Saturday, May 5, 2012

ಜಿ.ಪಂ ಸಾಮನ್ಯ ಸಭೆ;ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ

ಮಂಗಳೂರು,ಮೇ.05. ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದ ಕುಟುಂಬಗಳಿಗೆ ಹಕ್ಕು ಪತ್ರ ಮತ್ತು ನಿವೇಶನ ಒದಗಿಸುವ ಸಂಬಂಧ ಇಂದು ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಜಾ ಕೆ.ಟಿ.ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಈ ಸಂದರ್ಭ ಮಾಹಿತಿ ನೀಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವರಾಮೇ ಗೌಡ ಅವರು, ಸರಕಾರಿ ಜಾಗದಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಕೊರಗರ ಮನೆ ನಿರ್ಮಾಣಕ್ಕೆ ರೂ.3.16ಲಕ್ಷ ವಷ್ಟೇ ಇದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ರೂ.50 ಸಾವಿರ ಮತ್ತು ಎಸ್ಇಝಡ್ ರವರಿಂದ ರೂ.60 ಸಾವಿರ ಕೇಳಲಾಗಿದ್ದು ಈ ಸಂಬಂಧ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗಿದೆ. ಈ ಹಣ ದೊರೆತಲ್ಲಿ 313 ಮನೆಗಳ ನಿರ್ಮಾಣಕ್ಕೆ ಸಮಸ್ಯೆಯಾಗದು ಎಂದರು.

ಕೊರಗರಿಗೆ ನ್ಯಾಯ ಸಿಗಬೇಕು ಪ್ರತಿ ಗ್ರಾ.ಪಂ. ತಮ್ಮ ವ್ಯಾಪ್ತಿಯ ಕೊರಗ ಕುಟುಂಬಗಳ ಪಟ್ಟಿಯನ್ನು ಸಲ್ಲಿಸಬೇಕು. ಜಿಲ್ಲೆಯಲ್ಲಿ ಹಕ್ಕು ಪತ್ರವಿಲ್ಲದ 800ಕ್ಕೂ ಅಧಿಕ ಕುಟುಂಬಗಳಿವೆ. ಅವುಗಳನ್ನು ಗುರುತಿಸುವ ಕೆಲಸವಾಗಬೇಕು. ಹಕ್ಕು ಪತ್ರ ಹೊಂದಿರುವ 313 ಕುಟುಂಬಗಳಿಗೆ ಶೀಘ್ರ ಮನೆ ನಿರ್ಮಾಣವಾಗಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಕಾಲಮಿತಿಯೊಳಗೆ ಕೊರಗ ಕುಟುಂಬಗಳ ಸಮಸ್ಯೆ ಬಗೆಹರಿಸಲು ಒತ್ತು ನೀಡುವಂತೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಹಲವು ಸಮಸ್ಯೆಗಳಿಗೆ ಪರಿಹಾರ ನಮ್ಮಲ್ಲೇ ಇದ್ದು ಅನುಷ್ಠಾನಕ್ಕೆ ತರಲು ಇಚ್ಛಾಶಕ್ತಿ ಬೇಕು ಎಂದರು.

ಕುಡಿವ ನೀರಿನ ಸಮಸ್ಯೆ ನಿವಾರಣೆಗೆ 2 ದಿನದೊಳಗೆ ಸಭೆ ಕರೆಯು ವುದಾಗಿಯೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪ್ರಕಟಿ ಸಿದರು. ಜಿಲ್ಲೆಗೆ ಕುಡಿಯುವ ನೀರಿನ ಸಮಸೆಯ ಪರಿಹಾರಕ್ಕೆ ರೂ.2 ಕೋಟಿ ಮತ್ತು ಜಿಲ್ಲಾ ಪಂಚಾಯತ್ ರಸ್ತೆಗಳ ಅಭಿವೃದ್ಧಿಗೆ ರೂ.10 ಕೋಟಿ ಹಣವನ್ನು ಸರಕಾರ ಬಿಡುಗಡೆಗೊಳಿಸಿದೆ. ಇದರಲ್ಲಿ ತುರ್ತು ಕುಡಿಯುವ ನೀರಿನ ಸಮಸ್ಯೆ ಪರಿಹಾಕ್ಕೆ ರೂ. 50 ಲಕ್ಷ ರೂ. ಗಳನ್ನು ಜಿಲ್ಲಾಧಿಕಾರಿಗಳು ಒದಗಿಸಿದ್ದಾರೆ ಎಂದು ಅಧ್ಯಕ್ಷೆ ಶೈಲಜಾ ಭಟ್ ವಿವರಿಸಿದರು.
ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಬೇಕೆಂದು ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಸಭೆ ಕರೆಯುವುದಾಗಿ ಅಪರ ಜಿಲ್ಲಾಧಿಕಾರಿ ಕೆ.ದಯಾನಂದ್ ಭರವಸೆ ನೀಡಿದರು.
ಪಡಿತರ ವ್ಯವಸ್ಥೆಯ ಸವಲತ್ತು ಅರ್ಹರಿಗೆ ಸರಿಯಾಗಿ ದೊರಕುತ್ತಿಲ್ಲ. ಹೆಚ್ಚಿನ ಮಂದಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೂ ಪಡಿತರ ಚೀಚಿ ಅವರ ಕೈ ಸೇರಿಲ್ಲ. ಪಡಿತರವಿಲ್ಲದೆ ಬಡ ಕುಟುಂಬಗಳು ಇದರಿಂದ ಸಮಸ್ಯೆಗೆ ಸಿಲುಕಿವೆ ಎಂದು ಸದಸ್ಯರು ಆರೋಪಿಸಿದಾಗ, ಇದಕ್ಕೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರು ಈಗಾಗಲೇ ಆನ್ ಲೈನ್ ಮೂಲಕ 43 ಸಾವಿರ ಅರ್ಜಿಗಳು ಬಂದಿವೆ. ಶೀಘ್ರ ಪಡಿತರ ಚೀಟಿ ಒದಗಿಸುವ ಕಾರ್ಯ ಆಗುತ್ತಿದೆ. ಪಡಿತರ ಚೀಟಿ ಹೊಂದಿಲ್ಲದ ಅರ್ಹ ಫಲಾನುಭವಿಗಳು ವಾಸಸ್ಥಳದ ವಿವರದೊಂದಿಗೆ ಮನವಿ ಸಲ್ಲಿಸಿದಲ್ಲಿ ಅವರಿಗೆ ಪಡಿತರ ವ್ಯವಸ್ಥೆ ದೊರಕುವಂತೆ ಮಾಡಲಾಗುವುದು ಎಂದು ವಿವರಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮೀ ಜನಾರ್ದನ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಗೌಡ, ನವೀನ್ ಕುಮಾರ್ ಮೇನಾಲ, ಈಶ್ವರ ಕಟೀಲ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.