Saturday, June 6, 2009

ವಿದ್ಯಾರ್ಥಿಗಳಲ್ಲಿ ವೃಕ್ಷಪ್ರೇಮ ಮೂಡಿಸಬೇಕು: ಆಶೀಸರ

ಮಂಗಳೂರು, ಜೂ. 6: ಜೀವವೈವಿಧ್ಯದ ಅಮೂಲ್ಯ ಸಂಪತ್ತು ಹೊಂದಿರುವ ಪಶ್ಚಿಮ ಘಟ್ಟ ಪ್ರದೇಶದ ಸಂರಕ್ಷಣೆಗೆ ಔಷಧಿ ಗಿಡಗಳ ಪ್ರಾಧಿಕಾರದ ಮೂಲಕ ಸಮಗ್ರ ನೀತಿ ರೂಪಿಸಲಾಗುವುದು ಎಂದು ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶ್ರೀ ಅನಂತ ಹೆಗಡೆ ಆಶೀಸರ ಹೇಳಿದರು.
ಇಂದು ಉಜಿರೆಯ ಶ್ರೀ ಧ.ಮಂ. ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಔಷಧಿ ಗಿಡಗಳ ಸಂರಕ್ಷಣೆ, ಸಂವರ್ಧನೆ ಮತ್ತು ಸಹನಶೀಲ ಬಳಕೆಯ ಕಾರ್ಯತಂತ್ರಗಳ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಅಮೂಲ್ಯವಾದ ನಿಸರ್ಗ ಸಂಪತ್ತು ಮತ್ತು ಸಂರಕ್ಷಣೆಗೆ ವಿದ್ಯಾರ್ಥಿಗಳಲ್ಲಿ ವೃಕ್ಷಪ್ರೀತಿ ಮೂಡಿಸಬೇಕು; ಅವರಲ್ಲಿ ಪ್ರಕೃತಿಯನ್ನು ಪ್ರೀತಿಸುವ ಮನೋಭಾವ ಮೂಡಿಸಬೇಕು ಎಂದರಲ್ಲದೆ, ನಾಟಿ ವೈದ್ಯರು ತಮ್ಮ ಜ್ಞಾನ ಸಂಪತ್ತನ್ನು ಯುವ ಜನತೆಗೆ ನೀಡಬೇಕು ಎಂದರು. ಪಶ್ಚಿಮ ಘಟ್ಟದಲ್ಲಿ ಸುಮಾರು 2,000 ಔಷಧಿ ಗಿಡಗಳಿದ್ದು, ಪ್ರಕೃತಿ ಸಂರಕ್ಷಣೆ ಮತ್ತು ನೈಸರ್ಗಿಕ ಜ್ಞಾನದ ಪರಂಪರೆಯ ಉಳಿವಿಗೆ ಅಗತ್ಯವಿರುವ ಕ್ರಮಗಳನ್ನು ರೂಪಿಸಲಾಗುವುದು ಎಂದ ಅವರು, ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹಾಗೂ ಇತರರು ನಡೆಸಿದ ಸಂಶೋಧನೆಗಳ ಫಲಿತಾಂಶ,ನಿರ್ಣಯ ಕ್ರೂಢೀಕರಣ ಮಾಡಿ ಅನುಷ್ಠಾನಕ್ಕೆ ತರಲು ಪಶ್ಚಿಮ ಘಟ್ಟ ಕಾವಲು ಪಡೆ ಯೋಜನೆ ರೂಪಿಸಿದ್ದು, ಗ್ರಾಮ ಮಟ್ಟದಲ್ಲಿ ಜೀವವೈವಿಧ್ಯ ದಾಖಲಾತಿ ನಡೆಯುವ ಅಗತ್ಯವನ್ನು ಪ್ರತಿಪಾದಿಸಿದರು.
ಮೂಲಿಕಾವನ ನಿರ್ಮಾಣಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು. ರಾಜ್ಯ ಔಷಧಿ ಗಿಡಗಳ ಪ್ರಾಧಿಕಾರದ ಹೆಚ್ಚುವರಿ ಕಾರ್ಯನಿರ್ವಹಣಾಧಿಕಾರಿ ಡಾ. ವೇಣುಗೋಪಾಲ್, ಡಾ.ಎಚ್. ಎಸ್. ಸ್ವಾಮಿನಾಥ್, ಡಾ. ಬಿ. ಯಶೋವರ್ಮ ಪಾಲ್ಗೊಂಡಿದ್ದರು.