Wednesday, May 2, 2012

ಸ್ವಾವಲಂಬಿಗಳಾಗಲು ವೃತ್ತಿ ಕೌಶಲ್ಯ:ಕೆ ಟಿ ಶೈಲಜಾ

ಮಂಗಳೂರು ಮೇ.02: ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಲು ವೃತ್ತಿ ಶಿಕ್ಷಣ ಕೌಶಲ್ಯ ತರಬೇತಿಗಳು ನೆರವಾಗಬೇಕು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಸಮಾಜ ಸಬಲವಾಗುತ್ತದೆ. ಹೀಗಾದಾಗ ತರಬೇತಿಗೆ ಅರ್ಥಬರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್ ಹೇಳಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾ ಸಾಕ್ಷರ ಸಮಿತಿ, ಗ್ರಾಮ ಪಂಚಾಯತುಗಳು ಮತ್ತು ಜನ ಶಿಕ್ಷಣ ಟ್ರಸ್ಟ್ ವತಿಯಿಂದ ನವ ಸಾಕ್ಷರರಿಗಾಗಿ ನಡೆಸಿದ 45 ದಿನಗಳ ವೃತ್ತಿ ಕೌಶಲ್ಯ ತರಬೇತಿಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದು ಮಂಗಳೂರು ತಾಲೂಕಿನ ಬಾಳೆಪುಣಿಯಲ್ಲಿರುವ ಜನ ಶಕ್ಷಿಣ ಟ್ರಸ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣದಿಂದ ಆಗುವ ಅನುಕೂಲಗಳನ್ನು ಪಟ್ಟಿ ಮಾಡಿದ ಅವರು, ಸರ್ಕಾರದ ಯೋಜನೆಗಳು ಸಮಗ್ರವಾಗಿ ಅನುಷ್ಠಾನಗೊಂಡ ಗ್ರಾಮೀಣಾಭಿವೃದ್ಧಿಯೂ ಸಾಧ್ಯ ಎಂದರು.
ದಕ್ಷಿಣ ಕನ್ನಡ ಜಿಲ್ಲೆಗೆ ಇತ್ತೀಚೆಗೆ ಹಲವು ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿ ಪಡೆಯುವ ಯೋಗ ತನ್ನದು ಆದರೆ ಅದಕ್ಕೆ ಕಾರಣ ಜಿಲ್ಲೆಯ ಜನತೆ ಎಂದ ಅವರು, ಗ್ರಾಮೀಣಾಭಿವೃದ್ಧಿಗೆ ಜನ ಶಿಕ್ಷಣ ಟ್ರಸ್ಟ್ ನೀಡುತ್ತಿರುವ ಕಾಣಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೃತ್ತಿ ಕೌಶಲ್ಯ ತರಬೇತಿಯನ್ನ್ನು ಕೂಡಾ ಟ್ರಸ್ಟ್ ಅತ್ಯುತ್ತಮವಾಗಿ ನಡೆಸಿ ಕೊಟ್ಟಿದೆ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಮಾತನಾಡಿ, ತರಬೇತಿ ಪಡೆದವರಿಗೆ ಶುಭ ಹಾರೈಸಿದರು. ಲೋಕ ಶಿಕ್ಷಣಾಧಿಕಾರಿ ಮಲ್ಲೇಶಪ್ಪ, ತಾಲೂಕು ಪಂಚಾಯತ್ ಸದಸ್ಯರಾದ ಬೇಬಿ ಕೋಟ್ಯಾನ್ ಮತ್ತು ನೇತ್ರಾವತಿ ಮುಖ್ಯ ಅತಿಥಿಗಳಾಗಿದ್ದರು.
ತರಬೇತಿ ಪಡೆದ ಎಲ್ಲಾ ಫಲಾನುಭವಿಗಳಿಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪ್ರಮಾಣ ಪತ್ರಗಳನ್ನು ವಿತರಿಸಿದರು
ದಕ್ಷಿಣ ಕನ್ನಡ ಜಿಲ್ಲೆಯ 34 ಗ್ರಾಮ ಪಂಚಾಯತುಗಳ 36 ಗ್ರಾಮ ವಿಕಾಸ ಕೇಂದ್ರಗಳಲ್ಲಿ ತರಬೇತಿ ನಡೆದಿದೆ. 542 ಮಂದಿ ತರಬೇತಿ ಪಡೆದವರು. ತರಬೇತಿಯ ವೇಳೆ ಕಲಿಕೆ-ಗಳಿಕೆ ಸೂತ್ರದಡಿ ಈ ಸಂದರ್ಭದಲ್ಲಿ 2000 ರೂ.ಗಳಿಗೂ ಅಧಿಕ ಮಾರಾಟ ಮಾಡಿದವರು ಸಮಾರಂಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ತರಬೇತಿ ಪಡೆದವರಲ್ಲಿ 512 ಮಹಿಳೆ ಯರು. 30 ಪುರುಷರು. ತರಬೇತಿಗೆ ಹಾಜರಾದವರಲ್ಲಿ 165 ಮಂದಿ ಪರಿಶಿಷ್ಟ ಜಾತಿಯವರು. 60 ಮಂದಿ ಪರಿಶಿಷ್ಟ ವರ್ಗದವರು. 130 ಮಂದಿ ಅಲ್ಪ ಸಂಖ್ಯಾತರು ತರಬೇತಿಯ ಲಾಭ ಪಡೆದಿದ್ದಾರೆ. ತರಬೇತಿ ಅವಧಿ ಮಾ.16ರಿಂದ ಎ.30ರವರೆಗೆ ನಡೆಸಲಾಯಿತು.
ನಲವತ್ತೈದು ದಿನಗಳ ವೃತ್ತಿ ಕೌಶಲ್ಯ ತರಬೇತಿಯಲ್ಲಿ ದಿನ ಬಳಕೆಯ ವಸ್ತುಗಳ ತಯಾರಿಗೆ ಹೆಚ್ಚು ಒತ್ತು ನೀಡಲಾಗಿದೆ ಎನ್ನುತ್ತಾರೆ ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ. 36 ಮಂದಿ ಸಂಪನ್ಮೂಲ ವ್ಯಕ್ತಿಗಳು ಈ ತರಬೇತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲಾ ಪಂಚಾಯತು, ಗ್ರಾಮ ಪಂಚಾಯತುಗಳು ಮತ್ತು ಮಾದರಿ ಗ್ರಾಮ ವಿಕಾಸ ಕೇಂದ್ರಗಳ ಪ್ರೇರಕರು ತರಬೇತಿಯ ಯಶಸ್ಸಿನ ಹಿಂದೆ ಇದ್ದಾರೆ ಎಂದು ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕ ಹಾಗೂ ಜಿಲ್ಲಾ ಉದ್ಯೋಗ ಖಾತರಿ ಒಂಬುಡ್ಸ್ಮನ್ ಶೀನ ಶೆಟ್ಟಿ ಹೇಳಿದರು.
ಫ್ಯಾನ್ಸಿ ಆಭರಣ ತಯಾರಿಕೆ, ಪಾತ್ರೆ ತೊಳೆಯುವ ಸೋಪು, ಸ್ನಾನದ ಸಾಬೂನು, ಬಟ್ಟೆ ಒಗೆಯುವ ಸಾಬೂನು, ಸರ್ಫ್ ತಯಾರಿ ಮಾಡಿದ್ದಾರೆ. ಫಿನಾಯಿಲ್, ಹರ್ಬಲ್ ಫಿನಾಯಿಲ್ ತಯಾರಿಸಿ ದುಡ್ಡು ಗಳಿಸಿದವರಿಗೆ ಕಡಿಮೆ ಇಲ್ಲ. ಕೆಲವರು ಬಟ್ಟೆ ಚೀಲ, ಕಾಗದದ ಚೀಲ ತಯಾರಿಸಿದ್ದಾರೆ. ತರಬೇತಿಯಲ್ಲಿ ಮುಟ್ಟಾಲೆಯೂ ಸೃಷ್ಠಿಯಾಗಿದೆ. ಹರ್ಬಲ್ ಫಿನಾಯಿಲ್ ರಾಜ್ಯದ 18 ಜಿಲ್ಲೆಗಳನ್ನು ತಲುಪಿದೆ ಎನ್ನುತ್ತಾರೆ ಮೇರಮಜಲಿನ ವೃಂದ.
ಹಳ್ಳಿಗಳಲ್ಲಿ ದೊರೆಯುವ ಹಲಸಿನ ಕಾಯಿಗೂ ಮೌಲ್ಯ ತಂದು ಕೊಡುವ ಪ್ರಯತ್ನ ತರಬೇತಿಯಲ್ಲಿ ಆಗಿದೆ. ಹಲಸಿನ ಹಣ್ಣಿನಿಂದ ಹಲ್ವ ಮತ್ತು ಜ್ಯೂಸ್ ತಯಾರಿಸುವುದನ್ನು ಕೆಲವರು ಕಲಿತು ಕೊಂಡಿದ್ದಾರೆ. ಹಲಸಿನ ಹಣ್ಣಿನಿಂದ ವಿವಿಧ ಖಾದ್ಯಗಳನ್ನು ತಯಾರಿಸುವುದಲ್ಲದೆ, ಸಂಸ್ಕರಿಸಿ ದೀರ್ಘ ಕಾಲ ಉಳಿಸುವ ಬಗ್ಗೆಯೂ ತರಬೇತಿಯಲ್ಲಿ ತಿಳಿಸಲಾಗಿದೆ. ವಿಶೇಷವಾಗಿ 12 ಕೇಂದ್ರಗಳಲ್ಲಿ ಬಟ್ಟೆ ಚೀಲಗಳನ್ನು ಸಿದ್ಧ ಪಡಿಸುವ ತರಬೇತಿಯನ್ನು ನೀಡಲಾಗಿದೆ. ಭವಿಷ್ಯದಲ್ಲಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಕೂಡದೆಂಬ ದೂರಾಲೋಚನೆಯಿಂದ ಬಟ್ಟೆ ಚೀಲ ತಯಾರಿಸುವ ತರಬೇತಿ ನೀಡಲಾಗಿದೆ ಎನ್ನುತ್ತಾರೆ ಕೃಷ್ಣ ಮೂಲ್ಯ ಅವರು.
ತರಬೇತಿ ಪಡೆದ ಫಲಾನುಭವಿಗಳು ಮತ್ತು ಮಾದರಿ ಗ್ರಾಮ ವಿಕಾಸ ಕೇಂದ್ರಗಳು ಮುಂದಿನ ದಿನಗಳಲ್ಲಿ ಆರ್ಥಿಕ ಸ್ವಾವಲಂಬನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ.ಅಷ್ಟು ಮಾತ್ರವಲ್ಲದೆ ಜಿಲ್ಲೆಯ ಸ್ವಚ್ಛತಾ ಆಂದೋಲನ ಮತ್ತು ಉದ್ಯೋಗ ಖಾತರಿಯ ಪರಿಣಾಮಕಾರಿ ಅನುಷ್ಠಾನದಲ್ಲಿ ಸಹಕರಿಸಲಿವೆ. ಈ ಎಲ್ಲ ಕಾರ್ಯಕ್ರಮಗಳ ಜೊತೆಗೆ ಎಲ್ಲ ಕುಟುಂಬಗಳಿಗೆ ಉದ್ಯೋಗ ಚೀಟಿ ದೊರಕಿಸುವುದು ನಮ್ಮ ಮುಂದಿನ ಗುರಿ ಎಂದು ತರಬೇತಿಯ ಮೌಲ್ಯಮಾಪನ ಮಾಡಿದ ಶೀನ ಶೆಟ್ಟಿ ಅವರು ಸಭೆಯಲ್ಲಿ ಹೇಳಿದರು.