Monday, April 19, 2010

ಮೀನುಗಾರಿಕಾ ಬೋಟ್ ಹಾನಿ, ಉಸ್ತುವಾರಿ ಸಚಿವರಿಂದ ಸೂಕ್ತ ಪರಿಹಾರದ ಭರವಸೆ

ಮಂಗಳೂರು,ಎಪ್ರಿಲ್,19: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡದ ಕರಾವಳಿಯಲ್ಲಿ ರವಿವಾರ ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ನಗರದ ತೋಟ ಬೆಂಗ್ರೆಯಲ್ಲಿ ನಿಲ್ಲಿಸಿದ್ದ 12 ಮೀನುಗಾರಿಕಾ ದೋಣಿಗಳಿಗೆ ಹಾನಿಯಾಗಿದೆ.ಇದರಲ್ಲಿ ಮೂರು ದೋಣಿಗಳು ಭಾಗಶ: ಮುಳುಗಿದ್ದು, ಇತರ ದೋಣಿಗಳಿಗೆ ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ.
ಮೀನುಗಾರಿಕಾ ದೋಣಿಗಳು ಹಾನಿಗೀಡಾದ ತೋಟ ಬೆಂಗ್ರೆ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ಹಾನಿಗೊಳಗಾದ ಮೀನುಗಾರಿಕಾ ಬೋಟುಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿದರು.ಬಂದರುಗಳಲ್ಲಿ ಹೂಳೆತ್ತದಿರುವುದರಿಂದ ಇಂತಹ ಸಮಸ್ಯೆಗಳು ಪುನರಾವರ್ತನೆಯಾಗುತ್ತಿದೆ,ಕರಾವಳಿ ತೀರದಲ್ಲಿ ಡ್ರೆಜ್ಜಿಂಗ್ ಮಾಡುವ ಅವಶ್ಯಕತೆ ಇದ್ದು,10 ಕೋಟಿ ರೂಪಾಯಿಗಳ ಬೇಡಿಕೆ ಸರ್ಕಾರದ ಮುಂದಿದೆ.ಈ ಸಂಬಂಧ ಶಾಸಕರಾದ ಯೋಗಿಶ್ ಭಟ್ ಅವರು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.ಶೀಘ್ರದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಹೊಸ ಡ್ರೆಜ್ಜಿಂಗ್ ಮೆಶೀನ್ ಖರೀದಿ ಮತ್ತು ನಿರ್ವಹಣೆ ಅತ್ಯಂತ ವೆಚ್ಚದಾಯಕವಾಗಿದ್ದು, ಬಾಡಿಗೆ ಆಧಾರದಲ್ಲೇ ಮೆಷಿನ್ ತರಿಸಿ ಕೆಲಸ ಮುಗಿಸುವುದು ಅನುಕೂಲಕರವಾಗಿದೆ ಎಂದ ಸಚಿವರು,ಅಳಿವೆ ಬಾಗಿಲಿನಲ್ಲಿ ಈ ಹಿಂದೆ ಮುಳುಗಿದ್ದ ಮೀನುಕಾರಿಕಾ ದೋಣಿಯಿಂದ ಇತರ ದೋಣಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ಈ ದೋಣಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ದವಾಗಿದೆ ಎಂದರು. ಶಾಸಕ ಎನ್. ಯೋಗಿಶ್ ಭಟ್, ಪಾಲಿಕೆ ಸದಸ್ಯೆ ಶಕುಂತಲಾ ಉಪಸ್ಥಿತರಿದ್ದರು.
ಅಂದಾಜು ನಷ್ಡ: ಮೀನುಗಾರಿಕಾ ಉಪ ನಿರ್ದೇಶಕರು ಬೋಟುಗಳ ಒಟ್ಟು ನಷ್ಟ ಸುಮಾರು 5 ಲಕ್ಷ ರೂ. ಎಂದು ತಿಳಿಸಿದ್ದಾರೆ