Wednesday, April 14, 2010

ಡಾ. ಅಂಬೇಡ್ಕರ್ ಮಾರ್ಗದರ್ಶನದಲ್ಲಿ ಸಾಮಾಜಿಕ ಅಭಿವೃದ್ಧಿ: ಸಚಿವ ಪಾಲೆಮಾರ್

ಮಂಗಳೂರು,ಏ.14: ಸಂವಿಧಾನಶಿಲ್ಪಿ, ಸಾಮಾಜಿಕ ಪರಿವರ್ತನೆಯ ಹರಿಕಾರರಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ತೋರಿದ ಮಾರ್ಗದರ್ಶನದಲ್ಲಿ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತಿದ್ದು, ಸಮಾನತೆಯ ನವಸಮಾಜ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಹೇಳಿದರು.
ಇಂದು ನಗರದ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ರತ್ನ ಡಾ.ಬಿ. ಆರ್.ಅಂಬೇಡ್ಕರ್ ಅವರ 119ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಿಂದುಳಿದವರ ಅಭಿವೃದ್ಧಿಗಾಗಿರುವ ಇಲಾಖೆ ಹಾಗೂ ಮಹಾನಗರಪಾಲಿಕೆ ಮುಖಾಂತರ ಹಿಂದುಳಿದವರ ಅಭಿವೃದ್ಧಿಗೆ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ಹಾಗೂ ಫಲಾನುಭವಿಗಳ ವಿವರವನ್ನು ಸಚಿವರು ನೀಡಿದರಲ್ಲದೆ, ದೇಶವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಲು ಹಾದಿ ತೋರಿದ ಮಾನವತವಾದಿ ಅಂಬೇಡ್ಕರ್ ಅವರನ್ನು ಸ್ಮರಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾ ಸದಸ್ಯರಾದ ಎನ್ ಯೋಗೀಶ್ ಭಟ್ ಅವರು, ರಾಷ್ಟ್ರೀಯ ಚಿಂತನೆ ಇಂದಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಎಂದರು. ಸರ್ಕಾರ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಭಾಗ್ಯಲಕ್ಷ್ಮಿಯಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು ಜನಪರ ಯೋಜನೆಗಳಿಂದಾಗುವ ಸಮಾಜಮುಖಿ ಪರಿವರ್ತನೆಯನ್ನು ಗುರುತಿಸಬೇಕೆಂದರು. ಅಗತ್ಯಕ್ಕೆ ಪೂರಕವಾಗಿ ಯೋಜನೆ ರೂಪಿಸುವುದನ್ನು ಪ್ರತಿಪಾದಿಸಿದ ಅವರು, ನಗರದಲ್ಲಿ ಸಾಕಷ್ಟು ಸಾಮಾಜಿಕ ಪರಿವರ್ತನೆ ಹಾಗೂ ಅಭಿವೃದ್ಧಿ ಸಾಧ್ಯವಾಗಿದೆ ಎಂದು ನುಡಿದರು. ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರು ಹಾಗೂ ನಿರ್ದೇಶಕರು ಗಾಂಧಿ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ.ಎಲ್.ಧರ್ಮ ಅವರು ಮುಖ್ಯ ಭಾಷಣಕಾರರಾಗಿದ್ದರು. ಮಂಗಳೂರು ವಿಧಾನಸಭಾ ಶಾಸಕ ಯು.ಟಿ ಖಾದರ್ ಮಾತನಾಡಿದರು. ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ.ಸಂತೋಷ್ ಕುಮಾರ್ ಭಂಡಾರಿ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಮಹಾಪೌರರಾದ ರಜನಿ ದುಗ್ಗಣ್ಣ, ಉಪ ಮಹಾಪೌರ ರಾಜೇಂದ್ರ ಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷ ರಾಮಚಂದ್ರ ಕುಂಪಲ, ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಸಿಇಒ ಪಿ.ಶಿವಶಂಕರ್, ಮನಾಪ ಆಯುಕ್ತ ವಿಜಯಪ್ರಕಾಶ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೃಷಿ ಪಂಡಿತ ಮಹಾಲಿಂಗ ನಾಯ್ಕ ಕೇಪು ಮತ್ತು ಭೂತಾ ರಾಧನೆಯಲ್ಲಿ ವಿಶಿಷ್ಟತೆಯನ್ನು ಸಾಧಿಸಿರುವ ಲೋಕಯ್ಯ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಅನೂಷಾ, ಕೌಷಿಕ್ ಎಸ್., ಲಾವಣ್ಯ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾನೂನು ಪದವೀಧರರಿಗೆ ಶಿಷ್ಯ ವೇತನ,ಪ್ರವಾಸೋದ್ಯಮ ಇಲಾಖಾ ವತಿಯಿಂದ ಟ್ಯಾಕ್ಸಿ ಖರೀದಿಗೆ ನೆರವು,ಮೀನುಗಾರಿಕೆ ಇಲಾಖೆಯಿಂದ ನೆರವು ಹಾಗೂ ಬಲೆ ವಿತರಿಸಲಾಯಿತು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ರೆಡ್ಡಿ ನಾಯಕ್ ವಂದಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಅಗ್ನಿಶಾಮಕ ದಳದ ವತಿಯಿಂದ ಪ್ರಾತ್ಯಕ್ಷಿಕೆ ಏರ್ಪಡಿಸಲಾಯಿತು.