Sunday, May 6, 2012

ಬರಪರಿಹಾರಕ್ಕಾಗಿ ಕೇಂದ್ರಕ್ಕೆ 5,600 ಕೋ.ರೂ.ಗಳ ಬೇಡಿಕೆ: ಮುಖ್ಯಮಂತ್ರಿಗಳು

ಮಂಗಳೂರು. ಮೇ.06 : ರಾಜ್ಯದಲ್ಲಿನ ಬರಪರಿಹಾರಕ್ಕೆ 5,600 ಕೋಟಿ ರೂಪಾಯಿಗಳ ಬೇಡಿಕೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದು ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇಂದು ಮಂಗಳೂರಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ರಾಜ್ಯದ ಸರ್ವ ಪಕ್ಷದ ನಿಯೋಗ ದೇಹಲಿಯಲ್ಲಿ ಪ್ರಧಾನಿ ಅವರನ್ನು ಭೇಟಿ ಮಾಡಿ ಎಲ್ಲವನ್ನು ಮನವರಿಕೆ ಮಾಡಿದೆ. ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರವನ್ನು ಸರ್ಕಾರ ಬಯಸುತ್ತಿದ್ದು, ರಾಜ್ಯದ ಬರಪರಿಹಾರಕ್ಕೆ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಭೇಟಿ ಫಲಪ್ರದವಾಗಲಿದೆ. ರಾಜ್ಯದಲ್ಲಿನ ಬರ ಅಧ್ಯಯನ ಮಾಡಲು ಉನ್ನತ ಅಧಿಕಾರಿಗಳ ತಂಡ ಇಂದು- ನಾಳೆಯೊಳಗೆ ರಾಜ್ಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ನೀಡಲಿದೆ. ಕಳೆದ ಬಾರಿಯ ಕೇಂದ್ರದ ಬರಪರಿಹಾರ ತಂಡ ಕರ್ನಾಟಕದ ಬರಪರಿಹಾರ ನಿರ್ವಹಣೆಯನ್ನು ಶ್ಲಾಘಿಸಿದೆ. ಪ್ರಧಾನಿ ಅವರ ವ್ಯಾಪ್ತಿಯಲ್ಲಿರುವ ಎನ್ ಸಿಸಿಎಫ್ ಫಂಡಿನಿಂದ ಪರಿಹಾರ ನೀಡಬೇಕೆಂಬ ಮನವಿಯನ್ನು ಈಗಾಗಲೇ ಸಲ್ಲಿಸಲಾಗಿದ್ದು,ಎನ್ ಸಿಸಿಎಫ್ ಫಂಡ್ (National Calamity Contigency Fund) ನಿಂದ ಪ್ರಧಾನಿಯವರು ಕರ್ನಾಟಕಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಾಲಮಿತಿಯೊಳಗೆ ಕೆಲಸಕ್ಕೆ ವೇಗ ಕೊಡಲು ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆಯನ್ನು ಹಮ್ಮಿಕೊಂಡಿದ್ದು, ಸಮಾಜದ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಲಾಗುವುದು. ರಾಜ್ಯದ ಬೇಡಿಕೆಗಳ ಪಟ್ಟಿ ಈಗಾಗಲೇ ನೀಡಲಾಗಿದೆ. ಸಂವಿಧಾನ ಬದ್ಧ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಕ್ಕೆ ತನ್ನದೇ ಆದ ಅಸ್ತಿತ್ವವಿದ್ದು, ರಾಜ್ಯ ಸರ್ಕಾರ ತನ್ನದೇ ಇತಿಮಿತಿಯಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ. ಕಾನೂನು ಪಾಲನೆ ಮತ್ತು ಭಯೋತ್ಪಾದನಾ ನಿಗ್ರಹದ ಬಗ್ಗೆಯೂ ಕಾರ್ಯೋನ್ಮುಖವಾಗಲಿದೆ.
ಲೋಕಾಯುಕ್ತ ನೇಮಕದ ಬಗ್ಗೆ ಉತ್ತರಿಸಿದ ಅವರು, ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಯುಪಿಸಿಎಲ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಪರಿಸರಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಪರಿಹಾರವಾಗಲಿದೆ . ಯುಪಿಸಿಎಲ್ ನಿಂದ ವಿದ್ಯುತ್ ಪಡೆಯಲು ಯುಪಿಸಿಎಲ್ ಮತ್ತು ಸರ್ಕಾರದ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿಗಳು ನುಡಿದರು. ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಸಭಾ ಉಪ ಸಭಾಪತಿ ಎನ್.ಯೋಗಿಶ್ ಭಟ್, ಮೇಯರ್ ಗುಲ್ಜಾರ್ ಭಾನು, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರಿಮತಿ ಕೆ.ಟಿ.ಶೈಲಜಾ ಭಟ್, ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಜಿಲ್ಲಾಧಿಕಾರಿ ಡಾ. ಎನ್.ಎಸ್.ಚನ್ನಪ್ಪ ಗೌಡ, ಐಜಿಪಿ ಪ್ರತಾಪ್ ರೆಡ್ಡಿ, ಸಿಇಒ ಡಾ.ವಿಜಯ ಪ್ರಕಾಶ್, ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.