ಷೆ

ಮಂಗಳೂರು,ಮೇ.24:ಬಜಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಗುರುತಿಸಲಾಗದ ಸ್ಥಿತಿಯಲ್ಲಿರುವ 22 ಮೃತದೇಹಗಳ ಪತ್ತೆಗೆ ಡಿಎನ್ಎ ಪರೀಕ್ಷೆ ನಡೆಸಲು ಸ್ಯಾಂಪಲ್ ಗಳನ್ನು ಹೈದರಾಬಾದ್ ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಅವರಿಂದು ಪತ್ರಿಕಾ ಗೋಷ್ಠಿಯಲ್ಲಿ ಈ ಸಂಬಂಧ ಮಾಹಿತಿ ನೀಡಿ, ಮೃತ ಕುಟುಂಬಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದು, ಶೀಘ್ರವೇ ವಿಧಿ ವಿಜ್ಞಾನ ವರದಿ ತಯಾರಿಸಿ ಕಳುಹಿಸಿಕೊಡಲು ಸಂಬಂಧ ಪಟ್ಟವರನ್ನು ಕೋರಿರುವುದಾಗಿ ನುಡಿದರು. ದುರಂತದ ಬಗ್ಗೆ ಕಂಟ್ರೋಲ್ ರೂಮ್ ಗೆ ಮೊದಲು ಮಾಹಿತಿ ನೀಡಿದವರನ್ನು ಸ್ಮರಿಸಿದ ಅವರು ತಕ್ಷಣವೇ ಅವರನ್ನು ಸಂಪರ್ಕಿಸಿ ಸೂಕ್ತ ವ್ಯವಸ್ಥೆ ಕೈಗೊಂಡ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಮಾಹಿತಿದಾರರನ್ನು ಹಾಗೂ ಅತ್ಯುತ್ತಮವಾಗಿ ಈ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸಿದರು. ಡಿ ಎನ್ ಎ ಪರೀಕ್ಷೆ ವರದಿ ಕೈಸೇರಲು ಕನಿಷ್ಠ 8 ದಿನಗಳು ಬೇಕಾಗಿದೆ ಎಂದರು. ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಪೊಲೀಸ್ ಉಪ ಆಯುಕ್ತ ಆರ್. ರಮೇಶ್ ಉಪಸ್ಥಿತರಿದ್ದರು.