
ಕಳೆದ ಎರಡೂವರೆ ವರ್ಷದಲ್ಲಿ ಒಟ್ಟು 200 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ ಕೆಂಜಾರಿನಲ್ಲಿ 70 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ಮುಂದಿನ ಹಂತದಲ್ಲಿ ರನ್ ವೇ ಅಭಿವೃದ್ಧಿಗೆ 50 ಕೋಟಿ ರೂ. ವೆಚ್ಚ ಮಾಡಲಾಗುವುದು. ಒಟ್ಟು 250 ಕೋಟಿ ರೂಪಾಯಿಯ ಈ ಯೋಜನೆ ಜೂನ್ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ ಎಂದು ಅಗರ್ವಾಲ್ ತಿಳಿಸಿದರು.
ಅಂತಾ ರಾಷ್ಟ್ರೀಯ ಗುಣಮಟ್ಟದ ಅತ್ಯಾಧುನಿಕ ತಂತ್ರ ಜ್ಞಾನದೊಂದಿಗೆ 18,220 ಚದರ ಮೀಟರ್ ವಿಸ್ತೀರ್ಣದ ಸಂಪೂರ್ಣ ಹವಾ ನಿಯಂತ್ರಿತ ಈ ಟರ್ಮಿನಲ್ 500 ಪ್ರಯಾಣಿಕರ ಆಗಮನ ಮತ್ತು ನಿರ್ಗಮನಕ್ಕೆ ಬೇಕಾದ ಸೌಲಭ್ಯವನ್ನು ಹೊಂದಿದೆ. ಹಿಂದಿನ ವಿಮಾನ ನಿಲ್ದಾಣದಲ್ಲಿ ಕೇವಲ 150 ರಿಂದ 180 ಜನರಿಗೆ ಮಾತ್ರ ಸೌಲಭ್ಯ ಇತ್ತು. ಕೆಂಜಾರಿನಲ್ಲಿ ನಿರ್ಮಾಣಗೊಂಡ ನೂತನ ಟರ್ಮಿನಲ್ ನಿಂದಾಗಿ ಮಂಗಳೂರು ನಗರದ ಅಂತರ 7 ಕಿ. ಮೀ. ಕಡಿಮೆಯಾಗಲಿದೆ.5 ಕೋಟಿ ರೂ. ವೆಚ್ಚದಲ್ಲಿ ಹೊಸ ಏರ್ ಟ್ರಾಫಿಕ್ ಕಂಟ್ರೋಲ್ ನಿರ್ಮಾಣಗೊಂಡಿದೆ.ರಾತ್ರಿ ವಿಮಾನ ನಿಲುಗಡೆಗೆ ಸೌಲಭ್ಯ ಇದೆ. ನೂತನ ಟರ್ಮಿನಲ್ ನಿಂದಾಗಿ ಹೆಚ್ಚಿನ ವಿಮಾನ ಆಗಮ ಮತ್ತು ನಿರ್ಗಮನಕ್ಕೆ ಅವಕಾಶ ಲಭಿಸಲಿದೆ ಎಂದು ಅಗರ್ವಾಲ್ ತಿಳಿಸಿದರು. ಈಗಿರುನ ಬಜಪೆ ವಿಮಾನ ನಿಲ್ದಾಣದಲ್ಲಿ ವೈಮಾನಿಕ ತರಬೇತಿ ಶಿಕ್ಷಣ ಮತ್ತು ಸರಕು ಸಾಗಾಟದ ವಿಮಾನಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು. ಬೆಳಗಾಂ,ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆ:
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಹುಬ್ಬಳ್ಳಿ,ಬೆಳಗಾಂ ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ವಿಸ್ತರಣೆಯ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದ್ದು,ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ 310 ಎಕರೆ ಹೆಚ್ಚುವರಿ ಭೂಸ್ವಾಧೀನವಾಗಬೇಕಾಗಿದ್ದು, ಪ್ರಗತಿಯಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಹಕಾರ ಕೋರಲಾಗಿದೆ ಎಂದು ಅಗರ್ವಾಲ್ ವಿವರಿಸಿದರು
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಪೀಟರ್ ಅಬ್ರಹಾಂ, ಸದರ್ನ್ ರೀಜನಲ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಿ.ದೇವರಾಜ್,ಎಂ.ಆರ್. ವಾಸುದೇವ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.