Saturday, February 6, 2010

ಜನರ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ: ಸಚಿವ ಪಾಲೇಮಾರ್

ಮಂಗಳೂರು,ಫೆ.6: ಜನರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದ್ದು,ಜನಸ್ಪಂದನ ಸಭೆಯಲ್ಲಿ ಪ್ರಸ್ತಾಪಿಸಲಾದ ಜನರ ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥ ಪಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಅವರು ಪ್ರಕಟಿಸಿದರು.
ಇಂದು ಸುರತ್ಕಲ್ ನ ಗೋವಿಂದಾಸ್ ಕಾಲೇಜಿನಲ್ಲಿ ಏರ್ಪಡಿಸಲಾದ ಜನ ಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಂದ ವಿವರಣೆ ಪಡೆಯಲು ತಾಲೂಕು ತಹಸೀಲ್ದಾರರಿಗೆ ಸೂಚಿಸಿದರಲ್ಲದೆ, ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.ಜನರ ಸಮಸ್ಯೆಗೆ ತಕ್ಷಣವೇ ಪರಿಹಾರ ನೀಡಲು ಸರ್ಕಾರ ರೂಪಿಸಿದ ಮಾದರಿ ಕಾರ್ಯಕ್ರಮ ಇದಾಗಿದ್ದು, ಜನರ ಸಮಸ್ಯೆಗಳಿಗೆ ಸ್ಪಷ್ಟೀಕರಣ ನೀಡಲು ಅನುಕೂಲವಾಗುವಂತೆ ಅಧಿಕಾರಿಗಳು ಸ್ಥಳದಲ್ಲೇ ವಿವರಣೆ ನೀಡಬೇಕೆಂದರು. ಸಮಗ್ರ ನಗರ ಯೋಜನೆಯ ಬಗ್ಗೆ (ಸಿಡಿಪಿ ಪರಿಷ್ಕರಣೆ ಬಗ್ಗೆ)ಇಂದು ಸಭೆಯಲ್ಲಿ ಹೆಚ್ಚಿನ ಪ್ರಶ್ನೆಗಳಿದ್ದು, ಈ ಸಮಸ್ಯೆಗಳ ಬಗ್ಗೆ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಸಮಗ್ರ ಚರ್ಚೆ ನಡೆಸಿದ್ದು ಜನರ ಸಮಸ್ಯೆಗೆ ಸ್ಪಂದಿಸಿ ಆದೇಶ ಹೊರಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಸುರತ್ಕಲ್ ನಲ್ಲಿ ಆದಷ್ಟು ತ್ವರಿತವಾಗಿ ಪೊಲೀಸ್ ಠಾಣೆ ನಿರ್ಮಿಸುವ ಭರವಸೆಯನ್ನು ಸಚಿವರು ಸಭೆಯಲ್ಲಿ ನೀಡಿದರಲ್ಲದೆ, ರಾಷ್ಟ್ರೀಯ ಹೆದ್ದಾರಿ ಬಗ್ಗೆ, ಕಂದಾಯ ಇಲಾಖೆಯ ಬಗ್ಗೆ ಇರುವ ಸಮಸ್ಯೆಗಳನ್ನು ಜನರು ಸಚಿವರ ಗಮನಕ್ಕೆ ತಂದರು. ಜಿಲ್ಲೆಯ ನಗರ ಯೋಜನೆ ಮತ್ತು ಕಂದಾಯ ಇಲಾಖೆ ಸಮಸ್ಯೆ ಬಗ್ಗೆ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಮತ್ತು ಕಂದಾಯ ಸಚಿವ ಕರುಣಾಕರ್ ರೆಡ್ಡಿ ಅವರು ಶೀಘ್ರವೇ ನಗರಕ್ಕೆ ಆಗಮಿಸಿ ಖುದ್ದಾಗಿ ಸಮಸ್ಯೆ ಬಗ್ಗೆ ಸಮಗ್ರವಾಗಿ ಚರ್ಚಿಸಿ ಕಾನೂನು ರೂಪಿಸುವುದಾಗಿಯೂ ಸಚಿವರು ನುಡಿದರು.ಇದೇ ಸಂದರ್ಭದಲ್ಲಿ 22 ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡ್ ವಿತರಿಸಿದರು. ರಾಷ್ಟ್ರೀಯ ಕುಟುಂಬ ಸಹಾಯ ಯೋಜನೆಯಡಿ 11 ಅರ್ಹ ಫಲಾನುಭವಿಗಳಿಗೆ 10,000 ರೂ.ಗಳ ಚೆಕ್ ವಿತರಿಸಿದರು. ನಾಲ್ವರು ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ ಯೋಜನೆಯ ಚೆಕ್ ವಿತರಿಸಲಾಯಿತು. ಉಪಮೇಯರ್ ರಜನಿ ದುಗ್ಗಣ್ಣ, ಮನಾಪ ಸದಸ್ಯರಾದ ತಿಲಕ್ ರಾಜ್, ಮನಾಪ ಜಂಟಿ ಆಯುಕ್ತ ಮಧುಕರ್ ಗಡ್ಕರ್, ಮೂಡಾ ಆಯುಕ್ತ ರಮೇಶ್, ತಹಸೀಲ್ದಾರ್ ರವಿಚಂದ್ರ ನಾಯಕ್ ವೇದಿಕೆಯಲ್ಲಿದ್ದರು.