Sunday, August 2, 2009

ಬೆಳ್ತಂಗಡಿ, ಸುಳ್ಯದಿಂದ ಪಾಯಿಂಟ್ ಆಪ್ ಸೇಲ್: ಹೆಚ್. ಹಾಲಪ್ಪ

ಮಂಗಳೂರು,ಆ.2:ಪಡಿತರ ವಿತರಣೆಯಲ್ಲಿ ಮೋಸವಾಗದಂತೆ ಅರ್ಹ ಪಡಿತರದಾರರು ಮಾತ್ರ ಪಡಿತರವನ್ನು ಪಡೆಯುವಂತೆ ವ್ಯವಸ್ಥೆಯನ್ನು ರೂಪಿಸಲು ಪಾಯಿಂಟ್ ಆಪ್ ಸೇಲ್ ವ್ಯವಸ್ಥೆಯನ್ನು ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಿಂದ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹೆಚ್. ಹಾಲಪ್ಪ ಅವರು ತಿಳಿಸಿದರು.
ಇಂದು ಬೆಳ್ತಂಗಡಿ ತಾಲೂಕು ಪಂಚಾಯಿತಿಯಲ್ಲಿ ಈ ಸಂಬಂಧ ಏರ್ಪಡಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫೋಟೋ ಪಡಿತರ ಚೀಟಿ ವಿತರಿಸುವುದರಲ್ಲೂ ಸುಳ್ಯ, ಬೆಳ್ತಂಗಡಿ ತಾಲೂಕುಗಳು ಮುಂದಿದ್ದು, ಇಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾದ ಮಾದರಿಯನ್ನು ಮುಂದಿಟ್ಟು ರಾಜ್ಯದೆಲ್ಲೆಡೆ ಪಡಿತರ ವಿತರಿಸುವ ವ್ಯವಸ್ಥೆಯಾದ ಪಾಯಿಂಟ್ ಅಫ್ ಸೇಲ್ ನ್ನು ಜಾರಿಗೆ ತರಲು ನಿರ್ಧರಿಸಿರುವುದಾಗಿ ನುಡಿದರು.
ಪಡಿತರ ಪಡೆಯಲು ಕುಟುಂಬದ 12 ರ ಹರೆಯಕ್ಕಿಂತ ಹಿರಿಯವರು ಅಂಗಡಿಗೆ ಬಂದು ತಮ್ಮ ಹೆಬ್ಬೆಟ್ಟನ್ನು ಯಂತ್ರದಲ್ಲಿ ದಾಖಲಿಸಿದರೆ ಅವರ ಪಡಿತರವನ್ನು ಪಡೆಯಲು ಸಾಧ್ಯ ಎಂದ ಅವರು, ಫೋಟೋ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬವೆಸಗುತ್ತಿರುವ ಕಾಮೆಟ್ ನವರಿಗೆ ದಂಡ ಹಾಕುವ ಕುರಿತು ಚಿಂತಿಸಲಾಗುತ್ತಿದೆ ಎಂದರು. ಪಡಿತರ ವ್ಯವಸ್ಥೆಯಲ್ಲಿನ ಲೋಪದೋಷ ನಿವಾರಣೆಗೆ ಪಡಿತರ ಅಂಗಡಿಯವರ ಸಹಕಾರ ಅತಿಮುಖ್ಯವಾಗಿದ್ದು, ಅವರಿಗಿರುವ ಮಾಹಿತಿ ಇತರರಿಗಿಲ್ಲ; ಹಾಗಾಗಿ ಅವರ ಸಂಪೂರ್ಣ ಸಹಕಾರವನ್ನು ವ್ಯವಸ್ಥೆಯ ಸುಧಾರಣೆಗೆ ನಿರೀಕ್ಷಿಸಲಾಗಿದ್ದು, ಸಹಕಾರದಲ್ಲಿ ನಿರ್ಲಕ್ಷತೆ ಕಂಡು ಬಂದರೆ ಖಾಸಗಿಯವರಿಂದ ಪಡಿತರ ಅಂಗಡಿಯನ್ನು ಹಿಂದಕ್ಕೆ ಪಡೆದು ಛತ್ತೀಸ್ ಘಡದ ಮಾದರಿಯಲ್ಲಿ ರಾಜ್ಯದಲ್ಲೂ ಸರ್ಕಾರವೇ ಪಡಿತರ ಅಂಗಡಿ ಆರಂಭಿಸಲು ಯೋಚಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಶಾಸಕರಾದ ವಸಂತ ಬಂಗೇರ, ಅಂಗಾರ, ಜಿ. ಪಂ. ಅಧ್ಯಕ್ಷ ವೆಂಕಟ್ ದಂಬೇಕೋಡಿ, ಜಿ.ಪಂ. ಸದಸ್ಯರಾದ ಭಾಗೀರಥಿ,ಪುತ್ತೂರು ಉಪವಿಭಾಗಾಧಿಕಾರಿ ಡಾ. ಹರೀಶ್,ತಹಸೀಲ್ದಾರ್, ಆಹಾರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಮಂಗಳೂರಿನ ಬೈಕಂಪಾಡಿ ಕೈಗಾರಿಕ ಪ್ರದೇಶದ ಕೆನ್ ವಿನ್ ಗೋದಾಮಿಗೆ ಅನಿರೀಕ್ಷಿತ ದಾಳಿ ನಡೆಸಿದ ಆಹಾರ ಸಚಿವರು 23,000 ಲೀಟರ್ ಸೀಮೆ ಎಣ್ಣೆ ಮತ್ತು ಡೀಸಿಲನ್ನು ಟ್ಯಾಂಕರುಗಳ ಸಮೇತ ವಶಪಡಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ.