Monday, May 28, 2012

ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿ: ಡಾ.ಯೋಗೀಶ್ ದುಬೆ

ಮಂಗಳೂರು, ಮೇ.28: ವಲಸೆ ಕಾರ್ಮಿಕರ ಮಕ್ಕಳು ಹಾಗೂ ಬಡ ಮಕ್ಕಳು ಪ್ರಾಥಮಿಕ ಶಾಲಾ ಶಿಕ್ಷಣದಿಂದ ವಂಚಿತರಾಗದಂತೆ ಹಾಗೂ ಬಾಲಕಾರ್ಮಿಕರಾಗುವುದನ್ನು ತಡೆಯಲು ವಲಸೆ ಮಕ್ಕಳಿಗೆ ಹಾಸ್ಟೆಲ್ ಹಾಗೂ ಕಸ್ತೂರ್ಬಾ ಗಾಂಧಿ ಮಾದರಿ ಶಾಲೆಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆರೆಯಬೇಕೆಂಬ ಸಲಹೆಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಯೋಗೀಶ್ ದುಬೆ ಅವರು ಮಾಡಿದರು.
ಇಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ಜೊತೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ಹಕ್ಕು ಕಾಯಿದೆ ಪರಿಣಾಮಕಾರಿ ಅನುಷ್ಠಾನ ಹಾಗೂ ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಮಕ್ಕಳ ಕಲ್ಯಾಣ ಸಮಿತಿ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ಜಿಲ್ಲೆಯಲ್ಲಿ ಎಲ್ಲವೂ ವರದಿಗಳಲ್ಲಿರುವಂತೆ ಇಲ್ಲ ಎಂಬುದು ಸ್ಥಳ ಪರಿಶೀಲನೆ ವೇಳೆ ತಾನು ಕಂಡುಕೊಂಡಿದ್ದು, ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದರಿಂದ ಜಿಲ್ಲೆಗೆ ಹೆಚ್ಚಿನ ಸೌಲಭ್ಯಗಳು ದೊರಕಲಿವೆ. ಇಲ್ಲಿ ವಲಸೆ ಕಾರ್ಮಿಕರ ಮಕ್ಕಳಿಗಾಗಿ ಹಾಸ್ಟೆಲ್ ಮತ್ತು ಪೌಷ್ಠಿಕ ಪುನರ್ವಸತಿ ಕೇಂದ್ರ (Nutrition Rehabilitation Centers) ಗಳನ್ನು ತೆರೆಯಬೇಕಿದೆ ಎಂದರು.
ಅಂಗನವಾಡಿ ಕೇಂದ್ರಗಳು ಇನ್ನಷ್ಟು ಸಬಲೀಕರಣವಾಗಬೇಕಿದ್ದು, ಈ ಕ್ಷೇತ್ರದಲ್ಲಿ ದುಡಿಯುವವರಿಗೆ ಹೆಚ್ಚಿನ ತರಬೇತಿಯ ಅಗತ್ಯವಿದೆ. ಜಿಲ್ಲೆಯಲ್ಲಿ ಮಕ್ಕಳ ಪುನರ್ವಸತಿ ಮತ್ತು ಕಲ್ಯಾಣಕ್ಕೆ ಸರ್ಕಾರೇತರ ಸಂಘ ಸಂಸ್ಥೆಗಳನ್ನು ಹೆಚ್ಚಾಗಿ  ಅವಲಂಬಿಸಿಕೊಂಡಿದ್ದು, ಈ ವ್ಯವಸ್ಥೆಗಿಂತ ಸಮಗ್ರ ಮೂಲಸೌಕರ್ಯಗಳನ್ನೊಳ ಗೊಂಡ ಸರ್ಕಾರಿ ಸಂಸ್ಥೆಗಳು  ನಿರ್ಮಾಣವಾಗಬೇಕಿದೆ  ಎಂದು  ದುಬೆ ಅವರು ಹೇಳಿದರು. ಮಕ್ಕಳ ಕಲ್ಯಾಣ ಸಮಿತಿ ಮಕ್ಕಳ ಕಲ್ಯಾಣಕ್ಕೆ ಕೈಗೊಂಡ ಎಲ್ಲ ಕ್ರಮಗಳು ಹಾಗೂ ಜಿಲ್ಲೆಯಲ್ಲಿರುವ ವ್ಯವಸ್ಥೆಗಳ ಬಗ್ಗೆ ಛಾಯಾಚಿತ್ರಗಳ ಸಮೇತ ತಮಗೆ ವರದಿ ಸಲ್ಲಿಸಲು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗ್ರೇಸಿ ಗೊನ್ಸಾಲಿಸ್ ಅವರಿಗೆ ಸೂಚಿಸಿದರು.
ಸರ್ಕಾರ ಬಾಲಕಿಯರಿಗಾಗಿ ಬಾಲಮಂದಿರ, ವೀಕ್ಷಣಾಲಯ, ವಿಶೇಷ ಪಾಲನಾ ಮಂದಿರಗಳನ್ನು ನಿರ್ಮಿಸಿ ನಿರ್ವಹಿಸುವಂತಾಗಬೇಕು. ಈ ಕೇಂದ್ರಗಳಲ್ಲಿರುವ ಮಕ್ಕಳ ಸಂಪೂರ್ಣ ಮಾಹಿತಿ ತಮಗೆ ಶೀಘ್ರದಲ್ಲೇ ಸಲ್ಲಿಸಬೇಕೆಂದರು. ರಾಜಸ್ಥಾನ ಹಾಗೂ ಗುಜರಾತ್ ನಲ್ಲಿ ಮಕ್ಕಳಿಗೋಸ್ಕರ ನಿರ್ಮಿಸಲಾಗಿರುವ ವಲಸೆ ಕೇಂದ್ರಗಳಿಂದ ಆಗಿರುವ ಅನುಕೂಲಗಳನ್ನು ಸಭೆಗೆ ವಿವರಿಸಿದರು.
ರಾಜ್ಯದ ಎರಡನೇ ಆರ್ಥಿಕ ರಾಜಧಾನಿಯೆಂಬ ಹೆಗ್ಗಳಿಕೆಯನ್ನು ಪಡೆದಿರುವ ಕರಾವಳಿ ನಗರ ಮಂಗಳೂರಿನಲ್ಲಿ  ಕಟ್ಟಡ ನಿರ್ಮಾಣ ಹಾಗೂ ವಿಶೇಷ ಆರ್ಥಿಕ ವಲಯ ಹೊಂದಿದ್ದರಿಂದ ವಲಸೆ ಕಾರ್ಮಿಕರು ಹೆಚ್ಚಾಗಿದ್ದಾರೆ. ಜಿಲ್ಲೆಯು ಸಾಕ್ಷರ ಜಿಲ್ಲೆಯಾಗಿದ್ದು, ಶಿಕ್ಷಣದ ಬಗ್ಗೆ ಎಲ್ಲರಿಗೂ ಅರಿವಿದ್ದು, ಜಿಲ್ಲೆಯ ಮಕ್ಕಳು ಶಿಕ್ಷಣದಿಂದ ವಂಚಿತ ರಾಗಿರುವುದಿಲ್ಲ; ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಫಲಿತಾಂಶಗಳು ಇದಕ್ಕೆ ಸಾಕ್ಷಿಯಾಗಿದ್ದು, ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಶಿಕ್ಷಣದ ಬಗ್ಗೆ ಅತೀ ಹೆಚ್ಚಿನ ಕಾಳಜಿಯನ್ನು ವಹಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ. ಕೆ ಎನ್ ವಿಜಯಪ್ರಕಾಶ್ ವಿವರಿಸಿದರು. ಆದರೆ ವಲಸಿಗರ ಮಕ್ಕಳಿಂದ ಹಾಗೂ ಇನ್ನಿತರೇ ಕೆಲವು ಕಾರಣಗಳಿಂದ ಶಿಕ್ಷಣ ವಂಚಿತ ಮಕ್ಕಳು ಮತ್ತು ಬಾಲಕಾರ್ಮಿಕ ಘಟನೆಗಳು ಜಿಲ್ಲೆಯಿಂದ ಅಪರೂಪಕ್ಕೆ ವರದಿಯಾಗುತ್ತಿದ್ದು, ಈ ಸಂದರ್ಭಗಳಲ್ಲಿ  ಬೇಕಾದ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲಾಗಿದೆಯಲ್ಲದೆ, ಸಮಸ್ಯೆಗಳನ್ನು ಸವಾಲುಗಳಾಗಿ ಎದುರಿಸಿ ಬಗೆಹರಿಸಲು ದೂರದರ್ಶಿತ್ವದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಇಒ ನುಡಿದರು.
ರೆಸಿಡೆನ್ಷಿಯಲ್ ಬ್ರಿಡ್ಜ್ ಕೋರ್ಸ್ ಜಿಲ್ಲೆಯಲ್ಲಿ ಕಳೆದ ವರ್ಷ  ಅನುಷ್ಟಾನಕ್ಕೆ ತಾರದಿರುವ ಬಗ್ಗೆ ಹಾಗೂ ಪ್ರಸಕ್ತ ಸಾಲಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿದ್ಯಾಂಗ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಬಾಲಕಾರ್ಮಿಕ ಸಮಸ್ಯೆಗಳು ವರದಿಯಾದ ಬಗ್ಗೆ ಹಾಗೂ ಕಾರ್ಮಿಕ ಇಲಾಖೆ ನಡೆಸಿದ ಸಮೀಕ್ಷೆ ಹಾಗೂ ವರದಿಗಳು, ಕೈಗೊಂಡ ಕ್ರಮಗಳ ಬಗ್ಗೆ ಕಾರ್ಮಿಕ ಆಯುಕ್ತರಾದ ಅಪ್ಪಯ್ಯ ಶಿಂಧಿಹಟ್ಟಿ ಅವರು ವಿವರಿಸಿದರು.  ಅಪರ ಜಿಲ್ಲಾಧಿಕಾರಿ ಕೆ.ದಯಾನಂದ ಅವರು ಸಭೆಯನ್ನು ನಿರ್ವಹಿಸಿದರು. ಮಕ್ಕಳ ಕಲ್ಯಾಣದ ಹೊಣೆ ಹೊತ್ತಿರುವ ಜಿಲ್ಲೆಯ ಪ್ರಮುಖ ಸರ್ಕಾರೇತರ ಸಂಘ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿದ್ದರು.