Monday, February 22, 2010

ಗುಜ್ಜರಕೆರೆ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ನಿರ್ದೇಶನ

ಮಂಗಳೂರು,ಫೆ.22: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಜೆಪ್ಪು ಮೊರ್ಗನ್ ಗೇಟ್ ಬಳಿಯಿರುವ ಐತಿಹಾಸಿಕ ಗುಜ್ಜರಕೆರೆ ಒತ್ತುವರಿ ತೆರವು ಗೊಳಿಸಿ ಸಮಗ್ರ ಅಭಿವೃದ್ಧಿಗೆ ತಕ್ಷಣವೇ ಕ್ರಮಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಂದು ಅಧಿಕಾರಿ ಗಳೊಂದಿಗೆ ಗುಜ್ಜರ ಕೆರೆ ಪ್ರದೇಶಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಮನಾಪದಿಂದ ವಿಶೇಷ ಅನುದಾನದಡಿ ಕೆರೆ ಅಭಿವೃದ್ಧಿಗಾಗಿಯೇ 99 ಲಕ್ಷ ರೂ.ಗಳನ್ನು ಮೀಸಲಿರಿಸಿದ್ದು,ಶೀಘ್ರ ಕಾಮಗಾರಿ ಆರಂಭಿಸಲು ಹಾಗೂ ಕೆರೆ ಒತ್ತುವರಿ ಬಗ್ಗೆ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇತಿಹಾಸ ಪ್ರಸಿದ್ಧ 3ಎಕರೆ 80 ಸೆನ್ಸ್ ವ್ಯಾಪ್ತಿಯ ಕೆರೆಯನ್ನು ಸ್ವಚ್ಛಗೊಳಿಸಿ, ನೀರನ್ನು ಸದ್ಬಳಕೆ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಕೆರೆ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಉಸ್ತುವಾರಿ ಸಚಿವರು ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡುತ್ತಾ, ಬೆಂಗಳೂರಿನಲ್ಲಿ ಈಗಾಗಲೇ 15 ಕೆರೆಗಳ ಹೂಳೆತ್ತಲಾಗುತ್ತಿದ್ದು, ಕೆರೆಗಳ ಅಭಿವೃದ್ಧಿಗೆ ಹಣಕಾಸಿನ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಗುಜ್ಜರ ಕೆರೆಯನ್ನು ವೀಕ್ಷಿಸಿದಾಗ 1 ಎಕರೆಯಷ್ಟು ಭೂಮಿ ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಸಚಿವರ ಭೇಟಿ ಸಂದರ್ಭದಲ್ಲಿ ಶಾಸಕರಾದ ಎನ್.ಯೋಗೀಶ್ ಭಟ್, ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಮೇಯರ್ ಶಂಕರ್ ಭಟ್, ನಗರ ಪಾಲಿಕೆ ಆಯುಕ್ತ ಡಾ.ಕೆ.ಎನ್. ವಿಜಯಪ್ರಕಾಶ್ ಸೇರಿದಂತೆ ಸ್ಥಳೀಯ ಕಾರ್ಪೊರೇಟರ್ ಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದು, ಅಹವಾಲುಗಳನ್ನು ಹೇಳಿಕೊಂಡರು.