Tuesday, April 6, 2010

ಮಂಗಳಗಂಗೋತ್ರಿ ಘಟಿಕೋತ್ಸವ: ಏಳು ಸಾಧಕರಿಗೆ ಗೌರವ ಡಾಕ್ಟರೇಟ್

ಮಂಗಳೂರು,ಏ.6: ವಿಶ್ವವೊಂದು ಗ್ರಾಮವಾಗಿ ಮಾರ್ಪಾಡಾಗಿರುವ ಇಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದಲ್ಲಿರುವ ಅವಕಾಶಗಳ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸವನ್ನು ಮಾಡಬೇಕೆಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಡಾ.ಶಶಿ ತರೂರ್ ತಮ್ಮ ಘಟಿಕೋತ್ಸವ ಭಾಷಣದಲ್ಲಿ ಹೇಳಿದರು. ವಿದೇಶಾಂಗ ನೀತಿ,ಸಂಪರ್ಕ,ಬಾಂದವ್ಯದ ಬಗ್ಗೆ ಇರುವ ವಿಫುಲ ಅವಕಾಶಗಳಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ವಿಶ್ವ ವಿದ್ಯಾಲಯಗಳು ಮಾರ್ಗದರ್ಶಿಯಾಗಬೇಕು ಎಂದರು.
ಅವರಿಂದು ಮಂಗಳ ಗಂಗೋತ್ರಿಯ 28 ನೇ ವಾರ್ಷಿಕ ಘಟಿಕೋತ್ಸವ ದಲ್ಲಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲೇ ಅಂದಿನ ನಮ್ಮ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರು ಅವರು ಜಾಗತಿಕ ನೀತಿ ಮತ್ತು ಜಾಗತೀಕರಣದ ಬಗ್ಗೆ ಮಾಹಿತಿ ನೀಡಿದ್ದರು. ನಮ್ಮ ಅಲಿಪ್ತ ನೀತಿ, ಮಾನವ ಹಕ್ಕು ರಕ್ಷಣೆ,ನಿರಾಶ್ರಿತರ ಬಗ್ಗೆ ಸ್ಪಷ್ಟ ನೀತಿಯನ್ನು ರೂಪಿಸಲಾಗಿತ್ತು. ಇಂದು ಜಲ,ವಾಯುಮಾಲಿನ್ಯದಂತಹ ಸಮಸ್ಯೆಗಳ ಬಗ್ಗೆ ಚಿಂತಿಸುವಾಗ ನಮ್ಮ ದೇಶಕ್ಕೆ ಸೀಮಿತವಾಗಿ ಚಿಂತಿಸದೆ ಜಾಗತಿಕ ಮಟ್ಟದಲ್ಲಿ ಚಿಂತಿಸುವ ಅಗತ್ಯವೇ ನಮ್ಮ ಬೆಳವಣಿಗೆಯನ್ನು ಬಿಂಬಿಸುತ್ತಿದೆ. ಹಾಗಾಗಿ ವಿಶ್ವ ವಿದ್ಯಾನಿಲಯದಿಂದ ಹೊರಬರುವ ಮಕ್ಕಳೂ ಜಾಗತಿಕ ಪ್ರಜ್ಞೆಯನ್ನು ಮೆರೆದು ಬೆಳೆಯಬೇಕು ಎಂದು ಅವರು ಸಲಹೆ ಮಾಡಿದರು.ಮಂಗಳೂರು ಇಂದು ವಿಶ್ವ ಭೂಪಟದಲ್ಲಿ ವಿದ್ಯಾ ನಗರಿಯಾಗಿ ಗುರುತಿ ಸಲ್ಪಟ್ಟಿದ್ದು, ಈ ಗುರುತಿಸಿ ಕೊಳ್ಳುವಿಕೆಯ ಲಾಭವನ್ನು ವಿದ್ಯಾರ್ಥಿಗಳು ಪಡೆಯ ಬೇಕೆಂದರು.ವಿದೇಶಾಂಗ ಸಂಪರ್ಕ, ವ್ಯವಹಾರಗಳ ಬಗ್ಗೆಗಿನ ಅವಜ್ಞೆಯನ್ನು ಕಳೆದುಕೊಂಡು ವಿಶ್ವದ ವಿವಿಧ ಭಾಷಾ ಕಲಿಕೆ ಮತ್ತು ಉತ್ತಮ ಗುಣಮಟ್ಟದ ಸಂಶೋಧನೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಯುವಜನಾಂಗ ಆಸಕ್ತಿ ವಹಿಸಬೇಕೆಂದರು.ಘನತೆವೆತ್ತ ರಾಜ್ಯಪಾಲರು ಹಾಗೂ ಕುಲಾಧಿ ಪತಿಗಳಾದ ಎಚ್ ಆರ್ ಭಾರಧ್ವಾಜ್ ಅವರು ಅಣು ವಿಜ್ಞಾನಿ ಡಾ.ರಾಕೇಶ್ ಕುಮಾರ್ ಭಂಡಾರಿ (ಕೋಲ್ಕತ್ತಾ), ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ (ಸಮಾಜ ಸೇವೆ), ಕೋಳ್ಯೂರು ರಾಮಚಂದ್ರ ರಾವ್ (ಯಕ್ಷಗಾನ,ಕಲೆ), ಡಾ.ಮೋಹನ ಆಳ್ವ (ಶಿಕ್ಷಣ, ಕ್ರೀಡೆ,ಸಾಂಸ್ಕೃತಿಕ ಪ್ರೋತ್ಸಾಹಕ), ಎ.ಎಸ್. ವಿಷ್ಣು ಭರತ್ (ಸಮಾಜ ಸೇವೆ), ಮಧುರಾ ಎಂ ಛತ್ರಪತಿ(ಸಮಾಜ ಸೇವೆ), ಆರ್.ಚೆನ್ ರಾಜ್ ಜೈನ್ (ಶಿಕ್ಷಣ,ಸಮಾಜಸೇವೆ)ಇವರುಗಳಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು. 30ಮಂದಿಗೆ ಚಿನ್ನದ ಪದಕ, 56 ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸ್ನಾತಕೋತ್ತರ ಪದವೀಧರರು 48, ಪದವಿ 22 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 70 ಮಂದಿಯನ್ನು ಗೌರವಿಸಲಾಯಿತು. ಸಹಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಉಪಸ್ಥಿತರಿದ್ದರು. ಕುಲಪತಿ ಪ್ರೊ. ಟಿ.ಸಿ. ಶಿವಶಂಕರ್ ಮೂರ್ತಿ ಸ್ವಾಗತಿಸಿದರು. ವಿವಿಧ ನಿಕಾಯಗಳ ಡೀನ್ ಗಳು, ರಿಜಿಸ್ಟ್ರಾರ್ ಡಾ.ಚಿನ್ನಪ್ಪಗೌಡ ಘಟಿಕೋತ್ಸವದ ವೇದಿಕೆಯಲ್ಲಿದ್ದರು.