Tuesday, February 9, 2010

ಗ್ರಾಮೀಣರ ಸೇವೆಗೆ 104 ಮೊಬೈಲ್ ಆಸ್ಪತ್ರೆ: ಸಚಿವ ಶ್ರೀರಾಮುಲು

ಮಂಗಳೂರು,ಫೆ.9:ರಾಜ್ಯದ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸುಸ್ಸಜ್ಜಿತ ಮೊಬೈಲ್ ಆಸ್ಪತ್ರೆ 104 ನ್ನು ಹಂತ ಹಂತವಾಗಿ ಪರಿಚಯಿಸಲಾಗುವುದು ಎಂದು ಆರೋಗ್ಯ ಸಚಿವರಾದ ಶ್ರೀರಾಮುಲು ಹೇಳಿದರು
ಅವರಿಂದು ಮಡಿಕೇರಿಯಿಂದ ಸುಳ್ಯ, ಪುತ್ತೂರು, ಮಂಗಳೂರಿನ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿದ ಬಳಿಕ ಪತ್ರಕರ್ತ ರನ್ನುದ್ದೇಶಿಸಿ ಮಾತನಾಡುತ್ತಾ ಆರೋಗ್ಯ ಇಲಾಖೆಯ ಸಮಗ್ರ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ವಿವರ ನೀಡಿದರು.108 ರ ಮಾದರಿಯಲ್ಲೇ 104 ನ್ನು ಗ್ರಾಮೀಣರ ಸೇವೆಗಾಗಿ ಪರಿಚಯಿಸಲು ಯೋಜನೆ ರೂಪಿಸಿದ್ದು, ಈ ಸುಸಜ್ಜಿತ ಸಂಚಾರಿ ವಾಹನದಲ್ಲಿ ಶಸ್ತ್ರ ಚಿಕಿತ್ಸೆ ನಡೆಸುವಂತಹ ವ್ಯವಸ್ಥೆ, ಲ್ಯಾಬೊರೇಟರಿ ಸೇರಿದಂತೆ ರೋಗಿಗಳ ಶುಶ್ರೂಷೆಗೆ ಸಕಲ ವ್ಯವಸ್ಥೆ ಇರುವುದು ಎಂದರು.
ಸರ್ಕಾರಿ ಸೇವೆಯಲ್ಲಿರುವ ವೈದ್ಯರಿಗೆ ಅಗತ್ಯ ಸೌಲಭ್ಯ, ರಕ್ಷಣೆ ಒದಗಿಸಲು ಪೂರಕ ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ಕಾರಣಕ್ಕೂ ಮುಷ್ಕರದ ಹಾದಿ ಹಿಡಿಯಬೇಡಿ ಎಂದ ಸಚಿವರು, ತಮ್ಮ ಸರ್ಕಾರ ಸರ್ಕಾರಿ ವೈದ್ಯರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿರುವುದಾಗಿ ಪ್ರಶ್ಣೆಯೊಂದಕ್ಕೆ ಉತ್ತರಿಸಿದರು.ಸರ್ಕಾರಿ ವೈದ್ಯರ ಮುಷ್ಕರದಿಂದ ಗ್ರಾಮೀಣ ಬಡ ಜನರಿಗೆ ತೊಂದರೆಯಾಗುವುದಾಗಿ ಅವರು ಹೇಳಿದರು.ಯಾವುದೇ ಕಾರಣಕ್ಕೂ ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಅವರು ನುಡಿದರು.
ಜಿಲ್ಲೆಗೆ ಎರಡನೇ ಬಾರಿ ಭೇಟಿ ನೀಡುತ್ತಿರುವ ತಾವು, ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳ ಗುಣಮಟ್ಟ ಪರಿಶೀಲಿಸಿ, ಅಗತ್ಯ ಸೌಲಭ್ಯ ನೀಡುವ ಉದ್ದೇಶ ಹೊಂದಿದ್ದು, ವೈದ್ಯರ ಕೊರತೆ ನೀಗಿಸಲು 1,377 ಡಾಕ್ಟರ್ ಗಳ ನೇರ ನೇಮಕಾತಿ ಮಾಡಿರುವುದಾಗಿ ಹೇಳಿದರು. ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು ಸಿ ಅಂಡ್ ಆರ್ ರೂಲ್ ನಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ. ರಾಜ್ಯದ ಆಸ್ಪತ್ರೆಗಳ ಸಮಗ್ರ ಅಭಿವೃದ್ಧಿಗೆ ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಿ ಬಜೆಟ್ ನಲ್ಲಿ 300 ಕೋಟಿ ರೂ.ಗಳ ಆಕ್ಷನ್ ಪ್ಲಾನ್ ತಯಾರಿಸಲು ನಿರ್ಧರಿಸಲಾಗಿದೆ ಎಂದರು. ಆಸ್ಪತ್ರೆಯ ಯೂಸರ್ ಫಂಡ್ ನಲ್ಲಿ ಸಾಕಷ್ಟು ದುಡ್ಡನ್ನು ಹೊಂದಿದ್ದು, ಆರೋಗ್ಯ ರಕ್ಷಾ ಸಮಿತಿ ಶಾಸಕರ ಮುಖಾಂತರ ಈ ಫಂಡ್ ನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಆಸ್ಪತ್ರೆ ಮುಖ್ಯಸ್ಥರಿಗೆ ಪುತ್ತೂರಿನಲ್ಲಿ ಸಲಹೆ ಮಾಡಿದರು.

ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ರಾಜ್ಯಾದ್ಯಾಂತ ಜಾರಿಗೆ ತರಲು ನಿರ್ಧರಿಸಿದೆ. ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ 400 ರೋಗಗಳಿಗೆ ಚಿಕಿತ್ಸೆ ನೀಡಲಾಗುವುದು. ಶ್ರೀಮಂತರಿಗೆ ನೀಡುವಂತಹ ಅತ್ಯುತ್ತಮ ಚಿಕಿತ್ಸೆಯನ್ನು ಬಡವರಿಗೆ ನೀಡುವ ಯೋಜನೆ ಇದಾಗಿದೆ ಎಂದರು. ಈಗಾಗಲೇ ಉತ್ತರ ಕರ್ನಾಟಕದ 5 ಜಿಲ್ಲೆಗಳ 16 ಲಕ್ಷ ಜನರು ಈ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ.ಪ್ರತಿ ರೋಗಿಗೆ 2 ಲಕ್ಷ ರೂ.ಗಳ ಬಜೆಟ್ ನ ವರೆಗಿನ ಚಿಕಿತ್ಸಾ ವೆಚ್ಚ ನೀಡುವ ಅವಕಾಶ ಇದರಲ್ಲಿದೆ ಎಂದು ಸುಳ್ಯದಲ್ಲಿ ಅವರು ವಿವರಿಸಿದರು.ಇದೇ ಯೋಜನೆಯಡಿ ರಾಜ್ಯದ 85 ಲಕ್ಷ ಜನರಿಗೆ ನೀಡಲು ಯೋಜಿಸಲಾಗಿದೆ. ಸುಳ್ಯದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಭರವಸೆಯನ್ನೂ ಈ ಸಂದರ್ಭೆದಲ್ಲಿ ಅವರು ನೀಡಿದರು.ಆರೋಗ್ಯ ಕವಚ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದ್ದು ಶೇ.41 ಮಹಿಳೆಯರಿಗೆ ಹೆರಿಗೆಯನ್ನು 108 ರಲ್ಲೇ ಮಾಡಿಸಲಾಗಿದೆ. 3.1 ಲಕ್ಷ ಜನರು ಈ ಸೇವೆಯ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.ಪುತ್ತೂರು ಆಸ್ಪತ್ರೆಗೆ ಔಷಧಿ ಗೋಸ್ಕರ 5 ಲಕ್ಷ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಿರುವ ಸಚಿವರು, ತಜ್ಞ ವೈದ್ಯರ ನೇಮಕಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು. ಸಂಪಾಜೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗನ್ನಾಥ್ ಮತ್ತು ತಹಸೀಲ್ದಾರರು ಸಚಿವರನ್ನು ಸ್ವಾಗತಿಸಿದರು.
ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿ ಗಳು,ಸ್ಥಳಿಯ ಶಾಸಕ ರಾದ ಅಂಗಾರ, ಮಲ್ಲಿಕಾ ಪ್ರಸಾದ್, ಯೋಗಿಶ್ ಭಟ್, ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಅವರು ಸಚಿವರೊಂದಿಗಿದ್ದರು.