Friday, April 30, 2010

ಸಾಹಿತ್ಯದಿಂದ ಉತ್ತಮ ಬದುಕು: ಪ್ರೊ. ಸಾ.ಶಿ. ಮರುಳಯ್ಯ

ಮಂಗಳೂರು, ಏ.30: ಸಾಹಿತ್ಯ ನಮ್ಮ ಬದುಕು,ಸಂಸ್ಕೃತಿಯ ಪ್ರತಿಬಿಂಬ;ಪಂಚಲಲಿತಕಲೆಗಳಲ್ಲಿ ಸಾಹಿತ್ಯಕ್ಕೆ ಉನ್ನತ ಸ್ಥಾನವಿದೆ.ನಮ್ಮ ನಾಗರೀಕತೆಗೆ ಹೊಸ ಆಯಾಮ ನೀಡುವುದು ಸಾಹಿತ್ಯ ಎಂದು ಹಿರಿಯ ಸಾಹಿತಿ ಪ್ರೊ.ಸಾ.ಶಿ.ಮರುಳಯ್ಯ ಅವರು ಹೇಳಿದರು. ಅವರಿಂದು ಪುರಭವನದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ನಮ್ಮ ಮುಂದಿನ ಜನಾಂಗ ವಾದ ಮಕ್ಕಳಲ್ಲಿ ಸಾಹಿತ್ಯ ಪ್ರೀತಿಯನ್ನು ಬೆಳೆಸುವ ಅಗತ್ಯವನ್ನು ಪ್ರತಿ ಪಾದಿಸಿದ ಅವರು, ಮಕ್ಕಳ ಚೈತನ್ಯ ಬೆಳಗಲು ಅವರಲ್ಲಿ ಸೃಜನ ಶೀಲನತೆ ಹೊಮ್ಮಲು ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡಬೇಕೆಂದರು.ಮಕ್ಕಳ ಪ್ರತಿಭೆ ಪಚ್ಚೆಯಾಗದೆ ಜ್ಯೋತಿಯಾಗಲು ಹಿರಿಯರು ಮಾರ್ಗ ದರ್ಶಕರಾಗ ಬೇಕೆಂದರು. ನಮ್ಮ ಜನಪದಕ್ಕೆ ಅಪಾರ ಶಕ್ತಿಯಿದ್ದು, ಬದುಕಿಗೆ ನಿರಂತರ ದಾರಿ ದೀಪವಾಗಿದೆ ಎಂದ ಅವರು ತುಳು ಸಂಸ್ಕೃತಿಯ ವೈಭವವನ್ನು ವರ್ಣಿಸಿದರು.ಸಮ್ಮೇಳ ನಾಧ್ಯಕ್ಷರಾಗಿದ್ದ ಬೋಳ ಚಿತ್ತರಂಜನ್ ದಾಸ ಶೆಟ್ಟಿ ಅವರು, ಸಾಹಿತ್ಯವಿರುವುದು ಕೀರ್ತಿ ಪ್ರತಿಷ್ಠೆಗಲ್ಲ. ಅದಿರುವುದು ಸಮಾಜದ ಋಣ ತೀರಿಸಲು. ನಿರ್ಮಲ ಬದುಕನ್ನು ಬದುಕಲು ಕಲಿಸುವುದು ಸಾಹಿತ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಸ್ವತಂತ್ರ ಮತ್ತು ಕೃತಿಕಾರ ನಿಂದಲೇ ಹುಟ್ಟು ಪಡೆದ ಪಾತ್ರಗಳು ಕಥೆ,ಕಾದಂಬರಿ ರೂಪದಲ್ಲಿ ಓದುಗನನ್ನು ಮಾತಾಡಿಸಿದರೆ ಅವರಿಗೆ ಕೃತಿಕಾರರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.ಬರಹಗಾರರಲ್ಲಿ ಓದುಗರ ಅನುಭವ ನಮಗಿಂತ ಹಿರಿದು ಎಂಬ ಕಲ್ಪನೆ ಇರಬೇಕು ಎಂದರು. ಹರಿಕೃಷ್ಣ ಪುನರೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೈಸ್ ಆಡ್ಮಿರಲ್ ಬೋಳ ರಾಧಾಕೃಷ್ಣ ರಾವ್, ನಿಟ್ಟೆ ವಿವಿ ಕುಲಪತಿ ಡಾ.ಎಂ. ಶಾಂತರಾಮ ಶೆಟ್ಟಿ, ಪ್ರಭಾಕರ ನೀರಮಾರ್ಗ ಸೇರಿದಂತೆ, ಮೇಯರ್ ರಜನಿ ದುಗ್ಗಣ್ಣ ನೇತೃತ್ವದಲ್ಲಿ ಪಾಲಿಕೆಯ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿದರು. ವಾದ್ಯ ಪರಿಕರಗಳ ಪ್ರದರ್ಶನ ಉದ್ಘಾಟನೆಯನ್ನು ವಿಪಕ್ಷ ಸಚೇತಕ ಅಭಯಚಂದ್ರ ಜೈನ್ ನೆರವೇರಿಸಿದರು. ಎಂ. ಶೇಖರ ಪೂಜಾರಿ, ಶಾಸಕರಾದ ಎನ್. ಯೋಗೀಶ್ ಭಟ್, ಯು ಟಿ ಖಾದರ್ ಉಪಸ್ಥಿತರಿದ್ದರು.

ತಾಲೂಕು ಸಾಹಿತ್ಯ ಸಮ್ಮೇಳನ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿಗಳಿಂದ ಚಾಲನೆ

ಮಂಗಳೂರು, ಏಪ್ರಿಲ್ 30: ಒಂದು ದಿನದ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಸಮ್ಮೇಳನಾಧ್ಯಕ್ಷ ಬೋಳ ಚಿತ್ತರಂಜನ್ ದಾಸ್ ಶೆಟ್ಟಿ ಅವರಿಗೆ ಪೇಟ ತೊಡಿಸಿ ಹಾರಹಾಕುವುದರ ಮುಖಾಂತರ ಚಾಲನೆ ನೀಡಿದರು.ಸಾಂಪ್ರಾ ದಾಯಿಕವಾಗಿ ನಿಗದಿತ ಸಮಯಕ್ಕೆ ಆರಂಭಗೊಂಡ ಕಾರ್ಯ ಕ್ರಮದಲ್ಲಿ ಸಮ್ಮೇಳ ನಾಧ್ಯಕ್ಷರ ಪತ್ನಿ ಕುಶಲ ಅವರೊಂದಿಗೆ ತೆರೆದ ಅಲಂಕರಿತ ವಾಹನದಲ್ಲಿ ಮೆರವಣಿಗೆಯಲ್ಲಿ ಪುರಭವನಕ್ಕೆ ಕರೆತರಲಾಯಿತು. ಮೇಯರ್ ರಜನಿದುಗ್ಗಣ್ಣ, ಉಪಮೇಯರ್ ರಾಜೇಂದ್ರ, ಶಾಸಕ ಯು ಟಿ ಖಾದರ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸೇರಿದಂತೆ ಹಲವು ಸಾಹಿತ್ಯಾಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪುರಭವನದ ಎದುರಿನಲ್ಲಿ ತುಳುನಾಡ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಆವರಣದಲ್ಲಿ ಮೇಯರ್ ರಜನಿ ದುಗ್ಗಣ್ಣ ಅವರು ರಾಷ್ಟ್ರ ಧ್ವಜಾರೋಹಣ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಅವರು ಕನ್ನಡ ಧ್ವಜಾರೋಹಣ ಮಾಡಿದರು.

ನಗರ ಪೊಲೀಸ್ ಆಯುಕ್ತರಾಗಿ ಸೀಮಂತ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

ಮಂಗಳೂರು, ಎಪ್ರಿಲ್ 30: ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ 1996ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಪೋಲಿಸ್ ಕೇಂದ್ರ ಕಚೇರಿಯಲ್ಲಿ ಪ್ರಭಾರ ಆಯುಕ್ತರಾಗಿದ್ದ ಪಶ್ಚಿಮ ವಲಯ ಪೋಲಿಸ್ ಮಹಾ ನಿರೀಕ್ಷಕರಾದ ಗೋಪಾಲ್ ಬಿ. ಹೊಸೂರು ಅವರಿಂದ ಸೀಮಂತ್ ಕುಮಾರ್ ಸಿಂಗ್ ಅವರು ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಿಂಗ್ ಅವರು ಕಮೀಶನರೇಟ್ ವ್ಯವಸ್ಥೆಯಡಿ ಜನರ ಬೇಡಿಕೆಗಳಿಗೆ ಸ್ಪಂದಿಸಿ ಹೊಸ ಆವಿಷ್ಕಾರಗಳನ್ನು ಜಾರಿಗೆ ತರುವುದಾಗಿ ನುಡಿದರು. ಕಮಿಷನರೇಟ್ ವ್ಯವಸ್ಥೆ ಜನಪರವಾದ ಉದ್ದೇಶವನ್ನಿರಿಸಿ ಆರಂಭಿಸಲಾಗಿದ್ದು, ವ್ಯವಸ್ಥೆಯನ್ನು ಸದೃಢಗೊಳಿಸುವುದಾಗಿ ಹೇಳಿದರು. 2000-2004ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವದ ಹಿನ್ನಲೆ ಮುಂದಿನ ದಿನಗಳಲ್ಲಿ ವ್ಯವಸ್ಥೆಯನ್ನು ಉತ್ತಮ ಪಡಿಸುವಲ್ಲಿ ನೆರವಾಗಬಹುದು ಎಂದರು. ಮಂಗಳೂರು ಪೋಲಿಸ್ ಕಮೀಶನರೇಟ್ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರಲು ಬೇಕಾದ ಎಲ್ಲಾ ಪ್ರಕ್ರಿಯೆಗಳು ಇಂದಿನಿಂದ ಚುರುಕುಗೊಳ್ಳಲಿದೆ.ಇದೇ ಸಂದರ್ಭದಲ್ಲಿ ತನ್ನ ಕಮೀಶನರೇಟ್ ವ್ಯಾಪ್ತಿಯ ಹಿರಿಯ ಮತ್ತು ಕಿರಿಯ ಪೋಲಿಸ್ ಅಧಿಕಾರಿಗಳ ಸಭೆ ನಡೆಸಿ ವಿಚಾರ ವಿನಿಮಯ ಮಾಡಿಕೊಂಡರು.ಉಪಪೊಲೀಸ್ಆಯುಕ್ತ ಆರ್ ರಮೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Thursday, April 29, 2010

ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ಮಂಗಳೂರು, ಏ.29: ನಗರದ ಪುರಭವನದಲ್ಲಿ ಏ.30 ರಂದು ನಡೆಯಲಿರುವ ಒಂದು ದಿನದ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆಗಳು ತಾಲೂಕು ಅಧ್ಯಕ್ಷ ಸರ್ವೋತ್ತಮ ಅಂಚನ್ ಅವರ ನೇತೃತ್ವದಲ್ಲಿ ನಡೆಯುತ್ತಿವೆ. ಪುರಭವನದ ಪರಿಸರಕ್ಕೆ ಗ್ರಾಮೀಣ ಕಳೆ ಬರುತ್ತಿದೆ. ವೇದಿಕೆಯಲ್ಲಿ ಮಾವಿನ ಕಾಯಿಯಿಂದ ತುಂಬಿದ ಮಾವು, ಬೈಹುಲ್ಲಿನ ವೇದಿಕೆ, ಪುರಭವನದ ಹೊರಗಡೆ ಎತ್ತಿನಗಾಡಿ, ಬೈಹುಲ್ಲಿನ ಮನೆ ಸೇರಿದಂತೆ ಸಂಪೂರ್ಣ ಗ್ರಾಮದ ಸೌಂದರ್ಯವನ್ನು ಮುಲ್ಕಿಯ ಸುವರ್ಣ ಆರ್ಟ್ಸ್ ನವರು ಪುರಭವನದಲ್ಲಿ ನಿರ್ಮಾಣ ಮಾಡಿದ್ದಾರೆ.
ಹಿರಿಯ ಸಾಹಿತಿ ಬೋಳ ಚಿತ್ತರಂಜನ್ ದಾಸ್ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಪ್ರೊ. ಸಾ.ಶಿ. ಮರುಳಯ್ಯ ಅವರು ಸಮ್ಮೇಳನ ಉದ್ಘಾಟಿಸಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್, ಶಾಸಕ ಯೋಗಿಶ್ ಭಟ್,ಅಭಯಚಂದ್ರ ಜೈನ್,ಯು.ಟಿ.ಖಾದರ್ ,ಸಂಸದ ನಳಿನ್ ಕುಮಾರ್ ಕಟೀಲ್,ಜಿಲ್ಲಾಧಿಕಾರಿ ಪೊನ್ನುರಾಜ್ ಸೇರಿದಂತೆ ಅನೇಕ ಗಣ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.ಇದೇ ಸಂದರ್ಭದಲ್ಲಿ ವಿವಿಧ ಗೋಷ್ಟಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು 14 ಮಂದಿ ಸಾಧಕರ ಸನ್ಮಾನ ಮತ್ತು ಗೌರವ ಅರ್ಪಣೆ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಿಂದ ಬೆ.8.30ಕ್ಕೆ ಸಾಹಿತ್ಯ ಮೆರವಣಿಗೆಯನ್ನು ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಉದ್ಘಾಟಿಸಲಿರುವರು.

Wednesday, April 28, 2010

ಕದ್ರಿ ಬಾಲಭವನದಲ್ಲಿ ಮಕ್ಕಳ ಕಲರವ

ಮಂಗಳೂರು,ಏ.28: ಕದ್ರಿ ಉದ್ಯಾನವನದ ಪಕ್ಕದಲ್ಲಿ ಇರುವ ಕದ್ರಿ ಬಾಲಭವನದಲ್ಲಿ ಇದೀಗ ಮಕ್ಕಳ ಕಲರವ. ಸ್ವಚ್ಛಂದವಾಗಿ ಆಡಿ,ಹಾಡಿ,ಕುಣಿದುಕುಪ್ಪಳಿಸಿ ಬೇಸಿಗೆ ಶಿಬಿರದ ಆನಂದವನ್ನು ಮಕ್ಕಳು ಸವಿಯುತ್ತಿದ್ದಾರೆ. ರಾಜ್ಯ ಬಾಲಭವನದ ಮಾದರಿಯಲ್ಲಿ ಕದ್ರಿಯಲ್ಲಿರುವ ಬಾಲಭವನವನ್ನು ಮಕ್ಕಳ ಚಟುವಟಿಕೆ ತಾಣವನ್ನಾಗಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರ ನೇತೃತ್ವದಲ್ಲಿ, ಮಹಾನಗರಪಾಲಿಕೆ ಆಯುಕ್ತ ವಿಜಯಪ್ರಕಾಶ್ ಅವರ ಸಂಪೂರ್ಣ ಸಹಕಾರದೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶಕುಂತಲಾ ಅವರು ಮಕ್ಕಳ ಶಿಬಿರವನ್ನು ಅರ್ಥಪೂರ್ಣವಾಗಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಈ ಸರಕಾರಿ ಪ್ರಾಯೋಜಿತ ಮಕ್ಕಳ ಬೇಸಿಗೆ ಶಿಬಿರಕ್ಕೆ ಏಪ್ರಿಲ್ 14 ರಂದು ಸಿಇಒ ಶಿವಶಂಕರ್ ಅವರು ಚಾಲನೆ ನೀಡಿದರು. 75 ಮಕ್ಕಳು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಯಾವುದೇ ಕಟ್ಟು ಪಾಡುಗಳಿಲ್ಲದೆ ವಿವಿಧ ಗುಂಪುಗಳಲ್ಲಿ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿದ್ದು, ಈ ಗೊಂಬೆ ನಾನೇ ಮಾಡಿದ್ದು, ಈ ಚಿತ್ರ ನಾನೇ ಬಿಡಿಸಿದ್ದು ಎಂದು ಹೇಳಿ ಮುಕ್ತವಾಗಿ ಪಕ್ಕದಲ್ಲೇ ಇರುವ ಉಯ್ಯಾಲೆಯಲ್ಲಿ ಆಟವಾಡುತ್ತಾರೆ; ಮತ್ತೆ ಸ್ವ ಆಸಕ್ತಿಯಿಂದ ತಮ್ಮ ಮಾರ್ಗದರ್ಶಕರ ಬಳಿ ತೆರಳಿ ಸೃಜನಾತ್ಮಕ ಕ್ರಿಯೆಯಲ್ಲಿ ತೊಡಗುತ್ತಾರೆ. ಯಕ್ಷಗಾನ ಕಲಿಸಲು, ನಾಟಕ ಕಲಿಸಲು, ಕರಕುಶಲ ಕಲೆ,ಸುಗಮಸಂಗೀತ, ಜಾನಪದ ಸಂಗೀತ,ಕುಣಿತವನ್ನು ಬೇಸಿಗೆ ಶಿಬಿರದಲ್ಲಿ ಕಲಿಸಲಾಗುತ್ತದೆ. 8 ರಿಂದ 14 ಮತ್ತು 14ರಿಂದ 18 ವರ್ಷದ ವಯೋಮಿತಿಯ ಎರಡು ಗುಂಪುಗಳನ್ನು ಮಾಡಲಾಗಿದ್ದು ಇಲ್ಲಿ ಕಲಿತದ್ದನ್ನು ಮೇ 14 ರಂದು ಪುರಭವನದಲ್ಲಿ ಮಕ್ಕಳು ಸಾರ್ವಜನಿಕವಾಗಿ ಪ್ರದರ್ಶಿಸಲಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಮಕ್ಕಳಿಗೆ ತಾಜಾ ಹಣ್ಣಿನ ರಸ ನೀಡಲಾಗುತ್ತಿದ್ದು, ಮಧ್ಯಾಹ್ನದ ಊಟ ಮಕ್ಕಳೇ ಮನೆಯಿಂದ ತರುತ್ತಾರೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಆರಿಸಲಾಗಿದ್ದು, ಪ್ರಾಕಾರಗಳಲ್ಲಿ ಉತ್ತಮ ಜ್ಞಾನವುಳ್ಳವರು ಮಕ್ಕಳಿಗೆ ಶಿಬಿರದಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಾಫ್ಟ್ ಕಲಿಸಲು ಅನುಭವಿ ಟೀಚರ್ ಪೂರ್ಣಿಮಾ, ಡ್ರಾಯಿಂಗ್ ಗೆ ವೀಣಾ ಮೇಡಂ, ಯಕ್ಷಗಾನಕ್ಕೆ ಹವ್ಯಾಸಿ ಕಲಾವಿದರು ಹಾಗೂ ಬೋಧಕರಾಗಿರುವ ಡಾ. ದಿನಕರ ಪಚ್ಚನಾಡಿ, ನಾಟಕ ಕಲಿಸಲು ಕೆನರಾ ಉರ್ವ ಹೈಸ್ಕೂಲಿನ ಶಿಕ್ಷಕ ರವೀಂದ್ರನಾಥ ಶೆಟ್ಟಿಯವರಿದ್ದಾರೆ. ಮಕ್ಕಳ ಬೇಸಿಗೆ ಶಿಬಿರದ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ಮಾರ್ಗದರ್ಶನಕ್ಕೆ ಬಾಲಭವನದ ಸುರೇಖಾ ಅವರು ಹೆಚ್ಚಿನ ತರಬೇತಿಗೆ ನವದೆಹಲಿಯ ಜವಾಹರ ಬಾಲಭವನಕ್ಕೆ ತೆರಳಿದ್ದಾರೆ. ಬಾಲಭವನದಲ್ಲಿ ಮಕ್ಕಳ ಚಟುವಟಿಕೆಗಳಿಗೆ ಸಂಯೋಜಕರಾಗಿ ಚಂದ್ರಶೇಖರ್ ಶೆಟ್ಟಿಯವರು ಕರ್ತವ್ಯನಿರತರಾಗಿದ್ದಾರೆ. ಮಕ್ಕಳ ಕಲರವ ಬೇಸಿಗೆ ರಜಾ ದಿನಗಳಿಗೆ ಮಾತ್ರ ಸೀಮಿತ ಗೊಳಿಸದೆ ವರ್ಷ ಪೂರ್ತಿ ಪ್ರತೀ ತಿಂಗಳ ವಾರಾಂತ್ಯದಲ್ಲಿ ಶಿಬಿರ ನಡೆಸಲು; ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆ ರೂಪಿಸಿದೆ.ಜಿಲ್ಲಾ ಪಂಚಾಯತ್ ಸಿಇಓ ಅವರ ಅಧ್ಯಕ್ಷತೆಯಲ್ಲಿ ಬಾಲಭವನ ಸಮಿತಿ ಇದೆ. ಮಕ್ಕಳ ಹುಟ್ಟುಹಬ್ಬ ನಡೆಸಲು ರೂ.1,000 ಬಾಡಿಗೆಗೆ ಇಲ್ಲಿನ ಭವನವನ್ನು ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಮಕ್ಕಳ ರೈಲಿನಲ್ಲಿ ದೊರೆಯುವ ಲಾಭವನ್ನು ಬಾಲಭವನ ಅಭಿವೃದ್ಧಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ. ಬಾಲಭವನದ ಪ್ರತಿಭೆಗಳನ್ನು ತಾಲೂಕು ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಪರಿಚಯಿಸಲು ಯೋಜನೆ ರೂಪಿಸಲಾಗಿದೆ. ಬೇಸಿಗೆ ಶಿಬಿರಕ್ಕೆ ರೂ.200 ಫೀ ನಿಗದಿ ಮಾಡಿದ್ದು, ಇದನ್ನು ಪಾವತಿಸಲು ಸಾಧ್ಯವಿಲ್ಲದ ಪ್ರತಿಭೆಗಳಿಗೆ ಉಚಿತ ಸೇರ್ಪಡೆ ಮಾಡುವ ಭರವಸೆಯನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕರು ನೀಡಿದ್ದಾರೆ.
ರಾಜ್ಯ ಬಾಲಭವನದ ಅಧ್ಯಕ್ಷರಾದ ಅಮೃತ ಕುಮಾರ್ ಅವರು ಕದ್ರಿಯಲ್ಲಿರುವ ಬಾಲಭವನದ ಅಭಿವೃದ್ಧಿಗೆ ಸಂಪೂರ್ಣ ನೆರವು ನೀಡುವ ಭರವಸೆ ನೀಡಿದ್ದು, ಈಗಾಗಲೇ ಎರಡು ಲಕ್ಷ ರೂ.ಅನುದಾನ ನೀಡಿದ್ದಾರೆ. ಒಂದೆರಡು ಬಾರಿ ಇಲ್ಲಿ ಭೇಟಿ ನೀಡಿ ಸ್ಥಳ ಪರೀಕ್ಷೆ ನಡೆಸಿದ್ದಾರೆ.ಅನುದಾನದಲ್ಲಿ 95,000 ಬಿಡುಗಡೆ ಮಾಡಿ ಕೆಲಸದ ಪ್ರಗತಿಯನ್ನು ವರದಿ ಮಾಡಿದರೆ, ಉಳಿದ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಸಿಬ್ಬಂದಿ ಕೊರತೆ ಇರುವುದರಿಂದ ಬಾಲಭವನ ನಿರ್ವಹಣೆ ಸ್ವಲ್ಪ ಕಷ್ಟವಾಗಿದ್ದರೂ ಬಾಲಭವನದ ಸಮಗ್ರ ಅಭಿವೃದ್ಧಿಗೆ ಸಿಇಒ ಅವರು ಟೊಂಕ ಕಟ್ಟಿದ್ದಾರೆ. ಬಾಲಭವನದಲ್ಲಿ 3000 ಮಕ್ಕಳ ಪುಸ್ತಕಗಳಿದ್ದು, ಪ್ರತಿದಿನ ಇಲ್ಲಿ ಮಕ್ಕಳಿಗೆ ಓದಲು ಅವಕಾಶ ನೀಡಲು ರೀಡಿಂಗ್ ರೂಮ್ ಆರಂಭಿಸಲು ಚಿಂತನೆ ನಡೆಸಲಾಗಿದೆ.ಧಾರವಾಡದಲ್ಲಿ ಮಕ್ಕಳ ಅಕಾಡೆಮಿಯಿದ್ದು, ಪ್ರಸಕ್ತ ಸಾಲಿನಲ್ಲಿ 2 ಯಕ್ಷಗಾನದಲ್ಲಿ ಪಾಲು ಪಡೆಯಲು ಪರಿಣತ ಮಕ್ಕಳನ್ನು ಅಲ್ಲಿಗೆ ಕಳುಹಿಸಲಾಗಿದೆ. ಕಳೆದ ಸೆಪ್ಟಂಬರ್ ನಲ್ಲಷ್ಟೇ ಇಲಾಖೆಯ ಕೈಗೆ ಹಿಂದಿರುಗಿರುವ ಬಾಲಭವನ ಪೂರ್ಣ ಪ್ರಮಾಣದ ಬಾಲಭವನವಾಗಿ ನಿಧಾನಕ್ಕೆ ರೂಫುಗೊಳ್ಳುತ್ತಿದೆ. ಮಕ್ಕಳ ಖುಷಿ,ಕೇಕೇ ಇಲ್ಲಿನ ಪರಿಸರದಲ್ಲಿ ಕೇಳುತ್ತಿದೆ.

Tuesday, April 27, 2010

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಬೇಡಿ:ಜಿಲ್ಲಾಡಳಿತ ಎಚ್ಚರಿಕೆ

ಮಂಗಳೂರು,ಏ.27: ರಾಜ್ಯ ಚುನಾವಣಾ ಆಯೋಗ ಗ್ರಾಮಪಂಚಾಯಿತಿ ಸಾರ್ವತ್ರಿಕ ಚುನಾವಣೆ 2010ನ್ನು ನಡೆಸಲು ವೇಳಾಪಟ್ಟಿ ಪ್ರಕಟಿಸಿದ್ದು 15.4.10 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ.ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಕೆಲ ದಿನ ಪತ್ರಿಕೆಗಳು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ನಿರ್ದಿಷ್ಟ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳೆಂದು ಪ್ರಕಟಿಸಿರುವುದು ಜಿಲ್ಲಾಡಳಿತಕ್ದ ಗಮನಕ್ಕೆ ಬಂದಿದ್ದು ಇದು ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆಯಾಗಿದೆ. ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993 ಕಲಂ 7(2)ರ ಅನ್ವಯ ಗ್ರಾಮಪಂಚಾಯಿತಿ ಚುನಾವಣೆಗಳು ಪಕ್ಷ ರಹಿತವಾಗಿ ನಡೆಯಲಿದೆ. ಹೀಗಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕೆಲವು ಪಕ್ಷದ ಮುಖಂಡರು, ನಾಯಕರು ಕೆಲವು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ತಮ್ಮ ಪಕ್ಷದ ಅಭ್ಯರ್ಥಿಗಳೆಂದು ತಿಳಿಸುವ ಹೇಳಿಕೆಗಳನ್ನು ನೀಡುತ್ತಿರುವುದು ಕೂಡ ತಮ್ಮ ಗಮನಕ್ಕೆ ಬಂದಿದ್ದು, ಮಾಧ್ಯಮಗಳಾಗಲಿ, ಪಕ್ಷದ ಮುಖಂಡರುಗಳಾಗಲಿ ಇಂತಹ ಹೇಳಿಕೆಗಳನ್ನು ಪ್ರಕಟಿಸುವುದು ಅಥವಾ ನೀಡುವುದು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Monday, April 26, 2010

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಅಧಿಕೃತ ಆಹ್ವಾನ

ಮಂಗಳೂರು ಏಪ್ರಿಲ್ 26:ಏಪ್ರಿಲ್ 30 ರಂದು ಶುಕ್ರವಾರ ನಗರದ ಪುರಭವನದಲ್ಲಿ ಜರುಗಲಿರುವ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಬೋಲ ಚಿತ್ತರಂಜನ್ ದಾಸ್ ಶೆಟ್ಟಿ ಅವರನ್ನು ಇಂದು ನಗರದ ಮಹಾಪೌರರಾದ ರಜನಿ ದುಗ್ಗಣ್ಣ ಅವರು ವೀಳ್ಯ ಕೊಡುವ ಮೂಲಕ ಸಾಂಪ್ರಾದಾಯಿಕವಾಗಿ ಆಮಂತ್ರಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು,ಕಸಾಪ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಉಪ ಮೇಯರ್ ರಾಜೇಂದ್ರ ,ಪಾಲಿಕೆ ಸದಸ್ಯರುಗಳಾದ ದಿವಾಕರ್,ಸುಧೀರ್ ಶೆಟ್ಟಿ ಕಣ್ಣೂರು,ಶಾಂತಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸರ್ವೋತ್ತಮ ಅಂಚನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಭುವನಾಭಿರಾಮ ಉಡುಪ ಅವರು ವಂದಿಸಿದರು.ಗಣೇಶ್ ಅಮೀನ್ ಸಂಕಮಾರ್ ಕಾರ್ಯಕ್ರಮ ನಿರೂಪಿಸಿದರು.

ವಿಶ್ವವಿದ್ಯಾನಿಲಯ ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ

ಮಂಗಳೂರು ಏಪ್ರಿಲ್ 26:ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹೆಚ್ಚಿನ ಸ್ನಾತಕೋತ್ತರ ಮತ್ತು ವೃತ್ತಿಪೂರಕ ಕೋರ್ಸುಗಳನ್ನು ಪ್ರಾರಂಭಿಸಬೇಕೆಂದು ಯುಜಿಸಿ ಯ ಅಂಗಸಂಸ್ಥೆಯಾದ ನ್ಯಾಕ್ ಸಲಹೆ ಮಾಡಿದೆ.
ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ಪರಿಶೀಲನಾ ಸಮಿತಿ ಕಾಲೇಜಿನ ಎಲ್ಲ ವಿಭಾಗಗಳನ್ನು ಹಾಗೂ ಚಟುವಟಿಕೆಗಳನ್ನು ಪರಿಶೀಲಿಸಿತಲ್ಲದೆ, ವಿಶ್ವವಿದ್ಯಾನಿಲಯದ ಕುಲಪತಿಗಳು, ಕುಲಸಚಿವರು ಹಾಗೂ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು. ಕಾಲೇಜಿನ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಮತ್ತು ಹೆತ್ತವರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿತು. ವಿದ್ಯಾರ್ಥಿಗಳ ಶಿಸ್ತುಬದ್ಧ ನಡವಳಿಕೆ ಹೆತ್ತವರ ಮತ್ತು ಹಳೆ ವಿದ್ಯಾರ್ಥಿಗಳ ಸಹಭಾಗಿತ್ವವನ್ನು ಪ್ರಶಂಸಿಸಿತು. ಸಮಿತಿಯಲ್ಲಿ ಜೈಪುರ ವಿವಿಯ ಪ್ರಾಧ್ಯಾಪಕ ಡಾ ಸುಧೀರ್ ಮತ್ತು ಸದಸ್ಯರಾದ ಮಧುರೈ ಕಾಮರಾಜ ವಿವಿಯ ಪ್ರಾಧ್ಯಾಪಕ ಡಾ.ಮಾರಿ ಮುತ್ತು ಅವರು ಕಾಲೇಜಿನ ಕಾರ್ಯವೈಖರಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

Saturday, April 24, 2010

ನೂತನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ

ಮಂಗಳೂರು,ಏಪ್ರಿಲ್ 24:ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಹಾಗೂ ಇಲಾಖಾ ಸಮಸ್ಯೆಗಳಿದ್ದರೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಮೂಲಕ ಅಥವಾ ನೇರವಾಗಿ ತಮ್ಮನ್ನು ಸಂಪರ್ಕಿಸ ಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿಗಳಾದ ಬಿ. ಎಸ್.ರಾಮ ಪ್ರಸಾದ್ ಅವರು ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖಾ ಧಿಕಾರಿಗಳ ಸಭೆ ನಡೆಸಿ ಜಿಲ್ಲಾ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ದರಲ್ಲದೆ, ಮುಂದಿನ ಭೇಟಿ ಸಂದರ್ಭದಲ್ಲಿ ಅಭಿವೃದ್ಧಿ ಕಾಮ ಗಾರಿಗಳನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದರು.ಅಡಿಷನಲ್ ಎಸ್ ಪಿ ರಮೇಶ್ ಕುಮಾರ್ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಯಾವುದೇ ಸಮಸ್ಯೆಯಿಲ್ಲ; ಮುಂಬರುವ ಗ್ರಾಮಪಂಚಾಯಿತಿ ಚುನಾವಣೆಗಳಿಗೆ ಸೂಕ್ತ ಸಿದ್ಧತೆಗಳಾಗಿದ್ದು, ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಗಳಲ್ಲಿ 12 ಗ್ರಾಮಪಂಚಾಯಿತಿಗಳನ್ನು ನಕ್ಸಲ್ ಪೀಡಿತ ಪ್ರದೇಶ ಎಂದು ಗುರುತಿಸಲಾಗಿದ್ದು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂದರು.ಜಂಟಿ ಕೃಷಿ ನಿರ್ದೇಶಕರಿಂದ ಕೃಷಿ ಇಲಾಖೆ ರೈತರಿಗೆ ಬಿತ್ತನೆ ಬೀಜ ಪೂರೈಕೆ ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಶಿವಶಂಕರ್ ಅವರು ಮಾಹಿತಿ ನೀಡಿ ಲಿಂಕ್ ಡಾಕ್ಯುಮೆಂಟ್ ಮುಖಾಂತರ 111ಕೋಟಿ ರೂ.ಗಳು ಅಭಿವೃದ್ಧಿ ಕಾಮಗಾರಿಗೆ ನಿಗದಿಯಾಗಿದ್ದು, 118 ಕೋಟಿ ಜಿಲ್ಲೆಗೆ ದೊರಕಿದೆ. ಇದರಲ್ಲಿ 105.75 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಂಡಿದ್ದು, ಉಳಿದ ಹಣದಿಂದ ವೇತನ ಪಾವತಿಸಲಾಗಿದೆ ಎಂದರು. ಮಹಾನಗರಪಾಲಿಕೆ ಅಭಿವೃದ್ಧಿ ಕಾಮಗಾರಿಗಳ ಸಮಗ್ರ ಚಿತ್ರಣವನ್ನು ಪಾಲಿಕೆ ಆಯುಕ್ತರಾದ ಕೆ.ಎನ್.ವಿಜಯಪ್ರಕಾಶ್ ಅವರು ನೀಡಿ,ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ; ಕೇವಲ 3 ವಾರ್ಡ್ ಗಳಲ್ಲಿ ವಿವಿಧ ಕಾರಣಗಳಿಂದ ಸಮಸ್ಯೆಯಾಗಿದ್ದು, ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು ಎಂದರು. ಮಹಾನಗರಪಾಲಿಕೆಗೆ ನೀಡಿದ 100 ಕೋಟಿಯಲ್ಲಿ 65 ಕೋಟಿ ರೂ.ಗಳು ಬಿಡುಗಡೆಯಾಗಿದ್ದು, 60ಕೋಟಿ 43 ಲಕ್ಷದ ಕಾಮಗಾರಿಗಳು ಸಂಪೂರ್ಣಗೊಂಡಿದೆ ಒಟ್ಟು 251 ಕಾಮಗಾರಿಗಳಲ್ಲಿ 96 ಕಾಮಗಾರಿ ಮುಗಿದಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು. ಸ್ಲಮ್ ಸಮೀಕ್ಷೆ ಮುಗಿಸಿದ ಪ್ರಥಮ ಮಹಾನಗರಪಾಲಿಕೆ ಮಂಗಳೂರಾಗಿದ್ದು, ನಗರದಲ್ಲಿ 21 ಸ್ಲಮ್ ಪ್ರದೇಶಗಳೆಂದು ಗುರುತಿಸಲಾಗಿದೆ. ಇದರಲ್ಲಿ 9 ಅಧಿಕೃತ ಸ್ಲಮ್ ಏರಿಯಾವಾಗಿದ್ದು, 1,776 ಮನೆಗಳಿದ್ದು, 8,880 ಜನಸಂಖ್ಯೆಯಿದೆ. ಮಂಗಳೂರು ವನ್ ಯೋಜನೆಗೆ ನಗರಪಾಲಿಕೆಯಿಂದಾಗಬೇಕಿದ್ದ ಕೆಲಸಗಳನ್ನು ಸಂಪೂರ್ಣಗೊಳಿಸಲಾಗಿದೆ ಎಂದರು.ಬಿಸಿಯೂಟ, ಸೈಕಲ್ ವಿತರಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಂಡರಲ್ಲದೆ, ಅಂಗನವಾಡಿ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 17 ಕಾಮಗಾರಿ ಪ್ರಗತಿ ಬಗ್ಗೆ ಸುದೀರ್ಘ ಚರ್ಚೆ ಸಭೆಯಲ್ಲಿ ನಡೆಯಿತು. ಶಿರಾಡಿಘಾಟ್ ಅಭಿವೃದ್ಧಿ ಎನ್ ಎಚ್ 48,ತೊಕ್ಕೊಟ್ಟ-ತಲಪಾಡಿ ರಸ್ತೆ, ಎನ್ ಎಚ್ 13 ಕಾಮಗಾರಿ ಕೆಲಸಗಳನ್ನು ಶೀಘ್ರವಾಗಿ ಮುಗಿಸಬೇಕೆಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಹೇಳಿದರು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೈಕಂಪಾಡಿ ಕಲುಷಿತ ಪ್ರದೇಶವೆಂದು ಗುರುತಿಸಲಾಗಿದ್ದು, ಈಬಗ್ಗೆ ಮೂರನೇಯವರಿಂದ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಅವರು ಹೇಳಿದರು.ಅಕ್ರಮ ಮರಳು ಸಾಗಾಣಿಕೆ ಸಮಸ್ಯೆ ಮತ್ತು ಸವಾಲುಗಳ ಬಗ್ಗೆಯೂ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು. ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಉಪಸ್ಥಿತರಿದ್ದರು.

Friday, April 23, 2010

ಆರೋಗ್ಯ ಇಲಾಖೆ ಸರಕಾರದ ಮಾನವೀಯ ಮುಖ: ಸಿಇಒ

ಮಂಗಳೂರು,ಏಪ್ರಿಲ್ 23:ಆರೋಗ್ಯ ಇಲಾಖೆ ಸರಕಾರದ ಮಾನವೀಯ ಮುಖದಂತೆ ಕರ್ತವ್ಯ ನಿರ್ವಹಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಹೇಳಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಇನ್ಫೊಸಿಸ್ ಮಕ್ಕಳ ವಿಶೇಷ ಚಿಕಿತ್ಸಾ ಆಸ್ಪತ್ರೆಯಲ್ಲಿ ಆರ್ ಎ ಪಿ ಸಿಸಿ ಹಾಲ್ ನಲ್ಲಿ ಏರ್ಪಡಿಸಿದ್ದ ವಿಶ್ವ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಖಾಸಗೀಯವರಿಂದ ಪ್ರಬಲ ಪೈಪೋಟಿಯಿದ್ದು, ಉತ್ತಮ ಸೇವೆಯಿಂದ ಮಾತ್ರ ಇಲಾಖೆ ಜನಮನ್ನಣೆ ಗಳಿಸಲು ಸಾಧ್ಯ ಎಂದರು. ಆರೋಗ್ಯದ ಬಗ್ಗೆ ಜಾಗೃತಿ ಇಂದಿನ ಸವಾಲಾಗಿದ್ದು, ಗಾಳಿ,ನೀರು ಎಲ್ಲವೂ ಕಲುಷಿತಗೊಳ್ಳುತ್ತಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.
ಸರಕಾರ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸ್ವಾಸ್ಥ ವಿಮಾ ಯೋಜನೆಗಳನ್ನು ಖಾಸಗಿಯವರೊಂದಿಗೆ ಸೇರಿ ಜಾರಿಗೆ ತರುತ್ತಿದ್ದು,ಆರೋಗ್ಯ ಆಡಳಿತವನ್ನು ಅಭಿವೃದ್ಧಿ ಪಡಿಸಲು ಸರ್ವಯತ್ನಗಳನ್ನು ಮಾಡಲಾಗುತ್ತಿದೆ ಎಂದರು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಹಾಗೂ ಮೂಲಸೌಕರ್ಯಗಳು ದೊರೆತಿದ್ದು, ಇನ್ನಷ್ಟು ಸೇವೆಯನ್ನು ಜನಪರ ಗೊಳಿಸಲು ಸಾಧ್ಯವಾಗಬೇಕು; ಇದರಲ್ಲಿ ಸಮುದಾಯದ ಪಾಲುಗಾರಿಕೆ ಅಗತ್ಯ ಎಂದರು. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗನ್ನಾಥ್ ಅವರು,ಆರೋಗ್ಯ ಜಾಗೃತಿ ಮೂಡಿಸಲು ಪ್ರಸಕ್ತ ಸಾಲಿನಲ್ಲಿ ನಗರ ಆರೋಗ್ಯ ಸುಧಾರಿಸುವ ಘೋಷಣೆಯಿದ್ದು, ನಗರೀಕರಣ ಹಾಗೂ ಜನಸಂಖ್ಯಾ ಸ್ಫೋಟದಿಂದಾಗಿರುವ ಸಮಸ್ಯೆಗಳು, ಕಲುಷಿತತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದರು.1948ರಲ್ಲೇ ವಿಶ್ವಸಂಸ್ಥೆ ಈ ಬಗ್ಗೆ ನಿರ್ಣಯ ತೆಗೆದುಕೊಂಡಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ಅವರು ವಹಿಸಿದ್ದರು. ಡಾ. ವಿಶ್ವೇಶ್ವರ ಭಟ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಸರೋಜ, ಲೇಡಿಗೋಷನ್ ಡಾ. ಶಕುಂತಲಾ ಉಪಸ್ಥಿತರಿದ್ದರು.
ವಿಶ್ವ ಆರೋಗ್ಯ ದಿನಾಚರಣೆ ಸಂದರ್ಭದಲ್ಲಿ ವೆನ್ ಲಾಕ್ ಆಸ್ಪತ್ರೆಯ ಡಾ.ರಮೇಶ್, ಅರವಳಿಕೆ ತಜ್ಞರಾದ ಡಾ. ಜೆಸಿಂತ ಡಿಸೋಜ, ಮಕ್ಕಳ ತಜ್ಞ ಡಾ.ಬಾಲಕೃಷ್ಣ ಅವರಿಗೆ ನಗದು ಮತ್ತು ಗೌರವ ಕಾಣಿಕೆಯನ್ನು ನೀಡಲಾಯಿತು.ತಾಲೂಕು ಮಟ್ಟದಲ್ಲಿ ಸುಳ್ಯದ ಮಕ್ಕಳ ವಿಭಾಗದ ಡಾ. ರಮೇಶ್, ಅರವಳಿಕೆ ತಜ್ಞ ಡಾ. ಕರುಣಾಕರ ಕೆ.ವಿ, ಬೆಳ್ತಂಗಡಿಯ ಡಾ. ಪ್ರಕಾಶ್ ಕೊಕ್ಕಡ, ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಹೇಮಲತಾ, ಪುತ್ತೂರು ಈಶ್ವರಮಂಗಲದ ಡಾ.ಗೋಪಾಲಕೃಷ್ಣ ನಾಯಕ್, ಸುಳ್ಯದ ಡಾ. ಶ್ರೀರಂಗಪ್ಪ, ಬಂಟ್ವಾಳ ವಾಮದಪದವಿನ ಡಾ. ದುರ್ಗಾ ಪ್ರಸಾದ್, ಉಜಿರೆ ಪಿ ಎಚ್ ಸಿಯ ಡಾ.ರವೀಂದ್ರನಾಥ ಅವರಿಗೆ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತಲ್ಲದೆ, ಹಿರಿಯ ಶುಶ್ರೂಷಕಿಯರು, ಕಿರಿಯ ಆರೋಗ್ಯ ಸಹಾಯಕಿಯರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಅಹವಾಲು ಸಲ್ಲಿಕೆಗೆ ಪ್ರತ್ಯೇಕ ಸಹಾಯವಾಣಿ

ಮಂಗಳೂರು ಏಪ್ರಿಲ್ 23:ಭಾರತ ಜನಗಣತಿ 2011ರನ್ವಯ ಮಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿಯೊಂದು ಗಣತಿ ಬ್ಲಾಕಿನಲ್ಲಿ ಮನೆಪಟ್ಟಿ ತಯಾರಿ ಹಾಗೂ ಮನೆಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ ಕಾರ್ಯವು ನಿಗದಿತ ಕಾರ್ಯಕ್ರಮ ವೇಳಾಪಟ್ಟಿಯಂತೆ 15.04.2010ರಿಂದ ಪ್ರಾರಂಭಗೊಂಡಿದ್ದು ಗಣತಿದಾರರು ತಮ್ಮ ಕರ್ತವ್ಯ ನಿರ್ವಹಿಸು ತ್ತಿರುವ ಸಂದರ್ಭದಲ್ಲಿ ಯಾವುದೇ ನ್ಯೂನತೆ ಯಾ ಅಸಮರ್ಪಕ ಕಾರ್ಯ ನಿರ್ವಹಣೆ ಕಂಡು ಬಂದಲ್ಲಿ ಸಾರ್ವಜನಿಕರು ಈ ಬಗ್ಗೆ ತಮ್ಮ ಅಹವಾಲನ್ನು ದೂರವಾಣಿ ಮೂಲಕ ಯಾ ಲಿಖಿತ ದೂರು ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಮಂಗಳೂರು ಮಹಾನಗರಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಪ್ರತ್ಯೇಕ ಸಹಾಯವಾಣಿ ಕೇಂದ್ರ ರಚಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು ಎಂದು ಮಹಾನಗರಪಾಲಿಕೆ ಆಯುಕ್ತ ಕೆ. ಎನ್. ವಿಜಯಪ್ರಕಾಶ್ ತಿಳಿಸಿದ್ದಾರೆ. ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 0824- 2220306, 155313 (ಶುಲ್ಕರಹಿತ).

ಮಂಗಳೂರು ಆರ್ ಟಿ ಒ: 74.41ಕೋಟಿ ರೂ. ರಾಜಸ್ವ ಸಂಗ್ರಹ

ಮಂಗಳೂರು ಏಪ್ರಿಲ್ 23: ಪ್ರಾದೇಶಿಕ ಸಾರಿಗೆ ಕಚೇರಿ ಮಂಗಳೂರು 2009-10ನೇ ಸಾಲಿನಲ್ಲಿ 74,40,95,359 ರೂ. ರಾಜಸ್ವ ಸಂಗ್ರಹಿಸಿದ್ದು, ಗುರಿ ಮೀರಿದ ಸಾಧನೆಯಾಗಿದೆ ಎಂದು ಆರ್ ಟಿ ಒ ಪುರುಷೋತ್ತಮ ಅವರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 68.10 ಕೋಟಿ ರೂ.ಗಳ ರಾಜಸ್ವ ವಸೂಲಾತಿಗೆ ಗುರಿ ನಿಗದಿ ಪಡಿಸಲಾಗಿದ್ದು, ಒಟ್ಟು 74,40,95,359 ಕೋಟಿ ರೂ.ಗಳ ದಾಖಲೆ ಪ್ರಮಾಣದ ರಾಜಸ್ವ ಸಂಗ್ರಹ ಮಾಡಿ ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆ ಮಾಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಒಟ್ಟು 30,296 ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, 2,265 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 215 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 37,51,177 ರೂ.ಗಳ ತೆರಿಗೆ ಮತ್ತು 67,80,810 ರೂ.ಗಳ ದಂಡ ಹೀಗೆ ಒಟ್ಟು 1,05,31,987 ರೂ.ಗಳನ್ನು ವಸೂಲು ಮಾಡಲಾಗಿದೆ. ನಿಗದಿತ ಮಿತಿಗಿಂತ ಅಧಿಕ ಭಾರದ ಕಬ್ಬಿಣದ ಅದಿರು ಮತ್ತಿತರ ಸರಕುಗಳನ್ನು ಹೇರಿದ 15,159 ಸರಕು ಸಾಗಾಣಿಕೆ ವಾಹನ ತಪಾಸಣೆ ಮಾಡಿ 343 ವಾಹನಗಳ ಮೇಲೆ ಪ್ರಕರಣ ದಾಖಲಿಸಿ 49,13,040 ರೂ.ಗಳ ದಂಡ ವಸೂಲಿ ಮಾಡಲಾಗಿದೆ. ಈ ಅವಧಿಯಲ್ಲಿ 3,346 ಬಸ್ಸುಗಳ ತಪಾಸಣೆ ಮಾಡಿ 415 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ 9 ಬಸ್ಸುಗಳನ್ನು ವಿವಿಧ ಅಪರಾಧಗಳಿಗೆ ಜಪ್ತಿ ಮಾಡಲಾಗಿದೆ. 338 ಎಐಟಿಒಬಿ ಗಳನ್ನು ತಪಾಸಣೆ ಮಾಡಿ 39 ಎಐಟಿಒಬಿ ಗಳ ವಿರುದ್ಧ ಪ್ರಕರಣ ದಾಖಲಿಸಿ 1 ವಾಹನ ವಶಪಡಿಸಿಕೊಳ್ಳಲಾಗಿದೆ. 397 ಒಪ್ಪಂದ ವಾಹನಗಳನ್ನು ತಪಾಸಣೆ ಮಾಡಿ 48 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ 8 ವಾಹನಗಳ ಜಪ್ತಿ ಮಾಡಲಾಗಿದೆ. 1737 ಆಟೋರಿಕ್ಷಾಗಳನ್ನು ತಪಾಸಣೆ ಮಾಡಿ 163 ಆಟೋರಿಕ್ಷಾಗಳ ವಿರುದ್ಧ ಪ್ರಕರಣ ದಾಖಲಿಸಿ 5 ಆಟೋರಿಕ್ಷಾಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಹೆಚ್ಚುವರಿ ಬಾಡಿಗೆ ವಸೂಲಿ ಮತ್ತು ಪ್ರಯಾಣಿಕರೊಂದಿಗೆ ಅನುಚಿತ ವರ್ತಿಸಿರುವುದಾಗಿ ಸಾರ್ವಜನಿಕರಿಂದ ದೂರು ಬಂದ 27 ಪ್ರಕರಣಗಳಲ್ಲಿ ಆಟೋರಿಕ್ಷಾ ಚಾಲಕ/ಮಾಲಿಕರನ್ನು ವಿಚಾರಣೆ ನಡೆಸಿ 14,200 ದಂಡ ವಸೂಲಾಗಿದೆ. 24 ಪ್ರಕರಣಗಳಲ್ಲಿ ಬಸ್ಸುಗಳ ಚಾಲಕ/ನಿರ್ವಾಹಕರು ಮತ್ತು ಬಸ್ಸು ಮಾಲೀಕರನ್ನು ವಿಚಾರಣೆ ನಡೆಸಿ ದಂಡ ವಿಧಿಸಲಾಗಿದೆ.
ನಿಗದಿತ ಮಿತಿಗಿಂತ ಅಧಿಕ ಭಾರ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 114 ಸರಕು ಸಾಗಾಣಿಕ ವಾಹನಗಳ ಪರವಾನಿಗೆಗಳನ್ನು ಅಮಾನತು ಮಾಡಲಾಗಿದೆ. 127 ಪ್ರಕರಣಗಳಲ್ಲಿ ಪರವಾನಿಗೆ ಅಮಾನತು ಮಾಡುವಂತೆ ಇತರ ಜಿಲ್ಲೆಗಳ ಪ್ರಾಧಿಕಾರಿಗಳಿಗೆ ಕಳುಹಿಸಲಾಗಿದೆ. 42 ಪ್ರಕರಣಗಳಲ್ಲಿ ಚಾಲಕರ ಅನುಜ್ಞಾ ಪತ್ರ ಅಮಾನತು ಮಾಡುವಂತೆ ಸಂಬಂಧಿಸಿದ ಚಾಲನ ಆ ಪ್ರಾಧಿಕಾರಗಳಿಗೆ ಕಳುಹಿಸಲಾಗಿದೆ. 2 ಪ್ರಕರಣಗಳಲ್ಲಿ ಮಂಗಳೂರು ಕಚೇರಿಯಲ್ಲಿ ಅನುಜ್ಞಾ ಪತ್ರವನ್ನು ಅಮಾನತು ಪಡಿಸಲಾಗಿದೆ.

Monday, April 19, 2010

ಗ್ರಾಮ ಪಂಚಾಯಿತಿ ಚುನಾವಣೆ, ಜಿಲ್ಲೆಯಲ್ಲಿ ಸಿದ್ದತೆಗಳು ಪೂರ್ಣ: ಜಿಲ್ಲಾಧಿಕಾರಿ ಪೊನ್ನುರಾಜ್

ಮಂಗಳೂರು, ಎಪ್ರಿಲ್ 19: ಮೇ 12 ರಂದು ನಡೆಯಲಿರುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪೊನ್ನುರಾಜ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಟಿಯಲ್ಲಿ ಈ ಬಾರಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳು ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳ 203 ಗ್ರಾಮ ಪಂಚಾಯತಿಗಳ ಪೈಕಿ ಮೂರು ಗ್ರಾಮ ಪಂಚಾಯತಿಗಳ ಅಧಿಕಾರ ಅವಧಿ ಕೊನೆಗೊಳ್ಳದ ಕಾರಣ ಅವುಗಳನ್ನು ಹೊರತುಪಡಿಸಿ,200 ಗ್ರಾಮ ಪಂಚಾಯತಿಗಳ 3208 ಸದಸ್ಯ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.ಇವುಗಳಲ್ಲಿ 1434 ಸ್ಥಾನಗಳು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಒಟ್ಟು 8,96,719 ಮತದಾರರಿದ್ದು,ಒಟ್ಟು 1115 ಮತಗಟ್ಟೆಗಳಿವೆ.ಇವುಗಳಲ್ಲಿ 336 ಮತಗಟ್ಟೆಗಳು ಸೂಕ್ಷ್ಮ ಮತ್ತು 181 ಮತಗಟ್ಟೆಗಳು ಅತೀ ಸೂಕ್ಷ್ಮ ಎಂದು ಗುರುತ್ತಿಸಲಾಗಿದ್ದು, ನಕ್ಸಲ್ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಎ ಎನ್ ಎಫ್ ಮತ್ತು ಹೆಚ್ಚುವರಿ ಪೋಲಿಸರನ್ನು ಬಂದೋಬಸ್ತಿಗಾಗಿ ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ನಾಮ ಪತ್ರ ಸ್ವೀಕಾರ ಕೇಂದ್ರಗಳು:ಆಯಾಯ ಗ್ರಾಮ ಪಂಚಾಯತಿ ಕಚೇರಿಗಳನ್ನು ನಾಮಪತ್ರ ಸ್ವೀಕಾರ ಕೇಂದ್ರ ಗಳನ್ನಾಗಿ ಗುರುತಿ ಸಲಾಗಿದೆ.ಈ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಇಚ್ಚಿಸುವ, ಗ್ರಾಮ ಪಂಚಾಯತ್ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿರುವ, 21 ವರ್ಷ ಪ್ರಾಯ ಪೂರ್ಣಗೊಂಡವರು ಆಯಾಯ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಚುನಾವಣೆ ನಡೆಸುವ ಬಗ್ಗೆ ನೇಮಕ ಮಾಡಿರುವ ಚುನಾವಣಾಧಿಕಾರಿ ಆಥವಾ ಸಹಾಯಕ ಚುನಾವಣಾಧಿಕಾರಿಯವರಿಗೆ ಎಪ್ರಿಲ್ 21 ರಿಂದ ಎಪ್ರಿಲ್ 28 ರ ಅವಧಿಯಲ್ಲಿ ನಾಮ ಪತ್ರ ಸಲ್ಲಿಸಬಹುದಾಗಿದೆ. ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗೆ ರೂ.200, ಹಿಂದುಳಿದ ವರ್ಗ,ಅನುಸೂಚಿತ ಜಾತಿ ಮತ್ತು ಪಂಗಡ ಮತ್ತು ಮಹಿಳಾ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗೆ ರೂ 100 ಠೇವಣಿಯನ್ನು ನಿಗದಿಪಡಿಸಲಾಗಿದೆ. ಎಪ್ರಿಲ್ 21 ರಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು,28-04-2010 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ಎಪ್ರಿಲ್ 29 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದ್ದು,ಮೇ 03 ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ ಎಂದು ಅವರು ಹೇಳಿದರು. ಮೇ 12 ರಂದು ಮತದಾನ ನಡೆಯಲಿದ್ದು, ಮೇ 17 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಎಡಿಷನಲ್ ಎಸ್ಪಿ ಆರ್. ರಮೇಶ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಮೀನುಗಾರಿಕಾ ಬೋಟ್ ಹಾನಿ, ಉಸ್ತುವಾರಿ ಸಚಿವರಿಂದ ಸೂಕ್ತ ಪರಿಹಾರದ ಭರವಸೆ

ಮಂಗಳೂರು,ಎಪ್ರಿಲ್,19: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡದ ಕರಾವಳಿಯಲ್ಲಿ ರವಿವಾರ ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ನಗರದ ತೋಟ ಬೆಂಗ್ರೆಯಲ್ಲಿ ನಿಲ್ಲಿಸಿದ್ದ 12 ಮೀನುಗಾರಿಕಾ ದೋಣಿಗಳಿಗೆ ಹಾನಿಯಾಗಿದೆ.ಇದರಲ್ಲಿ ಮೂರು ದೋಣಿಗಳು ಭಾಗಶ: ಮುಳುಗಿದ್ದು, ಇತರ ದೋಣಿಗಳಿಗೆ ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ.
ಮೀನುಗಾರಿಕಾ ದೋಣಿಗಳು ಹಾನಿಗೀಡಾದ ತೋಟ ಬೆಂಗ್ರೆ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ಹಾನಿಗೊಳಗಾದ ಮೀನುಗಾರಿಕಾ ಬೋಟುಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿದರು.ಬಂದರುಗಳಲ್ಲಿ ಹೂಳೆತ್ತದಿರುವುದರಿಂದ ಇಂತಹ ಸಮಸ್ಯೆಗಳು ಪುನರಾವರ್ತನೆಯಾಗುತ್ತಿದೆ,ಕರಾವಳಿ ತೀರದಲ್ಲಿ ಡ್ರೆಜ್ಜಿಂಗ್ ಮಾಡುವ ಅವಶ್ಯಕತೆ ಇದ್ದು,10 ಕೋಟಿ ರೂಪಾಯಿಗಳ ಬೇಡಿಕೆ ಸರ್ಕಾರದ ಮುಂದಿದೆ.ಈ ಸಂಬಂಧ ಶಾಸಕರಾದ ಯೋಗಿಶ್ ಭಟ್ ಅವರು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.ಶೀಘ್ರದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಹೊಸ ಡ್ರೆಜ್ಜಿಂಗ್ ಮೆಶೀನ್ ಖರೀದಿ ಮತ್ತು ನಿರ್ವಹಣೆ ಅತ್ಯಂತ ವೆಚ್ಚದಾಯಕವಾಗಿದ್ದು, ಬಾಡಿಗೆ ಆಧಾರದಲ್ಲೇ ಮೆಷಿನ್ ತರಿಸಿ ಕೆಲಸ ಮುಗಿಸುವುದು ಅನುಕೂಲಕರವಾಗಿದೆ ಎಂದ ಸಚಿವರು,ಅಳಿವೆ ಬಾಗಿಲಿನಲ್ಲಿ ಈ ಹಿಂದೆ ಮುಳುಗಿದ್ದ ಮೀನುಕಾರಿಕಾ ದೋಣಿಯಿಂದ ಇತರ ದೋಣಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ಈ ದೋಣಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ದವಾಗಿದೆ ಎಂದರು. ಶಾಸಕ ಎನ್. ಯೋಗಿಶ್ ಭಟ್, ಪಾಲಿಕೆ ಸದಸ್ಯೆ ಶಕುಂತಲಾ ಉಪಸ್ಥಿತರಿದ್ದರು.
ಅಂದಾಜು ನಷ್ಡ: ಮೀನುಗಾರಿಕಾ ಉಪ ನಿರ್ದೇಶಕರು ಬೋಟುಗಳ ಒಟ್ಟು ನಷ್ಟ ಸುಮಾರು 5 ಲಕ್ಷ ರೂ. ಎಂದು ತಿಳಿಸಿದ್ದಾರೆ

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬೋಳ ಚಿತ್ತರಂಜನದಾಸ ಶೆಟ್ಟಿ

ಮಂಗಳೂರು,ಏ.19: ಜನರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟಿಸಲು, ಕನ್ನಡದ ಬಗ್ಗೆ ಜಾಗೃತರಾಗಲು ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳು ಅಗತ್ಯವಾಗಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಹೇಳಿದರು.
ಮಹಾ ನಗರ ಪಾಲಿಕೆಯ ಕಟ್ಟಡದಲ್ಲಿ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಸ್ವಾಗತ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಮುಗಿದಿದ್ದು, ತಾಲೂಕು ಸಾಹಿತ್ಯ ಸಮ್ಮೇಳನ ಇನ್ನಷ್ಟು ಅದ್ದೂರಿಯಾಗಿ, ಸಂಭ್ರಮದಿಂದ ಅರ್ಥಪೂರ್ಣವಾಗಿ ಜರುಗಲಿ ಎಂದು ಹಾರೈಸಿದರು. ಉದ್ಘಾಟನಾ ಸಮಾರಂಭದಲ್ಲೇ ಮೇಯರ್ ಅವರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು. ಶಾಸಕರಾದ ಎನ್. ಯೋಗೀಶ್ ಭಟ್, ಮೇಯರ್ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರಕುಮಾರ್, ವಿಪಕ್ಷ ಸಚೇತಕ ಅಭಯಚಂದ್ರ ಜೈನ್, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಶಂಕರ್ ಭಟ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಉಪಸ್ಥಿತರಿದ್ದರು.
ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸರ್ವೋತ್ತಮ ಅಂಚನ್ ಸ್ವಾಗತಿಸಿದರು. ಭುವನಾಭಿರಾಮ ಉಡುಪ ವಂದಿಸಿದರು.

Friday, April 16, 2010

ಮಂಗಳೂರಿನಲ್ಲಿ ಸೇನಾ ನೇಮಕಾತಿ ಪ್ರಕ್ರಿಯೆ

ಮಂಗಳೂರು,ಏ.17:ಭಾರತೀಯ ಸೇನೆಗೆ ಅರ್ಹ ಅಭ್ಯರ್ಥಿಗಳನ್ನು ಆರಿಸುವ ಪ್ರಕ್ರಿಯೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದು, ಈ ಸಂಬಂಧ ಅಗತ್ಯ ಪೂರ್ವಭಾವಿ ಸಭೆ ಹಾಗೂ ಸಿದ್ಧತೆಗಳು ಭರದಿಂದ ಸಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಉಡುಪಿ ಜಿಲ್ಲೆಯ ಅಭ್ಯರ್ಥಿಗಳು ಆಯ್ಕೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಮಂಗಳಾ ಸ್ಟೇಡಿಯಂನಲ್ಲಿ ಏಪ್ರಿಲ್ 27ರಿಂದ ಮೇ 4ರವರೆಗೆ ನಡೆಯಲಿರುವ ರಿಕ್ರೂಟ್ ಮೆಂಟ್ ರ್ಯಾಲಿಯ ಬಗ್ಗೆ ಅಗತ್ಯ ಮಾಹಿತಿಗಳಿಗೆ ಆಸಕ್ತ ಅಭ್ಯರ್ಥಿಗಳು www.zrobangalore.com or aromangalore@gmai.com ನಲ್ಲಿ ಅಥವಾ ಮಂಗಳೂರಿನ ಕಚೇರಿ ದೂ.ಸಂ. 0824-2458376 ನಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಏಪ್ರಿಲ್ 27ರಂದು ಸಿಪಾಯಿ ಜನರಲ್ ಡ್ಯೂಟಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಯ ಲಿದ್ದು, ನೇಮಕಾತಿಯಲ್ಲಿ ಪಾಲ್ಗೊಳ್ಳು ವರರಿಗೆ ಆಯ್ಕೆ ದಿನಾಂಕಕ್ಕೆ ಹದಿನೇಳೂವರೆಯಿಂದ 21 ವರ್ಷದೊಳಗಿರಬೇಕು. ಅಥವಾ ಏಪ್ರಿಲ್ 28,1989ರಿಂದ 28 ಅಕ್ಟೋಬರ್ 1992ರೊಳಗೆ ಜನಿಸಿರಬೇಕು.
ಏಪ್ರಿಲ್ 28ರಂದು ಸಿಪಾಯಿ ಜನರಲ್ ಡ್ಯೂಟಿಗೆ ಆಯ್ಕೆ ನಡೆ ಯಲಿದ್ದು, ಅಭ್ಯರ್ಥಿಗಳಿಗೆ ಹದಿನೇಳೂ ವರೆಯಿಂದ 21 ವರ್ಷವಾಗಿರಬೇಕು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ದಾವಣಗೆರೆ ಜಿಲ್ಲೆಯ ಅಭ್ಯರ್ಥಿಗಳಿಗೆ ಅವಕಾಶವಿದೆ. 29ರಂದು ಈ ಸಂಬಂಧ ಕರ್ನಲ್ ದೇಶಪಾಂಡೆ ಅವರು ಪತ್ರಿಕೆಗಳಿಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಲಿದ್ದು, 29ರಂದು ನಡೆಯುವ ನೇಮಕಾತಿ ರ್ಯಾಲಿಯಲ್ಲಿ ಎಲ್ಲಾ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದ್ದು, ಮಾಜಿ ಸೈನಿಕರ ಮಕ್ಕಳಿಗೆ,ರಾಷ್ಟ್ರ,ರಾಜ್ಯ ಮಟ್ಟದ ಎನ್ ಸಿಸಿ ಕ್ರೀಡಾಪಟುಗಳಿಗೆ ಉತ್ತರ ಕನ್ನಡ,ದಕ್ಷಿಣ ಕನ್ನಡ,ಕೊಡಗು, ಉಡುಪಿ,ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ದಾವಣಗೆರೆಯ ಅಭ್ಯರ್ಥಿಗಳಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಅರ್ಹತೆಯನ್ನು, ವಿದ್ಯಾಭ್ಯಾಸವನ್ನು ಹುದ್ದೆಗೆ ಅನುಸಾರವಾಗಿನಿಗದಿ ಪಡಿಸಲಾಗಿದೆ. 30ರಂದು ಸಿಪಾಯಿ ಗುಮಾಸ್ತ, ಎಸ್ ಕೆ ಟಿ ಸಿಪಾಯಿ, ಟೆಕ್ನಿಕಲ್ ಸಿಪಾಯಿ ನರ್ಸಿಂಗ್ ಸಹಾಯಕ ಹುದ್ದೆಗೆ ಸಂದರ್ಶನ ನಡೆಯಲಿದ್ದು, ಆಯ್ಕೆ ದಿನಾಂಕಕ್ಕೆ ವಯೋಮಿತಿ ಹದಿನೇಳೂವರೆಯಿಂದ 23ವರ್ಷ. ಪಿಯುಸಿ ಆಗಿದ್ದು, ಕಲೆ, ವಾಣಿಜ್ಯ, ವಿಜ್ಞಾನ ಯಾವುದೇ ವರ್ಗದಲ್ಲಿ ಸರಾಸರಿ ಕನಿಷ್ಠ 50% ಅಂಕ ಗಳಿಸಿರಬೇಕು. ವಿಜ್ಞಾನ ಪದವೀಧರರಿಗೆ ಆದ್ಯತೆ. ಮೇ 1ರಂದು ಸಿಪಾಯಿ ಟ್ರೇಡ್ ಮ್ನೆ ಹುದ್ದೆಯಡಿ 8ನೇ ತರಗತಿ ಪಾಸಾದ ಅಥವಾ 10ನೇ ತರಗತಿ ಪಾಸಾದ ವಿದ್ಯಾರ್ಹತೆಯುಳ್ಳವರು ಪರೀಕ್ಷೆ ಎದುರಿಸಬಹುದು.
ಅಭ್ಯ ರ್ಥಿಗಳು ತಮ್ಮ ಮೂಲ ಅಂಕಪಟ್ಟಿ, ಪಾಸ್ ಪೋರ್ಟ್ ಸೈಜಿನ 12 ಭಾವಚಿತ್ರ (ಕಪ್ಪು,ಬಿಳುಪು), ವಾಸಸ್ಥಳಕ್ಕೆ ಸಂಬಂಧಿಸಿದಂತೆ ಮೂಲಪ್ರತಿಯಲ್ಲಿ ತಹಸೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳ ಸಹಿ ಇರುವ ಸರ್ಟಿಫಿಕೇಟ್ (ಇಂಗ್ಲಿಷ್ ಭಾಷೆ), ನಡತೆ ಪ್ರಮಾಣ ಪತ್ರ, ಹೆತ್ತವರಿಂದ ಅನುಮತಿ ಪಡೆದ ಬಗ್ಗೆ 10ರೂ.ಸ್ಟಾಂಪ್ ಪೇಪರ್ ನಲ್ಲಿ ನೋಟರಿ ಸಹಿಯನ್ನೊಳಗೊಂಡ ಪ್ರಮಾಣ ಪತ್ರ (ಇಂಗ್ಲಿಷ್ ನಲ್ಲಿ). ಎಲ್ಲಾ ಸರ್ಟಿಫಿಕೇಟ್ ಮೂಲಪ್ರತಿಗಳು ಹಾಗೂ 2 ಜೆರಾಕ್ಸ್ ಪ್ರತಿಗಳು ನೇಮಕಾತಿ ರಾಲಿಗೆ ಹಾಜರಾಗುವ ಅಭ್ಯರ್ಥಿ ಗಳಲ್ಲಿರತಕ್ಕದ್ದು. ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು. ದೈಹಿಕ ಪರೀಕ್ಷೆಯಿದ್ದು, 165 ಸೆಂ.ಮೀ ಎತ್ತರ, 50 ಕೆ ಜಿ ತೂಕ ಹೊಂದಿದ್ದು, ಆಯಾಯ ಹುದ್ದೆಗೆ ಎತ್ತರ ಮತ್ತು ತೂಕ ಪ್ರತ್ಯೇಕವಾಗಿರುತ್ತದೆ. ಆಸಕ್ತರು ಸೇನೆಗೆ ಸೇರುವ ಅವಕಾಶವನ್ನು ಬಳಸಿಕೊಳ್ಳಬಹುದು.

Thursday, April 15, 2010

ಭಾರತ ಜನಗಣತಿ 2011- ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಲ್ಪ್ ಸೆಂಟರ್

ಮಂಗಳೂರು, ಏಪ್ರಿಲ್ 15: ಭಾರತ ಜನಗಣತಿ 2011ರ ಪ್ರಯುಕ್ತ ಪ್ರಥಮ ಹಂತದಲ್ಲಿ ಮನೆಪಟ್ಟಿ ತಯಾರಿ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ತಯಾರಿ ಬಗ್ಗೆ ಮಾಹಿತಿ ಸಂಗ್ರಹ ಕಾರ್ಯಕ್ರಮ ಏಪ್ರಿಲ್ 15ರಿಂದ ಜೂನ್ 1ರವರೆಗೆ ನಡೆಯಲಿದ್ದು, ಪ್ರತೀ ಗಣತಿದಾರರ ಬ್ಲಾಕಿಗೆ ನೇಮಕಗೊಂಡ ಗಣತಿದಾರರು ಮನೆ ಮನೆ ಭೇಟಿ ನೀಡಿದಾಗ ಸಾರ್ವಜನಿಕರು ಸ್ಪಷ್ಟ ಮಾಹಿತಿ ನೀಡಬೇಕೆಂದು ಜಿಲ್ಲೆಯ ಪ್ರಧಾನ ಜನಗಣತಿ ಅಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನುರಾಜ್ ತಿಳಿಸಿದ್ದಾರೆ.ಗಣತಿದಾರರು ಅವರಿಗೆ ವಹಿಸಲಾದ ವಲಯಕ್ಕೆ ಭೇಟಿ ನೀಡದಿದ್ದಲ್ಲಿ, ಗಣತಿ ಕಾರ್ಯದ ಸಂದರ್ಭದಲ್ಲಿ ಕೆಲವು ಮನೆಗಳನ್ನು ಗಣತಿ ಮಾಡದೆ ಬಿಟ್ಟಲ್ಲಿ, ಸಾರ್ವಜನಿಕರಿಂದ ಸಮಗ್ರ ಮಾಹಿತಿ ಪಡೆದು ದಾಖಲಿಸದಿದ್ದಲ್ಲಿ, ಜನಗಣತಿ ಸಿಬ್ಬಂದಿಗೆ ಪಾವತಿ ಮಾಡಬೇಕಾದ ಸಂಭಾವನೆ ಪಾವತಿಸದಿದ್ದಲ್ಲಿ ಮತ್ತು ಗಣತಿ ಕಾರ್ಯದ ಸಮಯದಲ್ಲಿ ಮೇಲ್ವಿಚಾರಕರು ವ್ಯತಿರಿಕ್ತವಾಗಿ ವರ್ತಿಸಿದ್ದಲ್ಲಿ ಸಾರ್ವಜನಿಕರು ಹಾಗೂ ಜನಗಣತಿ ಸಿಬ್ಬಂದಿಗಳು ದೂರು ನೀಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಸಹಾಯವಾಣಿ ಕೇಂದ್ರದ ನಂಬರ್ 1077. ಈ ಸಹಾಯವಾಣಿಯ ಸದುಪಯೋಗವನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜನಗಣತಿ ಆರಂಭ: ಸಹಕಾರಕ್ಕೆ ಮನವಿ

ಮಂಗಳೂರು, ಏಪ್ರಿಲ್ 15: ಮಹತ್ವದ ಭಾರತ ಜನಗಣತಿ-2011ಕ್ಕೆ ಸುರತ್ಕಲ್ ನಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ರಜನಿ ದುಗ್ಗಣ್ಣ ಅವರ ಮನೆಯಿಂದ ಇಂದು ಚಾಲನೆ ದೊರೆತಿದ್ದು, ಎರಡು ಹಂತಗಳಲ್ಲಿ ಜನಗಣತಿ ಕಾರ್ಯಕ್ರಮ ನಡೆಯಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಕೆ. ಎನ್. ವಿಜಯಪ್ರಕಾಶ್ ಅವರು ಹೇಳಿದರು.
ಏಳನೇ ಜನಗಣತಿಗೆ ಮಂಗಳೂರು ನಗರದ ಪ್ರಥಮ ಪ್ರಜೆ ತಮ್ಮ ಕುಟುಂಬದ, ಮನೆಯ ಸಮಗ್ರ ಮಾಹಿತಿಯನ್ನು ಗಣತಿದಾರರಿಗೆ ನೀಡಿದರು. ಮನೆಗಣತಿ ಕಾರ್ಯ ಜೂನ್ 1 ರವರೆಗೆ ನಡೆಯಲಿದ್ದು, ಮನೆಗಳ ಬಗ್ಗೆ, ಈ ಸಂಬಂಧ ಎಲ್ಲ ಮಾಹಿತಿಗಳ ಬಗ್ಗೆ ಪ್ರತಿ ಮನೆಗೆ ಭೇಟಿ ನೀಡುವ ಜನಗಣತಿ ಅಧಿಕಾರಿಗಳು ಜೂನ್ ಒಂದರೊಳಗೆ ಮನೆಗಣತಿ ಕಾರ್ಯವನ್ನು ಸಂಪೂರ್ಣಗೊಳಿಸಲಿದ್ದಾರೆ ಎಂದು ಅವರು ತಿಳಿಸಿದರು.
1872 ರಿಂದ ಭಾರತದ ಜನಗಣತಿಯು ಜನಸಂಖ್ಯೆ, ಆರ್ಥಿಕ ಚಟುವಟಿಕೆ, ಸಾಕ್ಷರತೆ, ವಸತಿ, ನಾಗರೀಕ ಸೌಲಭ್ಯಗಳು, ಸ್ವತ್ತುಗಳು ಮತ್ತು ವೈವಿಧ್ಯಮಯ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳ ಬಗ್ಗೆ ಸಮಗ್ರ ಮತ್ತು ಪೂರ್ವಗ್ರಹ ಪೀಡಿತವಲ್ಲದ ಮಾಹಿತಿ ಮೂಲವಾಗಿದೆ. ದೇಶದಲ್ಲಿ ಈಗಾಗಲೇ ಆಗಿರುವ ಅಭಿವೃದ್ಧಿಯ ಮೌಲ್ಯಮಾಪನ ಕೈಗೊಳ್ಳಲು, ಸಾಧಿಸುತ್ತಿರುವ ಪ್ರಗತಿಯನ್ನು ಅಳೆಯಲು ಭವಿಷ್ಯದಲ್ಲಿ ಯೋಜನೆ ರೂಪಿಸಲು ಅಗತ್ಯವಾಗಿದ್ದು, ಗಣತಿದಾರರು ಮನೆಗೆ ಬರುವಾಗ ಸೂಕ್ತ ಮಾಹಿತಿ ನೀಡಲು ಅವರು ಕೋರಿದ್ದಾರೆ.
ಜನಗಣತಿಯ ಜೊತೆಯಲ್ಲಿ ಮೊಟ್ಟ ಮೊದಲಬಾರಿಗೆ ಸಾಮಾನ್ಯ ನಿವಾಸಿಗಳ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ನ್ನು ತಯಾರಿಸಲಾಗುತ್ತಿದ್ದು, ರಾಷ್ಟ್ರೀಯ ಯೋಜನೆಗಳನ್ನು ಗುರಿ ತಲುಪಿಸಲು ಇದು ಸಹಾಯಕವಾಗಿದೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆಯ ಕಂದಾಯ ಅಧಿಕಾರಿ ಹಾಗೂ ನಗರ ಪಾಲಿಕೆ ವ್ಯಾಪ್ತಿಯ ನೋಡಲ್ ಅಧಿಕಾರಿ ಮೇಘನಾ,ಜನಗಣತಿ ಅಧಿಕಾರಿ ದಿವಾಕರ್,ಮತ್ತಿತರ ಆಧಿಕಾರಿಗಳು ಉಪಸ್ಥಿತರಿದ್ದರು.
ಶಿಸ್ತು ಕ್ರಮ: ಮಹಾನಗರಪಾಲಿಕೆಗೆ ಆಸ್ತಿತೆರಿಗೆ ಪಾವತಿಸದೆ ಬಾಕಿ ಇರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರು ಈ ಸಂದರ್ಭದಲ್ಲಿ ಎಚ್ಚರಿಸಿದರು.

Wednesday, April 14, 2010

ಡಾ. ಅಂಬೇಡ್ಕರ್ ಮಾರ್ಗದರ್ಶನದಲ್ಲಿ ಸಾಮಾಜಿಕ ಅಭಿವೃದ್ಧಿ: ಸಚಿವ ಪಾಲೆಮಾರ್

ಮಂಗಳೂರು,ಏ.14: ಸಂವಿಧಾನಶಿಲ್ಪಿ, ಸಾಮಾಜಿಕ ಪರಿವರ್ತನೆಯ ಹರಿಕಾರರಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ತೋರಿದ ಮಾರ್ಗದರ್ಶನದಲ್ಲಿ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತಿದ್ದು, ಸಮಾನತೆಯ ನವಸಮಾಜ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಹೇಳಿದರು.
ಇಂದು ನಗರದ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ರತ್ನ ಡಾ.ಬಿ. ಆರ್.ಅಂಬೇಡ್ಕರ್ ಅವರ 119ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಿಂದುಳಿದವರ ಅಭಿವೃದ್ಧಿಗಾಗಿರುವ ಇಲಾಖೆ ಹಾಗೂ ಮಹಾನಗರಪಾಲಿಕೆ ಮುಖಾಂತರ ಹಿಂದುಳಿದವರ ಅಭಿವೃದ್ಧಿಗೆ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ಹಾಗೂ ಫಲಾನುಭವಿಗಳ ವಿವರವನ್ನು ಸಚಿವರು ನೀಡಿದರಲ್ಲದೆ, ದೇಶವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಲು ಹಾದಿ ತೋರಿದ ಮಾನವತವಾದಿ ಅಂಬೇಡ್ಕರ್ ಅವರನ್ನು ಸ್ಮರಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾ ಸದಸ್ಯರಾದ ಎನ್ ಯೋಗೀಶ್ ಭಟ್ ಅವರು, ರಾಷ್ಟ್ರೀಯ ಚಿಂತನೆ ಇಂದಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಎಂದರು. ಸರ್ಕಾರ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಭಾಗ್ಯಲಕ್ಷ್ಮಿಯಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು ಜನಪರ ಯೋಜನೆಗಳಿಂದಾಗುವ ಸಮಾಜಮುಖಿ ಪರಿವರ್ತನೆಯನ್ನು ಗುರುತಿಸಬೇಕೆಂದರು. ಅಗತ್ಯಕ್ಕೆ ಪೂರಕವಾಗಿ ಯೋಜನೆ ರೂಪಿಸುವುದನ್ನು ಪ್ರತಿಪಾದಿಸಿದ ಅವರು, ನಗರದಲ್ಲಿ ಸಾಕಷ್ಟು ಸಾಮಾಜಿಕ ಪರಿವರ್ತನೆ ಹಾಗೂ ಅಭಿವೃದ್ಧಿ ಸಾಧ್ಯವಾಗಿದೆ ಎಂದು ನುಡಿದರು. ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರು ಹಾಗೂ ನಿರ್ದೇಶಕರು ಗಾಂಧಿ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ.ಎಲ್.ಧರ್ಮ ಅವರು ಮುಖ್ಯ ಭಾಷಣಕಾರರಾಗಿದ್ದರು. ಮಂಗಳೂರು ವಿಧಾನಸಭಾ ಶಾಸಕ ಯು.ಟಿ ಖಾದರ್ ಮಾತನಾಡಿದರು. ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ.ಸಂತೋಷ್ ಕುಮಾರ್ ಭಂಡಾರಿ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಮಹಾಪೌರರಾದ ರಜನಿ ದುಗ್ಗಣ್ಣ, ಉಪ ಮಹಾಪೌರ ರಾಜೇಂದ್ರ ಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷ ರಾಮಚಂದ್ರ ಕುಂಪಲ, ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಸಿಇಒ ಪಿ.ಶಿವಶಂಕರ್, ಮನಾಪ ಆಯುಕ್ತ ವಿಜಯಪ್ರಕಾಶ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೃಷಿ ಪಂಡಿತ ಮಹಾಲಿಂಗ ನಾಯ್ಕ ಕೇಪು ಮತ್ತು ಭೂತಾ ರಾಧನೆಯಲ್ಲಿ ವಿಶಿಷ್ಟತೆಯನ್ನು ಸಾಧಿಸಿರುವ ಲೋಕಯ್ಯ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಅನೂಷಾ, ಕೌಷಿಕ್ ಎಸ್., ಲಾವಣ್ಯ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾನೂನು ಪದವೀಧರರಿಗೆ ಶಿಷ್ಯ ವೇತನ,ಪ್ರವಾಸೋದ್ಯಮ ಇಲಾಖಾ ವತಿಯಿಂದ ಟ್ಯಾಕ್ಸಿ ಖರೀದಿಗೆ ನೆರವು,ಮೀನುಗಾರಿಕೆ ಇಲಾಖೆಯಿಂದ ನೆರವು ಹಾಗೂ ಬಲೆ ವಿತರಿಸಲಾಯಿತು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ರೆಡ್ಡಿ ನಾಯಕ್ ವಂದಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಅಗ್ನಿಶಾಮಕ ದಳದ ವತಿಯಿಂದ ಪ್ರಾತ್ಯಕ್ಷಿಕೆ ಏರ್ಪಡಿಸಲಾಯಿತು.

Saturday, April 10, 2010

ಪ್ರವಾಸೋದ್ಯಮಕ್ಕೆ ಪ್ರಶಸ್ತ ದ.ಕ.ಜಿಲ್ಲೆ: ಶಂಕರಲಿಂಗೇಗೌಡ

ಮಂಗಳೂರು,ಏ.10: ರಸ್ತೆ,ರೈಲು,ಜಲ,ವಾಯುಮಾರ್ಗ ಹಾಗೂ ಐದು ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ಏಕೈಕ ನಗರ ಎಂಬ ಹಿರಿಮೆ ಮಂಗಳೂರಿಗಿದ್ದು, ಪ್ರವಾಸೋದ್ಯಮಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಅತಿ ಪ್ರಶಸ್ತ ಸ್ಥಳ ಎಂದು ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ ಹೇಳಿದರು.
ಅವರು ಏಪ್ರಿಲ್ 9ರಂದು ನಗರದಲ್ಲಿ ಮಂಗಳೂರು ಅಸೋ ಸಿಯೇಷನ್ ಆಫ್ ಟ್ರಾವೆಲ್ ಏಜೆಂಟ್ಸ್ (ಮಾತಾ) ದ ಉದ್ಘಾಟನಾ ಸಮಾ ರಂಭವನ್ನು ನೆರವೇರಿಸಿ ಮಾತ ನಾಡುತ್ತಿದ್ದರು. ಪಕ್ಕದ ರಾಜ್ಯ ಕೇರಳದಲ್ಲಿ ಅವರ ಸಾಂಸ್ಕೃತಿಕ ಕಲೆಗಳಾದ ತ್ರಿಶೂರ್ ಪೂರಂ, ಓಣಂ ಕಾಲದಲ್ಲಿ ದೋಣಿ ಸ್ಪರ್ಧೆಗಳನ್ನು ಉಲ್ಲೇಖಿಸಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹ ಹಲವು ಅದ್ಭುತಗಳಿದ್ದು, ಈ ಕುರಿತು ಪ್ರವಾಸಿಗಳಿಗೆ ಸೂಕ್ತ ಮಾಹಿತಿ ಹಾಗೂ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚು ಚಿಂತನೆ ನಡೆಸಿ ಪ್ರವಾಸೋದ್ಯಮ ಮತ್ತು ಸಾರಿಗೆ ಇಲಾಖೆ ಜೊತೆಯಾಗಿ ಟ್ರಾವೆಲ್ ಏಜೆಂಟ್ ಗಳ ಸಂಪರ್ಕದೊಂದಿಗೆ ಸಮಗ್ರ ಯೋಜನೆ ಹಾಗೂ ಟಾರ್ಗೆಟ್ ಗ್ರೂಪ್ ನ ಜೊತೆ ಸಂವಹನದಲ್ಲಿ ಯಶಸ್ವಿಯಾದರೆ ಜಿಲ್ಲೆ ಉತ್ತಮ ಪ್ರವಾಸಿ ತಾಣವಾಗಿ ರೂಪುಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದರು.
ಈ ನಿಟ್ಟಿನಲ್ಲಿ ಅಕ್ಕಪಕ್ಕದ ಜಿಲ್ಲೆಗಳು ದಕ್ಷಿಣ ಕನ್ನಡದ ಜೊತೆ ಪ್ರವಾಸೋ ದ್ಯಮಕ್ಕೆ ಸಂಬಂಧಿಸಿದ ಪರಸ್ಪರ ಒಪ್ಪಂದಕ್ಕೆ ಮುಂದಾದರೆ ಅವರಿಗೆ ಸಾರಿಗೆ ತೆರಿಗೆ ಕಡಿತ ದಂತಹ ಸೌಲಭ್ಯಗಳನ್ನು ನೀಡುವ ಭರವಸೆಯನ್ನೂ ಅವರು ನೀಡಿದರು. ಇಂತಹ ಅತ್ಯುತ್ತಮಗಳನ್ನು ನಾವು ಹೊಂದಿದ್ದೇವೆ ಎಂಬುದನ್ನು ಇತರರಿಗೆ ತೋರಿಸುವಲ್ಲಿ ನಾವು ಯಶಸ್ವಿಯಾಗಬೇಕಿದೆ ಎಂದು ಶಂಕರ ಲಿಂಗೇಗೌಡ ಹೇಳಿದರು.ಟ್ರಾವೆಲ್ ಏಜೆಂಟ್ ಗಳು ಗ್ಲೋಬಲ್ ನೆಟ್ ವರ್ಕಿಂಗ್ ಜೊತೆ ಸಂಪರ್ಕ ಇರಿಸುವುದರಿಂದಾಗುವ ಲಾಭಗಳನ್ನು ವಿವರಿಸಿದ ಅವರು, ಹೊಸಪೇಟೆಯಲ್ಲಿರುವ ಮಲ್ಲಿಗೆ ಹೊಟೇಲ್ ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರು.
ದಕ್ಷಿಣ ಕನ್ನಡದಲ್ಲಿ ಶೈಕ್ಷಣಿಕ,ಆರೋಗ್ಯ ಹಾಗೂ ನಮ್ಮ ಸ್ಥಳೀಯ ಸಂಸ್ಕೃತಿ ಆಚರಣೆಗಳಿಂದ ಪ್ರವಾಸಿಗಳನ್ನು ಸೆಳೆಯುವುದರಲ್ಲಿ ನಾವು ಯಶಸ್ವಿಯಾಗಬಹುದೆಂದು ಹಿಂದೆ ಪ್ರವಾಸೋದ್ಯಮ ಇಲಾಖಾ ಕಾರ್ಯದರ್ಶಿಗಳು ಆಗಿದ್ದ ಅವರು ನುಡಿದರು. ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ ಗಳ ವ್ಯವಸ್ಥಾಪಕ ನಿರ್ದೇಶಕರಾದ ಎನ್.ಡಿ.ತಿವಾರಿ ಅವರು 'ಮಾತಾ'ದ ಅಧಿಕೃತ ವೆಬ್ ಸೈಟ್ ನ್ನು ಉದ್ಘಾಟಿಸಿ ಮಾತನಾಡಿ,ವಿದೇಶಿ ಪ್ರವಾಸಿಗರಷ್ಟೇ ದೇಶೀ ಪ್ರವಾಸಿಗರಿಗೂ ಆದ್ಯತೆ ನೀಡಬೇಕು ಎಂದರು.ಸಾಹಸ ಮತ್ತು ಇಕೋ ಟೂರಿಸಂಗೆ ಆದ್ಯತೆ ನೀಡುತ್ತಿರುವ ಕುರಿತು ಮಾಹಿತಿ ನೀಡಿದರು.ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಶಿವಲಿಂಗಪ್ಪ ಮಾತನಾಡಿದರು. ಮಾತಾದ ಅಧ್ಯಕ್ಷ ರೋಷನ್ ಪಿಂಟೋ ಉಪಸ್ಥಿತರಿದ್ದರು. ಪಿ ಆರ್ ಒ ಲೂಯಿಸ್ ಪಿಂಟೊ ಸ್ವಾಗತಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯ ಯೋಜನೆ ರೂಪಿಸುವ ಸಂಬಂಧ ವಿಸ್ತೃತ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಆರೋಗ್ಯ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಬೀಚ್ ಪ್ರವಾಸೋದ್ಯಮ, ಇಕೋ ಪ್ರವಾಸೋದ್ಯಮ, ಸೇರಿದಂತೆ ವಿವಿಧ ಸಮಿತಿಗಳನ್ನು ತಜ್ಞರ ನೇತೃತ್ವದಲ್ಲಿ ರಚಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Friday, April 9, 2010

ಸಾಗರ ಮೀನುಗಾರಿಕೆ ನೀತಿ ಪರಿಷ್ಕರಣೆ:ಸಚಿವ ಆನಂದ ಅಸ್ನೋಟಿಕರ್

ಮಂಗಳೂರು,ಏ.9:ರಾಜ್ಯ 300 ಕಿ.ಮೀ ಉದ್ದದ ಕರಾವಳಿ ತೀರ ಪ್ರದೇಶವನ್ನು 3 ಜಿಲ್ಲೆಗಳಲ್ಲಿ ಹೊಂದಿದ್ದು, ಸಾಂಪ್ರದಾಯಿಕ ಮೀನುಗಾರಿಕೆಯ ಪ್ರದೇಶಗಳಲ್ಲಿ ಇತರ ಚಟುವಟಿಕೆಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಆನಂದ ಅಸ್ನೋಟಿಕರ್ ಹೇಳಿದರು.
ಅವರಿಂದು ನಗರದ ಮೀನುಗಾರಿಕಾ ಅಭಿವೃದ್ದಿ ನಿಗಮದ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಗರ ಮೀನುಗಾರಿಕೆ ನೀತಿಯನ್ನು ಪರಿಷ್ಕರಿಸಿ, ಮೀನುಗಾರರಿಗೆ ಸಾಮಾಜಿಕ ಭದ್ರತೆ ಒದಗಿಸಲು ಆದ್ಯತೆ ನೀಡಲಾಗುವುದು ಎಂದರು. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮುಖಾಂತರ ಫಿಶ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಮೀನುಗಾರಿಕೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಇಲ್ಲಿ ದೊರೆಯುವಂತೆ ಮಾಡಲಾಗುವುದು. ಕಡಲ ಮೀನು ಉತ್ಪಾದನೆಯಲ್ಲಿ 2009-10ನೇ ಸಾಲಿನಲ್ಲಿ 3 ಕೋಟಿ ರೂ. ಮೌಲ್ಯದ ಕಡಲ ಮೀನು ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ ಎಂದರು.ಕರಾವಳಿಯ ಪ್ರಮುಖ ಬಂದರುಗಳ ಅಭಿವೃದ್ಧಿಗೆ 198 ಕೋಟಿ ರೂ. ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದ ಸಚಿವರು, ಈ ಪ್ರಸ್ತಾವನೆಯಲ್ಲಿ ಮಂಗಳೂರು ಬಂದರಿನ 3ನೇ ಹಂತದ ಅಭಿವೃದ್ಧಿ ಕಾಮಗಾರಿಗೆ 65 ಕೋಟಿ ರೂ., ಮಲ್ಪೆ ಬಂದರು ಅಭಿವೃದ್ಧಿಗೆ 53 ಕೋಟಿ ರೂ., ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೀನುಗಾರಿಕಾ ಬಂದರಿನ 2ನೇ ಹಂತದ ಅಭಿವೃದ್ಧಿಗೆ 80 ಕೋಟಿ ರೂ., ವೆಚ್ಚದ ಯೋಜನೆ ರೂಪಿಸಲಾಗಿದೆ. ಬಂದರುಗಳಲ್ಲಿ ಹೂಳೆತ್ತುವ ಕಾಮಗಾರಿ ನಡೆಸಲಾಗಿದ್ದು, ಮೀನುಗಾರರ ಅನುಕೂಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿರುವುದನ್ನು ವಿವರಿಸಿದರು. ಸಾಂಪ್ರದಾಯಿಕ ಹಾಗೂ ಬಡ ಮೀನುಗಾರರಿಗೆ ರೂ.5000ಮೌಲ್ಯದ ಮೀನುಗಾರಿಕೆ ಸಲಕರಣೆಗಳ ಕಿಟ್ ಅನ್ನು ಉಚಿತವಾಗಿ ನೀಡುವ ಹೊಸ ಯೋಜನೆಯನ್ನು ಕಳೆದ ಸಾಲಿನಿಂದ ಆರಂಭಿಸಲಾಗಿದೆ ಎಂದ ಅವರು, ಮತ್ಸ್ಯ ಮಹಿಳಾ ಸ್ವಾವಲಂಬನಾ ಯೋಜನೆಯಡಿ ಪ್ರಪ್ರಥಮ ಬಾರಿಗೆ ರೂ. 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, 3 ಮಹಾ ಮಂಡಳಿಗಳ ಮೂಲಕ 2000 ಮಹಿಳಾ ಸ್ವಸಹಾಯ ಗುಂಪು ರಚಿಸಿ ತಲಾ ಗುಂಪಿಗೆ ರೂ.50,000 ದಂತೆ ಆವರ್ತಕ ನಿಧಿಯನ್ನು ಬಿಡುಗಡೆ ಮಾಡಲಾಗಿದೆ. ಮೀನುಗಾರಿಕಾ ಚಟುವಟಿಕೆಗೆ ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಕ್ರಮಕೈಗೊಳ್ಳಲಾಗುವುದು ಎಂದರು. ಮಂಗಳೂರಿನಲ್ಲಿ ಮುಳುಗಿರುವ ನಾಲ್ಕು ಹಡಗುಗಳನ್ನು ತೆರವು ಗೊಳಿಸಲು ಗ್ಲೋಬಲ್ ಟೆಂಡರ್ ಕರೆದು ಸ್ಕ್ರಾಪ್ ಮಾಡಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಮುದ್ರ ಮೀನುಗಾರಿಕೆ ಜಂಟಿ ನಿರ್ದೇಶಕರಾದ ಗಂಗಾಧರ ವಿ.ಮಡಿಕೇರಿ, ಕೆಎಫ್ ಡಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ, ಮೀನುಗಾರಿಕೆ ನಿರ್ದೇಶಕರಾದ ಎಚ್.ಎಸ್.ವೀರಪ್ಪಗೌಡ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಾದ ಸುರೇಶ್ ಕುಮಾರ್, ಸಹಾಯಕ ನಿರ್ದೇಶಕ ಪಾರ್ಶ್ವನಾಥ್,ಮೀನುಗಾರಿಕಾ ನಿಗಮದ ಅಧ್ಯಕ್ಷ ರಾಮಚಂದ್ರ ಬೈಕಂಪಾಡಿ,ಕರ್ನಾಟಕ ಕರಾವಳಿ ಮೀನುಗಾರಿಕೆ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವಾಸುದೇವ ಬೋಳೂರು ಉಪಸ್ಥಿತರಿದ್ದರು.

Thursday, April 8, 2010

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ:ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾರ್ಯಾಗಾರ

ಮಂಗಳೂರು,ಏ.8:ಅಸಂಘಟಿತ ಕಾರ್ಮಿಕ ವಲಯದಲ್ಲಿ ದುಡಿಯುವವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಹಾಗೂ ಅರ್ಹರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ವಾರ್ಷಿಕ ಕನಿಷ್ಠ 3 ಯೋಜನೆಗಳ ಲಾಭ ದೊರೆಯುವಂತಾಗಲು ವ್ಯವಸ್ಥಿತ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಹೇಳಿದರು.
ಅವರಿಂದು ರಾಜ್ಯ ಸರ್ಕಾರ ಮತ್ತು ಜರ್ಮನ್ ಟೆಕ್ನಾಲಜಿ ಕಂಪೆನಿಯ ಸಹಯೋಗ ದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ 2 ತಾಲೂಕುಗಳಲ್ಲಿ ಪೈಲಟ್ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿ ಮನವರಿಕೆ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರದ ನಿರ್ದೇಶನದಂತೆ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಡಳಿತದಿಂದ ಈಗಾಗಲೇ ಹಲವು ಜನಪರ ಯೋಜನೆಗಳು ಜಾರಿಯಲ್ಲಿದ್ದು, ಈ ಯೋಜನೆಗಳ ಅನುಷ್ಠಾನಕ್ಕೆ ಪೂರಕವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ಜಿಟಿಜೆಡ್ ಸಹಯೋಗದೊಂದಿಗೆ ಪೈಲೆಟ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ತಾಲೂಕುಗಳ ಅಸಂಘಟಿತ ಕ್ಷೇತ್ರದ ಕೃಷಿ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಗೃಹಕೃತ್ಯ ಕಾರ್ಮಿಕರು, ಗಾರ್ಮೆಂಟ್ ಉದ್ದಿಮೆಯ ಕಾರ್ಮಿಕರು ಹಾಗೂ ಅಗರಬತ್ತಿ ಕಾರ್ಮಿಕರಿಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದರು. ಜನರ ಸಕ್ರಿಯ ಸಹ ಭಾಗಿತ್ವದಲ್ಲಿ ಅವರ ಆಶೋತ್ತರಗಳಿಗೆ ಸ್ಪಂದಿಸಿದರೆ ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗೆ ಈ ಯೋಜನೆ ಪೂರಕವಾಗಿದೆ ಎಂದೂ ನುಡಿದರು.
ಅಪರ ಕಾರ್ಮಿಕ ಆಯುಕ್ತ ಮಂಜುನಾಥ ಶಾಸ್ತ್ರಿ ಅವರು ಮಾತನಾಡಿ, 2001 ರ ಜನಗಣತಿಯ ಪ್ರಕಾರ ನಮ್ಮಲ್ಲಿ ಶೇಕಡ 92 ಅಸಂಘಟಿತ ಕಾರ್ಮಿಕರಿದ್ದು, ಈ ವರ್ಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ರೂಪಿಸಿದ 2008ರ ಕಾಯಿದೆಯನ್ನು ದೇಶದಲ್ಲೇ ಪ್ರಥಮವಾಗಿ ಕರ್ನಾಟಕದಲ್ಲಿ ಜಾರಿಗೆ ತರಲು ಯೋಜನೆ ರೂಪಿಸಿದ್ದು, ಪ್ರಥಮ ಹಂತವಾಗಿ ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ಗುಲ್ಬರ್ಗಾ ಹಾಗೂ ಬಳ್ಳಾರಿ ಜಿಲ್ಲೆಗಳ 0.6 ಮಿಲಿಯನ್ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿ ಅನುಷ್ಠಾನದ ಹಂತದಲ್ಲಿದೆ ಎಂದರು.
ಮಂಗಳೂರಿನಲ್ಲಿ ಈ ವಲಯದಡಿ ಪ್ರಮುಖವಾಗಿ ಗೃಹಕೃತ್ಯದ ಕಾರ್ಮಿಕರನ್ನು ಗುರುತಿಸಲಾಗಿದೆ. ನಿರ್ಮಾಣ ವಲಯದಲ್ಲೂ ಸಾಕಷ್ಟು ಸಂಖ್ಯೆಯ ಕಾರ್ಮಿಕರಿರುವುದನ್ನು ಗುರುತಿಸಲಾಗಿದೆ ಎಂದರು.ಈ ಯೋಜನೆಯಡಿ ಗ್ರಾಮ ಪಂಚಾಯಿತಿ ಅಥವಾ ನಗರದ ವಾರ್ಡ್ ಮಟ್ಟದಲ್ಲಿ ಕಾರ್ಮಿಕರ ಸೇವಾ ಕೇಂದ್ರ (Workers Facilit- ation Centre) ಗಳನ್ನು ಪ್ರಾರಂಭಿಸಿ ಈ ಕೇಂದ್ರಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಾಯಿಸಿ ಕಾರ್ಮಿಕರಿಗೆ ಅಗತ್ಯವಿರುವ ಸಾಮಾಜಿಕ ಭದ್ರತೆಗಳನ್ನು ಆಧರಿಸಿ, ಕಾರ್ಮಿಕರು ಸರ್ಕಾರ ನೀಡುವ ವಿವಿಧ ಸಾಮಾಜಿಕ ಭದ್ರತೆ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಹಾಗೂ ವಂತಿಗೆ ನೀಡಿ ಪಡೆಯುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ರೂಪಿಸುವಲ್ಲಿ ಸಹಕರಿಸಲಿವೆ. ಅರ್ಹ ಸೇವಾ ಕರ್ತರು ಹಾಗೂ ಆನ್ ಲೈನ್ ಮಾಹಿತಿ ಹೊಂದಿದ ಕಾರ್ಮಿಕ ಸೇವಾ ಕೇಂದ್ರಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಅವಶ್ಯವಿರುವ ಸಾಮಾಜಿಕ ಭದ್ರತೆಗಳನ್ನು ಗುರುತಿಸಿ ಅರ್ಹ ಕಾರ್ಮಿಕರು ಅರ್ಜಿ ಸಲ್ಲಿಸಿ ಈ ಸೌಲಭ್ಯ ಸದ್ಬಳಕೆಯಾಗುವಂತೆ ಕಾರ್ಯ ನಿರ್ವಹಿಸಲಿವೆ ಎಂದು ವಿವರಿಸಿದರು. ಜಿಲ್ಲಾ ಸಮಿತಿಯು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳೊಂದಿಗೆ ನೇರ ಸಂಪರ್ಕ ಹೊಂದಿ ಕಾರ್ಯನಿರ್ವಹಿಸಲಿದೆ ಎಂದರು.
ರಾಜ್ಯ ಮಟ್ಟದ ಸಲಹೆಗಾರರಾದ ಕೆ.ಎಸ್. ಮಂಜುನಾಥ್ ಅವರು ಮಾತನಾಡಿ, ಯೋಜನೆಯ ಉದ್ದೇಶ ಹಾಗೂ ಕರ್ತವ್ಯ ನಿರ್ವಹಿಸುವ ರೀತಿಯನ್ನು ವಿವರಿಸಿದರು. ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಉಪಸ್ಥಿತರಿದ್ದರು. ಜಿಟಿಝಡ್ ನ ನಮ್ರತಾ ಶರ್ಮಾ ವಂದಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈ ಸಂಬಂಧ ಕಾರ್ಯಾಗಾರ ಮತ್ತು ಗುಂಪು ಚಟುವಟಿಕೆಗಳನ್ನು ಹಮ್ಮಿಕೊಂಡು ಫೀಡ್ ಬ್ಯಾಕ್ ಪಡೆಯಲಾಯಿತು.

Tuesday, April 6, 2010

ಮಂಗಳಗಂಗೋತ್ರಿ ಘಟಿಕೋತ್ಸವ: ಏಳು ಸಾಧಕರಿಗೆ ಗೌರವ ಡಾಕ್ಟರೇಟ್

ಮಂಗಳೂರು,ಏ.6: ವಿಶ್ವವೊಂದು ಗ್ರಾಮವಾಗಿ ಮಾರ್ಪಾಡಾಗಿರುವ ಇಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದಲ್ಲಿರುವ ಅವಕಾಶಗಳ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸವನ್ನು ಮಾಡಬೇಕೆಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಡಾ.ಶಶಿ ತರೂರ್ ತಮ್ಮ ಘಟಿಕೋತ್ಸವ ಭಾಷಣದಲ್ಲಿ ಹೇಳಿದರು. ವಿದೇಶಾಂಗ ನೀತಿ,ಸಂಪರ್ಕ,ಬಾಂದವ್ಯದ ಬಗ್ಗೆ ಇರುವ ವಿಫುಲ ಅವಕಾಶಗಳಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ವಿಶ್ವ ವಿದ್ಯಾಲಯಗಳು ಮಾರ್ಗದರ್ಶಿಯಾಗಬೇಕು ಎಂದರು.
ಅವರಿಂದು ಮಂಗಳ ಗಂಗೋತ್ರಿಯ 28 ನೇ ವಾರ್ಷಿಕ ಘಟಿಕೋತ್ಸವ ದಲ್ಲಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲೇ ಅಂದಿನ ನಮ್ಮ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರು ಅವರು ಜಾಗತಿಕ ನೀತಿ ಮತ್ತು ಜಾಗತೀಕರಣದ ಬಗ್ಗೆ ಮಾಹಿತಿ ನೀಡಿದ್ದರು. ನಮ್ಮ ಅಲಿಪ್ತ ನೀತಿ, ಮಾನವ ಹಕ್ಕು ರಕ್ಷಣೆ,ನಿರಾಶ್ರಿತರ ಬಗ್ಗೆ ಸ್ಪಷ್ಟ ನೀತಿಯನ್ನು ರೂಪಿಸಲಾಗಿತ್ತು. ಇಂದು ಜಲ,ವಾಯುಮಾಲಿನ್ಯದಂತಹ ಸಮಸ್ಯೆಗಳ ಬಗ್ಗೆ ಚಿಂತಿಸುವಾಗ ನಮ್ಮ ದೇಶಕ್ಕೆ ಸೀಮಿತವಾಗಿ ಚಿಂತಿಸದೆ ಜಾಗತಿಕ ಮಟ್ಟದಲ್ಲಿ ಚಿಂತಿಸುವ ಅಗತ್ಯವೇ ನಮ್ಮ ಬೆಳವಣಿಗೆಯನ್ನು ಬಿಂಬಿಸುತ್ತಿದೆ. ಹಾಗಾಗಿ ವಿಶ್ವ ವಿದ್ಯಾನಿಲಯದಿಂದ ಹೊರಬರುವ ಮಕ್ಕಳೂ ಜಾಗತಿಕ ಪ್ರಜ್ಞೆಯನ್ನು ಮೆರೆದು ಬೆಳೆಯಬೇಕು ಎಂದು ಅವರು ಸಲಹೆ ಮಾಡಿದರು.ಮಂಗಳೂರು ಇಂದು ವಿಶ್ವ ಭೂಪಟದಲ್ಲಿ ವಿದ್ಯಾ ನಗರಿಯಾಗಿ ಗುರುತಿ ಸಲ್ಪಟ್ಟಿದ್ದು, ಈ ಗುರುತಿಸಿ ಕೊಳ್ಳುವಿಕೆಯ ಲಾಭವನ್ನು ವಿದ್ಯಾರ್ಥಿಗಳು ಪಡೆಯ ಬೇಕೆಂದರು.ವಿದೇಶಾಂಗ ಸಂಪರ್ಕ, ವ್ಯವಹಾರಗಳ ಬಗ್ಗೆಗಿನ ಅವಜ್ಞೆಯನ್ನು ಕಳೆದುಕೊಂಡು ವಿಶ್ವದ ವಿವಿಧ ಭಾಷಾ ಕಲಿಕೆ ಮತ್ತು ಉತ್ತಮ ಗುಣಮಟ್ಟದ ಸಂಶೋಧನೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಯುವಜನಾಂಗ ಆಸಕ್ತಿ ವಹಿಸಬೇಕೆಂದರು.ಘನತೆವೆತ್ತ ರಾಜ್ಯಪಾಲರು ಹಾಗೂ ಕುಲಾಧಿ ಪತಿಗಳಾದ ಎಚ್ ಆರ್ ಭಾರಧ್ವಾಜ್ ಅವರು ಅಣು ವಿಜ್ಞಾನಿ ಡಾ.ರಾಕೇಶ್ ಕುಮಾರ್ ಭಂಡಾರಿ (ಕೋಲ್ಕತ್ತಾ), ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ (ಸಮಾಜ ಸೇವೆ), ಕೋಳ್ಯೂರು ರಾಮಚಂದ್ರ ರಾವ್ (ಯಕ್ಷಗಾನ,ಕಲೆ), ಡಾ.ಮೋಹನ ಆಳ್ವ (ಶಿಕ್ಷಣ, ಕ್ರೀಡೆ,ಸಾಂಸ್ಕೃತಿಕ ಪ್ರೋತ್ಸಾಹಕ), ಎ.ಎಸ್. ವಿಷ್ಣು ಭರತ್ (ಸಮಾಜ ಸೇವೆ), ಮಧುರಾ ಎಂ ಛತ್ರಪತಿ(ಸಮಾಜ ಸೇವೆ), ಆರ್.ಚೆನ್ ರಾಜ್ ಜೈನ್ (ಶಿಕ್ಷಣ,ಸಮಾಜಸೇವೆ)ಇವರುಗಳಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು. 30ಮಂದಿಗೆ ಚಿನ್ನದ ಪದಕ, 56 ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸ್ನಾತಕೋತ್ತರ ಪದವೀಧರರು 48, ಪದವಿ 22 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 70 ಮಂದಿಯನ್ನು ಗೌರವಿಸಲಾಯಿತು. ಸಹಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಉಪಸ್ಥಿತರಿದ್ದರು. ಕುಲಪತಿ ಪ್ರೊ. ಟಿ.ಸಿ. ಶಿವಶಂಕರ್ ಮೂರ್ತಿ ಸ್ವಾಗತಿಸಿದರು. ವಿವಿಧ ನಿಕಾಯಗಳ ಡೀನ್ ಗಳು, ರಿಜಿಸ್ಟ್ರಾರ್ ಡಾ.ಚಿನ್ನಪ್ಪಗೌಡ ಘಟಿಕೋತ್ಸವದ ವೇದಿಕೆಯಲ್ಲಿದ್ದರು.

Saturday, April 3, 2010

ಏಪ್ರಿಲ್ 15ರಿಂದ ಮನೆಗಣತಿ-ಜನಗಣತಿಗೆ ಚಾಲನೆ, ಅಧಿಕಾರಿಗಳ ಸಭೆ

ಮಂಗಳೂರು, ಏಪ್ರಿಲ್ 3 :2011ರಲ್ಲಿ ನಡೆಸಲುದ್ದೇಶಿಸಿರುವ ಜನಗಣತಿಯು ಯಶಸ್ವಿಯಾಗಿ ನಡೆಯಲು ಜಿಲ್ಲಾಡಳಿತ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲಾಧಿಕಾರಿ ಮತ್ತು ನಗರಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಜನಗಣತಿ ಜಿಲ್ಲೆಯಲ್ಲಿ ಯಾವುದೇ ಲೋಪದೋಷಗಳಿಲ್ಲದೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಹೇಳಿದರು.
ಅವರಿಂದು ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ 1872ರಲ್ಲಿ ಜನಗಣತಿ ಆರಂಭವಾಗಿದ್ದು, ಪ್ಲೇಗ್ ನಂತಹ ಮಹಾಮಾರಿಯಿರಲಿ ಅಥವಾ ಮಹಾಯುದ್ಧಗಳಿರಲಿ ಜನಗಣತಿ ನಿರಂತರ ಹಾಗೂ ಕರಾರುವಕ್ಕಾಗಿ ನಡೆಸಿ ಕೊಂಡು ಬಂದ ಇತಿಹಾಸ ನಮ್ಮದು ಎಂದ ಅಪರ ಜಿಲ್ಲಾಧಿಕಾರಿಗಳು, ಮನೆಗಣತಿ ಮತ್ತು ಜನಗಣತಿಗಳು ಕರಾರುವಕ್ಕಾಗಿ ನಡೆಯಲು ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಪ್ರತಿಯೊಬ್ಬ ನಾಗರೀಕರು ಹೊಣೆಯರಿತು ಮಾಹಿತಿ ನೀಡಿ ಸಹಕರಿಸಬೇಕೆಂದು ಸಭೆಯಲ್ಲಿ ಕೋರಿದರು.ಜಿಲ್ಲೆಯಲ್ಲಿ 650 ರಿಂದ 700 ಜನಸಂಖ್ಯೆಯಂತೆ ಮತ್ತು 150 ರಿಂದ 200 ಮನೆಯ ವ್ಯಾಪ್ತಿಗೆ ಒಂದು ಬ್ಲಾಕ್ ರಚಿಸಿ 6 ಬ್ಲಾಕ್ ಗಳಿಗೆ ಒಬ್ಬ ಮೇಲ್ವಿ ಚಾರಕರನ್ನು ನೇಮಿಸಲಾಗಿದೆ. ಗಣತಿ ಸಂಬಂದ ಅಗತ್ಯ ತರಬೇತಿಯನ್ನು ನೀಡಲಾಗಿದ್ದು, ಮಾರ್ಚ್ 23,24,25 ರಂದು ಮಾಸ್ಟರ್ ಟ್ರೈನರ್ಸ್ ಗೆ 3 ದಿನಗಳ ಸಮಗ್ರ ತರಬೇತಿ ನೀಡಲಾಗಿದೆ. ತಾಲೂಕು ತಹಸೀಲ್ದಾರರು ಮತ್ತು ಮುನ್ಸಿಪಲ್ ಚೀಫ್ ಆಫಿಸರ್ ಗಳಿಗೆ 4 ದಿನದ ತರಬೇತಿ ನೀಡಲಾಗಿದೆ. ಏಪ್ರಿಲ್ 9 ರಿಂದ 13ರ ವರೆಗೆ ಮುಖ್ಯ ತರಬೇತುದಾರರು ಗಣತಿದಾರರಿಗೆ ತರಬೇತಿ ನೀಡಲಿರುವರು.
ಇಂದು ನಡೆದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳ ಹೊಣೆಗಾರಿಕೆಯನ್ನು ವಿವರಿಸಿದರು. ಮನೆಗಣತಿ, ಜನಗಣತಿಯಲ್ಲಿ ಲೋಪಗಳಾದರೆ, ದೂರುಗಳಿದ್ದರೆ ನಗರ ಪಾಲಿಕೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೂರು ವಿಭಾಗ ತೆರೆಯಲಾಗುವುದು ಹಾಗೂ ದೂರು ದಾಖಲಿಸಲು ಟೋಲ್ ಫ್ರೀ ನಂಬರ್ 1077 ಗೆ ಕರೆ ಮಾಡಬಹುದಾಗಿದೆ. ಜಿಲ್ಲಾಧಿಕಾರಿ ಮತ್ತು ಮಹಾನಗರಪಾಲಿಕೆ ಆಯುಕ್ತರ ನೇತೃತ್ವದಲ್ಲಿ, ಸಾಂಖ್ಯಿಕ ಅಧಿಕಾರಿಗಳು, ಸಹಾಯಕ ದಂಡಾಧಿಕಾರಿಗಳು, ತಹಸೀಲ್ದಾರರು ಗಣತಿಯ ಮೇಲ್ವಿಚಾರಣೆ ನಡೆಸುವರು. ಕಾರ್ಮಿಕ, ಶ್ರಮಿಕ ವರ್ಗ ಸೇರಿದಂತೆ ಅತೀ ಹಿಂದುಳಿದ ವರ್ಗದವರು ಗಣತಿಯಲ್ಲಿ ದಂತೆ ಸೇರ್ಪಡೆ ಮಾಡಿಕೊಳ್ಳಲು ಐದು ಎನ್ ಜಿ ಒ ಗಳನ್ನು ತಂಡದಲ್ಲಿ ಸೇರ್ಪಡೆಗೊಳಿಸಲಾಗಿದೆ. ಜಿಲ್ಲಾ ಅಂಕಿ ಸಂಖ್ಯೆ ಅಧಿಕಾರಿ ಕೆ.ರಮೇಶ್ ಉಪಾಧ್ಯ ಅವರು ಜನಗಣತಿ ಸಂದರ್ಭದಲ್ಲಿ ಯಾವುದೇ ಲೋಪಗಳು ಸಂಭವಿಸಿದಂತೆ ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆ ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸಭೆಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ವಿದ್ಯುತ್ ಕೊರತೆ ನೀಗಲು ಅಗತ್ಯ ಕ್ರಮ: ಸಿ ಎಂ. ಯಡಿಯೂರಪ್ಪ

ಮಂಗಳೂರು,ಮಾರ್ಚ್ 3:ರಾಜ್ಯ ಎದುರಿಸುತ್ತಿರುವ ವಿದ್ಯುತ್ ಕ್ಷಾಮ ನಿವಾರಣೆಗೆ ವಿದ್ಯುತ್ ಕಾಯಿದೆ 2003ರ ಸೆಕ್ಷನ್11 ರಡಿ ರಾಜ್ಯದಲ್ಲಿ ಖಾಸಗಿ ಸಂಸ್ಥೆಗಳಿಂದ ಉತ್ಪಾದಿಸಲ್ಪಡುವ ವಿದ್ಯುಚ್ಛಕ್ತಿಯನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡದಂತೆ ನಿರ್ಬಂಧ ಹೇರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಅವರಿಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿ, ಇದರಿಂದಾಗಿ ರಾಜ್ಯಕ್ಕೆ ಅಂದಾಜು 500ರಿಂದ 600 ಮೆಗಾವ್ಯಾಟ್ ವಿದ್ಯುಚ್ಛಕ್ತಿ ದೊರೆಯಲಿದ್ದು, ವಿದ್ಯುತ್ ಅಭಾವ ನೀಗಿಸಲು ನೆರವಾಗಲಿದೆ ಎಂದರು. ರಾಜ್ಯ ಎದುರಿಸುತ್ತಿರುವ ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಏಪ್ರಿಲ್ 5ರಂದು ಹಿರಿಯ ಅಧಿಕಾರಿಗಳ ಸಭೆ ಕರೆಯುವುದಾಗಿ ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2008-09 ನೇ ಸಾಲಿನಲ್ಲಿ 350 ಕೋಟಿ ರೂ. ,2009-10ನೇ ಸಾಲಿನಲ್ಲಿ 2,350 ಕೋಟಿ ಸದ್ಬಳಕೆ ಯಾಗಿದ್ದು, ಈ ಅಭಿವೃದ್ಧಿಯನ್ನು ಕೇಂದ್ರಸರ್ಕಾರ ಶ್ಲಾಘಿಸಿದ್ದು, 10-11 ನೇ ಸಾಲಿಗೆ 4,600 ಕೋಟಿ ರೂ., ಬಿಡುಗಡೆ ಮಾಡಿದೆ ಎಂದರು. ಜೂನ್ ತಿಂಗಳಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಈ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದಲ್ಲದೆ, ಹೊಸ ಉದ್ಯಮಗಳಿಂದ ಕೈಗಾರಿಕೆಗಳ ಅಭಿವೃದ್ಧಿ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು. ಮಂಗಳೂರಿನಲ್ಲಿ ಕಂದಾಯ ಇಲಾಖೆ ಜಾರಿಗೆ ತಂದಿರುವ ಪಡಸಾಲೆ ಯೋಜನೆ ಯಶಸ್ವಿಯಾಗಿದ್ದು, ಒಂದೇ ಸೂರಿನಡಿ ವಿವಿಧ ಸೇವೆ ಒದಗಿಸುವ ಉತ್ತಮ ಯೋಜನೆಯನ್ನು ಇತರ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಶಾಸಕ ಎನ್. ಯೋಗಿಶ್ ಭಟ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಸಹಾಯಕ ದಂಡಾಧಿಕಾರಿ ಡಾ.ಹರೀಶ್ ಕುಮಾರ್ ಉಪಸ್ಥಿತರಿದ್ದರು.