Tuesday, December 29, 2009

ಎಂವಿ ಏಶಿಯನ್ ಫಾರೆಸ್ಟ್ ನಿಂದ ತೈಲ ಹೊರತೆಗೆಯುವ ಕಾರ್ಯಾಚರಣೆ ಆರಂಭ

ಮಂಗಳೂರು,ಡಿ.29: ನವಮಂಗಳೂರು ಬಂದರು ಬಳಿ ಜುಲೈ 18 ರಂದು ಮುಳುಗಿದ್ದ ಎಂ ವಿ ಏಶಿಯನ್ ಫಾರೆಸ್ಟ್ ಹಡಗಿನಿಂದ ತೈಲ ತೆಗೆಯುವ ಕಾರ್ಯ ಇಂದಿನಿಂದ ಆರಂಭಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ನಿರ್ದೇಶನದಂತೆ ಪಿ ಅಂಡ್ ಐ ಕ್ಲಬ್ ನವರು ಮುಳುಗಿರುವ ಹಡಗಿನಿಂದ ತೈಲ ಹೊರ ತೆಗೆಯಲು ಸಿಂಗಾಪೂರ ಮೂಲದ ಸ್ಮಿತ್ ಸಾಲ್ವೇಜ್ ಕಂಪೆನಿಗೆ ವಹಿಸಿದ್ದು,ಇಂದಿನಿಂದಲೇ ತೈಲ ತೆಗೆಯಲು ಕಾರ್ಯಾಚರಣೆ ಆರಂಭಿಸಲಾಗಿದೆ.ಈ ಬಗ್ಗೆ ಸಮೀಕ್ಷೆ ನಡೆಸಿ ಕಾರ್ಯಾಚರಣೆ ಆರಂಭಿಸಿರುವ ಕಂಪೆನಿ 36 ದಿನಗಳೊಳಗೆ ಸಮುದ್ರ ಕಲುಷಿತಗೊಳ್ಳದಂತೆ ಹಾಟ್ ಟ್ಯಾಪ್ ವಿಧಾನದ ಮೂಲಕ ತೈಲ ತೆಗೆಯುವುದಾಗಿ ಪಿಪಿಟಿ ಪ್ರಸಂಟೇಷನ್ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ ನೀಡಿದರು .ಫೆಬ್ರವರಿ ಮೊದಲ ವಾರದೊಳಗೆ ತೈಲ ತೆಗೆಯುವುದನ್ನು ಸಂಪೂರ್ಣಗೊಳಿಸಿದ ಬಳಿಕ ಹಡಗಿನ ಅವಶೇಷಗಳನ್ನು ತೆಗೆಯುವ ಬಗ್ಗೆಯೂ ಶಿಪ್ಪಿಂಗ್ ಕಂಪೆನಿಯ ಪ್ರತಿನಿಧಿಯವರು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ನಿರ್ದೇಶನ ನೀಡಿದರು.
ಹಡಗಿನ ಅವಶೇಷಗಳು ಮುಳುಗಿರುವ ಜಾಗದಿಂದ ಹಡಗಿನ 3 ಟ್ಯಾಂಕ್ ಗಳಲ್ಲಿರುವ ತೈಲ ಮತ್ತು ತೈಲೋತ್ಪನ್ನಗಳನ್ನು ತೆಗೆದು ಟ್ಯಾಂಕರ್ ಗೆ ವರ್ಗಾಯಿಸಲಾಗುತ್ತದೆ ಮತ್ತು ಈ ಕಾರ್ಯಾಚರಣೆಯ ದೈನಂದಿನ ವರದಿಯನ್ನು ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸುವುದಾಗಿ ಕಾರ್ಯಚರಣೆಯ ಉಸ್ತುವರಿ ವಹಿಸಿರುವ ಅಧಿಕಾರಿಗಳು ಸಭೆಯಲ್ಲಿ ಭರವಸೆ ನೀಡಿದರು. ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಕೋಸ್ಟಗಾರ್ಡ್ ಅಧಿಕಾರಿ ಪದಮ್ ಶೇಖರ್ ಝಾ, ಮೀನುಗಾರಿಕೆ ಉಪನಿರ್ದೇಶಕರಾದ ಸುರೇಶ್ ಕುಮಾರ್, ಕಸ್ಟಂಸ್,ಬಂದರು ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.