Wednesday, August 19, 2009

ಸುಸೂತ್ರ ಆಡಳಿತಕ್ಕೆ ಗಣಕೀಕೃತ ವ್ಯವಸ್ಥೆ: ಅಪರ ಜಿಲ್ಲಾಧಿಕಾರಿ

ಮಂಗಳೂರು,ಆ.19:ಆಡಳಿತ ವ್ಯವಸ್ಥೆ ಮತ್ತು ವೈಖರಿಯಲ್ಲಿ ಸಮಗ್ರ ಬದಲಾವಣೆ ತರಲು ಸರ್ಕಾರಿ ಇಲಾಖೆಗಳನ್ನು ಸಂಪೂರ್ಣವಾಗಿ ಗಣಕೀಕರಣ ಗೊಳಿಸುವತ್ತ ಕರ್ನಾಟಕ ರಾಜ್ಯ ಸಾಗುತ್ತಿದ್ದು, ಇ ಆಡಳಿತವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ಸಜ್ಜಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಹೇಳಿದರು.
ಇಂದು ಪುರಭವನದಲ್ಲಿ ಏರ್ಪಡಿಸಲಾಗಿದ್ದ ವೇತನ ಬಟವಾಡೆ ಅಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಪಾಲ್ಲೊಳ್ಳಬೇಕಾದ ಅನಿರ್ವಾಯತೆಯನ್ನು ತಿಳಿಸಿ ಹೇಳಿದರಲ್ಲದೆ ಅಧಿಕಾರಿಗಳು ಎಲ್ಲ ಕೆಲಸಕ್ಕೂ ಕೇಸ್ ವರ್ಕರ್,ಸೂಪರಿಂಟೆಂಡೆಂಟ್ ಗಳನ್ನು ಅವಲಂಬಿಸದೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಎಚ್ ಆರ್ ಎಂ ಎಸ್ ವ್ಯವಸ್ಥೆ ನೆರವಾಗ ಲಿದೆ ಎಂದರು.
ಎಚ್ ಆರ್ ಎಂ ಎಸ್ ನ ಯೋಜನಾ ನಿರ್ದೇಶಕರಾದ ಶಂಕರ್ ಅವರು ಮಾತನಾಡಿ, 2008ರ ಹಿಂದೆ ಇದ್ದ ವ್ಯವಸ್ಥೆಗೂ ಈಗಿನ ವ್ಯವಸ್ಥೆಗೂ ಇರುವ ವ್ಯತ್ಯಾಸವನ್ನು ತಿಳಿಸಿ ಹೇಳಿ ರಾಜ್ಯದಲ್ಲಿ 20,000 ಬಟವಾಡೆ ಅಧಿಕಾರಿಗಳಿದ್ದು, ಎಚ್ ಆರ್ ಎಂ ಎಸ್ ನಿಂದಾಗಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ನೌಕರರ ಸಂಪೂರ್ಣ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದಾಗಿದೆ ಎಂದರು. ಇದರಿಂದ ನೌಕರರಿಗೆ, ಆಡಳಿತಕ್ಕೆ ಹಾಗೂ ಸುಗಮ ಕೆಲಸಕ್ಕೆ ಆಗುವ ಅನುಕೂಲತೆಗಳನ್ನು ವಿವರಿಸಿದ ಅವರು, ನಿವೃತ್ತಿಯ ಸಂದರ್ಭದಲ್ಲಿ ತಕ್ಷಣವೇ ನೌಕರನಿಗೆ ಎಲ್ಲಾ ಸವಲತ್ತುಗಳು ದೊರೆಯಲಿದೆ ಎಂದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿ ಸಕ್ರಿಯ ಅವರು ಮಾತನಾಡಿ, ಜಿಲ್ಲೆಯಲ್ಲಿ 611ರಲ್ಲಿ ಬರೀ 411 ಕಚೇರಿಗಳ ಮುಖ್ಯಸ್ಥರು ಪಾನ್ ನಂಬರ್ ನ್ನು ಪಡೆದುಕೊಂಡಿದ್ದು, ಆಗಸ್ಟ್ 31 ರೊಳಗೆ ಈ ನಂಬರನ್ನು ಪಡೆದುಕೊಂಡು ಎಚ್ ಆರ್ ಎಂ ಎಸ್ ನ್ನು ಅಪ್ ಡೇಟ್ ಮಾಡಲು ಸಲಹೆ ಮಾಡಿದರು.ಆದಾಯ ತೆರಿಗೆ ಇಲಾಖೆಯ ಶಶಾಂಕ್ ಅವರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. 550ರಷ್ಟು ವೇತನ ಬಟವಾಡೆ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿ ದ್ದರು.ವಿದ್ಯಾಂಗ ಇಲಾಖೆಯ ಉಪನಿರ್ದೇಶಕ ಚಾಮೇಗೌಡ ಅವರು ಮಾತನಾಡಿ ಧನ್ಯವಾದ ಸಮರ್ಪಿಸಿದರು.