Wednesday, April 28, 2010

ಕದ್ರಿ ಬಾಲಭವನದಲ್ಲಿ ಮಕ್ಕಳ ಕಲರವ

ಮಂಗಳೂರು,ಏ.28: ಕದ್ರಿ ಉದ್ಯಾನವನದ ಪಕ್ಕದಲ್ಲಿ ಇರುವ ಕದ್ರಿ ಬಾಲಭವನದಲ್ಲಿ ಇದೀಗ ಮಕ್ಕಳ ಕಲರವ. ಸ್ವಚ್ಛಂದವಾಗಿ ಆಡಿ,ಹಾಡಿ,ಕುಣಿದುಕುಪ್ಪಳಿಸಿ ಬೇಸಿಗೆ ಶಿಬಿರದ ಆನಂದವನ್ನು ಮಕ್ಕಳು ಸವಿಯುತ್ತಿದ್ದಾರೆ. ರಾಜ್ಯ ಬಾಲಭವನದ ಮಾದರಿಯಲ್ಲಿ ಕದ್ರಿಯಲ್ಲಿರುವ ಬಾಲಭವನವನ್ನು ಮಕ್ಕಳ ಚಟುವಟಿಕೆ ತಾಣವನ್ನಾಗಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರ ನೇತೃತ್ವದಲ್ಲಿ, ಮಹಾನಗರಪಾಲಿಕೆ ಆಯುಕ್ತ ವಿಜಯಪ್ರಕಾಶ್ ಅವರ ಸಂಪೂರ್ಣ ಸಹಕಾರದೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶಕುಂತಲಾ ಅವರು ಮಕ್ಕಳ ಶಿಬಿರವನ್ನು ಅರ್ಥಪೂರ್ಣವಾಗಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಈ ಸರಕಾರಿ ಪ್ರಾಯೋಜಿತ ಮಕ್ಕಳ ಬೇಸಿಗೆ ಶಿಬಿರಕ್ಕೆ ಏಪ್ರಿಲ್ 14 ರಂದು ಸಿಇಒ ಶಿವಶಂಕರ್ ಅವರು ಚಾಲನೆ ನೀಡಿದರು. 75 ಮಕ್ಕಳು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಯಾವುದೇ ಕಟ್ಟು ಪಾಡುಗಳಿಲ್ಲದೆ ವಿವಿಧ ಗುಂಪುಗಳಲ್ಲಿ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿದ್ದು, ಈ ಗೊಂಬೆ ನಾನೇ ಮಾಡಿದ್ದು, ಈ ಚಿತ್ರ ನಾನೇ ಬಿಡಿಸಿದ್ದು ಎಂದು ಹೇಳಿ ಮುಕ್ತವಾಗಿ ಪಕ್ಕದಲ್ಲೇ ಇರುವ ಉಯ್ಯಾಲೆಯಲ್ಲಿ ಆಟವಾಡುತ್ತಾರೆ; ಮತ್ತೆ ಸ್ವ ಆಸಕ್ತಿಯಿಂದ ತಮ್ಮ ಮಾರ್ಗದರ್ಶಕರ ಬಳಿ ತೆರಳಿ ಸೃಜನಾತ್ಮಕ ಕ್ರಿಯೆಯಲ್ಲಿ ತೊಡಗುತ್ತಾರೆ. ಯಕ್ಷಗಾನ ಕಲಿಸಲು, ನಾಟಕ ಕಲಿಸಲು, ಕರಕುಶಲ ಕಲೆ,ಸುಗಮಸಂಗೀತ, ಜಾನಪದ ಸಂಗೀತ,ಕುಣಿತವನ್ನು ಬೇಸಿಗೆ ಶಿಬಿರದಲ್ಲಿ ಕಲಿಸಲಾಗುತ್ತದೆ. 8 ರಿಂದ 14 ಮತ್ತು 14ರಿಂದ 18 ವರ್ಷದ ವಯೋಮಿತಿಯ ಎರಡು ಗುಂಪುಗಳನ್ನು ಮಾಡಲಾಗಿದ್ದು ಇಲ್ಲಿ ಕಲಿತದ್ದನ್ನು ಮೇ 14 ರಂದು ಪುರಭವನದಲ್ಲಿ ಮಕ್ಕಳು ಸಾರ್ವಜನಿಕವಾಗಿ ಪ್ರದರ್ಶಿಸಲಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಮಕ್ಕಳಿಗೆ ತಾಜಾ ಹಣ್ಣಿನ ರಸ ನೀಡಲಾಗುತ್ತಿದ್ದು, ಮಧ್ಯಾಹ್ನದ ಊಟ ಮಕ್ಕಳೇ ಮನೆಯಿಂದ ತರುತ್ತಾರೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಆರಿಸಲಾಗಿದ್ದು, ಪ್ರಾಕಾರಗಳಲ್ಲಿ ಉತ್ತಮ ಜ್ಞಾನವುಳ್ಳವರು ಮಕ್ಕಳಿಗೆ ಶಿಬಿರದಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಾಫ್ಟ್ ಕಲಿಸಲು ಅನುಭವಿ ಟೀಚರ್ ಪೂರ್ಣಿಮಾ, ಡ್ರಾಯಿಂಗ್ ಗೆ ವೀಣಾ ಮೇಡಂ, ಯಕ್ಷಗಾನಕ್ಕೆ ಹವ್ಯಾಸಿ ಕಲಾವಿದರು ಹಾಗೂ ಬೋಧಕರಾಗಿರುವ ಡಾ. ದಿನಕರ ಪಚ್ಚನಾಡಿ, ನಾಟಕ ಕಲಿಸಲು ಕೆನರಾ ಉರ್ವ ಹೈಸ್ಕೂಲಿನ ಶಿಕ್ಷಕ ರವೀಂದ್ರನಾಥ ಶೆಟ್ಟಿಯವರಿದ್ದಾರೆ. ಮಕ್ಕಳ ಬೇಸಿಗೆ ಶಿಬಿರದ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ಮಾರ್ಗದರ್ಶನಕ್ಕೆ ಬಾಲಭವನದ ಸುರೇಖಾ ಅವರು ಹೆಚ್ಚಿನ ತರಬೇತಿಗೆ ನವದೆಹಲಿಯ ಜವಾಹರ ಬಾಲಭವನಕ್ಕೆ ತೆರಳಿದ್ದಾರೆ. ಬಾಲಭವನದಲ್ಲಿ ಮಕ್ಕಳ ಚಟುವಟಿಕೆಗಳಿಗೆ ಸಂಯೋಜಕರಾಗಿ ಚಂದ್ರಶೇಖರ್ ಶೆಟ್ಟಿಯವರು ಕರ್ತವ್ಯನಿರತರಾಗಿದ್ದಾರೆ. ಮಕ್ಕಳ ಕಲರವ ಬೇಸಿಗೆ ರಜಾ ದಿನಗಳಿಗೆ ಮಾತ್ರ ಸೀಮಿತ ಗೊಳಿಸದೆ ವರ್ಷ ಪೂರ್ತಿ ಪ್ರತೀ ತಿಂಗಳ ವಾರಾಂತ್ಯದಲ್ಲಿ ಶಿಬಿರ ನಡೆಸಲು; ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆ ರೂಪಿಸಿದೆ.ಜಿಲ್ಲಾ ಪಂಚಾಯತ್ ಸಿಇಓ ಅವರ ಅಧ್ಯಕ್ಷತೆಯಲ್ಲಿ ಬಾಲಭವನ ಸಮಿತಿ ಇದೆ. ಮಕ್ಕಳ ಹುಟ್ಟುಹಬ್ಬ ನಡೆಸಲು ರೂ.1,000 ಬಾಡಿಗೆಗೆ ಇಲ್ಲಿನ ಭವನವನ್ನು ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಮಕ್ಕಳ ರೈಲಿನಲ್ಲಿ ದೊರೆಯುವ ಲಾಭವನ್ನು ಬಾಲಭವನ ಅಭಿವೃದ್ಧಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ. ಬಾಲಭವನದ ಪ್ರತಿಭೆಗಳನ್ನು ತಾಲೂಕು ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಪರಿಚಯಿಸಲು ಯೋಜನೆ ರೂಪಿಸಲಾಗಿದೆ. ಬೇಸಿಗೆ ಶಿಬಿರಕ್ಕೆ ರೂ.200 ಫೀ ನಿಗದಿ ಮಾಡಿದ್ದು, ಇದನ್ನು ಪಾವತಿಸಲು ಸಾಧ್ಯವಿಲ್ಲದ ಪ್ರತಿಭೆಗಳಿಗೆ ಉಚಿತ ಸೇರ್ಪಡೆ ಮಾಡುವ ಭರವಸೆಯನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕರು ನೀಡಿದ್ದಾರೆ.
ರಾಜ್ಯ ಬಾಲಭವನದ ಅಧ್ಯಕ್ಷರಾದ ಅಮೃತ ಕುಮಾರ್ ಅವರು ಕದ್ರಿಯಲ್ಲಿರುವ ಬಾಲಭವನದ ಅಭಿವೃದ್ಧಿಗೆ ಸಂಪೂರ್ಣ ನೆರವು ನೀಡುವ ಭರವಸೆ ನೀಡಿದ್ದು, ಈಗಾಗಲೇ ಎರಡು ಲಕ್ಷ ರೂ.ಅನುದಾನ ನೀಡಿದ್ದಾರೆ. ಒಂದೆರಡು ಬಾರಿ ಇಲ್ಲಿ ಭೇಟಿ ನೀಡಿ ಸ್ಥಳ ಪರೀಕ್ಷೆ ನಡೆಸಿದ್ದಾರೆ.ಅನುದಾನದಲ್ಲಿ 95,000 ಬಿಡುಗಡೆ ಮಾಡಿ ಕೆಲಸದ ಪ್ರಗತಿಯನ್ನು ವರದಿ ಮಾಡಿದರೆ, ಉಳಿದ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಸಿಬ್ಬಂದಿ ಕೊರತೆ ಇರುವುದರಿಂದ ಬಾಲಭವನ ನಿರ್ವಹಣೆ ಸ್ವಲ್ಪ ಕಷ್ಟವಾಗಿದ್ದರೂ ಬಾಲಭವನದ ಸಮಗ್ರ ಅಭಿವೃದ್ಧಿಗೆ ಸಿಇಒ ಅವರು ಟೊಂಕ ಕಟ್ಟಿದ್ದಾರೆ. ಬಾಲಭವನದಲ್ಲಿ 3000 ಮಕ್ಕಳ ಪುಸ್ತಕಗಳಿದ್ದು, ಪ್ರತಿದಿನ ಇಲ್ಲಿ ಮಕ್ಕಳಿಗೆ ಓದಲು ಅವಕಾಶ ನೀಡಲು ರೀಡಿಂಗ್ ರೂಮ್ ಆರಂಭಿಸಲು ಚಿಂತನೆ ನಡೆಸಲಾಗಿದೆ.ಧಾರವಾಡದಲ್ಲಿ ಮಕ್ಕಳ ಅಕಾಡೆಮಿಯಿದ್ದು, ಪ್ರಸಕ್ತ ಸಾಲಿನಲ್ಲಿ 2 ಯಕ್ಷಗಾನದಲ್ಲಿ ಪಾಲು ಪಡೆಯಲು ಪರಿಣತ ಮಕ್ಕಳನ್ನು ಅಲ್ಲಿಗೆ ಕಳುಹಿಸಲಾಗಿದೆ. ಕಳೆದ ಸೆಪ್ಟಂಬರ್ ನಲ್ಲಷ್ಟೇ ಇಲಾಖೆಯ ಕೈಗೆ ಹಿಂದಿರುಗಿರುವ ಬಾಲಭವನ ಪೂರ್ಣ ಪ್ರಮಾಣದ ಬಾಲಭವನವಾಗಿ ನಿಧಾನಕ್ಕೆ ರೂಫುಗೊಳ್ಳುತ್ತಿದೆ. ಮಕ್ಕಳ ಖುಷಿ,ಕೇಕೇ ಇಲ್ಲಿನ ಪರಿಸರದಲ್ಲಿ ಕೇಳುತ್ತಿದೆ.