Thursday, May 31, 2012

ಕೃಷಿ ಪ್ರಶಸ್ತಿ ವಿಜೇತರು

ಮಂಗಳೂರು,ಮೇ. 31: ಮುಂಗಾರು 2011-12ನೇ ಸಾಲಿನ ಜಿಲ್ಲಾ ಮತ್ತು ತಾಲೂಕು ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಬೆಳೆ ಪ್ರಶಸ್ತಿ ವಿಜೇತರು- ಮಂಗಳೂರಿನ  ಸೀತಾರಾಮ ಶೆಟ್ಟಿ ಬಿನ್ ಮುದ್ದಣ್ಣ ಶೆಟ್ಟಿ ಪಾಲಡ್ಕ ಗ್ರಾಮ,ಸುಳ್ಯದ ಶ್ರೀಮತಿ ಗಂಗಮ್ಮ ಕೋಂ ರಾಮಣ್ಣ ನಾಯ್ಕ್ ಆಲಟ್ಟಿ ಗ್ರಾಮ, ಬೆಳ್ತಂಗಡಿಯ  ಕುಮಾರ ರಾಜಬಂಗ ಕೊರಗ ಪೆರ್ಗಡೆ ಕಳಂಜ ಗ್ರಾಮ. ಕ್ರಮವಾಗಿ  ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಪಡೆದಿದ್ದಾರೆ.
ತಾಲೂಕು ಮಟ್ಟದ ಬೆಳೆ ಪ್ರಶಸ್ತಿ ವಿಜೇತರು-ಮಂಗಳೂರಿನ  ರಾಮ ಸುವರ್ಣ ಬಿನ್ ಶಿವ ಪೂಜಾರಿ, ನಿಡ್ಡೋಡಿ ಗ್ರಾಮ, ಚಂದ್ರಶೇಖರ ಶೆಟ್ಟಿ ಬಿನ್ ಕುಂಞಣ್ಣ ಶೆಟ್ಟಿ ತಲಪಾಡಿ ಗ್ರಾಮ, ಹಮೀದ್ ಬಿನ್ ಬಿಪಾತುಮ್ಮ, ಎಳತ್ತೂರು ಗ್ರಾಮ. ಬಂಟ್ವಾಳ ತಾಲೂಕಿನ ಪುರುಷೋತ್ತಮ ಬಿ. ಬಿನ್ ಬಾಬು ಪೂಜಾರಿ ಮಣಿನಾಲ್ಕೂರು ಗ್ರಾಮ,  ಗುರುವಪ್ಪ ನಾಯ್ಕ್ ಬಿನ್ ತಾಡ ನಾಯ್ಕ, ಬುಡೋಳಿ ಗ್ರಾಮ,  ಶಂಕರ ಪ್ರಭು ಬಿನ್ ರಾಮಣ್ಣ ಪ್ರಭು-ಮಂಚಿ ಗ್ರಾಮ,
ಬೆಳ್ತಂಗಡಿ ತಾಲೂಕಿನಿಂದ ಅಂತಪ್ಪ ಬಿನ್ ಬಾಬು ಪೂಜಾರಿ ನಾವೂರು ಗ್ರಾಮ, ಶ್ರೀಮತಿ ಮಂಜುಳಾ ಬಿನ್ ಅಂತಪ್ಪ ಕಾಜವ, ಪುದುವೆಟ್ಟು ಗ್ರಾಮ, ರಾಮಚಂದ್ರಪ್ಪ ಬಿನ್ ಲಿಂಗಪ್ಪ ಪೂಜಾರಿ ಆರಂಬೋಡಿ ಗ್ರಾಮ. ಪುತ್ತೂರು ತಾಲೂಕಿನಿಂದ  ಮಧುಸೂದನ ಮಾವಜಿ ಬಿನ್ ನಾರಾಯಣ ಗೌಡ, ಪಡುವನ್ನೂರು ಗ್ರಾಮ, ನಾಗಪ್ಪ ಗೌಡ ಬಿನ್ ಸಾಂತಪ್ಪ ಗೌಡ ಕೂಳ್ತಿಗೆ ಗ್ರಾಮ, ಶ್ರೀಮತಿ ದುಗ್ಗಮ್ಮ ಕೋಂ ಬಾಬು ಶೆಟ್ಟ, ಪಡುವನ್ನೂರು ಗ್ರಾಮ. ಸುಳ್ಯ ತಾಲೂಕಿನಿಂದ ಎ ಕರುಣಾಕರ ಬಿನ್ ಆನಂದ ಗೌಡ ಹುದೇರಿ, ಮುರುಳ್ಯ ಗ್ರಾಮ,  ಮಹೇಶ್ ಬಿನ್ ಮೋನಪ್ಪ ಗೌಡ, ಆರಂಬೂರು ಗ್ರಾಮ, ಜನಾರ್ಧನ್ ಬಿನ್ ನಾಗಪ್ಪ ಗೌಡ ಕಿರ್ಲಾಯ, ಆರಂತೋಡು ಗ್ರಾಮ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಕೃಷಿ ಪ್ರಶಸ್ತಿ ಸಮಿತಿ ದಿನಾಂಕ 28-5-2012ರಂದು ಕೃಷಿ ಪ್ರಶಸ್ತಿ ಪಟ್ಟಿ ಪ್ರಕಟಿಸಿತು.  ಎಸ್. ಡಿ ಸಂಪತ್ ಸಾಮ್ರಾಜ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಜಂಟಿ ನಿರ್ದೇಶಕರು ಎಲ್ಲರನ್ನೂ ಸ್ವಾಗತಿಸಿ, ಸರ್ಕಾರಿ ಆದೇಶದನ್ವಯ ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಿಗದಿತ ಶುಲ್ಕ ಭರಿಸಿ ಬೆಳೆ ಸ್ಪರ್ಧೇಯಲ್ಲಿ ಭಾಗವಹಿಸಿದ ರೈತರ ಬೆಳೆಯನ್ನು ಮಾರ್ಗಸೂಚಿಯನ್ವಯ ಕಟಾವು ನಡೆಸಿ ಇಳುವರಿ ವರದಿ ತಯಾರಿಸಲಾಗಿದೆ ಎಂದು ಜಂಟಿ ಕೃಷಿನಿರ್ದೆಶಕರಾದ  ಪದ್ಮಯ್ಯ ನಾಯಕ್ ಅವರು ವಿವರಿಸಿದರು.
ಜಿಲ್ಲಾಮಟ್ಟದ ಪ್ರಶಸ್ತಿಗೆ ಐದು ತಾಲೂಕುಗಳಿಂದ 20 ರೈತರು ಭಾಗವಹಿಸಿದ್ದರು. ತಾಲೂಕು ಮಟ್ಟದಿಂದ 74 ರೈತರು ಪಾಲ್ಗೊಂಡಿದ್ದರು.

Tuesday, May 29, 2012

ದ.ಕ. ಪದವೀಧರ ಕ್ಷೇತ್ರ11859 ಮತ್ತು ಶಿಕ್ಷಕರ ಕ್ಷೇತ್ರ 4902 ಮತದಾರರು

ಮಂಗಳೂರು,ಮೇ.29:ಕರ್ನಾಟಕ ರಾಜ್ಯ ವಿಧಾನ ಪರಿಷತ್ ಗೆ 2012 ನೇ ಜೂನ್10 ರಂದು ನಡೆಯುವ ನೈರುತ್ಯ ಪದವೀಧರ ಕ್ಷೇತ್ರದ  ಚುನಾವಣೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ 7115 ಪುರುಷ ಹಾಗೂ 4744 ಮಹಿಳಾ ಮತದಾರರು ಸೇರಿದಂತೆ ಒಟ್ಟು 11859 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
    ಕಳೆದ ಚುನಾವಣೆಯಲ್ಲಿ 5102 ಪುರುಷರು ಹಾಗೂ 3163 ಮಹಿಳೆಯರು ಸೇರಿ 8265 ಪದವೀಧರ ಮತದಾರರು ಜಿಲ್ಲೆಯಲ್ಲಿದ್ದರು. ಈ ಬಾರಿ 340 ಪುರುಷ ಹಾಗೂ 171 ಮಹಿಳಾ ಮತದಾರರು ಸೇರಿದಂತೆ ಒಟ್ಟು 511 ಮತದಾರರನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದ್ದರೆ,ಹೊಸದಾಗಿ 2353 ಗಂಡಸರು ಹಾಗೂ 1752 ಮಹಿಳಾ ಮತದಾರರು ಸೇರಿದಂತೆ 4105 ಮತದಾರರು ಸೇರ್ಪಡೆಗೊಂಡಿದ್ದಾರೆ.
ಮೂಲ್ಕಿ ಮತಗಟ್ಟೆಯಲ್ಲಿ 380,ಮೂಡಬಿದ್ರಿ 330,ಗುರುಪುರ 295,ಸುರತ್ಕಲ್ 707,ಹಂಪನ್ ಕಟ್ಟೆ 4337,ಕೋಣಾಜೆ 591,ಬಂಟ್ವಾಳ 1389, ಬೆಳ್ತಂಗಡಿ 1178,ಪುತ್ತೂರು 1545, ಸುಳ್ಯ 830 ಹಾಗೂ ಪಂಜ ಮತಗಟ್ಟೆಯಲ್ಲಿ 277 ಮತದಾರರು ಮತ ಚಲಾಯಿಸಲಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ  ದಕ್ಷಿಣಕನ್ನಡ ಜಿಲ್ಲೆಯಿಂದ 2745 ಪುರುಷ ಹಾಗೂ 2157 ಮಹಿಳಾ ಮತದಾರರು ಸೇರಿ ಒಟ್ಟು 4902 ಶಿಕ್ಷಕ ಮತದಾರರು ತಮ್ಮ ಮತ ಚಲಾಯಿಸಲಿರುವರು.
     ಕಳೆದ ಚುನಾವಣೆಯಲ್ಲಿ 1864 ಪುರುಷ ಹಾಗೂ 1265 ಮಹಿಳಾ ಮತದಾರರು ಸೇರಿ ಒಟ್ಟು 3129 ಶಿಕ್ಷಕ ಮತದಾರರು ಇದ್ದರು.ಈ ವರ್ಷ 881 ಪುರುಷರು ಹಾಗೂ 892 ಮಹಿಳಾ ಮತದಾರರು ಸೇರಿ ಒಟ್ಟಾರೆ 1773 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.
  ಜಿಲ್ಲೆಯಲ್ಲಿ ಒಟ್ಟು 11 ಮತಗಟ್ಟೆಗಳಿವೆ. ಮೂಲ್ಕಿ ಮತಗಟ್ಟೆಯಲ್ಲಿ 144 ಮತದಾರರು ,ಮೂಡಬಿದ್ರೆ 225,ಸುರತ್ಕಲ್ 368, ಗುರುಪುರ 134,ಹಂಪನ್ಕಟ್ಟೆ 1642,ಕೋಣಾಜೆ 320, ಬಂಟ್ವಾಳ 480 ,ಬೆಳ್ತಂಗಡಿ 530,ಪುತ್ತೂರು 586,ಸುಳ್ಯ 346 ಹಾಗೂ ಪಂಜ ಮತಗಟ್ಟೆಯಲ್ಲಿ 97 ಮತದಾರರು ತಮ್ಮ  ಮತ ಚಲಾಯಿಸಲಿದ್ದಾರೆ.

Monday, May 28, 2012

ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿ: ಡಾ.ಯೋಗೀಶ್ ದುಬೆ

ಮಂಗಳೂರು, ಮೇ.28: ವಲಸೆ ಕಾರ್ಮಿಕರ ಮಕ್ಕಳು ಹಾಗೂ ಬಡ ಮಕ್ಕಳು ಪ್ರಾಥಮಿಕ ಶಾಲಾ ಶಿಕ್ಷಣದಿಂದ ವಂಚಿತರಾಗದಂತೆ ಹಾಗೂ ಬಾಲಕಾರ್ಮಿಕರಾಗುವುದನ್ನು ತಡೆಯಲು ವಲಸೆ ಮಕ್ಕಳಿಗೆ ಹಾಸ್ಟೆಲ್ ಹಾಗೂ ಕಸ್ತೂರ್ಬಾ ಗಾಂಧಿ ಮಾದರಿ ಶಾಲೆಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆರೆಯಬೇಕೆಂಬ ಸಲಹೆಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಯೋಗೀಶ್ ದುಬೆ ಅವರು ಮಾಡಿದರು.
ಇಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ಜೊತೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ಹಕ್ಕು ಕಾಯಿದೆ ಪರಿಣಾಮಕಾರಿ ಅನುಷ್ಠಾನ ಹಾಗೂ ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಮಕ್ಕಳ ಕಲ್ಯಾಣ ಸಮಿತಿ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ಜಿಲ್ಲೆಯಲ್ಲಿ ಎಲ್ಲವೂ ವರದಿಗಳಲ್ಲಿರುವಂತೆ ಇಲ್ಲ ಎಂಬುದು ಸ್ಥಳ ಪರಿಶೀಲನೆ ವೇಳೆ ತಾನು ಕಂಡುಕೊಂಡಿದ್ದು, ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದರಿಂದ ಜಿಲ್ಲೆಗೆ ಹೆಚ್ಚಿನ ಸೌಲಭ್ಯಗಳು ದೊರಕಲಿವೆ. ಇಲ್ಲಿ ವಲಸೆ ಕಾರ್ಮಿಕರ ಮಕ್ಕಳಿಗಾಗಿ ಹಾಸ್ಟೆಲ್ ಮತ್ತು ಪೌಷ್ಠಿಕ ಪುನರ್ವಸತಿ ಕೇಂದ್ರ (Nutrition Rehabilitation Centers) ಗಳನ್ನು ತೆರೆಯಬೇಕಿದೆ ಎಂದರು.
ಅಂಗನವಾಡಿ ಕೇಂದ್ರಗಳು ಇನ್ನಷ್ಟು ಸಬಲೀಕರಣವಾಗಬೇಕಿದ್ದು, ಈ ಕ್ಷೇತ್ರದಲ್ಲಿ ದುಡಿಯುವವರಿಗೆ ಹೆಚ್ಚಿನ ತರಬೇತಿಯ ಅಗತ್ಯವಿದೆ. ಜಿಲ್ಲೆಯಲ್ಲಿ ಮಕ್ಕಳ ಪುನರ್ವಸತಿ ಮತ್ತು ಕಲ್ಯಾಣಕ್ಕೆ ಸರ್ಕಾರೇತರ ಸಂಘ ಸಂಸ್ಥೆಗಳನ್ನು ಹೆಚ್ಚಾಗಿ  ಅವಲಂಬಿಸಿಕೊಂಡಿದ್ದು, ಈ ವ್ಯವಸ್ಥೆಗಿಂತ ಸಮಗ್ರ ಮೂಲಸೌಕರ್ಯಗಳನ್ನೊಳ ಗೊಂಡ ಸರ್ಕಾರಿ ಸಂಸ್ಥೆಗಳು  ನಿರ್ಮಾಣವಾಗಬೇಕಿದೆ  ಎಂದು  ದುಬೆ ಅವರು ಹೇಳಿದರು. ಮಕ್ಕಳ ಕಲ್ಯಾಣ ಸಮಿತಿ ಮಕ್ಕಳ ಕಲ್ಯಾಣಕ್ಕೆ ಕೈಗೊಂಡ ಎಲ್ಲ ಕ್ರಮಗಳು ಹಾಗೂ ಜಿಲ್ಲೆಯಲ್ಲಿರುವ ವ್ಯವಸ್ಥೆಗಳ ಬಗ್ಗೆ ಛಾಯಾಚಿತ್ರಗಳ ಸಮೇತ ತಮಗೆ ವರದಿ ಸಲ್ಲಿಸಲು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗ್ರೇಸಿ ಗೊನ್ಸಾಲಿಸ್ ಅವರಿಗೆ ಸೂಚಿಸಿದರು.
ಸರ್ಕಾರ ಬಾಲಕಿಯರಿಗಾಗಿ ಬಾಲಮಂದಿರ, ವೀಕ್ಷಣಾಲಯ, ವಿಶೇಷ ಪಾಲನಾ ಮಂದಿರಗಳನ್ನು ನಿರ್ಮಿಸಿ ನಿರ್ವಹಿಸುವಂತಾಗಬೇಕು. ಈ ಕೇಂದ್ರಗಳಲ್ಲಿರುವ ಮಕ್ಕಳ ಸಂಪೂರ್ಣ ಮಾಹಿತಿ ತಮಗೆ ಶೀಘ್ರದಲ್ಲೇ ಸಲ್ಲಿಸಬೇಕೆಂದರು. ರಾಜಸ್ಥಾನ ಹಾಗೂ ಗುಜರಾತ್ ನಲ್ಲಿ ಮಕ್ಕಳಿಗೋಸ್ಕರ ನಿರ್ಮಿಸಲಾಗಿರುವ ವಲಸೆ ಕೇಂದ್ರಗಳಿಂದ ಆಗಿರುವ ಅನುಕೂಲಗಳನ್ನು ಸಭೆಗೆ ವಿವರಿಸಿದರು.
ರಾಜ್ಯದ ಎರಡನೇ ಆರ್ಥಿಕ ರಾಜಧಾನಿಯೆಂಬ ಹೆಗ್ಗಳಿಕೆಯನ್ನು ಪಡೆದಿರುವ ಕರಾವಳಿ ನಗರ ಮಂಗಳೂರಿನಲ್ಲಿ  ಕಟ್ಟಡ ನಿರ್ಮಾಣ ಹಾಗೂ ವಿಶೇಷ ಆರ್ಥಿಕ ವಲಯ ಹೊಂದಿದ್ದರಿಂದ ವಲಸೆ ಕಾರ್ಮಿಕರು ಹೆಚ್ಚಾಗಿದ್ದಾರೆ. ಜಿಲ್ಲೆಯು ಸಾಕ್ಷರ ಜಿಲ್ಲೆಯಾಗಿದ್ದು, ಶಿಕ್ಷಣದ ಬಗ್ಗೆ ಎಲ್ಲರಿಗೂ ಅರಿವಿದ್ದು, ಜಿಲ್ಲೆಯ ಮಕ್ಕಳು ಶಿಕ್ಷಣದಿಂದ ವಂಚಿತ ರಾಗಿರುವುದಿಲ್ಲ; ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಫಲಿತಾಂಶಗಳು ಇದಕ್ಕೆ ಸಾಕ್ಷಿಯಾಗಿದ್ದು, ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಶಿಕ್ಷಣದ ಬಗ್ಗೆ ಅತೀ ಹೆಚ್ಚಿನ ಕಾಳಜಿಯನ್ನು ವಹಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ. ಕೆ ಎನ್ ವಿಜಯಪ್ರಕಾಶ್ ವಿವರಿಸಿದರು. ಆದರೆ ವಲಸಿಗರ ಮಕ್ಕಳಿಂದ ಹಾಗೂ ಇನ್ನಿತರೇ ಕೆಲವು ಕಾರಣಗಳಿಂದ ಶಿಕ್ಷಣ ವಂಚಿತ ಮಕ್ಕಳು ಮತ್ತು ಬಾಲಕಾರ್ಮಿಕ ಘಟನೆಗಳು ಜಿಲ್ಲೆಯಿಂದ ಅಪರೂಪಕ್ಕೆ ವರದಿಯಾಗುತ್ತಿದ್ದು, ಈ ಸಂದರ್ಭಗಳಲ್ಲಿ  ಬೇಕಾದ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲಾಗಿದೆಯಲ್ಲದೆ, ಸಮಸ್ಯೆಗಳನ್ನು ಸವಾಲುಗಳಾಗಿ ಎದುರಿಸಿ ಬಗೆಹರಿಸಲು ದೂರದರ್ಶಿತ್ವದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಇಒ ನುಡಿದರು.
ರೆಸಿಡೆನ್ಷಿಯಲ್ ಬ್ರಿಡ್ಜ್ ಕೋರ್ಸ್ ಜಿಲ್ಲೆಯಲ್ಲಿ ಕಳೆದ ವರ್ಷ  ಅನುಷ್ಟಾನಕ್ಕೆ ತಾರದಿರುವ ಬಗ್ಗೆ ಹಾಗೂ ಪ್ರಸಕ್ತ ಸಾಲಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿದ್ಯಾಂಗ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಬಾಲಕಾರ್ಮಿಕ ಸಮಸ್ಯೆಗಳು ವರದಿಯಾದ ಬಗ್ಗೆ ಹಾಗೂ ಕಾರ್ಮಿಕ ಇಲಾಖೆ ನಡೆಸಿದ ಸಮೀಕ್ಷೆ ಹಾಗೂ ವರದಿಗಳು, ಕೈಗೊಂಡ ಕ್ರಮಗಳ ಬಗ್ಗೆ ಕಾರ್ಮಿಕ ಆಯುಕ್ತರಾದ ಅಪ್ಪಯ್ಯ ಶಿಂಧಿಹಟ್ಟಿ ಅವರು ವಿವರಿಸಿದರು.  ಅಪರ ಜಿಲ್ಲಾಧಿಕಾರಿ ಕೆ.ದಯಾನಂದ ಅವರು ಸಭೆಯನ್ನು ನಿರ್ವಹಿಸಿದರು. ಮಕ್ಕಳ ಕಲ್ಯಾಣದ ಹೊಣೆ ಹೊತ್ತಿರುವ ಜಿಲ್ಲೆಯ ಪ್ರಮುಖ ಸರ್ಕಾರೇತರ ಸಂಘ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿದ್ದರು.

Monday, May 21, 2012

ಉದ್ಯೋಗ ಖಾತ್ರಿ ಯೋಜನೆ

ಮಂಗಳೂರು,ಮೇ.21: ದಕ್ಷಿಣ ಕನ್ನಡ ಜಿಲ್ಲೆಯ ಮುನ್ನೂರು ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಯೋಜನೆ ಅಡಿಯಲ್ಲಿ  ಗರಿಷ್ಟ ದಿನಗಳಿಗೆ ಅತ್ಯಾಧಿಕ ಸಂಖ್ಯೆಯಲ್ಲಿ ಮಹಿಳೆಯ ಫಲಾನುಭವಿಗಳು ಪಾಲ್ಗೊಂಡಿದ್ದರು.ಜಿಲ್ಲಾ ಪಂಚಾಯತ್ ಸಿಇಓ ಡಾ.ಕೆ.ಎನ್.ವಿಜಯ ಪ್ರಕಾಶ್ ಅವರು ಗ್ರಾಮಕ್ಕೆ ತೆರಳಿ ಮಹಿಳಾ ಫಲಾನುಭವಿಗಳೊಂದಿಗೆ ವಿಚಾರವಿನಿಮಯ ಮಾಡಿದರು. ಒಂಬುಡ್ಸ್ ಮನ್ ಶೀನಾ ಶೆಟ್ಟಿ, ಜಿಲ್ಲಾ ಪಂಚಾಯತ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸೀಟು ಹಂಚಿಕೆ ಪಟ್ಟಿ ನೋಟೀಸ್ ಬೋರ್ಡಿ ನಲ್ಲಿ ಪ್ರದರ್ಶಿಸಿ: ಜಿಲ್ಲಾಧಿಕಾರಿ

ಮಂಗಳೂರು,ಮೇ.21: ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಪದವಿಪೂರ್ವ ಕಾಲೇಜುಗಳ ನೋಟೀಸು ಬೋರ್ಡಿನಲ್ಲಿ ಸೀಟು ಹಂಚಿಕಾ ಪಟ್ಟಿ(ಸೀಟ್ ಮ್ಯಾಟ್ರಿಕ್ಸ್) ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಜಿಲ್ಲೆಯ ಎಲ್ಲ ಪ್ರಾಂಶುಪಾಲರಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಪಿಯುಸಿ ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಜಿಲ್ಲಾಧಿಕಾರಿಗಳು, ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸರ್ಕಾರದ ಸುತ್ತೋಲೆಯಂತೆ ದಾಖಲಾತಿಗಳು ನಡೆಯಬೇಕು; ನೋಟೀಸ್ ಬೋರ್ಡಿನಲ್ಲಿ ಹಾಗೂ ಕಾಲೇಜುಗಳ ವೆಬ್ ಸೈಟ್ ಗಳಲ್ಲಿ ಈ ಸಂಬಂದ ಸೂಕ್ತ ಮಾಹಿತಿಗಳಿರಬೇಕು ಎಂದರು.
ಇಲಾಖೆ ನಿಗದಿಪಡಿಸಿದಂತೆ ಅಡ್ಮಿಷನ್ ಪ್ರಕ್ರಿಯೆಗಳಾಗಬೇಕೆಂದ ಅವರು, ಈ ಸಂಬಂಧ ಪರಿಶೀಲನೆ ನಡೆಸಲು ಜಿಲ್ಲಾ ಮಟ್ಟದ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ತಂಡ ಕಾಲೇಜುಗಳಿಗೆ ಭೇಟಿ ನೀಡಲಿದೆ. ನೋಟೀಸು ಬೋರ್ಡಿನಲ್ಲಿ ವೇಳಾಪಟ್ಟಿ, ವಿದ್ಯಾರ್ಥಿಳ ಸೇರ್ಪಡೆ ಪಟ್ಟಿ, ಕ್ಯಾಟಗರಿ ವೈಸ್ ವಿದ್ಯಾರ್ಥಿಗಳ ಪಟ್ಟಿ, ಸರ್ಕಾರ ಶುಲ್ಕ ನಿಗದಿಪಡಿಸಿದ ಮಾದರಿ, ಟ್ಯೂಷನ್ ಫೀ ಎಲ್ಲ ಮಾಹಿತಿಗಳನ್ನು ಪಾರದರ್ಶಕವಾಗಿ ನೀಡಬೇಕು ಎಂದರು.
ಪ್ರವೇಶ ಪ್ರಕ್ರಿಯೆ ವೇಳೆ ಇನ್ನೊಂದು ಎಂಟ್ರೆನ್ಸ್ ಪರೀಕ್ಷೆ ಸಲ್ಲದು ಎಂಬ ನಿಯಮವನ್ನು ಪಾಲಿಸಲು ಸೂಚಿಸಿದ ಅವರು, ಆದಾಯ ಮತ್ತು ಜಾತಿ ದೃಢೀಕರಣಪತ್ರ ಐದು ವರ್ಷ ಸಿಂಧುವಾಗಿದ್ದು, ಪ್ರತೀ ವರ್ಷ ಹೊಸ ಪತ್ರ ಕೇಳುವ ಅಗತ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಹಿಂದುಳಿದ ವರ್ಗಗಳವರಿಗೆ ಆದಾಯ ಮಿತಿ ಗರಿಷ್ಠ 11,000 ರೂ.ಗಳಾಗಿದ್ದು, ಪ್ರವೇಶದ ವೇಳೆ ಮೂಲಪ್ರತಿಯನ್ನು ವಿದ್ಯಾರ್ಥಿಗಳಿಂದ ಪಡೆಯುವ ಅಗತ್ಯವಿಲ್ಲ, ಸರ್ಟಿಫೈ ಮಾಡಿದ ಪ್ರತಿಗಳನ್ನು ಪಡೆದುಕೊಳ್ಳಿ ಎಂದೂ ಜಿಲ್ಲಾಧಿಕಾರಿಗಳು ಸೂಚಿಸಿದರು.
ಎಲ್ಲ ಪ್ರಾಂಶುಪಾಲರೂ ಪ್ರವೇಶಾತಿ ಸಂಬಂಧದ ಮಾಹಿತಿಯನ್ನು ಸವಿವರವಾಗಿ www.pue.kar.nic ಇಲ್ಲಿಂದ ಪಡೆದುಕೊಂಡು ಪ್ರವೇಶಾತಿ ಪ್ರಕ್ರಿಯೆ ನಡೆಸುವುದರಿಂದ ಗೊಂದಲ ಸೃಷ್ಟಿ ನಿವಾರಿಸಬಹುದು. ವಿದ್ಯಾರ್ಥಿಗಳಿಗೆ ಸರ್ಕಾರದ ಮಾದರಿ ಪ್ರವೇಶ  ಪತ್ರಗಳನ್ನೇ ನೀಡಿ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಹಾಗೂ ಡಿಡಿಪಿಯು (ಪ್ರಭಾರ) ರಾಜವೀರ ಇಂದ್ರ ಸಭೆಯಲ್ಲಿ ಉಪಸ್ಥಿತರಿದ್ದರು.

 

Saturday, May 19, 2012

ದ.ಕ. ಜಿಲ್ಲೆ: 74 ಕ್ವಿಂಟಾಲ್ ಬೀಜ ವಿತರಣೆ

ಮಂಗಳೂರು,ಮೇ.19: ಮುಂಗಾರು ಹಂಗಾಮಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬೆಳೆ ಭತ್ತ; ಪ್ರಸಕ್ತ ಸಾಲಿನ ಆರಂಭದಲ್ಲಿ 74 ಕ್ವಿಂಟಾಲ್ ಬೀಜವನ್ನು ರೈತರಿಗೆ ವಿತರಿಸಲಾಗಿದ್ದು, 332.25 ಕ್ವಿಂಟಾಲ್ ಬೀಜ ದಾಸ್ತಾನಿದೆ ಎಂದು ಕೃಷಿ ಜಂಟಿ ನಿರ್ದೇಶಕರಾದ ಎ. ಪದ್ಮಯ್ಯ ನಾಯ್ಕ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 189 ಫಲಾನುಭವಿಗಳಿದ್ದು, ಮಂಗಳೂರು ತಾಲೂಕಿನಿಂದ 117 ಫಲಾನುಭವಿಗಳು, ಬಂಟ್ವಾಳದಿಂದ 29, ಬೆಳ್ತಂಗಡಿಯಿಂದ 18, ಪುತ್ತೂರಿನಿಂದ 24, ಸುಳ್ಯದಿಂದ ಒಬ್ಬರು ಫಲಾನುಭವಿಗಳಿಗೆ ಬೀಜ ವಿತರಣೆಯಾಗಿದೆ. 33,500 ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಕಳೆದ ಸಾಲಿನಲ್ಲಿ 32,423 ಹೆಕ್ಟೇರ್ ವ್ಯಾಪ್ತಿಯಲ್ಲಿ ಭತ್ತ ಬೆಳೆಯಲಾಗಿತ್ತು. ಕ್ವಿಂಟಾಲ್ ಗೆ 950 ರೂ.ಗಳಂತೆ 70,300 ರೂ. ಸಬ್ಸಿಡಿಯನ್ನು ರೈತರಿಗೆ ನೀಡಲಾಗಿದೆ. ಮಂಗಳೂರು ತಾಲೂಕಿನಲ್ಲಿ 51.75, ಬಂಟ್ವಾಳದಲ್ಲಿ 9.25, ಬೆಳ್ತಂಗಡಿಯಲ್ಲಿ 5.75, ಪುತ್ತೂರಿನಲ್ಲಿ 7, ಸುಳ್ಯದಲ್ಲಿ 0.25 ಕ್ವಿಂಟಾಲ್ ಬೀಜವನ್ನು ವಿತರಿಸಲಾಗಿದೆ.

ಸಂಸದರ ನಿಧಿಯಿಂದ ಅನುದಾನ ಬಿಡುಗಡೆ

ಮಂಗಳೂರು, ಮೇ.19 :ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾದ  ನಳಿನ್ ಕುಮಾರ್ ಕಟೀಲ್ ಅವರ 2010-11 ಮತ್ತು 2011-12 ನೇ ಸಾಲಿನಲ್ಲಿ ಮಂಗಳೂರು ತಾಲೂಕಿನ 9 ಕಾಮಗಾರಿಗಳ ಅನುಷ್ಠಾನಕ್ಕಾಗಿ ಮಂಜೂರಾಗಿದ್ದ ಒಟ್ಟು ರೂ.27.00 ಲಕ್ಷ ರೂಪಾಯಿಗಳಲ್ಲಿ ರೂ.20.24  ಲಕ್ಷಗಳ ಚೆಕ್ ಗಳನ್ನು ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಿ ಅನುಷ್ಠಾನಗೊಳಿಸಲು ಬಿಡುಗಡೆ ಮಾಡಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ
  ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕು 2010-11  ನೇ ಸಾಲಿನ ತಲಪಾಡಿ ದೇವಿಪುರ ರಸ್ತೆಯ ಅಭಿವೃದ್ಧಿಗೆ ಮಂಜೂರಾಗಿರುವ ರೂ.4.50 ಲಕ್ಷಗಳಲ್ಲಿ ರೂ.3.37ಲಕ್ಷದ ಚೆಕ್ನ್ನು ,ಕಿನ್ಯಾ ಗ್ರಾಮದ ಪೆರ್ಮಂದೂರು-ಸಾಂತ್ಯ ರಸ್ತೆ ರಚನೆಗೆ ಮಂಜೂರಾಗಿರುವ ರೂ.3.00 ಲಕ್ಷಗಳಲ್ಲಿ ರೂ.2.25 ಲಕ್ಷದ ಚೆಕ್ನ್ನು ಹಾಗೂ 2011-12 ನೇ ಸಾಲಿನ ತಿರುವೈಲು ವಾರ್ಡಿನ ಕಲರೈ ಕೋಡಿ ರಸ್ತಯ ಡಾಮರೀಕರಣಕ್ಕೆ ಮಂಜೂರಾಗಿರುವ ರೂ.3.00 ಲಕ್ಷಗಳಲ್ಲಿ ರೂ.2.25 ಲಕ್ಷಗಳ ಚೆಕ್,ಇಡ್ಯಾ ಪೂರ್ವ ವಾರ್ಡಿನ ಶೇಖರ ಶೆಟ್ಟಿ ಮನೆಯಿಂದ ಪುಷ್ಪ ಪೂಜಾರಿಯವರ ಮನೆವರೆಗೆ ಇಂಟರ್ ಲಾಕ್ ಅಳವಡಿಕೆ ಮತ್ತು ಚರಂಡಿ ನಿರ್ಮಾಣಕ್ಕೆ ಮಂಜೂರಾಗಿರುವ ರೂ.2.00ಲಕ್ಷಗಳಲ್ಲಿ ರೂ.1.50 ಲಕ್ಷದ ಚೆಕ್ನ್ನು ,ಕುಂಜತ್ತಬೈಲು ದೇವಿ ಭಜನಾ ಮಂದಿರದ ಎದುರುಗಡೆ ಮುಚ್ಚಿದ ಚರಂಡಿ ರಚನೆಗೆ ಮಂಜೂರಾಗಿರುವ ರೂ.2.00 ಲಕ್ಷಗಳಲ್ಲಿ ರೂ.1.50 ಲಕ್ಷದ ಚೆಕ್ನ್ನು ,ಕದ್ರಿ ಬಿ ವಾರ್ಡ್ ಭಟ್ರ ಕುಮೇರುವಿನಿಂದ ಗಂಧಕಾಡು ಮುಖ್ಯ ರಸ್ತೆ ಡಾಮರೀಕರಣಕ್ಕೆ ಮಂಜೂರಾಗಿರುವ ರೂ.1.50 ಲಕ್ಷದಲ್ಲಿ ರೂ.1.12 ಲಕ್ಷದ ಚೆಕ್ಕನ್ನು, ,ಉಳ್ಳಾಲ ಪುರಸಭಾ ವ್ಯಾಪ್ತಿ ಮಾರ್ಗತಲೆ ರಸ್ತೆ ಅಭಿವೃದ್ಧಿಗೆ ಮಂಜೂರಾಗಿರುವ ರೂ.4.00 ಲಕ್ಷಗಳಲ್ಲಿ ರೂ.3.00 ಲಕ್ಷದ ಚೆಕ್ನ್ನು,ಉಳ್ಳಾಲದ ಕುತ್ತಾಯ ಸೇವಂತಿಗುತ್ತು ರಸ್ತೆ ಅಭಿವೃದ್ಧಿಗೆ ಮಂಜೂರಾಗಿರುವ ರೂ.4.00 ಲಕ್ಷಗಳಲ್ಲಿ ರೂ.3.00 ಲಕ್ಷದ ಚೆಕ್ನ್ನುಮತ್ತು ಕೋಣಾಜೆ ಗ್ರಾಮದ ಅಣ್ಣರೆಪಾಲು ರಸ್ತೆ ಅಭಿವೃದ್ಧಿಗೆ ಮಂಜೂರಾಗಿರುವ ರೂ.3.00 ಲಕ್ಷಗಳಲ್ಲಿ ರೂ.2.25 ಲಕ್ಷದ ಚೆಕ್ನ್ನು ಹೀಗೆ ಒಟ್ಟು 9 ಕಾಮಗಾರಿಗಳ ರೂ.20.24 ಲಕ್ಷದ ಚೆಕ್ಗಳನ್ನು  ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರಿಗೆ ಕಾಮಗಾರಿಯ ಅನುಷ್ಠಾನಕ್ಕೆ ನೀಡಲಾಗಿದೆ. 
  ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ  2011-12 ನೇ ಸಾಲಿನಲ್ಲಿ ಪುತ್ತೂರು ತಾಲೂಕಿನ 5 ಕಾಮಗಾರಿಗಳ ಅನುಷ್ಠಾನಕ್ಕಾಗಿ ಮಂಜೂರಾಗಿದ್ದ ಒಟ್ಟು ರೂ.21.00 ಲಕ್ಷ ರೂಪಾಯಿಗಳಲ್ಲಿ ರೂ.15.75  ಲಕ್ಷಗಳನ್ನು ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಲು ಬಿಡುಗಡೆ ಮಾಡಲಾಗಿದೆ
                                    ಪುತ್ತೂರು ತಾಲೂಕಿಗೆ ಮಂಜೂರಾಗಿದ್ದ  ರೂ.21.00 ಲಕ್ಷ ರೂಪಾಯಿಗಳಲ್ಲಿ ಇದೀಗ ರೂ.15.75 ಲಕ್ಷಗಳನ್ನು ಬಿಡುಗಡೆ ಮಾಡಿ ಚೆಕ್ ಗಳನ್ನು ಕಾಮಗಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರಿಗೆ ಕಾಮಗಾರಿಯ ಅನುಷ್ಠಾನಕ್ಕೆ ನೀಡಲಾಗಿದೆ.
             ಬಂಟ್ವಾಳ ತಾಲೂಕಿನ 7 ಕಾಮಗಾರಿಗಳ ಅನುಷ್ಠಾನಕ್ಕಾಗಿ ಮಂಜೂರಾಗಿದ್ದ ಒಟ್ಟು ರೂ.26.00 ಲಕ್ಷ ರೂಪಾಯಿಗಳಲ್ಲಿ ರೂ.19.50  ಲಕ್ಷಗಳ ಚೆಕ್ಗಳನ್ನು ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಲು ಬಿಡುಗಡೆ ಮಾಡಲಾಗಿದೆ.
ಬಂಟ್ವಾಳ ತಾಲೂಕಿಗೆ ಮಂಜೂರಾಗಿದ್ದ  ರೂ.26.00 ಲಕ್ಷ ರೂಪಾಯಿಗಳಲ್ಲಿ ಇದೀಗ ರೂ.19.50 ಲಕ್ಷಗಳನ್ನು ಬಿಡುಗಡೆ ಮಾಡಿ ಚೆಕ್ಗಳನ್ನು ಕಾಮಗಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ ಅವರಿಗೆ ಕಾಮಗಾರಿಯ ಅನುಷ್ಠಾನಕ್ಕೆ ನೀಡಲಾಗಿದೆಯೆಂದು ಜಿಲ್ಲಾಧಿಕಾರಿಯವರು ತಿಳಿಸಿರುತ್ತಾರೆ.


 

Friday, May 18, 2012

ದ.ಕ. ಜಿಲ್ಲೆ: 26,681 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ತೇರ್ಗಡೆ

ಮಂಗಳೂರು,ಮೇ.18: ದಕ್ಷಿಣ ಕನ್ನಡ ಜಿಲ್ಲೆ 2011-12ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಗಮನೀಯ ಪ್ರಗತಿ ದಾಖಲಿಸಿದ್ದು, ಶೇಕಡ 85.24 ಫಲಿತಾಂಶ ಗಳಿಸಿ ರಾಜ್ಯದಲ್ಲಿ 7ನೇ ಸ್ಥಾನ ಪಡೆದಿದೆ. ಕಳೆದ ಸಾಲಿನಲ್ಲಿ ಶೇಕಡ 78.30 ಫಲಿತಾಂಶ ದಾಖಲಿಸಿತ್ತು.
ಪ್ರಸಕ್ತ ಸಾಲಿನಲ್ಲಿ ಒಟ್ಟು 31,301 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,  ಇವರಲ್ಲಿ ವಿದ್ಯಾರ್ಥಿನಿಯರು -15769,  ವಿದ್ಯಾರ್ಥಿಗಳು-15532. ಉತ್ತೀರ್ಣರಾದ 26,681 ವಿದ್ಯಾರ್ಥಿಳಲ್ಲಿ 14330 ಹೆಣ್ಣು ಮಕ್ಕಳು ಮತ್ತು 12351 ಗಂಡು ಮಕ್ಕಳು. 
ವಿಷಯವಾರು ಫಲಿತಾಂಶದ ವಿವರ: ಪ್ರಥಮ ಭಾಷೆ 92.53% , ದ್ವಿತೀಯ ಭಾಷೆ 89.08%, ತೃತೀಯ ಭಾಷೆ 91.80%, ಗಣಿತ 90.28%, ವಿಜ್ಞಾನ 89.07%. ಸಮಾಜ ವಿಜ್ಞಾನ 91.89%.
ಶೇಕಡ 100 ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ : ಸರ್ಕಾರಿ ಶಾಲೆಗಳು- 22, ಅನುದಾನಿತ-9, ಅನುದಾನರಹಿತ- 93, ಒಟ್ಟು 124 ಶಾಲೆಗಳು ಶೇಕಡ ನೂರು ಫಲಿತಾಂಶ ದಾಖಲಿಸಿವೆ.
ಶೇಕಡ ಪ್ರಮಾಣದಲ್ಲಿ ಶಾಲೆಗಳ ವರ್ಗೀಕರಣ- 40ರಿಂದ 60 ಫಲಿತಾಂಶ. ಸರ್ಕಾರಿ ಶಾಲೆ-5 ಅನುದಾನಿತ 1 ಅನುದಾನರಹಿತ -2.
60ರಿಂದ 80 ಶೇಕಡ ಪ್ರಮಾಣ: ಸರ್ಕಾರಿ- 45, ಅನುದಾನಿತ-18, ಅನುದಾನರಹಿತ -11.
ಶೇ. 80ಕ್ಕಿಂತ ಮೇಲೆ: ಸರ್ಕಾರಿ -118, ಅನುದಾನಿತ 86, ಅನುದಾನರಹಿತ 161.
ಮಾಧ್ಯಮವಾರು ಫಲಿತಾಂಶದ ವಿವರ: ಕನ್ನಡ ಮಾಧ್ಯಮ- ಹಾಜರಾದವರು 22686; ತೇರ್ಗಡೆಯಾದವರು 18414 ಶೇ. 81.16%
ಇಂಗ್ಲಿಷ್ ಮಾಧ್ಯಮ: ಹಾಜರಾದವರು 8615; ತೇರ್ಗಡೆಯಾದವರು 8267. ಶೇ. 95.96%

 

ಆಸ್ತಿಗಳ ಹಕ್ಕು ದಾಖಲೆ ನಿರ್ಧರಿಸುವ ಯೋಜನೆ

ಮಂಗಳೂರು,ಮೇ.18:ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ವತಿಯಿಂದ ಕರ್ನಾಟಕ ಭೂಕಂದಾಯ ಅಧಿನಿಯಮ 1964 ನಿಯಮಗಳು 1966 ರ ಶಾಸನ ಬದ್ಧ ವಿಧಿಗಳನ್ವಯ  ರಾಜ್ಯದ ನಗರ ಪ್ರದೇಶದ ಎಲ್ಲಾ ಆಸ್ತಿಗಳ ನಕ್ಷೆ ತಯಾರಿಸುವಿಕೆ ಮತ್ತು ಮಾಲಿಕತ್ವವನ್ನು ನಿರ್ಧರಿಸಿ ಹಕ್ಕು ದಾಖಲೆಗಳನ್ನು ಸಿದ್ಧ ಪಡಿಸುವ ಮಹತ್ವ ಪೂರ್ಣ ಯೋಜನೆಯನ್ನು ಪ್ರಾರಂಭಿಸಿದೆ.
    ಮಂಗಳೂರು ನಗರವು ಸಹ ಆಯ್ದ 5 ಪಟ್ಟಣಗಳಲ್ಲಿ ಒಂದು ಪಟ್ಟಣವಾಗಿರುತ್ತದೆ. ಈ ಯೋಜನೆಯನ್ನು ಇನ್ಫೋಟೆಕ್ ಎಂಟರ್ಪ್ರೈಸಸ್ ಲಿಮಿಟೆಡ್ ಇವರೊಂದಿಗೆ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕೈಗೊಳ್ಳಲಾಗುವುದು.ಈ ಕಾರ್ಯವನ್ನು ಪ್ರಾರಂಭದಲ್ಲಿ ಬೋಳೂರು ಗ್ರಾಮ ವಾರ್ಡ್ ಸಂಖ್ಯೆ 27,28,29 ರಲ್ಲಿ ಪ್ರಾರಂಭಿಸಲಾಗುವುದು.ಭೂಮಾಪನ ಇಲಾಖೆಯ ಸಿಬ್ಬಂದಿಯು ಕೈಗೊಳ್ಳಲಾಗುತ್ತಿರುವ  ಈ ಕೆಲಸಕ್ಕೆ ಅಗತ್ಯ ಸಹಕಾರ ಮತ್ತು ನೆರವನ್ನು ನೀಡಲು ಎಲ್ಲಾ ಆಸ್ತಿಗಳ ಮಾಲೀಕರನ್ನು ಕೋರಲಾಗಿದೆ.
    ನಗರಪಾಲಿಕೆ ಖಾತಾ ಹಕ್ಕನ್ನು ನಿರೂಪಿಸುವ ದಾಖಲೆ ಎಂಬ ಸಾಮಾನ್ಯ ಭಾವನೆ ಸಾರ್ವಜನಿಕರಲ್ಲಿ ಇರುತ್ತದೆ. ಆದರೆ ಭೂಕಂದಾಯ ಅಧಿನಿಯಮ ಮತ್ತು ನಿಯಮಗಳ ಮೇರೆಗೆ ಕ್ರಮ ಬದ್ಧವಾಗಿ ಸಿದ್ಧಪಡಿಸಲಾಗುವ ಆಸ್ತಿ ದಾಖಲೆ (ನಮೂನೆ 13) ನಗರ ಆಸ್ತಿಗಳ ಮಾಲಿಕತ್ವವನ್ನು ನಿರೂಪಿಸುವ ಶಾಸನಬದ್ಧ ಹಕ್ಕು ದಾಖಲೆ ಆಗಿರುತ್ತದೆ.
         ಈ ಆಸ್ತಿ ದಾಖಲೆಯು ಕೃಷಿ ಜಮೀನುಗಳ ಆರ್.ಟಿ.ಸಿ.ಗೆ (ನಮೂನೆ 16) ಸರಿ ಸಮಾನವಾದ ದಾಖಲೆ ಆಗಿರುತ್ತದೆ. ನಗರ ಪ್ರದೇಶದಲ್ಲಿ ಹೆಚ್ಚು ಮೌಲ್ಯವುಳ್ಳ ಆಸ್ತಿಗಳಿಗೆ ನಿಖರವಾದ ಗಡಿಗಳನ್ನು ಗುರುತಿಸಿ ಎಲ್ಲಾ ಇಲಾಖೆಗಳ ದಾಖಲೆಗಳನ್ನು ಪರಿಶೀಲಿಸಿ ಹಕ್ಕುಗಳನ್ನು ನಿರ್ಧರಿಸಿ ತಯಾರಿಸಲಾಗುವ ನಗರ ಆಸ್ತಿಗಳ ಹಕ್ಕು ಪತ್ರ(ಪಿ.ಆರ್. ಕಾರ್ಡ್) ಅತ್ಯಂತ ಮಹತ್ವ ಪೂರ್ಣವಾಗಿರುತ್ತದೆ. ಇದು ಸರಕಾರ ,ಸಾರ್ವಜನಿಕರಿಗೆ ಹಣಕಾಸು ಸಂಸ್ಥೆ,ಬ್ಯಾಂಕ್ ,ಖಾಸಗಿ ವ್ಯಕ್ತಿಗಳೊಂದಿಗೆ ವ್ಯವಹರಿಸುವ ಕೆಲಸ ಕಾರ್ಯಗಳನ್ನು ಸುಲಭಗೊಳಿಸುತ್ತದೆ ಮತ್ತು ನಂಬಿಕೆಯ ಅರ್ಹತೆಯನ್ನು ಹೊಂದಿರುತ್ತದೆ. ಸರ್ಕಾರವು ಸಾರ್ವಜನಿಕರ ಹಿತದೃಷ್ಠಿಯಿಂದ ಕೈಗೊಳ್ಳಲಾಗುತ್ತಿರುವ ಈ ಯೋಜನೆಯಲ್ಲಿ ಇತರೆ ಇಲಾಖೆಗಳು  ಆವಶ್ಯಕ ದಾಖಲೆಗಳನ್ನು ಒದಗಿಸುವ ಮೂಲಕ ಸಹಕರಿಸುತ್ತಿವೆ. ಕಾರಣ ಈ ಮೂಲಕ ಎಲ್ಲಾ  ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,ಯೋಜನೆ ಅನುಷ್ಠಾನಕ್ಕಾಗಿ ತಮ್ಮ ಆಸ್ತಿಯ ಅಳತೆಗೆ ಭೇಟಿ ನೀಡುವ ಇಲಾಖೆಯ ಸಿಬ್ಬಂದಿಗಳಿಗೆ ತಮ್ಮ ಆಸ್ತಿಗಳ ಗಡಿಗಳನ್ನು ತೋರಿಸುವುದಲ್ಲದೆ ತಮ್ಮಲ್ಲಿರುವ ಮಾಲಿಕತ್ವವನ್ನು ನಿರೂಪಿಸುವ ದಾಖಲೆಗಳ ನಕಲುಗಳನ್ನು ನೀಡಿ ಆಸ್ತಿ ಪತ್ರಗಳನ್ನು ಸಿದ್ಧಪಡಿಸಲು ಸಹಕರಿಸಿ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
 
 

Thursday, May 17, 2012

ಪ್ರಾಕೃತಿಕ ವಿಕೋಪ: ಮುಂಜಾಗ್ರತಾ ಸಭೆ

ಮಂಗಳೂರು, ಮೇ.17 :- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಎದುರಾಗುವ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸಮಗ್ರ ಯೋಜನೆಯನ್ನು ರೂಪಿಸಲು ಎಲ್ಲ ಅಧಿಕಾರಿಗಳ ಪೂರ್ವಸಿದ್ದತಾ ಸಭೆಯನ್ನು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ತಾಲೂಕು ಮಟ್ಟದಲ್ಲಿ ಈಗಾಗಲೇ ಸಿದ್ಧವಿರುವ ಕೈಪಿಡಿಯನ್ನು ಅಪ್ ಡೇಟ್ ಮಾಡಿ ಸೋಮವಾರ ದೊಳಗೆ ಮಾಹಿತಿ ಕೈ ಪಿಡಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲು ಎಲ್ಲ ತಹಸೀ ಲ್ದಾರ್ ರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ತಾಲೂಕು ಕೇಂದ್ರಗಳಲ್ಲಿ ಮತ್ತು ಮಹಾನಗರಪಾಲಿಕೆಯಲ್ಲಿ ಕಂಟ್ರೋಲ್ ರೂಮ್ ಸ್ಥಾಪಿಸಬೇಕು. ಕಂಟ್ರೋಲ್ ರೂಮ್ ನಲ್ಲಿ ಜನರಿಗೆ ನೀಡುವ ದೂರವಾಣ ಸಂಖ್ಯೆ  ನಿರಂತರವಾಗಿ ಎಂಗೇಜ್ ಬಾರದಿರಲು ಪ್ರತ್ಯೇಕವಾಗಿ ಒಳಬರುವ ಕರೆಗಳನ್ನು ಮಾತ್ರ ಸ್ವೀಕರಿಸುವ  ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ತುರ್ತು ಕಾರ್ಯಪಡೆ, ಸಮುದ್ರ ಕೊರೆತಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ಕುರಿತು ಹಾಗೂ ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳುವ ಕ್ರಮಗಳ ಕುರಿತು ಸಭೆ ಚರ್ಚಿಸಿತು. ಮರಗಳು ಬಿದ್ದು ಸಂಭವಿಸುವ ಅನಾಹುತಗಳ ನಿವಾರಣಾ ಕೆಲಸವನ್ನು ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ವಹಿಸಲಾಯಿತು. ಅರಣ್ಯ ಇಲಾಖೆ ಈ ಸಂದರ್ಭದಲ್ಲಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರಲ್ಲದೆ, ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಮೇ 25ರೊಳಗೆ ಇಂತಹ ಮರಗಳ ಬಗ್ಗೆ ಮಾಹಿತಿಯನ್ನು ಅರಣ್ಯ ಇಲಾಖೆಗೆ ಮುಂಚಿತವಾಗಿ ನೀಡಿ ಎಂದೂ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜನ, ಜಾನುವಾರು ಮೀನುಗಾರರ ರಕ್ಷಣೆಯ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಮಳೆಯಿಂದಾಗಿ ಮನೆಗಳಿಗೆ ಹಾನಿ ಸಂಭವಿಸಿದಾಗ ಜನರಿಗೆ ಉಪಕಾರವಾಗುವಂತೆ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರು, ಬಂಟ್ವಾಳಗಳಲ್ಲಿ ಗಂಜಿಕೇಂದ್ರಗಳಿಗಾಗಿ ಶಾಲೆಯನ್ನು ಹಾಗೂ ಬಿಸಿಎಂ ಹಾಸ್ಟೆಲ್ ಗಳನ್ನು ಗುರುತಿಸಲು ತಹಸೀಲ್ದಾರ್ ಗಳಿಗೆ ಹಾಗೂ ಅನಾಹುತವನ್ನು ನಿರ್ವಹಿಸಲು ಅಗ್ನಿಶಾಮಕ ದಳದವರು ಸನ್ನದ್ದರಾಗಿರಬೇಕು ಎಂದರು.
ಕಳೆದ ಬಾರಿ ಮಳೆಗಾಲದಲ್ಲಿ ಹೊಸ್ಮಠದಲ್ಲಿ ಕೆ ಎಸ್ ಆರ್ ಟಿಸಿ ಬಸ್ ಅರ್ಧದಲ್ಲಿ ಶಾಲಾ ಮಕ್ಕಳು ಹಾಗೂ ಜನರನ್ನು ಇಳಿಸಿದ ಬಗ್ಗೆ ಸುಳ್ಯ ತಹಸೀಲ್ದಾರ್ ರು ಸಭೆಯ ಗಮನಸೆಳೆದಾಗ, ಅಲ್ಲಿನ ಬಸ್ ಚಾಲಕರ ಸಭೆ ಕರೆದು ಅಮಾನವೀಯವಾಗಿ ವರ್ತಿಸದಂತೆ ಸೂಚಿಸಲು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದರು.ಕೃಷಿ,ತೋಟಗಾರಿಕೆ ಹಾನಿ ಬಗ್ಗೆಯೂ ಅಧಿಕಾರಿಗಳು ಗಮನಹರಿಸಬೇಕು; ರಸ್ತೆ ಗುಂಡಿಗಳಿಂದಾಗಿ ಮಳೆಗಾಲದಲ್ಲಿ ಅಪಘಾತಗಳು ಸಂಭವಿಸದಂತೆ ಲೋಕೋಪಯೋಗಿ ಇಲಾಖೆ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಹಾನಗರಪಾಲಿಕೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ವಿವರಿಸಿದರೆ, ಎಲ್ಲ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಗ್ರಾಮಪಂಚಾಯತ್ ಗಳಿಗೆ ಚರಂಡಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲು ಜಿಲ್ಲಾಧಿಕಾರಿಗಳು ಹೇಳಿದರು. ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಸಭೆಯನ್ನು ನಿರ್ವಹಿಸಿದರು. ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

SSLC ಫಲಿತಾಂಶ ದ.ಕ 7ನೇ ಸ್ಥಾನ

ಪಲ್ಲವಿ ರಾವ್
ನವ್ಯಾ ಶೆಟ್ಟಿ
ಮಂಗಳೂರು, ಮೇ.17: ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ 7 ನೇ ಸ್ಥಾನ ಲಭಿಸಿದೆ. ಬಂಟ್ವಾಳ ಎಸ್ ವಿಎಸ್ ವಿದ್ಯಾಗಿರಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ನವ್ಯಾ ಶೆಟ್ಟಿ625 ರಲ್ಲಿ 623 ಅಂಕಗಳನ್ನು ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ, ಮತ್ತು ಸುರತ್ಕಲ್ ವಿದ್ಯಾದಾಯಿನಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಪಲ್ಲವಿ ರಾವ್625 ರಲ್ಲಿ 621 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.

Wednesday, May 16, 2012

ಹಸಿರು ಪರಿಸರಕ್ಕೆ ತಾರಸಿ ತೋಟ: ಡಾ. ವಿಜಯಪ್ರಕಾಶ್

ಮಂಗಳೂರು, ಮೇ 16: ಆಹಾರ ಸೃಷ್ಟಿಯಲ್ಲಿ ಸ್ವಾವಲಂಬಿಗಳಾಗುವ ಜೊತೆಗೆ ಮನೆಯ ಅಂದವನ್ನು ಹೆಚ್ಚಿಸುವಲ್ಲಿ ತಾರಸಿ ತೋಟ ನಗರವಾಸಿಗಳಿಗೆ ವರದಾನ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ವಿಜಯಪ್ರಕಾಶ್ ಅಭಿಪ್ರಾಯ ಪಟ್ಟರು.
ಅವರು ಇಂದು ನಗರದ ಕದ್ರಿಯ ಬಾಲಭವನದಲ್ಲಿ ಟೆರೇಸ್ ಗಾರ್ಡನ್ (ತಾರಸಿ ತೋಟ) ಬಗ್ಗೆ ಆಯೋಜಿಸಲಾದ ತರಬೇತಿ ಕಾರ್ಯಕ್ರಮವನ್ನು ಕುಂಡದಲ್ಲಿ ಬೆಳೆಯಲಾದ ಎಲೆಕೋಸು ಗಿಡಗಳಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಹಸಿರು ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ತಾರಸಿ ಕೃಷಿ ಹೆಚ್ಚು ಆರೋಗ್ಯಕರ ಹಾಗೂ ತಾಜಾ ತರಕಾರಿಯು ಬೆಳೆದವರಿಗೆ ಲಭ್ಯವಾಗಲಿದೆ. ನಮ್ಮ ಮಕ್ಕಳಲ್ಲಿಯೂ ತೋಟದ ಪರಿಕಲ್ಪನೆ, ಪ್ರಕೃತಿಯ ಬಗ್ಗೆ ಕುತೂಹಲ, ಕಾಳಜಿ ಬೆಳೆಸುವಲ್ಲಿಯೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಹಾಗೂ ಅವರದ್ದೇ ತೋಟದಿಂದ ಆರೋಗ್ಯಕರ ತರಕಾರಿ ಬೆಳೆದು ಸೇವಿಸಲು `ಶಾಲಾವನ' ಯೋಜನೆ ರೂಪುಪಡೆಯಲಿದೆ ಎಂದು ಸಿಇಒ ಹೇಳಿದರು. ಕಾರ್ಯಾಗಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಭಾಂಗಣ ಆಸಕ್ತರಿಂದ ತುಂಬಿದೆ. ಜನರಲ್ಲಿ ತಾರಸಿ ತೋಟದ ಬಗ್ಗೆ ಇರುವ ಸಕಾರಾತ್ಮಕ ಧೋರಣೆಗೆ ಇದು ಸಾಕ್ಷಿ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ, ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಂಗಳೂರಿನ ರಾಜೇಂದ್ರ ಹೆಗ್ಡೆ ಹಾಗೂ ಅನುಪಮಾ ಭಟ್ ತಾರಸಿ ತೋಟದ ಬಗ್ಗೆ ಮಾಹಿತಿ ನೀಡಿದರು. ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ರಾವ್ ಆರೂರು ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಡಾ. ನಂದಾ ಸ್ವಾಗತಿಸಿದರು. ಹೇಮಾ ದಿನೇಶ್ ಪ್ರಾರ್ಥಿಸಿದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.

Friday, May 11, 2012

ಜಿಲ್ಲೆಯಲ್ಲಿ 3972 ಅಲ್ಪ ಸಂಖ್ಯಾತರಿಗೆ ರೂ.703.20 ಲಕ್ಷ ಸಾಲ ನೀಡುವ ಗುರಿ

ಮಂಗಳೂರು,ಮೇ. 11:ಕರ್ನಾಟಕ ಸರ್ಕಾರ ಅಲ್ಪ ಸಂಖ್ಯಾತರ ಹಿತ ಕಾಯುವಲ್ಲಿ ಅನೇಕ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಿದ್ದು,ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ 2012-13 ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿಯಲ್ಲಿ 3972 ಫಲಾನುಭವಿಗಳಿಗೆ ಒಟ್ಟು 703.20 ಲಕ್ಷ ಸಾಲ ಸೌಲಭ್ಯ ನೀಡಲು ಗುರಿ ಹೊಂದಲಾಗಿದೆ.
ಅಂತೆಯೇ ಮೇಲ್ಕಂಡ ಅವಧಿಯಲ್ಲಿ ಸ್ವಾವಲಂಬನಾ ಸಬ್ಸಿಡಿ ಮತ್ತು ಮಾರ್ಜಿನ್ ಸಾಲ ಯೋಜನೆಯಡಿ ವಿವಿಧ ವಾಣಿಜ್ಯ ಬ್ಯಾಂಕುಗಳ ಸಹಕಾರದೊಂದಿಗೆ 288 ಜನ ಅಲ್ಪಸಂಖ್ಯಾತರಿಗೆ ಸಾಲ ಒದಗಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯನ್ವಯ ಕನಿಷ್ಠ ರೂ.10,000 ಹಾಗೂ ಗರಿಷ್ಠ ರೂ.1.00 ಲಕ್ಷ ಸಾಲ ನೀಡಲಾಗುವುದು.
ಅರಿವು ಸಾಲ ಯೋಜನೆಯಡಿ ಅಲ್ಪ ಸಂಖ್ಯಾತರ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಅವರಿಗೆ ವೃತ್ತಿ ಶಿಕ್ಷಣ ಉನ್ನತ ಶಿಕ್ಷಣಕ್ಕಾಗಿ ಕನಿಷ್ಠ ರೂ.5000/- ಗರಿಷ್ಠ ರೂ.50,000/- ಗಳ ವರೆಗೆ ಶೇಕಡಾ 2 ರ ಬಡ್ಡಿ ದರದಲ್ಲಿ 1188 ವಿದ್ಯಾರ್ಥಿಗಳಿಗೆ 237.60 ಲಕ್ಷ ರೂ.ಗಳ ಸಾಲ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ.ಗ್ರಾಮೀಣ ಕುಶಲಕರ್ಮಿಗಳು ಹಾಗೂ ವೃತ್ತಿ ಕುಲಕಸುಬುದಾರರ ಹಾಗೂ ಇತರ ಸಣ್ಣಪುಟ್ಟ ವೃತ್ತಿ ಅವಲಂಬಿತರಿಗೆ ಶ್ರಮಶಕ್ತಿ ಸಾಲ ಯೋಜನೆಯಡಿ ಕನಿಷ್ಠ ರೂ.10,000/- ಗಳಿಂದ ಗರಿಷ್ಠ ರೂ.20,000/- ಗಳ ಸಾಲವನ್ನು ಶೇಕಡಾ 4 ರ ಬಡ್ಡಿ ದರದಲ್ಲಿ ರೂ.129.60 ಲಕ್ಷಗಳನ್ನು 648 ಫಲಾನುಭವಿಗಳಿಗೆ ಹಂಚುವ ಗುರಿಯಿದೆ.
ಮತೀಯ ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆದಾರರಿಗೆ ವ್ಯಾಪಾರ ವಹಿವಾಟು ಕೈಗೊಳ್ಳಲು ಸ್ವಸಹಾಯ ಗುಂಪುಗಳ ಮೂಲಕ ಕಿರು ಸಾಲ ಯೋಜನೆಯಡಿ 1728 ಫಲಾನುಭವಿಗಳಿಗೆ ಗರಿಷ್ಠ ತಲಾ ರೂ.10,000/- ಗಳ ಸಾಲವನ್ನು ಶೇಕಡಾ 25 ಸಹಾಯಧನದೊಂದಿಗೆ ನೀಡುವ ಗುರಿ ಹೊಂದಲಾಗಿದೆ. ಅದೇ ರೀತಿ ವೈಯಕ್ತಿಕ ಗಂಗಾ ಕಲ್ಯಾಣ ಯೋಜನೆಯಡಿ ಒಂದೇ ಕಡೆ 2 ಎಕ್ರೆ ಜಮೀನು ಇರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಹೊಂದುವ ಸಲುವಾಗಿ ಕೊಳವೆ ಬಾವಿ ಕೊರೆಸುವಿಕೆ ಅಥವಾ ತೆರೆದ ಬಾವಿ ತೆಗೆದು ಪಂಪ್ ಸೆಟ್ ಅಳವಡಿಸಲು ವಿದ್ಯುದ್ಧೀಕರಣಕ್ಕಾಗಿ ತಲಾ 1.00 ಲಕ್ಷ ಸಾಲವನ್ನು 120 ರೈತರಿಗೆ ನೀಡುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ನೇರ ಸಾಲ ಯೋಜನೆಯಡಿ ರೂ.50,000/- ಅಥವಾ ರೂ.1.00 ಲಕ್ಷ ಗಳವರೆಗೆ ವ್ಯಾಪಾರ ಚಟುವಟಿಕೆ ಕೈಗೊಳ್ಳಲು ಅಥವಾ ಅಟೋ ರಿಕ್ಷಾ ಕೊಳ್ಳಲು ಶೇಕಡಾ 6 ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.
ಆಸಕ್ತ ದಕ್ಷಿಣಕನ್ನಡ ಜಿಲ್ಲೆಯ ನಿವಾಸಿ ಮುಸ್ಲಿಂ,ಕ್ರೈಸ್ತ,ಸಿಕ್,,ಜೈನ್,ಪಾರ್ಸಿ ಮತ್ತು ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸೇರಿದ ಕುಟುಂಬದ ವಾರ್ಷಿಕ ವರಮಾನ ರೂ.22,000/- ಗಳಿಗಿಂತ ಕಡಿಮೆ ಇರುವ 18 ರಿಂದ 55 ವರ್ಷದೊಳಗಿನ ಅಲ್ಪ ಸಂಖ್ಯಾತರು ಸೌಲಭ್ಯ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು 30-6-12 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಹಾಗೂ ಅರ್ಜಿ ನಮೂನೆಗಳನ್ನು ಪಡೆಯಲು ಜಿಲ್ಲಾ ವ್ಯವಸ್ಥಾಪಕರು,ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ (ನಿ) 2 ನೇ ಮಹಡಿ,ಕೊಟ್ಟಾರ ,ಮಂಗಳೂರು ಇಲ್ಲಿಂದ ಪಡೆಯಬಹುದು.ನಿಗಮದ ವೆಬ್ ಸೈಟ್ <http://kmdc.kar.nic.in> ನಿಂದಲೂ ಅರ್ಜಿಗಳನ್ನು ಪಡೆಯಬಹುದಾಗಿದೆ.

Thursday, May 10, 2012

ದ.ಕ. ರಸ್ತೆ ಕಾಮಗಾರಿಗಳಿಗೆ ರೂ.5065ಲಕ್ಷ ವೆಚ್ಚ

ಮಂಗಳೂರು,ಮೇ. 10:ದಕ್ಷಿಣಕನ್ನಡ ಜಿಲ್ಲೆಯಲ್ಲಿ 2011-12 ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನ ಯೋಜನೆಗಳಡಿ ಮಂಜೂರಾದ ರಸ್ತೆ ಕಾಮಗಾರಿಗಳಿಗೆ ಒಟ್ಟು 5276.390 ಲಕ್ಷ ರೂ.ಗಳಷ್ಟು ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ 5065.950 ಲಕ್ಷ ರೂ.ಗಳು ವೆಚ್ಚವಾಗಿ ರೂ.210.440 ಲಕ್ಷ ಉಳಿಕೆಯಾಗಿದೆ.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಬಿಡುಗಡೆಯಾದ ಅನುದಾನ 2231.670ಲಕ್ಷ ಪೂರ್ಣ ವೆಚ್ಚವಾಗಿದ್ದು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ರೂ.1935.040 ಲಕ್ಷ ಬಿಡುಗಡೆಯಾಗಿದ್ದು,ರೂ.1883.600 ಲಕ್ಷ ವೆಚ್ಚವಾಗಿ ರೂ.51.440 ಉಳಿಕೆಯಾಗಿದೆ.
ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯನ್ವಯ 2010-11 ರಲ್ಲಿ ಜಿಲ್ಲೆಗೆ ಒಟ್ಟು ರೂ.201.000 ಲಕ್ಷ ಅನುದಾನ ಬಿಡುಗಡೆಯಾಗಿ ಸಂಪೂರ್ಣ ವೆಚ್ಚವಾಗಿದೆ. ಇದೇ ಯೋಜನೆಯಲ್ಲಿ 2011-12 ನೇ ಸಾಲಿನಲ್ಲಿ ಬಿಡುಗಡೆಯಾದ ರೂ.250.000ಲಕ್ಷಗಳಲ್ಲಿ ರೂ.246.000 ಲಕ್ಷ ವೆಚ್ಚ ಮಾಡಲಾಗಿದ್ದು, 4.00 ಲಕ್ಷ ಬಾಕಿ ಉಳಿದಿರುತ್ತದೆ.ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳ ಗುಂಡಿಗಳನ್ನು ಮುಚ್ಚುವುದಕ್ಕಾಗಿ ಬಿಡುಗಡೆಯಾಗಿದ್ದ ಒಟ್ಟು ಅನುದಾನ ರೂ.315.00ಲಕ್ಷ ಪೂರ್ಣ ವೆಚ್ಚ ಮಾಡಲಾಗಿದೆ.
ಸಿ.ಎಂ.ಜಿ.ಎಸ್.ವೈ ಯೋಜನೆಯಡಿ ರೂ.10.00 ಕೋಟಿ ಅನುದಾನದಲ್ಲಿ 333.000 ಲಕ್ಷ ಬಿಡುಗಡೆಯಾಗಿದ್ದು, ರೂ.178.000ಲಕ್ಷಗಳನ್ನು ಮಾತ್ರ ಬಳಸಿಕೊಳ್ಳಲಾಗಿ ರೂ.155.000 ಲಕ್ಷ ಉಳಿಕೆಯಾಗಿದೆ.
ಜಿಲ್ಲೆಯ ರಸ್ತೆಗಳ ಡಾಂಬರೀಕರಣ ಕಾರ್ಯಕ್ರಮದಡಿ ಬಿಡುಗಡೆಯಾದ ರೂ.10.640 ಲಕ್ಷ ಪೂರ್ಣ ಬಳಕೆಯಾಗಿದೆಯೆಂದು ಜಿಲ್ಲಾ ಪಂಚಾಯತ್ ವರದಿಯಲ್ಲಿ ತಿಳಿಸಿದೆ.

Wednesday, May 9, 2012

ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ; ಅಧಿಕಾರಿಗಳಿಂದ ದಾಳಿ

ಮಂಗಳೂರು, ಮೇ9: ಇಂದು ಮಂಗಳೂರಿನಲ್ಲಿ ಮಹಾನಗರಪಾಲಿಕೆಯ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ನಗರದ ಮಾರುಕಟ್ಟೆ ಪ್ರದೇಶಗಳಾದ ಬೀಬಿ ಅಲಾಬಿ ರಸ್ತೆ, ಬಂದರು, ಸೆಂಟ್ರಲ್ ಮಾರ್ಕೆಟ್, ನೆಲ್ಲಿಕಾಯಿರಸ್ತೆಯ ಅಂಗಡಿಗಳಲ್ಲಿ 450ರಿಂದ 500 ಕೆ ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. ಮೀನಾ ಕಾಂಪ್ಲೆಕ್ಸ್ ನಲ್ಲಿ ಲೈಸನ್ಸ್ ಇಲ್ಲದೆ ನಡೆಸುತ್ತಿದ್ದ 4 ಅಂಗಡಿಗಳನ್ನು ಮುಚ್ಚಿಸಿದ್ದು ಒಂದು ಅಂಗಡಿಯಲ್ಲಿ 20 ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ದೊರೆತಿದೆ. ಕಾನೂನು ಪಾಲಿಸದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

2012-13ರಲ್ಲಿ ದ.ಕ. ಜಿಲ್ಲೆಗೆ ರೂ.10.72 ಕೋಟಿ ಸಾಲ ಸೌಲಭ್ಯ ಗುರಿ: ಅಬೂಬಕ್ಕರ್

ಮಂಗಳೂರು,ಮೇ.09: ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ `ನಂಬರ್ ವನ್' ಸ್ಥಾನದಲ್ಲಿದ್ದು ಮುಖ್ಯಮಂತ್ರಿಗಳಿಂದಲೂ ಶ್ಲಾಘನೆಗೆ ಪಾತ್ರವಾಗಿದೆ. 2012-13ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಸಂಬಂಧಿಸಿ 10.72 ಕೋಟಿ ಯೋಜನೆ ಅನುಷ್ಠಾನದ ಗುರಿಯನ್ನು ನಿಗಮ ಹೊಂದಿದೆ ಎಂದು ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಿಗಮದಲ್ಲಿ ಯೋಜನೆಯನ್ನು ಅನುಷ್ಟಾನಗೊಳಿಸಲು ಸಿಬ್ಬಂದಿ, ಸೂಪರ್ವೈಸರ್ಸ್ ಗಳನ್ನು ನೇಮಕ ಮಾಡಲಾಗಿದ್ದು, ಸರಕಾರ ಕೂಡ ಪೂರಕ ಅನುದಾನ ನೀಡುತ್ತಿದೆ ಎಂದರು.ಈ ಹಿಂದಿಗಿಂತ ಸಾಲ ಮರು ಪಾವತಿ ಕೂಡ ನಿಗದಿತ ಸಮಯದೊಳಗೆ ಆಗುತ್ತಿದ್ದು, ರಾಜ್ಯದಲ್ಲಿ ಇದರ ಪ್ರಮಾಣ ಶೇ. 80ರಷ್ಟು ಇದೆ. ಹಾಸನ ಪ್ರಥಮ, ಉಡುಪಿ ದ್ವಿತೀಯ, ಮಂಡ್ಯ ತೃತೀಯ ಸ್ಥಾನದಲ್ಲಿದ್ದರೆ, ಸಾಲ ಮರುಪಾವತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ ಎಂದರು.
ಮೂರು ವರ್ಷ ಹತ್ತು ತಿಂಗಳಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಗಳ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದ ಅವರು, ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಉದ್ಯೋಗ ನೀಡಲು ಆದ್ಯತೆಯನ್ನು ನೀಡಿದೆ ಎಂದರು. ಸ್ವಾವಲಂಬನ ಮಾರ್ಜಿನ್ ಹಣ ಸಾಲ ಮತ್ತು ಸಹಾಯಧನ ಯೋಜನೆಯಡಿ 228 ಮಂದಿಗೆ ರೂ.43.2 ಲಕ್ಷ ಸಹಾಯಧನ, ಅರಿವು ಸಾಲ ಯೋಜನೆ ಯಡಿ 1188 ಮಂದಿಗೆ ರೂ.2,37,60,000, ಶ್ರಮಶಕ್ತಿ ಸಾಲ ಯೋಜನೆಯಡಿ 648 ಮಂದಿಗೆ ರೂ.1,29,60,000, ಮೈಕ್ರೋ ಸಾಲ ಮತ್ತು ಮೈಕ್ರೋ ಸಹಾಯಧನ ಯೋಜನೆಯಲ್ಲಿ 1,728 ಮಂದಿಗೆ ರೂ.1,72,80,000, ಗಂಗಾ ಕಲ್ಯಾಣ ಯೋಜನೆಯಡಿ 120 ಮಂದಿಗೆ ರೂ.1.20ಲಕ್ಷ ಸೇರಿ ಒಟ್ಟು 2,972 ಮಂದಿಗೆ ರೂ.70.32 ಲಕ್ಷ ಒದಗಿಸುವ ಗುರಿ ಹೊಂದಲಾಗಿದೆ ಎಂದವರು ವಿವರಿಸಿದರು.
ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಅರಿವು ಮತ್ತು ಶ್ರಮಶಕ್ತಿ ಯೋಜನೆಗೆ ಸಂಬಂಧಿಸಿ ತಲಾ 409 ಮಂದಿಗೆ ತಲಾ ರೂ.81.80ಲಕ್ಷ, ಮೈಕ್ರೋ ಸಾಲ ಮತ್ತು ಮೈಕ್ರೋ ಸಹಾಯಧನ ಯೋಜನೆಯಲ್ಲಿ 817 ಮಂದಿಗೆ ರೂ.81.70 ಲಕ್ಷ , ಮನೆ ಕಟ್ಟಡ ಬಡ್ಡಿ ಸಹಾಯಧನ ಯೋಜನೆಯಡಿ 164 ಮಂದಿಗೆ 1.23 ಲಕ್ಷ, ಸೇರಿ ಒಟ್ಟು 1,799 ಮಂದಿಗೆ ರೂ.36830000 ಒದಗಿಸುವ ಗುರಿ ಹೊಂದಲಾಗಿದೆ ಎಂದವರು ವಿವರಿಸಿದರು.
ಅಲ್ಪಸಂಖ್ಯಾತರ ಪರ ಮುತುವರ್ಜಿ ವಹಿಸಿರುವ ರಾಜ್ಯ ಸರಕಾರ ನಿಗಮಕ್ಕೆ 2008-09ರಲ್ಲಿ 46.70 ಕೋಟಿ, 2009-10ರಲ್ಲಿ ರೂ.41.45 ಕೋಟಿ ಮತ್ತು 2010-11ರಲ್ಲಿ 56 ಕೋಟಿ,2011-12ರಲ್ಲಿ 95 ಕೋಟಿ ಹಾಗೂ 2012-13ರ ಸಾಲಿನಲ್ಲಿ 120 ಕೋಟಿ ಅನುದಾನವನ್ನು ಮೀಸಲಿರಿಸುವ ಮೂಲಕ ಅಲ್ಪ ಸಂಖ್ಯಾತರ ಪರವಾಗಿರುವ ಸರಕಾರ ಎಂಬ ಹೆಮ್ಮೆಗೆ ಪಾತ್ರವಾಗಿದೆ ಎಂದು ಅಬೂಬಕ್ಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ಪ್ ಅಧ್ಯಕ್ಷ ಉಸ್ಮಾನ್ ಹಾಜಿ, ಕ್ರಿಶ್ಟಿಯನ್ ಅಭಿವೃದ್ಧಿ ಘಟಕದ ಜೆರಾಲ್ಡಿನ್ ಡಿಸೋಜ ಉಪಸ್ಥಿತರಿದ್ದರು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಗ್ರಾಂ.ಪಂ.ಗಳಲ್ಲಿ 1.84 ಕೋ.ವೆಚ್ಚ

ಮಂಗಳೂರು,ಮೇ.09 :ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 203ಗ್ರಾಮಪಂಚಾಯತ್ ಗಳಲ್ಲಿ ಶೇಕಡಾ
25ರಅನುದಾನದಲ್ಲಿ 2011-12 ನೇ ಸಾಲಿನಲ್ಲಿ ಒಟ್ಟು 1,84,04,772 ರೂ.ಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ವೆಚ್ಚ ಮಾಡಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಗಳಿಗೆ 2011-12 ನೇ ಸಾಲಿನಲ್ಲಿ ರೂ.1,70,03,831 ಗಳ ಜೊತೆಗೆ 2011 ರ ಉಳಿಕೆ ಹಣ ರೂ.41,94,715 ನ್ನು ಸಹ ಕಾದಿರಿಸಲಾಗಿತ್ತು.
ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು ರೂ.88,81,692 ಗಳನ್ನು ವೆಚ್ಚ ಮಾಡಿದ್ದರೆ ಅತೀ ಕಡಿಮೆ ಸುಳ್ಯ ತಾಲೂಕಿನಲ್ಲಿ ರೂ.17,78,400 ಗಳನ್ನು ವೆಚ್ಚ ಮಾಡಲಾಗಿದೆ. ಉಳಿದಂತೆ ಬೆಳ್ತಂಗಡಿ ತಾಲೂಕಿನಲ್ಲಿ 27,65,247 ,ಪುತ್ತೂರು ತಾಲೂಕಿನಲ್ಲಿ 25,79,530 ಹಾಗೂ ಬಂಟ್ವಾಳ ತಾಲೂಕಿನಲ್ಲಿ 23,99,894ರೂ.ಗಳನ್ನು ವೆಚ್ಚ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈ ಯೋಜನೆಯ ಅನ್ವಯ ಶೇಕಡಾ 87 ರಷ್ಟು ಸಾಧನೆ ಮಾಡಲಾಗಿದೆಯೆಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ವರದಿಯಲ್ಲಿ ತಿಳಿಸಿದೆ.

Monday, May 7, 2012

ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಪರಿಶೀಲನೆ

ಮಂಗಳೂರು, ಮೇ.07 : ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 400 ಮೀ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಕಾಮಗಾರಿ ಬಗ್ಗೆ ನಿಯಮಿತವಾಗಿ ಪರಿಶೀಲನೆ ಗಳನ್ನು ನಡೆಸಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿಗಾಗಿ ತಾಂತ್ರಿಕ ಸಮಿತಿ ಮತ್ತು ಮೇಲ್ವಿಚಾರಣಾ ಸಮಿತಿ ಕೂಲಂಕಷ ಪರಿಶೀಲನೆ ನಡೆಸುತ್ತಿದೆ.
ಕಾಮಗಾರಿಯ ಅಭಿವೃದ್ಧಿ ಹಾಗೂ ಗುಣ ಮಟ್ಟದ ಬಗ್ಗೆ ವಿಧಾನ ಸಭಾ ಉಪಸಭಾಪತಿಗಳಾದ ಎನ್ ಯೋಗೀಶ್ ಭಟ್ ಮತ್ತು ಜಿಲ್ಲಾ ಕ್ರೀಡಾಂಗಣ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಗಳಾದ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಇಂದು ಕಾಮಗಾರಿಯ ಪರಿಶೀಲನೆ ಮತ್ತು ಸಭೆಯನ್ನು ಕ್ರೀಡಾಂಗಣದಲ್ಲಿ ನಡೆಸಿದರು.
ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಬೆಂಗಳೂರಿನ ಸಹಾಯಕ ಅಭಿಯಂತರರಾದ ಎಸ್ ಹರೀಶ್ ಅವರು ಏಪ್ರಿಲ್ 13ರಂದು ಕಾಮಗಾರಿ ಅಭಿವೃದ್ಧಿಯನ್ನು ಪರಿಶೀಲಿಸಿ, ಸಲ್ಲಿಸಿದ ವರದಿಯ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಕಾಮಗಾರಿಯನ್ನು ನಿರ್ವಹಿಸುತ್ತಿರುವ ಸಿನ್ ಕಾಟ್ಸ್ ಇಂಟರ್ ನ್ಯಾಷನಲ್ ನ ಗೋಪಾಲ್ ಅವರಿಗೆ ಕಾಮಗಾರಿ ನಿರ್ವಹಣೆಯಲ್ಲಿ ವೆಟ್ ಮಿಕ್ಷ್ ಅಳವಡಿಸುವ ವೇಳೆ ಜೆಲ್ಲಿಯ ಮಿಶ್ರಣಕ್ಕೆ ನೀರು ನಿಗದಿತ ಪ್ರಮಾಣದಲ್ಲಿ ಬಳಸುವ ಬಗ್ಗೆ ಹಾಗೂ ವೈ ಬ್ರೇಟರ್ ರೋಲರನ್ನು ಬಳಸಬೇಕೆಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈಗಾಗಲೇ ಡಿ ಏರಿಯಾದ ಮಧ್ಯಭಾಗದ ಅಳತೆಯನ್ನು 23 ಮೀಟರ್ ಗೆ ವಿಸ್ತರಿಸಿ ವಿಸ್ತೀರ್ಣವನ್ನು 1170 ಚದರ ಮೀಟರಿಗೆ ವಿಸ್ತರಿಸಲಾಗಿದೆ. ಜಾವೆಲಿನ್ ಎಸೆತಕ್ಕೆ ಅನುಕೂಲವಾಗುವಂತೆ ನಕ್ಷೆಯಲ್ಲಿ ತೋರಿಸಿರುವಂತೆ ಟ್ರ್ಯಾಕ್ ಸೇರಿ 35 ಮೀಟರ್ ಗೆ (23+10+2=35 ಮೀಟರ್ )ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಸ್ಟೀಪಲ್ ಚೇಸ್ ಸ್ಪರ್ಧೆಯ ನೀರಿನ ತೊಟ್ಟಿ (3.66 ಮೀ(wxe)ಥ 3.55ಮೀ (nxs)ಥ 0.7ಮೀ Depth) ಯನ್ನು ಉತ್ತರಭಾಗದ ಡಿ ಏರಿಯಾದಲ್ಲಿ ನಿರ್ಮಿಸಲಾಗುವುದು.
ಸಮಗ್ರ ಒಳಚರಂಡಿ ವ್ಯವಸ್ಥೆ ರೂಪಿಸುವ ಬಗ್ಗೆ ಕ್ರೀಡಾಂಗಣದ ಪಶ್ಚಿಮದ 2 ಮುಖ್ಯ ದ್ವಾರದ ಪಕ್ಕದಲ್ಲಿ ಹೊರಗಡೆಯ ನೀರು ಕ್ರೀಡಾಂಗಣದ ಒಳಗಡೆ ಹೋಗದಂತೆ 2 ಕಡೆಗಳಲ್ಲಿ CowCatch ಹಾಕುವುದು, ಹರ್ಡಲ್ಸ್ ಸ್ಪರ್ಧೆಯನ್ನು ನಡೆಸಲು ತೆಗೆದುಕೊಂಡ ಕ್ರಮ, ಟ್ರಾಕಿನ ಅಳತೆ ಮಾಡಲು ಸಿ ಡಿ ಆರ್ ಪಾಯಿಂಟ್ಸ್ (79 ಮೀಟರ್) ಹಾಕಿದ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ತಾಂತ್ರಿಕ ಸಮಿತಿಯ ಸದಸ್ಯರು ಮತ್ತು ಯುವಜನ ಮತ್ತು ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ್ ಉಪಸ್ಥಿತರಿದ್ದರು.

Sunday, May 6, 2012

ಮುಖ್ಯಮಂತ್ರಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಮಂಗಳೂರು,ಮೇ.06: ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಭೇಟಿ ವೇಳೆ ಮಂಗಳೂರು ಮತ್ತು ಪುತ್ತೂರು ತಾಲೂಕಿನಲ್ಲಿ ಬಿಡುವಿಲ್ಲದೇ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ನಗರದ ಸಿ.ವಿ. ನಾಯಕ್ ಹಾಲ್ ನಲ್ಲಿ ನಡೆದ ಕುಡಾಲ್ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಂಘದ ಸಮಾವೇಶವನ್ನು ಉದ್ಘಾಟಿಸಿದರು.

ಪುತ್ತೂರಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಒಕ್ಕಲಿಗ ಗೌಡ ಸಂಘದ ವಾರ್ಷಿಕ ಕ್ರೀಡಾ ಕೂಟಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ನಂತರ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿದ ಕೌಶಲ್ಯ ಸೌಧ ಕಟ್ಟಡ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಿದರು.
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು,ವಿಶೇಷ ಪೂಜೆ ಸಲ್ಲಿಸಿದರು.

ಮಂಗಳೂರಿನ ಪುರಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಂಗವಿಕಲ ಸಂಘದ20 ನೇ ವರ್ಷದ ಮಾಹಿತಿ ಶಿಬಿರ,ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು ಮತ್ತು ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಜೆ ಮಂಗಳೂರಿನ ಸಂತ ಅಲೋಸಿಯಸ್ ಲೊಯೆಲಾ ಸಭಾಂಗಣದಲ್ಲಿ ಸ್ವಾತಂತ್ರ್ಯ ಸೇನಾನಿ ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಅವರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಎಲ್ಲಪ್ಪ ಅವರ ಅವರ ಸ್ಮರಣೆಗಾಗಿ ವಿಶೇಷ ಸ್ಮಾರಕ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು. ನಂತರ ಎ.ಜೆ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ಎ.ಜೆ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ದಶಮಾನೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿದರು.

ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಕಾಲಮಿತಿ ನಿಗದಿ

ಮಂಗಳೂರು, ಮೇ.06 : ದಕ್ಷಿಣ ಕನ್ನಡ ಜಿಲ್ಲೆಯ ವೈಚಿತ್ರ್ಯ, ವೈಪರಿತ್ಯಗಳನ್ನು ಬಲ್ಲ ತಾನು ಬಜೆಟ್ ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅತೀ ಹೆಚ್ಚು ಅನುದಾನ ಹಾಗೂ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದು, ಮುಂದಿನ ಡಿಸೆಂಬರ್ ತಿಂಗಳೊಳಗೆ ಜಿಲ್ಲೆಯು ರಾಜ್ಯಕ್ಕೆ ಉತ್ತಮ ಮಾದರಿಗಳನ್ನು ನೀಡಬೇಕೆಂದು ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ಅವರು ಹೇಳಿದರು.
ಅವರು ಇಂದು ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಜನರನ್ನು ಬಹುಕಾಲದಿಂದ ಕಾಡುತ್ತಿರುವ 94 ಸಿ ಕಾನೂನು ತಿದ್ದುಪಡಿ ಕಾನಾ ಬಾನೆ ಕುಮ್ಕಿ ಸಮಸ್ಯೆಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಪರಿಹಾರ ಕಂಡುಕೊಳ್ಳಲಾಗಿದ್ದು ಅಕ್ರಮ ಸಕ್ರಮಕ್ಕೂ ಸಮಿತಿಯನ್ನು ರಚಿಸಲಾಗಿದೆ. ಈ ಸಂಬಂಧ ಒಂದು ವಾರದೊಳಗೆ ಸರ್ಕಾರಿ ಆದೇಶ ಜಾರಿ ಮಾಡಲಾಗುವುದು.
ರಸ್ತೆ ಮತ್ತು ಸೇತುವೆಗಳ ಕಾಮಗಾರಿಗಳಿಗಾಗಿ ಪ್ರಥಮ,ದ್ವಿತೀಯ ಮತ್ತು ಮೂರನೇ ಹಂತಗಳಲ್ಲಿ ಜಿಲ್ಲೆಯಿಂದ ತಾಲೂಕುಗಳಿಗೆ, ತಾಲೂಕುಗಳಿಂದ ಹೋಬಳಿಗಳಿಗೆ ಮತ್ತು ಒಳರಸ್ತೆಗಳ ಅಭಿವೃದ್ಧಿಗೆ ಯೋಜನೆ ತಯಾರಾಗಿದ್ದು, ಪ್ರತಿ ತಿಂಗಳು ಎಲ್ಲ ಶಾಸಕರು ಈ ಸಂಬಂಧ ಅಧಿಕಾರಿಗಳ ಸಭೆಯನ್ನು ಕರೆಯಬೇಕು. ಸಂಸದರು ಇದರ ಉಸ್ತುವಾರಿ ವಹಿಸಬೇಕು. ಡಿಸೆಂಬರ್ ವೇಳೆಗೆ ರಸ್ತೆ ಕಾಮಗಾರಿಗಳು ಸಂಪೂರ್ಣವಾಗಿರಬೇಕು ಸೂಚಿನೆ ನೀಡಿದರು.
ಮೊದಲನೇ ಹಂತದಲ್ಲಿ 132.47 ಕಿ.ಮೀ ಉದ್ದದ ರಸ್ತೆ 53.79 ಕೋಟಿ ರೂ. ವೆಚ್ಚದಲ್ಲಿ, ಎರಡನೇ ಹಂತದಲ್ಲಿ 34.43 ಕಿ.ಮೀ ಉದ್ದದ ರಸ್ತೆ 6.12 ಕೋಟಿ ಮೊತ್ತಗಳಲ್ಲಿ ಹಾಗೂ ವೇಣೂರು ಮಹಾಮಸ್ತಕಾಭಿಷೇಕ ಕಾಮಗಾರಿಯಡಿಯಲ್ಲಿ ಒಟ್ಟು 8 ಕಾಮಗಾರಿಗಳು 12 ಕೋಟಿ ರೂ. ಅಂದಾಜು ಮೊತ್ತಕ್ಕೆ ಮಂಜೂರಾಗಿದ್ದು, ಟೆಂಡರ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಸಕರ್ಾರಿ ಇಲಾಖೆಗಳಲ್ಲಿ ರಾಜ್ಯದೆಲ್ಲೆಡೆ ಸಿಬ್ಬಂದಿ ಮತ್ತು ಅಧಿಕಾರಿಗಳ ಕೊರತೆ ಇದ್ದು, ವ್ಯವಸ್ಥೆಯಲ್ಲೇ ಅಮೂಲಾಗ್ರ ಬದಲಾವಣೆಗೆ ತಯಾರಿ ನಡೆದಿದೆ. ಇ ಗರ್ವನೆನ್ಸ್ ನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಕಚೇರಿಯಲ್ಲಿ ಆಡಳಿತವನ್ನು ಸರಳೀಕರಣಗೊಳಿಸಲು ನಿರ್ಧರಿಸಿದೆ ಎಂದರು.
ಶಾಸಕರು, ಜನಪ್ರತಿನಿಧಿಗಳ ಅಹವಾಲನ್ನು ಆಲಿಸಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವುದಾಗಿ ನುಡಿದರು. ಪೊಲೀಸ್ ಇಲಾಖೆ, ಕಂದಾಯ ಇಲಾಖೆಗೆ ನೇಮಕಾತಿಗಳು ನಡೆಯುತ್ತಿದೆ. ಬಜೆಟ್ ನಲ್ಲಿ ಹೇಳಿರುವ ಯೋಜನೆಗಳ ಅನುಷ್ಠಾನ ಸಂಬಂಧ ಬೆಂಗಳೂರಿನಲ್ಲಿ 8 ರಂದು ಉನ್ನತ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.
ತುಂಬೆ ಅಣೆಕಟ್ಟು ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಮಗಾರಿಗೆ ವೇಗೋತ್ಕರ್ಷ ನೀಡಲು ಜಿಲ್ಲಾಧಿಕಾರಿಗಳು ಮತ್ತು ಮನಾಪ ಆಯುಕ್ತರು ಪ್ರತೀ ವಾರ ಖುದ್ದು ಪರಿಶೀಲನೆ ನಡೆಸಬೇಕೆಂದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ರನ್ ವೇ ವಿಸ್ತರಣೆ, ಡೆಕ್ಕನ್ ಪಾರ್ಕ್ ಸ್ವಾಧೀನ ಪ್ರಕ್ರಿಯೆ ಸಾಗುತ್ತಿದ್ದು, ಇದಕ್ಕಾಗಿ 130 ಕೋಟಿ ಅಗತ್ಯವಿದ್ದು, ಅನುದಾನದ ಕೊರತೆ ಇಲ್ಲ ಎಂದರು. ವಿಮಾನ ನಿಲ್ದಾಣದ ವಿಸ್ತರಣಾ ಉದ್ದೇಶದ ಕಾರಣ ಡೆಕ್ಕನ್ ಪಾರ್ಕ್ ಕಟ್ಟಡ ಇರುವ 3.21 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಲು 309.00 ಲಕ್ಷ ಬಿಡುಗಡೆಯಾಗಿದೆ. ವಿಮಾನ ನಿಲ್ದಾಣದ ಹೆಚ್ಚುವರಿ ಸಂಪರ್ಕ ರಸ್ತೆ 2.61 ಎಕರೆ ಭೂಸ್ವಾಧೀನಕ್ಕೆ ಕೆ ಆರ್ ಡಿ ಸಿ ಎಲ್ ನಿಂದ ಕೋರಿಕೆ ಬಂದಿದ್ದು, ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿರುತ್ತದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದರು.
ಮಾಣಿ-ಮೈಸೂರು ರಸ್ತೆ ಸಂಬಂಧ ವಿಶೇಷ ಸಭೆ ಕರೆಯಲು, ಕೊಯಿಲಾದಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು, ಸಾಮಾಜಿಕ ಭದ್ರತೆಗೆ ಹಣ ಬಿಡುಗಡೆಗೆ ಆದ್ಯತೆ ನೀಡಲಾಗಿದೆ. ಬಿಪಿಎಲ್ ಕಾರ್ಡ್ ಸಿಗದ ಅರ್ಹರ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡುವ ಹೊಣೆಯನ್ನು ಜನಪ್ರತಿನಿಧಿಗಳಿಗೆ ವಹಿಸಿದ ಮುಖ್ಯಮಂತ್ರಿಗಳು, ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂದರು.
ಸಾಮಾಜಿಕ ಭದ್ರತಾ ಯೋಜನೆಯಡಿ 2011-12ನೇ ಸಾಲಿನಲ್ಲಿ ವೃದ್ಧಾಪ್ಯ ವೇತನ-216, ವಿಧವಾ ವೇತನ-2252, ಅಂಗವಿಕಲ ವೇತನ(40%) -670, (75%)_780, ಸಂಧ್ಯಾ ಸುರಕ್ಷಾ ವೇತನ-2705, ಒಟ್ಟು 6623 ಪ್ರಕರಣಗಳನ್ನು ಮಂಜೂರು ಮಾಡಲಾಗಿದೆ.
ಕೆರೆಗಳ ಪುನರುಜ್ಜೀವನ ಕಾಮಗಾರಿಗಳಡಿ 1.39 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 122, ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ 13, ಮಹಾನಗರಪಾಲಿಕೆಯಲ್ಲಿ 10 ಹೀಗೆ ಒಟ್ಟು 145 ಕೆರೆಗಳನ್ನು ಗುರುತಿಸಲಾಗಿದೆ. ಜಿಲ್ಲಾ ಪಂಚಾಯತ್ನಿಂದ 75 ಕೆರೆಗಳ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, 47 ಕಾಮಗಾರಿಗಳಿಗೆ ಟೆಂಡರ್ ಬಂದಿರುವುದಿಲ್ಲ. 3 ಕಾಮಗಾರಿ ಪೂರ್ಣಗೊಂಡಿದೆ. 32 ಕಾಮಗಾರಿ ಪ್ರಗತಿಯಲ್ಲಿದೆ. ಮಹಾನಗರಪಾಲಿಕೆ ವ್ಯಾಪ್ತಿಯ 10 ಕೆರೆಗಳಲ್ಲಿ 6 ಪ್ರಗತಿಯಲ್ಲಿದ್ದು 2 ಕಾಮಗಾರಿ ಪೂರ್ಣಗೊಂಡಿದೆ. ಟೆಂಡರ್ ಬಾರದ ಕೆರೆ ಕಾಮಗಾರಿಗೆ ಪರ್ಯಾಯವನ್ನು ಆಲೋಚಿಸಿ ಅನುಷ್ಠಾನಕ್ಕೆ ತನ್ನಿ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಅಂತರ್ ಜಲ ವೃದ್ಧಿಗೆ ಕ್ರಮ ಕೈಗೊಳ್ಳಿ ಎಂದ ಮುಖ್ಯಮಂತ್ರಿಗಳು, ಪಶ್ಚಿಮವಾಹಿನಿ ಯೋಜನೆಯ ಮುಖ್ಯ ಉದ್ದೇಶವೇ ಶಾಶ್ವತ ನೀರು ಎಂದರು. ಶಾಶ್ವತ ಯೋಜನೆಯ ನೀಲಿ ನಕಾಶೆಯನ್ನು ಜನವರಿ ಒಳಗೆ ಸಲ್ಲಿಸಬೇಕೆಂದ ಮುಖ್ಯಮಂತ್ರಿಗಳ ಬಳಿ ಕುಡಿಯುವ ನೀರಿಗಾಗಿ ಚೆಕ್ ಡ್ಯಾಂ ನಿರ್ಮಿಸಲು ನೂರು ಕೋಟಿ ರೂ. ನೀಡಿ ಎಂದು ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಕೇಳಿದರು.
ಸಣ್ಣನೀರಾವರಿ ಇಲಾಖೆಯ 13 ಕೆರೆಗಳಲ್ಲಿ 2 ಪೂರ್ಣಗೊಂಡಿದ್ದು, 1 ಪ್ರಗತಿಯಲ್ಲಿದೆ. 64 ಚೆಕ್ ಡ್ಯಾಂಗಳಿಗೆ ಅನುಮೋದನೆ ದೊರೆತಿದ್ದು, 32 ರ ಕಾಮಗಾರಿ ಪ್ರಗತಿಯಲ್ಲಿದೆ. 64 ಚೆಕ್ ಡ್ಯಾಂಗಳಿಗೆ ಅನುಮೋದನೆ ದೊರೆತಿದ್ದು, 32 ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಅಂದಾಜು 2618.50 ಲಕ್ಷಗಳಲ್ಲಿ 361.60 ಲಕ್ಷ ಮೊತ್ತ ವೆಚ್ಚ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಸಂಬಂಧ, ಕಳಪೆ ಕಾಮಗಾರಿ ಸಂಬಂಧ ಬೆಂಗಳೂರಿನಲ್ಲಿ ಶಾಸಕರನ್ನು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನೊಳಗೊಂಡ ವಿಶೇಷ ಸಭೆ ಕರೆಯಲಾಗುವುದು ಎಂದ ಅವರು, ಸುಳ್ಯದ ಮಂಡೆಕೋಲಿನಲ್ಲಿ ರಬ್ಬರ್ ಉದ್ದಿಮೆಗೆ ಸಂಬಂಧಿಸಿದಂತೆ ದೊಡ್ಡ ಕಂಪೆನಿಗಳು ಮುಂದೆ ಬಂದಿದ್ದು, ರೈತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತುರ್ತಾಗಿ ಕೈಗೊಳ್ಳಲಿದ್ದೇನೆ ಎಂದರು.
ಪಿಲಿಕುಳ, ಪ್ರವಾಸೋದ್ಯಮದ ಬಗ್ಗೆಯೂ ಸವಿವರ ಚರ್ಚೆ ನಡೆಯಿತು. ಕಾರ್ಮಿಕ ಇಲಾಖೆಯ ಗುರಿ ನಿಗದಿ ಹಾಗೂ ಇಎಸ್ ಐ ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ತಮ್ಮ ಮಹಾತ್ವಾಕಾಂಕ್ಷಿ ಯೋಜನೆ ಸಕಾಲದಲ್ಲಿ ಆದ ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಇದುವರೆಗೆ ಸಕಾಲದಡಿ 9,36,000 ಅರ್ಜಿಗಳು ಸ್ವೀಕಾರಗೊಂಡಿದ್ದು 7,94,000 ಅರ್ಜಿ ವಿಲೇ ಆಗಿದೆ. ಅತ್ಯಂತ ಜನಪರ ಯೋಜನೆ ಇದಾಗಿದ್ದು ಜನರಿಗೆ ಹಾಗೂ ಕರ್ತವ್ಯಪರ ಅಧಿಕಾರಿಗಳಿಗೆ ಖುಷಿತಂದಿದೆ ಎಂದರು.
ಸಭೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಜಿ.ಪಂ ಅಧ್ಯಕ್ಷೆ ಕೆ ಟಿ ಶೈಲಜಾ ಭಟ್, ಮೇಯರ್ ಗುಲ್ಜಾರ್ ಭಾನು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಬಿ ಎನ್ ರಾಮ್ಪ್ರಸಾದ್, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಐಜಿಪಿ ಪ್ರತಾಪ್ ರೆಡ್ಡಿ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಸೇರಿದಂತೆ ಶಾಸಕರಾದ ಅಭಯಚಂದ್ರ ಜೈನ್, ರಮಾನಾಥ ರೈ, ಕೃಷ್ಣ ಜೆ ಪಾಲೆಮಾರ್, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಬರಪರಿಹಾರಕ್ಕಾಗಿ ಕೇಂದ್ರಕ್ಕೆ 5,600 ಕೋ.ರೂ.ಗಳ ಬೇಡಿಕೆ: ಮುಖ್ಯಮಂತ್ರಿಗಳು

ಮಂಗಳೂರು. ಮೇ.06 : ರಾಜ್ಯದಲ್ಲಿನ ಬರಪರಿಹಾರಕ್ಕೆ 5,600 ಕೋಟಿ ರೂಪಾಯಿಗಳ ಬೇಡಿಕೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದು ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇಂದು ಮಂಗಳೂರಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ರಾಜ್ಯದ ಸರ್ವ ಪಕ್ಷದ ನಿಯೋಗ ದೇಹಲಿಯಲ್ಲಿ ಪ್ರಧಾನಿ ಅವರನ್ನು ಭೇಟಿ ಮಾಡಿ ಎಲ್ಲವನ್ನು ಮನವರಿಕೆ ಮಾಡಿದೆ. ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರವನ್ನು ಸರ್ಕಾರ ಬಯಸುತ್ತಿದ್ದು, ರಾಜ್ಯದ ಬರಪರಿಹಾರಕ್ಕೆ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಭೇಟಿ ಫಲಪ್ರದವಾಗಲಿದೆ. ರಾಜ್ಯದಲ್ಲಿನ ಬರ ಅಧ್ಯಯನ ಮಾಡಲು ಉನ್ನತ ಅಧಿಕಾರಿಗಳ ತಂಡ ಇಂದು- ನಾಳೆಯೊಳಗೆ ರಾಜ್ಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ನೀಡಲಿದೆ. ಕಳೆದ ಬಾರಿಯ ಕೇಂದ್ರದ ಬರಪರಿಹಾರ ತಂಡ ಕರ್ನಾಟಕದ ಬರಪರಿಹಾರ ನಿರ್ವಹಣೆಯನ್ನು ಶ್ಲಾಘಿಸಿದೆ. ಪ್ರಧಾನಿ ಅವರ ವ್ಯಾಪ್ತಿಯಲ್ಲಿರುವ ಎನ್ ಸಿಸಿಎಫ್ ಫಂಡಿನಿಂದ ಪರಿಹಾರ ನೀಡಬೇಕೆಂಬ ಮನವಿಯನ್ನು ಈಗಾಗಲೇ ಸಲ್ಲಿಸಲಾಗಿದ್ದು,ಎನ್ ಸಿಸಿಎಫ್ ಫಂಡ್ (National Calamity Contigency Fund) ನಿಂದ ಪ್ರಧಾನಿಯವರು ಕರ್ನಾಟಕಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಾಲಮಿತಿಯೊಳಗೆ ಕೆಲಸಕ್ಕೆ ವೇಗ ಕೊಡಲು ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆಯನ್ನು ಹಮ್ಮಿಕೊಂಡಿದ್ದು, ಸಮಾಜದ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಲಾಗುವುದು. ರಾಜ್ಯದ ಬೇಡಿಕೆಗಳ ಪಟ್ಟಿ ಈಗಾಗಲೇ ನೀಡಲಾಗಿದೆ. ಸಂವಿಧಾನ ಬದ್ಧ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಕ್ಕೆ ತನ್ನದೇ ಆದ ಅಸ್ತಿತ್ವವಿದ್ದು, ರಾಜ್ಯ ಸರ್ಕಾರ ತನ್ನದೇ ಇತಿಮಿತಿಯಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ. ಕಾನೂನು ಪಾಲನೆ ಮತ್ತು ಭಯೋತ್ಪಾದನಾ ನಿಗ್ರಹದ ಬಗ್ಗೆಯೂ ಕಾರ್ಯೋನ್ಮುಖವಾಗಲಿದೆ.
ಲೋಕಾಯುಕ್ತ ನೇಮಕದ ಬಗ್ಗೆ ಉತ್ತರಿಸಿದ ಅವರು, ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಯುಪಿಸಿಎಲ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಪರಿಸರಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಪರಿಹಾರವಾಗಲಿದೆ . ಯುಪಿಸಿಎಲ್ ನಿಂದ ವಿದ್ಯುತ್ ಪಡೆಯಲು ಯುಪಿಸಿಎಲ್ ಮತ್ತು ಸರ್ಕಾರದ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿಗಳು ನುಡಿದರು. ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಸಭಾ ಉಪ ಸಭಾಪತಿ ಎನ್.ಯೋಗಿಶ್ ಭಟ್, ಮೇಯರ್ ಗುಲ್ಜಾರ್ ಭಾನು, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರಿಮತಿ ಕೆ.ಟಿ.ಶೈಲಜಾ ಭಟ್, ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಜಿಲ್ಲಾಧಿಕಾರಿ ಡಾ. ಎನ್.ಎಸ್.ಚನ್ನಪ್ಪ ಗೌಡ, ಐಜಿಪಿ ಪ್ರತಾಪ್ ರೆಡ್ಡಿ, ಸಿಇಒ ಡಾ.ವಿಜಯ ಪ್ರಕಾಶ್, ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

Saturday, May 5, 2012

ಜಿ.ಪಂ ಸಾಮನ್ಯ ಸಭೆ;ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ

ಮಂಗಳೂರು,ಮೇ.05. ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದ ಕುಟುಂಬಗಳಿಗೆ ಹಕ್ಕು ಪತ್ರ ಮತ್ತು ನಿವೇಶನ ಒದಗಿಸುವ ಸಂಬಂಧ ಇಂದು ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಜಾ ಕೆ.ಟಿ.ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಈ ಸಂದರ್ಭ ಮಾಹಿತಿ ನೀಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವರಾಮೇ ಗೌಡ ಅವರು, ಸರಕಾರಿ ಜಾಗದಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಕೊರಗರ ಮನೆ ನಿರ್ಮಾಣಕ್ಕೆ ರೂ.3.16ಲಕ್ಷ ವಷ್ಟೇ ಇದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ರೂ.50 ಸಾವಿರ ಮತ್ತು ಎಸ್ಇಝಡ್ ರವರಿಂದ ರೂ.60 ಸಾವಿರ ಕೇಳಲಾಗಿದ್ದು ಈ ಸಂಬಂಧ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗಿದೆ. ಈ ಹಣ ದೊರೆತಲ್ಲಿ 313 ಮನೆಗಳ ನಿರ್ಮಾಣಕ್ಕೆ ಸಮಸ್ಯೆಯಾಗದು ಎಂದರು.

ಕೊರಗರಿಗೆ ನ್ಯಾಯ ಸಿಗಬೇಕು ಪ್ರತಿ ಗ್ರಾ.ಪಂ. ತಮ್ಮ ವ್ಯಾಪ್ತಿಯ ಕೊರಗ ಕುಟುಂಬಗಳ ಪಟ್ಟಿಯನ್ನು ಸಲ್ಲಿಸಬೇಕು. ಜಿಲ್ಲೆಯಲ್ಲಿ ಹಕ್ಕು ಪತ್ರವಿಲ್ಲದ 800ಕ್ಕೂ ಅಧಿಕ ಕುಟುಂಬಗಳಿವೆ. ಅವುಗಳನ್ನು ಗುರುತಿಸುವ ಕೆಲಸವಾಗಬೇಕು. ಹಕ್ಕು ಪತ್ರ ಹೊಂದಿರುವ 313 ಕುಟುಂಬಗಳಿಗೆ ಶೀಘ್ರ ಮನೆ ನಿರ್ಮಾಣವಾಗಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಕಾಲಮಿತಿಯೊಳಗೆ ಕೊರಗ ಕುಟುಂಬಗಳ ಸಮಸ್ಯೆ ಬಗೆಹರಿಸಲು ಒತ್ತು ನೀಡುವಂತೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಹಲವು ಸಮಸ್ಯೆಗಳಿಗೆ ಪರಿಹಾರ ನಮ್ಮಲ್ಲೇ ಇದ್ದು ಅನುಷ್ಠಾನಕ್ಕೆ ತರಲು ಇಚ್ಛಾಶಕ್ತಿ ಬೇಕು ಎಂದರು.

ಕುಡಿವ ನೀರಿನ ಸಮಸ್ಯೆ ನಿವಾರಣೆಗೆ 2 ದಿನದೊಳಗೆ ಸಭೆ ಕರೆಯು ವುದಾಗಿಯೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪ್ರಕಟಿ ಸಿದರು. ಜಿಲ್ಲೆಗೆ ಕುಡಿಯುವ ನೀರಿನ ಸಮಸೆಯ ಪರಿಹಾರಕ್ಕೆ ರೂ.2 ಕೋಟಿ ಮತ್ತು ಜಿಲ್ಲಾ ಪಂಚಾಯತ್ ರಸ್ತೆಗಳ ಅಭಿವೃದ್ಧಿಗೆ ರೂ.10 ಕೋಟಿ ಹಣವನ್ನು ಸರಕಾರ ಬಿಡುಗಡೆಗೊಳಿಸಿದೆ. ಇದರಲ್ಲಿ ತುರ್ತು ಕುಡಿಯುವ ನೀರಿನ ಸಮಸ್ಯೆ ಪರಿಹಾಕ್ಕೆ ರೂ. 50 ಲಕ್ಷ ರೂ. ಗಳನ್ನು ಜಿಲ್ಲಾಧಿಕಾರಿಗಳು ಒದಗಿಸಿದ್ದಾರೆ ಎಂದು ಅಧ್ಯಕ್ಷೆ ಶೈಲಜಾ ಭಟ್ ವಿವರಿಸಿದರು.
ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಬೇಕೆಂದು ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಸಭೆ ಕರೆಯುವುದಾಗಿ ಅಪರ ಜಿಲ್ಲಾಧಿಕಾರಿ ಕೆ.ದಯಾನಂದ್ ಭರವಸೆ ನೀಡಿದರು.
ಪಡಿತರ ವ್ಯವಸ್ಥೆಯ ಸವಲತ್ತು ಅರ್ಹರಿಗೆ ಸರಿಯಾಗಿ ದೊರಕುತ್ತಿಲ್ಲ. ಹೆಚ್ಚಿನ ಮಂದಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೂ ಪಡಿತರ ಚೀಚಿ ಅವರ ಕೈ ಸೇರಿಲ್ಲ. ಪಡಿತರವಿಲ್ಲದೆ ಬಡ ಕುಟುಂಬಗಳು ಇದರಿಂದ ಸಮಸ್ಯೆಗೆ ಸಿಲುಕಿವೆ ಎಂದು ಸದಸ್ಯರು ಆರೋಪಿಸಿದಾಗ, ಇದಕ್ಕೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರು ಈಗಾಗಲೇ ಆನ್ ಲೈನ್ ಮೂಲಕ 43 ಸಾವಿರ ಅರ್ಜಿಗಳು ಬಂದಿವೆ. ಶೀಘ್ರ ಪಡಿತರ ಚೀಟಿ ಒದಗಿಸುವ ಕಾರ್ಯ ಆಗುತ್ತಿದೆ. ಪಡಿತರ ಚೀಟಿ ಹೊಂದಿಲ್ಲದ ಅರ್ಹ ಫಲಾನುಭವಿಗಳು ವಾಸಸ್ಥಳದ ವಿವರದೊಂದಿಗೆ ಮನವಿ ಸಲ್ಲಿಸಿದಲ್ಲಿ ಅವರಿಗೆ ಪಡಿತರ ವ್ಯವಸ್ಥೆ ದೊರಕುವಂತೆ ಮಾಡಲಾಗುವುದು ಎಂದು ವಿವರಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮೀ ಜನಾರ್ದನ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಗೌಡ, ನವೀನ್ ಕುಮಾರ್ ಮೇನಾಲ, ಈಶ್ವರ ಕಟೀಲ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


ಸೊಳ್ಳೆ ಉತ್ಪತ್ತಿಯಾಗದಂತೆ ಜಾಗ್ರತೆ ವಹಿಸಲು ಮನವಿ

ಮಂಗಳೂರು, ಮೇ.0 5: ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳಲ್ಲಿ ,ಗೂಡಂಗಡಿಗಳಲ್ಲಿ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಳನೀರು ವ್ಯಾಪಾರ ಮಾಡುವವರು ಕಡ್ಡಾಯವಾಗಿ ಗಿರಾಕಿಗಳಿಗೆ ನೀಡಿದ ಎಳನೀರಿನ ಚಿಪ್ಪುಗಳನ್ನು ಗೋಣಿಚೀಲಗಳಲ್ಲಿ ತುಂಬಿಸಿಡತಕ್ಕದ್ದು. ಅದು ತುಂಬಿದಂತೆಯೇ ತಮ್ಮ ಸ್ವಂತ ಖರ್ಚಿನಲ್ಲಿ ಮನೆಯ ಆವರಣಕ್ಕೆ/ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾಗಿಸಿ ಮಳೆನೀರು ಅವುಗಳಲ್ಲಿ ಸೇರದಂತೆ ಸೂಕ್ತ ವ್ಯವಸ್ಥೆ ಮಾಡತಕ್ಕದ್ದು. ಅಪಾರ್ಟ್ ಮೆಂಟ್, ನಿರ್ಮಾಣ ಹಂತದ ಕಟ್ಟಡ ಮಾಲೀಕರು ಯಾವುದೇ ರೀತಿಯ ನೀರು 7 ದಿನಕ್ಕಿಂತ ಹೆಚ್ಚು ದಿನಗಳ ಕಾಲ ನಿಲ್ಲದಂತೆ ಮತ್ತು ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳತಕ್ಕದ್ದು. ಇದಕ್ಕೆ ತಪ್ಪಿದಲ್ಲಿ ತನಿಖಾ ಸಂದರ್ಭದಲ್ಲಿ ನಗರಪಾಲಿಕೆ ಅಧಿಕಾರಿಗಳು ಬಂದಲ್ಲಿ ಕಾನೂನಿನಂತೆ ರೂ.1000/- ದಂಡ ವಿಧಿಸಲಾಗುವುದೆಂದು ನಗರಪಾಲಿಕೆ ಆರೋಗ್ಯಾಧಿಕಾರಿಗಳು ತಿಳಿಸಿರುತ್ತಾರೆ.

Thursday, May 3, 2012

ನಿಯಮಪಾಲಿಸಲು ಸಹಕರಿಸದಿದ್ದರೆ ಕಠಿಣ ಕ್ರಮ: ಡಾ ಹರೀಶ್ ಕುಮಾರ್

ಮಂಗಳೂರು. ಮೇ.03 : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಗೆ ಸೇರಿದ ಮ್ಯಾನ್ ಹೋಲ್ ಗಳಿಗೆ ಖಾಸಗಿ ವ್ಯಕ್ತಿಗಳು ಕಾರ್ಮಿಕರನ್ನು ಇಳಿಸಿ ಮ್ಯಾನುವಲ್ ಸ್ಕಾವೆಂಜಿಂಗ್ ಪ್ರೊಹಿಬಿಷನ್ ಆಕ್ಟನ್ನು ನೇರ ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ಪತ್ರಿಕೆಗಳಲ್ಲಿ ಸಚಿತ್ರ ವರದಿಯಾಗುತ್ತಿದ್ದು, ಇಂತಹ ಎಲ್ಲ ಪ್ರಕರಣಗಳಲ್ಲಿ ಸಂಬಂಧಿತ ಪೊಲೀಸು ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾಯ್ದೆಯಂತೆ ಕ್ರಮ ಜರುಗಿಸಲಾಗುತ್ತಿದೆ ಎಂದು ಮಹಾನಗರಪಾಲಿಕೆ ಆಯುಕ್ತರಾ ಡಾ ಹರೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪಾಲಿಕೆಗೆ ಸೇರಿದ ಮ್ಯಾನ್ ಹೋಲ್ ಗಳಲ್ಲಿ ಖಾಸಗಿ ವ್ಯಕ್ತಿಗಳು ಕಾಮಗಾರಿ ನಡೆಸುವುದು ನಿಯಮ ಬಾಹಿರವಾಗಿದ್ದು, ಮಾನವರಿಂದ ಶುಚಿತ್ವಗೊಳಿಸುವುದು ಕಾಯಿದೆ ವಿರೋಧಿಯಾಗಿರುತ್ತದೆ. ಪಾಲಿಕೆ ಯಂತ್ರ ಬಳಸಿ ಮ್ಯಾನ್ ಹೋಲ್ ಶುಚಿಗೊಳಿಸುತ್ತಿದ್ದು, ಪಾಲಿಕೆಗೆ ದೂರು ನೀಡಿದ್ದಲ್ಲಿ ತುರ್ತು ಕ್ರಮ ಜರುಗಿಸಲಾಗುತ್ತಿದೆ. ಬದಲಾಗಿ ಖಾಸಗಿ ವ್ಯಕ್ತಿಗಳಿಗೆ ಮಾನವರನ್ನು ಬಳಸಿ ಗುಂಡಿ ಶುಚೀಕರಣಕ್ಕೆ ಪ್ರಯತ್ನಿಸಿದ್ದಲ್ಲಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಪಾಲಿಕೆ ವತಿಯಿಂದ ಸಂಬಂಧಿತರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ನಿರ್ದಕ್ಷಿಣ್ಯ ಕ್ರಮ ಜರುಗಿಸಲಾಗುವುದು. ನಿಯಮಗಳನ್ನು ಪಾಲಿಸಲು ಪಾಲಿಕೆಯೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮನಾಪ ಆಯುಕ್ತರು ಹೇಳಿದ್ದಾರೆ.

`ಸಕಾಲ' ಸೇವೆಗೆ ಪ್ರತ್ಯೇಕ ಅರ್ಜಿಯ ಅಗತ್ಯವಿಲ್ಲ

ಮಂಗಳೂರು,ಮೇ.03:`ಸಕಾಲ,- ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ-2011 ರಾಜ್ಯಾದ್ಯಂತ ಜಾರಿಗೆ ಬಂದು 1 ತಿಂಗಳಾಗಿದೆ. ಸರ್ಕಾರದ 11 ಇಲಾಖೆಗಳ ಒಟ್ಟು 151 ಸೇವೆಗಳನ್ನು ಸಾರ್ವಜನಿಕರಿಗೆ ವಿಳಂಬವಿಲ್ಲದೆ ನಿಗದಿಪಡಿಸಿದ ದಿನದಂದು ನೀಡಲಾಗುತ್ತಿದೆ. ಇದರೊಂದಿಗೆ ಸಕಾಲದಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಸರ್ಕಾರದ ಆಶಯವು ಬಹುಪಾಲು ಈಡೇರಿದಂತಾಗಿದೆ.
`ಸಕಾಲ'ದ ಕುರಿತು ಸಾರ್ವಜನಿಕರಲ್ಲಿ ಒಂದಿಷ್ಟು ಗೊಂದಲಗಳಿವೆ. ಸಕಾಲಕ್ಕೆಂದು ಪ್ರತ್ಯೇಕ ಅರ್ಜಿ ಸಲ್ಲಿಸಬೇಕೆ? ಈ ಅರ್ಜಿ ನಮೂನೆಗಳು ಎಲ್ಲಿ ದೊರೆಯುತ್ತವೆ? ನಾವು ಇದಕ್ಕೆ ಪ್ರತ್ಯೇಕ ಶುಲ್ಕ ಭರಿಸಬೇಕೆ? ಸಕಾಲ ಎಲ್ಲರಿಗೂ ಅನ್ವಯವಾಗುತ್ತದೆಯೇ? ಇದರಲ್ಲಿ ಪಾರದರ್ಶಕತೆ ಇದೆಯೇ? ನಮಗೆ ನ್ಯಾಯ ಸಲ್ಲುತ್ತದೆಯೇ ಎನ್ನುವ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ.
`ಸಕಾಲ' ಯೋಜನೆಯಡಿಯಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಿಲ್ಲ. ಈಗ ಈ ಕಾಯ್ದೆಯ ವ್ಯಾಪ್ತಿಗೆ ಬರುವ ಇಲಾಖೆಗಳು ತಾವು ನೀಡುವ ಸೇವೆಗಳ ಕುರಿತು ಸಾರ್ವಜನಿಕರು ಸಲ್ಲಿಸಬೇಕಾದ ಅರ್ಜಿ ನಮೂನೆಗಳನ್ನು ಈಗಾಗಲೇ ಹೊಂದಿವೆ. ಇವುಗಳ ಮೇಲೆ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ ಎನ್ನುವ ಮುದ್ರೆ ಇರುತ್ತದೆ. ಉದಾಹರಣೆಗೆ, ಜನನ/ಮರಣ ಪ್ರಮಾಣ ಪತ್ರ ಪಡೆಯಬೇಕಾದಲ್ಲಿ ಸಾರ್ವಜನಿಕರು ಸಲ್ಲಿಸಬೇಕಾದ ಅರ್ಜಿ ಸಕಾಲ ಕಾಯಿದೆ ಬರುವ ಮುಂಚೆ ಇದ್ದಂತೆಯೇ ಇದೆ. ಅದರ ಮೇಲೆ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ ಎಂದು ಮುದ್ರಿಸಲಾಗಿದೆ.
ಸಾರ್ವಜನಿಕರು ಈ ಹಿಂದೆ ಈ ಸೇವೆಗಳನ್ನು ಪಡೆಯಲು ಭರಿಸಬೇಕಾಗುತ್ತಿದ್ದ ಶುಲ್ಕವನ್ನೇ ಈಗಲೂ ಪಾವತಿ ಮಾಡಬೇಕು.
ಈ ಅರ್ಜಿಗಳನ್ನು ಸ್ವೀಕರಿಸಿದ ಇಲಾಖೆ ಅದಕ್ಕಾಗಿ ಸ್ವೀಕೃತಿ ರೂಪದಲ್ಲಿ ಒಂದು ಹಿಂಬರಹವನ್ನು ನೀಡುತ್ತದೆ. ಇದರಲ್ಲಿ ಹದಿನಾಲ್ಕು ಸಂಖ್ಯೆಗಳ ಗ್ರಾಹಕ ಗುರುತಿನ ನಂಬರ್ ಇರುತ್ತದೆ. ಸಕಾಲದ ಕಾಲ್ ಸೆಂಟರಿಗೆ ದೂರವಾಣಿ ಮಾಡಿ ಈ ಗುರುತಿನ ಸಂಖ್ಯೆಯನ್ನು ಹೇಳಿದಲ್ಲಿ ಅರ್ಜಿಯ ಸ್ಥಿತಿಯನ್ನು ತಿಳಿಸಲಾಗುತ್ತದೆ. ಈ ಉದಾಹರಣೆ ಉಳಿದೆಲ್ಲ ಸೇವೆಗಳಿಗೂ ಅನ್ವಯವಾಗುತ್ತದೆ.
www.sakala.kar.nic.in/ ನಲ್ಲಿ ಪಡೆಯಬಹುದಾಗಿದೆ.
`ಸಕಾಲ'ಕ್ಕೆ ಜನಸಾಮಾನ್ಯರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸರ್ಕಾರದಲ್ಲಿ ತಮಗೆ ಅಗತ್ಯವಿರುವ ಸೇವೆಗಳು ಸುಲಭವಾಗಿ ಮತ್ತು ಶೀಘ್ರವಾಗಿ ಕೈಸೇರುತ್ತಿರುವ ಬಗ್ಗೆ ಸಮಾಧಾನವೂ ಇದೆ. ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವೆಬ್ಸೈಟ್ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಈ ವೆಬ್ ಸೈಟಿನಿಂದ ಸಕಾಲದಡಿ ಸ್ವೀಕರಿಸಲಾದ/ತಿರಸ್ಕರಿಸಲಾದ/ವಿಲೇವಾರಿಯಾದ ಅರ್ಜಿಗಳ ಎಲ್ಲ ವಿವರಗಳನ್ನೂ ಪಡೆದುಕೊಳ್ಳಬಹುದಾಗಿದೆ. ಇದೊಂದು ಸಂಪೂರ್ಣ ಪಾರದರ್ಶಕ ವ್ಯವಸ್ಥೆಯಾಗಿದ್ದು, ಇದಕ್ಕಾಗಿ ಸಾರ್ವಜನಿಕರು ಯಾವುದೇ ಹೆಚ್ಚುವರಿ ಶುಲ್ಕವನ್ನು ನೀಡಬೇಕಾಗಿಲ್ಲ.