Monday, May 31, 2010

ಜೂನ್ 2 ರಿಂದ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಪ್ರಕ್ರಿಯೆ

ಮಂಗಳೂರು, ಮೇ 31: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ವಿವಿಧ ತಾಲೂಕುಗಳಲ್ಲಿ ಜೂನ್ 2 ರಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಬೆಳ್ತಂಗಡಿ ತಾಲೂಕು : ಜೂನ್ 2ರಂದು ಬೆಳಗ್ಗೆ 10.30ಗಂಟೆಗೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನ ಗುರುವಾಯನಕೆರೆ. ಪುತ್ತೂರು ತಾಲೂಕು : ಜೂನ್ 2ರಂದು ಮಧ್ಯಾಹ್ನ 3 ಗಂಟೆಗೆ ಪುತ್ತೂರು ಪುರಭವನ.ಸುಳ್ಯ ತಾಲೂಕು : ಜೂನ್ 3ರಂದು ಬೆಳಗ್ಗೆ 10.30ಗಂಟೆಗೆ ಸುಳ್ಯ ಕೆವಿಜಿ ಪುರಭವನ. ಬಂಟ್ವಾಳ ತಾಲೂಕು : ಜೂನ್ 4ರಂದು ಬೆಳಗ್ಗೆ 10 ಗಂಟೆಗೆ ಬ್ರಹ್ಮ ಶ್ರೀ ನಾರಾಯಣ ಮಂದಿರ ಬಿ.ಸಿ.ರೋಡ್. ಮಂಗಳೂರು ತಾಲೂಕು : ಜೂನ್ 4 ರಂದು ಮಧ್ಯಾಹ್ನ 3 ಗಂಟಗೆ ಮಂಗಳೂರು ಪುರಭವನ. ಈ ಹಿಂದಿನ ಐದು ಅವಧಿಯ ಮೀಸಲಾತಿಯನ್ನು ಪರಿಗಣಿಸಿ ಮುಂದಿನ ಮೀಸಲಾತಿ ನಿಗದಿಪಡಿಸಲಾಗುವುದು ಎಂದು ಪ್ರಭಾಕರ ಶರ್ಮ ಹೇಳಿದರು.
ಶೇಕಡ 100 ಎಪಿಕ್ ಕಾರ್ಡ್ ವಿತರಣೆಗೆ ಜಿಲ್ಲೆ ಸಜ್ಜು: ಜಿಲ್ಲಾಧಿಕಾರಿ
ಮಂಗಳೂರು, ಮೇ 31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 93.03 ಶೇಕಡಾ ಮತದಾರರಿಗೆ ಭವಚಿತ್ರ ಸಹಿತ ಗುರುತಿನ ಚೀಟಿ ಇದೆ. ಉಳಿದವರಿಗೆ ಭವಚಿತ್ರ ಸಹಿತದ ಗುರುತಿನ ಚೀಟಿ ನೀಡಲು ವಿಶೇಷ ಕಾರ್ಯಕ್ರಮ ಜೂನ್ 1ರಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಇಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾರರ ಗುರುತು ಚೀಟಿ ಪಡೆಯಲು ಬಾಕಿ ಇರುವ ಮತದಾರರ ಮನೆಗಳನ್ನು ಸಂದರ್ಶಿಸಿ ಎಪಿಕ್-001ಬಿ ಫಾರ್ಮ್ -8 ನಮೂನೆಗಳನ್ನು ನೀಡಲಾಗುವುದು. ಜೊತೆಗೆ ಮತದಾರರ ಪಾಸ್ಪೋರ್ಟ್ ಗಾತ್ರದ ಬಣ್ಣದ ಭಾವಚಿತ್ರವನ್ನು ಅಂಟಿಸಲು ಹಾಗು ನಮೂನೆಯನ್ನು ಭರ್ತಿ ಮಾಡಲು ಮತದಾರರಿಗೆ ತಿಳಿಸುವ ಬಗ್ಗೆ ಬೂತ್ಮಟ್ಟದ ಅಧಿಕಾರಿಯನ್ನು ಜೂ 1ರಿಂದ 10ರವರೆಗೆ ನಿಯೋಜಿಸಲಾಗುವುದು. ಭರ್ತಿ ಮಾಡಿದ ಅರ್ಜಿ ಮತ್ತು ಭಾವಚಿತ್ರ ಅಂಟಿಸಿದ ನಮೂನೆಗಳನ್ನು ಜೂ 15ರೊಳಗೆ ಸಂಗ್ರಹಿಸಲು ಪುನ: ಬೂತ್ ಮಟ್ಟದ ಅಧಿಕಾರಿಯನ್ನು ನಿಯೋಜಿಸಲಾಗುವುದು. ಈ ಸಮಗ್ರ ಮಾಹಿತಿಯನ್ನು ಸಂಬಂಧಪಟ್ಟ ಮತದಾರರಿಗೆ ಜೂ 30ರ ನಂತರ ವಿತರಿಸಲಾಗುವುದು ಎಂದರು.
ಮತದಾರರ ಪಟ್ಟಿಗಳ ಪರಿಷ್ಕರಣೆ : ಚುನಾವಣಾ ಆಯೋಗದ ನಿರ್ದೇಶನದಂತೆ 2010ರ ಜನವರಿ 1ರ ಅರ್ಹತಾ ದಿನಾಂಕದಂತೆ ಮತದಾರರ ಪಟ್ಟಿಗಳ ಪರಿಷ್ಕರಣೆ ನಡೆಯಲಿದೆ.
ಜೂನ್ 21ರಂದು ಮತದಾರರ ಪಟ್ಟಿಗಳ ಕರಡು ಪ್ರಕಟಣೆ, ಜೂನ್ 21ರಿಂದ ಜುಲೈ 6ರವೆರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ, ಜೂನ್ 27ರಿಂದ ಜುಲೈ 4ರವರೆಗೆ ಬೂತ್ ಮಟ್ಟದ ಅಧಿಕಾರಿ ಮತ್ತು ಬೂತ್ ಮಟ್ಟದ ಏಜೆಂಟರು ವಿಶೇಷ ಆಂದೋಲನದ ಮೂಲಕ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವುದು, ಜುಲೈ 30ರಂದು ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆ ಮಾಡಲಾಗುವುದು. ಹಾಗಾಗಿ ಜಿಲ್ಲೆಯ ಮತದಾರರು ತಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ನಮೂದಾಗಿದೆಯೇ ಎಂಬುದನ್ನು ಆಯಾಯ ಮತಗಟ್ಟೆಗಳಲ್ಲಿ, ಮತದಾರರ ನೋಂದಣಾಧಿಕಾರಿ ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಯವರ ಕಚೇರಿಗಳಲ್ಲಿ ಜೂ 21ರಂದು ಪರಿಶೀಲಿಸಬೇಕು. ಅಲ್ಲದೆ, 2010 ಜನವರಿ 1ರಂದು 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಬಗ್ಗೆ ನಮೂನೆ 6ರಲ್ಲಿ ಮತ್ತು ಮೃತಪಟ್ಟ ಅಥವಾ ವಲಸೆ ಹೋದ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕಾದ ಪ್ರಕರಣಗಳಲ್ಲಿ ನಿಗದಿಪಡಿಸಿದ ನಮೂನೆ 7, ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟ ನಮೂದನ್ನು ತಿದ್ದುಪಡಿ ಮಾಡಬೇಕಾದ ಪ್ರಕರಣಗಳಲ್ಲಿ ನಿಗದಿಪಡಿಸಿದ ನಮೂನೆ 8 ಮತ್ತು ವಿಧಾನ ಸಭ ಕ್ಷೇತ್ರವೊಂದರ ಒಂದು ಭಗ ಸಂಖ್ಯೆಯಿಂದ ಇನ್ನೊಂದು ಭಗ ಸಂಖ್ಯೆಗೆ ಹೆಸರು ನೋಂದಾಯಿಸಬೇಕಾಗಿದ್ದ ಪ್ರಕರಣಗಳಲ್ಲಿ ನಿಗದಿಪಡಿಸಿದ ನಮೂನೆ 8 ರಲ್ಲಿ ಆಯಾಯ ಮತಗಟ್ಟೆಗಳಲ್ಲಿ ಮನವಿ ಸಲ್ಲಿಸಬೇಕು ಎಂದು ಹೇಳಿದರು.
ಮತದಾರರ ಗುರುತಿನ ಚೀಟಿ ಕಳೆದು ಕೊಂಡವರಿಗೆ ಅವಕಾಶ: ಗುರುತಿನ ಚೀಟಿ ಕಳೆದುಕೊಂಡವರು, ಹೊಸ ಭಾವಚಿತ್ರ ಇರುವ ಗುರುತಿನ ಚೀಟಿಗಾಗಿ ಜುಲೈ ತಿಂಗಳಿನಿಂದ ಪ್ರತೀ ತಾಲೂಕು ಕೇಂದ್ರದಲ್ಲಿ ವಿಶೇಷ ಕೇಂದ್ರ ಆರಂಭಿಸಲಾಗುವುದು. ಮಂಗಳೂರು ತಾಲೂಕಿಗೆ ಸಂಬಂಧಿಸಿದಂತೆ ಮನಪಾ, ಮೂಡಬಿದ್ರೆ, ಮಂಗಳೂರು ತಾಲೂಕು ಕಚೇರಿಯಲ್ಲಿ ಹೆಚ್ಚುವರಿ ಕೇಂದ್ರ ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಶಾಲೆಗಳಿಗೆ ರಜೆ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಅಧಿಕಾರ : ಮಳೆಗಾಲದಲ್ಲಿ ತುರ್ತಾಗಿ ಶಾಲೆಗಳಿಗೆ ರಜೆ ನೀಡಲು ಆಯಾ ಶಾಲಾ ಮುಖ್ಯೋಪಾಧ್ಯಾಯರ ಬಳಿ ಸಮಾಲೋಚಿಸಿ ತೀರ್ಮಾನಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು. ಮಳೆಗಾಲದ ಮುನ್ನೆಚ್ಚರಿಕೆಗಾಗಿ ಸಹಾಯವಾಣಿ 1077 ಕಾರ್ಯಾಚರಿಸುತ್ತಿದೆ ಎಂದು ಶರ್ಮ ತಿಳಿಸಿದ್ದಾರೆ