Saturday, May 15, 2010

ಮಂಗಳೂರು ವಿಮಾನ ನಿಲ್ದಾಣ ನೂತನ ಟರ್ಮಿನಲ್ ಉದ್ಘಾಟನೆ: ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ: ಪ್ರಫುಲ್ ಪಟೇಲ್

ಮಂಗಳೂರು, ಮೇ 15: ಮಂಗಳೂರು ವಿಮಾನ ನಿಲ್ದಾಣದ ನೂತನ ಏಕೀಕೃತ ಟರ್ಮಿನಲ್ ಕಟ್ಟಡವನ್ನು ಕೆಂಜಾರಿನಲ್ಲಿ ಕೇಂದ್ರ ನಾಗರಿಕ ವಿಮಾನ ಯಾನ ಖಾತೆಯ ರಾಜ್ಯ ಸಚಿವ ಪ್ರಫುಲ್ ಪಟೇಲ್ ಇಂದು ಉದ್ಘಾಟಿಸಿದರು. ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಹಾಗೂ ಇನ್ನಷ್ಟು ಅಭಿವೃದ್ಧಿಪಡಿಸಲು ಹೆಚ್ಚುವರಿ 100 ಕೋಟಿ ರೂ. ಅನುದಾನವನ್ನು ಕೇಂದ್ರ ಸರಕಾರದಿಂದ ಬಿಡುಗಡೆ ಮಾಡಲಾಗುವುದು ಎಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ದೇಶದ ವಿಮಾನ ಸೇವೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ 9 ನೇ ಸ್ಥಾನ ಪಡೆದಿದೆ. ಭವಿಷ್ಯದಲ್ಲಿ ಸುಸಜ್ಜಿತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೊಂದಿಗೆ ದೇಶದ ವಿಮಾನಸೇವೆ ಟಾಪ್ 5 ರೊಳಗೆ ಒಂದಾಗಲಿದೆ. ಈ ನಿಟ್ಟಿನಲ್ಲಿ ದೇಶದ ಬಹುತೇಕ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಖಾಸಗಿ ಸರಕಾರಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣ ಶೀಘ್ರದಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿ ಹೊಂದಲು ಬೇಕಾದ ಸಹಕಾರ ನೀಡಲಾಗುವುದು. 1000 ಅಡಿ ಉದ್ದದ ರನ್ ವೇ ನಿರ್ಮಾಣಗೊಂಡರೆ ಅಂತಾರಾಷ್ಟ್ರೀಯ ದರ್ಜೆಯ ಸ್ಥಾನಮಾನ ಹೊಂದಲು ಸಾಧ್ಯವಾಗುತ್ತದೆ. ಈ ಕೆಲಸ ಶೀಘ್ರವಾಗಿ ಆಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪಟೇಲ್ ತಿಳಿಸಿದರು. ಮಂಗಳೂರು ವಿಮಾನ ನಿಲ್ದಾಣವನ್ನು ದೇಶದಲ್ಲೇ ಅತ್ಯುತ್ತಮ ವಿಮಾನ ನಿಲ್ದಾಣವಾಗಿ ಮಾರ್ಪಡಿಸುವ ಇಂಗಿತ ಹೊಂದಿರುವುದಾಗಿ ಪಟೇಲ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಅಭಿವೃದ್ಧಿ ಒಂದನ್ನೇ ಮೂಲ ಮಂತ್ರವಾಗಿ ರಿಸಿಕೊಂಡು ದುಡಿಯುತ್ತಿರುವ ರಾಜ್ಯ ಸರ್ಕಾರ,ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಮೂಲ ಭೂತ ಸೌಲಭ್ಯ ಹಾಗೂ ಸಹಕಾರ ನೀಡುವುದಾಗಿ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತಿಳಿಸಿದರು.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣವನ್ನು ಬೆಂಗಳೂರು ಬಳಿಕ ಎರಡನೇ ಉನ್ನತ ದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಾಗಿದೆ ಎಂದು ಘೋಷಿಸಿದ ಮುಖ್ಯಮಂತ್ರಿಗಳು, ಮುಂದಿನ 3 ವರ್ಷದೊಳಗೆ ಕರಾವಳಿ ಅಭಿವೃದ್ಧಿಗೆ ಸರ್ವ ಸಹಕಾರ ನೀಡಲಾಗುವುದು ಎಂದರು.ಮಂಗಳೂರು ವಿಮಾನ ನಿಲ್ದಾಣದ ನೂತನ ಟರ್ಮಿನಲಿಗೆ ಬೇಕಾದ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಸೂಕ್ತ ಸಹಕಾರ ನೀಡಲಾಗುವುದು. ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿರುವ ಸಂದರ್ಭದಲ್ಲಿ ನೂತನ ಟರ್ಮಿನಲ್ ಉದ್ಘಾಟನೆ ಗೊಂಡಿರುವುದು ಸಂತಸ ತಂದಿದೆ ಎಂದು ಯಡಿಯೂರಪ್ಪ ತಿಳಿಸಿದರು. ನಮ್ಮ ಸಾಧನೆ ಮಾತನಾಡಬೇಕೇ ಹೊರತು, ಮಾತೇ ಸಾಧನೆಯಾಗಬಾರದು ಎಂದ ಮುಖ್ಯಮಂತ್ರಿಗಳು, ವಿಮಾನ, ರೈಲ್ವೇ ಸಂಪರ್ಕಕ್ಕೂ ಸಾಕಷ್ಟು ಆದ್ಯತೆಯನ್ನು ಸರ್ಕಾರ ನೀಡುತ್ತಿದ್ದು, ಕೇಂದ್ರ ಸಚಿವರ ಸಹಕಾರ ರೈಲ್ವೇ ಅಭಿವೃದ್ಧಿಗೆ ಅಗತ್ಯವಾಗಿದ್ದು, ಅದಕ್ಕೆಂದೇ 500 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮೀಸಲಿಟ್ಟಿದೆ. ಯೋಜನೆಗಳ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ; ರೈಲ್ವೇ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯ ಎಂದರು. ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲು ಕೇಂದ್ರ ವಿಮಾನ ಯಾನ ಸಚಿವರು ಮುತುವರ್ಜಿ ವಹಿಸಬೇಕು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ತಿಳಿಸಿದರು. ಕರಾವಳಿಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆ ನೀಡಿದ ಮಾಜಿ ಸಂಸದ ಶ್ರೀನಿವಾಸ ಮಲ್ಯರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ಮಂಗಳೂರು ವಿಮಾನ ನಿಲ್ದಾಣ ನೆಹರೂ ಕಾಲದಲ್ಲಿ ಆರಂಭವಾಯಿತು. ಆ ಬಳಿಕ ಮನಮೋಹನ್ ಸಿಂಗ್ ವರೆಗೆ ರಾಜ್ಯದ ವಿವಿಧ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಗಮನ ಹರಿಸಿದ್ದಾರೆ. 1992ರಲ್ಲೇ ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿತ್ತು ಎಂದು ಮೊಯ್ಲಿ ತಿಳಿಸಿದರು. ದೇಶದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ 40 ಸಾವಿರ ಕೋಟಿ ರೂಪಾಯಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ದೇಶದ ಬಂದರುಗಳ ಅಭಿವೃದ್ಧಿಗೆ 900 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಮಂಗಳೂರಿನಿಂದ - ಚಿಕ್ಕಮಗಳೂರಿಗೆ ಸಂಪರ್ಕಿಸುವ ಇನ್ನೊಂದು ರಾಷ್ಟ್ರೀಯ ಹೆದ್ದಾರಿ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.ಭೂಸ್ವಾಧೀನ ಪಡಿಸಿಕೊಂಡ ಸಂದರ್ಭದಲ್ಲಿ ಸಂತ್ರಸ್ತ ರಾದವರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು. ಮಂಗಳೂರು ಯಾತ್ರಿಕರ ಪ್ರವಾಸ ತಾಣವಾಗಿ ಬೆಳೆಯಲು ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಟಾಸ್ಕ್ ಫೋರ್ಸ್ ರಚಿಸಬೇಕು ಎಂದು ಕೇಂದ್ರ ಸಚಿವರು,ರಾಜ್ಯ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರು. ಜಿಲ್ಲೆಯಲ್ಲಿ ಪ್ರವಾ ಸೋದ್ಯಮ ಕ್ಷೇತ್ರದ ಅಭಿವೃದ್ಧಿ ಯಾಗಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳನ್ನು ಮುಂದುವರಿಸಿ, ಅವರ ಸೇವೆಯನ್ನು ಪಡೆದು ಕೊಳ್ಳಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ತಿಳಿಸಿದರು.
ಮಂಗಳೂರು ವಿಮಾನ ನಿಲ್ದಾಣ ಮೇಲ್ದರ್ಜೆಗೇರಿ ನೂತನ ಟರ್ಮಿನಲ್ ರಚನೆ ಆಗಿರುವುದು ಮಂಗಳೂರು ಲೋಕಸಭ ಕ್ಷೇತ್ರಕ್ಕೆ ಹಿರಿಮೆಯ ಸಂಗತಿ. ಈ ನಿಲ್ದಾಣಕ್ಕೆ ಭೂಮಿ ನೀಡಿದವರನ್ನು ಅಭಿನಂದಿಸಬೇಕಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಮಂಗಳೂರು ವಿಮಾನ ನಿಲ್ದಾಣಕ್ಕೆ ಚತುಷ್ಪಥ ರಸ್ತೆ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ 100 ಕಿ.ಮೀ. ವ್ಯಾಪ್ತಿಯೊಳಗೆ ಒಂದು ವಿಮಾನ ನಿಲ್ದಾಣ ಅಭಿವೃದ್ದಿ ಪಡಿಸುವ ಗುರಿಯನ್ನು ಸರಕಾರ ಹೊಂದಿದೆ. ಆ ಪ್ರಕಾರ 13 ದೊಡ್ಡ ಪ್ರಮಾಣದ ವಿಮಾನ ನಿಲ್ದಾಣ 10 ಜಿಲ್ಲೆಗಳಲ್ಲಿ ಏರ್ಸ್ಟ್ರಿಪ್ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ಸರಕಾರದಿಂದ ಭೂಸ್ವಾಧೀನದ ಹಣ ಭರಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯ ಸಚಿವ ಜನಾರ್ದನ ರೆಡ್ಡಿ ತಿಳಿಸಿದರು.
ಸಂಸತ್ ಸದಸ್ಯ (ರಾಜ್ಯ ಸಭೆ) ಆಸ್ಕರ್ ಫೆರ್ನಾಂಡಿಸ್, ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ,ಶಾಸಕ ಅಭಯಚಂದ್ರ ಜೈನ್ ಮತ್ತು ಮೇಯರ್ ರಜನಿ ದುಗ್ಗಣ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ವಿ.ಪಿ. ಅಗರ್ವಾಲ್, ಪ್ರಾದೇಶಿಕ ಕಾರ್ಯನಿರ್ವಾಹಕ ನಿರ್ದೇಶಕ ದೇವರಾಜ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.