Tuesday, August 25, 2009

ಮಂಗಳೂರು ಅಭಿವೃದ್ಧಿಗೆ ಸರ್ವ ನೆರವು: ಸಚಿವ ಪಾಲೇಮಾರ್


ಮಂಗಳೂರು,ಆ.25:ಮಂಗಳೂರು ನಗರವು ಅತಿವೇಗವಾಗಿ ಬೆಳೆಯುತ್ತಿದ್ದು,ಅಭಿವೃದ್ಧಿಗೆ ಪೂರಕವಾಗಿ ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಉತ್ತಮ ರಸ್ತೆ, ಸುಸಜ್ಜಿತ ಮಾರುಕಟ್ಟೆ ಒದಗಿಸಲು ನಗರಪಾಲಿಕೆ ವಿಶೇಷ ಆದ್ಯತೆಯನ್ನು ನೀಡಿದೆಯಲ್ಲದೆ,ದೂರದೃಷ್ಟಿಯುಳ್ಳ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಬಂದರು,ಒಳನಾಡು, ಜಲಸಾರಿಗೆ,ಪರಿಸರ ಹಾಗೂ ಜೀವಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೇಮಾರ್ ಅವರು ಹೇಳಿದರು.
ನಗರದ ಬಿಜೈಯಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಸ್ಸಜ್ಜಿತ ಮಾರುಕಟ್ಟೆಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು,ಪಾಲಿಕೆಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಾಗಿದೆ ಎಂದರು. ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟ ಮತ್ತು ನಿಗದಿತ ವೇಳೆಯೊಳಗೆ ಯೋಜನೆಯನ್ನು ಪೂರೈಸಲು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಚಿವರು ಸೂಚಿಸಿದರು. ಕಾರ್ಯಕ್ರಮದಲ್ಲಿ ಮಹಾಪೌರ ಶಂಕರ್ ಭಟ್,ಉಪ ಮಹಾಪೌರ ರಜನಿ ದುಗ್ಗಣ್ಣ, ಆಯುಕ್ತ ವಿಜಯಪ್ರಕಾಶ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ,ವಿಪಕ್ಷ ನಾಯಕ ಹರಿನಾಥ್, ಸ್ಥಾಯಿ ಸಮಿತಿ ಅಧ್ಯಕ್ಷರು,ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.