Sunday, May 6, 2012

ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಕಾಲಮಿತಿ ನಿಗದಿ

ಮಂಗಳೂರು, ಮೇ.06 : ದಕ್ಷಿಣ ಕನ್ನಡ ಜಿಲ್ಲೆಯ ವೈಚಿತ್ರ್ಯ, ವೈಪರಿತ್ಯಗಳನ್ನು ಬಲ್ಲ ತಾನು ಬಜೆಟ್ ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅತೀ ಹೆಚ್ಚು ಅನುದಾನ ಹಾಗೂ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದು, ಮುಂದಿನ ಡಿಸೆಂಬರ್ ತಿಂಗಳೊಳಗೆ ಜಿಲ್ಲೆಯು ರಾಜ್ಯಕ್ಕೆ ಉತ್ತಮ ಮಾದರಿಗಳನ್ನು ನೀಡಬೇಕೆಂದು ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ಅವರು ಹೇಳಿದರು.
ಅವರು ಇಂದು ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಜನರನ್ನು ಬಹುಕಾಲದಿಂದ ಕಾಡುತ್ತಿರುವ 94 ಸಿ ಕಾನೂನು ತಿದ್ದುಪಡಿ ಕಾನಾ ಬಾನೆ ಕುಮ್ಕಿ ಸಮಸ್ಯೆಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಪರಿಹಾರ ಕಂಡುಕೊಳ್ಳಲಾಗಿದ್ದು ಅಕ್ರಮ ಸಕ್ರಮಕ್ಕೂ ಸಮಿತಿಯನ್ನು ರಚಿಸಲಾಗಿದೆ. ಈ ಸಂಬಂಧ ಒಂದು ವಾರದೊಳಗೆ ಸರ್ಕಾರಿ ಆದೇಶ ಜಾರಿ ಮಾಡಲಾಗುವುದು.
ರಸ್ತೆ ಮತ್ತು ಸೇತುವೆಗಳ ಕಾಮಗಾರಿಗಳಿಗಾಗಿ ಪ್ರಥಮ,ದ್ವಿತೀಯ ಮತ್ತು ಮೂರನೇ ಹಂತಗಳಲ್ಲಿ ಜಿಲ್ಲೆಯಿಂದ ತಾಲೂಕುಗಳಿಗೆ, ತಾಲೂಕುಗಳಿಂದ ಹೋಬಳಿಗಳಿಗೆ ಮತ್ತು ಒಳರಸ್ತೆಗಳ ಅಭಿವೃದ್ಧಿಗೆ ಯೋಜನೆ ತಯಾರಾಗಿದ್ದು, ಪ್ರತಿ ತಿಂಗಳು ಎಲ್ಲ ಶಾಸಕರು ಈ ಸಂಬಂಧ ಅಧಿಕಾರಿಗಳ ಸಭೆಯನ್ನು ಕರೆಯಬೇಕು. ಸಂಸದರು ಇದರ ಉಸ್ತುವಾರಿ ವಹಿಸಬೇಕು. ಡಿಸೆಂಬರ್ ವೇಳೆಗೆ ರಸ್ತೆ ಕಾಮಗಾರಿಗಳು ಸಂಪೂರ್ಣವಾಗಿರಬೇಕು ಸೂಚಿನೆ ನೀಡಿದರು.
ಮೊದಲನೇ ಹಂತದಲ್ಲಿ 132.47 ಕಿ.ಮೀ ಉದ್ದದ ರಸ್ತೆ 53.79 ಕೋಟಿ ರೂ. ವೆಚ್ಚದಲ್ಲಿ, ಎರಡನೇ ಹಂತದಲ್ಲಿ 34.43 ಕಿ.ಮೀ ಉದ್ದದ ರಸ್ತೆ 6.12 ಕೋಟಿ ಮೊತ್ತಗಳಲ್ಲಿ ಹಾಗೂ ವೇಣೂರು ಮಹಾಮಸ್ತಕಾಭಿಷೇಕ ಕಾಮಗಾರಿಯಡಿಯಲ್ಲಿ ಒಟ್ಟು 8 ಕಾಮಗಾರಿಗಳು 12 ಕೋಟಿ ರೂ. ಅಂದಾಜು ಮೊತ್ತಕ್ಕೆ ಮಂಜೂರಾಗಿದ್ದು, ಟೆಂಡರ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಸಕರ್ಾರಿ ಇಲಾಖೆಗಳಲ್ಲಿ ರಾಜ್ಯದೆಲ್ಲೆಡೆ ಸಿಬ್ಬಂದಿ ಮತ್ತು ಅಧಿಕಾರಿಗಳ ಕೊರತೆ ಇದ್ದು, ವ್ಯವಸ್ಥೆಯಲ್ಲೇ ಅಮೂಲಾಗ್ರ ಬದಲಾವಣೆಗೆ ತಯಾರಿ ನಡೆದಿದೆ. ಇ ಗರ್ವನೆನ್ಸ್ ನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಕಚೇರಿಯಲ್ಲಿ ಆಡಳಿತವನ್ನು ಸರಳೀಕರಣಗೊಳಿಸಲು ನಿರ್ಧರಿಸಿದೆ ಎಂದರು.
ಶಾಸಕರು, ಜನಪ್ರತಿನಿಧಿಗಳ ಅಹವಾಲನ್ನು ಆಲಿಸಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವುದಾಗಿ ನುಡಿದರು. ಪೊಲೀಸ್ ಇಲಾಖೆ, ಕಂದಾಯ ಇಲಾಖೆಗೆ ನೇಮಕಾತಿಗಳು ನಡೆಯುತ್ತಿದೆ. ಬಜೆಟ್ ನಲ್ಲಿ ಹೇಳಿರುವ ಯೋಜನೆಗಳ ಅನುಷ್ಠಾನ ಸಂಬಂಧ ಬೆಂಗಳೂರಿನಲ್ಲಿ 8 ರಂದು ಉನ್ನತ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.
ತುಂಬೆ ಅಣೆಕಟ್ಟು ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಮಗಾರಿಗೆ ವೇಗೋತ್ಕರ್ಷ ನೀಡಲು ಜಿಲ್ಲಾಧಿಕಾರಿಗಳು ಮತ್ತು ಮನಾಪ ಆಯುಕ್ತರು ಪ್ರತೀ ವಾರ ಖುದ್ದು ಪರಿಶೀಲನೆ ನಡೆಸಬೇಕೆಂದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ರನ್ ವೇ ವಿಸ್ತರಣೆ, ಡೆಕ್ಕನ್ ಪಾರ್ಕ್ ಸ್ವಾಧೀನ ಪ್ರಕ್ರಿಯೆ ಸಾಗುತ್ತಿದ್ದು, ಇದಕ್ಕಾಗಿ 130 ಕೋಟಿ ಅಗತ್ಯವಿದ್ದು, ಅನುದಾನದ ಕೊರತೆ ಇಲ್ಲ ಎಂದರು. ವಿಮಾನ ನಿಲ್ದಾಣದ ವಿಸ್ತರಣಾ ಉದ್ದೇಶದ ಕಾರಣ ಡೆಕ್ಕನ್ ಪಾರ್ಕ್ ಕಟ್ಟಡ ಇರುವ 3.21 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಲು 309.00 ಲಕ್ಷ ಬಿಡುಗಡೆಯಾಗಿದೆ. ವಿಮಾನ ನಿಲ್ದಾಣದ ಹೆಚ್ಚುವರಿ ಸಂಪರ್ಕ ರಸ್ತೆ 2.61 ಎಕರೆ ಭೂಸ್ವಾಧೀನಕ್ಕೆ ಕೆ ಆರ್ ಡಿ ಸಿ ಎಲ್ ನಿಂದ ಕೋರಿಕೆ ಬಂದಿದ್ದು, ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿರುತ್ತದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದರು.
ಮಾಣಿ-ಮೈಸೂರು ರಸ್ತೆ ಸಂಬಂಧ ವಿಶೇಷ ಸಭೆ ಕರೆಯಲು, ಕೊಯಿಲಾದಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು, ಸಾಮಾಜಿಕ ಭದ್ರತೆಗೆ ಹಣ ಬಿಡುಗಡೆಗೆ ಆದ್ಯತೆ ನೀಡಲಾಗಿದೆ. ಬಿಪಿಎಲ್ ಕಾರ್ಡ್ ಸಿಗದ ಅರ್ಹರ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡುವ ಹೊಣೆಯನ್ನು ಜನಪ್ರತಿನಿಧಿಗಳಿಗೆ ವಹಿಸಿದ ಮುಖ್ಯಮಂತ್ರಿಗಳು, ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂದರು.
ಸಾಮಾಜಿಕ ಭದ್ರತಾ ಯೋಜನೆಯಡಿ 2011-12ನೇ ಸಾಲಿನಲ್ಲಿ ವೃದ್ಧಾಪ್ಯ ವೇತನ-216, ವಿಧವಾ ವೇತನ-2252, ಅಂಗವಿಕಲ ವೇತನ(40%) -670, (75%)_780, ಸಂಧ್ಯಾ ಸುರಕ್ಷಾ ವೇತನ-2705, ಒಟ್ಟು 6623 ಪ್ರಕರಣಗಳನ್ನು ಮಂಜೂರು ಮಾಡಲಾಗಿದೆ.
ಕೆರೆಗಳ ಪುನರುಜ್ಜೀವನ ಕಾಮಗಾರಿಗಳಡಿ 1.39 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 122, ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ 13, ಮಹಾನಗರಪಾಲಿಕೆಯಲ್ಲಿ 10 ಹೀಗೆ ಒಟ್ಟು 145 ಕೆರೆಗಳನ್ನು ಗುರುತಿಸಲಾಗಿದೆ. ಜಿಲ್ಲಾ ಪಂಚಾಯತ್ನಿಂದ 75 ಕೆರೆಗಳ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, 47 ಕಾಮಗಾರಿಗಳಿಗೆ ಟೆಂಡರ್ ಬಂದಿರುವುದಿಲ್ಲ. 3 ಕಾಮಗಾರಿ ಪೂರ್ಣಗೊಂಡಿದೆ. 32 ಕಾಮಗಾರಿ ಪ್ರಗತಿಯಲ್ಲಿದೆ. ಮಹಾನಗರಪಾಲಿಕೆ ವ್ಯಾಪ್ತಿಯ 10 ಕೆರೆಗಳಲ್ಲಿ 6 ಪ್ರಗತಿಯಲ್ಲಿದ್ದು 2 ಕಾಮಗಾರಿ ಪೂರ್ಣಗೊಂಡಿದೆ. ಟೆಂಡರ್ ಬಾರದ ಕೆರೆ ಕಾಮಗಾರಿಗೆ ಪರ್ಯಾಯವನ್ನು ಆಲೋಚಿಸಿ ಅನುಷ್ಠಾನಕ್ಕೆ ತನ್ನಿ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಅಂತರ್ ಜಲ ವೃದ್ಧಿಗೆ ಕ್ರಮ ಕೈಗೊಳ್ಳಿ ಎಂದ ಮುಖ್ಯಮಂತ್ರಿಗಳು, ಪಶ್ಚಿಮವಾಹಿನಿ ಯೋಜನೆಯ ಮುಖ್ಯ ಉದ್ದೇಶವೇ ಶಾಶ್ವತ ನೀರು ಎಂದರು. ಶಾಶ್ವತ ಯೋಜನೆಯ ನೀಲಿ ನಕಾಶೆಯನ್ನು ಜನವರಿ ಒಳಗೆ ಸಲ್ಲಿಸಬೇಕೆಂದ ಮುಖ್ಯಮಂತ್ರಿಗಳ ಬಳಿ ಕುಡಿಯುವ ನೀರಿಗಾಗಿ ಚೆಕ್ ಡ್ಯಾಂ ನಿರ್ಮಿಸಲು ನೂರು ಕೋಟಿ ರೂ. ನೀಡಿ ಎಂದು ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಕೇಳಿದರು.
ಸಣ್ಣನೀರಾವರಿ ಇಲಾಖೆಯ 13 ಕೆರೆಗಳಲ್ಲಿ 2 ಪೂರ್ಣಗೊಂಡಿದ್ದು, 1 ಪ್ರಗತಿಯಲ್ಲಿದೆ. 64 ಚೆಕ್ ಡ್ಯಾಂಗಳಿಗೆ ಅನುಮೋದನೆ ದೊರೆತಿದ್ದು, 32 ರ ಕಾಮಗಾರಿ ಪ್ರಗತಿಯಲ್ಲಿದೆ. 64 ಚೆಕ್ ಡ್ಯಾಂಗಳಿಗೆ ಅನುಮೋದನೆ ದೊರೆತಿದ್ದು, 32 ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಅಂದಾಜು 2618.50 ಲಕ್ಷಗಳಲ್ಲಿ 361.60 ಲಕ್ಷ ಮೊತ್ತ ವೆಚ್ಚ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಸಂಬಂಧ, ಕಳಪೆ ಕಾಮಗಾರಿ ಸಂಬಂಧ ಬೆಂಗಳೂರಿನಲ್ಲಿ ಶಾಸಕರನ್ನು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನೊಳಗೊಂಡ ವಿಶೇಷ ಸಭೆ ಕರೆಯಲಾಗುವುದು ಎಂದ ಅವರು, ಸುಳ್ಯದ ಮಂಡೆಕೋಲಿನಲ್ಲಿ ರಬ್ಬರ್ ಉದ್ದಿಮೆಗೆ ಸಂಬಂಧಿಸಿದಂತೆ ದೊಡ್ಡ ಕಂಪೆನಿಗಳು ಮುಂದೆ ಬಂದಿದ್ದು, ರೈತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತುರ್ತಾಗಿ ಕೈಗೊಳ್ಳಲಿದ್ದೇನೆ ಎಂದರು.
ಪಿಲಿಕುಳ, ಪ್ರವಾಸೋದ್ಯಮದ ಬಗ್ಗೆಯೂ ಸವಿವರ ಚರ್ಚೆ ನಡೆಯಿತು. ಕಾರ್ಮಿಕ ಇಲಾಖೆಯ ಗುರಿ ನಿಗದಿ ಹಾಗೂ ಇಎಸ್ ಐ ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ತಮ್ಮ ಮಹಾತ್ವಾಕಾಂಕ್ಷಿ ಯೋಜನೆ ಸಕಾಲದಲ್ಲಿ ಆದ ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಇದುವರೆಗೆ ಸಕಾಲದಡಿ 9,36,000 ಅರ್ಜಿಗಳು ಸ್ವೀಕಾರಗೊಂಡಿದ್ದು 7,94,000 ಅರ್ಜಿ ವಿಲೇ ಆಗಿದೆ. ಅತ್ಯಂತ ಜನಪರ ಯೋಜನೆ ಇದಾಗಿದ್ದು ಜನರಿಗೆ ಹಾಗೂ ಕರ್ತವ್ಯಪರ ಅಧಿಕಾರಿಗಳಿಗೆ ಖುಷಿತಂದಿದೆ ಎಂದರು.
ಸಭೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಜಿ.ಪಂ ಅಧ್ಯಕ್ಷೆ ಕೆ ಟಿ ಶೈಲಜಾ ಭಟ್, ಮೇಯರ್ ಗುಲ್ಜಾರ್ ಭಾನು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಬಿ ಎನ್ ರಾಮ್ಪ್ರಸಾದ್, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಐಜಿಪಿ ಪ್ರತಾಪ್ ರೆಡ್ಡಿ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಸೇರಿದಂತೆ ಶಾಸಕರಾದ ಅಭಯಚಂದ್ರ ಜೈನ್, ರಮಾನಾಥ ರೈ, ಕೃಷ್ಣ ಜೆ ಪಾಲೆಮಾರ್, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.