Wednesday, June 3, 2009

ದೇಶಿ ತಳಿ ಅಭಿವೃದ್ಧಿಗೆ ಸರ್ಕಾರದಿಂದ ಸಕಲ ನೆರವು: ಕೃಷ್ಣ ಜೆ.ಪಾಲೆಮಾರ್


ಮಂಗಳೂರು, ಜೂ. 3: ಪರಿಸರ, ಪಶು ಸಂಪತ್ತಿನ ಬಗ್ಗೆ ಪ್ರೀತಿ, ಕಾಳಜಿ ನಶಿಸುತ್ತಿರುವ ದಿನಗಳಲ್ಲಿ ನಮ್ಮ ಪರಿಸರಕ್ಕೆ, ಅಭಿವೃದ್ಧಿಗೆ ಕಾರಣವಾಗುವ ದೇಶೀ ತಳಿಗಳ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಿದ್ಧ ಎಂದು ಪರಿಸರ, ಜೀವಶಾಸ್ತ್ರ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು.
ಇಂದು ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪಶು ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಸಂಚಾರಿ ಪಶು ಚಿಕಿತ್ಸಾಲಯ ವಾಹನ ಬಿಡುಗಡೆ ಮತ್ತು ವಿವಿಧ ಸವಲತ್ತುಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪಶು ಆಹಾರ ಔಷಧಿಯಲ್ಲೂ ಕಲಬೆರಕೆ, ಗುಣಮಟ್ಟ ಕುಸಿತ ಕಂಡು ಬಂದಿದ್ದು, ಇಂತಹ ಕೃತ್ಯಗಳಲ್ಲಿ ಇಲಾಖಾ ಅಧಿಕಾರಿಗಳ ಶಾಮೀಲು ಕಂಡುಬಂದರೆ ಸೂಕ್ತ ತನಿಖೆ ನಡೆಸಿ ಶಿಕ್ಷಿಸುವುದರಲ್ಲಿ ಸಂದೇಹವಿಲ್ಲ ಎಂದು ಸ್ಪಷ್ಟಪಡಿಸಿದರು.
ದಕ್ಷಿಣಕನ್ನಡ ಜಿಲ್ಲೆಗೆ ಕೊಯ್ಲಾದಲ್ಲಿ ಪಶುವೈದ್ಯಕೀಯ ಕಾಲೇಜು ಆರಂಭಿಸಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದು, ಅಗತ್ಯ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು. ಸಮಾರಂಭದಲ್ಲಿ 10 ಎಕರೆ ಜಾಗ ಹಾಗೂ 50 ದೇಶೀ ತಳಿ ಜಾನುವಾರುಗಳನ್ನು ಹೊಂದಿರುವ ಓಂ ಪ್ರಕೃತಿಧಾಮ ಸಂಸ್ಥೆ ಬಡಕಬೈಲು ಪೊಳಲಿ ಬಂಟ್ವಾಳ ಇದರ ನಿರ್ದೇಶಕರಿಗೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಕ್ಕಡ ಗೋಶಾಲೆಯ ಅಧ್ಯಕ್ಷರು , ಶ್ರೀ ಗೋಗ್ರಾಸ ಮಂಡಳಿ ಅಮೃತಧಾರಾ ಗೋಶಾಲೆ ಮುಳಿಯ, ಅಳಿಕೆ ಸತ್ಯಸಾಯಿ ವಿಹಾರ ಬಂಟ್ವಾಳ ಇವರಿಗೆ 3.34 ಲಕ್ಷ ರೂ. ನೆರವಿನ ಚೆಕ್ ಅನ್ನು ವಿತರಿಸಲಾಯಿತು. ಇವರಿಗೆ ಹ್ಯಾಂಡಿಕಾಂ, ಡಿಜಿಟಲ್ ಕ್ಯಾಮರಾಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ದ. ಕ. ಜಿ. ಪಂ. ಅಧ್ಯಕ್ಷರಾದ ಶ್ರೀ ವೆಂಕಟ್ ದಂಬೆಕೋಡಿ, ಕಾರ್ಪರೇಟರ್ ಪದ್ಮನಾಭ್, ಪಶುವೈದ್ಯಕೀಯ ಸಂಘದ ಅಧ್ಯಕ್ಷ ಶಿವಾನಂದ, ನಿವೃತ್ತ ಅಧಿಕಾರಿ ಡಾ. ರವೀಂದ್ರ ಉಪಸ್ಥಿತರಿದ್ದರು. ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ಅಶೋಕ್ ಕುಮಾರ್, ಸ್ವಾಗತಿಸಿದರು.