Sunday, June 20, 2010

ಸಾಮಾಜಿಕ ಜಾಗೃತಿಯಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ: ಡಾ. ಕೆ.ಎನ್. ವಿಜಯಪ್ರಕಾಶ್

ಮಂಗಳೂರು, ಜೂನ್.20:ಕಣ್ತುಂಬ ಕನಸುಗಳನ್ನು ತುಂಬಿ ವಿದ್ಯಾರ್ಜನೆಗೆ ಹೋಗುವ ಎಳೆಯ ಮಕ್ಕಳು ಒಂದೆಡೆಯಾದರೆ, ಆಸೆ ಕಂಗಳೊಂದಿಗೆ ಈ ಮಕ್ಕಳನ್ನು ನೋಡುವ ಎಳೆಯ ಮಕ್ಕಳು ಹಲವು. ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಇಂತಹ ಚಿತ್ರಗಳು ಸಾಮಾನ್ಯ; ಆದರೆ ಇಂತಹ ಅಸಮಾನ ಸಮಾಜ ವ್ಯವಸ್ಥೆ ಸುಧಾರಣೆಗೆ ಮಾಹಿತಿ ಕೊರತೆ, ಕಾನೂನಿನ ಅರಿವಿಲ್ಲದಿರುವಿಕೆ ಮುಖ್ಯ ಕಾರಣ ಎಂದು ಮಂಗಳೂರು ಮಹಾ ನಗರಪಾಲಿಕೆ ಆಯುಕ್ತ ಡಾ. ಕೆ.ಎನ್. ವಿಜಯಪ್ರಕಾಶ್ ಹೇಳಿದರು.

ಅವರಿಂದು ವಾರ್ತಾ ಇಲಾಖೆ, ಜೆಸಿಐ ಸುರತ್ಕಲ್ ಮತ್ತು ಕಾರ್ಮಿಕ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ 'ಬಾಲ ಕಾರ್ಮಿಕತೆ-ಸಾಮಾಜಿಕ ಅನಿಷ್ಟ' ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಸುರತ್ಕಲ್ ಗಣೇಶುಪುರ ಕೈಕಂಬದ ಸಮುದಾಯ ಭವನದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಮಾಜಿಕ ಸಮಾನತೆ ಗಾಗಿ ಸರಕಾರ ಉಚಿತ, ಕಡ್ಡಾಯ ಶಿಕ್ಷಣ, ಉಚಿತ ವಸತಿ, ವಸತಿ ಸಹಿತ ಶಾಲೆಗಳು ಸೇರಿದಂತೆ ಹಲವು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ. ಅರ್ಹರು ಇವುಗಳ ಸದ್ಬಳಕೆ ಮಾಡಬೇಕು. ಉತ್ತಮ ಶಿಕ್ಷಣ, ಸಂಸ್ಕಾರದಿಂದ ಉನ್ನತ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಸಾಮಾಜಿಕ ಆಂದೋಲನ ಮತ್ತು ಮಾಹಿತಿ ಹಾಗೂ ಜಾಗೃತಿಯಿಂದ ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಸಾಧ್ಯ ಎಂದರು.ಜೆಸಿಐ ಸುರತ್ಕಲ್ ನ ಅಧ್ಯಕ್ಷ ಶ್ರೀ ಶ್ರೀಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಹಿರಿಯ ಕಾರ್ಮಿಕ ನಿರೀಕ್ಷಕ ಶ್ರೀ ಸತ್ಯ ನಾರಾಯಣ ಅವರು, ಶಿವಕಾಶಿಯ ಪಟಾಕಿ ಉದ್ಯಮದಲ್ಲಿ ಸಂಭವಿಸಿದ ಅವಘಡದಲ್ಲಿ 39 ಮಕ್ಕಳು ದುರ್ಮರಣಕ್ಕೀಡಾದ ಬಳಿಕ ಮಾಧ್ಯಮ ಹಾಗೂ ಅಲ್ಲಿನ ಸ್ಥಳೀಯ ವಕೀಲರೊಬ್ಬರ ಹೋರಾಟ ಬಾಲಕಾರ್ಮಿಕ ಪದ್ಥತಿ ನಿರ್ಮೂಲನೆಗೆ ಹಾಗೂ ಈ ಸಂಬಂಧ ಸದೃಢ ಕಾನೂನು ರೂಪು ಗೊಂಡದ್ದನ್ನು ವಿವರಿಸಿದರು. ಬಾಲ ಕಾರ್ಮಿಕ ಪದ್ಧತಿಗೆ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಕಾರಣ ವಾಗಿದ್ದು ಕಡ್ಡಾಯ ಶಿಕ್ಷಣ ಇಂದು ವ್ಯವಸ್ಥೆಯಲ್ಲಿ ಪರಿಣಾಮಕಾರಿ ಬದಲಾವಣೆಗೆ ಕಾರಣವಾಗಿದೆ ಎಂದರು. ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಒಂದು ಸವಾಲಾಗಿ ಪರಿಣಮಿಸಿದ್ದು, ಬಾಲ ಕಾರ್ಮಿಕರನ್ನು ನೇಮಿಸುವವರ ವಿರುದ್ಧ ಕಾನೂನು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪೂರಕ ವಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಗೃತಿ ಯೊಂದೇ ಸಮಸ್ಯೆಗೆ ಪರಿಹಾರ ನೀಡಬಲ್ಲದು ಎಂದರು. ಎಂ ಆರ್ ಪಿ ಎಲ್ ನ ಎಂಪ್ಲಾಯಿಸ್ ಯೂನಿಯನ್ ನ ಅಧ್ಯಕ್ಷ ಶ್ರೀ ದಯಾನಂದ ಪ್ರಭು, ಜೆ. ಸಿ. ದತ್ತಾತ್ರೇಯ, ಜೆ.ಸಿ ನಿಕಟಪೂರ್ವ ಅಧ್ಯಕ್ಷ ಸೀತಾರಾಮ್ ರೈ ವೇದಿಕೆಯಲ್ಲಿದ್ದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಇಲಾಖೆಯ ಸಂಗೀತ ಕಲಾವಿದ ಜನಾರ್ಧನ ಮತ್ತು ತಂಡದಿಂದ ಬಾಲ ಕಾರ್ಮಿಕ ವಿರೋಧಿ ನೀತಿಯ ಬಗ್ಗೆ ಹಾಡುಗಳನ್ನು ಹಾಡಿದರು. ಕರಾವಳಿ ಜಾನಪದ ತಂಡದಿಂದ ಬೀದಿ ನಾಟಕ ಏರ್ಪಡಿಸಲಾಗಿತ್ತು. ಜೆಸಿ ಪ್ರಶಾಂತ್ ಧನ್ಯವಾದ ಅರ್ಪಿಸಿದರು.