Thursday, April 8, 2010

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ:ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾರ್ಯಾಗಾರ

ಮಂಗಳೂರು,ಏ.8:ಅಸಂಘಟಿತ ಕಾರ್ಮಿಕ ವಲಯದಲ್ಲಿ ದುಡಿಯುವವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಹಾಗೂ ಅರ್ಹರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ವಾರ್ಷಿಕ ಕನಿಷ್ಠ 3 ಯೋಜನೆಗಳ ಲಾಭ ದೊರೆಯುವಂತಾಗಲು ವ್ಯವಸ್ಥಿತ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಹೇಳಿದರು.
ಅವರಿಂದು ರಾಜ್ಯ ಸರ್ಕಾರ ಮತ್ತು ಜರ್ಮನ್ ಟೆಕ್ನಾಲಜಿ ಕಂಪೆನಿಯ ಸಹಯೋಗ ದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ 2 ತಾಲೂಕುಗಳಲ್ಲಿ ಪೈಲಟ್ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿ ಮನವರಿಕೆ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರದ ನಿರ್ದೇಶನದಂತೆ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಡಳಿತದಿಂದ ಈಗಾಗಲೇ ಹಲವು ಜನಪರ ಯೋಜನೆಗಳು ಜಾರಿಯಲ್ಲಿದ್ದು, ಈ ಯೋಜನೆಗಳ ಅನುಷ್ಠಾನಕ್ಕೆ ಪೂರಕವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ಜಿಟಿಜೆಡ್ ಸಹಯೋಗದೊಂದಿಗೆ ಪೈಲೆಟ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ತಾಲೂಕುಗಳ ಅಸಂಘಟಿತ ಕ್ಷೇತ್ರದ ಕೃಷಿ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಗೃಹಕೃತ್ಯ ಕಾರ್ಮಿಕರು, ಗಾರ್ಮೆಂಟ್ ಉದ್ದಿಮೆಯ ಕಾರ್ಮಿಕರು ಹಾಗೂ ಅಗರಬತ್ತಿ ಕಾರ್ಮಿಕರಿಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದರು. ಜನರ ಸಕ್ರಿಯ ಸಹ ಭಾಗಿತ್ವದಲ್ಲಿ ಅವರ ಆಶೋತ್ತರಗಳಿಗೆ ಸ್ಪಂದಿಸಿದರೆ ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗೆ ಈ ಯೋಜನೆ ಪೂರಕವಾಗಿದೆ ಎಂದೂ ನುಡಿದರು.
ಅಪರ ಕಾರ್ಮಿಕ ಆಯುಕ್ತ ಮಂಜುನಾಥ ಶಾಸ್ತ್ರಿ ಅವರು ಮಾತನಾಡಿ, 2001 ರ ಜನಗಣತಿಯ ಪ್ರಕಾರ ನಮ್ಮಲ್ಲಿ ಶೇಕಡ 92 ಅಸಂಘಟಿತ ಕಾರ್ಮಿಕರಿದ್ದು, ಈ ವರ್ಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ರೂಪಿಸಿದ 2008ರ ಕಾಯಿದೆಯನ್ನು ದೇಶದಲ್ಲೇ ಪ್ರಥಮವಾಗಿ ಕರ್ನಾಟಕದಲ್ಲಿ ಜಾರಿಗೆ ತರಲು ಯೋಜನೆ ರೂಪಿಸಿದ್ದು, ಪ್ರಥಮ ಹಂತವಾಗಿ ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ಗುಲ್ಬರ್ಗಾ ಹಾಗೂ ಬಳ್ಳಾರಿ ಜಿಲ್ಲೆಗಳ 0.6 ಮಿಲಿಯನ್ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿ ಅನುಷ್ಠಾನದ ಹಂತದಲ್ಲಿದೆ ಎಂದರು.
ಮಂಗಳೂರಿನಲ್ಲಿ ಈ ವಲಯದಡಿ ಪ್ರಮುಖವಾಗಿ ಗೃಹಕೃತ್ಯದ ಕಾರ್ಮಿಕರನ್ನು ಗುರುತಿಸಲಾಗಿದೆ. ನಿರ್ಮಾಣ ವಲಯದಲ್ಲೂ ಸಾಕಷ್ಟು ಸಂಖ್ಯೆಯ ಕಾರ್ಮಿಕರಿರುವುದನ್ನು ಗುರುತಿಸಲಾಗಿದೆ ಎಂದರು.ಈ ಯೋಜನೆಯಡಿ ಗ್ರಾಮ ಪಂಚಾಯಿತಿ ಅಥವಾ ನಗರದ ವಾರ್ಡ್ ಮಟ್ಟದಲ್ಲಿ ಕಾರ್ಮಿಕರ ಸೇವಾ ಕೇಂದ್ರ (Workers Facilit- ation Centre) ಗಳನ್ನು ಪ್ರಾರಂಭಿಸಿ ಈ ಕೇಂದ್ರಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಾಯಿಸಿ ಕಾರ್ಮಿಕರಿಗೆ ಅಗತ್ಯವಿರುವ ಸಾಮಾಜಿಕ ಭದ್ರತೆಗಳನ್ನು ಆಧರಿಸಿ, ಕಾರ್ಮಿಕರು ಸರ್ಕಾರ ನೀಡುವ ವಿವಿಧ ಸಾಮಾಜಿಕ ಭದ್ರತೆ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಹಾಗೂ ವಂತಿಗೆ ನೀಡಿ ಪಡೆಯುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ರೂಪಿಸುವಲ್ಲಿ ಸಹಕರಿಸಲಿವೆ. ಅರ್ಹ ಸೇವಾ ಕರ್ತರು ಹಾಗೂ ಆನ್ ಲೈನ್ ಮಾಹಿತಿ ಹೊಂದಿದ ಕಾರ್ಮಿಕ ಸೇವಾ ಕೇಂದ್ರಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಅವಶ್ಯವಿರುವ ಸಾಮಾಜಿಕ ಭದ್ರತೆಗಳನ್ನು ಗುರುತಿಸಿ ಅರ್ಹ ಕಾರ್ಮಿಕರು ಅರ್ಜಿ ಸಲ್ಲಿಸಿ ಈ ಸೌಲಭ್ಯ ಸದ್ಬಳಕೆಯಾಗುವಂತೆ ಕಾರ್ಯ ನಿರ್ವಹಿಸಲಿವೆ ಎಂದು ವಿವರಿಸಿದರು. ಜಿಲ್ಲಾ ಸಮಿತಿಯು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳೊಂದಿಗೆ ನೇರ ಸಂಪರ್ಕ ಹೊಂದಿ ಕಾರ್ಯನಿರ್ವಹಿಸಲಿದೆ ಎಂದರು.
ರಾಜ್ಯ ಮಟ್ಟದ ಸಲಹೆಗಾರರಾದ ಕೆ.ಎಸ್. ಮಂಜುನಾಥ್ ಅವರು ಮಾತನಾಡಿ, ಯೋಜನೆಯ ಉದ್ದೇಶ ಹಾಗೂ ಕರ್ತವ್ಯ ನಿರ್ವಹಿಸುವ ರೀತಿಯನ್ನು ವಿವರಿಸಿದರು. ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಉಪಸ್ಥಿತರಿದ್ದರು. ಜಿಟಿಝಡ್ ನ ನಮ್ರತಾ ಶರ್ಮಾ ವಂದಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈ ಸಂಬಂಧ ಕಾರ್ಯಾಗಾರ ಮತ್ತು ಗುಂಪು ಚಟುವಟಿಕೆಗಳನ್ನು ಹಮ್ಮಿಕೊಂಡು ಫೀಡ್ ಬ್ಯಾಕ್ ಪಡೆಯಲಾಯಿತು.