Tuesday, June 15, 2010

ಕೃತಕ ನೆರೆ ತಡೆಗೆ ಮನಪಾ ಸನ್ನದ್ದ

ಮಂಗಳೂರು,ಜೂನ್15:ಮಳೆಯಿಂದಾಗಿ ನಗರದಲ್ಲಿ ಉಂಟಾಗುವ ಕೃತಕ ನೆರೆ ಸಮಸ್ಯೆಯನ್ನು ಪರಿಹರಿಸಲು ಪಾಲಿಕೆ ಜಂಟಿ ಆಯುಕ್ತರ ನೇತ್ರತ್ವದಲ್ಲಿ ಟಾಸ್ಕ್ ಫೊರ್ಸ್ ರಚಸಿದ್ದು, ದಿನದ 24 ಗಂಟೆಯೂ ಈ ಕಾರ್ಯಪಡೆ ನಾಗರಿಕರ ನೆರವಿಗೆ ಸ್ಪಂದಿಸಲಿದೆ ಎಂದು ಮಂಗಳೂರು ಮಹಾ ನಗರ ಪಾಲಿಕಾ ಆಯುಕ್ತರಾದ ಡಾ. ವಿಜಯ ಪ್ರಕಾಶ್ ಹೇಳಿದರು.
ಈ ಸಂಬಂಧ ಇಂದು ಮೇಯರ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಕರೆದು ತುರ್ತು ಸಂದರ್ಭಗಳಲ್ಲಿ ಸಮನ್ವ ಯತೆಯಿಂದ ಕರ್ತವ್ಯ ನಿರ್ವಹಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಅಗ್ನಿ ಶಾಮಕ ಪಡೆಯನ್ನು ಬೆಂಕಿ ಆರಿಸಲು ಮಾತ್ರ ಬಳಸದೆ, ನಾಗರಿಕರು ಮನೆಯೊಳಗೆ ನೀರು ನುಗ್ಗಿದ ಸಂದರ್ಭಗಳಲ್ಲಿ ಕೂಡ ನೆರವನ್ನು ಪಡೆಯ ಬಹುದು.ಎಲ್ಲಾ ಪ್ರದೇಶಗಳಲ್ಲಿ ಪಾಲಿಕೆಯ ಆರೊಗ್ಯ ಇಲಾಖೆಯ ಏಳು ವೈದ್ಯರ ಜೊತೆಗೆ, ಜಿಲ್ಲಾ ಕುಟುಂಬ ಮತ್ತು ಆರೊಗ್ಯ ಇಲಾಖಾ ವೈದ್ಯರ ನೆರವನ್ನು ಪಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.ಬೆಂಗ್ರೆ ಪ್ರದೇಶದಲ್ಲಿ ವೈದ್ಯರ ಪ್ರತ್ಯೇಕ ತಂಡವನ್ನು ನಿಯೋಜಿಸಿರುವುದಾಗಿ ಆಯುಕ್ತರು ಹೇಳಿದರು. ಮೀನುಗಾರಿಕಾ ಇಲಾಖೆಯಿಂದ ಉಳ್ಳಾಲ, ಪಣಂಬೂರು, ಸಸಿಹಿತ್ತಲು ಪ್ರದೇಶ ಗಳಲ್ಲಿ ವಿಶೇಷ ದೋಣಿಗಳನ್ನು ಮತ್ತು ಜೀವ ರಕ್ಷಕರನ್ನು ಸನ್ನದ್ದ ವಾಗಿಡಲಾಗಿದೆ ಎಂದು ಮೀನುಗಾರಿಕಾ ಉಪ ನಿರ್ದೇಶಕರು ತಿಳಿಸಿದರು.ಪೋಲಿಸ್,ಆರ್ ಟಿ ಓ, ಕೆ ಎಸ್ ಆರ್ ಟಿ ಸಿ,ಮೆಸ್ಕಾಂ, ಸೇರಿದಂತೆ ಎಲ್ಲಾ ಇಲಾಖೆಗಳು ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಬೇಕೆಂದು ಆಯುಕ್ತರು ಮನವಿ ಮಾಡಿದರು. ಉಪಮೇಯರ್, ಪಾಲಿಕೆ ಅಧಿಕಾರಿಗಳು,ಗೃಹ ರಕ್ಷಕ ದಳ ಮತ್ತು ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.