Friday, April 2, 2010

ರಾಜ್ಯ ಕೈಗಾರಿಕಾ ಕ್ಷೇತ್ರದ ಅಭಿವೃದ್ದಿಗೆ ಹೊಸ ತಿರುವು ಸಿ ಎಂ ಯಡಿಯೂರಪ್ಪ

ಮಂಗಳೂರು,ಏಪ್ರಿಲ್ 2: ಹಾಲಿನ ದರ ಏರಿಕೆಯ ಬಗ್ಗೆ ಶನಿವಾರ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣ ದಲ್ಲಿಂದು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು,ದೇಶದ ಇತರ ರಾಜ್ಯಗಳಲ್ಲಿ ಈಗಾಗಲೇ ಹಾಲಿನ ದರ ಏರಿಕೆಯಾಗಿದೆ, ರಾಜ್ಯದ ರೈತರ ಹಿತ ದೃಷ್ಟಿಯಿಂದ ಹಾಲಿನ ದರ ಏರಿಕೆ ಅನಿವಾರ್ಯ ವಾಗಿದ್ದು,ಜನ ಸಾಮಾನ್ಯರನ್ನು ಗಮನದಲ್ಲಿಟ್ಟು ದರ ಏರಿಕೆ ಮಾಡಲಾಗುವುದು, ಈ ಬಗ್ಗೆ ನಾಳೆ ಸಭೆ ಸೇರಿ ಚರ್ಚೆ ನಡೆಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೈಗಾರಿಕಾ ಅಭಿವೃದ್ಧಿಗೆ ಹೊಸ ತಿರುವು: ಮುಂಬೈ ಉದ್ಯಮಿಗಳ ಭೇಟಿ ಯಶಸ್ವಿ ಯಾಗಿದ್ದು, ಈ ಭೇಟಿಯಿಂದ ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೊಸ ತಿರುವು ದೊರೆತಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಜೂನ್ ತಿಂಗಳಿನಲ್ಲಿ ನಡೆಯ ಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರಕವಾಗಿ ಮುಂಬೈಯಲ್ಲಿ ನಡೆದ ಸಭೆಯಲ್ಲಿ ಎಲ್ ಅಂಡ್ ಟಿ, ಟಾಟಾ, ಬಿರ್ಲ, ಗೋದ್ರೆಜ್, ಹಿಂದೂಜಾ,ಎಸ್ಸಾರ್, ಬಾಬಾ ಕಲ್ಯಾಣಿ ಸೇರಿದಂತೆ 300 ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.ಈ ಪ್ರತಿಷ್ಠಿತ ಕಂಪೆನಿಗಳು ರಾಜ್ಯದಲ್ಲಿ ರೈಲು, ಪ್ರವಾಸೋದ್ಯಮ,ಸಿಮೆಂಟ್ ಮತ್ತು ಉಕ್ಕು ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ. ಈ ಸಭೆ ಕೈಗಾರಿಕಾ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯಕ್ಕೆ ಆಶಾದಾಯಕ ಬೆಳವಣಿಗೆ ಎಂದರು. ಮುಂಬೈ ಬಳಿಕ ಚೆನ್ನೈಗೆ ಭೇಟಿ ನೀಡಿ ಅಲ್ಲಿನ ಉದ್ಯಮಿಗಳ ಜೊತೆ ಸಭೆ ನಡೆಸುವುದಾಗಿ ತಿಳಿಸಿದ ಅವರು,ಜಾಗತಿಕ ಹೂಡಿಕೆದಾರರ ಸಮಾವೇಶದ ಬಳಿಕ ಜಿಲ್ಲಾ ಕೇಂದ್ರದಲ್ಲಿ ಭೂ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯತ್ ಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಪ್ರಿಲ್ -ಮೇ ತಿಂಗಳೊಳಗೆ ಚುನಾವಣೆ ನಡೆಸಲಾಗುವುದು. ಅಧಿಕಾರ ವಿಕೇಂದ್ರೀಕರಣದ ಬಗ್ಗೆ ವಿಶೇಷ ಒಲವು ಇರಿಸಿಕೊಂಡಿದ್ದು, ಈ ಬಗ್ಗೆ ಅಧಿಕಾರಿಗಳ ಸಭೆ ಕರೆಯುವುದಾಗಿ ಹೇಳಿದರು.
ಬಜೆಟ್ ನಲ್ಲಿ ತಿಳಿಸಿರುವ ಅಭಿವೃದ್ಧಿಗಳ ಕುರಿತು ಈಗಾಗಲೇ ಸರಕಾರ ಕಾರ್ಯೋನ್ಮುಖವಾಗಿದ್ದು, ಮೀನುಗಾರಿಕಾ ನೀತಿಯ ಬಗ್ಗೆಯೂ ತಕ್ಷಣವೇ ತೀರ್ಮಾಣ ಕೈಗೊಳ್ಳುವ ಬಗ್ಗೆ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಮೇಯರ್ ರಜನಿ ದುಗ್ಗಣ್ಣ, ಶಾಸಕ ಯೋಗಿಶ್ ಭಟ್,ಸಂಸದ ನಳಿನ್ ಕುಮಾರ್ ಕಟೀಲ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಅವರು ಸ್ವಾಗತಿಸಿದರು.