Thursday, August 6, 2009

ಎಚ್ 1 ಎನ್ 1 ತಡೆಗೆ ಮುನ್ನೆಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

ಮಂಗಳೂರು,ಆ.6: ಮಂಗಳೂರಿನಲ್ಲಿ ಆರಂಭದಿಂದ ಇದುವರೆಗೆ 9 ಎಚ್ 1 ಎನ್1 ಸೋಂಕು ವರದಿಯಾಗಿದ್ದು, ಇದರಲ್ಲಿ ಮೂವರ ರಕ್ತದ ಮಾದರಿ ಬಂದಿದ್ದು, ಒಂದು ಮಾತ್ರ ಪಾಸಿಟಿವ್ ವರದಿ ಬಂದಿದೆ. ಇನ್ನುಳಿದ 5 ಮಾದರಿಗಳನ್ನು ನಿನ್ನೆ ಮಣಿಪಾಲ ಕೆಎಂಸಿ ಮತ್ತು ದೆಹಲಿಯ ಎನ್ ಸಿ ಡಿಸಿ( ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋ ಲ್)ಗೆ ಮಾದರಿಗಳನ್ನು ಕಳುಹಿಸಲಾಗಿದ್ದು, ಇದರಲ್ಲಿ 3 ಪಾಸಿಟಿವ್ ಆಗಿ ಬಂದಿದೆ. ಈ ಹಿನ್ನಲೆಯಲ್ಲಿ ಎಚ್1ಎನ್1 ಸೊಂಕಿತರ ಒಟ್ಟು ಸಂಖ್ಯೆ 4 ಕ್ಕೇರಿದೆಎಂದು ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಇಂದು ಪತ್ತೆಯಾದ ಮೂವರು ಎಚ್1ಎನ್1 ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು , ಇವರ ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಮಂಗಳೂರಿನ ಎನ್ ಐ ಟಿ ಕೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಧ್ಯಾಹ್ನವೇ ಇವರ ಮಾದರಿಯನ್ನು ಪರೀಕ್ಷೆಗಾಗಿ ವೈದ್ಯಕೀಯ ಪ್ರಯೋಗಲಯಕ್ಕೆ ಕಳುಹಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರು ಬಂದಿಳಿಯುವುದರಿಂದ ವಿಶೇಷ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಈ ರೋಗ ತಪಾಸಣೆಗೆಂದೇ 12 ಸದಸ್ಯರಿರುವ ವೈದ್ಯಕೀಯ ವಿಶೇಷ ತಂಡವನ್ನು ರಚಿಸಲಾಗಿದೆ. ಮತ್ತು ಪ್ರತೀ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಆದ್ಯತೆ ನೀಡಿ ಸಹಕಾರ ನೀಡಲು ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಹೇಳಿದ್ದಾರೆ.
ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿರುವ ಅವರು, ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ರೋಗ ತಡೆಗೆ ಹಾಗೂ ಮುನ್ನೆಚ್ಚರಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.