Friday, April 2, 2010

ನಿವೃತ್ತರ ಸಮಸ್ಯೆಗೆ ಸ್ಪಂದಿಸಿ : ಐಜಿಪಿ ಹೊಸೂರು

ಮಂಗಳೂರು,ಏಪ್ರಿಲ್ 2: ಕರ್ನಾಟಕ ರಾಜ್ಯ ಪೋಲಿಸ್ ಧ್ಜಜ ಮತ್ತು ಕಲ್ಯಾಣ ದಿನಾಚರಣೆ ಮಂಗಳೂರಿನಲ್ಲಿಂದು ನಡೆಯಿತು. ಜಿಲ್ಲಾ ಪೋಲಿಸ್ ಕವಾಯತು ಮೈದಾನದಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಸಿಐಡಿ ಪೋಲಿಸ್ ನಿರೀಕ್ಷಕಿ ಅನಸೂಯಾ ಅವರು ಇಲಾಖೆಯಲ್ಲಿ ದಕ್ಷತೆ ಮತ್ತು ಶೃದ್ದೆಯಿಂದ ಕರ್ತವ್ಯ ನಿರ್ವಹಿಸಿದರೆ,ನಿವೃತ್ತಿ ಹೊಂದಿದ ಮೇಲು ಗೌರವದಿಂದ ಜೀವನ ಸಾಗಿಸಲು ಸಾಧ್ಯವಿದೆ.ಪೋಲಿಸರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವುದರಿಂದ ಇಲಾಖೆಯನ್ನು ಭ್ರಷ್ಟಾಚಾರ ಮುಕ್ತ ಮಾಡಲು ಸಾಧ್ಯ ಎಂದರು. ನಿವೃತ್ತ ಅಧಿಕಾರಿ,ಸಿಬಂದಿಗಳನ್ನು ಕನಿಷ್ಟ ಮೂರು ತಿಂಗಳಿಗೆ ಒಂದು ಬಾರಿಯಾದರೂ ಸಭೆ ಕರೆದು ಅವರ ಸಮಸ್ಯೆಗಳನ್ನು ಅರಿಯುವ ಪ್ರಯತ್ನವನ್ನು ಹಿರಿಯ ಅಧಿಕಾರಿಗಳು ಮಾಡಬೇಕೆಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಪೊಲೀಸ್ ಧ್ವಜವನ್ನು ಬಿಡುಗಡೆಗೊಳಿಸಿ ಮಾತನಾಡಿದ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಗೋಪಾಲ್ ಬಿ. ಹೊಸೂರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮಾಡಿದ ಅವಿರತ ಶ್ರಮವನ್ನು ಶ್ಲಾಘಿಸಿದರು. ಈ ಬಾರಿಯ ಮುಖ್ಯಮಂತ್ರಿ ಸ್ವರ್ಣ ಪದಕಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಇಲಾಖೆ ಇತರ ಜಿಲ್ಲೆಗಳಿಗಿಂತ ಹೆಚ್ಚು ಪಡೆದಿದ್ದು,ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.ಇದು ಇಲಾಖೆ ಇನ್ನೂ ಹೆಚ್ಚಿನ ದಕ್ಷತಯಿಂದ ಕೆಲಸ ಮಾಡಲು ಸಹಕಾರಿಯಾಗಲಿದೆ.ಜನತೆ ಶಾಂತಿ ಮತ್ತು ನೆಮ್ಮದಿಯಿಂದ ಸಮಾಜದಲ್ಲಿ ಬದುಕ ಬೇಕಾದರೆ ಪೋಲಿಸರ ಪಾತ್ರ ಮಹತ್ವದ್ದು, ಎಲ್ಲಾ ರಾಜಕೀಯ, ಆರ್ಥಿಕ ಮತ್ತು ಜಾತಿ ರಾಜಕೀಯದಿಂದ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಂತು ಪೋಲಿಸ್ ಇಲಾಖೆ ಕಾರ್ಯನಿರ್ವಹಿಸಬೇಕಾಗಿದೆ ಎಂದ ಅವರು, ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರನ್ನು ಗೌರವದಂದ ನೋಡಿಕೊಳ್ಳುವುದು ಇಲಾಖೆಯ ಜವಾಬ್ದಾರಿಯಾಗಿದ್ದು, ನಿವೃತ್ತ ಅಧಿಕಾರಿ ಮತ್ತು ಸಿಬಂದಿಗಳನ್ನು ಗೌರವ ಮತ್ತು ಆದರದಿಂದ ನೋಡುವಂತೆ ಕರೆ ನೀಡಿದರು. ಸಮಾರಂಭದಲ್ಲಿ ಹಿರಿಯ ನ್ಯಾಯವಾದಿ ಸೀತಾರಾಂ ಶೆಟ್ಟಿ ಅಥಿತಿಯಾಗಿ ಭಾಗವಹಿಸಿ ಹಿತವಚನಗಳನ್ನು ನೀಡಿದರು.ಕಾರ್ಯಕ್ರಮದಲ್ಲಿಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಅಧಿಕಾರಿ ಮತ್ತು ಸಿಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಅಪರಾಧಿಗಳನ್ನು ಪತ್ತೆ ಮಾಡಲು ಇಲಾಖೆಗೆ ಸಹಕಾರ ನೀಡಿದ ನಾಗರಿಕರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಅವರು ಸ್ವಾಗತಿಸಿದರು.ಎಡಿಶನಲ್ ಎಸ್ಪಿ ಆರ್. ರಮೇಶ್ ಅವರು ಧನ್ಯವಾದ ಸಮರ್ಪಿಸಿದರು. ಲಿನೆಟ್ ಕಾರ್ಯಕ್ರಮ ನಿರ್ವಹಿಸಿದರು.